ಜೀವನ ಸಂತೃಪ್ತಿ

ಸಂತೃಪ್ತಿ
ನಾನು ಅದೊಮ್ಮೆ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಪ್ರಯಾಣಿಸುತ್ತಿದೆ. ಆಗ ಬಸ್ಸಿನಲ್ಲಿ ನನ್ನ ಪಕ್ಕದಲ್ಲಿ ಮಧ್ಯ ವಯಸ್ಸಿನ ಹೆಂಗಸೊಬ್ಬಳು ಬಂದು ಕುಳಿತಳು. ನಾನು ಅವಳೊಡನೆ ಲೋಕಾಭಿರಾಮ ಮಾತನಾಡ ಹತ್ತಿದೆ. ಅವಳು ನನ್ನೊಂದಿಗೆ ಸ್ನೇಹದಲ್ಲಿ ಮುಗುಳ್ನಗುವಿನೊಂದಿಗೆ ತಾನೂ ಮಾತಿಗಿಳಿದಳು. ಅವಳು ಸರಳ ಉಡುಪಿನಲ್ಲು ಸುಂದರವಾಗಿದ್ದಳು, ಪ್ರಾಯಶಃ ಅವಳ ಯೌವ್ವನದಲ್ಲಿ ಸ್ಫುರದ್ರೂಪಿಯಾಗಿದ್ದಿರಬಹುದು. ನಡೆ-ನುಡಿಯಲ್ಲಿ ವಯಸ್ಸಿಗೆ ತಕ್ಕ ಗಾಂಭೀರ್ಯ ತೋರುತ್ತಿದ್ದಳು. ಮಾತಿನಲ್ಲಿ ಅವಳು ಕನ್ನಡ ಮಾತೃ ಭಾಷೆಯವಳಲ್ಲ ಎಂದು ಕಂಡು ಬರುತ್ತಿತ್ತು, ಅವಳ ಮಾತಿನಲ್ಲಿ ಮಲೆಯಾಳಂ ಭಾಷೆಯ ಛಾಯೆಯಿತ್ತು. ನಮ್ಮ ಪುತ್ತೂರಿಗೆ ಕೇರಳ ರಾಜ್ಯದ ಸರಹದ್ದು ಹೆಚ್ಚಿಗೆ ದೂರವಿಲ್ಲ, ಹಾಗಾಗಿ ಅಲ್ಲೆಲ್ಲಾ ಉದ್ಯೋಗಾರ್ಥಿಗಳಾಗಿ ಬಂದ ಮಲೆಯಾಳಿ ಜನರು ಕಂಡು ಬರುತ್ತಾರೆ.

ನಾನಿಲ್ಲಿ ಹೇಳಲು ಹೊರಟುದು ಆ ಹೆಣ್ಣು ಮಗಳ ನಿಜ ಜೀವನದ ಅನುಭವಗಳನ್ನು, ಹಾಗಾಗಿ ಕಾಲ್ಪನಿಕ ಹೆಸರನ್ನು ಕೊಡುತ್ತೇನೆ. ಶಾಂತಿ ಪುತ್ತೂರಿನ ಸಮೀಪದ ಹಳ್ಳಿಯೊಂದಲ್ಲಿ ಚಿಕ್ಕದಾದ ಭೂಮಿ ಮತ್ತು ಅದಕ್ಕೆ ಹೊಂದಿಕೊಂಡ ಮನೆಯಲ್ಲಿ ವಾಸವಾಗಿದ್ದಾಳೆ. ಅವಳ ಗಂಡ ವಯಸ್ಸಿನಲ್ಲಿ ಅವಳಿಂದ ಬಹಳ ಹಿರಿಯವನು ಎಂದು ಅವಳ ಮಾತಿನಲ್ಲಿ ತಿಳಿಯಿತು. ಅವನು ಹೋಮಿಯೋಪತಿ ವೈದ್ಯ, ಸುತ್ತುಮುತ್ತಲಿನ ಹಳ್ಳಿ ಜನರಿಗೆ ಔಷಧ ಕೊಡುತ್ತಾನಂತೆ. ಆತನಿಗೆ ಕನ್ನಡ ಮಲೆಯಾಳಂ ಮಾತುಗಳೆರಡೂ ಬಾರದು. ಇವಳದು ಮನೆಗೆ ಬಂದ ರೋಗಿಗಳೊಂದಿಗೆ ದುಭಾಷಿಯಾಗಿ ಮಾತನಾಡುವ ಪಾತ್ರ. ಅವರು ಪತಿ-ಪತ್ನಿಯರು ಇಂಗ್ಲಿಷ್ ನಲ್ಲಿ ಸಂಭಾಷಿಸುತ್ತಾರೆ. ಅವನು ಸುಮಾರು ೮೧-೮೨ ವರ್ಷ ಪ್ರಾಯದ ವೃದ್ಧ. ಆತನ ಊರು ಉತ್ತರ ಭಾರತ, ದೆಹಲಿಗೆ ಸಮೀಪದವನು. ಪುತ್ತೂರಿನ ಸಮೀಪದಲ್ಲಿರುವ ಅವರಿಗಿರುವ ಎರಡೆಕರೆ ಭೂಮಿ ಜೀವನ ಸಾಗಿಸಲು ಬೇಕಾದಷ್ಟು ಆದಾಯ ಕೊಡದು. ಈ ವಿಶಿಷ್ಟ ಜೋಡಿಯ ಜೀವನದ ರಹಸ್ಯ ನನ್ನ ಕುತೂಹಲವನ್ನು ಕೆರಳಿಸಿತು. ನನ್ನ ಸಂಭಾಷಣೆಯನ್ನು ಮುಂದುವರಿಸುವಂತೆ ಮಾಡಿತು. ಬಹುಶಃ ಅವಳಿಗೆ ಅಪರಿಚಿತಳಾದ ನನ್ನಲ್ಲಿ ಮನದಾಳವನ್ನು ತೆರೆದಿಡಲು ನೆಮ್ಮದಿ, ಸಮಾಧಾನವೆನಿಸಿರಬೇಕು. ನನ್ನ ಸಣ್ಣಪುಟ್ಟ ಪ್ರಶ್ನೆಗಳು ನಮ್ಮ ಮಾತನ್ನು ಬೆಳೆಸುತ್ತಲೇ ಹೋದವು.
ಶಾಂತಿಯ ಬದುಕು ನನ್ನಂತಹ ಮಧ್ಯಮ ವರ್ಗದ ಸುರಕ್ಷಿತ, ಸಂರಕ್ಷಿತ ವಾತಾವರಣ, ಪರಿಸರದಲ್ಲಿ ಕಾಣಸಿಗಲು ದುರ್ಲಭ. ಅವಳು ಅಪರಿಚಿತ ಪ್ರದೇಶಗಳಲ್ಲಿ ಪೂರ್ವ ಪರಿಚಿತರಲ್ಲದವರೊಂದಿಗೆ ಬದುಕಿದ್ದಾಳೆ. ಮೂಲತ ಅವಳು ಕೇರಳದ ವಯನಾಡಿನ ಬಡ ಕೃಷಿಕ ಕುಟುಂಬದ ಹೆಣ್ಣುಮಗಳು. ಶ್ರಮ ಜೀವನ ಅವಳಿಗೆ ಬಾಲ್ಯದಿಂದಲೇ ಬಂದುದು. ಅವಳು ಕಷ್ಟದಲ್ಲಿ ೧೦ನೇ ತರಗತಿ ವರೆಗೆ ಓದಿದಳು. ವಯಸ್ಸಿಗೆ ಬಂದ ಮಗಳನ್ನು ತಂದೆ ತಾಯಿಯರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ವಿವಾಹ ಮಾಡಿದರು. ಅವಳು ತನ್ನ ಕೃಷಿಕ ಪತಿಯೊಂದಿಗೆ ಕೆಲವರ್ಷ ಜೀವನ ನಡೆಸಿ ಮೂರು ಹೆಣ್ಣುಮಕ್ಕಳು ಮತ್ತು ಗಂಡುಮಗನೊಬ್ಬನನ್ನು ಪಡೆದಳು. ಅವಳಿನ್ನೂ ವಯಸ್ಸಿನಲ್ಲಿ ಮೂವತ್ತರ ಮೆಟ್ಟಲನ್ನು ಹತ್ತಿರಲಿಲ್ಲ, ಆಗ ನಡೆದ ದುರ್ಘಟನೆಯಲ್ಲಿ ಅವಳ ಪತಿಯನ್ನು ಯಾರೋ ಹತ್ಯೆ ಗೈದರು. ಅವಳಿದ್ದ ಆರ್ಥಿಕ ಸ್ಥಿತಿಯಲ್ಲಿ ಅವಳ ಸಣ್ಣ ಮಕ್ಕಳೊಂದಿಗೆ ಜೀವನ ನಡೆಸಲು ದಾರಿಯೇ ಇರಲಿಲ್ಲ. ಅವಳು ತನ್ನ ಅಪ್ಪ-ಅಮ್ಮನ ಆಶ್ರಯದಲ್ಲಿ ನೆಲೆನಿಂತಳು.

