ಧರಮ್ ಶಾಲಾ

ಧರಮ್ ಶಾಲಾ
ಹಿಮಾಚಲ ಪ್ರದೇಶಕ್ಕೆ “ಹಿಮಾವೃತ ಬೆಟ್ಟಗಳ ನಾಡು” ಎಂಬ ಅರ್ಥದ ನಾಮಧೇಯ ಬಂದುದೇ ಅದರ ಭೌಗೋಳಿಕ ಲಕ್ಷಣಗಳಿಂದ. ಆಚಾರ್ಯ ದಿವಾಕರ ದತ್ತ ಶರ್ಮ ಎಂಬ ಈ ನೆಲದ ಸಂಸ್ಕೃತ ಪಂಡಿತರೊಬ್ಬರು ಸ್ವತಂತ್ರ ಭಾರತದ ತಮ್ಮ ಹೊಸ ರಾಜ್ಯಕ್ಕೆ ಈ ಹೆಸರನ್ನು ಸೂಚಿಸಿದರು. ಇದು ಹಿಮಾಲಯ ಪರ್ವತ ಸರಣಿಯ ಪಶ್ಚಿಮದ ಪದತಲದಲ್ಲಿದೆ. ಹಿಮಾಚ್ಛಾದಿತವಾಗಿ ಶ್ವೇತವರ್ಣದ್ದಾಗಿವೆ. ಇದು ಸ್ವತಂತ್ರ ಭಾರತದ ೧೮ನೇ ರಾಜ್ಯ, ಮೊದಲಿಗೆ ಇದು ಕೇಂದ್ರಾಡಳಿತದಲ್ಲಿದ್ದ ಯುನಿಯನ್ ಟೆರಿಟರಿಯಾಗಿತ್ತು.

WP_20150124_003 (1)

ಕಾಂಗ್ಡಾ ಯಾನೆ ಗಗ್ಗಲ್ ವಿಮಾನ ನಿಲ್ದಾಣ

ಹಿಮಾಚಲ ಪ್ರದೇಶದ ಉತ್ತರದಲ್ಲಿ ಜಮ್ಮು-ಕಾಶ್ಮೀರ, ಪೂರ್ವದಲ್ಲಿ ಟಿಬೆಟ್/ಚೀನಾ, ಪಶ್ಚಿಮದಲ್ಲಿ ಪಂಜಾಬ, ದಕ್ಷಿಣ ಪೂರ್ವದಲ್ಲಿ ಹರ್ಯಾಣ ಮತ್ತು ಉತ್ತರ ಖಂಡ ಗಳೊಂದಿಗೆ ಗಡಿ ಪ್ರದೇಶ ಬರುತ್ತವೆ. ಇಲ್ಲಿ ಟಿಬೆಟಿನ ಸಾಮೀಪ್ಯದ ಕಾರಣದಿಂದ ಬಹಳ ಮೊದಲಿಂದಲೂ ಹಿಂದು ಮತ್ತು ಬೌದ್ಧ ಧರ್ಮಗಳ ಪ್ರಭಾವ, ಆಚರಣೆ ಕಾಣಬಹುದು. ಇಲ್ಲಿನ ಬೆಟ್ಟಗಳಲ್ಲಿ, ಕಣಿವೆಗಳಲ್ಲಿ ಹಳೆಯ ಅತ್ಯಂತ ಸುಂದರವಾದ ಹಾಗೂ ಪ್ರಸಿದ್ಧ ಬೌದ್ಧ ದೇವಾಲಯಗಳಿವೆ.

ಟಿಬೆಟ್ ದೇಶವನ್ನು ಚೀನೀಯರು ೧೯೫೯ರಲ್ಲಿ ಆಕ್ರಮಣ ಮಾಡಿದಾಗ ಅಲ್ಲಿಂದ ನಿರಾಶ್ರಿತರಾಗಿ ಹೊರ ಬಂದ ಅಲ್ಲಿನ ರಾಜನ ಸ್ಥಾನದಲ್ಲಿದ್ದ ದಲಾಯಿ ಲಾಮಾ ,ಅವರ ಪ್ರಧಾನ ಮಂತ್ರಿ, ಇನ್ನಿತರ ಪ್ರಮುಖರು ಮತ್ತು ವಜ್ರಯಾನ ಬೌದ್ಧ ಧರ್ಮದ ಮುಖ್ಯಸ್ಥರು ನೆರೆಯ ಭಾರತ ದೇಶದ ಧರಮ್ ಶಾಲಾದಲ್ಲಿ ನೆಲೆಯನ್ನು ಪಡೆದರು. ಅದರಿಂದ ಮತ್ತೆ ಭಾರತ ಸರಕಾರ ಟಿಬೆಟಿನ ನಿರಾಶ್ರಿತರಿಗೆ ತನ್ನ ನೆಲದ ಬೇರೆ-ಬೇರೆ ಊರುಗಳಲ್ಲೂ ನೆಲೆಯೂರಲು ಸ್ಥಳ ಕೊಟ್ಟುದು ದೇಶದ ಚಾರಿತ್ರಿಕ ಘಟನೆಯಾಗಿ ಹೋಗಿದೆ. ಟಿಬೆಟಿನ ಮಂದಿಗಳನ್ನು ನಮ್ಮ ದೇಶದ ವಿವಿಧೆಡೆಗಳಲ್ಲಿ ಕಂಡಾಗಿನಿಂದ ನನಗೆ ಧರಮ್ ಶಾಲಕ್ಕೆ ಹೋಗಬೇಕೆಂಬ ಇಚ್ಛೆ ಮೂಡಿತ್ತು.

