Tag Archive | ಗೌತಮ ಬುದ್ಧ;ಚಕ್ರವರ್ತಿ ಅಶೋಕ

ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ-ಏಶಿಯಾ ಖಂಡದಾದ್ಯಂತ ಭಾರತೀಯ ಸಂಸ್ಕೃತಿ ಹಬ್ಬಿದ ಪರಿ : ಭಾಗ ೧

ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:

ಡಾ.ವಿ.ಎಸ್.ಗೋಪಾಲಕೃಷ್ಣರವರು ಮಹಾರಾಷ್ಟ್ರ ವಲಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ  ಐ.ಎ.ಎಸ್.ಅಧಿಕಾರಿ. ಅವರು  ಬಹುಮುಖ  ಪ್ರತಿಭೆಯ, ವಿವಿಧ  ವಿಷಯಗಳಲ್ಲಿ  ಆಸಕ್ತಿ, ತಿಳಿವು  ಮತ್ತು ಪಾಂಡಿತ್ಯ ಹೊಂದಿರುವ  ವ್ಯಕ್ತಿ. ಬರವಣಿಗೆ, ಚಿತ್ರಕಲೆ,  ಕಾವ್ಯ, ಸಂಗೀತ (ಹಾಡುವುದು) ಇತ್ಯಾದಿ  ಅವರ ಆಸಕ್ತಿಗಳು. ನಾನಿಲ್ಲಿ  ಸುಲೇಖ ಅಂತರ್ಜಾಲದ  ಬ್ಲಾಗ್  ಸೈಟ್ ನಲ್ಲಿ  ಪ್ರಕಟವಾದ , ಕೇವಲ   ಚರಿತ್ರೆಗೆ  ಸಂಬಂಧಿಸಿದ  ಅವರ  ಬರಹಗಳನ್ನು ಇಂಗ್ಲಿಷ್ ನಿಂದ  ಕನ್ನಡಕ್ಕೆ ಭಾಷಾಂತರಿಸುತ್ತಿದ್ದೇನೆ. ಇವುಗಳು ಈ ಮೇಲಿನ  ಹೆಸರಿನ  ಸರಣಿಯಲ್ಲಿ ಪ್ರಕಟವಾಗುವುದು.