ವಯನಾಡಿನಿಂದ ಕೊಡಗಿಗಾಗಿ ಹತ್ತಿರದಲ್ಲಿರುವ ದೊಡ್ಡ ಪಟ್ಟಣವಾದ ಮೈಸೂರಿಗೆ ಜನ ಹೋಗಿ ಬರುತ್ತಾರೆ.ಶಾಂತಿಯ ಮನೆಯವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವವರು. ಮೈಸೂರಿನಲ್ಲಿದ್ದ ದೊಡ್ಡ ಇಗರ್ಜಿಯಲ್ಲಿ ಫಾದರ್ ಆಗಿರುವವರು ಶಾಂತಿಯ ಅಪ್ಪನಿಗೆ ಪರಿಚಿತರು. ಅವರು ಶಾಂತಿಯ ಅಪ್ಪನಿಗೆ “ನಿನ್ನ ಮಗಳಿಗೆ ಎರಡನೇ ಸಂಬಂಧವನ್ನು ನೋಡಲಿಚ್ಛಿಸುತ್ತೀಯ, ಒಬ್ಬ ವಯಸ್ಸಿನಲ್ಲಿ ಹಿರಿಯವನು, ಉತ್ತರ ಭಾರತದವನು, ವಿದ್ಯಾವಂತ, ಮೊದಲಿಗೆ ಉನ್ನತ ಹುದ್ದೆಯಲ್ಲಿದ್ದು ನಿವೃತ್ತನಾದವನು. ಈಗ ಜೀವನಸಂಗಾತಿಯಾಗಿ ಇಲ್ಲಿನ ಹುಡುಗಿಯನ್ನು ವಿವಾಹವಾಗಲು ಇಚ್ಛಿಸುತ್ತಾನೆ, ಆತನಿಗೆ ನಮ್ಮ ದಕ್ಷಿಣಭಾರತ, ಇಲ್ಲಿನ ಜನರನ್ನು ನೆಚ್ಚಿದೆ.” ಎಂಬ ಸಂದೇಶವನ್ನು ಕಳುಹಿದರು. ಶಾಂತಿಗೆ ತನ್ನ ಮನೆಯವರು ಮತ್ತು ಹತ್ತಿರದ ಬಂಧುಗಳ ಹೊರತಾಗಿ ಬೇರೆ ಜನರ ಪರಿಚಯವಿಲ್ಲ. ಅವಳಿಗೆ ಆಗ ಬೇರೆ ಭಾಷೆ, ಊರಿನ ಮಂದಿ ಹೇಗಿರಬಹುದೆಂಬ ಕಲ್ಪನೆಯೂ ಇರಲಿಲ್ಲ.