WP_20150125_007

ಧರಮ್ ಶಾಲ ಹಿಮಾಚಲ ಪ್ರದೇಶದ ಧವಲ್ ಧಾರ ಬೆಟ್ಟಗಳ ಸರಣಿಯ ತಪ್ಪಲಿನಲ್ಲಿದೆ.  “ಧವಲ್ ಧಾರಾ” ಎಂಬ ಹೆಸರು ನನಗೆ ನಾನು ಬಾಲ್ಯದಲ್ಲಿ ಕಲಿತ ಸರಸ್ವತೀ ದೇವಿಯ ಪ್ರಾರ್ಥನೆಯನ್ನು ನೆನಪಿಗೆ ಬರಿಸಿತು.
ಆ ಶ್ಲೋಕ “ಯಾ ಕುಂದೇಂದು ತುಷಾರ ಹಾರ ಧವಲಾ
ಯಾ ಶುಭ್ರ ವಸ್ತ್ರಾವೃತ ” ಎಂದಾಗಿ ಮುಂದುವರಿಯುತ್ತದೆ. ನಿಜಕ್ಕೂ ಹಿಮಾಲಯದ ಪರಿಸರ ನಮ್ಮಲ್ಲಿ ಉನ್ನತ ಭಾವನೆಗಳನ್ನು ಪ್ರೇರೇಪಿಸುತ್ತವೆ, ನಮಗೆ ಪ್ರಕೃತಿ ಮಾತೆ ಪೂಜನೀಯ ಎಂಬ ಕಲ್ಪನೆ ಬರುವಂತೆ ಮಾಡುತ್ತದೆ.
೧೮೪೯ ರಲ್ಲಿ ಕಾಂಗ್ಡಾದಲ್ಲಿದ್ದ ಬ್ರಿಟಿಷ್ ಸೇನೆಯ ಅಧಿಕಾರಿಗಳು ತಮ್ಮ ಸೇನೆಗೆ (ಸ್ಥಳೀಯ ಮಂದಿಗಳ ತುಕಡಿ) ಇರಲು ಪ್ರಶಸ್ತ ಸ್ಥಳಕ್ಕಾಗಿ ನೋಡುತ್ತಿದ್ದಾಗ “ಹಿಂದು ವಿಶ್ರಾಂತಿ ಗೃಹ”(ಧರ್ಮ ಛತ್ರ)ವಿದ್ದ ಈ ಪ್ರದೇಶವನ್ನು ಆಯ್ಕೆ ಮಾಡಿದರು, ಕಾಲಕ್ರಮೇಣ ಆ ಪ್ರದೇಶಕ್ಕೆ ಧರಮ್ ಶಾಲ ಎಂದೇ ಹೆಸರು ಉಳಿದುಹೋಯಿತು. ಅಲ್ಲಿದ್ದ ಸೈನಿಕರು ಕೆಚ್ಚಿಗೆ ಹೆಸರಾಂತ ಗೂರ್ಖಾ ಜನರು, ಹೆಚ್ಚು ಕಮ್ಮಿ ಆ ಊರು ಬೆಳೆದುದೇ ನೇಪಾಲದ ಗೂರ್ಖಾ ಜನರಿಂದ. ಅವರು ಅಲ್ಲಿದ್ದ ಭಾಗ್ಸುನಾಥ್ ದೇವಸ್ಥಾನದ ಶಿವನನ್ನು ಪೂಜಿಸುತ್ತಿದ್ದರು. ಮುಂದಿನ ದಿನಗಳಲ್ಲಿ ನಡೆದ ಮೊದಲನೇ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಭೋಸರ ನೇತೃತ್ವದ ಭಾರತೀಯ ಸೇನಾ ಪಡೆಯಲ್ಲಿ ಧರಮ್ ಶಾಲದ ಗೂರ್ಖಾ ಸೈನಿಕರು ಬಹು ಸಂಖ್ಯೆಯಲ್ಲಿದ್ದರು.