ಏಶಿಯಾ  ಖಂಡದಾದ್ಯಂತ  ಭಾರತೀಯ ಸಂಸ್ಕೃತಿ  ಹಬ್ಬಿದ ಪರಿ :   ಭಾಗ ೧
ಹಿಂದೂ  ಸಂಸ್ಕೃತಿ ಹಬ್ಬಿದ  ವಿಚಾರ  ಬರೆಯಲು ಎನಿಲ್ಲವೆಂದರು ನೂರಾರು ಪುಟಗಳು ಬೇಕು, ಹಾಗಿರುವಲ್ಲಿ  ಅದು  ನನ್ನ ಈ ಪುಟ್ಟ ಲೇಖನದಲ್ಲಿ  ಸ್ಪಷ್ಟವಾಗಿ  ವ್ಯಕ್ತವಾಗಲು  ಅಸಾಧ್ಯ. ನಮ್ಮ ದೇಶದ, ಚರಿತ್ರೆಯ  ಪಠ್ಯಪುಸ್ತಕದ  ಲೇಖಕರಾದ  ಡಾ.ಸಿ.ಆರ್.ಮಜುಂದಾರ್ ಅವರು  ತಮ್ಮ ೧೧೪೯ ಪುಟಗಳ  ಪುಸ್ತಕದಲ್ಲಿ ಕೇವಲ  ೧೧ ಪುಟಗಳಲ್ಲೇ  ಈ  ವಿಷಯವನ್ನು  ಹೇಳಿದ್ದಾರೆ,  ವಿನ್ಸೆಂಟ್ ಸ್ಮಿತ್ ತಮ್ಮ ೯೪೬ ಪುಟಗಳ   ಭಾರತದ  ಚರಿತ್ರೆ  ಪುಸ್ತಕದಲ್ಲಿ ಕೇವಲ ೫ ಪುಟಗಳಲ್ಲಿ    ಈ  ವಿಷಯವನ್ನು  ಹೇಳಿ  ಮುಗಿಸಿದ್ದಾರೆ. ನಮ್ಮ  ಚರಿತ್ರೆ  ಬರಹಗಾರರ  ವಿಪರ್ಯಾಸವೆಂದರೆ,  ನಮ್ಮ ದೇಶದ  ಮೇಲೆ ಆಕ್ರಮಣ  ಮಾಡಿದ ಸುಲ್ತಾನ್, ಮೊಗಲರು ಮುಂತಾದವರ ಕಥೆ  ಅವರ  ಪುಸ್ತಕದಲ್ಲಿ  ಅಗ್ರ ಸ್ಥಾನವನ್ನು ಪಡೆಯುತ್ತದೆ . ಅದೇ ಕ್ರಿ. ಪೂ. ೫೦೦ರಿಂದ  ಕ್ರಿ.ಶ. ೧೫೦೦ ರ ವರೆಗೆ ಬೆಳೆದು   ರಾರಾಜಿಸುತ್ತಿದ್ದ  ಭಾರತೀಯ  ಸಂಸ್ಕೃತಿಯ  ಮೇಲಿನ  ಮಾತು  ಯಾವುದೇ ಪ್ರಾಮುಖ್ಯತೆಯನ್ನು   ಪಡೆದಿಲ್ಲ. ಆದರೆ  ವಿದೇಶೀ  ವಿದ್ವಾಂಸರು  ಅದರ ಮೇಲೆ ಬಹಳಷ್ಟು  ಸಂಶೋಧನೆಗಳನ್ನು ನಡೆಸಿದ್ದಾರೆ.
