ನಾ ಕಂಡ ಭುತಾನ ದೇಶ

ಭುತಾನ ದೇಶವು ಭಾರತದ ಉತ್ತರ ಪೂರ್ವ/ವಾಯವ್ಯ ದಿಕ್ಕಿನಲ್ಲಿದೆ. ಇದೊಂದು ವಿಶಿಷ್ಟವಾದ ಸಂಸ್ಕೃತಿಯ ನಾಡು. ಇದು ಮೊದಲಿನಿಂದಲೂ ಡ್ರಾಗಾನಿನ ನಾಡು/ ಡ್ರುಕ್ ಯುಲ್ ಎಂದೇ ಪ್ರಸಿದ್ಧ. ಡ್ರುಕ್ ಎಂದರೆ -thunder dragon. ಇಲ್ಲಿನ ಹೆಚ್ಚಿನ ಜನರು ಬೌದ್ಧ ಧರ್ಮದ ಅನುಯಾಯಿಗಳು, ಮಿಗಿಲಾದವರು ಹಿಂದೂಗಳು. ವಿಶ್ವದಲ್ಲೇ ಇಲ್ಲಿ ಮಾತ್ರ ರಾಷ್ಟ್ರ ಧರ್ಮವಾಗಿ ಬೌದ್ಧದರ್ಮವಿದೆ. ಹಿಮಾಲಯದ ತಪ್ಪಲು ಪ್ರದೇಶ ಮತ್ತು ಪರ್ವತಗಳ ನಡುವೆ ಇರುವ ಇಲ್ಲಿನ ಜನರಿಗೆ ಕಷ್ಟಸಹಿಷ್ಣುತೆ ಜಾಯಮಾನಕ್ಕೇ ಬಂದ ಗುಣ. ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಕೇಳಿ ಕುತೂಹಲದಿಂದ ನಾವು ಈ ನಾಡನ್ನು ನೋಡಲು ಹೋದೆವು.
ಮಾನವ ನಿರ್ಮಿತ ಗಡಿಗಳು ಎಲ್ಲಾ ಕಾಲಗಳಲ್ಲೂ ಕೇವಲ ಕಲಹ ನಿರ್ಮಾತೃ, ಹಾಗೆಂದು ಗಡಿಯಿಲ್ಲದೇ ಯಾವ ದೇಶಗಳೂ ಯಾವ ಕಾಲದಲ್ಲೂ ಇರಲಾರವು. ನೇಪಾಲ ಮತ್ತು ಭುತಾನ ದೇಶಗಳು ನಮ್ಮ ಭಾರತವನ್ನು ನೇರವಾಗಿ ಟಿಬೆಟ್ನೊಂದಿಗೆ/ಚೀನಾದೊಂದಿಗೆ ಸಂಪರ್ಕಿಸದಂತೆ ತಡೆಹಿಡಿಯುತ್ತದೆ, ಪ್ರಾಯಶಃ ಇದೇ ಕಾರಣಕ್ಕಾಗಿ ನಾವು ಈ ದೇಶಗಳೊಂದಿಗೆ ಸ್ನೇಹದಿಂದಿದ್ದೇವೆ.
ನೂರಾರು ವರ್ಷಗಳಿಂದ ನಡೆಯುತ್ತಿರುವ ಮಾನವರ ವಲಸೆಯಿಂದಾಗಿ ಇಲ್ಲಿನ ಜನರಲ್ಲಿ ಎಲ್ಲೆಡೆಯ ಜನರನ್ನು ಕಂಡುಬರುತ್ತದೆ. ದಕ್ಷಿಣದ, ಹಿಮಾಲಯ ತಪ್ಪಲಿನ ನೇಪಾಲೀ ಜನರು ಕಾಣಲು ಭಾರತೀಯರನ್ನು ಹೋಲುತ್ತಾರೆ ಮತ್ತು ಗೋಧಿಬಣ್ಣದವರು, ಅಲ್ಲಿನ ಬೆಟ್ಟಗಳಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿದ್ದ ಜನಗಳು ಮೈಬಣ್ಣ ಗೋಧಿವರ್ಣದವರಾದರೂ ಕಣ್ಣು, ಕೂದಲು ಮತ್ತು ದೇಹಗಾತ್ರಗಳಲ್ಲಿ ಉತ್ತರದ ಚೀನಾದ ಮಂದಿಗಳ ಹೋಲಿಕೆಯನ್ನು ಹೊತ್ತವರು. ಇನ್ನೂ ಕೆಲವರು ಚೀನೀಯರಂತೆ ಶ್ವೇತವರ್ಣೀಯರು. ಒಟ್ಟಿನಲ್ಲಿ ವಿವಿಧ ತರಹದ ಸಮ್ಮಿಶ್ರಣ ಎದ್ದು ಕಾಣುತ್ತದೆ. ಜನರ ನುಡಿಗಳಲ್ಲೂ ಅಷ್ಟೆ ನಾವು ಊಹಿಸದ ವೈವಿಧ್ಯಗಳಿವೆ. ಅವರ ರಾಷ್ಟ್ರಭಾಷೆ ಝ್ಹೋಂಕಾ. ಅವರ ಆಹಾರ ಬೆಳೆ ಅಕ್ಕಿ,ಆಲೂಗಡ್ಡೆ ಎಂದರೆ ದಕ್ಷಿಣಭಾರತೀಯರಿಗೆ ಆಶ್ಚರ್ಯವೆನಿಸುತ್ತದೆ. ಅಲ್ಲಿ ಹಾಲು ಮತ್ತು ಅದರ ಉತ್ಪನ್ನಗಳು ಸಿಗುವುದಾದರೂ ದುರ್ಲಭ ವಸ್ತು. ಉತ್ತರ ಭುತಾನದ ಹಿಮಾಲಯ ಪರ್ವತವಾಸಿಗಳು ಯಾಕ್/ಚಮರೀ ಮೃಗವನ್ನು ಆವಲಂಬಿಸಿ ಬದುಕುವವರು. ಅವರು ಅನಿವಾರ್ಯವಾಗಿ ಬಹುತೇಕ ಮಾಂಸವನ್ನಾಧರಿಸಿಯೇ ಬದುಕುತ್ತಾರೆ.
ಭುತಾನದ ಚರಿತ್ರೆಯಂತು ನನಗೆ ತುಂಬಾ ಆಸಕ್ತಿಕರವಾಗಿ ಕಂಡುಬಂತು.