ಇಲ್ಲಿನ ಕಣಿವೆ, ಬೆಟ್ಟಗಳ ಮೂಲನಿವಾಸಿಗಳು ಗದ್ದಿ ಜನರು, ಹೆಚ್ಚಾಗಿ ವ್ಯವಸಾಯ, ಕುರಿ ಸಾಕಣೆ ಇವುಗಳನ್ನು ಅವಲಂಬಿಸಿ ಬದುಕುವವರು. ಅವರು ಮೊದಲಿಗೆ ಹಿಮಾಲಯದ ಚಳಿ, ತಾಪಮಾನಕ್ಕನುಗುಣವಾಗಿ ವಲಸೆ ಹೋಗುತ್ತಾ ಜೀವನ ಸಾಗಿಸುತ್ತಿದ್ದರು, ಈಗ ಒಂದೇ ಸ್ಥಳದಲ್ಲಿ ನೆಲೆಯೂರಿ ವ್ಯವಸಾಯ, ಕೃಷಿ ಕೆಲಸಗಳನ್ನವಲಂಬಿಸಿದ್ದಾರೆ. ವರ್ತಮಾನದಲ್ಲಿ ಹಿಮಾಚಲ ಪ್ರದೇಶ ಅಕ್ಷರಸ್ಥರ ನಾಡು, ಜೀವನ ಮಟ್ಟವೂ ಸಾಕಷ್ಟು ಚೆನ್ನಾಗಿದೆ. ಹಿಮಾಲಯದ ನದಿಗಳು ಇಲ್ಲಿಂದಲೇ ಹರಿದು ಮುಂದುವರಿಯುವ ಕಾರಣದಿಂದ ಈ ರಾಜ್ಯದ ಮಣ್ಣು, ನೆಲ ಫಲವತ್ತಾಗಿದೆ. ಇಲ್ಲಿ ಜಲವಿದ್ಯುತ್ ಶಕ್ತಿ ಉತ್ಪಾದನೆಯೂ ಧಾರಾಳವಿರುವ ಕಾರಣ ನೆರೆಯ ರಾಜ್ಯಗಳಿಗೆ ಇವರು ವಿದ್ಯುತ್ ಶಕ್ತಿಯನ್ನು ಒದಗಿಸುತ್ತಾರೆ. ಇದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ನಾಡು. ನಮ್ಮ ದೇಶವನ್ನಾಳಿದ ಬ್ರಿಟಿಷ್ ಜನರಿಗೆ ಇಲ್ಲಿನ ಚಳಿ, ಪ್ರಕೃತಿ ಮೆಚ್ಚುಗೆಯಾಗಿ ಹಿಮಾಚಲದ ಬಹಳಷ್ಟು ಊರುಗಳನ್ನು(ಶಿಮ್ಲಾ, ಕುಲು, ಮನಾಲಿ) ತಮ್ಮ ಬೇಸಗೆಯ ವಿಶ್ರಾಂತಿಧಾಮವನ್ನಾಗಿಸಿಕೊಂಡಿದ್ದರು.
ನಾವು ಧರಮ್ ಶಾಲಾಕ್ಕೆ ಜನವರಿ ೨೩ರಂದು(೨೦೧೫) ಮುಂಜಾನೆಯಲ್ಲಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಸಣ್ಣದೊಂದು ವಿಮಾನದಲ್ಲಿ ಹೋದೆವು. ನಾವು ಜನವರಿ ಕೊನೇ ವಾರದಲ್ಲಿ ಪ್ರಯಾಣಿಸಿದ ಕಾರಣ ಚಳಿಯು ಜೋರಾಗೇ ಇತ್ತು. ಹವಾಮಾನದ ಪ್ರತಿಕೂಲತೆಯಿಂದಾಗಿ ನಮ್ಮ ವಿಮಾನದ ನಿಗದಿತ ಸಮಯವನ್ನು ಮುಂದೂಡಲಾಗಿತ್ತು. ಹವೆ ಸರಿಹೋಗಿ ನೋಟವು ಸ್ಪಷ್ಟವಾಗುವ ವರೆಗೂ ನಾವು ದೆಹಲಿಯಲ್ಲೇ ಕಾಲ ಕಳೆದೆವು. ಮಧ್ಯಾಹ್ನ ೧ ಗಂಟೆ ಸುಮಾರಿಗೆ ನಾವು ಹೊರಟೆವು. ನಮ್ಮ ದಾರಿಯು ದೆಹಲಿಯ ಮಟ್ಟಸವಾದ ಪೀಠಭೂಮಿಯಿಂದ ಮೇಲಕ್ಕೇರುತ್ತಾ ಕ್ರಮೇಣ ಉತ್ತರ ದಿಕ್ಕಿನಲ್ಲಿ ಪಶ್ಚಿಮಕ್ಕೆ ಸಾಗಿ ನದಿ, ಬೆಟ್ಟಗಳನ್ನು ದಾಟುತ್ತಾ ಹೋಗುತ್ತಿತ್ತು. ನಾವು ಇಳಿದ ಕಾಂಗ್ಡಾ ಯಾನೆ ಗಗ್ಗಲ್ ವಿಮಾನ ನಿಲ್ದಾಣದ ದೃಶ್ಯ ಬೆರಗಾಗಿಸುವಂತಿತ್ತು. ಈ ಚಿಕ್ಕ ವಿಮಾನ ನಿಲ್ದಾಣ ಬೆಟ್ಟಗಳ ಮಧ್ಯದ ಕಣಿವೆ ಪ್ರದೇಶದಲ್ಲಿದೆ. ಅಲ್ಲಿ ನಮ್ಮ ಕಣ್ಣೆದುರಿಗೆ ಹಿಮವಂತನು ಶುಭ್ರ ವಸನದೊಂದಿಗೆ ದೃಷ್ಟಿ ಹಾಯಿಸಿದುದ್ದಕ್ಕೂ ತನ್ನ ಮೈಚಾಚಿ ಹರಡಿದ್ದನು. ಅಲ್ಲಿ ಚಳಿ ಚೆನ್ನಾಗೇ ಇತ್ತು, ಅದು ಸುಮಾರು ಮಧ್ಯಾಹ್ನ ೨-೩೦ರ ಸಮಯ. ಅಲ್ಲಿಂದ ನಾವು ಪೂರ್ವ ನಿಗಧಿತ ಕಾರಿನಲ್ಲಿ ಸುಮಾರು ೧೫ಕಿ.ಮೀ ದೂರದ ಧರಮ್ ಶಾಲಾದ ಸಿದ್ದಪುರದಲ್ಲಿರುವ ನಮ್ಮ ಹೋಟೇಲಿಗೆ ಹೋದೆವು. ಬಹುಶಃ ಅಲ್ಲಿನ ಯಾವುದೇ ಸ್ಥಳಗಳಲ್ಲಿ ಪ್ರಯಾಸವಿಲ್ಲದೇ ಪರ್ವತರಾಜನ ದರ್ಶನವಾಗುತ್ತದೆ. ನಾವು ಉಳಿದುಕೊಂಡ ಹೋಟೇಲಿನ ಅಂಗಳದಿಂದ ಬಿಸಿಲಿನ ಸಮಯದಲ್ಲಿ ಧವಲಧಾರ ಪರ್ವತಗಳು ಕಾಣುತ್ತವೆ.