ಶುರುವಿನಲ್ಲಿ ಕೇವಲ ಒಂದು ಯೋಚನೆಯಾಗಿ ಬಂದ ವಿಚಾರ, ಮತ್ತಿನ ಹಂತದಲ್ಲಿ ಮಾತುಕತೆಯಾಗಿ ಮತ್ತೆ ಕೇವಲ ವರ ಮಹಾಶಯನನ್ನು ಭೇಟಿ ಮಾಡಿ ನೋಡಿದುದರಿಂದ ಕಳೆದುಕೊಳ್ಳುವುದೇನೂ ಇಲ್ಲ ಎಂಬಲ್ಲಿಗೆ ಬಂತು. ಹಾಗಾಗಿ ಇಳಿ ವಯಸ್ಸಿನ ಆ ವರ ಮಹಾಶಯನನ್ನು ಕಾಣಲು ವಧುವನ್ನು ಕರೆದುಕೊಂಡು ಮೈಸೂರಿಗೆ ಹೋದರು. ಭೇಟಿಯಾದಾಗ ವರನ ಪರಿಚಯ, ಅವನ ಹಿನ್ನೆಲೆ, ಅವನ ಆ ವರೆಗಿನ ಜೀವನ ಎಲ್ಲಾ ವಿವರಗಳು ತಿಳಿದವು. ಶಾಂತಿ ತನ್ನ ಎಳೆ ಮಕ್ಕಳ ಮುಖವನ್ನು ನೋಡಿ ಅವರ ಭವಿಷ್ಯಕ್ಕಾಗಿ ಮನಸ್ಸನ್ನು ದೃಢಮಾಡಿದಳು. ಮತ್ತು ಮುಂದಿನ ದಿನಗಳಲ್ಲಿ ವರಮಹಾಶಯನನ್ನು ಕಾಣಲಿಚ್ಛಿಸಿ ತನ್ನ ಬೇಡಿಕೆ, ಶರತ್ತುಗಳನ್ನು ಮುಂದಿಟ್ಟಳು. ಇಬ್ಬರೂ ಪರಸ್ಪರ ಒಪ್ಪಂದಕ್ಕೆ ಬಂದು ಮುಂದಿನ ಕೆಲವೇ ದಿನಗಳಲ್ಲಿ ಚರ್ಚಿನಲ್ಲಿ ಕ್ರೈಸ್ತ ಪದ್ಧತಿಯ ವಿವಾಹ ಜರುಗಿ ಅವರು ಪತಿ-ಪತ್ನಿಯರಾದರು. ವರನು ಭಾರತ ಸರ್ಕಾರದ(ವಿದೇಶಾಂಗ ಅಥವಾ ಅಂತಹ) ಉನ್ನತ ಹುದ್ದೆಯಲ್ಲಿದ್ದು ಮೊದಲ ಪತ್ನಿಯಿಂದ ಮಕ್ಕಳಿದ್ದ ವ್ಯಕ್ತಿ. ಅವರು(ರಾಜೇಂದರ್-ಕಾಲ್ಪನಿಕ ಹೆಸರು) ತಮ್ಮ ಮಧ್ಯ ವಯಸ್ಸಿನಲ್ಲಿ ಪತ್ನಿಯ ಮರಣಾ ನಂತರ ಮಕ್ಕಳು ವಿದ್ಯೆ ಮತ್ತು ವಿವಾಹವಾಗಿ ಸ್ವತಂತ್ರರಾದಾಗ ಒಬ್ಬಂಟಿಯಾಗಿ ವಿದೇಶದಲ್ಲಿದ್ದರು. ಅವರ ಸಹೋದರ ಸಹೋದರಿಯರೂ ಅವರಂತೇ ವಯಸ್ಸಿನಲ್ಲಿ ಹಿರಿಯರೂ ತಂತಮ್ಮ ಜೀವನದಲ್ಲಿ ನಿರತರಾಗಿದ್ದಾರೆ, ದೇಶ-ವಿದೇಶಗಳಲ್ಲಿ ವಾಸವಾಗಿದ್ದಾರೆ. ವಿದೇಶದಲ್ಲಿದ್ದ ಅವರು ಅಸ್ವಾಸ್ಥ್ಯರಾದಾಗ ಚಿಕಿತ್ಸೆಗೆಂದು ತನ್ನ ಸ್ವಂತ ಊರಾದ ದೆಹಲಿಗೆ ಬಂದರು.
