ಹೈದರಾಬಾದ ಹವ್ಯಕ ೨೦೧೮ ರ ಸಭೆ

ಮನ ಮುದಗೊ೦ಡ ಹೈದರಾಬಾದ ಹವ್ಯಕ ಕುಟು೦ಬ

IMG-20180618-WA0130

ಕಾರ್ಯ ನಿಮಿತ್ತ ಭಾಗ್ಯನಗರಕ್ಕೆ ವಲಸೆ ಬ೦ದಿರುವ, ಹವ್ಯಕರನ್ನು ಒ೦ದೆಡೆ ಕೂಡಿಸಿ, ಪರಸ್ಪರ ಪರಿಚಯಿಕೊಳ್ಳುವ, ಹವ್ಯಕ ಭಾಷೆಯನ್ನು, ಸ೦ಸ್ಕ್ರತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒ೦ದು ಹೆಜ್ಜೆ ಮು೦ದಿಟ್ಟು “ಎಲ್ಲಾದರೂ ಇರು, ಎ೦ತಾದರು ಇರು, ಎ೦ದೆ೦ದಿಗೂ ನೀ ಹವ್ಯಕನಾಗಿರು.” ಎ೦ದು ಆಶಿಸುತ್ತಿರುವ ಸ೦ಘ ಹವ್ಯಕ ಹೈದರಾಬಾದ ಎಸೋಸಿಯೆಶನ್.

ಜೂನ ೧೭, ೨೦೧೮ಕ್ಕೆ ಹವ್ಯಕ ಹೈದರಾಬಾದ ವಾರ್ಷಿಕೋತ್ಸವವನ್ನು ಶ್ರೀ ಕೃಷ್ಣ ಮಠದಲ್ಲಿ ನಡೆಸಲು ಶ್ರೀ ಬಿ.ಕೆ.ಎಸ್ ಭಟ್ಟರ (ಬಾಳೆಮೂಲೆ ಸುಬ್ರಮಣ್ಯ ಭಟ್ಟ) ಸೇವೆ, ಸಹಕಾರ ಶ್ಲಾಘನೀಯ. ಶ್ರೀಮತಿ ಕೆ.ವೀಣಾ ಭಟ್ಟ ರಚಿಸಿದ ಸ್ವಾಗತ ಗೀತೆ ಮತ್ತು ನೂತನ ಮಾದರಿಯಲ್ಲಿ  ಹವ್ಯಕರನ್ನು  ಪರಿಚಯಿಸುವ ಪರಿ ಹೊಸ ಉತ್ಸಾಹ ಮೂಡಿಸಿತು.
ಭರತನಾಟ್ಯ, ಸಂಗೀತಗಳಂತ ಸಾoಸ್ಕೃತಿಕ ಕಾರ್ಯಕ್ರಮಗಳಲ್ಲದೇ, ಹವ್ಯಕ ಸ೦ಪ್ರದಾಯ, ಸನಾತನ ಧರ್ಮದ ಹಾಗೂ ಆರೋಗ್ಯದ ಕುರಿತು ತಿಳಿವಳಿಕೆ ಹಾಗೂ ಚಿಂತನೆ ನಡೆಸಲಾಯಿತು. ಡಾ. ಜಯಕೃಷ್ಣರವರ ಆರೋಗ್ಯದ ಬಗ್ಗೆ ಕಿವಿಮಾತು, ಡಾ.ವಿಯ ಪದ್ಯಾಣ ಮತ್ತು ಶ್ರೀ ಮಹಾದೇವ ಭಟ್ಟರ ಮಧುರ ಸಂಗೀತ, ಶ್ರೀಮತಿ ಮಹಾಲಕ್ಷ್ಮಿಯವರ ನೃತ್ಯ, ಶ್ರೀಮತಿ ಶೋಭಾರವರ ಅನುಭವಗಳ ನುಡಿ, ಪ್ರಕಾಶ ಭಟ್ಟರ ಧಾರ್ಮಿಕ ಕ್ರಿಯೆಗಳ ಮೇಲಿನ ಸಲಹೆಗಳು ಒಟ್ಟೂ ಕಾರ್ಯಕ್ರಮಗಳನ್ನು ಸುಂದರ ಹಾಗೂ ಉಪಯುಕ್ತವಾಗಿಸಿದವು.

IMG-20180618-WA0126

ಈ ಕೆಲವು ವರ್ಷಗಳಿಂದ ಹವ್ಯಕ ಹೈದರಬಾದ ಎಸೋಸಿಯೇಶನ್ ಈ ಪ್ರದೇಶದಲ್ಲಿ ನೆಲೆಸಿದ ಪ್ರತಿಭಾವಂತರೂ, ಜನಸೇವೆಯಲ್ಲಿ ತೊಡಗಿರುವ ಕನ್ನಡಿಗರನ್ನು ಗುರುತಿಸಿ ಸನ್ಮಾನ ಮಾಡುವ ಪದ್ಧತಿಯನ್ನು ರೂಡಿಯಾಗಿಸಿದೆ. ಈ ವರ್ಷ ನಮ್ಮ ಹವ್ಯಕ ಸಮಾಜಕ್ಕೆ ಧಾರ್ಮಿಕ ಕ್ರಿಯೆಗಳಿಗೆ ಒದಗಿ ಬಂದ ಪುರೋಹಿತ ಶ್ರೀ ದಕ್ಷಿಣಾಮೂರ್ತಿಯವರನ್ನು ಅಧ್ಯಕ್ಷರಾದ ಇಡುಗುಂಜಿ ಮೂಲದ  ಶ್ರೀಯುತ ನಾರಾಯಣ  ಭಟ್ಟರು ಮತ್ತು ಉಳಿದ ಪದಾಧಿಕಾರಿಗಳು ಗೌರವಿಸಿದರು.

ಹವ್ಯಕ ಬಾ೦ಧವರು ಶ್ರೀ ಕೃಷ್ಣ ಮಠದಲ್ಲಿ ನಡೆದ ರ೦ಗಪೂಜೆಯಲ್ಲಿ ಪಾಲ್ಗೊ೦ಡರು.  ಉಪ ಕಾರ್ಯದರ್ಶಿಗಳಾದ ಗೋಕರ್ಣದ ಶ್ರೀ ಭಾಸ್ಕರ ತಾಮ್ರಗೌರಿ HHA ಪರವಾಗಿ, ಓದಿನಲ್ಲಿ ಮತ್ತು ಇತರೆ ಚಟುವಟಿಕೆಗಳಲ್ಲಿ ಮು೦ದಿದ್ದ ಹವ್ಯಕ ಮಕ್ಕಳನ್ನು ಗುರುತಿಸಿ ಪ್ರಶಸ್ತಿ ಕೊಡುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಿರೂಪಕಿ ಶ್ರೀಮತಿ ವೀಣಾ ಹೆಗಡೆಯವರು ಸಮಯೋಚಿತವಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.  ಎಸೋಸಿಯೇಶನಿಗೆ ಹೊಸ ಕೋಶಾಧಿಕಾರಿಯಾಗಿ ಕುದಬೈಲ ಮೂಲದ ಶ್ರೀಮತಿ ವೀಣಾ ಭಟ್ಟರವರನ್ನು ಆರಿಸಲಾಯಿತು.

IMG-20180618-WA0134

ಕಾರ್ಯಕ್ರಮಕ್ಕೆ ಕಳೆಗೊಟ್ಟ ಹವ್ಯಕ ಮಹಿಳೆಯರು

ತೆರೆಮರೆಯ ಕಾರ್ಯಕ್ಕೆ ಸಾಥ್ ನೀಡಿದ ಪ್ರಧಾನ ಕಾರ್ಯದರ್ಶಿಗಳಾದ ಊರಕೇರಿಯ ಶ್ರೀ ವೆ೦ಕಟ್ರಮಣ ಭಟ್ಟರು ಕೊನೆಯಲ್ಲಿ ವ೦ದನಾರ್ಪಣೆ ಮಾಡಿದ ರೀತಿ ಎಲ್ಲರ ಮನ ಸೆಳೆಯಿತು. ರಾತ್ರಿಯ ಊಟದೊ೦ದಿಗೆ ಕಾರ್ಯಕ್ರಮವು ಕೊನೆಗೊ೦ಡರೂ, ಹವ್ಯಕ ಸಮುದಾಯದ ಮನ ಮುದಗೊ೦ಡು ಜಾತಕ ಪಕ್ಷಿಯ೦ತೆ ಮು೦ದಿನ ಕಾರ್ಯಕ್ರಮಕ್ಕೆ ಎದುರು ನೋಡುವ೦ತಾಯಿತು.

Advertisements

ನಮ್ಮೂರಲ್ಲಿ ನಿತ್ಯೋತ್ಸವ ನಡೆದಾಗ

ಇತ್ತೀಚೆಗೆ ನಾನು ಇಲ್ಲಿನ ಕರ್ನಾಟಕ ಸಾಹಿತ್ಯ ಮಂದಿರದವರು ಏರ್ಪಡಿಸಿದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅದು ಕನ್ನಡದ ಹೆಮ್ಮೆಯ ಕವಿ ಕೆ.ಎಸ್.ನಿಸಾರ್ ಅಹ್ಮದರನ್ನು ಸನ್ಮಾನ ಮಾಡಿದ ಸಂದರ್ಭ.

IMG-20170717-WA0026
ನಾನು ಕನ್ನಡದ ನೆಲದಿಂದ ತೆಲುಗು ನೆಲಕ್ಕೆ ಬಂದು ಮೂರು ದಶಕಗಳೇ ಕಳೆದು ಹೋದವು, ಆದರೆ ನನ್ನ ಕನ್ನಡ ಮನ ಮೊದಲಿನಂತೇ ಇದೆ. ತೆಲುಗು ಭಾಷೆಯು ನುಡಿಯಲು , ಆಲಿಸಲು ಸವಿ, ಆದರೆ ಅಭ್ಯಾಸ ಬಲದಿಂದ ಕನ್ನಡದ ರುಚಿ ನಮಗೆ ಅದರಲ್ಲಿ ಸಿಗುವುದಿಲ್ಲ. ಹಾಗಾಗಿ ನಾನು ಇಂತಹ ಕಾರ್ಯಕ್ರಮಗಳಿಗೆ ಹಾತೊರೆಯುತ್ತಿರುತ್ತೇನೆ. ಆ ದಿನದ ಕಾರ್ಯಕ್ರಮ ಬೆಳಗಿನಲ್ಲಿ ಪ್ರಾರಂಭವಾಗಿ ಸಾಯಂಕಾಲ ೬ಕ್ಕೆ ಮುಗಿಯಿತು. ಬೆಳಗಿನ ಕಾರ್ಯಕ್ರಮಗಳು  ನಿಸಾರ್ ರ ಸಾಹಿತ್ಯದ ಬಗ್ಗೆ ಗೋಷ್ಟಿ, ಮತ್ತು ಅಧ್ಯಯನವಾಗಿತ್ತು. ನನ್ನ ದುರಾದೃಷ್ಟವೆಂದರೆ ನಾನು ಕೇವಲ ಮಧ್ಯಾಹ್ನಾ ನಂತರದ ಕಾರ್ಯಕ್ರಗಳಲ್ಲಿ ಭಾಗವಹಿಸಿದೆ.
ಸರಳ ವ್ಯಕ್ತಿ ಶ್ರೀಯುತ ನಿಸಾರ್ ಅಹ್ಮದರು ಸಾಯಂಕಾಲದ  ಸಭೆಗೆ ನಡೆದು ಬಂದಾಗ ಯಾರ ಗಮನಕ್ಕೂ ಬರಲಿಲ್ಲ. ಆ ನಂತರವೇ ಜನ ಗಮನಿಸಿದರು. ೮೧ರ ಇಳಿ ವಯಸ್ಸಿನಲ್ಲೂ ನೇರವಾಗಿ ಸ್ವಲ್ಪವೂ ಬಾಗದೇ, ಕುಗ್ಗದೇ ನೇರವಾಗಿ ನಡೆಯುತ್ತಾರೆ, ಹಾಗೇ ನುಡಿಯುತ್ತಾರೆ, ಪ್ರಾಯಶಃ ಅದೇ ರೀತಿಯಲ್ಲಿ ಬಾಳುತ್ತಿದ್ದಾರೆ. ಸಭೆಯಲ್ಲಿ ಮಂಡಿಸಿದ ನಿಸಾರ್  ಕವಿತೆಗಳು ಆಸಕ್ತಿ ಕೆರಳಿಸಿದವು ಬಹು ವಿಧಗಳಿಂದ. ಶ್ರೀಮತಿ ಕೆ.ಆರ್.ಸಂದ್ಯಾ ರೆಡ್ಡಿ, ಡಾ. ತಮಿಳ್ ಸೆಲ್ವಿ(ಮದ್ರಾಸ್ ಯುನಿವರ್ಸಿಟಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ), ಡಾ.ಕೆ.ಎಸ್. ಶಾರದ- ಕುಪ್ಪಂ( ಆಂ.ಪ್ರ. ) ದ್ರಾವಿಡ ಯುನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಡೀನ್ , ಶ್ರೀಮತಿ ಪರಿಮಳಾ ರಘೂತ್ತಮ ಜೋಷಿ( ಆಕಾಶವಾಣಿ ಹೈದರಾಬಾದಿನ ಕನ್ನಡ ನಿರೂಪಕಿ) , ಕನ್ನಡ ಪತ್ರಿಕಾ ವರದಿಕರ್ತ ಶ್ರೀಯುತ ಧರ್ಮೇಂದ್ರ ಪೂಜಾರಿ ಮತ್ತು ಇಲ್ಲಿನ ಕನ್ನಡ ಬರಹಗಾರ ಶ್ರೀ ಪ್ರವೀಣ್ ಚಿತ್ತಾಪುರ ಇವರುಗಳು ಕಾವ್ಯ ವಾಚನೆ ಮಾಡಿದವರು. ನಾನು ಸೊಗಸಾಗಿ ಸುಲಲಿತವಾಗಿ ಕನ್ನಡ ವಾಚನ ಕೇಳಿ ಬಹಳ ದಿನಗಳಾಗಿದ್ದವು. ಕೊನೆಯಲ್ಲಿ ನಿಸಾರ್ ಅಹ್ಮದರು ಅವರ ಕವನವನ್ನು ಹೇಗೆ ಸರಿ ಅರ್ಥ ಬರುವಂತೆ ಹೇಳಬೇಕೆಂದು ಸ್ವತಃ ನಿರೂಪಣೆ ಕೊಟ್ಟರು. ಚೆನ್ನೈಯಿಂದ ಬಂದ ತಮಿಳ್ ಸೆಲ್ವಿಯಾಗಲೀ, ಕುಪ್ಪಂನಿಂದ ಬಂದ ಶಾರದಾ ಆಗಲಿ ಕನ್ನಡವನ್ನು ಕೇವಲ ಉದ್ಯೋಗಾರ್ಥವಾಗಿ ಬಳಸಿಲ್ಲ, ಕನ್ನಡಿಗರಲ್ಲದೆಯೂ ಕನ್ನಡಮ್ಮನ ಮಕ್ಕಳಾಗಿ ಕನ್ನಡ ಸೇವೆ ಮಾಡುತ್ತಿದ್ದಾರೆ. ಇನ್ನು ಆ ದಿನ ನಾನು ನೋಡದ ಬೆಳಗಿನ ಕಾರ್ಯಕ್ರಮಗಳಲ್ಲಿ ಮಂಗಳೂರಿನ ಸಮೀಪದ ಕಾಸರಗೋಡಿನವರಾದ ಶ್ರೀಯುತ ಕೆ.ವಿ.ತಿರುಮಲೇಶ್( ಹೆಸರಾಂತ ಕನ್ನಡ ಲೇಖಕ, ಮತ್ತು ಇಂಗ್ಲಿಶ್ ಭಾಷಾ ವಿದ್ವಾಂಸ )  ಸೆಮಿನಾರನ್ನು ನಿರ್ವಹಿಸಿದರು. ಅದರಲ್ಲಿ ನಿಸಾರ್ ಅಹ್ಮದರ ಕಾವ್ಯ, ಬರಹಗಳ ಮೇಲೆ ವಿಶ್ಲೇಷಣೆ ಹಾಗೂ ವಿಮರ್ಶೆಗಳ ಮಂಡಣೆಯಾಗಿತ್ತು. ಅವರು ಸಂಜೆಯ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ನಡೆಸಿಕೊಟ್ಟರು. ಈ  ಮಧ್ಯೆ  ನಿಸಾರ್ ಅವರ  ಪ್ರಸಿದ್ಧ ಗೀತೆ  “ಮತ್ತದೇ ಬೇಸರ ಅದೆ ಸಂಜೆ “ಯನ್ನು  ಗಾಯಕಿ ಶ್ರೀಮತಿ ವಿನಯಾ ನಾಯರ್  ಹಾಡಿದರು. ಅಲ್ಲಿ ಉಪಸ್ಥಿತರಾಗಿದ್ದ ಪ್ರಸ್ತುತ ನಿವೃತ್ತರಾಗಿರುವ ಇಲ್ಲಿನ ಮೌಲಾನ ಆಝಾದ್ ಉರ್ದು ಯುನಿವರ್ಸಿಟಿಯ ನಿರ್ದೇಶಕರೂ, ಉಪ ಕುಲಪತಿಯಾಗಿ ಸೇವೆ ಸಲ್ಲಿಸಿದ ಪ್ರೊ.ಕೆ ಎಸ್ ಇಖ್ಬಾಲ್ ನಿರರ್ಗಳವಾಗಿ, ಸುಲಲಿತವಾಗಿ ಕನ್ನಡದಲ್ಲಿ ಮಾತನಾಡಿದರು. ಅವರು ನಿಸಾರ್ ಅಹ್ಮದರನ್ನು ಇಲ್ಲಿಗೆ ಕರೆಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದರು ಎಂದು ತಿಳಿದು ಬಂತು. ಇನ್ನು ಸಾಹಿತ್ಯ ಮಂದಿರದ ಅಧ್ಯಕ್ಷರಾದ ಶ್ರೀಯುತ ವಿಠಲ ಜೋಷಿಯವರು ಸಾಹಿತ್ಯ ಮಂದಿರದ ಕಾರ್ಯಕ್ರಮಗಳ ಬೆನ್ನೆಲುಬು. ಅವರಿಂದಲೇ ಅದರ ರೂಪು ರೇಶೆಗಳು ನಿರ್ಧಾರಿತವಾಗುತ್ತದೆ. ಪ್ರಾಯಶಃ ಅವರಿಗೆ ಅವರ ದೈನಂದಿನ ದೇವರ ಪೂಜೆಯಷ್ಟೇ ಕನ್ನಡ ಸೇವೆಯೂ ಆದ್ಯತೆಯುಳ್ಳದ್ದು.

IMG-20170716-WA0025
ಇರುವ ಅಲ್ಪ ಕನ್ನಡಿಗರು ಪ್ರೀತಿಯಿಂದ, ಅಭಿಮಾನದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದನ್ನು ಕಂಡಾಗ ಕನ್ನಡದ ಉಳಿವು ಜಾತಿ-ಮತಗಳಿಂದ ಅಲ್ಲ, ಕೇವಲ ಕನ್ನಡಿಗರಿಂದಲೂ ಅಲ್ಲ ,ಸರಕಾರದ ಕಾನೂನು ಕಾಯಿದೆಗಳಿಂದಲ್ಲ, ಭಾಷೆಯೆ ಮೇಲೆ ನಾವಿಟ್ಟ ಅಭಿಮಾನ ಮತ್ತು ಅದರ ಮೇಲಿನ ಕಳಕಳಿಯಿಂದ ಎಂಬ ಭಾವನೆ ಬಂದಿತು. ಇವೆಲ್ಲ ಕಾರ್ಯಕ್ರಮಗಳಿಗೆ ಕರ್ಣಾಟಕ ಸರಕಾರದ ಮತ್ತು ಜನರ ಸಹಕಾರ ಇದೆ.

ಹೈದರಾಬಾದ ನಿಜಾಮನ ಕಾಲದಿಂದಲೇ ಕನ್ನಡಿಗರಿಗೆ ಸ್ವಂತ ಊರಾಗಿತ್ತು. ಆಗಿನ ಸೀಮೆ, ಸರಹದ್ದು ಇಲ್ಲದ ಕಾಲದಲ್ಲಿ ಜನ ಎಲ್ಲಾ ಭಾಷೆ ನುಡಿಯುತ್ತಿದ್ದರು, ಬಳಸುತ್ತಿದ್ದರು. ಅಂದಿನ ಜೀವನಕ್ಕನುಸಾರವಾಗಿ ಭಾಷೆ ಬಳಕೆಯಲ್ಲಿದ್ದ ಕಾಲವದು. ಬಹು ಜನ ಕನ್ನಡಿಗರು ತಾವು ಪರದೇಶಿಗಳು, ಪರಭಾಷೆ ಆಡುವವರು ಎಂಬ ಭಾವನೆಯೇ ಇಲ್ಲದೆ ಇಲ್ಲೇ ಬಾಳಿದರು. ಇದೇ ಹಂಪೆ-ಹೊಸಪೇಟೆ, ಬಳ್ಳಾರಿಗಳಿಗೂ ಅನ್ವಯವಾಗುತ್ತದೆ. ನವ ಭಾರತ ದೇಶದ ನಿರ್ಮಾಣದೊಂದಿಗೆ ಆಡಳಿತಕ್ಕಾಗಿ ಪ್ರಾರಂಭವಾದ ಸರಹದ್ದು ಮಿತಿ, ಗಡಿ ಪ್ರದೇಶಗಳು ಹೊಸ ಅನಾನುಕೂಲವನ್ನು ಸೃಷ್ಟಿ ಮಾಡಿದುದು ಎಲ್ಲರಿಗೂ ತಿಳಿದ ವಿಚಾರ. ಪ್ರಾಯಶಃ ಮೊದಲಿನ ಕಾಲದ ಯುದ್ಧಗಳಿಗೆ ಸಮಾನವಾದುದು ಈ ಕಾಲದ ರಾಜಕೀಯ ಭಿನ್ನಮತ. ಈಗಿನ ಈ ಭಿನ್ನಮತ ನಮ್ಮ ಭಾಷೆಗಳ ಉಳಿವಿಗೆ, ಬೆಳವಿಗೆ ಕುಂದಾಗದಿರಲಿ. ನಾವೆಂದೂ ನಮ್ಮ ಭಾಷೆ , ನಮ್ಮ ಸಂಸ್ಕೃತಿಗಳನ್ನು ಬಿಟ್ಟು ಬದುಕಬೇಕಾಗಿಲ್ಲ, ನಮ್ಮತನವು ಇದ್ದಾಗಲೇ ನಮ್ಮ ವ್ಯಕ್ತಿತ್ವ. ಹೊಸತನ್ನು ನಮ್ಮ ಬಾಳಿಗೆ ಹೊಂದಿಸಿಕೊಂಡು ಮುಂದುವರಿಯೋಣ.