WP_20150125_004

ನಾವುಳಿದ ಹೋಟೇಲಿನ ಹಿನ್ನೆಲೆಯಲ್ಲಿ  ಪರ್ವತರಾಜ ಹಿಮವಂತ

ನಾವು ಹಸಿವನ್ನು ತಣಿಸಲು ಅಲ್ಲೇ ಹೋಟೇಲಿನಲ್ಲಿ ದೊರಕಿದ ರೊಟ್ಟಿ, ಧಾಲ್ ತಿಂದು ಆ ದಿನ ತಿರುಗಾಟಕ್ಕೆ ಹೊರಟೆವು. ಮೊದಲಿಗೆ ನಾವು ಅಲ್ಲೇ ಹತ್ತಿರದಲ್ಲಿದ್ದ ನೊರ್ಬುಲಿಂಕ ಯುನಿವರ್ಸಿಟಿಗೆ ಹೋದೆವು.

WP_20150124_012      WP_20150124_016

ಇದರನ್ನು ಲಾಸಾದಲ್ಲಿರುವ ದಲಾಯಿ ಲಾಮಾನ ಅರಮನೆಯಂತಿರುವ ವಿಶ್ರಾಂತಿಧಾಮದ ಮಾದರಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಟಿಬೆಟಿನ ಸಂಸ್ಕೃತಿಯನ್ನುಳಿಸಲು ಸಾಹಿತ್ಯ,ಚಿತ್ರಕಲೆಗಳ ಅಭ್ಯಾಸ, ತರಬೇತಿಗೆ, ಹಾಗೂ ಉದ್ಯೋಗಕ್ಕೂ ಅನುಕೂಲತೆಗಳನ್ನು ಒದಗಿಸಲಾಗಿದೆ. ಈ ಸಂಸ್ಥೆಯನ್ನು ೧೯೯೫ರಲ್ಲಿ ತೆರೆಯಲಾಯಿತು. ಇಲ್ಲಿ ಅವಲೋಕಿತೇಶ್ವರ ಬುದ್ಧನ ವಿಗ್ರಹವಿರುವ ದೇವಾಲಯವಿದೆ. ಇಲ್ಲಿನ ಆಶ್ರಮದಲ್ಲಿ ತರಬೇತಿ ಹೊಂದುತ್ತಿರುವ ಬೌದ್ಧ ಸನ್ಯಾಸಿಗಳು ವಾಸಿಸುತ್ತಾರೆ.