ಭಾರತೀಯ  ಸಂಸ್ಕೃತಿ,  ಬೌದ್ಧ ಧರ್ಮ ಮತ್ತು  ಹಿಂದೂ ಧರ್ಮ  ನಮ್ಮಲ್ಲಿಂದ ಚೀನಾ, ಕೊರಿಯಾ, ಜಪಾನ್, ಟಿಬೆಟ್, ಶ್ರೀಲಂಕಾ, ಇಂಡೊನೇಶಿಯಾ, ಮಲೇಶಿಯಾ ಹಾಗೂ  ಕಂಬೋಡಿಯಾಗಳಂತಹ ನೆರೆಕರೆಯ  ದೇಶಗಳಿಗೆ ಹಬ್ಬಿದ  ಪರಿ  ಬಹಳ ಕುತೂಹಲಕಾರಿ  ಕಥಾನಕವಾಗಿದೆ. ಅವುಗಳ  ಬಗ್ಗೆ ಕೇವಲ ಸ್ಥೂಲವಾಗಿ ದೇಶ ,ಪ್ರದೇಶಗಳಿಗೆ ಹೊಂದಿದಂತೆ  ವಿವರಗಳನ್ನು ಕೊಡಲು  ಪ್ರಯತ್ನಿಸುತ್ತೇನೆ.
ನಮ್ಮ ಭಾರತ ದೇಶ ಕ್ರಿಸ್ತಪೂರ್ವದ  ಕಾಲದಿಂದಲೇ  ಸಮುದ್ರಗಾಮಿ ವರ್ತಕರಿದ್ದ, ಸುಸಜ್ಜಿತ  ಬಂದರುಗಳಿದ್ದ  ದೇಶ. ನಾವು  ರೋಮ್, ಈಜಿಪ್ಟ್, ಬಾಬಿಲೋನಿಯಾಗಳಂತಹ, ಮತ್ತು ಅಗ್ನೇಯ ದಿಕ್ಕಿನ(ದಕ್ಷಿಣ ಪೂರ್ವ) ದೇಶಗಳೊಂದಿಗೆ  ವ್ಯಾಪಾರಸಂಪರ್ಕವನ್ನು  ಹೊಂದಿದ್ದೆವೆಂಬುವುದನ್ನು  ನೆನಪಿಸಿಕೊಳ್ಳಬೇಕು. ನಮ್ಮ ಕರಾವಳಿ  ಪ್ರದೇಶಗಳಲ್ಲಿ  ಹಲವಾರು  ಬಂದರುಗಳು, ಸಮುದ್ರಯಾನಕ್ಕೆ  ಯೋಗ್ಯವಾದ  ವ್ಯಾಪಾರೀ ನೌಕೆಗಳು ಬೇಕಷ್ಟಿದ್ದವು. ಈ  ವಿಚಾರದ  ಮೇಲೆ  ವಿದೇಶೀಯರಾದ ಪ್ಲಿನಿ(Pliny ), ಪ್ಟೊಲೆಮಿ( Ptolemy) ಯವರ  ಬರಹಗಳಿಂದ ಮತ್ತು  ಗ್ರೀಕ್  ನಾವಿಕನ ಪುಸ್ತಕ “Periplus of the Erythrean  Sea” ಇಂದ  ಮಾಹಿತಿ  ಸಿಗುತ್ತದೆ. ಈ  ವರ್ತಕರ ಸಂಚಾರ,  ಸಂಪರ್ಕಗಳ  ಹಿನ್ನೆಲೆಯಲ್ಲಿ  ನಮ್ಮ  ಭಾರತೀಯ ಸಂಸ್ಕೃತಿ , ಹಿಂದೂ ಧರ್ಮ  ಮತ್ತು  ಬೌದ್ಧ ಧರ್ಮ ನೆರೆಕರೆಯ  ದೇಶಗಳಿಗೆ ಹಬ್ಬಿದ  ರೀತಿ ಆಸಕ್ತಿಕರವೂ, ಉಲ್ಲೇಖನೀಯವೂ  ಆಗಿದೆ.

