ನಾವು ಖಾಂಗ್ಡಾ ಕಣಿವೆಯಲ್ಲಿ

ನಾವು ಖಾಂಗ್ಡಾ ಕಣಿವೆಯಲ್ಲಿ
ನಮ್ಮ ಹಿಮಾಚಲ ಪ್ರವಾಸದ ಕೊನೆಯ ದಿನ(ತಾ.ಜನವರಿ ೨೫-೨೦೧೫ ) ನಾವು ಅಲ್ಲಿ ರಾಜ್ಯವಾಳಿದ ಕಟೋಚ್ ರಾಜರ ಕೋಟೆ, ಅರಮನೆಗಳನ್ನು ನೋಡಲು ಹೋದೆವು. ನಾವು ಉಳಿದಿದ್ದ ಹೋಟೇಲಿನಿಂದ ಈ ಕಣಿವೆ, ಕೋಟೆ ಪ್ರದೇಶವು ಸುಮಾರು ೨೦ಕಿ.ಮೀ. ದೂರದಲ್ಲಿದೆ.

DSC03621

ಖಾಂಗ್ಡಾ ಕಣಿವೆಯಲ್ಲಿ ನಾಗರೀಕತೆ, ರಾಜನ ಆಡಳಿತ ತುಂಬಾ ಹಳೇ ಕಾಲದಿಂದ ಇದ್ದಿತೆಂದು ಇತಿಹಾಸಕಾರರೂ ಹೇಳುತ್ತಾರೆ. ಅವರ ಅಭಿಪ್ರಾಯಗಳನ್ನು ಪುರಾವೆಗಳನ್ನು ಪುರಾತತ್ತ್ವ ತಜ್ಞರೂ ದೃಢೀಕರಿಸುತ್ತಾರೆ. ಖಾಂಗ್ಡಾ ಕಣಿವೆ, ಕೋಟೆ ಪ್ರದೇಶವು ಸುಮಾರು ೭೩೩ಮಿ. ಯಾನೆ ೨೪೦೪ಅಡಿ  ಎತ್ತರದಲ್ಲಿದೆ.

DSC03612 5C30FAAE-1688-4320-AA42-9C0DCFF57E2C

ಖಾಂಗ್ಡಾ ಕೋಟೆ ಕಣಿವೆಯ ಮಧ್ಯದಲ್ಲಿರುವ ಬೆಟ್ಟದ ಮೇಲಿದೆ. ಹಳೆ ಕಾಲದಲ್ಲಿ ರಾಜ ಮತ್ತು ರಾಜ ಪರಿವಾರದವರು ಗುಡ್ಡದ ಮೇಲಿನ ಕೋಟೆಯೊಳಗೆ ಅರಮನೆಯಲ್ಲಿ ವಾಸವಾಗಿದ್ದರು. ಖಾಂಗ್ಡಾ ಕೋಟೆಯ ಪ್ರದೇಶವನ್ನು ಆ ಕಾಲದಲ್ಲಿ ನಗರ ಕೋಟೆ ಎಂದು ಹೇಳಲಾಗುತ್ತಿತ್ತು. ಸ್ಥಳೀಯ ಜನಪದ ಕಥೆಗಳು ಹೇಳುವಂತೆ ಈ ಕೋಟೆಯ ಮೂಲಪ್ರಾಕಾರವನ್ನು ಮಹಾಭಾರತ ಯುದ್ಧವಾದ ಮೇಲೆ ರಾಜ ಸುಶರ್ಮ ಚಂದ್ರ ಕಟ್ಟಿಸಿದನು. ಚರಿತ್ರೆಕಾರರು ಈ ಕೋಟೆ ಸುಮಾರು ೨೦೦೦ ವರ್ಷಗಳಷ್ಟು ಹಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೋಟೆಯೊಳಗಿನ ದೇವಸ್ಥಾನಗಳು ಸುಮಾರು ೯ನೇ ಶತಮಾನದಲ್ಲಿ ಕಟ್ಟಿಸಿದವುಗಳು.

WP_20150126_010 (1)

ಅವುಗಳು ಜೈನ ತೀರ್ಥಂಕರ ಆದಿನಾಥನ ಮೂರ್ತಿಯಿರುವ ದೇವಸ್ಥಾನ ಮತ್ತು ಪುನಃ ಕಟ್ಟಿಸಿದ ಲಕ್ಷ್ಮೀ ನಾರಾಯಣ ದೇವಸ್ಥಾನ. ಈ ಕೋಟೆಯೊಳಗೆ ನಾವು ಪ್ರವೇಶಿಸುತ್ತಿದ್ದಂತೆ ಪ್ರತಿ ಆಕ್ರಮಣಕಾರನ ಕುರುಹಾಗಿ ಆಯಾ ಹೆಸರಿನ ದ್ವಾರಗಳನ್ನು ಕಾಣಬಹುದು.