ಇಲ್ಲಿ ನಿತ್ಯೊತ್ಸವವನ್ನು ಕೇಳಿರಿ, ಸವಿಯಿರಿ

 

ನಾವು ಖಾಂಗ್ಡಾ ಕಣಿವೆಯಲ್ಲಿ

ನಾವು ಖಾಂಗ್ಡಾ ಕಣಿವೆಯಲ್ಲಿ
ನಮ್ಮ ಹಿಮಾಚಲ ಪ್ರವಾಸದ ಕೊನೆಯ ದಿನ(ತಾ.ಜನವರಿ ೨೫-೨೦೧೫ ) ನಾವು ಅಲ್ಲಿ ರಾಜ್ಯವಾಳಿದ ಕಟೋಚ್ ರಾಜರ ಕೋಟೆ, ಅರಮನೆಗಳನ್ನು ನೋಡಲು ಹೋದೆವು. ನಾವು ಉಳಿದಿದ್ದ ಹೋಟೇಲಿನಿಂದ ಈ ಕಣಿವೆ, ಕೋಟೆ ಪ್ರದೇಶವು ಸುಮಾರು ೨೦ಕಿ.ಮೀ. ದೂರದಲ್ಲಿದೆ.

DSC03621

ಖಾಂಗ್ಡಾ ಕಣಿವೆಯಲ್ಲಿ ನಾಗರೀಕತೆ, ರಾಜನ ಆಡಳಿತ ತುಂಬಾ ಹಳೇ ಕಾಲದಿಂದ ಇದ್ದಿತೆಂದು ಇತಿಹಾಸಕಾರರೂ ಹೇಳುತ್ತಾರೆ. ಅವರ ಅಭಿಪ್ರಾಯಗಳನ್ನು ಪುರಾವೆಗಳನ್ನು ಪುರಾತತ್ತ್ವ ತಜ್ಞರೂ ದೃಢೀಕರಿಸುತ್ತಾರೆ. ಖಾಂಗ್ಡಾ ಕಣಿವೆ, ಕೋಟೆ ಪ್ರದೇಶವು ಸುಮಾರು ೭೩೩ಮಿ. ಯಾನೆ ೨೪೦೪ಅಡಿ  ಎತ್ತರದಲ್ಲಿದೆ.

DSC03612 5C30FAAE-1688-4320-AA42-9C0DCFF57E2C

ಖಾಂಗ್ಡಾ ಕೋಟೆ ಕಣಿವೆಯ ಮಧ್ಯದಲ್ಲಿರುವ ಬೆಟ್ಟದ ಮೇಲಿದೆ. ಹಳೆ ಕಾಲದಲ್ಲಿ ರಾಜ ಮತ್ತು ರಾಜ ಪರಿವಾರದವರು ಗುಡ್ಡದ ಮೇಲಿನ ಕೋಟೆಯೊಳಗೆ ಅರಮನೆಯಲ್ಲಿ ವಾಸವಾಗಿದ್ದರು. ಖಾಂಗ್ಡಾ ಕೋಟೆಯ ಪ್ರದೇಶವನ್ನು ಆ ಕಾಲದಲ್ಲಿ ನಗರ ಕೋಟೆ ಎಂದು ಹೇಳಲಾಗುತ್ತಿತ್ತು. ಸ್ಥಳೀಯ ಜನಪದ ಕಥೆಗಳು ಹೇಳುವಂತೆ ಈ ಕೋಟೆಯ ಮೂಲಪ್ರಾಕಾರವನ್ನು ಮಹಾಭಾರತ ಯುದ್ಧವಾದ ಮೇಲೆ ರಾಜ ಸುಶರ್ಮ ಚಂದ್ರ ಕಟ್ಟಿಸಿದನು. ಚರಿತ್ರೆಕಾರರು ಈ ಕೋಟೆ ಸುಮಾರು ೨೦೦೦ ವರ್ಷಗಳಷ್ಟು ಹಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೋಟೆಯೊಳಗಿನ ದೇವಸ್ಥಾನಗಳು ಸುಮಾರು ೯ನೇ ಶತಮಾನದಲ್ಲಿ ಕಟ್ಟಿಸಿದವುಗಳು.

WP_20150126_010 (1)

ಅವುಗಳು ಜೈನ ತೀರ್ಥಂಕರ ಆದಿನಾಥನ ಮೂರ್ತಿಯಿರುವ ದೇವಸ್ಥಾನ ಮತ್ತು ಪುನಃ ಕಟ್ಟಿಸಿದ ಲಕ್ಷ್ಮೀ ನಾರಾಯಣ ದೇವಸ್ಥಾನ. ಈ ಕೋಟೆಯೊಳಗೆ ನಾವು ಪ್ರವೇಶಿಸುತ್ತಿದ್ದಂತೆ ಪ್ರತಿ ಆಕ್ರಮಣಕಾರನ ಕುರುಹಾಗಿ ಆಯಾ ಹೆಸರಿನ ದ್ವಾರಗಳನ್ನು ಕಾಣಬಹುದು.

DSC03594            DSC03606

ಕೋಟೆಯು ಕಣಿವೆ ಮಧ್ಯದ ಎತ್ತರದ ಕಲ್ಲುಗುಡ್ಡೆಯ ಮೇಲೆ ಇದೆ. ಕೋಟೆಯ ತುತ್ತ ತುದಿಯಿಂದ ಬಲು ದೂರದ ವರೆಗೆ ಸುತ್ತಲಿನ ನದಿ, ಹೊಲ, ಮಟ್ಟಸವಾದ ಬಯಲು ಪ್ರದೇಶ, ಊರು ಎಲ್ಲವೂ ಕಾಣುವಂತಿದೆ. ಇಲ್ಲಿಂದ ರಾಜ ಭಟರು ದೂರದಿಂದ ಬರುವ ಶತೃಗಳನ್ನು ಕಂಡು ರಾಜನಿಗೆ ಮಾಹಿತಿ ಕೊಡಲು ಪ್ರಶಸ್ತವಾಗಿದೆ.

DSC03590
ಕಣಿವೆಯಲ್ಲಿ ಬನ್ ಗಂಗಾ ಮತ್ತು ಮಂಜಿ ನದಿ ಹರಿದು ಅಲ್ಲಿರುವ ಜೀವರಾಶಿಗಳನ್ನು ಪೋಷಿಸುತ್ತದೆ. ಬಿಯಾಸ್ ಇಲ್ಲಿನ ಮುಖ್ಯ ನದಿ. ನದೀ ಪಕ್ಕದಲ್ಲಿ ಜನಸಾಮಾನ್ಯರು ತಮ್ಮ ವಸತಿ, ಗಿಡ-ಮರಗಳು, ಬದುಕಿಗೆ ಬೇಕಿರುವ ಜಾನುವಾರುಗಳೊಂದಿಗೆ ವಾಸವಾಗಿದ್ದಾರೆ.

62584372-C21C-4443-9C9C-5C485E27CA58

ಶತೃಗಳಿಂದ ಧಾಳಿಯಾದಾಗ ಧನ ಕನಕಗಳನ್ನು ಈ ಭಾವಿಯೊಳಗೆ ಬಚ್ಚಿಡುತ್ತಿದ್ದರೆಂದು ಪ್ರತೀತಿ.

ನಮ್ಮ ಇತಿಹಾಸಕಾರರಿಗೆ ತಿಳಿದಿರುವಂತೆ ಈ ರಾಜ್ಯಕ್ಕೆ ಮೊದಲನೇ ಹೊರಗಿನ ಆಕ್ರಮಣಕಾರ ಗಜನಿ ಮೊಹ್ಮದ್ ೧೦೦೯ ರಲ್ಲಿ ಧಾಳಿಯಿಟ್ಟನು. ಅವನ ಸತತವಾದ ಆಕ್ರಮಣಗಳ ಕಾಲದಲ್ಲಿ ಆಗ ಇದ್ದ ಶಕ್ತಿ ರೂಪದ ವಜ್ರೇಶ್ವರಿ ದೇವಾಲಯದ ಚಿನ್ನದ ವಿಗ್ರಹ, ಇತರ ಅಮೂಲ್ಯ ವಸ್ತುಗಳನ್ನು ದೋಚಲಾಯಿತು.

6154A9F8-3597-430C-89FB-49E9CC1AEDC3

ಕೋಟೆಯೊಳಗೆ ಭೂ ಕಂಪದಿಂದ ಹಾಳಾದ ಗೋಡೆ ಮತ್ತಿತರ ಕಟ್ಟಡಗಳು ಕಂಡು ಬರುತ್ತವೆ.

ಆ ನಂತರ ಮೊಹಮ್ಮದ್ ತುಘಲಕ್ ೧೩೩೭ರಲ್ಲಿ ಆಕ್ರಮಣ ಮಾಡಿದನು. ಫಿರೋಜ್ ಶಾಹ್ ತುಘಲಕ್ ೧೬೨೧ರಲ್ಲಿ ದಂಡೆತ್ತಿ ಬಂದನು. ಆ ನಂತರದ ದಿನಗಳಲ್ಲಿ ಮೊಘಲ ರಾಜ ಜಹಾಂಗೀರ್ ೧೬೨೧ರಲ್ಲಿ ಕೋಟೆಯನ್ನು ವಶ ಪಡಿಸಿ ತನ್ನ ಅಧಿಕಾರಿಯನ್ನು ಸ್ಥಾಪಿಸಿ ಹೋಗಿದ್ದನು. ಮೊಘಲರು ದುರ್ಬಲರಾಗುತ್ತಾ ಬಂದಾಗ ೧೭೮೬ ರಲ್ಲಿ ಮಹಾರಾಜ ಸಂಸಾರ್ ಚಂದ್ -೨ ಅವರೊಡನೆ ಯುದ್ಧ ಮಾಡಿ ತನ್ನ ವಂಶದ ರಾಜ್ಯವನ್ನು ವಶ ಪಡಿಸಿಕೊಂಡನು. ಆದರೆ ಆ ಸ್ವಾತಂತ್ರ್ಯ ಬಹಳ ಕಾಲದ್ದಾಗಿರಲಿಲ್ಲ. ಅವನ ದುರಾಸೆಯಿಂದಾಗಿ ನೆರೆಯ ನೇಪಾಳದ ಸೇನಾಧಿಪತಿ ಅಮರ್ ಸಿಂಗ್ ಥಾಪಾನೊಂದಿಗೆ ನಿರಂತರ ೩ ವರ್ಷಗಳ ಕಾಲ ಸಟ್ಲೆಜ್ ನದೀತೀರದಲ್ಲಿ ಹೋರಾಡಿ ಸೋತುಹೋದನು. ಹಾಗಾಗಿ ಖಾಂಗ್ಡಾ ರಾಜ್ಯವನ್ನು ೧೮೦೫ರಲ್ಲಿ ಗೂರ್ಖಾ ರಾಜ ಗಡ್ವಾಲ್ ನೊಂದಿಗೆ ಸೇರಿಸಿಕೊಂಡನು. ಇತ್ತ ೧೮೦೯ರಲ್ಲಿ ಪಂಜಾಬಿನ ದಿಕ್ಕಿನಿಂದ ರಾಜಾ ರಣಜೀತ್ ಸಿಂಗ್ ದಾಳಿಯಿಟ್ಟು ಖಾಂಗ್ಡಾವನ್ನು ವಶಪಡಿಸಿಕೊಂಡನು, ಆ ಸಂದರ್ಭದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರು ನೇಪಾಳದ ಗಡಿಯ ವರೆಗೂ ಆಕ್ರಮಿಸಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡರು. ಮುಂದೆ ಇದು ೧೮೪೬ ರ ವರೆಗೂ ರಾಜಾ ರಣಜೀತ್ ಸಿಂಗನ ವಶದಲ್ಲಿತ್ತು.ಮುಂದೆ ನಡೆದ ವಿದ್ಯಮಾನಗಳಿಂದ ನಮ್ಮ ದೇಶದ ಹಲವಾರು ಭಾಗಗಳು ಬ್ರಿಟಿಷರ ಆಡಳಿತಕ್ಕೆ ಬಂದವು. ಆಗ ಖಾಂಗ್ಡಾವು ಸೇರಿದಂತೆ ರಾವಿ ನದಿತೀರದ ವರೆಗೆ ಕೋಟೆ, ಪರ್ವತ ಪ್ರದೇಶಗಳು ಅವರ ಕೈಕೆಳಗೆ ಬಂದಿತು. ಎಲ್ಲಾ ಕಾಲದಲ್ಲು ಇಲ್ಲಿ ಕಾವಲಿಗೆ ಬಲಿಷ್ಟವಾದ ಸೈನ್ಯವು ಕೋಟೆಯೊಳಗಿತ್ತು.

DSC03608   WP_20150126_011
೧೯೦೫ ಏಪ್ರಿಲ್ ೪ರಲ್ಲಿ ಸಂಭವಿಸಿದ ಭೂಕಂಪದಿಂದ ತೀವ್ರ ಪ್ರಮಾಣದ ಹಾನಿಯಿಂದಾಗಿ ಅಲ್ಲಿ ಜನವಾಸ ಪೂರ್ತಿಯಾಗಿ ನಿಂತು ಹೋಯಿತು. ಹೀಗೆ ಪದೇ-ಪದೇ ನಡೆದ ಆಕ್ರಮಣಗಳಿಂದಾಗಿ ಆಡಳಿತ, ಜನಜೀವನ ಅಸ್ತವ್ಯಸ್ತವಾಗಿ ಆ ಕೋಟೆಯೊಳಗಿರುವ ಆದಿನಾಥನ ದೇವಸ್ಥಾನ ಜೈನ ಸಮುದಾಯದವರ ನೆನಪಿನಿಂದ ಅಳಿಸಿದಂತಾಗಿತ್ತು. ಈ ದೇವಾಲಯಗಳನ್ನು ಸುಮಾರು ೯ನೇ ಶತಮಾನದಲ್ಲಿ ಕಟ್ಟಲಾಯಿತು. ೧೯ನೇ ಶತಮಾನದಲ್ಲಿ ೧೮೭೨-೭೩ ರಲ್ಲಿ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಖಾಂಗ್ಡಾ ಕೋಟೆಯೊಳಗೆ ತಾವು ಕಂಡುದನ್ನು ವಿವರವಾಗಿ ತಿಳಿಸಿದ್ದರೂ ಅವರಿಗೆ ಜೈನ ಇತಿಹಾಸ, ಸಂಪ್ರದಾಯ ತಿಳಿಯದ ಕಾರಣ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕದೇ ಹೋಯಿತು. ಆದರೆ ೧೯೦೯ ರ ನಂತರ ಪಂಜಾಬಿನ ಸರಕಾರ ಈ ಕೋಟೆಯನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಕಾಪಾಡಿತು. ವಿಜ್ಞಾಪತಿ ತ್ರಿವೇಣಿ ಎಂಬ ೧೫ನೇ ಶತಮಾನದ ಜೈನ ಸಾಹಿತ್ಯದ ಬರವಣಿಗೆಯೊಂದನ್ನು ೧೯೧೬ ರಲ್ಲಿ ಜೈನ ಮುನಿ ಜಿನ್ ವಿಜಯ ಎಂಬವರು ಪ್ರಕಟಿಸಿದರು.ಮೂಲ ಲೇಖನವು ಜೈನ ಸನ್ಯಾಸಿಗಳು ಆ ಕಾಲದಲ್ಲಿ ನಡೆಸಿದ ಯಾತ್ರೆಯ ವಿವರಗಳನ್ನು ತಿಳಿಸುತ್ತದೆ. ಅದರಲ್ಲಿ ನಗರಕೋಟೆಯಲ್ಲಿರುವ ಆದಿನಾಥನ ಮಂದಿರವು ತೀರ್ಥಯಾತ್ರೆಗೆ ಹೋಗುತ್ತಿದ್ದ ಪವಿತ್ರ ಪ್ರದೇಶವೆಂದು ಉಲ್ಲೇಖಿಸಲಾಗಿದೆ.
ಈ ಕೋಟೆಯ ಪಕ್ಕದಲ್ಲೇ ಇರುವ ಸಣ್ಣ ಗುಡ್ಡದ ಮೇಲೆ ರಾಜಮನೆತನದವರು ನಿರ್ಮಿಸಿದ ದೇವಾಲಯವಿದೆ. ಕೋಟೆಯ ಆವರಣದ ಒಳಗೆ ಸರಕಾರೀ ಪ್ರಾಕ್ತನ ವಸ್ತುಸಂಗ್ರಹಾಲಯವಿದೆ. ನಾವು ಕೋಟೆ ನೋಡಿ ಕೆಳಬಂದ ಮೇಲೆ ಅಲ್ಲೇ ಪಕ್ಕದಲ್ಲಿರುವ ಜೈನ ಮಂದಿರಕ್ಕೆ ಹೋದೆವು. ಅದು ಆದಿನಾಥನ ಮಂದಿರ, ಇತ್ತೀಚೆಗೆ ೩೦ವರ್ಷಗಳ ಹಿಂದೆ ಕಟ್ಟಿಸಿದುದು. ಈ ಪ್ರದೇಶವು ಪುರಾತನ ಕಾಲದಿಂದಲೂ ಹಿಂದು ಧರ್ಮ ಹಾಗೂ  ಜೈನಧರ್ಮ, ಅದರ ಸಂಸ್ಕೃತಿಯಿದ್ದ ಜಾಗ ಎಂಬುದು ಕಂಡು ಬರುತ್ತದೆ. ಅಂದಿನ ಕಾಲದಲ್ಲಿ ಇದು ತುಂಬ ಪ್ರಸಿದ್ಧವಾದ ಕೋಟೆ.   ಹೊರಡುವಾಗ ಇಂತಹ ಸುಂದರ ಪ್ರಕೃತಿಯನ್ನು ಧಾಳಿಕೋರರು ಆಸೆ ಪಟ್ಟರೆ ವಿಶೇಷವಿಲ್ಲ ಎಂಬ ಭಾವನೆ ನಮಗೆ  ಬಂತು.

ಧರಮ್ ಶಾಲಾ

ಧರಮ್ ಶಾಲಾ
ಹಿಮಾಚಲ ಪ್ರದೇಶಕ್ಕೆ “ಹಿಮಾವೃತ ಬೆಟ್ಟಗಳ ನಾಡು” ಎಂಬ ಅರ್ಥದ ನಾಮಧೇಯ ಬಂದುದೇ ಅದರ ಭೌಗೋಳಿಕ ಲಕ್ಷಣಗಳಿಂದ. ಆಚಾರ್ಯ ದಿವಾಕರ ದತ್ತ ಶರ್ಮ ಎಂಬ ಈ ನೆಲದ ಸಂಸ್ಕೃತ ಪಂಡಿತರೊಬ್ಬರು ಸ್ವತಂತ್ರ ಭಾರತದ ತಮ್ಮ ಹೊಸ ರಾಜ್ಯಕ್ಕೆ ಈ ಹೆಸರನ್ನು ಸೂಚಿಸಿದರು. ಇದು ಹಿಮಾಲಯ ಪರ್ವತ ಸರಣಿಯ ಪಶ್ಚಿಮದ ಪದತಲದಲ್ಲಿದೆ. ಹಿಮಾಚ್ಛಾದಿತವಾಗಿ ಶ್ವೇತವರ್ಣದ್ದಾಗಿವೆ. ಇದು ಸ್ವತಂತ್ರ ಭಾರತದ ೧೮ನೇ ರಾಜ್ಯ, ಮೊದಲಿಗೆ ಇದು ಕೇಂದ್ರಾಡಳಿತದಲ್ಲಿದ್ದ ಯುನಿಯನ್ ಟೆರಿಟರಿಯಾಗಿತ್ತು.

WP_20150124_003 (1)

ಕಾಂಗ್ಡಾ ಯಾನೆ ಗಗ್ಗಲ್ ವಿಮಾನ ನಿಲ್ದಾಣ

ಹಿಮಾಚಲ ಪ್ರದೇಶದ ಉತ್ತರದಲ್ಲಿ ಜಮ್ಮು-ಕಾಶ್ಮೀರ, ಪೂರ್ವದಲ್ಲಿ ಟಿಬೆಟ್/ಚೀನಾ, ಪಶ್ಚಿಮದಲ್ಲಿ ಪಂಜಾಬ, ದಕ್ಷಿಣ ಪೂರ್ವದಲ್ಲಿ ಹರ್ಯಾಣ ಮತ್ತು ಉತ್ತರ ಖಂಡ ಗಳೊಂದಿಗೆ ಗಡಿ ಪ್ರದೇಶ ಬರುತ್ತವೆ. ಇಲ್ಲಿ ಟಿಬೆಟಿನ ಸಾಮೀಪ್ಯದ ಕಾರಣದಿಂದ ಬಹಳ ಮೊದಲಿಂದಲೂ ಹಿಂದು ಮತ್ತು ಬೌದ್ಧ ಧರ್ಮಗಳ ಪ್ರಭಾವ, ಆಚರಣೆ ಕಾಣಬಹುದು. ಇಲ್ಲಿನ ಬೆಟ್ಟಗಳಲ್ಲಿ, ಕಣಿವೆಗಳಲ್ಲಿ ಹಳೆಯ ಅತ್ಯಂತ ಸುಂದರವಾದ ಹಾಗೂ ಪ್ರಸಿದ್ಧ ಬೌದ್ಧ ದೇವಾಲಯಗಳಿವೆ.

ಟಿಬೆಟ್ ದೇಶವನ್ನು ಚೀನೀಯರು ೧೯೫೯ರಲ್ಲಿ ಆಕ್ರಮಣ ಮಾಡಿದಾಗ ಅಲ್ಲಿಂದ ನಿರಾಶ್ರಿತರಾಗಿ ಹೊರ ಬಂದ ಅಲ್ಲಿನ ರಾಜನ ಸ್ಥಾನದಲ್ಲಿದ್ದ ದಲಾಯಿ ಲಾಮಾ ,ಅವರ ಪ್ರಧಾನ ಮಂತ್ರಿ, ಇನ್ನಿತರ ಪ್ರಮುಖರು ಮತ್ತು ವಜ್ರಯಾನ ಬೌದ್ಧ ಧರ್ಮದ ಮುಖ್ಯಸ್ಥರು ನೆರೆಯ ಭಾರತ ದೇಶದ ಧರಮ್ ಶಾಲಾದಲ್ಲಿ ನೆಲೆಯನ್ನು ಪಡೆದರು. ಅದರಿಂದ ಮತ್ತೆ ಭಾರತ ಸರಕಾರ ಟಿಬೆಟಿನ ನಿರಾಶ್ರಿತರಿಗೆ ತನ್ನ ನೆಲದ ಬೇರೆ-ಬೇರೆ ಊರುಗಳಲ್ಲೂ ನೆಲೆಯೂರಲು ಸ್ಥಳ ಕೊಟ್ಟುದು ದೇಶದ ಚಾರಿತ್ರಿಕ ಘಟನೆಯಾಗಿ ಹೋಗಿದೆ. ಟಿಬೆಟಿನ ಮಂದಿಗಳನ್ನು ನಮ್ಮ ದೇಶದ ವಿವಿಧೆಡೆಗಳಲ್ಲಿ ಕಂಡಾಗಿನಿಂದ ನನಗೆ ಧರಮ್ ಶಾಲಕ್ಕೆ ಹೋಗಬೇಕೆಂಬ ಇಚ್ಛೆ ಮೂಡಿತ್ತು.

