Tag Archive | ಕಟ್ಮಂಡು

ಪಶುಪತಿನಾಥನ ಊರೆನಿಸಿದ ನೇಪಾಲ

ನಾವು ಭುತಾನಕ್ಕೆ ಹೋಗಲು ನಿಶ್ಚಯಿಸಿದಾಗ ಅಲ್ಲೇ ಹತ್ತಿರದ ಹಿಮಾಲಯದ ಇನ್ನೊಂದು ದೇಶವಾದ ನೇಪಾಲಕ್ಕೆ ಹೋಗಬೇಕೆಂದು ಆಲೋಚಿಸಿದೆವು. ನೇಪಾಲವು ಭೂತಾನದ ದಕ್ಷಿಣ-ಪಶ್ಚಿಮಕ್ಕಿದೆ. ಇದು ನಮ್ಮ ಪುರಾಣಕಾಲದಿಂದಲೂ ಈಗಿನ ಭಾರತ ದೇಶವೆಂದು ಕರೆಸಿಕೊಳ್ಳುವ ನಾಡಿನೊಂದಿಗೆ ಸಂಬಂಧಿತ ರಾಷ್ಟ್ರ. ಇಲ್ಲಿನ ರಾಷ್ಟ್ರ ಧರ್ಮ ಹಿಂದು, ಆದರೆ ಇಲ್ಲಿ ಅನ್ಯ ಧರ್ಮಗಳಾದ ಬೌದ್ಧ, ಕ್ರೈಸ್ತ, ಇಸ್ಲಾಂನ ಜನಗಳೂ ಇದ್ದಾರೆ. ಇದು ಹಿಂದೂಗಳಿಗೆ ಮತ್ತು ಬೌದ್ಧ ಧಾರ್ಮಿಕರಿಗೆ ವಿಶೇಷಪಟ್ಟ ಸ್ಥಳ. ಹಿಂದೂಗಳ ಪುಣ್ಯಕ್ಷೇತ್ರವೆನಿಸಿದ ಪಶುಪತಿನಾಥ ಮಂದಿರ ಇಲ್ಲಿನ ರಾಜಧಾನಿಯಾದ ಕಟ್ಮಂಡು ನಗರದಲ್ಲಿದೆ. ನಮ್ಮ ಪೌರಾಣಿಕ ಕಥೆಯಾದ ರಾಮಾಯಣದ ಸೀತಾಮಾತೆಯು ಇಲ್ಲಿನ ಜನಕಪುರಿಯವಳು. ಶಕ್ಯ ಮುನಿ ಗೌತಮ ಬುದ್ಧ ಜನಿಸಿದ ಲುಂಬಿನಿಯು ಇದೇ ದೇಶದ ಪಟ್ಟಣ ಮತ್ತು ಅವನು ಇಲ್ಲಿನ ಒಂದು ಕ್ಷತ್ರಿಯ ಪಂಗಡಕ್ಕೆ ಸೇರಿದವನು.
ನಾವು ಭುತಾನದ ಪ್ರವಾಸ ಮುಗಿಸಿ ಪಾರೋ ವಿಮಾನ ನಿಲ್ದಾಣದಿಂದ ಡ್ರುಕ್ ವಾಯುಸಂಸ್ಥೆಯ ವಿಮಾನದಲ್ಲಿ ನವೆಂಬರ್ ೭-೨೦೧೪ ರ ಬೆಳಗ್ಗೆ ಕಟ್ಮಂಡುವಿಗೆ ಹೊರಟೆವು. ಆ ದಿನ ನಮ್ಮ ದೇಶದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪಾರೊ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅದರಿಂದಾಗಿ ನಮ್ಮ ಪ್ರಯಾಣವು ವಿಳಂಬವಾಯಿತು. ಭುತಾನ ಮತ್ತು ನೇಪಾಲಗಳೆರಡೂ ಭಾರತ ದೇಶದೊಂದಿಗೆ ಭೌಗೋಳಿಕವಾಗಿ, ಆರ್ಥಿಕವಾಗಿ ಮತ್ತು ದೈನಂದಿನ ಎಷ್ಟೋ ಜೀವನದ ಅಗತ್ಯಗಳ ಪೂರೈಕೆಗೆ ಆವಲಂಬಿಸಿವೆ. ನಾವು ಸ್ನೇಹಪರರಾಗಿರುವ ನೆರೆ ರಾಷ್ಟ್ರಗಳೊಡನೆ ಯಾವತ್ತೂ ಒಳ್ಳೆ ಸಂಬಂಧವನ್ನಿಟ್ಟುಕೊಂಡುದು ಐತಿಹಾಸಿಕ ಸತ್ಯ. ಹಾಗಾಗಿ ಭಾರತೀಯರಿಗೆ ಇಲ್ಲೆಲ್ಲ ಒಳ್ಳೆ ಗೌರವವಿದೆ.