ಅವರ ಪರಿಚಿತರೊಬ್ಬರು ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಮೈಸೂರಿಗೆ ಹೋಗೆಂದು ವಿಳಾಸವಿತ್ತು ಕಳುಹಿಸಿದರು. ಅಲ್ಲಿ ಅವರ ಸ್ವಾಸ್ಥ್ಯ ಸುಧಾರಿಸಿತು, ಮನಸ್ಸಿಗೂ ನೆಮ್ಮದಿ ಸಿಕ್ಕಿತು. ಆಗಲೇ ಅವರಿಗೆ ಅಲ್ಲಿನ ಚರ್ಚಿನ ಫಾದರ್ ನ ಪರಿಚಯವಾಯಿತು. ಮುಂದೆ ನಡೆದುದು ಶಾಂತಿಯೊಡನೆ ವಿವಾಹದ ಪ್ರಸ್ತಾಪ. ಅವರಿಬ್ಬರೂ ಭೇಟಿಯಾಗಿ ತಮ್ಮಿಬ್ಬರ ವಿಚಾರಗಳನ್ನು, ಅಗತ್ಯಗಳನ್ನು ವಿನಿಮಯ ಮಾಡಿಕೊಂಡು ಒಪ್ಪಂದಕ್ಕೆ ಬಂದರು. ಅದರಂತೆ ಶಾಂತಿ ಅವರ ಆರೋಗ್ಯ, ಅಹಾರ ಯೋಗಕ್ಷೇಮಗಳನ್ನು ನೋಡಿಕೊಳ್ಳುವುದು, ಮತ್ತು ರಾಜೇಂದರ್ ಶಾಂತಿಯ ಬೆಳೆಯುತ್ತಿರುವ ಮಕ್ಕಳ ಆಹಾರ, ಆಶ್ರಯ, ವಿದ್ಯೆಗಳ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡರು. ಅವರ ವಿವಾಹವಾದ ಮೊದಲ ವರ್ಷ ಅವರು ಮೈಸೂರಿನಲ್ಲಿ ವಾಸವಾಗಿದ್ದರು. ಅಲ್ಲಿ ಶಾಂತಿ ಅವಳ ಬದಲಾದ ಹೊಸ ಬದುಕಿಗೆ ಬೇಕಿರುವ ವ್ಯಾವಹಾರಿಕ ಕೆಲಸ, ಇಂಗ್ಲಿಷ್ ಭಾಷೆಗಳನ್ನು ಶೈಕ್ಷಣಿಕ ಸಂಸ್ಥೆಗೆ ಹೋಗಿ ಕಲಿತಳು. ನಂತರದ ದಿನಗಳಲ್ಲಿ ಪರಿಚಿತರಿಂದ ಪುತ್ತೂರಿನ ಪರಿಸರದ ಸಮೀಪದಲ್ಲಿ ಭೂಮಿ ಮತ್ತು ಮನೆಯನ್ನು ಕೊಂಡುಕೊಂಡರು. ಆ ನಂತರದ ದಿನಗಳಲ್ಲಿ ಅವಳದು ತುಂಬಿದ ಮನೆಯಾಗಿತ್ತು, ಅವಳ ಮಕ್ಕಳು ಅವಳೊಂದಿಗೆ ಇದ್ದುಕೊಂಡು ಶಾಲೆ ನಂತರ ಕಾಲೇಜಿನ ವಿದ್ಯಾಭ್ಯಾಸ ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಶಾಂತಿ ಅವಳ ಎರಡನೇ ಪತಿಯಿಂದ ಮಗಳೊಬ್ಬಳನ್ನು ಪಡೆದಳು. ಆ ಮಗಳನ್ನು ತೀರ ಎಳವೆಯಲ್ಲೇ ದೂರದ ಊರಿನಲ್ಲಿದ್ದ ಪ್ರತಿಷ್ಠಿತ ಶಾಲೆಯಲ್ಲಿ ಸೇರಿಸಲಾಯಿತು. ರಾಜೇಂದರವರಿಗೆ ತನ್ನ ಮಗಳು ಶಾಂತಿಯ ಮೊದಲ ವಿವಾಹದ ಮಕ್ಕಳಂತೆ ಬೆಳೆಯುವುದು