WP_20150125_007

ಧರಮ್ ಶಾಲ ಹಿಮಾಚಲ ಪ್ರದೇಶದ ಧವಲ್ ಧಾರ ಬೆಟ್ಟಗಳ ಸರಣಿಯ ತಪ್ಪಲಿನಲ್ಲಿದೆ.  “ಧವಲ್ ಧಾರಾ” ಎಂಬ ಹೆಸರು ನನಗೆ ನಾನು ಬಾಲ್ಯದಲ್ಲಿ ಕಲಿತ ಸರಸ್ವತೀ ದೇವಿಯ ಪ್ರಾರ್ಥನೆಯನ್ನು ನೆನಪಿಗೆ ಬರಿಸಿತು.
ಆ ಶ್ಲೋಕ “ಯಾ ಕುಂದೇಂದು ತುಷಾರ ಹಾರ ಧವಲಾ
ಯಾ ಶುಭ್ರ ವಸ್ತ್ರಾವೃತ ” ಎಂದಾಗಿ ಮುಂದುವರಿಯುತ್ತದೆ. ನಿಜಕ್ಕೂ ಹಿಮಾಲಯದ ಪರಿಸರ ನಮ್ಮಲ್ಲಿ ಉನ್ನತ ಭಾವನೆಗಳನ್ನು ಪ್ರೇರೇಪಿಸುತ್ತವೆ, ನಮಗೆ ಪ್ರಕೃತಿ ಮಾತೆ ಪೂಜನೀಯ ಎಂಬ ಕಲ್ಪನೆ ಬರುವಂತೆ ಮಾಡುತ್ತದೆ.
೧೮೪೯ ರಲ್ಲಿ ಕಾಂಗ್ಡಾದಲ್ಲಿದ್ದ ಬ್ರಿಟಿಷ್ ಸೇನೆಯ ಅಧಿಕಾರಿಗಳು ತಮ್ಮ ಸೇನೆಗೆ (ಸ್ಥಳೀಯ ಮಂದಿಗಳ ತುಕಡಿ) ಇರಲು ಪ್ರಶಸ್ತ ಸ್ಥಳಕ್ಕಾಗಿ ನೋಡುತ್ತಿದ್ದಾಗ “ಹಿಂದು ವಿಶ್ರಾಂತಿ ಗೃಹ”(ಧರ್ಮ ಛತ್ರ)ವಿದ್ದ ಈ ಪ್ರದೇಶವನ್ನು ಆಯ್ಕೆ ಮಾಡಿದರು, ಕಾಲಕ್ರಮೇಣ ಆ ಪ್ರದೇಶಕ್ಕೆ ಧರಮ್ ಶಾಲ ಎಂದೇ ಹೆಸರು ಉಳಿದುಹೋಯಿತು. ಅಲ್ಲಿದ್ದ ಸೈನಿಕರು ಕೆಚ್ಚಿಗೆ ಹೆಸರಾಂತ ಗೂರ್ಖಾ ಜನರು, ಹೆಚ್ಚು ಕಮ್ಮಿ ಆ ಊರು ಬೆಳೆದುದೇ ನೇಪಾಲದ ಗೂರ್ಖಾ ಜನರಿಂದ. ಅವರು ಅಲ್ಲಿದ್ದ ಭಾಗ್ಸುನಾಥ್ ದೇವಸ್ಥಾನದ ಶಿವನನ್ನು ಪೂಜಿಸುತ್ತಿದ್ದರು. ಮುಂದಿನ ದಿನಗಳಲ್ಲಿ ನಡೆದ ಮೊದಲನೇ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಭೋಸರ ನೇತೃತ್ವದ ಭಾರತೀಯ ಸೇನಾ ಪಡೆಯಲ್ಲಿ ಧರಮ್ ಶಾಲದ ಗೂರ್ಖಾ ಸೈನಿಕರು ಬಹು ಸಂಖ್ಯೆಯಲ್ಲಿದ್ದರು.

ಇಲ್ಲಿನ ಕಣಿವೆ, ಬೆಟ್ಟಗಳ ಮೂಲನಿವಾಸಿಗಳು ಗದ್ದಿ ಜನರು, ಹೆಚ್ಚಾಗಿ ವ್ಯವಸಾಯ, ಕುರಿ ಸಾಕಣೆ ಇವುಗಳನ್ನು ಅವಲಂಬಿಸಿ ಬದುಕುವವರು. ಅವರು ಮೊದಲಿಗೆ ಹಿಮಾಲಯದ ಚಳಿ, ತಾಪಮಾನಕ್ಕನುಗುಣವಾಗಿ ವಲಸೆ ಹೋಗುತ್ತಾ ಜೀವನ ಸಾಗಿಸುತ್ತಿದ್ದರು, ಈಗ ಒಂದೇ ಸ್ಥಳದಲ್ಲಿ ನೆಲೆಯೂರಿ ವ್ಯವಸಾಯ, ಕೃಷಿ ಕೆಲಸಗಳನ್ನವಲಂಬಿಸಿದ್ದಾರೆ. ವರ್ತಮಾನದಲ್ಲಿ ಹಿಮಾಚಲ ಪ್ರದೇಶ ಅಕ್ಷರಸ್ಥರ ನಾಡು, ಜೀವನ ಮಟ್ಟವೂ ಸಾಕಷ್ಟು ಚೆನ್ನಾಗಿದೆ. ಹಿಮಾಲಯದ ನದಿಗಳು ಇಲ್ಲಿಂದಲೇ ಹರಿದು ಮುಂದುವರಿಯುವ ಕಾರಣದಿಂದ ಈ ರಾಜ್ಯದ ಮಣ್ಣು, ನೆಲ ಫಲವತ್ತಾಗಿದೆ. ಇಲ್ಲಿ ಜಲವಿದ್ಯುತ್ ಶಕ್ತಿ ಉತ್ಪಾದನೆಯೂ ಧಾರಾಳವಿರುವ ಕಾರಣ ನೆರೆಯ ರಾಜ್ಯಗಳಿಗೆ ಇವರು ವಿದ್ಯುತ್ ಶಕ್ತಿಯನ್ನು ಒದಗಿಸುತ್ತಾರೆ. ಇದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ನಾಡು. ನಮ್ಮ ದೇಶವನ್ನಾಳಿದ ಬ್ರಿಟಿಷ್ ಜನರಿಗೆ ಇಲ್ಲಿನ ಚಳಿ, ಪ್ರಕೃತಿ ಮೆಚ್ಚುಗೆಯಾಗಿ ಹಿಮಾಚಲದ ಬಹಳಷ್ಟು ಊರುಗಳನ್ನು(ಶಿಮ್ಲಾ, ಕುಲು, ಮನಾಲಿ) ತಮ್ಮ ಬೇಸಗೆಯ ವಿಶ್ರಾಂತಿಧಾಮವನ್ನಾಗಿಸಿಕೊಂಡಿದ್ದರು.
ನಾವು ಧರಮ್ ಶಾಲಾಕ್ಕೆ ಜನವರಿ ೨೩ರಂದು(೨೦೧೫) ಮುಂಜಾನೆಯಲ್ಲಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಸಣ್ಣದೊಂದು ವಿಮಾನದಲ್ಲಿ ಹೋದೆವು. ನಾವು ಜನವರಿ ಕೊನೇ ವಾರದಲ್ಲಿ ಪ್ರಯಾಣಿಸಿದ ಕಾರಣ ಚಳಿಯು ಜೋರಾಗೇ ಇತ್ತು. ಹವಾಮಾನದ ಪ್ರತಿಕೂಲತೆಯಿಂದಾಗಿ ನಮ್ಮ ವಿಮಾನದ ನಿಗದಿತ ಸಮಯವನ್ನು ಮುಂದೂಡಲಾಗಿತ್ತು. ಹವೆ ಸರಿಹೋಗಿ ನೋಟವು ಸ್ಪಷ್ಟವಾಗುವ ವರೆಗೂ ನಾವು ದೆಹಲಿಯಲ್ಲೇ ಕಾಲ ಕಳೆದೆವು. ಮಧ್ಯಾಹ್ನ ೧ ಗಂಟೆ ಸುಮಾರಿಗೆ ನಾವು ಹೊರಟೆವು. ನಮ್ಮ ದಾರಿಯು ದೆಹಲಿಯ ಮಟ್ಟಸವಾದ ಪೀಠಭೂಮಿಯಿಂದ ಮೇಲಕ್ಕೇರುತ್ತಾ ಕ್ರಮೇಣ ಉತ್ತರ ದಿಕ್ಕಿನಲ್ಲಿ ಪಶ್ಚಿಮಕ್ಕೆ ಸಾಗಿ ನದಿ, ಬೆಟ್ಟಗಳನ್ನು ದಾಟುತ್ತಾ ಹೋಗುತ್ತಿತ್ತು. ನಾವು ಇಳಿದ ಕಾಂಗ್ಡಾ ಯಾನೆ ಗಗ್ಗಲ್ ವಿಮಾನ ನಿಲ್ದಾಣದ ದೃಶ್ಯ ಬೆರಗಾಗಿಸುವಂತಿತ್ತು. ಈ ಚಿಕ್ಕ ವಿಮಾನ ನಿಲ್ದಾಣ ಬೆಟ್ಟಗಳ ಮಧ್ಯದ ಕಣಿವೆ ಪ್ರದೇಶದಲ್ಲಿದೆ. ಅಲ್ಲಿ ನಮ್ಮ ಕಣ್ಣೆದುರಿಗೆ ಹಿಮವಂತನು ಶುಭ್ರ ವಸನದೊಂದಿಗೆ ದೃಷ್ಟಿ ಹಾಯಿಸಿದುದ್ದಕ್ಕೂ ತನ್ನ ಮೈಚಾಚಿ ಹರಡಿದ್ದನು. ಅಲ್ಲಿ ಚಳಿ ಚೆನ್ನಾಗೇ ಇತ್ತು, ಅದು ಸುಮಾರು ಮಧ್ಯಾಹ್ನ ೨-೩೦ರ ಸಮಯ. ಅಲ್ಲಿಂದ ನಾವು ಪೂರ್ವ ನಿಗಧಿತ ಕಾರಿನಲ್ಲಿ ಸುಮಾರು ೧೫ಕಿ.ಮೀ ದೂರದ ಧರಮ್ ಶಾಲಾದ ಸಿದ್ದಪುರದಲ್ಲಿರುವ ನಮ್ಮ ಹೋಟೇಲಿಗೆ ಹೋದೆವು. ಬಹುಶಃ ಅಲ್ಲಿನ ಯಾವುದೇ ಸ್ಥಳಗಳಲ್ಲಿ ಪ್ರಯಾಸವಿಲ್ಲದೇ ಪರ್ವತರಾಜನ ದರ್ಶನವಾಗುತ್ತದೆ. ನಾವು ಉಳಿದುಕೊಂಡ ಹೋಟೇಲಿನ ಅಂಗಳದಿಂದ ಬಿಸಿಲಿನ ಸಮಯದಲ್ಲಿ ಧವಲಧಾರ ಪರ್ವತಗಳು ಕಾಣುತ್ತವೆ.

WP_20150125_004

ನಾವುಳಿದ ಹೋಟೇಲಿನ ಹಿನ್ನೆಲೆಯಲ್ಲಿ  ಪರ್ವತರಾಜ ಹಿಮವಂತ

ನಾವು ಹಸಿವನ್ನು ತಣಿಸಲು ಅಲ್ಲೇ ಹೋಟೇಲಿನಲ್ಲಿ ದೊರಕಿದ ರೊಟ್ಟಿ, ಧಾಲ್ ತಿಂದು ಆ ದಿನ ತಿರುಗಾಟಕ್ಕೆ ಹೊರಟೆವು. ಮೊದಲಿಗೆ ನಾವು ಅಲ್ಲೇ ಹತ್ತಿರದಲ್ಲಿದ್ದ ನೊರ್ಬುಲಿಂಕ ಯುನಿವರ್ಸಿಟಿಗೆ ಹೋದೆವು.

WP_20150124_012      WP_20150124_016

ಇದರನ್ನು ಲಾಸಾದಲ್ಲಿರುವ ದಲಾಯಿ ಲಾಮಾನ ಅರಮನೆಯಂತಿರುವ ವಿಶ್ರಾಂತಿಧಾಮದ ಮಾದರಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಟಿಬೆಟಿನ ಸಂಸ್ಕೃತಿಯನ್ನುಳಿಸಲು ಸಾಹಿತ್ಯ,ಚಿತ್ರಕಲೆಗಳ ಅಭ್ಯಾಸ, ತರಬೇತಿಗೆ, ಹಾಗೂ ಉದ್ಯೋಗಕ್ಕೂ ಅನುಕೂಲತೆಗಳನ್ನು ಒದಗಿಸಲಾಗಿದೆ. ಈ ಸಂಸ್ಥೆಯನ್ನು ೧೯೯೫ರಲ್ಲಿ ತೆರೆಯಲಾಯಿತು. ಇಲ್ಲಿ ಅವಲೋಕಿತೇಶ್ವರ ಬುದ್ಧನ ವಿಗ್ರಹವಿರುವ ದೇವಾಲಯವಿದೆ. ಇಲ್ಲಿನ ಆಶ್ರಮದಲ್ಲಿ ತರಬೇತಿ ಹೊಂದುತ್ತಿರುವ ಬೌದ್ಧ ಸನ್ಯಾಸಿಗಳು ವಾಸಿಸುತ್ತಾರೆ.

WP_20150124_026

ನಂತರ ನಾವು ಗ್ಯುಟೋ ಮೊನಾಸ್ಟ್ರಿ Gyuto, ತಾಂತ್ರಿಕ ಆಶ್ರಮವನ್ನು ನೋಡಲು ಹೋದೆವು. ಇದು Gelug-ಗೆಲುಗ್ ಪದ್ಧತಿಯ ದೇವಾಲಯ, ಸನ್ಯಾಸಿಗಳ ತಂತ್ರವಿದ್ಯೆಗಳ ತರಬೇತಿ ಕೇಂದ್ರವನ್ನು ಹೊಂದಿದೆ. ಟಿಬೆಟಿನ ಲಾಸಾದಲ್ಲಿರುವ ಗೆಶೆಯ ಅಭ್ಯಾಸದ ನಂತರ ವಜ್ರಯಾನ ತಂತ್ರವಿದ್ಯೆಗಳ ಅಭ್ಯಾಸಕ್ಕೆ ಇಲ್ಲಿಗೆ ಸನ್ಯಾಸಿಗಳು ಬರುತ್ತಾರೆ. ಇಲ್ಲೆಲ್ಲಾ ಭಾರತ ಸರಕಾರ ನಿರಾಶ್ರಿತರಾಗಿ ಬಂದ ಟಿಬೆಟನ್ನರಿಗೆ ಆಶ್ರಯವನ್ನು ಕೊಡುವುದರ ಮೂಲಕ ಅವರಿಗೆ ಬದುಕಲು ಅವಕಾಶ ಮತ್ತು  ಬೌದ್ಧ ಧರ್ಮದ ರಕ್ಷಣೆಗೆ ಕಾರಣವಾಯಿತು ಒಂದಿಗೇ ಚೀನಾದೊಂದಿಗಿರುವ ತನ್ನ ಸರಹದ್ದನ ರಕ್ಷಣೆಯನ್ನು ಕಾದಿತು. ಈ ರೀತಿಯ ವಿದೇಶ ನೀತಿಯಿಂದಾಗಿಯೇ ಹಿಮಾಲಯದ ಊರುಗಳಾದ ನೇಪಾಲ, ಭೂತಾನ, ಟಿಬೆಟ್ ಭಾರತದೊಂದಿಗೆ ಸ್ನೇಹದಿಂದಿರುವುದು. ಇವೆರಡನ್ನು ನೋಡಿ ಸಂಜೆಯ ಹೊತ್ತಿಗೆ ನಮ್ಮ ಹೋಟೇಲಿಗೆ ಹೋಗುತ್ತಿದ್ದಂತೆ ಅಲ್ಲೇ ಸಮೀಪದ ಸಣ್ಣ ಬೆಟ್ಟದ ಮಧ್ಯಮ ಎತ್ತರದಲ್ಲಿರುವ ಶಿವದೇವಸ್ಥಾನಕ್ಕೆ-ಅಗಂಜರ್ ಮಹಾದೇವ ಮಂದಿರಕ್ಕೆ ಹೋದೆವು. ಆ ದೇವಸ್ಥಾನವನ್ನು ನೋಡಿದಾಗ ಮೊದಲು ನೋಡಿದ ಬೇರೆ ತೀರ್ಥಯಾತ್ರಾಧಾಮಗಳಾದ ಬದರೀ, ಕೇದಾರಗಳ ನೆನಪು ಮರುಕಳಿಸಿತು. ಹಾಗಾಗಿ ನನಗೆ ಹಿಮಾಲಯದ ಬಹಳಷ್ಟು ದೇವಸ್ಥಾನಗಳಲ್ಲಿ ಅವರ್ಣನೀಯವಾದ ಶಾಂತ ವಾತಾವರಣವೂ, ನಮ್ಮನ್ನು ಆವರಿಸುವಂತ ಏನೋ ಶಕ್ತಿಯಿದೆ ಎಂಬ ಭಾವನೆ ಬಂದಿತು. ಅಲ್ಲಿನ ಇಪ್ಪತ್ತರ ಹರೆಯದಲ್ಲಿದ್ದ ಪೂಜಾರಿಯ ಮಾತು, ಸ್ನೇಹಭಾವ ಮನಸ್ಸಿಗೆ ಏನೋ ಸಂತೋಷವನ್ನು ಕೊಟ್ಟಿತು. ಈ ದೇವಸ್ಥಾನವಿದ್ದ ಗುಡ್ಡದ ಬುಡದಲ್ಲಿ ನದಿಯೊಂದು ಹರಿಯುತ್ತದೆ. ನದೀ ತೀರಕ್ಕೆ ಇಳಿದು ಹೋಗಲು ದಾರಿಯಿದೆ.ನಾವು ಆತನೊಂದಿಗೆ ನದೀ ತೀರಕ್ಕೆ ಹೋದೆವು. ಅಲ್ಲಿ ನೀರಿನ ದಾರಿಯಲ್ಲಿ ಬಂಡೆಕಲ್ಲುಗಳ ಮಧ್ಯದಲ್ಲಿ ಸ್ವಾಭಾವಿಕವಾದ, ತೀರ ತಗ್ಗಿನ ಗುಹೆಯೊಂದನ್ನು ಆ ಪೂಜಾರಿಯು ನಮಗೆ ತೋರಿದನು. ಆ ಗುಹೆಯೊಳಗೆ ಇರುವ ಶಿವಲಿಂಗಕ್ಕೆ ನಿತ್ಯ ಪೂಜೆಯಿದೆ, ನದಿಯಲ್ಲಿ ನೀರು ಹರಿಯುವಾಗ ಪೂಜೆ ನಡೆಯುವುದಿಲ್ಲ. ಇಲ್ಲೆಲ್ಲಾ ಸಂಜೆಯಾಗುತ್ತಿದ್ದಂತೆ ಚಳಿ ಹೆಚ್ಚುತ್ತದೆ, ನಾವು ಸೂರ್ಯಾಸ್ತದ ಆ ನಸು ಬೆಳಕಿನಲ್ಲಿ ದೇವಾಲಯವನ್ನು, ಆ ಸುಂದರ ಪ್ರಕೃತಿಯನ್ನು ನೋಡಿ ತೃಪ್ತಿಯಿಂದ ಹಿಂದಿರುಗಿದೆವು.
ಮಾರನೇ ದಿನ(ಜನವರಿ ೨೪) ಮೊದಲಿಗೆ ಅಲ್ಲಿನ ಕ್ರಿಕೆಟ್ ಸ್ಟೇಡಿಯಮ್ ಅನ್ನು ನೋಡಲು ಹೋದೆವು. ಹೋಗುವ ದಾರಿಯಲ್ಲಿ ಧವಲ್ ಧಾರ ಸರಣಿಯ ಸಣ್ಣ-ಸಣ್ಣ ಬೆಟ್ಟಗಳನ್ನು ದಾಟುತ್ತಾ ಹೋಗಬೇಕು. ಇದು ಪ್ರಪಂಚದಲ್ಲೇ ಅತ್ಯಂತ ಎತ್ತರದಲ್ಲಿರುವ ಕ್ರಿಕೆಟ್ ಸ್ಟೇಡಿಯಮ್ ಆಗಿದೆ. ಇದು ೪೭೮೦ ಅಡಿ ೨” ಎತ್ತರದಲ್ಲಿದೆ. ೨೦೦೫ ರಲ್ಲಿ ನಡೆದ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಾಚ್ ರಣಜಿ ಟ್ರೋಫಿ ಪಾಕ್ ಮತ್ತು ಭಾರತೀಯ ತಂಡಗಳ ನಡುವೆ ಇಲ್ಲಿ ಜರುಗಿತು, ಇದೇ ಮೊದಲನೇ ಬಾರಿ , ನಂತರ ಹೊರ ಜಗತ್ತಿನಲ್ಲಿ ಇದು ಪ್ರಸಿದ್ಧಿಗೆ ಬಂದಿತು.

WP_20150125_019

ಹಿಮಾವೃತ ಬೆಟ್ಟಗಳು ನಸುಕಿನಲ್ಲೂ ಸುಂದರ, ಬಿಸಿಲೇರಿದಾಗಲೂ ಸುಂದರ, ಅಸ್ತಮಿಸುವ ಸೂರ್ಯನ ಬೆಳಕಿನಲ್ಲೂ ಸುಂದರ. ಈ ಸೌಂದರ್ಯ ಕೇವಲ ಅನುಭವಕ್ಕೆ ಬರುವಂತದು, ಆ ಕ್ಷಣಕ್ಕೆ ಮಾತ್ರ ಸೀಮಿತ, ಯಾವುದೇ ಕಾವ್ಯ, ವರ್ಣಚಿತ್ರ, ಫೋಟೊಗಳಿಗೆ ಸೆರೆಹಿಡಿಯಲು ಅಸಾಧ್ಯ.
ಸ್ಟೇಡಿಯಮ್ ನಲ್ಲಿ ಕೆಲವು ದೃಶ್ಯಗಳನ್ನು ನಮ್ಮ ನೆನಪಿಗಾಗಿ ಕ್ಯಾಮರಾದಲ್ಲಿ ಸೆರೆ ಹಿಡಿದೆವು. ಅಲ್ಲಿಂದ ನಂತರ ನಾವು ಬೆಟ್ಟದ ಇಳಿಜಾರಿನಲ್ಲಿ ಬೆಳೆಸಿದ ಟೀ ಗಾರ್ಡನ್ ನೋಡಲು ಹೋದೆವು. ಅಲ್ಲಿಂದ ಮುಂದಕ್ಕೆ ಮಾತಾ ಕುನಾಲ್ ಪತ್ಥರೀ ಮಂದಿರವನ್ನು ನೋಡಿದೆವು. ಇದು ಬಹಳ ಪುರಾತನ ಕಾಲದಲ್ಲಿದ್ದ ದೇವಸ್ಥಾನ. ಅಲ್ಲಿನ ಕಥೆ ಹೇಳುವಂತೆ ಪರಮ ಶಿವನ ಮೊದಲ ಪತ್ನಿ ಸತೀದೇವಿ ದಕ್ಷ ಯಜ್ಞದಲ್ಲಿ ತೀರಿದಾಗ ಅವಳ ತಲೆ ಇಲ್ಲಿ ಬಿದ್ದು ಆ ಸ್ಥಳದಲ್ಲಿ ಬಂದ ಕಲ್ಲನ್ನೇ ದೇವಿಯೆಂದು ಪೂಜಿಸಲಾಗುತ್ತದೆ.ಈ ದೇವಸ್ಥಾನ ಮೊದಲು ದಟ್ಟ ಅರಣ್ಯದ ಮಧ್ಯಲ್ಲಿತ್ತು.