ನಮ್ಮ ರೂಪಾಯಿ ನೋಟುಗಳನ್ನು ಅಲ್ಲಿ ಬಳಸಲು ಏನೂ ತಡೆಗಳಿರಲಿಲ್ಲ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಚೆನ್ನಾಗಿಲ್ಲದ ಕಾರಣ ನಾವು ನಮ್ಮ ಕೈಚೀಲ, ಪೆಟ್ಟಿಗೆಗಳನ್ನು ಪಡಕೊಳ್ಳಲು ತುಂಬಾ ಕಾಯಬೇಕಾಗಿ ಬಂತು. ಎಲ್ಲೆಡೆಯಲ್ಲೂ ವಿದೇಶೀ ಯಾತ್ರಿಕರು ಕಂಡು ಬರುತ್ತಾರೆ. ಅವರಲ್ಲಿ ಬಹಳಷ್ಟು ಮಂದಿ ಹಿಮಾಲಯದ ಪರ್ವತಗಳನ್ನು ಏರಿ ನೋಡುವ, ಜನಜೀವನವನ್ನುಕಂಡು ಅನುಭವಿಸುವ ಕುತೂಹಲಕ್ಕಾಗಿ ಬಂದಿರುವವರು. ನಾವು ಉಳಿದಿದ್ದ ಹೋಟೇಲಿನಲ್ಲಿ ಬಹಳ ಚೀನೀಯರು, ಕೊರಿಯನ್ನರು ಬಂದಿದ್ದರು, ಅವರಿಗೆ ಬೌದ್ಧ ಸ್ಥಳಗಳನ್ನು ನೋಡಲು ಆಸಕ್ತಿ.
ನಾನಿಲ್ಲಿ ನೇಪಾಲದ ಇತಿಹಾಸವನ್ನು ಹೇಳಲು ಬಯಸುವುದಿಲ್ಲ. ನನಗೆ ಅಲ್ಲಿನ ಜನರನ್ನು, ಅವರ ಬದುಕನ್ನು ಕಂಡಾಗ ಮೂಡಿದ ಅಭಿಪ್ರಾಯ, ಅನಿಸಿಕೆಗಳನ್ನಷ್ಟೇ ಹೇಳುತ್ತೇನೆ. ನೇಪಾಲದಲ್ಲಿ೨೦೦೮ರಲ್ಲಿ ರಾಜವಂಶವು ದೇಶದ ಆಡಳಿತದಿಂದ ಹೊರ ಬಂದ ನಂತರ ಈಗ ಪ್ರಜಾಪ್ರಭುತ್ವ ಬಂದಿದೆ. ಇದಿನ್ನೂ ಕೇವಲ ಪ್ರಾರಂಭದ ಹಂತದಲ್ಲಿರುವ ಪ್ರಜಾ ಸರಕಾರವಾದುದರಿಂದ ಅವ್ಯವಸ್ಥೆ ಹಾಗೂ ಅಧಿಕಾರಿಗಳ ವಂಚನೆ, ಮೋಸಗಳಿಂದ ದೇಶದಲ್ಲಿ ಬಡತನ, ಅವ್ಯವಸ್ಥೆ ಕಣ್ಣು ಕುಕ್ಕುವಂತಿದೆ. ಇಲ್ಲಿ ವಿದ್ಯುತ್ ಶಕ್ತಿ, ಆಹಾರ, ಇಂಧನ, ಅನಿಲ,ವಾಹನ ಎಲ್ಲವೂ ತುಟ್ಟಿ. ವಿದ್ಯುತ್ ಸರಬರಾಜು ಕೇವಲ ದಿನದಲ್ಲಿ ೧೨ ಗಂಟೆಗಳಂತೆ, ಅದು ಕಟ್ಮಂಡುವಿನಂತಹ ದೊಡ್ಡ ನಗರದಲ್ಲಿ. ಹಾಗಾಗಿ ಬಡವರ್ಗದ ಜನರ ಕಾರ್ಪಣ್ಯ ಎಲ್ಲೆಲ್ಲೂ ಕಾಣುತ್ತದೆ. ಹಾಗಿದ್ದರೂ ನಮಗೆ ಅಲ್ಲಿನ ಜನರ ನಗುಮುಖ, ಜೀವನೋತ್ಸಾಹ, ನಿರಂತರ ಕಾರ್ಯಪ್ರವೃತ್ತರಾಗಿರುವ ಪರಿ ಅಚ್ಚರಿ ಬರಿಸಿದವು. ಅಲ್ಲಿ ಹೆಂಗಸರು ಮನೆಯ ಹೊರಗಿನ ಕೆಲಸಗಳಲ್ಲಿ ತುಂಬಾ ಭಾಗವಹಿಸುತ್ತಾರೆ. ಇನ್ನೊಂದು ವಿಶೇಷಕರವಾದ ಸಂಗತಿ(ನನಗೆ ಮಾತ್ರ) ಅಲ್ಲಿ ಮಾಂಸಹಾರಿಗಳೇ ಹೆಚ್ಚಿಗೆ, ಅಲ್ಲೆಲ್ಲಾ ಮೊದಲಿಂದಲೂ ದಿನನಿತ್ಯದ ಆಹಾರದಲ್ಲಿ ಮಾಂಸಾಹಾರ ಸಾಮಾನ್ಯ. ಇಲ್ಲಿನ ಮುಖ್ಯ ಆಹಾರ ಬೆಳೆ ಅಕ್ಕಿ, ಗೋಧಿ ಹಾಗೂ ನಮ್ಮ ಭಾರತೀಯ ಪದ್ಧತಿಯ ಬೇಳೆ ಕಾಳುಗಳು, ತರಕಾರಿ. ನಾವು ಉಳಿದುಕೊಂಡುದು ಸೋಲ್ಟಿ ಎಂಬ ಜಾಗದಲ್ಲಿ, ಅಲ್ಲಿಂದ ಪಶುಪತಿನಾಥ ದೇವಸ್ಥಾನ ೬ಕಿಮೀ. ದೂರದಲ್ಲಿದೆ. ನಾವು ಹೋದ ದಿನವೇ ಸಾಯಂಕಾಲ ಪಶುಪತಿನಾಥ ದೇವಸ್ಥಾನಕ್ಕೆ ಹೋದೆವು. ಆ ದಿನ ನಮಗೆ ಹೆಚ್ಚೇನು ನೋಡಲಾಗಲಿಲ್ಲ. ಅದಾಗಲೇ ಪೂಜೆ ಮುಗಿದು ಅರ್ಚಕರು ಗರ್ಭಗುಡಿಯನ್ನು ಮುಚ್ಚಲು ಪ್ರಾರಂಭಿಸಿದ್ದರು.