WP_20141103_021

ಅಲ್ಲಿಗೆ ಬೌದ್ಧ ಧರ್ಮವನ್ನು “ಗುರು ರಿಂಪೊಚೆ” ಎಂದು ಕರೆಸಿಕೊಳ್ಳುವ ಪದ್ಮಸಂಭವ ಎಂಬ ಬೌದ್ಧ ಮುನಿ ೭ನೇ ಶತಮಾನದಲ್ಲಿ ತಂದರು. ಈ ಮುನಿ ಪದ್ಮ ಸಂಭವ ಸಿಂಧೂನದಿ ಹರಿಯುವ ಪಾಕಿಸ್ಥಾನ ಮತ್ತು ಅಪಘಾನಿಸ್ಥಾನದ ಒಡಿಯಾನ ಪ್ರದೇಶದವರು, ಅಲ್ಲಿನ ರಾಜ ಎರಡನೇ ಇಂದ್ರಬೋಧಿ ಎಂಬವನು ಬೆಳೆಸಿದ ದತ್ತುಪುತ್ರ. ಆ ಕಾಲದಲ್ಲಿ(೭ನೇ ಶತಮಾನದಲ್ಲಿ) ಅಲ್ಲೆಲ್ಲ ಬೌದ್ಧಧರ್ಮ ಪ್ರಚಲಿತವಾಗಿತ್ತು. ಆ ಕಾಲದಲ್ಲಿ ಭೂತಾನವು ಕೂಚ್ ಬೆಹಾರಿನ ರಾಜ ಸಂಗ್ಲದೀಪ ಆಡಳಿತದಲ್ಲಿತ್ತು ಎಂದು ಪ್ರತೀತಿಯಿದೆ. ಆ ಮೊದಲು ಅಲ್ಲೆಲ್ಲಾ ಹೇಳಿಕೊಳ್ಳುವಂತ ನಾಗರೀಕ ಸಮಾಜವಿನ್ನೂ ಪ್ರಾರಂಭವಾಗಿರಲಿಲ್ಲ. ೯ನೇ ಶತಮಾನದಲ್ಲಿ ಉತ್ತರದ ಟಿಬೆಟಿನಲ್ಲಾದ ಅಂತಃಕಲಹದ ನಂತರ ಬೌದ್ಧ ಮುನಿಗಳು ಈ ನಾಡಿಗೆ ಬಂದು ಆಶ್ರಯ ಪಡೆದ ನಂತರ ಇಲ್ಲಿನ ಜನರಲ್ಲಿ ಬೌದ್ಧಧರ್ಮದ ಸಂಪ್ರದಾಯ,ಆಚರಣೆ ಪ್ರಾರಂಭವಾಯಿತು. ಇಲ್ಲಿನ ಚರಿತ್ರೆ ಹೊರಗಿನವರಿಗೆ ತಿಳಿದು ಬಂದುದು ಟಿಬೆಟಿಯನ್ನರ ಬೌದ್ಧಧರ್ಮ ಪ್ರಚಲಿತವಾದ ನಂತರವೇ. ಇಲ್ಲಿ ರಾಜ್ಯಾಡಳಿತ ಮತ್ತು ಬೌದ್ಧ ದರ್ಮವು ಒಂದಕ್ಕೊಂದು ಹೊಂದಿಕೊಂಡು ಧರ್ಮಗುರುಗಳು, ರಾಜ್ಯಾಡಳಿತ ಮತ್ತು ಧರ್ಮ ಆಚರಣೆ ಈ ನಾಗರೀಕತೆಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿನ ಜನರು ಡ್ರುಕ್ಪಾ ಕಾಗ್ಯುಪ ಪದ್ಧತಿಯ ಬೌದ್ಧಧರ್ಮ ಶಾಖೆಯ ಹಿಂಬಾಲಕರು.ಈ ಪ್ರದೇಶ ಪ್ರಾಯಶಃ ಭೌಗೋಳಿಕ ಕಾರಣಗಳಿಂದಾಗಿ ಚಾರಿತ್ರಿಕವಾಗಿ ಹೆಚ್ಚಿನ ಕಾಲ ಸ್ವತಂತ್ರವಾಗಿತ್ತು, ಅನ್ಯರ ಆಡಳಿತಕ್ಕೆ ಒಳಪಡಲಿಲ್ಲ.
೧೬೧೬ ನೇ ಇಸವಿಯಲ್ಲಿ ಇಂಗವಾನಗ್ ನಮ್ಜಿಲ್ ಝಬ್ಡ್ರುಂಗ್ ರಿಂಪೋಚೆ( Ngawanag Namgyal Zhabdrung Rinpoche) ಟಿಬೇಟಿನ ಆಕ್ರಮಣಕಾರರೊಡನೆ ಹೋರಾಡಿ ಈಗಿನ ಭುತಾನ ದೇಶದ ಅಸ್ಥಿತ್ವಕ್ಕೆ ಕಾರಣರಾದರು. ಆ ನಂತರ ಎಷ್ಟೋ ರಾಜರು ಬಂದವರು ಇಲ್ಲಿನ ಸಣ್ಣ-ಸಣ್ಣ ಪ್ರಾಂತ್ಯಗಳನ್ನು ಆಳಿದ್ದಾರೆ. ಕಳೆದ ಶತಮಾನದಲ್ಲಿ ೧೯೦೬ ನೇ ಇಸವಿಯಲ್ಲಿ ಯುಜಿನ್ ವಾಂಗ್ಚುಕ್ ಎಂಬ ವಾಂಗ್ಚುಕ್ ವಂಶದ ರಾಜ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ಇಡೀ ದೇಶವನ್ನು ಒಂದಾಗಿಸಿ ರಾಜ್ಯವಾಳುವುದರೊಂದಿಗೆ ವಾಂಗ್ಚುಕ್ ವಂಶದ ಬುನಾದಿಯನ್ನು ಹಾಕಿದರು. ಅವರ ಭಾಷೆಯಲ್ಲಿ ಡ್ರುಕ್ ಗ್ಯಾಲ್ಪೋ ಎಂದರೆ ಡ್ರಾಗಾನ್ ರಾಜ. ಈಗಿನ ಭುತಾನದ ರಾಜ ಜಿಗ್ಮೆ ಖೆಸರ್ ನಮ್ಜಿಲ್ ವಾಂಗ್ಚುಕ್(Jigme Khesar Namgyel Wangchuck) ಈ ವಂಶದ ೫ನೇ ರಾಜ, ಇವರು ೨೦೦೬ರಲ್ಲಿ ತನ್ನ ತಂದೆಯಿಂದಲೇ ತಮ್ಮ ೨೬ನೇ ವಯಸ್ಸಿನಲ್ಲಿ ರಾಜನಪಟ್ಟ ಪಡೆದುಕೊಂಡರು.