WP_20150125_034            WP_20150125_025

ಈಗಿನ ದಿನಗಳಲ್ಲಿ ಅರಣ್ಯದ ಬದಲು ಅದು ಮಾನವ ಕೃತ ಟೀ ತೋಟಗಳಾಗಿದೆ. ಅಲ್ಲಿಂದ ಮತ್ತೆ ನಾವು ಮ್ಯಾಕ್ ಲೋಡ್ ಗಂಜ್ ಎಂದು ನಾಮಾಂಕಿತವಾಗಿರುವ ಇನ್ನೊಂದು ಬೆಟ್ಟದ ಇಳಿಜಾರಿನಲ್ಲಿರುವ ಟಿಬೆಟಿನ ಜನರ ವಸತಿ ಪ್ರದೇಶಕ್ಕೆ ಹೋದೆವು. ಮೊದಲಿಗೆ ಇಲ್ಲೆಲ್ಲ ಜನ ವಸತಿ ಕಮ್ಮಿ, ಕೇವಲ ಬ್ರಿಟೀಷರ ಸೈನ್ಯದ ತುಕಡಿಯಿತ್ತು.

WP_20150125_046    WP_20150125_052

WP_20150125_064

ಅಲ್ಲಿನ “ಭಾಗ್ಸುನಾಗ್ “ದೇವಸ್ಥಾನ(ಶಿವ ದೇವಸ್ಥಾನ) ಪ್ರಸಿದ್ಧ,ಸೈನಿಕರಾಗಿ ಹೋದ ಪ್ರಾರಂಭದಿಂದಲೂ ಗೂರ್ಖಾ ಜನ ಆರಾಧಿಸುತ್ತಿದ್ದ ಸ್ಥಳ. ಗುಡ್ಡದಲ್ಲಿ ಬಳಪದ ತೆರನಾದ ಕಲ್ಲನ್ನು ಕಡೆಯುತ್ತಿದ್ದರು. ಈ ಕಲ್ಲನ್ನು ಅಲ್ಲಿನ ಮನೆಗಳಲ್ಲಿ  ಚಾವಣಿಗೆ ಬಳಸುತ್ತಾರೆ. ಮೊದಲಿಗೆ ನಾವು ಈ ದೇವಸ್ಥಾನವನ್ನು ನೋಡಿದೆವು. ಅಲ್ಲಿ ಸ್ಥಳ ಪುರಾಣ ಬರೆದಿತ್ತು. ಅಲ್ಲೇ ತುಸು ದೂರ ಸಣ್ಣ ಗುಡ್ಡಗಳನ್ನೇರಿ ಕಾಲ್ನಡೆಯಲ್ಲಿ ಜಲಪಾತವನ್ನು ನೋಡಲು ಹೋದೆವು. ನಡೆಯುವ ದಾರಿ ತುಂಬಾ ಚೆನ್ನಾಗಿತ್ತು.

ನಿರಾಶ್ರಿತ ಟಿಬೆಟಿನ ಜನರಿಗೆ ಭಾರತ ಸರಕಾರ ವಾಸಕ್ಕಾಗಿ ಮೆಕ್ಲೋಡ್ ಗಂಜ್ನಲ್ಲಿ ಸ್ಥಳ ಒದಗಿಸಿದ್ದಾರೆ. ಇಲ್ಲಿ ದಲೈ ಲಾಮಾ ಅವರು ವಾಸ ಮಾಡುವ ದೊಡ್ಡ ಮಹಲ್, ಬೌದ್ಧ ಮಂದಿರ, ಶಾಸ್ತ್ರ ಅಧ್ಯಯನದ ವಿದ್ಯಾಲಯಗಳು, ಸನ್ಯಾಸಿಗಳು , ವಿದ್ಯಾರ್ಥಿಗಳು ಮತ್ತು ಅವರ ವಾಸಸ್ಥಾನ ಇವೆಲ್ಲಾ ಇದೆ. ಇವೆಲ್ಲದರ ಸುತ್ತಲೂ ಟಿಬೆಟಿನ ಜನಗಳೇ ವಾಸವಾಗಿದ್ದು, ಜೀವನೋಪಾಯಕ್ಕಾಗಿ ವ್ಯಾಪಾರ ಉದ್ದಿಮೆಗಳನ್ನು ಮಾಡುತ್ತಾರೆ. ಹೊರ ದೇಶಗಳಿಂದ ಜನರು ಬೌದ್ಧ ಧರ್ಮವನ್ನು ಅಧ್ಯಯನ ಮಾಡಲು ಅಲ್ಲಿಗೆ ಬರುತ್ತಾರೆ. ನಾವು ಅಲ್ಲಿಗೆ ಹೋದ ಸಮಯದಲ್ಲಿ ದಲೈ ಲಾಮಾ ಅವರು ದಕ್ಷಿಣ ಭಾರತದ ಹುಬ್ಬಳ್ಳಿಯ ಸಮೀಪದ ಮುಂಡಗೋಡಿನಲ್ಲಿರುವ ಟಿಬೆಟಿಯನ್ನರ ನೆಲೆದಾಣ ಮತ್ತು, ಬೌದ್ಧ ಮಂದಿರಕ್ಕೆ ಹೋಗಿದ್ದರು. ಅಲ್ಲಿನ ಮಂದಿರವು ತೀರ ಇತ್ತೀಚೆಗೆ ಕಟ್ಟಲಾಯಿಯಿತು, ಹಾಗಾಗಿ ಅವರು ಸ್ವತಃ ಮುತುವರ್ಜಿ ತೆಗೆದುಕೊಡು ಅದರ ಬೆಳವಣಿಗೆಯಲ್ಲಿ ಭಾಗಿಯಾಗುತ್ತಾರೆ.

WP_20150125_085   WP_20150125_097
ಮೆಕ್ಲೋಡ್ ಗಂಜ್ ಭಾರತ ದೇಶದೊಳಗಿನ ಮಿನಿ ಟಿಬೆಟ್. ಆ ಜನ ನಿಬಿಡ ಪಟ್ಟಣದಿಂದ ಹೊರ ಬಂದು ನಾವು ಅಲ್ಲೇ ಬೆಟ್ಟದ ಮೇಲಿನ ಸ್ಥರದಲ್ಲಿರುವ ಡಾಲ್ ಸರೋವರದ ಪ್ರದೇಶಕ್ಕೆ ಬಂದೆವು. ಸಾಯಂಕಾಲವಾದುದರಿಂದ ಅಲ್ಲೇ ದಾರಿಯಲ್ಲಿದ್ದ ಬ್ರಿಟಿಶರ ಕಾಲದ ಸೈಂಟ್ ಜಾನ್ ಚರ್ಚ್ ಒಂದನ್ನು ನೋಡಲು ಹೋಗಲಾಗಲಿಲ್ಲ. ಸರೋವರದ ಸುತ್ತಲೂ ದೇವದಾರ ಮರಗಳಿವೆ. ಇಲ್ಲೇ ಪಕ್ಕದಲ್ಲಿ ಶಿವನ ದೇವಸ್ಥಾನವಿದೆ, ಇದು ಗದ್ದಿ ಜನರಿಗೆ ತುಂಬಾ ವಿಶೇಷಪಟ್ಟ ಸ್ಥಳ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ನಂತರ ಅಲ್ಲಿಂದ ಸ್ವಲ್ಪ ಮುಂದಕ್ಕಿರುವ ಪರ್ವತಾರೋಹಣ ಪ್ರಾರಂಭಿಸುವ “ನಡ್ಡಿ” ಎಂಬ ಹಳ್ಳಿಗೆ ಹೋದೆವು. ಅಲ್ಲಿಂದ ನಾವು ಅಸ್ತಮಿಸುವ ಸೂರ್ಯನ ದರ್ಶನವನ್ನು ಕಣ್ತುಂಬಾ ಮಾಡಬಹುದು.

WP_20150125_104           WP_20150125_100

ಅದೊಂದು ರೋಮಾಂಚನೀಯ ಅನುಭವ. ಅಲ್ಲಿ ದಿಗಂತದ ಕೊನೆಯಲ್ಲಿ ಕ್ಷಣ-ಕ್ಷಣ ಬಣ್ಣ ಬದಲಿಸುತ್ತಾ ಕಂತುವ ಸೂರ್ಯನ ದರ್ಶನ ಲಭ್ಯ. ಈ ಪ್ರದೇಶವನ್ನು ವಿಹಾರ ತಾಣವಾಗಿ ಮಾಡುತ್ತಿದ್ದಾರೆ. ನಮ್ಮ ಮಾರ್ಗದರ್ಶಕ ಪರ್ವತಾರೋಹಿಗಳ ದಾರಿಯನ್ನು ಮತ್ತು ಹತ್ತಲಿರುವ ಬೆಟ್ಟವನ್ನು ತೋರಿದನು. ನಾವು ಇಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚಿನ ಹೊತ್ತು ಇದ್ದೆವು. ಸೂರ್ಯಾಸ್ತವಾದ ನಂತರ ಅರೆಕತ್ತಲಲ್ಲಿ ಮ್ಯಾಕ್ ಲೋಡ್ ಗಂಜ್ ನ ಬೆಟ್ಟವನ್ನು ಇಳಿದು ನಮ್ಮ ಹೋಟೇಲಿರುವ ಸಿದ್ದಪುರಕ್ಕೆ ವಾಪಾಸಾದೆವು. ಆ ದಿನ ರಾತ್ರಿ ಒಳ್ಳೆ ಮಳೆಬಿದ್ದು ಚಳಿಯಾಗಿತ್ತು. ನಾವು ಅಲ್ಲಿದ್ದ ಮೂರೂ ದಿನಗಳಲ್ಲಿ ಮುಂಜಾನೆಯ ಚಳಿಯಲ್ಲಿ ಹವೆಯನ್ನು ಮತ್ತು ಪ್ರಕೃತಿಯನ್ನು ಸವಿಯಲು ಕಾಲ್ನಡುಗೆಯಲ್ಲಿ ಬೇರೆ-ಬೇರೆ ರಸ್ತೆಗಳಲ್ಲಿ ಹೋದೆವು. ಸಣ್ಣಗೆ ಮಳೆ ಹನಿಯುತ್ತಿದ್ದು ಬೆಳಗಿನ ಹವೆ ತುಂಬಾ ಚೆನ್ನಾಗಿತ್ತು.
(ಮುಂದುವರಿಯುವುದು)

ಪಶುಪತಿನಾಥನ ಊರೆನಿಸಿದ ನೇಪಾಲ

ನಾವು ಭುತಾನಕ್ಕೆ ಹೋಗಲು ನಿಶ್ಚಯಿಸಿದಾಗ ಅಲ್ಲೇ ಹತ್ತಿರದ ಹಿಮಾಲಯದ ಇನ್ನೊಂದು ದೇಶವಾದ ನೇಪಾಲಕ್ಕೆ ಹೋಗಬೇಕೆಂದು ಆಲೋಚಿಸಿದೆವು. ನೇಪಾಲವು ಭೂತಾನದ ದಕ್ಷಿಣ-ಪಶ್ಚಿಮಕ್ಕಿದೆ. ಇದು ನಮ್ಮ ಪುರಾಣಕಾಲದಿಂದಲೂ ಈಗಿನ ಭಾರತ ದೇಶವೆಂದು ಕರೆಸಿಕೊಳ್ಳುವ ನಾಡಿನೊಂದಿಗೆ ಸಂಬಂಧಿತ ರಾಷ್ಟ್ರ. ಇಲ್ಲಿನ ರಾಷ್ಟ್ರ ಧರ್ಮ ಹಿಂದು, ಆದರೆ ಇಲ್ಲಿ ಅನ್ಯ ಧರ್ಮಗಳಾದ ಬೌದ್ಧ, ಕ್ರೈಸ್ತ, ಇಸ್ಲಾಂನ ಜನಗಳೂ ಇದ್ದಾರೆ. ಇದು ಹಿಂದೂಗಳಿಗೆ ಮತ್ತು ಬೌದ್ಧ ಧಾರ್ಮಿಕರಿಗೆ ವಿಶೇಷಪಟ್ಟ ಸ್ಥಳ. ಹಿಂದೂಗಳ ಪುಣ್ಯಕ್ಷೇತ್ರವೆನಿಸಿದ ಪಶುಪತಿನಾಥ ಮಂದಿರ ಇಲ್ಲಿನ ರಾಜಧಾನಿಯಾದ ಕಟ್ಮಂಡು ನಗರದಲ್ಲಿದೆ. ನಮ್ಮ ಪೌರಾಣಿಕ ಕಥೆಯಾದ ರಾಮಾಯಣದ ಸೀತಾಮಾತೆಯು ಇಲ್ಲಿನ ಜನಕಪುರಿಯವಳು. ಶಕ್ಯ ಮುನಿ ಗೌತಮ ಬುದ್ಧ ಜನಿಸಿದ ಲುಂಬಿನಿಯು ಇದೇ ದೇಶದ ಪಟ್ಟಣ ಮತ್ತು ಅವನು ಇಲ್ಲಿನ ಒಂದು ಕ್ಷತ್ರಿಯ ಪಂಗಡಕ್ಕೆ ಸೇರಿದವನು.
ನಾವು ಭುತಾನದ ಪ್ರವಾಸ ಮುಗಿಸಿ ಪಾರೋ ವಿಮಾನ ನಿಲ್ದಾಣದಿಂದ ಡ್ರುಕ್ ವಾಯುಸಂಸ್ಥೆಯ ವಿಮಾನದಲ್ಲಿ ನವೆಂಬರ್ ೭-೨೦೧೪ ರ ಬೆಳಗ್ಗೆ ಕಟ್ಮಂಡುವಿಗೆ ಹೊರಟೆವು. ಆ ದಿನ ನಮ್ಮ ದೇಶದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪಾರೊ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅದರಿಂದಾಗಿ ನಮ್ಮ ಪ್ರಯಾಣವು ವಿಳಂಬವಾಯಿತು. ಭುತಾನ ಮತ್ತು ನೇಪಾಲಗಳೆರಡೂ ಭಾರತ ದೇಶದೊಂದಿಗೆ ಭೌಗೋಳಿಕವಾಗಿ, ಆರ್ಥಿಕವಾಗಿ ಮತ್ತು ದೈನಂದಿನ ಎಷ್ಟೋ ಜೀವನದ ಅಗತ್ಯಗಳ ಪೂರೈಕೆಗೆ ಆವಲಂಬಿಸಿವೆ. ನಾವು ಸ್ನೇಹಪರರಾಗಿರುವ ನೆರೆ ರಾಷ್ಟ್ರಗಳೊಡನೆ ಯಾವತ್ತೂ ಒಳ್ಳೆ ಸಂಬಂಧವನ್ನಿಟ್ಟುಕೊಂಡುದು ಐತಿಹಾಸಿಕ ಸತ್ಯ. ಹಾಗಾಗಿ ಭಾರತೀಯರಿಗೆ ಇಲ್ಲೆಲ್ಲ ಒಳ್ಳೆ ಗೌರವವಿದೆ.ನಮ್ಮ ರೂಪಾಯಿ ನೋಟುಗಳನ್ನು ಅಲ್ಲಿ ಬಳಸಲು ಏನೂ ತಡೆಗಳಿರಲಿಲ್ಲ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಚೆನ್ನಾಗಿಲ್ಲದ ಕಾರಣ ನಾವು ನಮ್ಮ ಕೈಚೀಲ, ಪೆಟ್ಟಿಗೆಗಳನ್ನು ಪಡಕೊಳ್ಳಲು ತುಂಬಾ ಕಾಯಬೇಕಾಗಿ ಬಂತು. ಎಲ್ಲೆಡೆಯಲ್ಲೂ ವಿದೇಶೀ ಯಾತ್ರಿಕರು ಕಂಡು ಬರುತ್ತಾರೆ. ಅವರಲ್ಲಿ ಬಹಳಷ್ಟು ಮಂದಿ ಹಿಮಾಲಯದ ಪರ್ವತಗಳನ್ನು ಏರಿ ನೋಡುವ, ಜನಜೀವನವನ್ನುಕಂಡು ಅನುಭವಿಸುವ ಕುತೂಹಲಕ್ಕಾಗಿ ಬಂದಿರುವವರು. ನಾವು ಉಳಿದಿದ್ದ ಹೋಟೇಲಿನಲ್ಲಿ ಬಹಳ ಚೀನೀಯರು, ಕೊರಿಯನ್ನರು ಬಂದಿದ್ದರು, ಅವರಿಗೆ ಬೌದ್ಧ ಸ್ಥಳಗಳನ್ನು ನೋಡಲು ಆಸಕ್ತಿ.
ನಾನಿಲ್ಲಿ ನೇಪಾಲದ ಇತಿಹಾಸವನ್ನು ಹೇಳಲು ಬಯಸುವುದಿಲ್ಲ. ನನಗೆ ಅಲ್ಲಿನ ಜನರನ್ನು, ಅವರ ಬದುಕನ್ನು ಕಂಡಾಗ ಮೂಡಿದ ಅಭಿಪ್ರಾಯ, ಅನಿಸಿಕೆಗಳನ್ನಷ್ಟೇ ಹೇಳುತ್ತೇನೆ. ನೇಪಾಲದಲ್ಲಿ೨೦೦೮ರಲ್ಲಿ ರಾಜವಂಶವು ದೇಶದ ಆಡಳಿತದಿಂದ ಹೊರ ಬಂದ ನಂತರ ಈಗ ಪ್ರಜಾಪ್ರಭುತ್ವ ಬಂದಿದೆ. ಇದಿನ್ನೂ ಕೇವಲ ಪ್ರಾರಂಭದ ಹಂತದಲ್ಲಿರುವ ಪ್ರಜಾ ಸರಕಾರವಾದುದರಿಂದ ಅವ್ಯವಸ್ಥೆ ಹಾಗೂ ಅಧಿಕಾರಿಗಳ ವಂಚನೆ, ಮೋಸಗಳಿಂದ ದೇಶದಲ್ಲಿ ಬಡತನ, ಅವ್ಯವಸ್ಥೆ ಕಣ್ಣು ಕುಕ್ಕುವಂತಿದೆ. ಇಲ್ಲಿ ವಿದ್ಯುತ್ ಶಕ್ತಿ, ಆಹಾರ, ಇಂಧನ, ಅನಿಲ,ವಾಹನ ಎಲ್ಲವೂ ತುಟ್ಟಿ. ವಿದ್ಯುತ್ ಸರಬರಾಜು ಕೇವಲ ದಿನದಲ್ಲಿ ೧೨ ಗಂಟೆಗಳಂತೆ, ಅದು ಕಟ್ಮಂಡುವಿನಂತಹ ದೊಡ್ಡ ನಗರದಲ್ಲಿ. ಹಾಗಾಗಿ ಬಡವರ್ಗದ ಜನರ ಕಾರ್ಪಣ್ಯ ಎಲ್ಲೆಲ್ಲೂ ಕಾಣುತ್ತದೆ. ಹಾಗಿದ್ದರೂ ನಮಗೆ ಅಲ್ಲಿನ ಜನರ ನಗುಮುಖ, ಜೀವನೋತ್ಸಾಹ, ನಿರಂತರ ಕಾರ್ಯಪ್ರವೃತ್ತರಾಗಿರುವ ಪರಿ ಅಚ್ಚರಿ ಬರಿಸಿದವು. ಅಲ್ಲಿ ಹೆಂಗಸರು ಮನೆಯ ಹೊರಗಿನ ಕೆಲಸಗಳಲ್ಲಿ ತುಂಬಾ ಭಾಗವಹಿಸುತ್ತಾರೆ. ಇನ್ನೊಂದು ವಿಶೇಷಕರವಾದ ಸಂಗತಿ(ನನಗೆ ಮಾತ್ರ) ಅಲ್ಲಿ ಮಾಂಸಹಾರಿಗಳೇ ಹೆಚ್ಚಿಗೆ, ಅಲ್ಲೆಲ್ಲಾ ಮೊದಲಿಂದಲೂ ದಿನನಿತ್ಯದ ಆಹಾರದಲ್ಲಿ ಮಾಂಸಾಹಾರ ಸಾಮಾನ್ಯ. ಇಲ್ಲಿನ ಮುಖ್ಯ ಆಹಾರ ಬೆಳೆ ಅಕ್ಕಿ, ಗೋಧಿ ಹಾಗೂ ನಮ್ಮ ಭಾರತೀಯ ಪದ್ಧತಿಯ ಬೇಳೆ ಕಾಳುಗಳು, ತರಕಾರಿ. ನಾವು ಉಳಿದುಕೊಂಡುದು ಸೋಲ್ಟಿ ಎಂಬ ಜಾಗದಲ್ಲಿ, ಅಲ್ಲಿಂದ ಪಶುಪತಿನಾಥ ದೇವಸ್ಥಾನ ೬ಕಿಮೀ. ದೂರದಲ್ಲಿದೆ. ನಾವು ಹೋದ ದಿನವೇ ಸಾಯಂಕಾಲ ಪಶುಪತಿನಾಥ ದೇವಸ್ಥಾನಕ್ಕೆ ಹೋದೆವು. ಆ ದಿನ ನಮಗೆ ಹೆಚ್ಚೇನು ನೋಡಲಾಗಲಿಲ್ಲ. ಅದಾಗಲೇ ಪೂಜೆ ಮುಗಿದು ಅರ್ಚಕರು ಗರ್ಭಗುಡಿಯನ್ನು ಮುಚ್ಚಲು ಪ್ರಾರಂಭಿಸಿದ್ದರು.