WP_20141107_035
ಪಶುಪತಿನಾಥ ದೇವಸ್ಥಾನ ಸುಮಾರು ಕ್ರಿ.ಶ. ೪೦೦ ರ ಕಾಲದ್ದೆಂದು ಈ ವರೆಗಿನ ಮಾಹಿತಿಗಳು ತಿಳಿಸುತ್ತದೆ, ಅದಕ್ಕಿಂತಲೂ ಹಿಂದಿನದೂ ಇರಬಹುದು. ಈ ಶಿವ ದೇವಸ್ಥಾನ ಹಿಂದೂಗಳ ಪವಿತ್ರವಾದ ಕ್ಷೆತ್ರ. ಇಲ್ಲಿ ಶಿವನನ್ನು ಪಶುಪತಿ ಅರ್ಥಾತ್ ಮೃಗಗಳ ಒಡೆಯನೆಂದು ಹೇಳಲಾಗುತ್ತದೆ. ಇದು ಭಾಗಮತಿ ನದೀ ತೀರದಲ್ಲಿದೆ. ಕಟ್ಮಂಡು ಕಣಿವೆಯಲ್ಲಿ ಹುಟ್ಟಿ ಭಾಗಮತಿ ನದಿ ಮುಂದಕ್ಕೆ ಹರಿದು ದೇವನದಿಯಾದ ಗಂಗೆಯನ್ನು ಸೇರುತ್ತದೆ. ಹಾಗಾಗಿ ಇದನ್ನು ಗಂಗೆಗೆ ಸಮಾನವಾಗಿ ಭಾವಿಸುತ್ತಾರೆ. ಈ ನದೀ ತೀರದಲ್ಲಿ ಸತ್ತವರ ಅಂತ್ಯ ಕ್ರಿಯೆಗಳನ್ನು ಮಾಡುತ್ತಾರೆ. ದೇವಸ್ಥಾನದ ವಿಶಾಲವಾದ ಆವರಣದೊಳಗೆ ಆಶ್ರಮ, ಚಿಕ್ಕ ಗುಡಿಗಳು ಅರಸರ ಕಾಲದ ಕೆತ್ತನೆಗಳು, ಶಿಲಾಶಾಸನಗಳು ಇವೆ. ಗರ್ಭಗುಡಿಯೊಳಗಿರುವ ಶಿವಲಿಂಗ ೬ ಅಡಿ ಎತ್ತರದ್ದಾಗಿದ್ದು,ಅದರ ನಾಲ್ಕು ಮೈಯಲ್ಲಿ ಶಿವನ ಮುಖವನ್ನು ಕೆತ್ತಲಾಗಿದೆ. ಶಿವಲಿಂಗವನ್ನು ಬೆಳಗ್ಗಿನ ಪೂಜೆಯ ಕಾಲದಲ್ಲಿ ಚಿನ್ನದ ಅಲಂಕಾರಿಕ ಹೊದಿಕೆಯನ್ನು ಕಳಚಿ ಅಭಿಷೇಕ(ರುದ್ರಾಭಿಷೇಕ)ವಾದ ನಂತರ ಪುನಃ ತೊಡಿಸುತ್ತಾರೆ. ಈ ಮಂದಿರ ತಿಳಿದ ಮೂಲಗಳಿಂದ ವಿವಿಧ ರಾಜರ ಕಾಲದಲ್ಲಿ ೩-೪ ಬಾರಿ ಹೊಸದಾಗಿ ನಿರ್ಮಿಸಲ್ಪಟ್ಟಿದೆ. ಇದರನ್ನು ಯುನೆಸ್ಕೋದವರು ಈ ವಿಶ್ವದ ಪರಂಪರಾಗತ ಸ್ಥಳವೆಂದು (World Heritage Site) ಗಣಿಸಿದ್ದಾರೆ.ಈ ದೇವಸ್ಥಾನಕ್ಕೆ ಕೇವಲ ಹಿಂದೂಗಳು ಮಾತ್ರ ಪ್ರವೇಶ ಮಾಡಬಹುದಷ್ಟೆ ! ೮ನೇ ಶತಮಾನದ ಕಾಲದಲ್ಲಿ ಗಜನಿ ಮೊಹ್ಮದನ ಕುದೃಷ್ಟಿ ಇದರ ಸಂಪತ್ತಿನ ಮೇಲೆ ಬಿದ್ದು ಧಾಳಿ ನಡೆಸಿದ್ದನಂತೆ. ಇದು ನೇಪಾಲದ ಹೆಮ್ಮೆಯ ದೇವಸ್ಥಾನ. ದೇವಸ್ಥಾನದ ಪಕ್ಕದಲ್ಲೇ ಪ್ರತ್ಯೇಕವಾಗಿ ದೇವಿ(ದುರ್ಗೆ)ಯ ಶಕ್ತಿ ಪೀಠವಿದೆ.