DSC03594            DSC03606

ಕೋಟೆಯು ಕಣಿವೆ ಮಧ್ಯದ ಎತ್ತರದ ಕಲ್ಲುಗುಡ್ಡೆಯ ಮೇಲೆ ಇದೆ. ಕೋಟೆಯ ತುತ್ತ ತುದಿಯಿಂದ ಬಲು ದೂರದ ವರೆಗೆ ಸುತ್ತಲಿನ ನದಿ, ಹೊಲ, ಮಟ್ಟಸವಾದ ಬಯಲು ಪ್ರದೇಶ, ಊರು ಎಲ್ಲವೂ ಕಾಣುವಂತಿದೆ. ಇಲ್ಲಿಂದ ರಾಜ ಭಟರು ದೂರದಿಂದ ಬರುವ ಶತೃಗಳನ್ನು ಕಂಡು ರಾಜನಿಗೆ ಮಾಹಿತಿ ಕೊಡಲು ಪ್ರಶಸ್ತವಾಗಿದೆ.

DSC03590
ಕಣಿವೆಯಲ್ಲಿ ಬನ್ ಗಂಗಾ ಮತ್ತು ಮಂಜಿ ನದಿ ಹರಿದು ಅಲ್ಲಿರುವ ಜೀವರಾಶಿಗಳನ್ನು ಪೋಷಿಸುತ್ತದೆ. ಬಿಯಾಸ್ ಇಲ್ಲಿನ ಮುಖ್ಯ ನದಿ. ನದೀ ಪಕ್ಕದಲ್ಲಿ ಜನಸಾಮಾನ್ಯರು ತಮ್ಮ ವಸತಿ, ಗಿಡ-ಮರಗಳು, ಬದುಕಿಗೆ ಬೇಕಿರುವ ಜಾನುವಾರುಗಳೊಂದಿಗೆ ವಾಸವಾಗಿದ್ದಾರೆ.

62584372-C21C-4443-9C9C-5C485E27CA58

ಶತೃಗಳಿಂದ ಧಾಳಿಯಾದಾಗ ಧನ ಕನಕಗಳನ್ನು ಈ ಭಾವಿಯೊಳಗೆ ಬಚ್ಚಿಡುತ್ತಿದ್ದರೆಂದು ಪ್ರತೀತಿ.

ನಮ್ಮ ಇತಿಹಾಸಕಾರರಿಗೆ ತಿಳಿದಿರುವಂತೆ ಈ ರಾಜ್ಯಕ್ಕೆ ಮೊದಲನೇ ಹೊರಗಿನ ಆಕ್ರಮಣಕಾರ ಗಜನಿ ಮೊಹ್ಮದ್ ೧೦೦೯ ರಲ್ಲಿ ಧಾಳಿಯಿಟ್ಟನು. ಅವನ ಸತತವಾದ ಆಕ್ರಮಣಗಳ ಕಾಲದಲ್ಲಿ ಆಗ ಇದ್ದ ಶಕ್ತಿ ರೂಪದ ವಜ್ರೇಶ್ವರಿ ದೇವಾಲಯದ ಚಿನ್ನದ ವಿಗ್ರಹ, ಇತರ ಅಮೂಲ್ಯ ವಸ್ತುಗಳನ್ನು ದೋಚಲಾಯಿತು.

6154A9F8-3597-430C-89FB-49E9CC1AEDC3

ಕೋಟೆಯೊಳಗೆ ಭೂ ಕಂಪದಿಂದ ಹಾಳಾದ ಗೋಡೆ ಮತ್ತಿತರ ಕಟ್ಟಡಗಳು ಕಂಡು ಬರುತ್ತವೆ.