WP_20141107_035
ಪಶುಪತಿನಾಥ ದೇವಸ್ಥಾನ ಸುಮಾರು ಕ್ರಿ.ಶ. ೪೦೦ ರ ಕಾಲದ್ದೆಂದು ಈ ವರೆಗಿನ ಮಾಹಿತಿಗಳು ತಿಳಿಸುತ್ತದೆ, ಅದಕ್ಕಿಂತಲೂ ಹಿಂದಿನದೂ ಇರಬಹುದು. ಈ ಶಿವ ದೇವಸ್ಥಾನ ಹಿಂದೂಗಳ ಪವಿತ್ರವಾದ ಕ್ಷೆತ್ರ. ಇಲ್ಲಿ ಶಿವನನ್ನು ಪಶುಪತಿ ಅರ್ಥಾತ್ ಮೃಗಗಳ ಒಡೆಯನೆಂದು ಹೇಳಲಾಗುತ್ತದೆ. ಇದು ಭಾಗಮತಿ ನದೀ ತೀರದಲ್ಲಿದೆ. ಕಟ್ಮಂಡು ಕಣಿವೆಯಲ್ಲಿ ಹುಟ್ಟಿ ಭಾಗಮತಿ ನದಿ ಮುಂದಕ್ಕೆ ಹರಿದು ದೇವನದಿಯಾದ ಗಂಗೆಯನ್ನು ಸೇರುತ್ತದೆ. ಹಾಗಾಗಿ ಇದನ್ನು ಗಂಗೆಗೆ ಸಮಾನವಾಗಿ ಭಾವಿಸುತ್ತಾರೆ. ಈ ನದೀ ತೀರದಲ್ಲಿ ಸತ್ತವರ ಅಂತ್ಯ ಕ್ರಿಯೆಗಳನ್ನು ಮಾಡುತ್ತಾರೆ. ದೇವಸ್ಥಾನದ ವಿಶಾಲವಾದ ಆವರಣದೊಳಗೆ ಆಶ್ರಮ, ಚಿಕ್ಕ ಗುಡಿಗಳು ಅರಸರ ಕಾಲದ ಕೆತ್ತನೆಗಳು, ಶಿಲಾಶಾಸನಗಳು ಇವೆ. ಗರ್ಭಗುಡಿಯೊಳಗಿರುವ ಶಿವಲಿಂಗ ೬ ಅಡಿ ಎತ್ತರದ್ದಾಗಿದ್ದು,ಅದರ ನಾಲ್ಕು ಮೈಯಲ್ಲಿ ಶಿವನ ಮುಖವನ್ನು ಕೆತ್ತಲಾಗಿದೆ. ಶಿವಲಿಂಗವನ್ನು ಬೆಳಗ್ಗಿನ ಪೂಜೆಯ ಕಾಲದಲ್ಲಿ ಚಿನ್ನದ ಅಲಂಕಾರಿಕ ಹೊದಿಕೆಯನ್ನು ಕಳಚಿ ಅಭಿಷೇಕ(ರುದ್ರಾಭಿಷೇಕ)ವಾದ ನಂತರ ಪುನಃ ತೊಡಿಸುತ್ತಾರೆ. ಈ ಮಂದಿರ ತಿಳಿದ ಮೂಲಗಳಿಂದ ವಿವಿಧ ರಾಜರ ಕಾಲದಲ್ಲಿ ೩-೪ ಬಾರಿ ಹೊಸದಾಗಿ ನಿರ್ಮಿಸಲ್ಪಟ್ಟಿದೆ. ಇದರನ್ನು ಯುನೆಸ್ಕೋದವರು ಈ ವಿಶ್ವದ ಪರಂಪರಾಗತ ಸ್ಥಳವೆಂದು (World Heritage Site) ಗಣಿಸಿದ್ದಾರೆ.ಈ ದೇವಸ್ಥಾನಕ್ಕೆ ಕೇವಲ ಹಿಂದೂಗಳು ಮಾತ್ರ ಪ್ರವೇಶ ಮಾಡಬಹುದಷ್ಟೆ ! ೮ನೇ ಶತಮಾನದ ಕಾಲದಲ್ಲಿ ಗಜನಿ ಮೊಹ್ಮದನ ಕುದೃಷ್ಟಿ ಇದರ ಸಂಪತ್ತಿನ ಮೇಲೆ ಬಿದ್ದು ಧಾಳಿ ನಡೆಸಿದ್ದನಂತೆ. ಇದು ನೇಪಾಲದ ಹೆಮ್ಮೆಯ ದೇವಸ್ಥಾನ. ದೇವಸ್ಥಾನದ ಪಕ್ಕದಲ್ಲೇ ಪ್ರತ್ಯೇಕವಾಗಿ ದೇವಿ(ದುರ್ಗೆ)ಯ ಶಕ್ತಿ ಪೀಠವಿದೆ.

 

2775996-Pashupatinath-Temple-0           caa5b6a4612b11e2a7ee000c29f65e19.jpegpashupathi     pashupatinath-temple

ದೇವಾಲಯದೊಳಗೆ ಕ್ಯಾಮರಾ ,ಫೊಟೊ ನಿಷಿದ್ಧವಾದುದರಿಂದ ನಾನು ಅಂತರ್ಜಾಲದಲ್ಲಿದ್ದ ಫೋಟೋಗಳನ್ನೇ ಹಾಕಿದ್ದೇನೆ.
ನಾವು ದೇವಸ್ಥಾನವನ್ನು ನೋಡಲು ಉತ್ಸುಕರಿದ್ದಷ್ಟೇ ಅಲ್ಲಿನ ಮುಖ್ಯ ಪೂಜಾರಿಯಾಗಿರುವ ರಾವಲ್ ಗಣೇಶ ಭಟ್ಟರನ್ನೂ ಭೇಟಿಯಾಗಲು ಉತ್ಸುಕರಿದ್ದೆವು. ನಾನು ಅಲ್ಲಿನ ದೇವಸ್ಥಾನದಲ್ಲಿ ಮುಖ್ಯ ಪುರೋಹಿತ ಸ್ಥಾನದಲ್ಲಿ ದಕ್ಷಿಣ ಕನ್ನಡದ ಉಡುಪಿಯ ಮೂಲದವರು ಇದ್ದಾರೆಂದು ಲೇಖನವೊಂದರಲ್ಲಿ ಓದಿದ್ದೆ. ಈ ದೇವಾಲಯದಲ್ಲಿ ಪುರೋಹಿತರನ್ನು ದಕ್ಷಿಣ ಭಾರತದಿಂದಲೇ ಬರಮಾಡಿಕೊಳ್ಳುವ ಪದ್ಧತಿ ಶತಮಾನಗಳಿಂದ ಬಂದಿದೆಯೆಂದು ಪ್ರತೀತಿ. ಹಾಗಾಗಿ ನಾವು ಅವರನ್ನು ಕಾಣಲು ಹೋದೆವು. ಅವರು ನಮಗೆ ಅಲ್ಲಿನ ದೇವಾಲಯ, ಪದ್ಧತಿ, ಸರಕಾರ ಅವುಗಳ ಬಗ್ಗೆ ತಮ್ಮ ಸ್ವಂತ ಅನುಭವಗಳನ್ನು ತಿಳಿಸಿದರು. ನಾವು ಕೊನೆಯ ದಿನ ಅವರು ಹೇಳಿದಂತೆ ಬೆಳಗ್ಗೆ ಬೇಗನೇ ಹೋಗಿ ರುದ್ರಾಭಿಷೇಕ ಪೂಜೆ, ಸೇವೆಯನ್ನು ಮಾಡಿಸಿದೆವು. ಅಲ್ಲಿ ನಾವ್ಯಾರೂ ಪೂಜೆಗೆ ಹೂವನ್ನು ಕೊಂಡೊಯ್ಯುವಂತಿಲ್ಲ, ಪ್ರಾಯಶಃ ಇದು ಗರ್ಭಗುಡಿಯನ್ನು, ಆಲಯದ ಪ್ರಾಂಗಣವನ್ನು ಶುಚಿಯಾಗಿರಿಸಿಕೊಳ್ಳಲು ಮಾಡಿರುವ ನಿಯಮವಿರಬಹುದು. ನಾವು ಅಲ್ಲಿನ ರೂಢಿಯಂತೆ ಅಲ್ಲೇ ಹತ್ತಿರದ ಅಂಗಡಿಯಿಂದ ರುದ್ರಾಕ್ಷಿ ಮಾಲೆಯನ್ನು ಕೊಂಡೊಯ್ದು ಕೊಟ್ಟೆವು. ಅದನ್ನು ಪೂಜೆಯ ನಂತರ ಪೂಜಾರಿಯು ಶಿವಲಿಂಗಕ್ಕೆ ಮುಟ್ಟಿಸಿ ಪ್ರಸಾದವೆಂದು ನಮಗೆ ಹಿಂದಕ್ಕಿತ್ತರು. ನದೀ ತೀರ, ನಂತರ ದೇವಸ್ಥಾನದ ಭಕ್ತ ಜನರು, ಮೈಮೇಲೆಲ್ಲಾ ವಿಭೂತಿ ಬಳಿದಿದ್ದ ನಾಗ ಸಾಧುಗಳನ್ನು ನೋಡುತ್ತಾ ಅಲ್ಲೇ ಅಡ್ಡಾಡಿದೆವು. ಬೆರಗಿನಿಂದ ಆವರಣದೊಳಗೆ ಅಡ್ಡಾಡುತ್ತಿದ್ದ ವಾನರ ಸೇನೆ, ಪಾರಿವಾಳಗಳನ್ನು,ಮೇಕೆ,ದನ ಇನ್ನಿತರ ಪ್ರಾಣಿಗಳನ್ನು ಒಡೆಯನಾದ ಪಶುಪತಿನಾಥನ ಸಾನ್ನಿಧ್ಯದಲ್ಲಿ ಕಂಡೆವು. ಬಹುಶಃ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿರಿಸಿಕೊಂಡರೆ ಯಾತ್ರಿಕರಿಗೆ ಭಕ್ತಿಭಾವ ಮೂಡಲು, ಆ ಪ್ರದೇಶದ ಸೌಂದರ್ಯವನ್ನು ಗ್ರಹಿಸಲು ಹೆಚ್ಚು ಉಪಯೋಗವಾಗುತ್ತಿತ್ತು.

DSC03028

ಕಟ್ಮಂಡು ಕಣಿವೆ ಬಹಳ ವಿಶಾಲವಾಗಿ ದೊಡ್ಡ ಬೋಗುಣಿಯಾಕಾರದಲ್ಲಿದೆ. ಇದರನ್ನು ಹಿಮಾಲಯದ ತಪ್ಪಲಿನ (೮೦೦೦ ಅಡಿಗಳಿಗಿಂತ ಎತ್ತರದ) ಬೆಟ್ಟಗಳು ಸುತ್ತುವರಿದು ಆ ಒಳಗಿನ ತಗ್ಗಿನ ಜಾಗದಲ್ಲಿ ಎಷ್ಟೋ ವರ್ಷಗಳಿಂದ ಜನವಸತಿ, ಊರು, ಹಳ್ಳಿಗಳು ಬೆಳೆದು ಬಂದಿವೆ. ಮೊದಲಿಂದ ಬಂದ ಹಳೆ ಕತೆ ಹೇಳುವಂತೆ ಈ ಕಣಿವೆ ಬಹಳ ಪೂರ್ವಕಾಲದಲ್ಲಿ ಪೂರ್ತಿಯಾಗಿ ನೀರಿಂದ ತುಂಬಿದ್ದು ಮನುಷ್ಯ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಬೌದ್ಧ ಸಂತ ಮಂಜುಶ್ರೀ ತನ್ನ ಖಡ್ಗದಿಂದ ಬೆಟ್ಟಗಳ ಸಾಲನ್ನು ಒಂದು ಪಕ್ಕದಲ್ಲಿ ಕತ್ತರಿಸಿ ಅದನ್ನು ಸರಿಸಿ ನೀರು ಹೊರಹೋಗುವಂತೆ ಮಾಡಿದನಂತೆ. ಪ್ರಾಯಶಃ ಹಿಮಾಲಯದ ಬೆಟ್ಟಗಳಲ್ಲಿ ಭೂಕಂಪ ನಡೆದು ಭೌಗೋಳಿಕವಾದ ಬದಲಾವಣೆ ನಡೆದಿರಬಹುದು. ಆ ಘಟನೆ ಆಗಿನ ಕಾಲದಲ್ಲಿ ಈ ರೀತಿಯಾಗಿ ಜನ ಸಾಮಾನ್ಯರಲ್ಲಿ ಕತೆಯಾಗಿ ಪ್ರಚಲಿತವಾಗಿರಬಹುದು. ಆ ಸರೋವರದ ಮಧ್ಯದಲ್ಲಿ ಕಮಲದ ಹೂವುಗಳು ಬೆಳೆಯುತ್ತಿದ್ದವು. ಹೂವು ಬೆಳೆಯುವ ಮಧ್ಯದ ಜಾಗದಲ್ಲಿ ಸ್ವಯಂಭು- ಸಣ್ಣದಾದ ಗುಡ್ಡವು ಉದ್ಭವವಾಯಿತು, ಅದರ ಮೇಲೆ ಮುಂದೆ ಹಿಂದೂಗಳಿಗೆ ಮತ್ತು ಬೌದ್ಧರಿಗೆ ಇಬ್ಬರಿಗೂ ಪಾವನವೆಂದು ಭಾವಿಸುವ ದೇವಾಲಯವೊಂದು ಬಂತು. ಅಲ್ಲಿಂದ ಮತ್ತೆ ನೀರಿಲ್ಲದ ಜಾಗದಲ್ಲಿ ಕ್ರಮೇಣ ಜನವಸತಿ, ರಾಜ್ಯ ಬೆಳೆದು ಬಂತು. ಇನ್ನೊಂದು ಕತೆಯ ಪ್ರಕಾರ ಶ್ರೀಕೃಷ್ಣ ತನ್ನ ಸುದರ್ಶನ ಚಕ್ರದಿಂದ ಬೆಟ್ಟವನ್ನು ಕತ್ತರಿಸಿ ನೀರು ಹರಿದು ಹೋಗಲು ದಾರಿ ಮಾಡಿದನು. ಆ ನಂತರ ಅಲ್ಲಿ ಗೋಪಾಲಕರು ತಮ್ಮ ಗೋಹಿಂಡುಗಳೊಂದಿಗೆ ಅಲ್ಲಿ ವಾಸವಾಗಿದ್ದರು. ಆ ಕಣಿವೆ ಪ್ರದೇಶ ಮೊದಲಿಗೆ ಜಲಾವೃತವಾಗಿದ್ದ ಪ್ರದೇಶವೆಂದು ಭೂಮಿಯ ಭೌಗೋಳಿಕ ಅಧ್ಯಯನ ಮಾಡಿದವರು ಅಭಿಪ್ರಾಯ ಪಟ್ಟಿದ್ದಾರೆ.

ನಾವು ಎರಡನೆ ದಿನ ಅಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ಭಕ್ತಪುರ ಎಂಬ ಊರಿಗೆ ಹೋದೆವು. ಹೋಗುವ ದಾರಿಯಲ್ಲಿ ಸಮೀಪದ ಸಣ್ಣ ಬೆಟ್ಟಗಳನ್ನು ಏರಿ ದೂರದ ಹಿಮಾಲಯ ಶ್ರೇಣಿಗಳನ್ನು ನೋಡುತ್ತಾ ಸಾಗಿದೆವು. ದಾರಿಯಲ್ಲಿ ಕಾಣ ಸಿಗುವ ಭತ್ತದ ಗದ್ದೆ, ರೈತರು, ಹಳ್ಳಿಯೊಳಗಿನ ಜೀವನ ಇವೆಲ್ಲಾ ನಿಜವಾದ ನೇಪಾಲ ಏನೆಂಬುವುದನ್ನು ತೋರಿಸಿದವು.

DSC03067             WP_20141108_016     WP_20141108_020

 

ಭಕ್ತಪುರ ಕಟ್ಮಂಡು ಕಣಿವೆಯೊಳಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿದೆ. ಈ ಊರು ಕಣಿವೆಯೊಳಗಿನ ಮೂರನೆ ದೊಡ್ಡ ಪಟ್ಟಣ. ಇದು ಕಟ್ಮಂಡು ಪಟ್ಟಣದಿಂದ ೮ಕಿ.ಮೀ ದೂರದಲ್ಲಿದೆ.ಇದು ೧೫ನೇ ಶತಮಾನದ ಕಾಲದಲ್ಲೇ ಮಲ್ಲರಾಜರು ಆಡಳಿತ ನಡೆಸುತ್ತಿದ್ದ ಮುಖ್ಯ ಪಟ್ಟಣ. ಇಲ್ಲಿನ ಜನಸಂಖ್ಯೆಯ ಬಹುಪಾಲು ಕ್ಷತ್ರಿಯರಾದ ನೇವಾರಿಗಳೇ ಇದ್ದಾರೆ. ಇದು ನೇಪಾಲದ ಲಲಿತ ಕಲೆಗಳ ಕೇಂದ್ರಬಿಂದುವಾಗಿದೆ. ಇಲ್ಲಿನ ವಾಸ್ತು ಶಿಲ್ಪ, ಮರದ ಕೆತ್ತನೆಯ ಕೆಲಸಗಳು, ಬಟ್ಟೆ-ನೆಯ್ಗೆಗಳು ತುಂಬಾ ಪ್ರಸಿದ್ಧ. ಎಷ್ಟೋ ವರ್ಷಗಳಿಂದ ಭಾರತ- ಟಿಬೆಟಿಗೆ ನಡುವಿನ ವಾಣಿಜ್ಯಸಂಪರ್ಕ ಈ ನಗರಿಯ ಮೂಲಕವೇ ನಡೆಯುತ್ತಿತ್ತು. ಕೋಟೆಯೊಳಗೆ ಅರಮನೆ, ದೇವಾಲಯಗಳು, ಹಲವಾರು ಹಳೇ ಕಾಲದ ಕಟ್ಟಡಗಳು ಮತ್ತು ದರ್ಬಾರು ನಡೆಯುತ್ತಿದ್ದ ಚೌಕಿ ಸುಂದರವಾಗಿದೆ. ಅಲ್ಲಿ ಒಂದು ಭಾಗದಲ್ಲಿ ಕೇವಲ ಕರಕುಶಲ ಸಾಮಾನುಗಳು, ಕಲಾಕಾರರ ಕೈ ಚಳಕವನ್ನು ಮೆರೆಯುವ ಚಿತ್ರಕಲೆಗಳು, ಅಲ್ಲಿನ ಪ್ರಸಿದ್ಧ ವಸ್ತ್ರಗಳು ಮಾರಾಟಕ್ಕಿಟ್ಟದ್ದನ್ನು ಕಂಡೆವು. ನಾವು ಘೂರ್ಕಾ ಮಂದಿ ಬಳಸುವ ಚಾಕು, ಚಮರೀ ಮೃಗದ ಎಲುಬಿನಿಂದ ಮಾಡಿದ ಬುದ್ಧನ ಮುಖ, ಹಿಮಾಲಯದ ದೃಶ್ಯವನ್ನು ಸೆರೆಹಿಡಿದ ಕಲಾವಿದನೊಬ್ಬನ ಪೈಂಟಿಂಗ್ ಎಂದು ಕೆಲವೊಂದು ವಸ್ತುಗಳನ್ನು ಕೊಂಡೆವು. ನಾವು ಹೋದಲ್ಲೆಲ್ಲಾ ಮುಂಬರುವ ಸಾರ್ಕ್ ಸಮ್ಮೇಳನಕ್ಕೆಂದು ರಸ್ತೆ, ಕಟ್ಟಡಗಳು, ಐತಿಹಾಸಿಕ ಸ್ಥಳಗಳು ರಿಪೇರಿ, ಬಣ್ಣಗಳಿಂದ ನವೀಕೃತಗೊಳ್ಳುತ್ತಿದ್ದವು. ನಾವು ನೋಡಿದ ಪಟ್ಟಣಗಳೆಲ್ಲಾ ಜನದಟ್ಟಣಿಯ ಪ್ರದೇಶಗಳಾಗಿದ್ದವು. ಭಕ್ತಪುರವನ್ನು ಮಧ್ಯಾಹ್ನದೊಳಗೆ ನೋಡಿ ಮುಗಿಸಿದೆವು.

DSC03111       DSC03139

 

ಭಕ್ತಪುರವನ್ನು ನೋಡಿ ನಾವು ಪುನಃ ಕಟ್ಮಂಡು ಪಟ್ಟಣವನ್ನು ಪ್ರವೇಶಿಸಿದೆವು. ಅಲ್ಲಿನ ಮುಖ್ಯ ಜಾಗವಾದ ಊರಿನ ಮಧ್ಯದಲ್ಲಿರುವ ಕಟ್ಮಂಡು ದರ್ಬಾರ್ ಚೌಕಿ, ಅರಮನೆ, ಕುಮಾರಿ ಅರಮನೆಗಳನ್ನು ನೋಡಲು ಹೋದೆವು. ಇದು ತೀರ ಇತ್ತೀಚೆಗಿನ ವರೆಗೆ ಅಲ್ಲಿನ ರಾಜರ ವಾಸಸ್ಥಾನ, ಆಡಳಿತ ಕಛೇರಿಯಿದ್ದ ಜಾಗವಾಗಿತ್ತು. ಒಂದೇ ಮರದಿಂದ ಕಟ್ಟಿದ “ಕಾಷ್ಠಮಂಡಪ್” (ಕಾಷ್ಠ-ಮರ) ಮಂಟಪವು ಆ ಕಾಲದಲ್ಲಿ ಹೊಸದಾಗಿ ಆಗಮಿಸಿದ ಯಾತ್ರಿಕರಿಗೆ, ಜನರಿಗೆ ತಂಗುವ, ವಿಶ್ರಮಿಸುವ ಸ್ಥಳವಾಗಿತ್ತು.

DSC03278

ಇದು ಸುಮಾರು ೧೬ನೇ ಶತಮಾನದ ಕಾಲದಲ್ಲಿ ರಾಜ ಲಕ್ಷೀನರಸಿಂಹ ಮಲ್ಲನಿಂದ ಕಟ್ಟಿಸಲಾಯಿತು ಎಂದು ಹೇಳಲಾಗುತ್ತದೆ. ಇದು ಪಗೋಡಾ ಮಾದರಿಯ ಮೂರು ಅಂತಸ್ತಿನ, ಮರದಿಂದ ಮಾಡಿದ ದೇವಾಲಯ, ಪ್ರವಾಸಿಗಳ ತಂಗುದಾಣ. ಕ್ರಮೇಣ ಊರಿನ ಪ್ರಮುಖ ಜಾಗವಾಗಿ ಊರಿಗೂ ತನ್ನ ಹೆಸರನ್ನೇ ಕೊಟ್ಟಿತು.