 

2775996-Pashupatinath-Temple-0           caa5b6a4612b11e2a7ee000c29f65e19.jpegpashupathi     pashupatinath-temple

ದೇವಾಲಯದೊಳಗೆ ಕ್ಯಾಮರಾ ,ಫೊಟೊ ನಿಷಿದ್ಧವಾದುದರಿಂದ ನಾನು ಅಂತರ್ಜಾಲದಲ್ಲಿದ್ದ ಫೋಟೋಗಳನ್ನೇ ಹಾಕಿದ್ದೇನೆ.
ನಾವು ದೇವಸ್ಥಾನವನ್ನು ನೋಡಲು ಉತ್ಸುಕರಿದ್ದಷ್ಟೇ ಅಲ್ಲಿನ ಮುಖ್ಯ ಪೂಜಾರಿಯಾಗಿರುವ ರಾವಲ್ ಗಣೇಶ ಭಟ್ಟರನ್ನೂ ಭೇಟಿಯಾಗಲು ಉತ್ಸುಕರಿದ್ದೆವು. ನಾನು ಅಲ್ಲಿನ ದೇವಸ್ಥಾನದಲ್ಲಿ ಮುಖ್ಯ ಪುರೋಹಿತ ಸ್ಥಾನದಲ್ಲಿ ದಕ್ಷಿಣ ಕನ್ನಡದ ಉಡುಪಿಯ ಮೂಲದವರು ಇದ್ದಾರೆಂದು ಲೇಖನವೊಂದರಲ್ಲಿ ಓದಿದ್ದೆ. ಈ ದೇವಾಲಯದಲ್ಲಿ ಪುರೋಹಿತರನ್ನು ದಕ್ಷಿಣ ಭಾರತದಿಂದಲೇ ಬರಮಾಡಿಕೊಳ್ಳುವ ಪದ್ಧತಿ ಶತಮಾನಗಳಿಂದ ಬಂದಿದೆಯೆಂದು ಪ್ರತೀತಿ. ಹಾಗಾಗಿ ನಾವು ಅವರನ್ನು ಕಾಣಲು ಹೋದೆವು. ಅವರು ನಮಗೆ ಅಲ್ಲಿನ ದೇವಾಲಯ, ಪದ್ಧತಿ, ಸರಕಾರ ಅವುಗಳ ಬಗ್ಗೆ ತಮ್ಮ ಸ್ವಂತ ಅನುಭವಗಳನ್ನು ತಿಳಿಸಿದರು. ನಾವು ಕೊನೆಯ ದಿನ ಅವರು ಹೇಳಿದಂತೆ ಬೆಳಗ್ಗೆ ಬೇಗನೇ ಹೋಗಿ ರುದ್ರಾಭಿಷೇಕ ಪೂಜೆ, ಸೇವೆಯನ್ನು ಮಾಡಿಸಿದೆವು. ಅಲ್ಲಿ ನಾವ್ಯಾರೂ ಪೂಜೆಗೆ ಹೂವನ್ನು ಕೊಂಡೊಯ್ಯುವಂತಿಲ್ಲ, ಪ್ರಾಯಶಃ ಇದು ಗರ್ಭಗುಡಿಯನ್ನು, ಆಲಯದ ಪ್ರಾಂಗಣವನ್ನು ಶುಚಿಯಾಗಿರಿಸಿಕೊಳ್ಳಲು ಮಾಡಿರುವ ನಿಯಮವಿರಬಹುದು. ನಾವು ಅಲ್ಲಿನ ರೂಢಿಯಂತೆ ಅಲ್ಲೇ ಹತ್ತಿರದ ಅಂಗಡಿಯಿಂದ ರುದ್ರಾಕ್ಷಿ ಮಾಲೆಯನ್ನು ಕೊಂಡೊಯ್ದು ಕೊಟ್ಟೆವು. ಅದನ್ನು ಪೂಜೆಯ ನಂತರ ಪೂಜಾರಿಯು ಶಿವಲಿಂಗಕ್ಕೆ ಮುಟ್ಟಿಸಿ ಪ್ರಸಾದವೆಂದು ನಮಗೆ ಹಿಂದಕ್ಕಿತ್ತರು. ನದೀ ತೀರ, ನಂತರ ದೇವಸ್ಥಾನದ ಭಕ್ತ ಜನರು, ಮೈಮೇಲೆಲ್ಲಾ ವಿಭೂತಿ ಬಳಿದಿದ್ದ ನಾಗ ಸಾಧುಗಳನ್ನು ನೋಡುತ್ತಾ ಅಲ್ಲೇ ಅಡ್ಡಾಡಿದೆವು. ಬೆರಗಿನಿಂದ ಆವರಣದೊಳಗೆ ಅಡ್ಡಾಡುತ್ತಿದ್ದ ವಾನರ ಸೇನೆ, ಪಾರಿವಾಳಗಳನ್ನು,ಮೇಕೆ,ದನ ಇನ್ನಿತರ ಪ್ರಾಣಿಗಳನ್ನು ಒಡೆಯನಾದ ಪಶುಪತಿನಾಥನ ಸಾನ್ನಿಧ್ಯದಲ್ಲಿ ಕಂಡೆವು. ಬಹುಶಃ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿರಿಸಿಕೊಂಡರೆ ಯಾತ್ರಿಕರಿಗೆ ಭಕ್ತಿಭಾವ ಮೂಡಲು, ಆ ಪ್ರದೇಶದ ಸೌಂದರ್ಯವನ್ನು ಗ್ರಹಿಸಲು ಹೆಚ್ಚು ಉಪಯೋಗವಾಗುತ್ತಿತ್ತು.