ಚೀನಾ ದೇಶ–ಇದು ಅತ್ಯಂತ  ವಿಶಾಲವಾದ ದೇಶ, ಹಾಗಾಗಿ ಇಲ್ಲಿಗೆ ಬೌದ್ಧ ಧರ್ಮದ ಪ್ರವೇಶ, ನಂತರ ಅದು ಯಾವ ತೆರನಾಗಿ ಅಲ್ಲಿ ಹರಡಿತು ಎಂಬುವುದು ಅತಿ ಮುಖ್ಯವೆನಿಸುತ್ತದೆ. ಗೌತಮ ಬುದ್ಧ  ತನ್ನ ೮೦ನೇ  ವಯಸ್ಸಿನಲ್ಲಿ   ಕ್ರಿ.ಪೂ ೪೮೩ರಲ್ಲಿ ತೀರಿ  ಹೋದನು.  ಅದಾಗಿ  ಎರಡು ಶತಮಾನಗಳ  ಸಮಯದಲ್ಲಿ  ಬೌದ್ಧ ಧರ್ಮ ನಮ್ಮ ದೇಶದಲ್ಲಿ ಬೇರೂರಿತು. ಮೌರ್ಯ ವಂಶದ ಚಕ್ರವರ್ತಿಯಾದ  ಅಶೋಕನು  ತಾನು  (ಜೀವನದ ಉತ್ತರಾರ್ಧದಲ್ಲಿ)  ಮತಾಂತರ ಹೊಂದಿ, ಕ್ರಿ.ಪೂ.೨೪೦ರಲ್ಲಿ  ಬೌದ್ಧ ಧರ್ಮದ  ಮೂರನೇ  ಪರಿಷತ್ತನ್ನು( Council ) ನಡೆಸಿದನು. ಅವನು ಧಾರ್ಮಿಕ  ಪ್ರತಿನಿಧಿಗಳನ್ನು ಶ್ರೀಲಂಕಾ ಮತ್ತು  ಇನ್ನಿತರ ದೇಶಗಳಿಗೆ ಕಳುಹಿಸಿದನು, ಆ ಸಂದರ್ಭದಲ್ಲಿ ಅವರು ಆಫ್ರಿಕಾದ ಉತ್ತರ  ಭಾಗಗಳಿಗೂ ಹೋಗಿದ್ದಾರೆ. ಚಕ್ರವರ್ತಿ ಅಶೋಕನ ಈ  ಪ್ರಯತ್ನದಿಂದಾಗಿ  ಪರಿವ್ರಾಜಕ  ಬೌದ್ಧಸನ್ಯಾಸಿಗಳು  ಅಫಘಾನಿಸ್ತಾನ, ಮಧ್ಯ ಏಶಿಯಾ, ಚೀನಾ ದೇಶಗಳಲ್ಲಿ ಮತ ಪ್ರಚಾರ ಮಾಡಿ,  ಬೇರೂರುವಂತೆ ಮಾಡುವುದರಲ್ಲಿ  ಯಶಸ್ವಿಗಳಾದರು.  ಆ  ಕ್ರಿ.ಶ.೨ನೇ ಶತಮಾನದ  ಕಾಲದಲ್ಲಷ್ಟೇ  ತೆರೆದುಕೊಂಡ  ರೇಶ್ಮೆ  ವ್ಯಾಪಾರ ಮಾರ್ಗವು ಮತಪ್ರಚಾರವನ್ನು ಸುಲಭವಾಗಿಸಿತು. ಕ್ರಿ.ಶ. ೨ನೇ ಶತಮಾನದ  ಕಾಲದಲ್ಲಿ ಕುಶಾಣರ ಚಕ್ರವರ್ತಿಯಾದ ಕನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಸಿ , ಅವನ ವಂಶಜರು ಅದನ್ನು ಸ್ವೀಕಾರಮಾಡುವುದಕ್ಕೆ  ಅನುವು  ಮಾಡಿಕೊಟ್ಟನು. ಇದರಿಂದಾಗಿ ಮುಂದೆ  ಪಾರ್ಥಿಯಾ, ಮಧ್ಯ ಏಶಿಯಾದಲ್ಲಿ  ಈ ಧರ್ಮವು ಹಬ್ಬಲು  ಸಹಾಯವಾಯಿತು.
ಚೀನಾದ  “ಹನ್”  ವಂಶದ ಚಕ್ರವರ್ತಿ ಮಿಂಗ್ಡಿ ಎಂಬವನು ಕ್ರಿ.ಶ.೬೮ರಲ್ಲಿ  ಗೌತಮ ಬುದ್ಧನನ್ನು  ಸ್ವಪ್ನದಲ್ಲಿ  ಕಂಡು, “ಕಾಯ್ ಯಿನ್” ಎಂಬ ಅಧಿಕಾರಿಯನ್ನು ಮಧ್ಯ  ಏಶಿಯಾವನ್ನು ನೋಡಿ ಬರಲು ಕಳುಹುತ್ತಾನೆ. ಆ ಅಧಿಕಾರಿ  ಭಾರತ ದೇಶಕ್ಕೂ  ಭೇಟಿಯನ್ನಿತ್ತು, ತನ್ನ ರಾಜ್ಯದ ಮುಖ್ಯ ವಸತಿಸ್ಥಾನವಾಗಿದ್ದ ಲೋಯಾಂಗ್ ಗೆ  ಇಬ್ಬರು ಬೌದ್ಧ  ಸನ್ಯಾಸಿಗಳು ಮತ್ತು ಹಲವು  ಬುದ್ಧನ ವಿಗ್ರಹಗಳೊಂದಿಗೆ   ಹಾಗೂ  ಸಂಸ್ಕೃತ ಮತ್ತು  ಪಾಲಿ  ಭಾಷೆಗಳಲ್ಲಿದ್ದ  ಪುಸ್ತಕ, ಪತ್ರಗಳೊಂದಿಗೆ ಹಿಂದಿರುಗುತ್ತಾನೆ. ಆ ನಂತರ ಲೋಯಾಂಗ್ ನಲ್ಲಿ  ಬೌದ್ಧ  ಧರ್ಮದ ಅನುಯಾಯಿಗಳ ಸಂಖ್ಯೆ  ಬೆಳೆಯುತ್ತದೆ. ಕ್ರಿ.