ಆ ನಂತರ ಮೊಹಮ್ಮದ್ ತುಘಲಕ್ ೧೩೩೭ರಲ್ಲಿ ಆಕ್ರಮಣ ಮಾಡಿದನು. ಫಿರೋಜ್ ಶಾಹ್ ತುಘಲಕ್ ೧೬೨೧ರಲ್ಲಿ ದಂಡೆತ್ತಿ ಬಂದನು. ಆ ನಂತರದ ದಿನಗಳಲ್ಲಿ ಮೊಘಲ ರಾಜ ಜಹಾಂಗೀರ್ ೧೬೨೧ರಲ್ಲಿ ಕೋಟೆಯನ್ನು ವಶ ಪಡಿಸಿ ತನ್ನ ಅಧಿಕಾರಿಯನ್ನು ಸ್ಥಾಪಿಸಿ ಹೋಗಿದ್ದನು. ಮೊಘಲರು ದುರ್ಬಲರಾಗುತ್ತಾ ಬಂದಾಗ ೧೭೮೬ ರಲ್ಲಿ ಮಹಾರಾಜ ಸಂಸಾರ್ ಚಂದ್ -೨ ಅವರೊಡನೆ ಯುದ್ಧ ಮಾಡಿ ತನ್ನ ವಂಶದ ರಾಜ್ಯವನ್ನು ವಶ ಪಡಿಸಿಕೊಂಡನು. ಆದರೆ ಆ ಸ್ವಾತಂತ್ರ್ಯ ಬಹಳ ಕಾಲದ್ದಾಗಿರಲಿಲ್ಲ. ಅವನ ದುರಾಸೆಯಿಂದಾಗಿ ನೆರೆಯ ನೇಪಾಳದ ಸೇನಾಧಿಪತಿ ಅಮರ್ ಸಿಂಗ್ ಥಾಪಾನೊಂದಿಗೆ ನಿರಂತರ ೩ ವರ್ಷಗಳ ಕಾಲ ಸಟ್ಲೆಜ್ ನದೀತೀರದಲ್ಲಿ ಹೋರಾಡಿ ಸೋತುಹೋದನು. ಹಾಗಾಗಿ ಖಾಂಗ್ಡಾ ರಾಜ್ಯವನ್ನು ೧೮೦೫ರಲ್ಲಿ ಗೂರ್ಖಾ ರಾಜ ಗಡ್ವಾಲ್ ನೊಂದಿಗೆ ಸೇರಿಸಿಕೊಂಡನು. ಇತ್ತ ೧೮೦೯ರಲ್ಲಿ ಪಂಜಾಬಿನ ದಿಕ್ಕಿನಿಂದ ರಾಜಾ ರಣಜೀತ್ ಸಿಂಗ್ ದಾಳಿಯಿಟ್ಟು ಖಾಂಗ್ಡಾವನ್ನು ವಶಪಡಿಸಿಕೊಂಡನು, ಆ ಸಂದರ್ಭದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರು ನೇಪಾಳದ ಗಡಿಯ ವರೆಗೂ ಆಕ್ರಮಿಸಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡರು. ಮುಂದೆ ಇದು ೧೮೪೬ ರ ವರೆಗೂ ರಾಜಾ ರಣಜೀತ್ ಸಿಂಗನ ವಶದಲ್ಲಿತ್ತು.ಮುಂದೆ ನಡೆದ ವಿದ್ಯಮಾನಗಳಿಂದ ನಮ್ಮ ದೇಶದ ಹಲವಾರು ಭಾಗಗಳು ಬ್ರಿಟಿಷರ ಆಡಳಿತಕ್ಕೆ ಬಂದವು. ಆಗ ಖಾಂಗ್ಡಾವು ಸೇರಿದಂತೆ ರಾವಿ ನದಿತೀರದ ವರೆಗೆ ಕೋಟೆ, ಪರ್ವತ ಪ್ರದೇಶಗಳು ಅವರ ಕೈಕೆಳಗೆ ಬಂದಿತು. ಎಲ್ಲಾ ಕಾಲದಲ್ಲು ಇಲ್ಲಿ ಕಾವಲಿಗೆ ಬಲಿಷ್ಟವಾದ ಸೈನ್ಯವು ಕೋಟೆಯೊಳಗಿತ್ತು.