DSC03028

ಕಟ್ಮಂಡು ಕಣಿವೆ ಬಹಳ ವಿಶಾಲವಾಗಿ ದೊಡ್ಡ ಬೋಗುಣಿಯಾಕಾರದಲ್ಲಿದೆ. ಇದರನ್ನು ಹಿಮಾಲಯದ ತಪ್ಪಲಿನ (೮೦೦೦ ಅಡಿಗಳಿಗಿಂತ ಎತ್ತರದ) ಬೆಟ್ಟಗಳು ಸುತ್ತುವರಿದು ಆ ಒಳಗಿನ ತಗ್ಗಿನ ಜಾಗದಲ್ಲಿ ಎಷ್ಟೋ ವರ್ಷಗಳಿಂದ ಜನವಸತಿ, ಊರು, ಹಳ್ಳಿಗಳು ಬೆಳೆದು ಬಂದಿವೆ. ಮೊದಲಿಂದ ಬಂದ ಹಳೆ ಕತೆ ಹೇಳುವಂತೆ ಈ ಕಣಿವೆ ಬಹಳ ಪೂರ್ವಕಾಲದಲ್ಲಿ ಪೂರ್ತಿಯಾಗಿ ನೀರಿಂದ ತುಂಬಿದ್ದು ಮನುಷ್ಯ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಬೌದ್ಧ ಸಂತ ಮಂಜುಶ್ರೀ ತನ್ನ ಖಡ್ಗದಿಂದ ಬೆಟ್ಟಗಳ ಸಾಲನ್ನು ಒಂದು ಪಕ್ಕದಲ್ಲಿ ಕತ್ತರಿಸಿ ಅದನ್ನು ಸರಿಸಿ ನೀರು ಹೊರಹೋಗುವಂತೆ ಮಾಡಿದನಂತೆ. ಪ್ರಾಯಶಃ ಹಿಮಾಲಯದ ಬೆಟ್ಟಗಳಲ್ಲಿ ಭೂಕಂಪ ನಡೆದು ಭೌಗೋಳಿಕವಾದ ಬದಲಾವಣೆ ನಡೆದಿರಬಹುದು. ಆ ಘಟನೆ ಆಗಿನ ಕಾಲದಲ್ಲಿ ಈ ರೀತಿಯಾಗಿ ಜನ ಸಾಮಾನ್ಯರಲ್ಲಿ ಕತೆಯಾಗಿ ಪ್ರಚಲಿತವಾಗಿರಬಹುದು. ಆ ಸರೋವರದ ಮಧ್ಯದಲ್ಲಿ ಕಮಲದ ಹೂವುಗಳು ಬೆಳೆಯುತ್ತಿದ್ದವು. ಹೂವು ಬೆಳೆಯುವ ಮಧ್ಯದ ಜಾಗದಲ್ಲಿ ಸ್ವಯಂಭು- ಸಣ್ಣದಾದ ಗುಡ್ಡವು ಉದ್ಭವವಾಯಿತು, ಅದರ ಮೇಲೆ ಮುಂದೆ ಹಿಂದೂಗಳಿಗೆ ಮತ್ತು ಬೌದ್ಧರಿಗೆ ಇಬ್ಬರಿಗೂ ಪಾವನವೆಂದು ಭಾವಿಸುವ ದೇವಾಲಯವೊಂದು ಬಂತು. ಅಲ್ಲಿಂದ ಮತ್ತೆ ನೀರಿಲ್ಲದ ಜಾಗದಲ್ಲಿ ಕ್ರಮೇಣ ಜನವಸತಿ, ರಾಜ್ಯ ಬೆಳೆದು ಬಂತು. ಇನ್ನೊಂದು ಕತೆಯ ಪ್ರಕಾರ ಶ್ರೀಕೃಷ್ಣ ತನ್ನ ಸುದರ್ಶನ ಚಕ್ರದಿಂದ ಬೆಟ್ಟವನ್ನು ಕತ್ತರಿಸಿ ನೀರು ಹರಿದು ಹೋಗಲು ದಾರಿ ಮಾಡಿದನು. ಆ ನಂತರ ಅಲ್ಲಿ ಗೋಪಾಲಕರು ತಮ್ಮ ಗೋಹಿಂಡುಗಳೊಂದಿಗೆ ಅಲ್ಲಿ ವಾಸವಾಗಿದ್ದರು. ಆ ಕಣಿವೆ ಪ್ರದೇಶ ಮೊದಲಿಗೆ ಜಲಾವೃತವಾಗಿದ್ದ ಪ್ರದೇಶವೆಂದು ಭೂಮಿಯ ಭೌಗೋಳಿಕ ಅಧ್ಯಯನ ಮಾಡಿದವರು ಅಭಿಪ್ರಾಯ ಪಟ್ಟಿದ್ದಾರೆ.

ನಾವು ಎರಡನೆ ದಿನ ಅಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ಭಕ್ತಪುರ ಎಂಬ ಊರಿಗೆ ಹೋದೆವು. ಹೋಗುವ ದಾರಿಯಲ್ಲಿ ಸಮೀಪದ ಸಣ್ಣ ಬೆಟ್ಟಗಳನ್ನು ಏರಿ ದೂರದ ಹಿಮಾಲಯ ಶ್ರೇಣಿಗಳನ್ನು ನೋಡುತ್ತಾ ಸಾಗಿದೆವು. ದಾರಿಯಲ್ಲಿ ಕಾಣ ಸಿಗುವ ಭತ್ತದ ಗದ್ದೆ, ರೈತರು, ಹಳ್ಳಿಯೊಳಗಿನ ಜೀವನ ಇವೆಲ್ಲಾ ನಿಜವಾದ ನೇಪಾಲ ಏನೆಂಬುವುದನ್ನು ತೋರಿಸಿದವು.