ಶ. ೧೬೬ ರಲ್ಲಿ ಹಾನ್  ವಂಶಜನಾದ ಹುವಾನ್ ಚಕ್ರವರ್ತಿ  ತನ್ನ  ಅರಮನೆಯಲ್ಲಿ  ರಾಜಮನೆತನಕ್ಕೆ  ಸಂಬಂಧಿಸಿದ ಎಲ್ಲಾ  ಧಾರ್ಮಿಕ  ಆಚರಣೆಗಳನ್ನು ಪ್ರಜೆಗಳಿಗೆ, ಸಾರ್ವಜನಿಕರಿಗೆ  ತಿಳಿಸಿ  ಬೌದ್ಧ ಧರ್ಮದ ರೀತ್ಯಾ ಪ್ರಾರಂಭಿಸುತ್ತಾನೆ. ನಂತರ  ಕ್ರಿ.ಶ.೪ನೇ  ಶತಮಾನದಲ್ಲಿ  ಭಾರತೀಯ ಬೌದ್ಧ ಮುನಿ  ಕುಮಾರ ಜೀವನೆಂಬವನು , ಚೀನಾದೇಶದಿಂದ  ಆಮಂತ್ರಿತನಾಗಿ  ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನು ಸಂಸ್ಕೃತ ಮತ್ತು  ಪಾಲಿ ಭಾಷೆಗಳಲ್ಲಿದ್ದ ಹಸ್ತಲಿಖಿತ ಪತ್ರ ಮತ್ತು ಪುಸ್ತಕಗಳನ್ನು  ಚೀನೀ  ಭಾಷೆಗೆ ಭಾಷಾಂತರಿಸಲು  ಅತ್ಯಂತ  ದೊಡ್ಡ  ಕಾರ್ಯಾಗಾರವನ್ನೇ ಪ್ರಾರಂಭಿಸಿದನು. ಆ  ದಿನಗಳ  ಅನುವಾದಿತ  ಬರಹಗಳ ೫೨ ಪ್ರತಿ  ಇನ್ನೂ  ಪುಸ್ತಕ ರೂಪದಲ್ಲಿ  ಉಳಿದುಕೊಂಡಿವೆ. ಭಾಷಾಂತರದಿಂದಾಗಿ  ಮತಪ್ರಚಾರವು  ಇನ್ನೂ  ಸುಲಭಸಾಧ್ಯವಾಯಿತು.
ಕ್ರಿ,ಶ.೫೧೪ರ  ಕಾಲದಲ್ಲಿ   ಚೀನಾದೇಶದಲ್ಲಿ  ಸಾಧಾರಣ ೨೦,೦೦,೦೦೦ ಮಂದಿ ಬೌದ್ಧಮತಾವಲಂಬಿಗಳಿದ್ದರು. ಆಗ ಚೀನಾದೇಶದಿಂದ ಬಹಳಷ್ಟು  ಬೌದ್ಧ ಮತೀಯ ಯಾತ್ರಾರ್ಥಿಗಳು  ಧರ್ಮಕ್ಷೇತ್ರ  ವೀಕ್ಷಣೆಗೆಂದು   ಭಾರತಕ್ಕೆ  ಬರುತ್ತಿದ್ದರು. ಹಾಗೆ ಬಂದವರಲ್ಲಿ  ಮುಖ್ಯರಾದವರು, ಎಲ್ಲರಿಗೂ ತಿಳಿದವರು  ಫಾ ಹಿಯೆನ್ ಮತ್ತು ಹುವಾನ್ ತ್ಸುವಾಂಗ್. ಭಾರತೀಯ  ಬೌದ್ಧ ಮುನಿ ಬೋಧಿಧರ್ಮ ಎಂಬವನು ಕ್ರಿ.ಶ.೬ನೇ ಶತಮಾನದಲ್ಲಿ ಚೀನಾ ದೇಶಕ್ಕೆ ಹೋಗಿ ಅಲ್ಲಿ  ಬೌದ್ಧ ಧರ್ಮದ ಚಾನ್  ಪಂಥವನ್ನು ಸ್ಥಾಪಿಸಿದನು. ಚಾನ್ ಪಂಥದವರು  ಧ್ಯಾನಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಮುಂದಕ್ಕೆ ಇದೇ  ಚಾನ್ ಪಂಥ ಜಪಾನ್  ದೇಶದಲ್ಲಿ ಝೆನ್ ಎಂದಾಗುತ್ತದೆ.