WP_20141107_008

ಈಗಿನ ಭುತಾನದ ರಾಜ ಜಿಗ್ಮೆ ಖೆಸರ್ ನಮ್ಜಿಲ್ ವಾಂಗ್ಚುಕ್ ಮತ್ತು ಅವರ ಪತ್ನಿ ಪೆಮಾ.

ಭುತಾನಕ್ಕೆ ಅವರದೇ ವಿಮಾನದಲ್ಲಿ ಮಾತ್ರ ಹೋಗಬಹುದಷ್ಟೆ, ಅದು ಡ್ರುಕ್ ವಾಯುಸಂಸ್ಥೆ. ನಾವು (ನಾನು ಮತ್ತು ಶ್ಯಾಮ) ಭುತಾನಕ್ಕೆ ಹೋದುದು ದೆಹಲಿಯಿಂದಾಗಿ ಡ್ರುಕ್ ವಿಮಾನ ಸಂಸ್ಥೆಯವರ ವಿಮಾನದಲ್ಲಿ. ಅದು ಬಹಳ ದುಬಾರಿ. ಇನ್ನೊಂದು ದಾರಿಯೆಂದರೆ ಪಶ್ಚಿಮ ಬಂಗಾಳದ “ಬಾಗ್ಡೋಗ್ರಾ ” ವಿಮಾನ ನಿಲ್ದಾಣದಿಂದಾಗಿ. ಇದು ಭಾರತೀಯ ವಾಯುಸೇನೆಯ ವಿಮಾನ ನಿಲ್ದಾಣ. ಅಲ್ಲಿಂದ ಭುತಾನ್, ಸಿಕ್ಕಿಂ ಗಡಿ, ರಸ್ತೆಯಿಂದಾಗಿ ಹೋಗಲು ಅತಿ ಸಮೀಪ. ಬಹಳಷ್ಟು ಮಂದಿ ಕಾರು, ಬಸ್ಸುಗಳಲ್ಲಿ ಈ ಬಾಗ್ಡೋಗ್ರಾಕ್ಕಾಗಿ ಪುಂಟ್ಶೊಲಿಂಗ್ (Phuentsholing)ದಾರಿಯಲ್ಲಿ ಭುತಾನಕ್ಕೆ ಬರುತ್ತಾರೆ.

