ನಮ್ಮ ಭುತಾನ ಪ್ರವಾಸದ ದಿನಗಳು

ನಮ್ಮ ಭುತಾನ ವಾಸದ ಮೂರನೇ ದಿನ ನಾವು ಬೆಳಗ್ಗೆ (ನವೆಂಬರ್ ೩-೨೦೧೪)ಬೇಗನೇ ಉಪಾಹಾರ ಮುಗಿಸಿ ನಾವು ಉಳಿದುಕೊಂಡ ಹೋಟೇಲು ತಾಜ್ ತಾಶಿ ಗೆ ವಿದಾಯ ಹೇಳಿದೆವು. ತಾಶಿ ಎಂದರೆ ಭುತಾನೀ ಭಾಷೆಯಲ್ಲಿ ಅದೃಷ್ಟ,ಶುಭ/ಒಳ್ಳೆಯ ಎಂಬ ಅರ್ಥವಿದೆ. ಅಲ್ಲಿ ಈ ಹೆಸರು ತುಂಬಾ ಕೇಳಿ ಬರುತ್ತದೆ. ನಾವು ಅಂದು ಹಲವಾರು ಗುಡ್ಡ ಬೆಟ್ಟಗಳನ್ನು ಹತ್ತಿ, ಇಳಿದು ದೂರದ ಊರಾದ ಪುನಾಕಾಕ್ಕೆ ಹೋಗುವವರು. ನಾವು ಮೊದಲ ಎರಡು ದಿನ ಪ್ರಯಾಣಿಸಿದ ರಸ್ತೆಗಳು ಅಗಲ ಕಿರಿದಾಗಿದ್ದರೂ ಚೆನ್ನಾಗಿದ್ದವು. ನಮ್ಮ ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸಿದ ಅಭ್ಯಾಸದಿಂದ ರಸ್ತೆಯಲ್ಲಿ ಹೊಂಡಗಳನ್ನು ನಿರೀಕ್ಷಿಸಿ ಕಾಣದಾದಾಗ ನಿರಾಶರಾದೆವು. ಆದರೆ ಟಿಂಫೂ ದಾಟಿ ಹೊರ ಹೋಗುತ್ತಿದ್ದಂತೆ ಸರಕಾರವು ಎಲ್ಲ ಮುಖ್ಯ ರಸ್ತೆಗಳನ್ನು ಅಗಲ ಮಾಡುವ ಕೆಲಸದಲ್ಲಿ ತೊಡಗಿರುವುದರಿಂದಾಗಿ ನಮ್ಮ ದಾರಿ ಒಮ್ಮೆಗೆ ನಿಂತು ಹೋಯಿತು, ನಾವು ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಮುಂದುವರಿಯಲು ಬೇರೆ ವಾಹನಗಳೊಂದಿಗೆ ನಮ್ಮ ಸರದಿಗೆ ಕಾಯಬೇಕಿತ್ತು. ಎಲ್ಲವೂ ಹೊಸತಾದುದರಿಂದ ಪ್ರತಿ ಸನ್ನಿವೇಶ ನಮಗೆ ಹೊಸದನ್ನು ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತಿತ್ತು. ಅಲ್ಲಿ ಯಾವುದೇ ವಾಹನಗಳು ಹೊರ ದೇಶಗಳಿಂದ ಬರಬೇಕಷ್ಟೆ. ಭಾರತೀಯ ಕಾರು,ಬಸ್ಸು,ಲಾರಿ, ಸ್ಕೂಟರು, ಬೈಕುಗಳಿಗೆ ಬರಗಾಲವಿಲ್ಲ. ಹಾಗೆಂದು ಇತರ ವಿದೇಶೀ ವಿಲಾಸೀ ವಾಹನಗಳು ಕೂಡಾ ಕಾಣುತ್ತವೆ.