ಚೀನಾದೇಶದ   ಶಾನ್ ಡೊಂಗ್ ಪ್ರಾಂತ್ಯದ ಬುದ್ಧ ಮಂದಿರ

ಕ್ರಿ,ಶ.೯ರ ಶತಮಾನದ  ಮಧ್ಯದಲ್ಲಿ  ಕೆಲವು  ಒತ್ತಡಗಳಿಂದಾಗಿ  ಚೀನಾ ದೇಶದೊಳಗೆ  ಕೆಲವಾರು  ವರ್ಷಗಳ  ಕಾಲ  ಈ  ಧರ್ಮದ  ಬೆಳವಣಿಗೆ ಕುಂಠಿತವಾಗಿತ್ತು. ಆದರೆ  ಆ ನಂತರ  ಅದರ ಬೆಳವಣಿಗೆ  ಎಂದೂ  ಹಿಮ್ಮುಖವಾಗಲಿಲ್ಲ. ಮತ್ತು  ಅದು ಆನಂತರದ  ಸಾಹಿತ್ಯ, ಕಲೆ, ಶಿಲ್ಪ, ತತ್ತ್ವಶಾಸ್ತ್ರ, ವೇದಾಂತ  ಇವೆಲ್ಲವುಗಳಿಗೂ  ಪ್ರಭಾವ  ಬೀರುತ್ತದೆ. ಈಗಿನ ದಿನಗಳಲ್ಲಿ  ಚೀನೀಯರಲ್ಲಿ  ೮೫% ಮಂದಿ ಮಹಾಯಾನ ಪಂಥೀಯರು, ಅದರೊಂದಿಗೆ  ಅವರ  ಪೂರ್ವಧರ್ಮವಾಗಿದ್ದ  ತಾವೋ( Taoism ) ಬೆರೆತು ಹೋಗಿದೆ. ಈಗಿನ ವಿಜ್ಞಾನ  ಸಂಬಂಧಿತ ಬೆಳವಣಿಗೆ, ಹೊಸ ನಾಗರಿಕ ಜೀವನ ಯಾವುದೂ ಚೀನೀಯರಲ್ಲಿ  ಹಾಸುಹೊಕ್ಕಾಗಿಹೋದ  ಬೌದ್ಧ ಧರ್ಮವನ್ನು, ಮತ್ತು ಅದರ ಪ್ರಭಾವಗಳನ್ನು ಅಲ್ಲಾಡಿಸಲಿಲ್ಲ.   ಮಧ್ಯ ಏಶಿಯಾದ  ದೇಶಗಳಲ್ಲಿ ಪ್ರಚಲಿತವಾಗಿದ್ದ  ಈ ಧರ್ಮ, ೮ನೇ ಶತಮಾನದಲ್ಲಾದ  ಅರಬರ ಧಾಳಿಯಿಂದಾಗಿ   ಬೆಳವಣಿಗೆ ಮತ್ತು  ಆಚರಣೆಯಲ್ಲಿ  ಕುಗ್ಗಿತು  ಮತ್ತು  ೧೫ನೇ  ಶತಮಾನಕ್ಕಾಗುವಾಗ  ತೀವ್ರ  ಇಸ್ಲಾಮೀಕರಣದಿಂದಾಗಿ ತೀರ ಕುಂಠಿತವಾಯಿತು.

ದೇಶರಕ್ಷಣೆಗೆಂದು  ನಿರ್ಮಿಸಿದ ಮಹಾಗೋಡೆ

ಚೀನೀಯರು ದೇಶರಕ್ಷಣೆಗೆಂದು ಪೂರ್ವದಲ್ಲೇ  ನಿರ್ಮಿಸಿದ ಸಹಸ್ರಾರು ಮೈಲುಗಳುದ್ದದ  ಮಹಾಗೋಡೆಯೇ ಪ್ರಾಯಶಃ  ಅವರ ದೇಶವನ್ನು ಮತಾಂತರದಿಂದ  ತಪ್ಪಿಸಿತು.  ನಾವು ಭಾರತೀಯರು ನಮ್ಮ ಭಾರತೀಯ ಮೂಲದ ಧರ್ಮ ಈಗಲೂ ಚೀನಾ ದೇಶದ ಸಂಸ್ಕೃತಿಯನ್ನೇ ಆಳುತ್ತಿದೆ ಎಂದು  ಹೆಮ್ಮೆಪಡಬಹುದು.