WP_20150124_026

ನಂತರ ನಾವು ಗ್ಯುಟೋ ಮೊನಾಸ್ಟ್ರಿ Gyuto, ತಾಂತ್ರಿಕ ಆಶ್ರಮವನ್ನು ನೋಡಲು ಹೋದೆವು. ಇದು Gelug-ಗೆಲುಗ್ ಪದ್ಧತಿಯ ದೇವಾಲಯ, ಸನ್ಯಾಸಿಗಳ ತಂತ್ರವಿದ್ಯೆಗಳ ತರಬೇತಿ ಕೇಂದ್ರವನ್ನು ಹೊಂದಿದೆ. ಟಿಬೆಟಿನ ಲಾಸಾದಲ್ಲಿರುವ ಗೆಶೆಯ ಅಭ್ಯಾಸದ ನಂತರ ವಜ್ರಯಾನ ತಂತ್ರವಿದ್ಯೆಗಳ ಅಭ್ಯಾಸಕ್ಕೆ ಇಲ್ಲಿಗೆ ಸನ್ಯಾಸಿಗಳು ಬರುತ್ತಾರೆ. ಇಲ್ಲೆಲ್ಲಾ ಭಾರತ ಸರಕಾರ ನಿರಾಶ್ರಿತರಾಗಿ ಬಂದ ಟಿಬೆಟನ್ನರಿಗೆ ಆಶ್ರಯವನ್ನು ಕೊಡುವುದರ ಮೂಲಕ ಅವರಿಗೆ ಬದುಕಲು ಅವಕಾಶ ಮತ್ತು  ಬೌದ್ಧ ಧರ್ಮದ ರಕ್ಷಣೆಗೆ ಕಾರಣವಾಯಿತು ಒಂದಿಗೇ ಚೀನಾದೊಂದಿಗಿರುವ ತನ್ನ ಸರಹದ್ದನ ರಕ್ಷಣೆಯನ್ನು ಕಾದಿತು. ಈ ರೀತಿಯ ವಿದೇಶ ನೀತಿಯಿಂದಾಗಿಯೇ ಹಿಮಾಲಯದ ಊರುಗಳಾದ ನೇಪಾಲ, ಭೂತಾನ, ಟಿಬೆಟ್ ಭಾರತದೊಂದಿಗೆ ಸ್ನೇಹದಿಂದಿರುವುದು. ಇವೆರಡನ್ನು ನೋಡಿ ಸಂಜೆಯ ಹೊತ್ತಿಗೆ ನಮ್ಮ ಹೋಟೇಲಿಗೆ ಹೋಗುತ್ತಿದ್ದಂತೆ ಅಲ್ಲೇ ಸಮೀಪದ ಸಣ್ಣ ಬೆಟ್ಟದ ಮಧ್ಯಮ ಎತ್ತರದಲ್ಲಿರುವ ಶಿವದೇವಸ್ಥಾನಕ್ಕೆ-ಅಗಂಜರ್ ಮಹಾದೇವ ಮಂದಿರಕ್ಕೆ ಹೋದೆವು. ಆ ದೇವಸ್ಥಾನವನ್ನು ನೋಡಿದಾಗ ಮೊದಲು ನೋಡಿದ ಬೇರೆ ತೀರ್ಥಯಾತ್ರಾಧಾಮಗಳಾದ ಬದರೀ, ಕೇದಾರಗಳ ನೆನಪು ಮರುಕಳಿಸಿತು. ಹಾಗಾಗಿ ನನಗೆ ಹಿಮಾಲಯದ ಬಹಳಷ್ಟು ದೇವಸ್ಥಾನಗಳಲ್ಲಿ ಅವರ್ಣನೀಯವಾದ ಶಾಂತ ವಾತಾವರಣವೂ, ನಮ್ಮನ್ನು ಆವರಿಸುವಂತ ಏನೋ ಶಕ್ತಿಯಿದೆ ಎಂಬ ಭಾವನೆ ಬಂದಿತು. ಅಲ್ಲಿನ ಇಪ್ಪತ್ತರ ಹರೆಯದಲ್ಲಿದ್ದ ಪೂಜಾರಿಯ ಮಾತು, ಸ್ನೇಹಭಾವ ಮನಸ್ಸಿಗೆ ಏನೋ ಸಂತೋಷವನ್ನು ಕೊಟ್ಟಿತು. ಈ ದೇವಸ್ಥಾನವಿದ್ದ ಗುಡ್ಡದ ಬುಡದಲ್ಲಿ ನದಿಯೊಂದು ಹರಿಯುತ್ತದೆ. ನದೀ ತೀರಕ್ಕೆ ಇಳಿದು ಹೋಗಲು ದಾರಿಯಿದೆ.ನಾವು ಆತನೊಂದಿಗೆ ನದೀ ತೀರಕ್ಕೆ ಹೋದೆವು. ಅಲ್ಲಿ ನೀರಿನ ದಾರಿಯಲ್ಲಿ ಬಂಡೆಕಲ್ಲುಗಳ ಮಧ್ಯದಲ್ಲಿ ಸ್ವಾಭಾವಿಕವಾದ, ತೀರ ತಗ್ಗಿನ ಗುಹೆಯೊಂದನ್ನು ಆ ಪೂಜಾರಿಯು ನಮಗೆ ತೋರಿದನು. ಆ ಗುಹೆಯೊಳಗೆ ಇರುವ ಶಿವಲಿಂಗಕ್ಕೆ ನಿತ್ಯ ಪೂಜೆಯಿದೆ, ನದಿಯಲ್ಲಿ ನೀರು ಹರಿಯುವಾಗ ಪೂಜೆ ನಡೆಯುವುದಿಲ್ಲ. ಇಲ್ಲೆಲ್ಲಾ ಸಂಜೆಯಾಗುತ್ತಿದ್ದಂತೆ ಚಳಿ ಹೆಚ್ಚುತ್ತದೆ, ನಾವು ಸೂರ್ಯಾಸ್ತದ ಆ ನಸು ಬೆಳಕಿನಲ್ಲಿ ದೇವಾಲಯವನ್ನು, ಆ ಸುಂದರ ಪ್ರಕೃತಿಯನ್ನು ನೋಡಿ ತೃಪ್ತಿಯಿಂದ ಹಿಂದಿರುಗಿದೆವು.
ಮಾರನೇ ದಿನ(ಜನವರಿ ೨೪) ಮೊದಲಿಗೆ ಅಲ್ಲಿನ ಕ್ರಿಕೆಟ್ ಸ್ಟೇಡಿಯಮ್ ಅನ್ನು ನೋಡಲು ಹೋದೆವು. ಹೋಗುವ ದಾರಿಯಲ್ಲಿ ಧವಲ್ ಧಾರ ಸರಣಿಯ ಸಣ್ಣ-ಸಣ್ಣ ಬೆಟ್ಟಗಳನ್ನು ದಾಟುತ್ತಾ ಹೋಗಬೇಕು. ಇದು ಪ್ರಪಂಚದಲ್ಲೇ ಅತ್ಯಂತ ಎತ್ತರದಲ್ಲಿರುವ ಕ್ರಿಕೆಟ್ ಸ್ಟೇಡಿಯಮ್ ಆಗಿದೆ. ಇದು ೪೭೮೦ ಅಡಿ ೨” ಎತ್ತರದಲ್ಲಿದೆ. ೨೦೦೫ ರಲ್ಲಿ ನಡೆದ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಾಚ್ ರಣಜಿ ಟ್ರೋಫಿ ಪಾಕ್ ಮತ್ತು ಭಾರತೀಯ ತಂಡಗಳ ನಡುವೆ ಇಲ್ಲಿ ಜರುಗಿತು, ಇದೇ ಮೊದಲನೇ ಬಾರಿ , ನಂತರ ಹೊರ ಜಗತ್ತಿನಲ್ಲಿ ಇದು ಪ್ರಸಿದ್ಧಿಗೆ ಬಂದಿತು.