DSC_0278    WP_20141101_022
ಬೇರೆ ಯಾವುದೇ ದೇಶದ ವಿಮಾನಗಳು ಇಲ್ಲಿನ ಅಂತರ್ದೇಶೀಯ ನಿಲ್ದಾಣವಾದ ಪಾರೋದಲ್ಲಿ ಇಳಿಸಲು ಸರಕಾರ ಒಪ್ಪಿಗೆ ಕೊಡುವುದಿಲ್ಲ. ಈ ವಿಮಾನ ನಿಲ್ದಾಣದ ರನ್ ವೇ ಹಿಮಾಲಯದ ಸಣ್ಣಬೆಟ್ಟಗಳ ಸಾಲಿನ ಮಧ್ಯದಲ್ಲಿನ ಕಣಿವೆ ಪ್ರದೇಶದಲ್ಲಿರುವುದರಿಂದ ಅದು ಊ ಬರೆದಂತೆ ಬಳಕುತ್ತಾ ಸಾಗುತ್ತದೆ. ಇಲ್ಲಿ ನುರಿತ ವಿಮಾನ ಚಾಲಕನಷ್ಟೆ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಬಲ್ಲ. ದೆಹಲಿಯಿಂದ ವಾಯುಮಾರ್ಗದಲ್ಲಿ ಹೋಗುತ್ತಿರಬೇಕಾದರೆ ಹಿಮ ಮುಸುಕಿದ ಪರ್ವತಸ್ತೋಮಗಳ ದರ್ಶನವಾಗುತ್ತದೆ, ನಮಗೆಲ್ಲಾ ಆ ಹಿಮವಂತನ ಶ್ವೇತರೂಪ, ಅಗಾಧತೆಯು ಅಚ್ಚರಿಯನ್ನು ಮೂಡಿಸಿತು. ವಿಮಾನ ಚಾಲಕನು ಪರ್ವತಗಳ ಸಾಲು ಹತ್ತಿರವಾಗುತ್ತಿರಬೇಕಾದರೆ ಅವುಗಳ ಹೆಸರು ಮತ್ತು ಎತ್ತರವನ್ನು ನಮಗೆ ತಿಳಿಸಿ ಹೇಳುತ್ತಿದ್ದನು. ಹಿಮಾಲಯವನ್ನು ಈ ಪಕ್ಷಿನೋಟದಲ್ಲಿ ನೋಡುವುದು ರೋಮಾಂಚನಕಾರೀ ಅನುಭವವೇ ಸರಿ. ನಾವು ಭುತಾನದಿಂದ ಹಿಂತಿರುಗಬೇಕಾದರೆ ನೇಪಾಳದ ಖಟ್ಮಂಡುವಿನ ಮೂಲಕ ಬಂದೆವು. ಆ ವಾಯುಮಾರ್ಗವು ಹಿಮಾಲಯವನ್ನು ಇನ್ನೂ ಸುಂದರವಾಗಿ ತೋರಿಸುತ್ತದೆ. ಭಾರತೀಯರಿಗೆ ಮತ್ತು ಸಾರ್ಕ್ ದೇಶಗಳಿಗೆ ಈ ದೇಶದೊಳಗೆ ಪ್ರವೇಶಿಸಲು ವೀಸಾದ ಅಗತ್ಯವಿಲ್ಲ. ನಾವು ಪ್ರಜೆಯೆಂದು ನಮ್ಮನ್ನು ಪ್ರತಿಪಾದಿಸಲು ಬೇಕಾದ ಸರಕಾರೀ ಗುರುತುಪತ್ರಗಳನ್ನು(ವೋಟರ್ಸ್ ಕಾರ್ಡ್, ಆಧಾರ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿ)ತೋರಿಸಿದರೆ ಸಾಕು.

DSC01858

ಇಲ್ಲಿನ ಜನ ಅವರ ಕೆಲಸ ಸಂದರ್ಭಕ್ಕೆ ಸರಿಯಾಗಿ ಅವರನ್ನು ಪ್ರತಿನಿಧಿಸಿಕೊಳ್ಳಲು ಉತ್ತರೀಯ ಮಾದರಿಯಲ್ಲಿ ವಸ್ತ್ರವೊಂದನ್ನು ಭುಜದ ಮೇಲಿನಿಂದ ಹಾಕಬೇಕು. ಅದು ಅವರವರ ಸ್ಥಾನಮಾನಕ್ಕೆ ಸರಿಯಾಗಿ ಬೇರೆ-ಬೇರೆ ಬಣ್ಣದ್ದಿರುತ್ತದೆ. ಇಲ್ಲಿ ನಮ್ಮ ಗೈಡ್ ದೋರ್ಜಿಯವರು ಬಿಳಿ ಬಣ್ಣದ ವಸ್ತ್ರವನ್ನು ಹೊದ್ದುಕೊಂಡಿದ್ದಾರೆ.