ನಮಗೆ( ಭಾರತೀಯರಿಗೆ) ಬೌದ್ಧಧರ್ಮಕ್ಕೆ ಸಂಬಂಧಿಸಿದ  ಕಲೆ, ಶಿಲ್ಪ, ಸ್ತೂಪ, ಸ್ಮಾರಕ ಇತ್ಯಾದಿಗಳು  ಚೀನಾದಲ್ಲಿ  ಉಳಿದುಕೊಂಡಿರುವುದು  ಅರಿವಿಲ್ಲ.

ಡುನ್ ಹುವಾಂಗ್ ನ   ಸಾವಿರ ಗುಹೆ

ಚೀನಾದ  ಡುನ್ ಹುವಾಂಗ್ ನಲ್ಲಿರುವ  “ಸಾವಿರ ಗುಹೆಗಳ”ಲ್ಲಿ ಗೋಡೆಗಳ  ಮೇಲೆ ಬರೆದಿರುವ  ಚಿತ್ರಕಲೆಗಳು, ಸಾವಿರಾರು ಬುದ್ಧನ ವಿಗ್ರಹಗಳು ಕಂಡುಬರುತ್ತದೆ. ಹಾಗೂ ಮುಖ್ಯವಾಗಿ  ಯುನ್  ಗಾಂಗ್ ಮತ್ತು ಲಾಂಗ್ ಮೆನ್ ನಲ್ಲಿ  ಬಂಡೆಕಲ್ಲುಗಳ ಮೇಲೆ  ನೂರಾರು ಬುದ್ಧನ ಆಕೃತಿಗಳನ್ನು ಕಡೆದಿರುವುದನ್ನು  ಕಾಣಬಹುದು.

ಕೊರಿಯಾ, ಜಪಾನ್–ಇವೆರಡೂ ದೇಶಗಳು ಈ  ಕಾಲದ ಪ್ರಭಲ ದೇಶಗಳು. ಕೊರಿಯಾ ಪರ್ಯಾಯ ದ್ವೀಪವು  ಭೌಗೋಳಿಕವಾಗಿ ಚೀನಾದೇಶದೊಂದಿಗೆ ಜೋಡಿಕೊಂಡಿದೆ. ಹಳೆಕಾಲದ ಕೊರಿಯಾ ರಾಜ್ಯದಲ್ಲಿ   ಮೂರು  ಪ್ರತ್ಯೇಕ  ಭಾಗಗಳಿದ್ದವು. ಅವು  ಉತ್ತರದ ಕೊಗುರ‍್ಯು, (Koguryu) ನೈರುತ್ಯದ ಪಾಕ್ಚೆ (Packche in the southwest) ಮತ್ತು ಆಗ್ನೇಯದ ಸಿಲ್ಲಾ ( Silla in the south east)ಎಂಬ ಮೂರು ಭಾಗಗಳು.

ಕೊರಿಯಾದ  ಮೂರು ಭಾಗಗಳು.