ಇಷ್ಟವಿರಲಿಲ್ಲ. ಈ ಮಧ್ಯದಲ್ಲಿ ರಾಜೇಂದರವರು ಉತ್ತರಭಾರತದಲ್ಲಿರುವ ತಮ್ಮ ಊರಿಗೆ ಹೋಗಿ-ಬಂದು ಮಾಡುತ್ತಿದ್ದರು. ಶಾಂತಿಯೂ ತನ್ನ ಆ ಊರಿನ ಬಂಧುಗಳನ್ನು ಕೆಲವೊಮ್ಮೆ ಭೇಟಿಯಾಗಿದ್ದಾಳೆ. ಅವಳ ಮಾತಿನಿಂದ ನನಗನಿಸಿದಂತೆ ಅವಳಿಗೂ ಅವಳ ದೂರದೂರಿನ ಆ ಬಂಧುಗಳಿಗೂ ಇರುವ ಅಂತರ ಅಪಾರ. ಅವಳ ಪೂರ್ವ ಜೀವನದ ವಿಧಿ-ವಿಧಾನ ಮತ್ತು ಅಂತಸ್ತು ವಾತಾವರಣವು ಆ ಬಂಧುಗಳೊಂದಿಗೆ ಸಲುಗೆ-ಸ್ನೇಹ ಬೆಳೆಸಲು ಕಷ್ಟವೆಂಬ ಭಾವನೆ ನನ್ನಲ್ಲಿ ಬಂತು. ಅವಳು ಹೇಳಿದಂತೆ ಅವಳ ಪತಿ ನಾವಿಬ್ಬರೂ ಲಂಡನ್ನಿಗೆ ಹೋಗಿ ಇರೋಣ ಎಂದರೂ ಹೋಗಲು ಶಾಂತಿಗೆ ಸ್ವತಃ ಆಸಕ್ತಿಯಿಲ್ಲ. ಆ ಇಳಿ ವಯಸ್ಸಿನಲ್ಲೂ ರಾಜಿಂದರವರು ಪುತ್ತೂರಿನ ಸಮೀಪದಲ್ಲಿರುವ ತಮ್ಮ ಮನೆಗೆ ಬಂದು ಹೋಗಿ ಮಾಡುತ್ತಿರುತ್ತಾರೆ.
ಈಗ ಶಾಂತಿಗೆ ಸುಮಾರು ೬೦-೬೫  ರ ವಯಸ್ಸಿರಬಹುದು. ಅವಳ ಎಲ್ಲಾ ಮಕ್ಕಳೂ ವಿದ್ಯೆ ಮುಗಿಸಿ, ಉದ್ಯೊಗ ಮತ್ತು ವಿವಾಹವಾಗಿ ತಮ್ಮಜೀವನಗಳಲ್ಲಿ ನೆಲೆಯೂರಿದ್ದಾರೆ. ಅವಳಿಂದ ಪ್ರತ್ಯೇಕವಾಗಿ ಬೆಳೆದ ಆ ಸಣ್ಣ ಮಗಳು ಸುಮಾರು ೨೬ರ ವಯಸ್ಸಿನವಳು ಮೆಡಿಕಲ್ ಓದಿ ವೈದ್ಯೆಯಾಗಿದ್ದಾಳೆ. ಅವಳು ತನ್ನ ಸಹಪಾಟಿಯೊಬ್ಬ ಹುಡುಗನನ್ನು ಮದುವೆಯಾಗಿದ್ದಾಳೆ. ನನಗೆ ಅವಳ ಮನೋಧೈರ್ಯ, ಮನಸ್ಸಿನ ಸ್ಥಿಮಿತವನ್ನು ಕಂಡು ಆಶ್ಚರ್ಯವಾಯಿತು. ಸಣ್ಣ ಪ್ರಾಯದಲ್ಲಿ ಅವಳು ತೆಗೆದುಕೊಂಡ ನಿರ್ಧಾರ ಅವಳ ಜೀವನಗತಿಯನ್ನೇ ಬದಲಿಸಿತು. ಅದಿಲ್ಲದಿದ್ದರೆ ಅವಳ ಮಕ್ಕಳು ಈ ಸ್ಥಿತಿಯಲ್ಲಿರುತ್ತಿರಲಿಲ್ಲ. ತನಗೆ ಗೊತ್ತಿಲ್ಲದ ಸಂಸ್ಕೃತಿಯ ಮೇಲಂತಸ್ತಿನ ಆ ಹಿರಿಯ ಉದ್ಯೋಗ ನಿವೃತ್ತ ವ್ಯಕ್ತಿಯ ಒಡನಾಟದಲ್ಲಿ ಆತನಿಗೆ ಹೊಸ ಜೀವನವನ್ನಷ್ಟೇ ಕೊಟ್ಟದ್ದಲ್ಲದೇ ತಾನೂ ತನ್ನ ಮಕ್ಕಳನ್ನು ಉನ್ನತ ಸ್ಥಿತಿಗೆ ತರಲಾಯಿತು. ಬಹುಶಃ ಇದರಲ್ಲಿ ಅವಳ ವ್ಯಕ್ತಿತ್ವಕ್ಕೆ ತುಂಬ ಪ್ರಾಮುಖ್ಯತೆ ಸಿಕ್ಕಿರಲಿಕ್ಕಿಲ್ಲ, ಅವಳ ಸಹನೆ, ಅಂತಃಧೈರ್ಯವೇ ಅವಳ ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡ ಪಾತ್ರ ವಹಿಸಿದೆ. ಈಗ ಅವಳು ತನ್ನ ಹಳ್ಳಿ ಕಡೆಯಿದ್ದ ಮನೆ ಮತ್ತು ಭೂಮಿಯನ್ನು ಮಾರಾಟ ಮಾಡಿ ಮಂಗಳೂರು ಪಟ್ಟಣದ ಸಮೀಪದಲ್ಲಿ ಮನೆ ಮಾಡುವ ಹಂತದಲ್ಲಿದ್ದಾಳೆ. ಅವಳ ಜೊತೆ ಶಾಲೆ ಕಾಲೇಜು ಓದುತ್ತಿರುವ ಮೊಮ್ಮಕ್ಕಳು ಬಂದಿರುತ್ತಾರೆ ಎಂದಳು. ಜೀವನದ ಈ ಹಂತದಲ್ಲೂ ಅವಳು ತಾನು ಕೆಲಸ ಮಾಡುತ್ತಾ ತನ್ನ ಕುಟುಂಬದವರಿಗೆ ಒದಗಿ ಬಂದುಕೊಂಡು ತನ್ನ ಜೀವನದಲ್ಲಿ ಅರ್ಥ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಎಂದು ನನಗನಿಸಿತು. ನನಗೆ ಅವಳ ಮಾತಿನಿಂದ ಅವಳು ಮತ್ತು ಅವಳ ಪತಿ ಇನ್ನೂ ಕೂಡಿ ಬಾಳುತ್ತಿದ್ದರೂ  ಆತ ತನ್ನ ಊರಾದ ಉತ್ತರ ಭಾರತದಲ್ಲಿ ಇರಲು ಇಚ್ಚಿಸುತ್ತಾನೆ ಎಂಬ ಭಾವನೆ ಬಂತು.  ಅವಳನ್ನು ಕಂಡ ಮೇಲೆ ಪ್ರಾಯಶಃ ನಾವು ನಮ್ಮ ಉಪಯುಕ್ತತೆಯನ್ನು ಕಂಡಾಗಲೇ ಸಂತೃಪ್ತಿ ಸಾಧ್ಯ ಎನ್ನಿಸಿತು ನನಗೆ.

Advertisements

2 thoughts on “ಜೀವನ ಸಂತೃಪ್ತಿ

    • ನಾನು ಶಾಂತಿಯನ್ನು ಕಂಡು ಮಾತನಾಡಿದ ನಂತರ ನನಗೆ ಆ ಯೋಚನಾ ಸರಣಿಯಿಂದ ಹೊರ ಬರಲು ಬಹಳ ಕಾಲ ಹಿಡಿಯಿತು. ಅವಳನ್ನು ಮಾತಾಡಿಸಿದ ನಂತರ ಸಾಮನ್ಯ ವ್ಯಕ್ತಿಯಲ್ಲೂ ವಿಶೇಷ ಶಕ್ತಿ, ಸಾಮರ್ಥ್ಯವಿದೆ ಎಂದು ಅನ್ನಿಸಿತು. ನಮ್ಮ ಜೀವನ ನೇರಾಗಿದ್ದಾಗ ನಮ್ಮ ಹೆಚ್ಚಿನ ಗುಣಗಳನ್ನು ಉಪೋಗಿಸಲು ಸಂದರ್ಭವೇ ಬರುವುದಿಲ್ಲ. ನನ್ನ ಆ ಅನುಭವವನ್ನು ಮರೆಯಬಾರದೆಂದು ಈ ಸಣ್ಣ ಪ್ರಯತ್ನ ಮಾಡಲಿಛ್ಛಿಸಿದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s