ನಾವಿಳಿದ ಪಾರೋ ವಿಮಾನ ನಿಲ್ದಾಣಕ್ಕೆ ನಮ್ಮನ್ನು ಸ್ವಾಗತಿಸಿ ಕರೆದೊಯ್ಯಲು ನಮ್ಮ ಪ್ರಯಾಣ ವ್ಯವಸ್ಥೆಗಳನ್ನು ನೋಡಿಕೊಂಡ ಸಂಸ್ಥೆಯ ಗೈಡ್/ಮಾರ್ಗದರ್ಶಕ ಶೆರಿಂಗ್ ದೋರ್ಜಿ ಬಂದಿದ್ದರು.(ನಾವು ಪ್ರಯಾಣಿಸಿದುದು ನವೆಂಬರ್ ೧-೨೦೧೪ ರಂದು.) ನಾವು ಪಾರೋದಿಂದ ೫೦ಕಿ.ಮೀ ದೂರದ ರಾಜಧಾನಿ ಪಟ್ಟಣವಾದ ಟಿಂಫುಗೆ ಹೋದೆವು. ನನಗಂತು ನಮ್ಮ ಪ್ರಧಾನ ಮಂತ್ರಿ ಮೋದಿಯವರ ಭೇಟಿಯ ವೀಡಿಯೋ ನೋಡಿ ನಾನು ಅದೇ ದಾರಿಯಲ್ಲಿ ಹೋಗುತ್ತಿದ್ದೇನೆ ಎಂಬ ಸಂತಸ.

ಆ ಊರು ಪ್ರಾಕೃತಿಕವಾಗಿ ಸುಂದರ ಮಾತ್ರವಲ್ಲ, ಜನ ಅದನ್ನು ಸುಂದರವಾಗಿ, ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಅಲ್ಲಿ ಕೇವಲ ಸಣ್ಣ ಮತ್ತು ದೊಡ್ಡ ಹಾಗೂ ಅತಿ ದೊಡ್ಡ ಬೆಟ್ಟಗಳು ಕಾಣುತ್ತವೆ, ಎಲ್ಲೂ ಬಯಲು ಕಾಣ ಸಿಗುವುದಿಲ್ಲ. ಕಣಿವೆಗಳಲ್ಲಿ ಹರಿವ ನೀರಿನ ಸೌಲಭ್ಯವಿರುವ ಸ್ಥಳಗಳಲ್ಲಿ ಜನವಸತಿ, ಕೃಷಿ,ಬೆಳೆ, ಹಳ್ಳಿ, ಪಟ್ಟಣಗಳು ಕಂಡು ಬರುತ್ತವೆ. ಹೆಚ್ಚಿನ ಬೌದ್ಧ ಸ್ತೂಪ(ಚೋರ್ಟಾನ್), ದೇವಾಲಯ(ಲಖಾಂಗ್)ಗಳು ಊರಿನ ಸಮೀಪದ ಎತ್ತರದ ಬೆಟ್ಟದ ತುದಿಯಲ್ಲಿ ಕಟ್ಟುವುದು ಅಲ್ಲಿನ ಪದ್ಧತಿ. ಜನ ಶ್ರಮಪಟ್ಟು ಅಲ್ಲಿಗೆ ಹತ್ತಿಕೊಂಡು ಹೋದಾಗಲೇ ಅವರ ಪಾಪ ಪರಿಹಾರವೆಂದು ಅವರ ನಂಬಿಕೆ. ಹಾಗಾಗಿ ಭುತಾನ ಸಂದರ್ಶಕನಿಗೆ ನಡೆಯುವುದು, ಹತ್ತುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಹೊಸಬರಿಗೆ ನೋಡಲು ಸುಂದರ ಶುದ್ಧವಾದ ಪ್ರಕೃತಿ, ನದಿತೀರ, ಗುಡ್ಡ-ಬೆಟ್ಟಗಳು, ಮತ್ತು ಸಾಹಸಪ್ರಿಯರಿಗೆ ಕಾಡಿನ ದರ್ಶನ, ಪರ್ವತಾರೋಹಣ ಏನನ್ನೂ ಆರಿಸಿಕೊಳ್ಳಬಹುದು. ನಾವು ಅವರ ಜನಪ್ರಿಯ ಸ್ಥಳಗಳನ್ನೇ ನೋಡಿದೆವು. ಅವುಗಳು ಅವರ ಧಾರ್ಮಿಕ, ಸಾಂಸ್ಕೃತಿಕ ಸ್ಥಳಗಳು, ರಾಜರು ಆಳಿದ, ಹೋರಾಡಿದ ಕೋಟೆಗಳು. ಅಲ್ಲಿನ ಜನರು ತಮ್ಮ ಸಾಂಸ್ಕೃತಿಕ,ಧಾರ್ಮಿಕ ಪರಂಪರೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾವು ಉಳಿದುಕೊಂಡಿದ್ದ ಹೆಚ್ಚಿನ ಊರುಗಳು ೭೦೦೦ಅಡಿಗಳು ಅಥವಾ ಅದಕ್ಕೂ ಮೀರಿದ ಎತ್ತರದಲ್ಲಿದ್ದವು. ಹಾಗಾಗಿ ನಾವು ಆ ಊರಿನ ಚಳಿಗೆ ಬೇಕಿದ್ದ ಉಡುಪುಗಳೊಂದಿಗೆ ತಯಾರಾಗಿದ್ದೆವು.