WP_20150125_019

ಹಿಮಾವೃತ ಬೆಟ್ಟಗಳು ನಸುಕಿನಲ್ಲೂ ಸುಂದರ, ಬಿಸಿಲೇರಿದಾಗಲೂ ಸುಂದರ, ಅಸ್ತಮಿಸುವ ಸೂರ್ಯನ ಬೆಳಕಿನಲ್ಲೂ ಸುಂದರ. ಈ ಸೌಂದರ್ಯ ಕೇವಲ ಅನುಭವಕ್ಕೆ ಬರುವಂತದು, ಆ ಕ್ಷಣಕ್ಕೆ ಮಾತ್ರ ಸೀಮಿತ, ಯಾವುದೇ ಕಾವ್ಯ, ವರ್ಣಚಿತ್ರ, ಫೋಟೊಗಳಿಗೆ ಸೆರೆಹಿಡಿಯಲು ಅಸಾಧ್ಯ.
ಸ್ಟೇಡಿಯಮ್ ನಲ್ಲಿ ಕೆಲವು ದೃಶ್ಯಗಳನ್ನು ನಮ್ಮ ನೆನಪಿಗಾಗಿ ಕ್ಯಾಮರಾದಲ್ಲಿ ಸೆರೆ ಹಿಡಿದೆವು. ಅಲ್ಲಿಂದ ನಂತರ ನಾವು ಬೆಟ್ಟದ ಇಳಿಜಾರಿನಲ್ಲಿ ಬೆಳೆಸಿದ ಟೀ ಗಾರ್ಡನ್ ನೋಡಲು ಹೋದೆವು. ಅಲ್ಲಿಂದ ಮುಂದಕ್ಕೆ ಮಾತಾ ಕುನಾಲ್ ಪತ್ಥರೀ ಮಂದಿರವನ್ನು ನೋಡಿದೆವು. ಇದು ಬಹಳ ಪುರಾತನ ಕಾಲದಲ್ಲಿದ್ದ ದೇವಸ್ಥಾನ. ಅಲ್ಲಿನ ಕಥೆ ಹೇಳುವಂತೆ ಪರಮ ಶಿವನ ಮೊದಲ ಪತ್ನಿ ಸತೀದೇವಿ ದಕ್ಷ ಯಜ್ಞದಲ್ಲಿ ತೀರಿದಾಗ ಅವಳ ತಲೆ ಇಲ್ಲಿ ಬಿದ್ದು ಆ ಸ್ಥಳದಲ್ಲಿ ಬಂದ ಕಲ್ಲನ್ನೇ ದೇವಿಯೆಂದು ಪೂಜಿಸಲಾಗುತ್ತದೆ.ಈ ದೇವಸ್ಥಾನ ಮೊದಲು ದಟ್ಟ ಅರಣ್ಯದ ಮಧ್ಯಲ್ಲಿತ್ತು.