DSC03198        DSC03267      DSC03273

 

ಅಲ್ಲಿನ ಅರಮನೆ, ದೇವಾಲಯಗಳು ತುಂಬಾ ಕೆತ್ತನೆ ಕೆಲಸಗಳಿಂದ ತುಂಬಿ ಹೋಗಿವೆ. ನಮ್ಮ ಹಿಂದೂ ಪೌರಾಣಿಕ ಕಥೆಗಳ ಸನ್ನಿವೇಶಗಳನ್ನು ದೇವಾಲಯದ ಸುತ್ತಲಿನ ಗೋಡೆಗಳ ಮೈಮೇಲೆ ಕೆತ್ತಲಾಗಿದೆ. ನೇಪಾಲದ ಈ ಎಲ್ಲ ಕೋಟೆ, ಮಂದಿರ, ಅರಮನೆಗಳು ಪ್ರಪಂಚದ ಪ್ರೇಕ್ಷಣೀಯ ಸ್ಥಳಗಳಲ್ಲೊಂದೆಂದು ಪರಿಗಣಿಸಲ್ಫಟ್ಟಿದೆ. ಸಾಮಾನ್ಯವಾಗಿ ಕಾಣಲು ಸಿಗದ ವಿಶೇಷವಾದ ಕುಮಾರಿ ದೇವಿಯ ಮಂದಿರ ನಮ್ಮ ಆಸಕ್ತಿಯನ್ನು ಕೆರಳಿಸಿತ್ತು. ಅದು ಈ ದರ್ಬಾರ್ ಚೌಕಿ, ಅರಮನೆ, ಕಾಷ್ಟಮಂದಿರಗಳ ಸಮೀಪದಲ್ಲೇ ಇದೆ. ಈ ಹಳೇ ಕಾಲದ ಅರಮನೆಯಲ್ಲಿ ನೇಪಾಲೀ ಜನರ ಗೌರವ, ಆದರಕ್ಕೆ ಒಳಗಾಗುವ ಕುಮಾರಿದೇವಿ ವಾಸವಿದ್ದಾಳೆ. ಈ ಪ್ರಾಚೀನ ಪದ್ಧತಿ ಕೇವಲ ನೇಪಾಲದಲ್ಲಿ ಮಾತ್ರ ಬಳಕೆಯಲ್ಲಿದೆ. ಅಲ್ಲಿನ ಶಕ್ಯ (ಕ್ಷತ್ರಿಯ ಜನರ) ಪಂಗಡಕ್ಕೆ ಸೇರಿದ ಮೂರು ವರ್ಷ ಪ್ರಾಯದ ಹುಡುಗಿಯನ್ನು ದೇವಿಯ ಸ್ಥಾನಕ್ಕೆ ಅರಿಸಲಾಗುತ್ತದೆ. ಆ ಹೆಣ್ಣು ಮಗುವಿನಲ್ಲಿ ಅವರು ಬಹಳಷ್ಟು ಲಕ್ಷಣಗಳನ್ನು,ಗುಣಗಳನ್ನು ಬಯಸುತ್ತಾರೆ. ಮಗು ಒಳ್ಳೆ ಕುಲದ, ನೋಡಲು ಲಕ್ಷಣವಂತಳು ಮತ್ತು ಧೈರ್ಯವಂತಳು ಇರಬೇಕು. ಅವಳ ಆ ಅಲ್ಪಕಾಲದ ಬದುಕಿನಲ್ಲಿ ಒಮ್ಮೆಯೂ ರಕ್ತವನ್ನು ಕಳೆದುಕೊಂಡಿರಬಾರದು, ಅರ್ಥಾತ್ ಅವಳ ದೇಹಕ್ಕೆ ಎಂದೂ ಗಾಯವಾಗಿರಬಾರದು, ರಜಸ್ವಾಲೆಯಾಗದವಳಿರಬೇಕು. ಅಂತಹ ಹೆಣ್ಣುಮಗುವನ್ನು ಆರಿಸಿ, ನಂತರ ಧಾರ್ಮಿಕ ಪದ್ಧತಿಗನುಸಾರವಾಗಿ ಸ್ವೀಕರಿಸುತ್ತಾರೆ. ಬಳಿಕ ಅವಳಿಗೆ ಆ ಅರಮನೆಯೊಳಗೆ ಶಾಸ್ತ್ರ-ವಿಧಿ, ವಿದ್ಯಾಭ್ಯಾಸ ಇವುಗಳನ್ನು ಮಾಡಿಸಲಾಗುತ್ತದೆ. ಅಲ್ಲಿ ಅವಳ ಸಮ ವಯಸ್ಸಿನ ಬೇರೆ ಹುಡುಗಿಯರ ಒಡನಾಟ ದೊರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಅವಳು ಎಂದೂ ಹೊರ ಜಗತ್ತಿನೊಂದಿಗೆ ಸಂಪರ್ಕವಿಟ್ಟುಕೊಳ್ಳುವಂತಿಲ್ಲ. ಈ ಬಾಲಿಕೆಯನ್ನು ದೇವಿ ಮಾ, ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಈ ದೇವಿ ಸ್ವರೂಪಿ ಕನ್ಯೆ ಯಾವತ್ತು ಮೈ ನೆರೆಯುತ್ತಾಳೋ ಆಗ ಅವಳನ್ನು ಆ ಪದವಿಯಿಂದ ನಿವೃತ್ತಳನ್ನಾಗಿ ಮಾಡಲಾಗುತ್ತದೆ. ಅವಳ ಮುಂದಿನ ಜೀವನ ನಿರ್ವಹಣೆಗೆ ಬೇಕಿರುವ ಸವಲತ್ತನ್ನು ವೇತನ ರೂಪದಲ್ಲಿ ಕೊಡುತ್ತಾರೆ. ಬಹಳಷ್ಟು ನಿವೃತ್ತ ದೇವಿಯಂದಿರು ತಮ್ಮ ಪೂರ್ವ ಕುಟುಂಬಕ್ಕೆ ಮರಳಿ ವಿದ್ಯಾಭ್ಯಾಸ ಹೊಂದಿ ಸರಿಯಾದ ಜೀವನವನ್ನು ನಡೆಸುತ್ತಾರೆ. ಅವರು ಸಾಮಾನ್ಯ ಜೀವನದಿಂದ ವಂಚಿತರಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಎಷ್ಟೊ ಶಕ್ಯ ಕುಟುಂಬಗಳು ತಮ್ಮ ಮಗಳನ್ನು ಆ ಪಟ್ಟಕ್ಕೆ ಕಳುಹಲು ಹಾತೊರೆಯುತ್ತಾರೆ. ಮೊದಲಂತಸ್ತಿನ ತೆರೆದ ಜಗಲಿಯಿಂದ ಕುಮಾರಿ ದೇವಿಯ ದರ್ಶನವಾಯಿತು.

WP_20141108_052      DSC03318      DSC03368

ನಂತರ ನಾವು ನಮ್ಮ ಹೋಟೆಲಿಗೆ ಸಮೀಪದಲ್ಲಿರುವ ಸ್ವಯಂಭುನಾಥ ಮಂದಿರಕ್ಕೆ ಹೋದೆವು. ಇಲ್ಲಿ ಎತ್ತರದ ಗುಡ್ಡದ ಮೇಲೆ ಬುದ್ಧಮಂದಿರವಿದೆ. ಈ ಎತ್ತರದ ಗುಡ್ಡವು ಈ ಕಣಿವೆಯ ನೀರಿನ ಮಧ್ಯದಿಂದ ಉದ್ಭವವಾಯಿತೆಂದು ಪ್ರತೀತಿ. ಇಲ್ಲಿ ಹಿಂದು ಮತ್ತು ಬೌದ್ಧ ದೇವಾಲಯವಿತ್ತು ಮೊದಲಿಗೆ. ಇಲ್ಲಿ ವಾನರ ಸೇನೆ ಮನುಷ್ಯರನ್ನು ಮೀರಿಸುವ ಸಂಖ್ಯೆಯಲ್ಲಿದೆ, ಇದನ್ನು ವಿದೇಶೀಯರು “ಮಂಕಿ ಟೆಂಪಲ್” ಎಂದೇ ಹೇಳುತ್ತಾರೆ. ಇಲ್ಲಿಂದ ಕಟ್ಮಂಡು ನಗರವಿಡೀ ಕಾಣುತ್ತದೆ. ನಂತರ ಅಲ್ಲಿಂದ ನಾವು ನಮ್ಮ ಹೋಟೇಲಿಗೆ ವಾಪಾಸಾದೆವು.

ನೇಪಾಲದ ಸಮಾಜದಲ್ಲಿ ಹೆಂಗಸರು ಮನೆಯ ಹೊರಗಿನ ಕೆಲಸಗಳಲ್ಲಿ ಭಾಗಿಯಾಗುವುದು ಸಾಮಾನ್ಯ, ಹೆಚ್ಚಿನವರೂ ಶ್ರಮ ಜೀವಿಗಳು. ಅವರು ಉದ್ಯೋಗಾರ್ಥಿಗಳಾಗಿ ದೇಶ-ವಿದೇಶಕ್ಕೆ ಹೋಗುವುದು ಸಾಮಾನ್ಯ. ಸರಿಯಾಗಿ ನೋಡಿದರೆ ನಮಗೆ ವಾರವಿಡೀ ನೇಪಾಲದೊಳಗೆ ನೋಡುವಷ್ಟು ಪ್ರದೇಶಗಳಿವೆ. ಇನ್ನೊಮ್ಮೆ ಹಿಮಾಲಯದ ಬೆಟ್ಟಗಳನ್ನು, ಬುದ್ಧನ ಊರಾದ ಕಪಿಲವಸ್ತು, ಜನಕರಾಜನ ಊರಾದ ಜನಕಪುರಿಯನ್ನು ನೋಡುವುದೆಂದು ನಿಶ್ಚಯಿಸಿ ಮರುದಿನ ಅಲ್ಲಿಂದ ಹೊರಟೆವು.

ನಮ್ಮ ಭುತಾನ ಪ್ರವಾಸದ ದಿನಗಳು

ನಮ್ಮ ಭುತಾನ ವಾಸದ ಮೂರನೇ ದಿನ ನಾವು ಬೆಳಗ್ಗೆ (ನವೆಂಬರ್ ೩-೨೦೧೪)ಬೇಗನೇ ಉಪಾಹಾರ ಮುಗಿಸಿ ನಾವು ಉಳಿದುಕೊಂಡ ಹೋಟೇಲು ತಾಜ್ ತಾಶಿ ಗೆ ವಿದಾಯ ಹೇಳಿದೆವು. ತಾಶಿ ಎಂದರೆ ಭುತಾನೀ ಭಾಷೆಯಲ್ಲಿ ಅದೃಷ್ಟ,ಶುಭ/ಒಳ್ಳೆಯ ಎಂಬ ಅರ್ಥವಿದೆ. ಅಲ್ಲಿ ಈ ಹೆಸರು ತುಂಬಾ ಕೇಳಿ ಬರುತ್ತದೆ. ನಾವು ಅಂದು ಹಲವಾರು ಗುಡ್ಡ ಬೆಟ್ಟಗಳನ್ನು ಹತ್ತಿ, ಇಳಿದು ದೂರದ ಊರಾದ ಪುನಾಕಾಕ್ಕೆ ಹೋಗುವವರು. ನಾವು ಮೊದಲ ಎರಡು ದಿನ ಪ್ರಯಾಣಿಸಿದ ರಸ್ತೆಗಳು ಅಗಲ ಕಿರಿದಾಗಿದ್ದರೂ ಚೆನ್ನಾಗಿದ್ದವು. ನಮ್ಮ ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸಿದ ಅಭ್ಯಾಸದಿಂದ ರಸ್ತೆಯಲ್ಲಿ ಹೊಂಡಗಳನ್ನು ನಿರೀಕ್ಷಿಸಿ ಕಾಣದಾದಾಗ ನಿರಾಶರಾದೆವು. ಆದರೆ ಟಿಂಫೂ ದಾಟಿ ಹೊರ ಹೋಗುತ್ತಿದ್ದಂತೆ ಸರಕಾರವು ಎಲ್ಲ ಮುಖ್ಯ ರಸ್ತೆಗಳನ್ನು ಅಗಲ ಮಾಡುವ ಕೆಲಸದಲ್ಲಿ ತೊಡಗಿರುವುದರಿಂದಾಗಿ ನಮ್ಮ ದಾರಿ ಒಮ್ಮೆಗೆ ನಿಂತು ಹೋಯಿತು, ನಾವು ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಮುಂದುವರಿಯಲು ಬೇರೆ ವಾಹನಗಳೊಂದಿಗೆ ನಮ್ಮ ಸರದಿಗೆ ಕಾಯಬೇಕಿತ್ತು. ಎಲ್ಲವೂ ಹೊಸತಾದುದರಿಂದ ಪ್ರತಿ ಸನ್ನಿವೇಶ ನಮಗೆ ಹೊಸದನ್ನು ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತಿತ್ತು. ಅಲ್ಲಿ ಯಾವುದೇ ವಾಹನಗಳು ಹೊರ ದೇಶಗಳಿಂದ ಬರಬೇಕಷ್ಟೆ. ಭಾರತೀಯ ಕಾರು,ಬಸ್ಸು,ಲಾರಿ, ಸ್ಕೂಟರು, ಬೈಕುಗಳಿಗೆ ಬರಗಾಲವಿಲ್ಲ. ಹಾಗೆಂದು ಇತರ ವಿದೇಶೀ ವಿಲಾಸೀ ವಾಹನಗಳು ಕೂಡಾ ಕಾಣುತ್ತವೆ.

DSC01920 DSC01923

ನಮ್ಮ ಭುತಾನಿನ ಪ್ರವಾಸಕ್ಕೆ ಎಲ್ಲ ವ್ಯವಸ್ಥೆ ಮಾಡಿದ ನೆಪ್ಟೂನ್ ಟ್ರಾವೆಲ್ಸ್ ನ ಮಾಲೀಕರಾದ ವಿಕ್ರಂ ಮತ್ತು ತೃಷ್ಣಾ ದಂಪತಿಗಳು ಒಳ್ಳೆ ಮಾರ್ಗದರ್ಶಕನನ್ನು, ವಾಹನವನ್ನು ಒದಗಿಸಿದ್ದರು. ನಮ್ಮ ವಾಹನ ಚಾಲಕ ನೇಪಾಳೀ ಮೂಲದವರು, ಬಿಂಬಾಧರ್/ಬಿಬಿ ಎಂಬ ಕಿರುನಾಮದಿಂದ ಪರಿಚಯಿಸಿಕೊಂಡರು. ಆದರೆ ಅವರು ಅಲ್ಲೇ ನೆಲೆಸಿದವರು ಮತ್ತು ಅಲ್ಲಿನ ಪ್ರಜೆ. ಗೈಡ್ ಶಿರಿಂಗ್ ದೋರ್ಜಿಯವರು ಅಲ್ಲಿನ ಮಣ್ಣಿನ ಮಗ. ಹೆತ್ತವರು ರೈತರು, ಹಳ್ಳಿಯಲ್ಲಿ ವ್ಯವಸಾಯ ಮಾಡಿ ಬದುಕುತ್ತಿದ್ದಾರೆ. ದೋರ್ಜಿ ವಿದ್ಯಾಭ್ಯಾಸದಲ್ಲಿ ಚುರುಕಿದ್ದ ಕಾರಣ ಸರಕಾರದ ವಿದ್ಯಾರ್ಥಿ ವೇತನ ದೊರಕಿ ಭಾರತದ ಶಿಲ್ಲಂಗ್ ನಲ್ಲಿ ಬಿ.ಎ. ಹಾಗೂ ಎಮ್.ಎ.ಪದವಿ ಪಡೆದಿದ್ದಾರೆ. ನಂತರ ಭುತಾನಿನ ಪ್ರವಾಸೋದ್ಯಮಕ್ಕೆ ಬೇಕಾದ ತರಬೇತಿ ಹೊಂದಿದ್ದಾರೆ. ಇವರಿಗೆ ಇಂಗ್ಲಿಷ್ ಭಾಷೆ ತಿಳಿದಿದೆಯಾದುದರಿಂದ ನಮ್ಮ ನಡುವಣ ಸಂಭಾಷಣೆಗೆ ಆತಂಕವಿಲ್ಲ. ನಮ್ಮ ಪ್ರಯಾಣ ಸಮಯದಲ್ಲಿ ಅವರೊಡನೆ ಅಲ್ಲಿನ ಜನರ, ದೇಶದ ವಿಚಾರಗಳನ್ನು ಮಾತನಾಡಿ ಅವರ ಧರ್ಮ, ಸಾಮಾಜಿಕ ಜೀವನ, ಆರ್ಥಿಕ ಸ್ಥಿತಿ ಇತ್ಯಾದಿಗಳನ್ನು ತಿಳಿದೆವು.

DSC01937 WP_20141103_030

ನಾವು ಪುನಾಕಾಕ್ಕೆ ಹೋಗಲು ದೊಚುಲಾ ಪಾಸ್ ಅನ್ನು ದಾಟಿಕೊಂಡು ಹೋಗಬೇಕು. ದೊಚುಲಾ ಟಿಂಫೂನಿಂದ ಸುಮಾರು ೩೦ಕಿ.ಮೀ. ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ೯೦೦೦ಅಡಿಗಳಿಗಿಂತಲೂ ಮೇಲಿದೆ.ದೊಚುಲಾ ಇರುವ ಈ ಪರ್ವತದ ತುದಿಯಲ್ಲಿ ಭುತಾನದ ರಾಣಿ ೨೦೦೩ ರ ಭಾರತದ ಗಡಿಯಲ್ಲಿ ನಡೆದ ಯುದ್ಧದಲ್ಲಿ ಪ್ರಾಣ ತೆತ್ತ ಭುತಾನದ ಸೈನಿಕರ ಗೌರವಾರ್ಥ ಕಟ್ಟಿದ ಬೌದ್ಧ ಸ್ತೂಪಗಳನ್ನು(ಚೋರ್ಟಾನ್) ಕಾಣಬಹುದು. ಆ ಪರ್ವತದ ಎತ್ತರದಲ್ಲಿ ಸ್ತೂಪಗಳು (೧೦೮ )ತುಂಬಾ ಸುಂದರವಾಗಿ ಕಾಣಿಸುತ್ತದೆ. ಮುಖ್ಯವಾಗಿ ಈ ಪರ್ವತದ ಮೇಲಿಂದ ನಾಲ್ಕೂ ದಿಕ್ಕುಗಳೂ ತೆರೆದಿಟ್ಟಂತೆ ಕಾಣುತ್ತವೆ. ನೀಲಾಕಾಶದ ಹಿನ್ನೆಲೆಯಲ್ಲಿ ಕಾಣುವಂತೆ ಕಟ್ಟಿರುವ ಆ ಸಣ್ಣಬೆಟ್ಟದ ಮೇಲಿರುವ ಸ್ತೂಪಗಳು ಮತ್ತು ಅದರ ಎದುರಾಗಿ ಇನ್ನೊಂದು ಸಣ್ಣ ಗುಡ್ಡದ ಮೇಲಿರುವ ದೇವಾಲಯವು ಇಡೀ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ. ಲಾಮ ಡ್ರುಕ್ಪಾಕ್ಯುನ್ಲೆ ಎಂಬ ಬೌದ್ಧ ಮುನಿ ಈ ಪ್ರದೇಶದಲ್ಲಿ ಮಾರು ವೇಷದಲ್ಲಿದ್ದ-ಶ್ವಾನ ರೂಪದಲ್ಲಿದ್ದ ಮಾಂತ್ರಿಕ ರಾಕ್ಷಸಿಯನ್ನು ಗುರುತು ಹಿಡಿದು ತನ್ನ ಶಕ್ತಿಯಿಂದ ಅವಳನ್ನು ವಶಪಡಿಸಿಕೊಂಡು ವಧಿಸುತ್ತಾನೆ. ಈ ಎಲ್ಲಾ ಕಾರಣಗಳಿಂದ ಈ ಪ್ರಾಕೃತಿಕ ಸ್ಥಳ ಮಹತ್ವದ್ದಾಗಿದೆ. ಈ ಪ್ರದೇಶ ತುಂಬಾ ತಣ್ಣಗಿತ್ತು. ನಂತರ ನಾವು ಇಲ್ಲಿಂದ ಮುಂದುವರಿದು ಮಧ್ಯಾಹ್ನದ ಊಟದ ಹೊತ್ತಿಗಾಗುವಾಗ ಸಣ್ಣ ಹಳ್ಳಿಯೊಂದರನ್ನು ಸಮೀಪಿಸಿದೆವು. ಪುನಾಕಾ ಕಣಿವೆಗೆ ಹೋಗುವ ದಾರಿಯಲ್ಲಿರುವ ಈ ಹಳ್ಳಿಯಲ್ಲಿ ಯಾತ್ರಿಕರಿಗೆ ಉಪಾಹಾರ, ಊಟಗಳನ್ನೊದಗಿಸಲು ಹೋಟೆಲುಗಳಿವೆ. ಇವುಗಳು ಸರಳವಾಗಿ, ಸ್ವಚ್ಛವಾಗಿದ್ದು ಸ್ಥಳೀಯ ಆಹಾರವನ್ನು ಒದಗಿಸುತ್ತವೆ. ನಾವು ಉಂಡ ಹೋಟೇಲಿನ ಕಿಟಿಕಿಯಿಂದ ದೂರದ ಹೊಲ-ಗದ್ದೆ, ದುಡಿಯುತ್ತಿರುವ ರೈತ ಜನರು, ಹಳ್ಳಿ, ದೇವಸ್ಥಾನ ಎಲ್ಲಾ ಕಾಣುತ್ತಿದ್ದವು.