WP_20141102_007     WP_20141102_003
ನಾವು ಹೋಟೇಲು ತಲುಪುವಷ್ಟರಲ್ಲಿ ಸಾಯಂಕಾಲ ೫ ಆಗಿತ್ತು, ಹಾಗಾಗಿ ಅಂದು ಅಲ್ಲೇ ಹತ್ತಿರಕ್ಕೆ ಊರು ನೋಡಲು ಕಾಲ್ನಡಿಗೆಯಲ್ಲಿ ಹೋದೆವು. ನಾವು ಮೊದಲ ಎರಡು ದಿನಗಳನ್ನು ಟಿಂಫೂ ಪಟ್ಟಣದಲ್ಲಿ ಕಳೆದೆವು.ಎರಡನೇ ದಿನ ಮೊದಲಿಗೆ ಮೆಮೋರಿಯಲ್ ಚೋರ್ಟನ್/ಸ್ಥೂಪ (ಊರನ್ನು ಪ್ರವೇಶಿಸುವ ಜಾಗದಲ್ಲಿ) ನೋಡುತ್ತ ಮುಂದುವರಿದೆವು. ಅಲ್ಲಿ ನಮಗೆ ಭಾರತೀಯ ಸೇನೆಯ ಮುಖ್ಯಸ್ಥ ಚೀಫ್ ಜನರಲ್ ದಲ್ ಬೀರ್ ಸಿಂಘ್ಹ್ ಮತ್ತು ಅವರೊಂದಿಗೆ ಭೇಟಿಗೆ ಬಂದಿದ್ದ ಇತರರು ಕಂಡರು. ಇವೆಲ್ಲವನ್ನು ಕಂಡಾಗ ನಮಗನಿಸಿದುದು ಭೂತಾನಿನ ಆಗು-ಹೋಗುಗಳಲ್ಲಿ ಭಾರತದೇಶದ ಪಾತ್ರ ಪ್ರಮುಖವಾಗಿದೆ ಎಂದು.

WP_20141102_012    WP_20141102_010

ಆ ನಂತರ ಎತ್ತರದ ಬೆಟ್ಟದ ಮೇಲೆ ಟಿಂಫೂ ಕಣಿವೆಯನ್ನು ಮುಖಮಾಡಿ ಕುಳಿತಿರುವ ೧೬೯ ಅಡಿ ಎತ್ತರದ ಕಂಚಿನ ಭುದ್ಧನ ವಿಗ್ರಹವನ್ನು ನೋಡಲು ಹೋದೆವು. ಇದರ ಪ್ರತಿಷ್ಠಾಪನೆಗೆ ತಗಲಿದ ವೆಚ್ಚಗಳನ್ನು ಭೂತಾನಿನ ಸರಕಾರ ಮತ್ತು ಹೊರ ರಾಷ್ಟ್ರಗಳು ಕೊಟ್ಟಿವೆ, ಆದರೆ ಇದರ ಕೆಲಸವಿನ್ನೂ ಪೂರೈಸಿಲ್ಲ. ಈ ವಿಗ್ರಹವನ್ನು ೨೦೦೬ನೇ ಇಸವಿಯಲ್ಲಿ ಪ್ರತಿಷ್ಠಾಪಿಸಿದರು. ಈ ವಿಗ್ರಹ ಬಹುದೂರದ ವರೆಗೆ ಕಾಣಿಸುತ್ತದೆ, ಹಾಗೂ ಇಲ್ಲಿಂದ ಕಣಿವೆಯೊಳಗಿನ ಟಿಂಫು ಪಟ್ಟಣ ಕಾಣುತ್ತದೆ. ಇಲ್ಲಿನ ದೇವಸ್ಥಾನಗಳಲ್ಲಿ ಹರಕೆ ಹೇಳಿಕೊಂಡು ಜನ ತುಪ್ಪದ ದೀಪವನ್ನು ಹಚ್ಚುವ ಸಂಪ್ರದಾಯವಿದೆ. ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಅಲ್ಲಿಂದ ನಾವು ೧೨ನೇ ಶತಮಾನದಲ್ಲಿ ಕಟ್ಟಿದ ಚಂಗಾಂಗ್ ಖಾ ಲಖಾಂಗ್/ದೇವಸ್ಥಾನ ನೋಡಲು ಸಣ್ಣ ಗುಡ್ಡವೊಂದನ್ನು ಹತ್ತಿದೆವು. ಅಲ್ಲಿಗೆ ಎಷ್ಟೋ ಮಂದಿ ಇನ್ನೂ ಹೆಸರಿಡದ ಮಕ್ಕಳನ್ನು ಅಲ್ಲಿಗೆ ಕರೆ ತರುತ್ತಾರೆ. ಅಲ್ಲಿ ತಮ್ಮ ಮಕ್ಕಳಿಗೆ ದೇವಸ್ಥಾನದ ಹಿರಿಯ ಪೂಜಾರಿಯ ಆದೇಶದ ಮೇರೆಗೆ ಹೆಸರಿಟ್ಟು ಆಶೀರ್ವಾದದೊಂದಿಗೆ ಹಿಂದಿರುಗುತ್ತಾರೆ. ಅಲ್ಲಿಂದ ಮುಂದೆ ನಾವು ಭೂತಾನಿನ ರಾಷ್ಟ್ರೀಯ ಪ್ರಾಣಿ “ಟೆಕಿನ್” ಅನ್ನು ನೋಡಲು ಉದ್ಯಾನವೊಂದಕ್ಕೆ ಹೋದೆವು.