ಕ್ರಿ.ಶ.೪ನೇ ಶತಮಾನದಲ್ಲಿ  ಉತ್ತರದ  ಕೊಗುರ‍್ಯುನಲ್ಲಿ ಚೀನಾದ ಬೌದ್ಧಮುನಿಯೊಬ್ಬನು  ಬೌದ್ಧ ಧರ್ಮವನ್ನು ಪರಿಚಯಿಸಿದನು. ಕೆಲಕಾಲದ ನಂತರದ  ಮಧ್ಯ ಏಶಿಯಾದ  ಬೌದ್ಧಮುನಿಯೊಬ್ಬನು  ಪಾಕ್ಚೆ ಪ್ರಾಂತ್ಯದಲ್ಲಿ  ಬೌದ್ಧಧರ್ಮವನ್ನು  ಪ್ರಚಾರ  ಮಾಡುತ್ತಾನೆ.  ಸಿಲ್ಲ  ಪ್ರಾಂತ್ಯದೊಳಗೆ ಜನ ಮೊದಲು  ಬೌದ್ಧಧರ್ಮವನ್ನು ವಿರೋಧಿಸಿದರು, ಮತ್ತು  ಧರ್ಮ  ಪ್ರಚಾರಕ್ಕೆ  ಬಂದ ಮುನಿಯನ್ನೇ ಕೊಲೆಗೈದರು. ಆದರೆ ೬ನೇ  ಶತಮಾನಕ್ಕಾಗುವಾಗ ಆ ಧರ್ಮದ ಅನುಯಾಯಿಗಳಾದರು. ನಂತರ  ೭ನೇ ಶತಮಾನಕ್ಕಾಗುವಾಗ ಈ ಮೂರೂ ಪ್ರದೇಶಗಳು  ಒಂದಾಗಿ  ಸಿಲ್ಲದ ರಾಜನು  ಚಕ್ರವರ್ತಿಯಾದನು. ಈ ರಾಜರು  ಮುಂದೆ ಕಲೆ, ಶಿಲ್ಪಕಲೆಗಳನ್ನು  ಪ್ರೋತ್ಸಾಹಿಸಿ ಸುಂದರವಾದ ಬೌದ್ಧಮಠ, ಮಂದಿರಗಳ ಸೃಷ್ಟಿಗೆ  ಕಾರಣಕರ್ತರಾಗುತ್ತಾರೆ.

ಕೊರಿಯಾದ ಬುದ್ಧ ಮಂದಿರ

ಮುಂದೆ ಹತ್ತನೆ ಶತಮಾನದಲ್ಲಿ  ಕೋರ್ಯೋ ವಂಶ ಅಧಿಕಾರಕ್ಕೆ ಬಂದಾಗ  ಬೌದ್ಧಧರ್ಮವನ್ನು  ತುಂಬಾ ಪ್ರೋತ್ಸಾಹಿಸಿತು. ಈ ಎಲ್ಲ ಕಾಲದಲ್ಲಿ ಕೊರಿಯಾ ದೇಶದ ಸನ್ಯಾಸಿಗಳು  ಬೌದ್ಧಧರ್ಮವನ್ನು   ಅಭ್ಯಸಿಸಲು  ಚೀನಾಕ್ಕೆ ಹೋಗುತ್ತಿದ್ದರು. ಮತ್ತು  ಚೀನೀ  ಭಾಷೆಯಲ್ಲಿದ್ದ  ಬೌದ್ಧಧರ್ಮದ  ಸಾಹಿತ್ಯಗಳನ್ನು    ತರುತ್ತಿದ್ದರು. ೧೪ನೆ ಶತಮಾನದಲ್ಲಿ ಅಧಿಕಾರಕ್ಕೆ  ಬಂದ  “ಯಿ” ವಂಶದವರು ಬೌದ್ಧಧರ್ಮವನ್ನು ಬೆಳೆಯದಂತೆ  ೧೯೧೦ ರ ವರೆಗೆ  ಹತ್ತಿಕ್ಕಿದರು.ಆ ಕಾಲದಲ್ಲಿ  ಜಪಾನ್ ಕೊರಿಯಾವನ್ನು ಆಕ್ರಮಿಸಿತು.  ಆಗ ಬಂದ ಜಪಾನೀಯರು ೧೯೪೫ ರ ವರೆಗೆ  ಕೊರಿಯಾವನ್ನು  ಆಳುತ್ತಿರುವಾಗ    ಬೌದ್ಧಧರ್ಮಕ್ಕೆ  ಪ್ರೋತ್ಸಾಹವನ್ನಿತ್ತು  ಬೆಳೆಯಲು ಕಾರಣರಾದರು. ಈಗ ಕೊರಿಯನ್ನರಲ್ಲಿ  ಈ ಧರ್ಮದ  ಸಂಸ್ಕೃತಿಯಿದ್ದರೂ  ಆಚರಣೆ  ಕಂಡು ಬರುವುದಿಲ್ಲ.

ಮುಂದುವರಿಯುವುದು….

Advertisements