WP_20141103_049 WP_20141103_057

ಈ ಹಳ್ಳಿಯಲ್ಲಿ ಭುತಾನಿನ ಜನ ಮುಗಿಬಿದ್ದು ಬರುವ ವಿಶೇಷಪಟ್ಟ ದೇವಸ್ಥಾನ ಚಿಮೆ ಲಖಾಂಗ್ ಇದೆ. ಇದಕ್ಕೊಂದು ಸ್ವಾರಸ್ಯಕರ ಕಥೆಯಿದೆ. ಇಲ್ಲಿ (೧೪೫೫-೧೫೭೦ ಕಾಲದಲ್ಲಿ ಬದುಕಿದ್ದ) ಲಾಮ ಡ್ರುಕ್ಪಾಕ್ಯುನ್ಲೆಯ ಶಿಶ್ನವನ್ನು ಪೂಜಿಸುತ್ತಾರೆ. ಈ ಲಾಮ/ಮುನಿ ಸ್ವೇಚ್ಚಾ ಪ್ರವೃತ್ತಿಯವನಾಗಿದ್ದು ಅವನ ಸಾಮೀಪ್ಯಕ್ಕೆ ಬಂದ ಬಹಳಷ್ಟು ಹೆಂಗಸರನ್ನು ಭೋಗಿಸಿದ್ದನಂತೆ. ಅವನು ತೀರ ಅಸಾಂಪ್ರದಾಯಿಕವಾಗಿ ಬೋಧನೆ ಮಾಡಿದ್ದನಂತೆ. ಈ ಬೌದ್ಧ ಮುನಿ ಈ ಪ್ರದೇಶದಲ್ಲಿ ಮಾರು ವೇಷದಲ್ಲಿದ್ದ-ಶ್ವಾನ ರೂಪದ ಮಾಂತ್ರಿಕ ರಾಕ್ಷಸಿಯನ್ನು ಗುರುತು ಹಿಡಿದು ತನ್ನ ಶಕ್ತಿಯಿಂದ ಅವಳನ್ನು ವಶಪಡಿಸಿಕೊಂಡು ಬಳಿಕ ವಧಿಸುತ್ತಾನೆ. ಆ ನಂತರ ಅವಳನ್ನು ಈ ಹಳ್ಳಿಯ ಗುಡ್ಡವೊಂದರಲ್ಲಿ ಮಣ್ಣಿನಡಿಯಲ್ಲಿ ಹೂತುಬಿಟ್ಟು ಅಡಗಿಸಿಬಿಡುತ್ತಾನೆ. ಅದರ ಮೇಲೆ ಸ್ತೂಪವೊಂದನ್ನು ಕಟ್ಟಿ “ಚಿ ಮೆಡ್” ಎಂದನು, ಎಂದರೆ “ನಾಯಿ ಇಲ್ಲ” ಎಂದರ್ಥ. ನಂತರದ ದಿನಗಳಲ್ಲಿ ಅದರ ಮೇಲೆ ದೇವಸ್ಥಾನವೊಂದನ್ನು ಕಟ್ಟಲಾಯಿತು, ಇದನ್ನು ಚಿಮೆ ಲಖಾಂಗ್ ಎಂದು ಕರೆದರು. ಚಿಮೆ ಲಖಾಂಗ್ ಎಂದರೆ “ನಾಯಿ ಇಲ್ಲ”ದ ದೇವಸ್ಥಾನ, ಇದನ್ನು ಫಲನೀಡುವ ದೇವಸ್ಥಾನವೆಂದೂ ಹೇಳುತ್ತಾರೆ. ಈ ಮುನಿ ದೈವೀ ಸ್ವರೂಪಿ ಉನ್ಮತ್ತ ಮನುಷ್ಯನೆಂದೇ ಪ್ರತೀತಿ. ಈ ಮುನಿ ಇವನ ಮಹಾತ್ಮೆಯಿಂದ ಈ ದೇವಸ್ಥಾನದಲ್ಲಿ ಮಕ್ಕಳಾಗಬೇಕೆಂದು ಪ್ರಾರ್ಥಿಸಿದವರಿಗೆ ಬೇಗನೇ ಮಕ್ಕಳಾಗುತ್ತದೆ ಎಂದು ಜನ ನಂಬುತ್ತಾರೆ. ಈ ಊರು ಬೆಟ್ಟಗಳ ಮಧ್ಯದ ಕಣಿವೆ ಪ್ರದೇಶ, ಇಲ್ಲಿ ಹರಿವ ನೀರಿರುವ ಕಾರಣ ಜನ ವ್ಯವಸಾಯ ಮಾಡುತ್ತಾರೆ, ಅಕ್ಕಿ, ಆಲೂಗಡ್ಡೆ, ತರಕಾರಿ, ಹಸಿ ಮೆಣಸು ಇತ್ಯಾದಿಗಳನ್ನು ಬೆಳೆಸುತ್ತಾರೆ. ನಾವು ಆ ಹೋಟೇಲಿನಲ್ಲಿ ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಸುಮಾರು ೨ಕಿ.ಮೀ ದೂರದ ಈ ದೇವಸ್ಥಾನಕ್ಕೆ ಹೋದೆವು. ಆಗ ಅಲ್ಲಿನ ಬಿಸಿಲಲಿನ ಝ್ಹಳ ಜೋರಾಗೇ ಇತ್ತು. ಈ ದೈವೀ ಸ್ವರೂಪಿ ಉನ್ಮತ್ತ ಮನುಷ್ಯನನ್ನು ಸ್ಮರಿಸುತ್ತಾ ನಾವು ಅಲ್ಲಿಂದ ಹೊರಟು ಸುಮಾರು ಸಂಜೆ ೪ಕ್ಕೆ ಪುನಾಕಾ ಕಣಿವೆಗೆ ತಲುಪಿದೆವು. ನಾವು ಉಳಿದುಕೊಂಡ ಹೋಟೇಲು ಧೆನ್ಸಾ ಸಣ್ಣದೊಂದು ಬೆಟ್ಟದ ಇಳಿಜಾರಿನಲ್ಲಿತ್ತು. ಇಲ್ಲೇ ಪಕ್ಕದ ಗುಡ್ಡದ ಮೇಲೆ ಬೌದ್ಧ ಸನ್ಯಾಸಿನಿಗಳ ಆಶ್ರಮವೊಂದಿತ್ತು. ಅಲ್ಲಿಗೆ ಒಳಗೆ ಹೋಗಲು ಅನುಮತಿ ಪಡೆದೇ ಹೋಗಬೇಕಷ್ಟೆ. ನಾವಿದ್ದ ಗುಡ್ಡದ ತುಸು ದೂರದಲ್ಲಿ ಇಡೀ ಪುನಾಕಾ ಕಣಿವೆ ಮತ್ತು ಪಟ್ಟಣ ಕಾಣುತ್ತದೆ. .
ರಾತ್ರಿ ನಾವು ಅಲ್ಲಿನ ಗುಡ್ಡದ ಪೈನ್ ಮರಗಳ ಎಲೆಗಳ ಸದ್ದಿನ ಜೋಗುಳಕ್ಕೆ ಆ ಜನರ ಜೀವನವನ್ನು ಮನದೊಳಗೇ ಚಿತ್ರಿಸುತ್ತ ನಿದ್ರೆ ಹೋದೆವು. ಅಲ್ಲಿನ ಎಲ್ಲಾ ಪಟ್ಟಣಗಳಲ್ಲಿ ಜನ ಕೃಷಿ, ಪ್ರವಾಸೋದ್ಯಮಗಳನ್ನಾಧರಿಸಿಯೇ ಬದುಕುತ್ತಾರೆ. ಹಾಗಾಗಿ ಎಲ್ಲಉದ್ಯೋಗಸ್ಥ ಮಂದಿಗಳಿಗೂ ಇಂಗ್ಲಿಷ್, ಮತ್ತು ಕೆಲವರಿಗೆ ಹಿಂದಿ ಭಾಷೆ ಬರುತ್ತದೆ. ಇನ್ನೂ ಕೆಲವರು ಪ್ರವಾಸೋದ್ಯಮಕ್ಕಾಗೇ ಫ್ರೆಂಚ್,ಡಚ್,ಜರ್ಮನ್,ಜಪಾನೀ ಭಾಷೆಗಳನ್ನು ಕಲಿತಿರುತ್ತಾರೆ. ನಾವು ಹೋದಲ್ಲೆಲ್ಲಾ ವಿದೇಶೀ ಪ್ರವಾಸಿಗಳು ಕಂಡುಬಂದರು.

WP_20141104_026 WP_20141104_034 WP_20141104_046 WP_20141104_071

ನಾವು ಮರುದಿನ ಬೆಳಗ್ಗೆ ಬಿಸಿಲೇರುವುದಕ್ಕೆ ಮೊದಲೇ ಗುಡ್ಡದ ಮೇಲಿರುವ “ಖಮ್ಸುನ್ ಯುಲ್ಲೆ ಚೊರ್ಟಾನ್” ಹತ್ತಲೆಂದು ಹೊರಟೆವು. ಇದಕ್ಕೆ ಸುಮಾರು ೩ಕಿ.ಮಿ. ನಡೆಯುವ ದಾರಿ. ಗದ್ದೆಗಳ ಕಟ್ಟೆ ಪುಣಿಗಳ ಮೇಲೆ ನಡೆಯುತ್ತಾ, ಹಚ್ಚ-ಹಸಿರಿನ ಭತ್ತದ ಪೈರಿನ ಮದ್ಯದಿಂದಾಗಿ ಗುಡ್ಡೆಯ ಪದತಲಕ್ಕೆ ಸೇರಿದೆವು. ಅಲ್ಲಿಂದ ಹತ್ತುವ ದಾರಿ. ನೋಟ ಹಾಯಿಸಿದೆತ್ತಲೂ ಹಸಿರು ಪೈರು, ಮರಗಳು, ಹರಿಯುವ ನೀರು, ದೂರದಾಗಸದಲ್ಲಿ ಅಲೆಗಳಂತೆ ಕಾಣುವ ಹಿಮಾಲಯದ ಮರಿ ಪರ್ವತಗಳ ಸರಣಿ, ಕಣ್ಣಿಗೆ ಹಬ್ಬವೇ ಸರಿ. ನಾವು ಮೇಲೆ ತಲುಪಿದ್ದೇ ಅರಿವಿಗೆ ಬರಲಿಲ್ಲ. ಇಲ್ಲಿ ರಾಜ ಮಾತೆ ತನ್ನ ಜನರಿಗೆ, ಊರಿಗೆ ಮತ್ತು ವಂಶಸ್ಥರ ಅಭ್ಯುದಯಕ್ಕೆಂದು ಬೌದ್ಧ ಸ್ತೂಪವೊಂದನ್ನು ಕಟ್ಟಿಸಿದ್ದಾಳೆ, ಇದು ಬಹಳ ಸುಂದರವಾಗಿದೆ. ಅಲ್ಲಿನ ದೇವಾಲಯವನ್ನು ನೋಡಿ, ಸುತ್ತಲಿನ ಪ್ರಕೃತಿಯನ್ನು ಮನಸ್ಸಿನೊಳಗೆ ತುಂಬಿಕೊಂಡು ಬೆಟ್ಟವನ್ನಿಳಿದೆವು.

ಮುಂದೆ ನಾವು ಮಧ್ಯಾಹ್ನದ ಊಟ ಮುಗಿಸಿ ಕೋಟೆಯನ್ನು ನೋಡಲು ಹೋದೆವು. ಚಾರಿತ್ರಿಕವಾಗಿ ಪುನಾಕಾ ಪಟ್ಟಣಕ್ಕೆ, ಅಲ್ಲಿರುವ ಕೋಟೆಗೆ ಪ್ರಾಮುಖ್ಯತೆಯಿದೆ. ವಾಂಗ್ಚುಕ್ ವಂಶದವರು ಇದನ್ನೇ ತಮ್ಮ ರಾಜಧಾನಿಯಾಗಿರಿಸಿಕೊಂಡಿದ್ದರು. ಈಗಿನ ರಾಜನ ಮದುವೆ, ಪಟ್ಟಾಭಿಷೇಕ ಈ ಕೋಟೆಯೊಳಗೇ ನಡೆಯಿತು. ಬ್ರಿಟಿಷರ ಕಾಲದಲ್ಲಿ ಇಲ್ಲಿನ ರಾಜನಿಗೆ ಅವರೊಡನೆ ಆದ ಒಪ್ಪಂದವೂ ಇದರಲ್ಲೇ ನಡೆಯಿತು. ಕೋಟೆಯೊಳಗೆ ಒಂದು ಭಾಗದಲ್ಲಿ ಸರಕಾರದ ಕಛೇರಿಯಿದ್ದರೆ ಇನ್ನೊಂದು ಭಾಗದಲ್ಲಿ ಬೌದ್ಧ ಸನ್ಯಾಸಿಗಳು ವಾಸವಾಗಿದ್ದಾರೆ. ಅಲ್ಲಿ ಅವರ ದೇವಾಲಯವೂ ಇದೆ. ರಾಜವಂಶದವರು ಧಾರ್ಮಿಕ ವಿಧಿಗಳನ್ನು ಆಡಳಿತದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಈ ಕೋಟೆ ಸುಂದರ ಮತ್ತು ವಿಶಾಲವಾಗಿದೆ. ಇದರ ಪಕ್ಕದಲ್ಲೇ ಮೊಚು ಮತ್ತು ಪೊಚು ನದಿಗಳು ಹರಿಯುತ್ತವೆ.

DSC02060 DSC02259 DSC02229

DSC02323    DSC02359

ಈ ನದಿಯನ್ನು ದಾಟಿ ಕೋಟೆಗೆ ಹೋಗಲು ಆ ಕಾಲದಲ್ಲೆ ವಿಶಾಲವಾದ ಸೇತುವೆಯೊಂದನ್ನು ಕಟ್ಟಿದ್ದರು. “ಮೊಚು-ಅಮ್ಮ, ಪೊಚು-ಅಪ್ಪ” ನದಿಗಳೆಂಬ ಅರ್ಥ ಬರುತ್ತದೆಯೆಂದು ಗೈಡ್ ದೋರ್ಜಿ ನಮಗೆ ವಿವರಿಸಿದರು. ಈ ಹೆಸರು ಆ ನದಿಗಳ ನೀರಿನ ಹರಿವಿನ ಸೆಳತಕ್ಕನುಗುಣವಾಗಿದೆ. ಮುಂದೆ ಇವೆರಡು ನದಿಗಳ ಸಂಗಮ ಕೋಟೆಯ ಪಕ್ಕದಲ್ಲೇ ಆಗುವುದರಿಂದ ಇಲ್ಲಿನ ಸೇತುವೆ ಬಹಳಷ್ಟು ಬಾರಿ ನೆರೆ ನೀರಿನ ಧಾಳಿಗೊಳಗಾಗಿ ನಾಶವಾಗಿದೆ. ಎರಡೂ ನದಿ ಸಂಗಮಿಸಿ ಸಂಕೋಷ್ ನದಿಯಾಗಿ ಹರಿಯುತ್ತಾ ದಕ್ಷಿಣದಲ್ಲಿ ಬಾಂಗ್ಲಾ ದೇಶದೊಳಗೆ ಬ್ರಹ್ಮಪುತ್ರನದಿಯನ್ನು ಸೇರುತ್ತದೆ.

ಕೋಟೆಯನ್ನು ಪೂರ್ತಿಯಾಗಿ ನೋಡಿ ಹೊರಬರಲು ೧.೩೦ ತಾಸು ಸಮಯ ಹಿಡಿಯಿತು. ಈ ಕೋಟೆಯನ್ನು ಇಂಗವಾನಗ್ ನಮ್ಜಿಲ್ ಝಬ್ಡ್ರುಂಗ್ ರಿಂಪೋಚೆ ಅವರ ಅಪ್ಪಣೆಯ ಮೇರೆಗೆ ಕ್ರಿ.ಶ.೧೬೩೨ ನೇ ಇಸವಿಯಲ್ಲಿ ಕಟ್ಟಲಾಯಿತು. ಇವರು ಭುತಾನ ದೇಶವನ್ನು ಏಕೀಕರಿಸಿದ ರಾಜ. ಪುನಾಕದ ಕೋಟೆ ೧೯೫೫ ನೇ ಇಸವಿಯ ವರೆಗೆ ಎಲ್ಲಾ ರಾಜ್ಯಾಡಳಿತದ ಕೆಲಸಗಳಿಗೆ ಕೇಂದ್ರವಾಗಿತ್ತು. ಆ ಬಳಿಕ ಪುನಾಕಾದಿಂದ ೭೨ಕಿ.ಮಿ. ದೂರದಲ್ಲಿರುವ ಟಿಂಫೂ ಪಟ್ಟಣಕ್ಕೆ ರಾಜಧಾನಿಯು ಸ್ಥಳಾಂತರಿಸಲ್ಪಟ್ಟಿತು. ಪುನಾಕಾ ಕಣಿವೆಯು ಸಮುದ್ರ ಮಟ್ಟದಿಂದ ೧೨೦೦ಮಿ.ಎತ್ತರದಲ್ಲಿದೆ. ಇದು ಈ ದೇಶದ ಅಕ್ಕಿ ಬೆಳೆಯುವ ಪ್ರದೇಶ. ಇಲ್ಲಿನ ಉಷ್ಣಭರಿತ ,ತೇವಭರಿತ ಹವೆ, ಎಲ್ಲಾ ಕಾಲಗಳಲ್ಲಿ ತುಂಬಿ ಹರಿಯುವ ಪೋಚು ಮತ್ತು ಮೋಚು ನದಿಗಳು ಇದನ್ನು ಜನರು ಬಹುಕಾಲದಿಂದ ವಾಸಕ್ಕಾಗಿ ಆಯ್ಕೆ ಮಾಡುವ ಪ್ರದೇಶವನ್ನಾಗಿಸಿತ್ತು. ಇಲ್ಲಿನ ಜನ ಜೋಂಕಾ ಭಾಷೆಯನ್ನು ಆಡುತ್ತಾರೆ.

ಈ ಕೋಟೆಯಿಂದ ಹೊರ ಬಂದು ನಾವು ಪಟ್ಟಣವನ್ನು ನೋಡಲು ಹೋದೆವು. ಅದು ಸಣ್ಣ ಊರು. ಅಲ್ಲಿನ ಎಲ್ಲ ಊರುಗಳಲ್ಲು ವಿದ್ಯಾಭ್ಯಾಸ, ವೈದ್ಯಕೀಯ ಸಹಾಯಕ್ಕೆ ಬೇಕಾದ ಆಸ್ಪತ್ರೆ, ವೈದ್ಯರು, ಔಷಧಗಳು ಇತ್ಯಾದಿ ವ್ಯವಸ್ಥೆಗಳಿವೆ. ವಿದ್ಯಾಭ್ಯಾಸ, ಉತ್ತಮ ವೈದ್ಯಕೀಯ ಸೇವೆ ಸರಕಾರಿ ಅಸ್ಪತ್ರೆಗಳಲ್ಲಿ ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಲಭ್ಯ. ಆದರೆ ಇಲ್ಲಿ ಉನ್ನತ ವಿದ್ಯಾಭ್ಯಾಸಕ್ಕಿನ್ನೂ ಸಾಕಷ್ಟು ಸೌಲಭ್ಯಗಳಿಲ್ಲ. ಕೆಲವೇ ಕೆಲವು ವಿದ್ಯಾರ್ಥಿಗಳು ದೇಶದೊಳಗೇ ಉನ್ನತ ವಿದ್ಯಾಭ್ಯಾಸ ಮಾಡುತ್ತಾರೆ. ಇನ್ನು ಉಳಿದವರು ಭಾರತಕ್ಕೆ, ಶ್ರೀಲಂಕಾಕ್ಕೆ, ಹಾಗೇ ಶ್ರೀಮಂತರು ಯುರೋಪಿನ, ಅಮೇರಿಕಾದ ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ. ತಾಂತ್ರಿಕ/ಇಂಜಿನೇರಿಂಗ್, ವೈದ್ಯಕೀಯ ವಿದ್ಯಾಭ್ಯಾಸಗಳಿಗೆ ಅಲ್ಲಿ ಬೇಕಷ್ಟು ವ್ಯವಸ್ಥೆಗಳಿಲ್ಲ. ಅಲ್ಲಿನ ಆರ್ಥಿಕ ವ್ಯವಸ್ಥೆ ಮುಖ್ಯವಾಗಿ ಕೃಷಿ, ಪ್ರವಾಸೋದ್ಯಮಗಳನ್ನಾಧರಿಸಿದೆ. ಹೆಚ್ಚಿನ ಕೈಗಾರಿಕಾ ವಸ್ತುಗಳು ಮತ್ತು ಆಹಾರ, ಬಟ್ಟೆ ಇತ್ಯಾದಿ ಭಾರತದಿಂದ ರವಾನೆಯಾಗುತ್ತದೆ. ಭೂತಾನಿನ ಹೆಣ್ಮಕ್ಕಳು ಎಷ್ಟೋ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ ಗೌರವಯುತ ಅಪಾಯರಹಿತ ಬಾಳನ್ನು ಬಾಳುತ್ತಾರೆ. ನಾವು ಆ ಬಗ್ಗೆ ನಮ್ಮ ಮಾರ್ಗದರ್ಶಕರಾದ ದೋರ್ಜಿಯವರಿಂದಲೇ ತಿಳಿದೆವು. ಅಲ್ಲಿ ಯಾವುದೇ ಹೆಣ್ಮಗಳು ತನ್ನ ಮೇಲೆ ಗಂಡೊಂದು ಕೈಮಾಡಿದನೆಂದು ದೂರಿತ್ತರೆ ಸಾಕು ಪೊಲೀಸರು ಅವನನ್ನು ಜೈಲಿನಲ್ಲಿ ಹಾಕಿಬಿಡುತ್ತಾರೆ. ಅತ್ಯಾಚಾರದಂತಹ ಅಪರಾಧ ಕೇಳಿ ಬರುವುದಿಲ್ಲವಂತೆ.
ಪುನಾಕಾ ಪಟ್ಟಣದ ದರ್ಶನವಾಗಿ, ನಂತರ ನಾವು ನಮ್ಮ ಧೆನ್ಸಾ ರೆಸೊರ್ಟ್ ಗೆ ಹೋದೆವು. ಮರುದಿನ ನಾವು ಪುನಃ ಬೆಳಗ್ಗೆ ಬೇಗನೇ ಹೊರಡಬೇಕಿತ್ತು. ಅಲ್ಲಿನ ಮುಖ್ಯ ರಸ್ತೆಗಳ ಕಾಮಗಾರಿ ಕೆಲಸಕ್ಕಾಗಿ ಅವರು ಹೋಗುವ ಬರುವ ವಾಹನಗಳಿಗೆ ನಿಗಧಿತ ಸಮಯ ಕೊಟ್ಟಿದ್ದರು. ನಾವು ಬೆಳಗ್ಗೆ ಬೇಗನೇ ಹೊರಟುದರಿಂದ ರಸ್ತೆ ಮೇಲೆ ಕಾಯುವ ಸಮಯವನ್ನು ಉಳಿಸಿದೆವು.
ನಮ್ಮ ಮರು ಪ್ರಯಾಣವು ಪಾರೋ ಕಣಿವೆಯತ್ತ. ಅದು ಟಿಂಫೂಗೆ ಸಮೀಪದಲ್ಲೇ ಇದೆ. ನಾವು ಹೋಗಲು ಬಳಸಿದ ರಸ್ತೆಯಲ್ಲೇ ವಾಪಾಸು ಪ್ರಯಾಣಿಸುತ್ತಾ ದಾರಿಯಲ್ಲಿ ಸಿಗುವ ರಾಯಲ್ ಬೊಟಾನಿಕಲ್ ಗಾರ್ಡನ್ನಿನ ದರ್ಶನ ಮಾಡಿದೆವು.