DSC01832

“ಟೆಕಿನ್” ಆಡು ಮತ್ತು ಕಡವೆ ಮಧ್ಯದ ಜಾತಿಯ ಪ್ರಾಣಿ. ಇದು ಗಾತ್ರದಲ್ಲಿ ಆಡಿಗಿಂತ ದೊಡ್ಡದಿದೆ, ಕಾಲುಗಳು ದಷ್ಟಪುಷ್ಟವಾಗಿ, ಹಿಮಾಲಯದ ಪರ್ವತಗಳ ಚಳಿಯನ್ನು ತಡೆಯಲು ಬೇಕಿರುವ ಕೂದಲಿರುವ ಮೈಚರ್ಮವನ್ನು ಹೊಂದಿದೆ. ಈ ಪ್ರಾಣಿಯ ಬಗ್ಗೆ ಅಲ್ಲಿನ ಜನಪದ ಕತೆಯಿದೆ. ಇದು ಕೇವಲ ಹಿಮಾಲಯದ ಎತ್ತರದ ಪರ್ವತಗಳಲ್ಲಿ ಕಂಡು ಬರುತ್ತದೆ. ಮುಂದುವರಿಯುತ್ತಾ ಜನರಿಗೆ ಗತಕಾಲದ ಹಳ್ಳಿ ಜೀವನ ಹೇಗೆಂದು ತೋರಿಸುವುದಕ್ಕಾಗಿ ಎಂದು ಕಟ್ಟಿದ್ದ ಹಳೆ ಹಳ್ಳಿ ಮನೆ, ಹಿತ್ತಲು, ಉಗ್ರಾಣಗಳನ್ನು ಮಾದರಿಯಾಗಿ ಇಟ್ಟಲ್ಲಿಗೆ ಬಂದೆವು. ಇದು ಅಲ್ಲಿನ ರಾಣಿ ಮುಂಬರುವ ದಿನಗಳಲ್ಲಿ ಜನರಿಗೆ ತೋರಿಸಲೆಂದು ಉಳಿಸಿದುದಾಗಿದೆ. ಇಲ್ಲಿ ನಾನು ಆ ಮನೆ ಮತ್ತು ಜಾಗದ ಮೇಲ್ವಿಚಾರಣೆಗೆ ನೇಮಕಗೊಂಡಿದ್ದ ದಂಪತಿಗಳೊಂದಿಗೆ ಮಾತನಾಡಿದೆ. ಅವರ ಇನ್ನೂ ಮಾತನಾಡಲು ಪ್ರಾರಂಭಿಸದ ಮಗು ನನ್ನ ಫೋನಿನಲ್ಲಿ ತೆಗೆದ ಫೊಟೋಗಳನ್ನು ಕೈಬೆರಳಿನಿಂದ ಜಾರಿಸುತ್ತಾ ನೋಡಿದಾಗ ಬೆರಗಾದೆ !

DSC01850

ಆ ಬಳಿಕ ನಾವು ಮಧ್ಯಾಹ್ನದ ಊಟಕ್ಕೆ ಅಲ್ಲಿನ ಹೋಟೆಲಿಗೆ ಹೋದಾಗ ಅವರ ನಿತ್ಯದ ಕೆಂಪಕ್ಕಿ ಅನ್ನ, ಅಲೂಗಡ್ಡೆ, ಚೀಸಿನೊಂದಿಗೆ ತಯಾರಿಸಿದ ಖಾದ್ಯದೊಡನೆ ಊಟ ಮಾಡುವ ಸಂದರ್ಭ ಒದಗಿತು. ಅಲ್ಲಿನ ಮಾಲಕಿ ಮತ್ತು ಅವಳ ಮಗಳು ನಮ್ಮೊಂದಿಗೆ ಫೋಟೋ ತೆಗೆಯಬಹುದ ಎಂದು ನಾನು ಒಪ್ಪಿಗೆ ಪಡೆದು ನಮ್ಮದೊಂದು ಫೋಟೊ ತೆಗೆಸಿಕೊಂಡೆನು.