WP_20150125_034            WP_20150125_025

ಈಗಿನ ದಿನಗಳಲ್ಲಿ ಅರಣ್ಯದ ಬದಲು ಅದು ಮಾನವ ಕೃತ ಟೀ ತೋಟಗಳಾಗಿದೆ. ಅಲ್ಲಿಂದ ಮತ್ತೆ ನಾವು ಮ್ಯಾಕ್ ಲೋಡ್ ಗಂಜ್ ಎಂದು ನಾಮಾಂಕಿತವಾಗಿರುವ ಇನ್ನೊಂದು ಬೆಟ್ಟದ ಇಳಿಜಾರಿನಲ್ಲಿರುವ ಟಿಬೆಟಿನ ಜನರ ವಸತಿ ಪ್ರದೇಶಕ್ಕೆ ಹೋದೆವು. ಮೊದಲಿಗೆ ಇಲ್ಲೆಲ್ಲ ಜನ ವಸತಿ ಕಮ್ಮಿ, ಕೇವಲ ಬ್ರಿಟೀಷರ ಸೈನ್ಯದ ತುಕಡಿಯಿತ್ತು.

WP_20150125_046    WP_20150125_052

WP_20150125_064

ಅಲ್ಲಿನ “ಭಾಗ್ಸುನಾಗ್ “ದೇವಸ್ಥಾನ(ಶಿವ ದೇವಸ್ಥಾನ) ಪ್ರಸಿದ್ಧ,ಸೈನಿಕರಾಗಿ ಹೋದ ಪ್ರಾರಂಭದಿಂದಲೂ ಗೂರ್ಖಾ ಜನ ಆರಾಧಿಸುತ್ತಿದ್ದ ಸ್ಥಳ. ಗುಡ್ಡದಲ್ಲಿ ಬಳಪದ ತೆರನಾದ ಕಲ್ಲನ್ನು ಕಡೆಯುತ್ತಿದ್ದರು. ಈ ಕಲ್ಲನ್ನು ಅಲ್ಲಿನ ಮನೆಗಳಲ್ಲಿ  ಚಾವಣಿಗೆ ಬಳಸುತ್ತಾರೆ. ಮೊದಲಿಗೆ ನಾವು ಈ ದೇವಸ್ಥಾನವನ್ನು ನೋಡಿದೆವು. ಅಲ್ಲಿ ಸ್ಥಳ ಪುರಾಣ ಬರೆದಿತ್ತು. ಅಲ್ಲೇ ತುಸು ದೂರ ಸಣ್ಣ ಗುಡ್ಡಗಳನ್ನೇರಿ ಕಾಲ್ನಡೆಯಲ್ಲಿ ಜಲಪಾತವನ್ನು ನೋಡಲು ಹೋದೆವು. ನಡೆಯುವ ದಾರಿ ತುಂಬಾ ಚೆನ್ನಾಗಿತ್ತು.

ನಿರಾಶ್ರಿತ ಟಿಬೆಟಿನ ಜನರಿಗೆ ಭಾರತ ಸರಕಾರ ವಾಸಕ್ಕಾಗಿ ಮೆಕ್ಲೋಡ್ ಗಂಜ್ನಲ್ಲಿ ಸ್ಥಳ ಒದಗಿಸಿದ್ದಾರೆ. ಇಲ್ಲಿ ದಲೈ ಲಾಮಾ ಅವರು ವಾಸ ಮಾಡುವ ದೊಡ್ಡ ಮಹಲ್, ಬೌದ್ಧ ಮಂದಿರ, ಶಾಸ್ತ್ರ ಅಧ್ಯಯನದ ವಿದ್ಯಾಲಯಗಳು, ಸನ್ಯಾಸಿಗಳು , ವಿದ್ಯಾರ್ಥಿಗಳು ಮತ್ತು ಅವರ ವಾಸಸ್ಥಾನ ಇವೆಲ್ಲಾ ಇದೆ. ಇವೆಲ್ಲದರ ಸುತ್ತಲೂ ಟಿಬೆಟಿನ ಜನಗಳೇ ವಾಸವಾಗಿದ್ದು, ಜೀವನೋಪಾಯಕ್ಕಾಗಿ ವ್ಯಾಪಾರ ಉದ್ದಿಮೆಗಳನ್ನು ಮಾಡುತ್ತಾರೆ. ಹೊರ ದೇಶಗಳಿಂದ ಜನರು ಬೌದ್ಧ ಧರ್ಮವನ್ನು ಅಧ್ಯಯನ ಮಾಡಲು ಅಲ್ಲಿಗೆ ಬರುತ್ತಾರೆ. ನಾವು ಅಲ್ಲಿಗೆ ಹೋದ ಸಮಯದಲ್ಲಿ ದಲೈ ಲಾಮಾ ಅವರು ದಕ್ಷಿಣ ಭಾರತದ ಹುಬ್ಬಳ್ಳಿಯ ಸಮೀಪದ ಮುಂಡಗೋಡಿನಲ್ಲಿರುವ ಟಿಬೆಟಿಯನ್ನರ ನೆಲೆದಾಣ ಮತ್ತು, ಬೌದ್ಧ ಮಂದಿರಕ್ಕೆ ಹೋಗಿದ್ದರು. ಅಲ್ಲಿನ ಮಂದಿರವು ತೀರ ಇತ್ತೀಚೆಗೆ ಕಟ್ಟಲಾಯಿಯಿತು, ಹಾಗಾಗಿ ಅವರು ಸ್ವತಃ ಮುತುವರ್ಜಿ ತೆಗೆದುಕೊಡು ಅದರ ಬೆಳವಣಿಗೆಯಲ್ಲಿ ಭಾಗಿಯಾಗುತ್ತಾರೆ.

WP_20150125_085   WP_20150125_097
ಮೆಕ್ಲೋಡ್ ಗಂಜ್ ಭಾರತ ದೇಶದೊಳಗಿನ ಮಿನಿ ಟಿಬೆಟ್. ಆ ಜನ ನಿಬಿಡ ಪಟ್ಟಣದಿಂದ ಹೊರ ಬಂದು ನಾವು ಅಲ್ಲೇ ಬೆಟ್ಟದ ಮೇಲಿನ ಸ್ಥರದಲ್ಲಿರುವ ಡಾಲ್ ಸರೋವರದ ಪ್ರದೇಶಕ್ಕೆ ಬಂದೆವು. ಸಾಯಂಕಾಲವಾದುದರಿಂದ ಅಲ್ಲೇ ದಾರಿಯಲ್ಲಿದ್ದ ಬ್ರಿಟಿಶರ ಕಾಲದ ಸೈಂಟ್ ಜಾನ್ ಚರ್ಚ್ ಒಂದನ್ನು ನೋಡಲು ಹೋಗಲಾಗಲಿಲ್ಲ. ಸರೋವರದ ಸುತ್ತಲೂ ದೇವದಾರ ಮರಗಳಿವೆ. ಇಲ್ಲೇ ಪಕ್ಕದಲ್ಲಿ ಶಿವನ ದೇವಸ್ಥಾನವಿದೆ, ಇದು ಗದ್ದಿ ಜನರಿಗೆ ತುಂಬಾ ವಿಶೇಷಪಟ್ಟ ಸ್ಥಳ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ನಂತರ ಅಲ್ಲಿಂದ ಸ್ವಲ್ಪ ಮುಂದಕ್ಕಿರುವ ಪರ್ವತಾರೋಹಣ ಪ್ರಾರಂಭಿಸುವ “ನಡ್ಡಿ” ಎಂಬ ಹಳ್ಳಿಗೆ ಹೋದೆವು. ಅಲ್ಲಿಂದ ನಾವು ಅಸ್ತಮಿಸುವ ಸೂರ್ಯನ ದರ್ಶನವನ್ನು ಕಣ್ತುಂಬಾ ಮಾಡಬಹುದು.

WP_20150125_104           WP_20150125_100

ಅದೊಂದು ರೋಮಾಂಚನೀಯ ಅನುಭವ. ಅಲ್ಲಿ ದಿಗಂತದ ಕೊನೆಯಲ್ಲಿ ಕ್ಷಣ-ಕ್ಷಣ ಬಣ್ಣ ಬದಲಿಸುತ್ತಾ ಕಂತುವ ಸೂರ್ಯನ ದರ್ಶನ ಲಭ್ಯ. ಈ ಪ್ರದೇಶವನ್ನು ವಿಹಾರ ತಾಣವಾಗಿ ಮಾಡುತ್ತಿದ್ದಾರೆ. ನಮ್ಮ ಮಾರ್ಗದರ್ಶಕ ಪರ್ವತಾರೋಹಿಗಳ ದಾರಿಯನ್ನು ಮತ್ತು ಹತ್ತಲಿರುವ ಬೆಟ್ಟವನ್ನು ತೋರಿದನು. ನಾವು ಇಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚಿನ ಹೊತ್ತು ಇದ್ದೆವು. ಸೂರ್ಯಾಸ್ತವಾದ ನಂತರ ಅರೆಕತ್ತಲಲ್ಲಿ ಮ್ಯಾಕ್ ಲೋಡ್ ಗಂಜ್ ನ ಬೆಟ್ಟವನ್ನು ಇಳಿದು ನಮ್ಮ ಹೋಟೇಲಿರುವ ಸಿದ್ದಪುರಕ್ಕೆ ವಾಪಾಸಾದೆವು. ಆ ದಿನ ರಾತ್ರಿ ಒಳ್ಳೆ ಮಳೆಬಿದ್ದು ಚಳಿಯಾಗಿತ್ತು. ನಾವು ಅಲ್ಲಿದ್ದ ಮೂರೂ ದಿನಗಳಲ್ಲಿ ಮುಂಜಾನೆಯ ಚಳಿಯಲ್ಲಿ ಹವೆಯನ್ನು ಮತ್ತು ಪ್ರಕೃತಿಯನ್ನು ಸವಿಯಲು ಕಾಲ್ನಡುಗೆಯಲ್ಲಿ ಬೇರೆ-ಬೇರೆ ರಸ್ತೆಗಳಲ್ಲಿ ಹೋದೆವು. ಸಣ್ಣಗೆ ಮಳೆ ಹನಿಯುತ್ತಿದ್ದು ಬೆಳಗಿನ ಹವೆ ತುಂಬಾ ಚೆನ್ನಾಗಿತ್ತು.
(ಮುಂದುವರಿಯುವುದು)

Advertisements

One thought on “ಧರಮ್ ಶಾಲಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s