DSC03067             WP_20141108_016     WP_20141108_020

 

ಭಕ್ತಪುರ ಕಟ್ಮಂಡು ಕಣಿವೆಯೊಳಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿದೆ. ಈ ಊರು ಕಣಿವೆಯೊಳಗಿನ ಮೂರನೆ ದೊಡ್ಡ ಪಟ್ಟಣ. ಇದು ಕಟ್ಮಂಡು ಪಟ್ಟಣದಿಂದ ೮ಕಿ.ಮೀ ದೂರದಲ್ಲಿದೆ.ಇದು ೧೫ನೇ ಶತಮಾನದ ಕಾಲದಲ್ಲೇ ಮಲ್ಲರಾಜರು ಆಡಳಿತ ನಡೆಸುತ್ತಿದ್ದ ಮುಖ್ಯ ಪಟ್ಟಣ. ಇಲ್ಲಿನ ಜನಸಂಖ್ಯೆಯ ಬಹುಪಾಲು ಕ್ಷತ್ರಿಯರಾದ ನೇವಾರಿಗಳೇ ಇದ್ದಾರೆ. ಇದು ನೇಪಾಲದ ಲಲಿತ ಕಲೆಗಳ ಕೇಂದ್ರಬಿಂದುವಾಗಿದೆ. ಇಲ್ಲಿನ ವಾಸ್ತು ಶಿಲ್ಪ, ಮರದ ಕೆತ್ತನೆಯ ಕೆಲಸಗಳು, ಬಟ್ಟೆ-ನೆಯ್ಗೆಗಳು ತುಂಬಾ ಪ್ರಸಿದ್ಧ. ಎಷ್ಟೋ ವರ್ಷಗಳಿಂದ ಭಾರತ- ಟಿಬೆಟಿಗೆ ನಡುವಿನ ವಾಣಿಜ್ಯಸಂಪರ್ಕ ಈ ನಗರಿಯ ಮೂಲಕವೇ ನಡೆಯುತ್ತಿತ್ತು. ಕೋಟೆಯೊಳಗೆ ಅರಮನೆ, ದೇವಾಲಯಗಳು, ಹಲವಾರು ಹಳೇ ಕಾಲದ ಕಟ್ಟಡಗಳು ಮತ್ತು ದರ್ಬಾರು ನಡೆಯುತ್ತಿದ್ದ ಚೌಕಿ ಸುಂದರವಾಗಿದೆ. ಅಲ್ಲಿ ಒಂದು ಭಾಗದಲ್ಲಿ ಕೇವಲ ಕರಕುಶಲ ಸಾಮಾನುಗಳು, ಕಲಾಕಾರರ ಕೈ ಚಳಕವನ್ನು ಮೆರೆಯುವ ಚಿತ್ರಕಲೆಗಳು, ಅಲ್ಲಿನ ಪ್ರಸಿದ್ಧ ವಸ್ತ್ರಗಳು ಮಾರಾಟಕ್ಕಿಟ್ಟದ್ದನ್ನು ಕಂಡೆವು. ನಾವು ಘೂರ್ಕಾ ಮಂದಿ ಬಳಸುವ ಚಾಕು, ಚಮರೀ ಮೃಗದ ಎಲುಬಿನಿಂದ ಮಾಡಿದ ಬುದ್ಧನ ಮುಖ, ಹಿಮಾಲಯದ ದೃಶ್ಯವನ್ನು ಸೆರೆಹಿಡಿದ ಕಲಾವಿದನೊಬ್ಬನ ಪೈಂಟಿಂಗ್ ಎಂದು ಕೆಲವೊಂದು ವಸ್ತುಗಳನ್ನು ಕೊಂಡೆವು. ನಾವು ಹೋದಲ್ಲೆಲ್ಲಾ ಮುಂಬರುವ ಸಾರ್ಕ್ ಸಮ್ಮೇಳನಕ್ಕೆಂದು ರಸ್ತೆ, ಕಟ್ಟಡಗಳು, ಐತಿಹಾಸಿಕ ಸ್ಥಳಗಳು ರಿಪೇರಿ, ಬಣ್ಣಗಳಿಂದ ನವೀಕೃತಗೊಳ್ಳುತ್ತಿದ್ದವು. ನಾವು ನೋಡಿದ ಪಟ್ಟಣಗಳೆಲ್ಲಾ ಜನದಟ್ಟಣಿಯ ಪ್ರದೇಶಗಳಾಗಿದ್ದವು. ಭಕ್ತಪುರವನ್ನು ಮಧ್ಯಾಹ್ನದೊಳಗೆ ನೋಡಿ ಮುಗಿಸಿದೆವು.

DSC03111       DSC03139

 

ಭಕ್ತಪುರವನ್ನು ನೋಡಿ ನಾವು ಪುನಃ ಕಟ್ಮಂಡು ಪಟ್ಟಣವನ್ನು ಪ್ರವೇಶಿಸಿದೆವು. ಅಲ್ಲಿನ ಮುಖ್ಯ ಜಾಗವಾದ ಊರಿನ ಮಧ್ಯದಲ್ಲಿರುವ ಕಟ್ಮಂಡು ದರ್ಬಾರ್ ಚೌಕಿ, ಅರಮನೆ, ಕುಮಾರಿ ಅರಮನೆಗಳನ್ನು ನೋಡಲು ಹೋದೆವು. ಇದು ತೀರ ಇತ್ತೀಚೆಗಿನ ವರೆಗೆ ಅಲ್ಲಿನ ರಾಜರ ವಾಸಸ್ಥಾನ, ಆಡಳಿತ ಕಛೇರಿಯಿದ್ದ ಜಾಗವಾಗಿತ್ತು. ಒಂದೇ ಮರದಿಂದ ಕಟ್ಟಿದ “ಕಾಷ್ಠಮಂಡಪ್” (ಕಾಷ್ಠ-ಮರ) ಮಂಟಪವು ಆ ಕಾಲದಲ್ಲಿ ಹೊಸದಾಗಿ ಆಗಮಿಸಿದ ಯಾತ್ರಿಕರಿಗೆ, ಜನರಿಗೆ ತಂಗುವ, ವಿಶ್ರಮಿಸುವ ಸ್ಥಳವಾಗಿತ್ತು.