DSC01852
ಇಲ್ಲಿಂದ ಮುಂದೆ ನಾವು ಸರಕಾರದ ಕಛೇರಿ, ಬೌದ್ಧಮುನಿಗಳ ವಸತಿಯಿರುವ ಟಿಂಫೂ ಕೋಟೆಯನ್ನು-ಟಾಶಿಚೋ ಡ್ಸಾಂಗ್(Tashichho Dzong) ನೋಡಲು ಹೋದೆವು. ಅಲ್ಲೇ ಸಮೀಪದಲ್ಲಿ ರಾಜನ ವಾಸಸ್ಥಾನ, ಕಚೇರಿ ಇದೆ.

DSC01881     DSC01893
ನಮಗೆ ಮೊದಲೇ ಗೈಡ್ ಅಲ್ಲೆಲ್ಲಾ ನಾವು ಅರಮನೆಯ, ದೇವಸ್ಥಾನದೊಳಗಿನ ಫೋಟೋ ತೆಗೆಯಬಾರದೆಂದು ಎಚ್ಚರಿಕೆಯನ್ನಿತ್ತಿದ್ದ. ಅಲ್ಲಿ ಕೋಟೆಯೊಳಗೆ ನಾವು ಹೋದ ಸಂದರ್ಭದಲ್ಲಿ ಶಾಲಾ ಮಕ್ಕಳು ಮುಂದಿನ ಕೆಲವೇ ದಿನಗಳ ನಂತರ ಬರಲಿರುವ ಭಾರತೀಯ ರಾಷ್ಟ್ರಪತಿಯ ಸ್ವಾಗತಕ್ಕೆ ಹಾಡೊಂದನ್ನು ಅಭ್ಯಾಸ ಮಾಡುತ್ತಿದ್ದರು. ಸಮೂಹಗಾನವು ಆ ಚಿನ್ನಾರಿಗಳ ಕಂಠದಿಂದ ಇಂಪಾಗಿ ಹೊರಹೊಮ್ಮುತ್ತಿತ್ತು. ಅಲ್ಲಿನ ದೇವಾಲಯಗಳ, ಮಹಲುಗಳ ಗೋಡೆಯ ಮೇಲೆ ಬುದ್ಧನ ಉಪದೇಶ, ಅವನ ಜೀವಿತಾವಧಿಯಲ್ಲಿ ನಡೆದ ಘಟನೆಗಳು, ನೀತಿ ಬೋಧೆಗಳು ವರ್ಣಚಿತ್ರಗಳ ರೂಪದಲ್ಲಿ ಕಲಾವಿದನ ಕುಂಚಗಳಿಂದ ಚಿತ್ರಿತವಾಗಿದೆ.

DSC01903
ನಾವು ಈ ಕೋಟೆಯ ದರ್ಶನವಾದ ನಂತರ ನಾವು ಉಳಿದುಕೊಂಡ ಹೋಟೇಲಿಗೆ ವಾಪಾಸಾದೆವು. ನಮ್ಮ ಮುಂದೆ ಇನ್ನು ನಾಲಕ್ಕು ದಿನಗಳು, ಬಹಳಷ್ಟು ಅನುಭವಗಳು ಬಿಚ್ಚಿಕೊಳ್ಳಲು ನಮ್ಮನ್ನು ಕಾಯುತ್ತಿದ್ದವು. ಆ ದಿನ ರಾತ್ರಿ ನಾವು ಉಳಿದುಕೊಂಡಿದ್ದ ಹೋಟೆಲಿನವರು ಒದಗಿಸಿದ್ದ ಭೂತಾನಿನ ಸಾಂಪ್ರದಾಯಿಕ ಉಡುಪು ತೊಟ್ಟು ಅವರ ಊಟ ಮಾಡಿ ಅಲ್ಲಿನವರಾಗಲು ಪ್ರಯತ್ನಿಸಿದೆವು. ನಾವು ಮರುದಿನ ಬೆಳಗ್ಗೆ (ನವೆಂಬರ್ ೩-೨೦೧೪) ಟಿಂಫು ಪಟ್ಟಣದಿಂದ ಭುತಾನದ ಪ್ರಸಿದ್ದ, ಐತಿಹಾಸಿಕ ಪಟ್ಟಣವಾದ ಪುನಾಕಾಕ್ಕೆ ಹೊರಟೆವು.

ನಿಮ್ಮ ಟಿಪ್ಪಣಿ ಬರೆಯಿರಿ