DSC02410   DSC02488

ಭುತಾನಿನಲ್ಲಿ ಪ್ರಪಂಚದ ಬೇರೆಡೆಯಲ್ಲಿ ಕಾಣಲು ಸಿಗದ ಎಷ್ಟೋ ಹಿಮಾಲಯದ ಸಸ್ಯ-ಪ್ರಾಣಿಜೀವ ವೈವಿಧ್ಯ ಇದೆ. ಇಲ್ಲಿನ ಸರಕಾರ ಹಾಗಾಗಿ ದೇಶದಿಂದ ಹೊರ ಹೋಗುವ ಯಾತ್ರಿಕರು ಯಾವುದೇ ಜೀವಿಗಳನ್ನು, ಪ್ರಾಕೃತಿಕ ವಸ್ತುಗಳನ್ನು(ಹೂವು. ಹಣ್ಣು,ಬೀಜ, ಕಲ್ಲು….) ಸರಕಾರೀ ಅನುಮತಿಯಿಲ್ಲದೇ ಒಯ್ಯಬಾರದೆಂಬ ನಿಯಮ ಹಾಕಿದೆ. ತಪಾಸಣೆಯಲ್ಲಿ ಸಿಕ್ಕಿ ಬಿದ್ದವರು ದಂಡ ತೆರಬೇಕು, ಇಲ್ಲಾ ವಿರೋಧಿಸಿದ ಕೆಲಸಕ್ಕನುಗುಣವಾಗಿ ಶಿಕ್ಷೆ ಅನುಭವಿಸಬೇಕು. ಅಲ್ಲಿ ವಿದೇಶೀ ಪ್ರವಾಸಿಗಳು ಗೈಡ್ ಇಲ್ಲದೇ ಪ್ರಯಾಣಿಸಬಾರದೆಂಬ ನಿಯಮವಿದೆ. ದೇಶದ ನೀತಿ-ನಿಯಮಗಳನ್ನು ತಿಳಿ ಹೇಳುವುದು ಗೈಡಿನ ಕರ್ತವ್ಯವಾಗಿದೆ. ಹಿಮಾಲಯದ ಎಲ್ಲಾ ಊರುಗಳೂ ಸುಂದರ, ಜನರು ಸ್ನೇಹಪರರು ಎಂದು ನನಗನಿಸಿತು. ಸಿಕ್ಕಿಂ ಮತ್ತು ಇಲ್ಲಿ ಹೊಸಬರು, ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸಿ ಉದ್ದದ, ಸಪುರಕ್ಕಿರುವ ಶಲ್ಯವೊಂದನ್ನುಕೊರಳಲ್ಲಿ ಹಾಕಿ ಒಳಗೆ ಕರೆದೊಯ್ಯುತ್ತಾರೆ.

DSC02606

ಈ ಸೇತುವೆ ೧೪ನೇ ಶತಮಾನದ ಬೌದ್ಧ ಸಂತ ಡ್ರುಪ್ತಾಪ್ ಚಜ಼ನ್ಪಾ ಎಂಬವನು ನಿರ್ಮಿದನು. ಅವನು ಟಿಬೆಟಿನಿಂದ ಬಂದು ಇಲ್ಲಿ ನೆಲೆಸಿ ಇಡೀ ಭುತಾನದೊಳಗೆ ಒಟ್ಟು ೧೦೮ ಸೇತುವೆಗಳನ್ನು ಕಟ್ಟಿದ್ದಾನೆ.

ನಾವು ಸುಮಾರು ಮಧ್ಯಾಹ್ನ ೨ಗಂಟೆಯ ಹೊತ್ತಿಗಾಗುವಾಗ ಪಾರೋ ಪಟ್ಟಣವನ್ನು ತಲುಪಿದೆವು. ಅಲ್ಲಿನ ಸಣ್ಣ ಹೋಟೇಲಿನಲ್ಲಿ ಉಪಾಹಾರ ಸೇವಿಸಿ ಆ ಊರಿನ ಚರಿತ್ರೆ ತಿಳಿಸುವ ಮ್ಯುಸಿಯಮಿಗೆ ಹೋದೆವು. ಈ ಊರು ಅಲ್ಲಿನ ಬೌದ್ಧ ಧರ್ಮದ ವಿಕಾಸದಲ್ಲಿ, ರಾಜ್ಯದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ದೇಶದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿದೆ. ನಾವು ಅಲ್ಲೇ ವಿಮಾನದಲ್ಲಿ ಬಂದಿಳಿದೆವು. ರಿನ್ಮುಪುನ್ ಡ್ಜಾಂಗ್ ಹದಿನೇಳನೇ ಶತಮಾನದ ಒಂದು ಕೋಟೆ. ಈಗ ಇಲ್ಲಿ ಮುಖ್ಯವಾಗಿ ಬೌದ್ಧಸನ್ಯಾಸಿಗಳ ಶಾಲೆ, ಆಶ್ರಮವಿದೆ. ಹಾಗೂ ಅದರ ಒಂದು ಪಾರ್ಶ್ವದಲ್ಲಿ ಸರಕಾರದ ಆಡಳಿತದ ಕಛೇರಿಯಿದೆ. ಮ್ಯುಸಿಯಮಿನಲ್ಲಿ ಮುಖ್ಯವಾಗಿ ಈ ದೇಶದ ಇತಿಹಾಸ, ಬೌದ್ಧ ಧರ್ಮದ ಬೆಳವಣಿಗೆ, ಮುಖ್ಯ ಪ್ರೇಕ್ಷಣೀಯ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳ ಬಗ್ಗೆ ತೋರಿಸಿದ್ದಾರೆ.

DSC02680 DSC02700

DSC02725 DSC02797

ನಾನಿಲ್ಲಿ ನಮ್ಮ ಮಾರ್ಗದರ್ಶಿ ಶಿರಿನ್ ದೋರ್ಜಿಯವರೊಂದಿಗೆ

ಇದು ಪಾರೋದ ಅರಮನೆಯ ಸಮೀಪದಲ್ಲಿ, ಅದೇ ಗುಡ್ಡದ ಮೇಲಿನ ಸ್ತರದಲ್ಲಿದೆ. ನಮಗೆ ಕೇವಲ ಮ್ಯುಸಿಯಮಿನ ಒಳಗೆ, ಹಾಗೂ ಅವರ ದೇವಾಲಯದ ಒಳಗೆ ಮಾತ್ರ ನೋಡಲು ಪ್ರವೇಶ, ಹಳೆ ಅರಮನೆಯ ದುರಸ್ತಿ ಕೆಲಸ ನಡೆಯುತ್ತಿತ್ತು. ನಂತರ ನಾವು ಬೌದ್ಧ ಭಿಕ್ಷುಗಳ ವಿದ್ಯಾಭ್ಯಾಸ, ತರಬೇತಿ ನಡೆಯುವ ಕೋಟೆಯ ಒಳಗೆ ಪ್ರವೇಶಿಸಿ ದೇವಾಲಯವನ್ನು ದರ್ಶಿಸಿದೆವು. ಈ ಭಿಕ್ಷುಗಳು ಅವರ ಬಾಲ್ಯದಲ್ಲೇ ಸಾಂಸಾರಿಕ ಜೀವನವನ್ನು ತೊರೆದು ಅಲ್ಲಿಗೆ ಬರುತ್ತಾರೆ. ನಮ್ಮ ಗೈಡ್ ನಮಗೆ ಸನ್ಯಾಸಿಗಳು, ತರಬೇತಿ ಇವುಗಳ ಬಗ್ಗೆ ಮಾಹಿತಿ ಹೇಳಿದರು. ಅವರು ಹೇಳಿದಂತೆ ೯-೧೦ ಶತಮಾನಗಳ ಹಿಂದೆ ಬೌದ್ಧ ಧರ್ಮದ ಆಚರಣೆ ಪ್ರಾರಂಭವಾದ ನಂತರ ಆ ಪ್ರದೇಶದಲ್ಲಿ ಸುಸಂಸ್ಕೃತ ಜೀವನ, ನಾಗರೀಕತೆ ಬಂದಿತು, ಅದಕ್ಕೆ ಮೊದಲು ಅವರು ಕೇವಲ ಗುಡ್ಡಗಾಡಿನ ಜನರಾಗಿ ಬೇಟೆಯಾಡಿಕೊಂಡು ಬದುಕುತ್ತಿದ್ದರು.
ಕೋಟೆ, ಕಲಿಕೆಯಲ್ಲಿರುವ ತರುಣ ಮುನಿಗಳನ್ನು ನೋಡಿ ನಾವು ಆ ಧರ್ಮದ ವಿಚಾರಗಳನ್ನು ವಿಮರ್ಶಿಸುತ್ತಾ ಗುಡ್ಡದ ಇನ್ನೊಂದು ಮೈಯಿಂದಾಗಿ ಕೆಳ ಇಳಿದು ಬಂದೆವು. ನಮ್ಮ ನಡಿಗೆಯ ದಾರಿ ಬಹಳ ಸುಂದರವಾಗಿತ್ತು. ಪಾರೋ ಪಟ್ಟಣವು ನಮ್ಮ ಮುಂದೆ ಪೂರ್ತಿಯಾಗಿ ಗೋಚರಿಸಿತು.

WP_20141105_057   WP_20141105_037

WP_20141105_073  WP_20141105_065

ಹರಿಯುವ ನದಿ, ಕೃಷಿಗೆ ಅಳವಡಿಸಿದ ಭೂಮಿ, ನೀರಿನ ಇಕ್ಕೆಲದಲ್ಲಿ ಪಟ್ಟಣ, ಜನವಸತಿ, ಹಾಗೂ ಮದ್ಯ-ಮದ್ಯದಲ್ಲಿ ಕಾಣುವ ವಿವಿಧ ವರ್ಣಗಳ ಗಿಡ-ಮರಗಳು ನಮ್ಮನ್ನು ಅಲ್ಲೇ ಬಹಳ ಹೊತ್ತುಎತ್ತರದಲ್ಲಿ ನಿಂತು ನೋಡುವಂತೆ ಮಾಡಿದವು. ಇಳಿದು ಕೆಳಗೆ ಬರುವಾಗ ನಮ್ಮ ದಾರಿಗಡ್ಡವಾಗಿ ನದಿಯೊಂದು ಹರಿಯುತ್ತಾ ಜೀವರಾಶಿಗಳ ತೃಷೆ ತೀರಿಸುತ್ತಾ, ಉಣಬಡಿಸುತ್ತಾ, ಕೊಳಕನ್ನು ತೊಳೆಯುತ್ತಾ ಹೋಗುತ್ತಿತ್ತು. ನದಿಯ ಸೇತುವೆಯನ್ನು ದಾಟಿ ನಮ್ಮ ವಾಹನ ನಿಲ್ಲಿಸಿದಲ್ಲಿಗೆ ಬಂದೆವು. ಅಂದು ನಾವು ಉಳಿದುಕೊಂಡ ರೆಸಾರ್ಟ್ ಝ್ಹಿವಾಲಿಂಗ್ ಅಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಿದ ಕಟ್ಟಡವಾಗಿತ್ತು. ಮೊದಲಿನ ಕಾಲದಲ್ಲಿ ಅರಮನೆ, ಕೋಟೆಗಳನ್ನು ಅದೇ ಪದ್ಧತಿಯಲ್ಲಿ ಕಟ್ಟುತ್ತಿದ್ದರಂತೆ. ಅಲ್ಲಿನ ಕಪ್ಪು ಕಲ್ಲಿನ ಗೋಡೆ, ಮರದ ನೆಲ ಒಟ್ಟು ಅನುಭವ ನಮ್ಮನ್ನು ಮೊದಲಿನ ಕಾಲದ ಅಲ್ಲಿನ ಅವರ ಅರಮನೆ, ಕೋಟೆಯೊಳಗಿನ ಜೀವನ ದೃಶ್ಯಗಳನ್ನು ಕಲ್ಪಿಸುವಂತೆ ಮಾಡುತ್ತಿದ್ದವು. ರಾತ್ರಿಯಲ್ಲಿ ನಾವು ಮರುದಿನ ನಾವು ಏರಲಿರುವ ಟಕ್ಸ್ ಟಾಂಗ್ ದೇವಾಲಯದ ವಿವರಗಳನ್ನು ಓದಿ ಮಾನಸಿಕವಾಗಿ ತಯಾರಾದೆವು.

DSC_0467 DSC02870 DSC02890

ಟಕ್ಸ್ ಟಾಂಗ್ ದೇವಾಲಯ ಅವರ ಧರ್ಮಕ್ಕೆ ಸಂಬಂಧಪಟ್ಟಂತೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಇನ್ನೊಂದು ಹೆಸರು “ಟೈಗರ್ಸ್ ನೆಸ್ಟ್ -(Tiger’s Nest)”, ಈ ದೇವಾಲಯದ ಹಿಂದೆ ರೋಮಾಂಚಕಾರಿ ಕಥೆಯಿದೆ. ನಾವು ಉಳಿದುಕೊಂಡಿದ್ದ ಪಾರೋ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು ೬೦೦೦ ಅಡಿಗಳ ಎತ್ತರದಲ್ಲಿದೆ. ಈ ದೇವಾಲಯವನ್ನು ೩೦೦೦ಅಡಿ ಎತ್ತರದಲ್ಲಿರುವ ಬೆಟ್ಟದ ಮೇಲೆ ಕಟ್ಟಲಾಗಿದೆ. ಇದು ಪಾರೋದಿಂದ ೧೦ಕಿ.ಮೀ. ದೂರದಲ್ಲಿದೆ. ನಾವು ಸುಮಾರು ೫-೬ಕಿ.ಮೀ( ಅದು ಸಾಧಾರಣ ೩೦೦೦ ಅಡಿಎತ್ತರದ ಬೆಟ್ಟ) ನಡೆಯಲಿರುವ ಕಾರಣ ಬಿಸಿಲೇರುವ ಮೊದಲೇ ಬೆಟ್ಟದ ತಲಕ್ಕೆ ತಲುಪಿದೆವು. ಈ ಬೆಟ್ಟದ ಮೇಲಿರುವ ಗುಹೆಯೊಳಗೆ ಪದ್ಮ ಸಂಭವ( ಇಲ್ಲೆಲ್ಲಾ ಗುರು ರಿಂಪೋಚೆ ಎಂದೇ ಪ್ರಸಿದ್ಧಿ) ಎಂಬ ಬೌದ್ಧ ಮುನಿ ತಪಸ್ಸು ಮಾಡಿ ಅಲ್ಲಿರುವ ಅಸುರೀ ಶಕ್ತಿಗಳನ್ನು ವಶ ಪಡಿಸಿಕೊಂಡರು, ನಂತರದ ದಿನಗಳಲ್ಲಿ ಆ ಕಣಿವೆ ಪ್ರದೇಶದಲ್ಲಿ ಬೌದ್ಧಧರ್ಮ ವ್ಯಾಪಿಸಿತು. ಅವರ ಶಿಷ್ಯನು ಗುರು ರಿಂಪೋಚೆ ತಪಸ್ಸಾಚರಿಸಿದ ಗುಹೆಯೊಳಗೆ ಕ್ರಿ.ಶ.೧೬೯೨ ಕಾಲದಲ್ಲಿ ದೇವಾಲಯವನ್ನು ನಿರ್ಮಿಸಿದನು. ಗುರು ರಿಂಪೋಚೆ ಟಿಬೆಟಿನಿಂದ ಹುಲಿಯ ಮೇಲೆ ಕುಳಿತುಕೊಂಡು ಆಕಾಶ ಮಾರ್ಗದಲ್ಲಿ ಈ ಬೆಟ್ಟದ ತುದಿಗೆ ಬಂದನೆಂದು ಪ್ರತೀತಿ, ಹಾಗಾಗಿ ಈ ಗುಹೆಗೆ ಟೈಗರ್ಸ್ ನೆಸ್ಟ್ ಎಂದು ಹೆಸರು ಬಂತು. ಈ ಗುಹೆ ತೀರ ಲಂಬವಾಗಿರುವ ದೊಡ್ಡದಾದ ಬಂಡೆಕಲ್ಲಿನ ಸಂದಿಯೊಳಗಿದೆ. ನಾವು ಬೆಟ್ಟ ಏರುತ್ತಿರುವಾಗ ನಮಗೆ ದೂರದಿಂದ ಕಾಣುವ ಅದರ ಆಕಾರ, ಗಾತ್ರ ಹತ್ತಿರವಾದಾಗ ಭಾಸವಾಗುವುದಿಲ್ಲ. ಆ ಕಾಲದಲ್ಲಿ ಅಂತಹ ದುರ್ಗಮ ಪ್ರದೇಶದಲ್ಲಿ ದೇವಾಲಯವನ್ನು ಹೇಗೆ ನಿರ್ಮಿಸಿದರೆಂದು ಆಶ್ಚರ್ಯವಾಗುತ್ತದೆ. ನಾವು ಹತ್ತಲು ಪ್ರಾರಂಭಿಸಿದ ಕಲ್ಲಿನ ಬೆಟ್ಟವನ್ನು ಹತ್ತಿ ಇಳಿದು ಇನ್ನೊಂದು ಬೆಟ್ಟವನ್ನು ಏರಿದಾಗಲೇ ಟೈಗರ್ಸ್ ನೆಸ್ಟ್ ನ ಸಮೀಪಕ್ಕೆ ಬರುತ್ತೇವೆ. ಇದರನ್ನು ಅವರು ಭುತಾನಿನ ಪ್ರವಾಸದ ಕೊನೆಯಲ್ಲಿ ತೋರಿಸುತ್ತಾರೆ. ಬಹುಷಃ ನಮ್ಮ ಮೊದಲ ದಿನಗಳ ಬೆಟ್ಟ ಹತ್ತಿದ ತರಬೇತಿ ಕೊನೆಯ ದಿನಕ್ಕಾಗುವಾಗ ನಮ್ಮನ್ನು ಮಾನಸಿಕವಾಗಿ ತಯಾರಾಗುವಂತೆ ಮಾಡುತ್ತದೆ. ಇದನ್ನು ನೋಡಿದ ನಂತರ ಪ್ರಕೃತಿಯ ಸಾಮೀಪ್ಯದಲ್ಲಿ ಮಾತ್ರ ದೇವರ ಅಸ್ತಿತ್ವವನ್ನು ಅನುಭವಿಸಲು ಸಾಧ್ಯವೆಂಬ ನಿರ್ಧಾರಕ್ಕೆ ಬಂದೆ. ಅಲ್ಲಿನ ಪ್ರಶಾಂತ, ನೀರವ, ಸುಂದರ ವಾತಾವರಣ, ಹಿಮಾಲಯದ ಕಠೋರ ಹವೆಯ ಮಧ್ಯದಲ್ಲಿ ಮಾಡಿದ ತಪಸ್ಸು ಆ ಮುನಿಗೆ ತಿಳುವಳಿಕೆಯನ್ನು ಕೊಟ್ಟಿತ್ತು. ಈ ದೇವಾಲಯಕ್ಕೆ ಹೋದ ಅನುಭವ ನನಗೆ ಏನೋ ಒಂದು ರೀತಿಯ ಪ್ರಬುದ್ಧತೆ ಮತ್ತು ತಿಳುವಳಿಕೆಯನ್ನು ಕೊಟ್ಟಿತು.

DSC02960 DSC02968
ಇಲ್ಲಿಂದ ಕೆಳಗಿಳಿದ ಮೇಲೆ ಸಾಯಂಕಾಲ ನಾವು ಕೊನೆಯದಾಗಿ ಅದೇ ಪ್ರದೇಶದಲ್ಲಿರುವ ಇನ್ನೊಂದು ಕೋಟೆಯನ್ನು ವೀಕ್ಷಿಸಲು ಹೋದೆವು. ಡ್ರುಕ್ಜಿಲ್ ಡ್ಜಾಂಗ್ -Drukgyel Dzong- ಈ ಕೋಟೆಯನ್ನು ಟಿಬೆಟಿನಿಂದ ಆಕ್ರಮಿಸಿ ದೇಶದೊಳಗೆ ಬರುವ ಶತ್ರುವನ್ನು ಕಾಣುವಂತೆ ಕಟ್ಟಿದ್ದಾರೆ. ಅಲ್ಲಿಂದ ಈ ಎರಡು ದೇಶಗಳ ಗಡಿ ಪ್ರದೇಶಕ್ಕೆ ಹೆಚ್ಚಿನ ದೂರವಿಲ್ಲ. ಈಗಿನ ಬದಲಾದ ಜೀವನ ಪದ್ಧತಿಯು ಕಳೆದ ಶತಮಾನಗಳ ವರೆಗೆ ನಡೆಯುತ್ತಿದ್ದ ಯುದ್ಧಗಳನ್ನು ತೀರ ಇಲ್ಲವಾಗಿಸಿದೆ. ಹಾಗಾಗಿ ಬೆಂಕಿ ಹೊತ್ತಿ ಉರಿದು ಭಸ್ಮಗೊಂಡ ಈ ಕೋಟೆಯನ್ನು ಸರಕಾರವು ಪುನರುಜ್ಜೀವನಗೊಳಿಸಲು ಯತ್ನಿಸಿಲ್ಲ. ಅಲ್ಲಿನ ಹಳೆ ಕಟ್ಟಡಗಳಲ್ಲಿ ಮರಗಳನ್ನು ತುಂಬಾ ಉಪಯೋಗಿಸಿದ್ದಾರೆ, ಹಾಗಾಗಿ ಕಲ್ಲಿನಿಂದ ಕಟ್ಟಿದ ಭಾಗಗಳು ಮಾತ್ರ ಉಳಿದುಕೊಂಡಿವೆ. ಇದು ಮೊದಲಿನ ಕಾಲದಲ್ಲಿ ಸೇನೆ, ಸೇನೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಂಗ್ರಹಿಸಿಡುವ ಜಾಗವಾಗಿತ್ತು. ಹಾಗಾಗಿ ಇಲ್ಲಿ ಅರಮನೆ ಇವುಗಳಿಗೆ ಪ್ರಾಮುಖ್ಯತೆಯಿಲ್ಲ. ಹಗಲಿನಲ್ಲಿ ಬೆಟ್ಟ ಹತ್ತಿ ಅಯಾಸಗೊಂಡಿದ್ದ ನಾವು ಇಲ್ಲಿನ ಕೋಟೆಯನ್ನು ಬೇಗನೇ ನೋಡಿ ಮುಗಿಸಿದೆವು.ಇದರೊಂದಿಗೆ ನಮ್ಮ ಭುತಾನ್ ವಾಸ, ಪ್ರವಾಸ ಮುಗಿಯಿತು.

DSC_0515

ನಮ್ಮ ಮುಂದಿದ್ದುದು ಇನ್ನು ಮರುದಿನ ನವೆಂಬರ್ ೭-೨೦೧೪ ರ ಬೆಳಗ್ಗೆ  ಪಾರೋ ವಿಮಾನ ನಿಲ್ದಾಣದಿಂದ ನೇಪಾಲದ ಕಟ್ಮಂಡುವಿಗೆ ಹೋಗುವುದು. ನಮ್ಮ ವಿಮಾನದ ದಾರಿ ಹಿಮಾಲಯದ ತಪ್ಪಲಲ್ಲಿರುವ ಸಣ್ಣ ಪರ್ವತ ಶ್ರೇಣಿಗಳ ಪಕ್ಕದಲ್ಲೇ. ಈ ಪ್ರಯಾಣದಿಂದ ನಮಗೆ ಸರಸ್ವತೀ ದೇವಿಯ ಕುರಿತಾದ ತುಷಾರ ಹಾರ ಧವಳ ಎಂಬ ವರ್ಣನೆಯ ಅರ್ಥ ಸರಿಯಾಗಿ ಮನದಟ್ಟಾಯಿತು. ಹಿಮಾವೃತ ಶ್ವೇತವರ್ಣದ ಗಿರಿಗಳ ಗಂಭೀರ ಸೌಂದರ್ಯ ಕೇವಲ ಅನುಭವಿಸಿಯೇ ತಿಳಿಯಬೇಕಷ್ಟೆ.