DSC03278

ಇದು ಸುಮಾರು ೧೬ನೇ ಶತಮಾನದ ಕಾಲದಲ್ಲಿ ರಾಜ ಲಕ್ಷೀನರಸಿಂಹ ಮಲ್ಲನಿಂದ ಕಟ್ಟಿಸಲಾಯಿತು ಎಂದು ಹೇಳಲಾಗುತ್ತದೆ. ಇದು ಪಗೋಡಾ ಮಾದರಿಯ ಮೂರು ಅಂತಸ್ತಿನ, ಮರದಿಂದ ಮಾಡಿದ ದೇವಾಲಯ, ಪ್ರವಾಸಿಗಳ ತಂಗುದಾಣ. ಕ್ರಮೇಣ ಊರಿನ ಪ್ರಮುಖ ಜಾಗವಾಗಿ ಊರಿಗೂ ತನ್ನ ಹೆಸರನ್ನೇ ಕೊಟ್ಟಿತು.

DSC03198        DSC03267      DSC03273

 

ಅಲ್ಲಿನ ಅರಮನೆ, ದೇವಾಲಯಗಳು ತುಂಬಾ ಕೆತ್ತನೆ ಕೆಲಸಗಳಿಂದ ತುಂಬಿ ಹೋಗಿವೆ. ನಮ್ಮ ಹಿಂದೂ ಪೌರಾಣಿಕ ಕಥೆಗಳ ಸನ್ನಿವೇಶಗಳನ್ನು ದೇವಾಲಯದ ಸುತ್ತಲಿನ ಗೋಡೆಗಳ ಮೈಮೇಲೆ ಕೆತ್ತಲಾಗಿದೆ. ನೇಪಾಲದ ಈ ಎಲ್ಲ ಕೋಟೆ, ಮಂದಿರ, ಅರಮನೆಗಳು ಪ್ರಪಂಚದ ಪ್ರೇಕ್ಷಣೀಯ ಸ್ಥಳಗಳಲ್ಲೊಂದೆಂದು ಪರಿಗಣಿಸಲ್ಫಟ್ಟಿದೆ. ಸಾಮಾನ್ಯವಾಗಿ ಕಾಣಲು ಸಿಗದ ವಿಶೇಷವಾದ ಕುಮಾರಿ ದೇವಿಯ ಮಂದಿರ ನಮ್ಮ ಆಸಕ್ತಿಯನ್ನು ಕೆರಳಿಸಿತ್ತು. ಅದು ಈ ದರ್ಬಾರ್ ಚೌಕಿ, ಅರಮನೆ, ಕಾಷ್ಟಮಂದಿರಗಳ ಸಮೀಪದಲ್ಲೇ ಇದೆ. ಈ ಹಳೇ ಕಾಲದ ಅರಮನೆಯಲ್ಲಿ ನೇಪಾಲೀ ಜನರ ಗೌರವ, ಆದರಕ್ಕೆ ಒಳಗಾಗುವ ಕುಮಾರಿದೇವಿ ವಾಸವಿದ್ದಾಳೆ. ಈ ಪ್ರಾಚೀನ ಪದ್ಧತಿ ಕೇವಲ ನೇಪಾಲದಲ್ಲಿ ಮಾತ್ರ ಬಳಕೆಯಲ್ಲಿದೆ. ಅಲ್ಲಿನ ಶಕ್ಯ (ಕ್ಷತ್ರಿಯ ಜನರ) ಪಂಗಡಕ್ಕೆ ಸೇರಿದ ಮೂರು ವರ್ಷ ಪ್ರಾಯದ ಹುಡುಗಿಯನ್ನು ದೇವಿಯ ಸ್ಥಾನಕ್ಕೆ ಅರಿಸಲಾಗುತ್ತದೆ. ಆ ಹೆಣ್ಣು ಮಗುವಿನಲ್ಲಿ ಅವರು ಬಹಳಷ್ಟು ಲಕ್ಷಣಗಳನ್ನು,ಗುಣಗಳನ್ನು ಬಯಸುತ್ತಾರೆ. ಮಗು ಒಳ್ಳೆ ಕುಲದ, ನೋಡಲು ಲಕ್ಷಣವಂತಳು ಮತ್ತು ಧೈರ್ಯವಂತಳು ಇರಬೇಕು. ಅವಳ ಆ ಅಲ್ಪಕಾಲದ ಬದುಕಿನಲ್ಲಿ ಒಮ್ಮೆಯೂ ರಕ್ತವನ್ನು ಕಳೆದುಕೊಂಡಿರಬಾರದು, ಅರ್ಥಾತ್ ಅವಳ ದೇಹಕ್ಕೆ ಎಂದೂ ಗಾಯವಾಗಿರಬಾರದು, ರಜಸ್ವಾಲೆಯಾಗದವಳಿರಬೇಕು. ಅಂತಹ ಹೆಣ್ಣುಮಗುವನ್ನು ಆರಿಸಿ, ನಂತರ ಧಾರ್ಮಿಕ ಪದ್ಧತಿಗನುಸಾರವಾಗಿ ಸ್ವೀಕರಿಸುತ್ತಾರೆ. ಬಳಿಕ ಅವಳಿಗೆ ಆ ಅರಮನೆಯೊಳಗೆ ಶಾಸ್ತ್ರ-ವಿಧಿ, ವಿದ್ಯಾಭ್ಯಾಸ ಇವುಗಳನ್ನು ಮಾಡಿಸಲಾಗುತ್ತದೆ. ಅಲ್ಲಿ ಅವಳ ಸಮ ವಯಸ್ಸಿನ ಬೇರೆ ಹುಡುಗಿಯರ ಒಡನಾಟ ದೊರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಅವಳು ಎಂದೂ ಹೊರ ಜಗತ್ತಿನೊಂದಿಗೆ ಸಂಪರ್ಕವಿಟ್ಟುಕೊಳ್ಳುವಂತಿಲ್ಲ. ಈ ಬಾಲಿಕೆಯನ್ನು ದೇವಿ ಮಾ, ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಈ ದೇವಿ ಸ್ವರೂಪಿ ಕನ್ಯೆ ಯಾವತ್ತು ಮೈ ನೆರೆಯುತ್ತಾಳೋ ಆಗ ಅವಳನ್ನು ಆ ಪದವಿಯಿಂದ ನಿವೃತ್ತಳನ್ನಾಗಿ ಮಾಡಲಾಗುತ್ತದೆ. ಅವಳ ಮುಂದಿನ ಜೀವನ ನಿರ್ವಹಣೆಗೆ ಬೇಕಿರುವ ಸವಲತ್ತನ್ನು ವೇತನ ರೂಪದಲ್ಲಿ ಕೊಡುತ್ತಾರೆ. ಬಹಳಷ್ಟು ನಿವೃತ್ತ ದೇವಿಯಂದಿರು ತಮ್ಮ ಪೂರ್ವ ಕುಟುಂಬಕ್ಕೆ ಮರಳಿ ವಿದ್ಯಾಭ್ಯಾಸ ಹೊಂದಿ ಸರಿಯಾದ ಜೀವನವನ್ನು ನಡೆಸುತ್ತಾರೆ. ಅವರು ಸಾಮಾನ್ಯ ಜೀವನದಿಂದ ವಂಚಿತರಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಎಷ್ಟೊ ಶಕ್ಯ ಕುಟುಂಬಗಳು ತಮ್ಮ ಮಗಳನ್ನು ಆ ಪಟ್ಟಕ್ಕೆ ಕಳುಹಲು ಹಾತೊರೆಯುತ್ತಾರೆ. ಮೊದಲಂತಸ್ತಿನ ತೆರೆದ ಜಗಲಿಯಿಂದ ಕುಮಾರಿ ದೇವಿಯ ದರ್ಶನವಾಯಿತು.