DSC03608   WP_20150126_011
೧೯೦೫ ಏಪ್ರಿಲ್ ೪ರಲ್ಲಿ ಸಂಭವಿಸಿದ ಭೂಕಂಪದಿಂದ ತೀವ್ರ ಪ್ರಮಾಣದ ಹಾನಿಯಿಂದಾಗಿ ಅಲ್ಲಿ ಜನವಾಸ ಪೂರ್ತಿಯಾಗಿ ನಿಂತು ಹೋಯಿತು. ಹೀಗೆ ಪದೇ-ಪದೇ ನಡೆದ ಆಕ್ರಮಣಗಳಿಂದಾಗಿ ಆಡಳಿತ, ಜನಜೀವನ ಅಸ್ತವ್ಯಸ್ತವಾಗಿ ಆ ಕೋಟೆಯೊಳಗಿರುವ ಆದಿನಾಥನ ದೇವಸ್ಥಾನ ಜೈನ ಸಮುದಾಯದವರ ನೆನಪಿನಿಂದ ಅಳಿಸಿದಂತಾಗಿತ್ತು. ಈ ದೇವಾಲಯಗಳನ್ನು ಸುಮಾರು ೯ನೇ ಶತಮಾನದಲ್ಲಿ ಕಟ್ಟಲಾಯಿತು. ೧೯ನೇ ಶತಮಾನದಲ್ಲಿ ೧೮೭೨-೭೩ ರಲ್ಲಿ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಖಾಂಗ್ಡಾ ಕೋಟೆಯೊಳಗೆ ತಾವು ಕಂಡುದನ್ನು ವಿವರವಾಗಿ ತಿಳಿಸಿದ್ದರೂ ಅವರಿಗೆ ಜೈನ ಇತಿಹಾಸ, ಸಂಪ್ರದಾಯ ತಿಳಿಯದ ಕಾರಣ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕದೇ ಹೋಯಿತು. ಆದರೆ ೧೯೦೯ ರ ನಂತರ ಪಂಜಾಬಿನ ಸರಕಾರ ಈ ಕೋಟೆಯನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಕಾಪಾಡಿತು. ವಿಜ್ಞಾಪತಿ ತ್ರಿವೇಣಿ ಎಂಬ ೧೫ನೇ ಶತಮಾನದ ಜೈನ ಸಾಹಿತ್ಯದ ಬರವಣಿಗೆಯೊಂದನ್ನು ೧೯೧೬ ರಲ್ಲಿ ಜೈನ ಮುನಿ ಜಿನ್ ವಿಜಯ ಎಂಬವರು ಪ್ರಕಟಿಸಿದರು.ಮೂಲ ಲೇಖನವು ಜೈನ ಸನ್ಯಾಸಿಗಳು ಆ ಕಾಲದಲ್ಲಿ ನಡೆಸಿದ ಯಾತ್ರೆಯ ವಿವರಗಳನ್ನು ತಿಳಿಸುತ್ತದೆ. ಅದರಲ್ಲಿ ನಗರಕೋಟೆಯಲ್ಲಿರುವ ಆದಿನಾಥನ ಮಂದಿರವು ತೀರ್ಥಯಾತ್ರೆಗೆ ಹೋಗುತ್ತಿದ್ದ ಪವಿತ್ರ ಪ್ರದೇಶವೆಂದು ಉಲ್ಲೇಖಿಸಲಾಗಿದೆ.
ಈ ಕೋಟೆಯ ಪಕ್ಕದಲ್ಲೇ ಇರುವ ಸಣ್ಣ ಗುಡ್ಡದ ಮೇಲೆ ರಾಜಮನೆತನದವರು ನಿರ್ಮಿಸಿದ ದೇವಾಲಯವಿದೆ. ಕೋಟೆಯ ಆವರಣದ ಒಳಗೆ ಸರಕಾರೀ ಪ್ರಾಕ್ತನ ವಸ್ತುಸಂಗ್ರಹಾಲಯವಿದೆ. ನಾವು ಕೋಟೆ ನೋಡಿ ಕೆಳಬಂದ ಮೇಲೆ ಅಲ್ಲೇ ಪಕ್ಕದಲ್ಲಿರುವ ಜೈನ ಮಂದಿರಕ್ಕೆ ಹೋದೆವು. ಅದು ಆದಿನಾಥನ ಮಂದಿರ, ಇತ್ತೀಚೆಗೆ ೩೦ವರ್ಷಗಳ ಹಿಂದೆ ಕಟ್ಟಿಸಿದುದು. ಈ ಪ್ರದೇಶವು ಪುರಾತನ ಕಾಲದಿಂದಲೂ ಹಿಂದು ಧರ್ಮ ಹಾಗೂ  ಜೈನಧರ್ಮ, ಅದರ ಸಂಸ್ಕೃತಿಯಿದ್ದ ಜಾಗ ಎಂಬುದು ಕಂಡು ಬರುತ್ತದೆ. ಅಂದಿನ ಕಾಲದಲ್ಲಿ ಇದು ತುಂಬ ಪ್ರಸಿದ್ಧವಾದ ಕೋಟೆ.   ಹೊರಡುವಾಗ ಇಂತಹ ಸುಂದರ ಪ್ರಕೃತಿಯನ್ನು ಧಾಳಿಕೋರರು ಆಸೆ ಪಟ್ಟರೆ ವಿಶೇಷವಿಲ್ಲ ಎಂಬ ಭಾವನೆ ನಮಗೆ  ಬಂತು.

1 thoughts on “ನಾವು ಖಾಂಗ್ಡಾ ಕಣಿವೆಯಲ್ಲಿ

ನಿಮ್ಮ ಟಿಪ್ಪಣಿ ಬರೆಯಿರಿ