WP_20141108_052      DSC03318      DSC03368

ನಂತರ ನಾವು ನಮ್ಮ ಹೋಟೆಲಿಗೆ ಸಮೀಪದಲ್ಲಿರುವ ಸ್ವಯಂಭುನಾಥ ಮಂದಿರಕ್ಕೆ ಹೋದೆವು. ಇಲ್ಲಿ ಎತ್ತರದ ಗುಡ್ಡದ ಮೇಲೆ ಬುದ್ಧಮಂದಿರವಿದೆ. ಈ ಎತ್ತರದ ಗುಡ್ಡವು ಈ ಕಣಿವೆಯ ನೀರಿನ ಮಧ್ಯದಿಂದ ಉದ್ಭವವಾಯಿತೆಂದು ಪ್ರತೀತಿ. ಇಲ್ಲಿ ಹಿಂದು ಮತ್ತು ಬೌದ್ಧ ದೇವಾಲಯವಿತ್ತು ಮೊದಲಿಗೆ. ಇಲ್ಲಿ ವಾನರ ಸೇನೆ ಮನುಷ್ಯರನ್ನು ಮೀರಿಸುವ ಸಂಖ್ಯೆಯಲ್ಲಿದೆ, ಇದನ್ನು ವಿದೇಶೀಯರು “ಮಂಕಿ ಟೆಂಪಲ್” ಎಂದೇ ಹೇಳುತ್ತಾರೆ. ಇಲ್ಲಿಂದ ಕಟ್ಮಂಡು ನಗರವಿಡೀ ಕಾಣುತ್ತದೆ. ನಂತರ ಅಲ್ಲಿಂದ ನಾವು ನಮ್ಮ ಹೋಟೇಲಿಗೆ ವಾಪಾಸಾದೆವು.

ನೇಪಾಲದ ಸಮಾಜದಲ್ಲಿ ಹೆಂಗಸರು ಮನೆಯ ಹೊರಗಿನ ಕೆಲಸಗಳಲ್ಲಿ ಭಾಗಿಯಾಗುವುದು ಸಾಮಾನ್ಯ, ಹೆಚ್ಚಿನವರೂ ಶ್ರಮ ಜೀವಿಗಳು. ಅವರು ಉದ್ಯೋಗಾರ್ಥಿಗಳಾಗಿ ದೇಶ-ವಿದೇಶಕ್ಕೆ ಹೋಗುವುದು ಸಾಮಾನ್ಯ. ಸರಿಯಾಗಿ ನೋಡಿದರೆ ನಮಗೆ ವಾರವಿಡೀ ನೇಪಾಲದೊಳಗೆ ನೋಡುವಷ್ಟು ಪ್ರದೇಶಗಳಿವೆ. ಇನ್ನೊಮ್ಮೆ ಹಿಮಾಲಯದ ಬೆಟ್ಟಗಳನ್ನು, ಬುದ್ಧನ ಊರಾದ ಕಪಿಲವಸ್ತು, ಜನಕರಾಜನ ಊರಾದ ಜನಕಪುರಿಯನ್ನು ನೋಡುವುದೆಂದು ನಿಶ್ಚಯಿಸಿ ಮರುದಿನ ಅಲ್ಲಿಂದ ಹೊರಟೆವು.