DSC01920 DSC01923

ನಮ್ಮ ಭುತಾನಿನ ಪ್ರವಾಸಕ್ಕೆ ಎಲ್ಲ ವ್ಯವಸ್ಥೆ ಮಾಡಿದ ನೆಪ್ಟೂನ್ ಟ್ರಾವೆಲ್ಸ್ ನ ಮಾಲೀಕರಾದ ವಿಕ್ರಂ ಮತ್ತು ತೃಷ್ಣಾ ದಂಪತಿಗಳು ಒಳ್ಳೆ ಮಾರ್ಗದರ್ಶಕನನ್ನು, ವಾಹನವನ್ನು ಒದಗಿಸಿದ್ದರು. ನಮ್ಮ ವಾಹನ ಚಾಲಕ ನೇಪಾಳೀ ಮೂಲದವರು, ಬಿಂಬಾಧರ್/ಬಿಬಿ ಎಂಬ ಕಿರುನಾಮದಿಂದ ಪರಿಚಯಿಸಿಕೊಂಡರು. ಆದರೆ ಅವರು ಅಲ್ಲೇ ನೆಲೆಸಿದವರು ಮತ್ತು ಅಲ್ಲಿನ ಪ್ರಜೆ. ಗೈಡ್ ಶಿರಿಂಗ್ ದೋರ್ಜಿಯವರು ಅಲ್ಲಿನ ಮಣ್ಣಿನ ಮಗ. ಹೆತ್ತವರು ರೈತರು, ಹಳ್ಳಿಯಲ್ಲಿ ವ್ಯವಸಾಯ ಮಾಡಿ ಬದುಕುತ್ತಿದ್ದಾರೆ. ದೋರ್ಜಿ ವಿದ್ಯಾಭ್ಯಾಸದಲ್ಲಿ ಚುರುಕಿದ್ದ ಕಾರಣ ಸರಕಾರದ ವಿದ್ಯಾರ್ಥಿ ವೇತನ ದೊರಕಿ ಭಾರತದ ಶಿಲ್ಲಂಗ್ ನಲ್ಲಿ ಬಿ.ಎ. ಹಾಗೂ ಎಮ್.ಎ.ಪದವಿ ಪಡೆದಿದ್ದಾರೆ. ನಂತರ ಭುತಾನಿನ ಪ್ರವಾಸೋದ್ಯಮಕ್ಕೆ ಬೇಕಾದ ತರಬೇತಿ ಹೊಂದಿದ್ದಾರೆ. ಇವರಿಗೆ ಇಂಗ್ಲಿಷ್ ಭಾಷೆ ತಿಳಿದಿದೆಯಾದುದರಿಂದ ನಮ್ಮ ನಡುವಣ ಸಂಭಾಷಣೆಗೆ ಆತಂಕವಿಲ್ಲ. ನಮ್ಮ ಪ್ರಯಾಣ ಸಮಯದಲ್ಲಿ ಅವರೊಡನೆ ಅಲ್ಲಿನ ಜನರ, ದೇಶದ ವಿಚಾರಗಳನ್ನು ಮಾತನಾಡಿ ಅವರ ಧರ್ಮ, ಸಾಮಾಜಿಕ ಜೀವನ, ಆರ್ಥಿಕ ಸ್ಥಿತಿ ಇತ್ಯಾದಿಗಳನ್ನು ತಿಳಿದೆವು.

DSC01937 WP_20141103_030

ನಾವು ಪುನಾಕಾಕ್ಕೆ ಹೋಗಲು ದೊಚುಲಾ ಪಾಸ್ ಅನ್ನು ದಾಟಿಕೊಂಡು ಹೋಗಬೇಕು. ದೊಚುಲಾ ಟಿಂಫೂನಿಂದ ಸುಮಾರು ೩೦ಕಿ.ಮೀ. ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ೯೦೦೦ಅಡಿಗಳಿಗಿಂತಲೂ ಮೇಲಿದೆ.ದೊಚುಲಾ ಇರುವ ಈ ಪರ್ವತದ ತುದಿಯಲ್ಲಿ ಭುತಾನದ ರಾಣಿ ೨೦೦೩ ರ ಭಾರತದ ಗಡಿಯಲ್ಲಿ ನಡೆದ ಯುದ್ಧದಲ್ಲಿ ಪ್ರಾಣ ತೆತ್ತ ಭುತಾನದ ಸೈನಿಕರ ಗೌರವಾರ್ಥ ಕಟ್ಟಿದ ಬೌದ್ಧ ಸ್ತೂಪಗಳನ್ನು(ಚೋರ್ಟಾನ್) ಕಾಣಬಹುದು. ಆ ಪರ್ವತದ ಎತ್ತರದಲ್ಲಿ ಸ್ತೂಪಗಳು (೧೦೮ )ತುಂಬಾ ಸುಂದರವಾಗಿ ಕಾಣಿಸುತ್ತದೆ. ಮುಖ್ಯವಾಗಿ ಈ ಪರ್ವತದ ಮೇಲಿಂದ ನಾಲ್ಕೂ ದಿಕ್ಕುಗಳೂ ತೆರೆದಿಟ್ಟಂತೆ ಕಾಣುತ್ತವೆ. ನೀಲಾಕಾಶದ ಹಿನ್ನೆಲೆಯಲ್ಲಿ ಕಾಣುವಂತೆ ಕಟ್ಟಿರುವ ಆ ಸಣ್ಣಬೆಟ್ಟದ ಮೇಲಿರುವ ಸ್ತೂಪಗಳು ಮತ್ತು ಅದರ ಎದುರಾಗಿ ಇನ್ನೊಂದು ಸಣ್ಣ ಗುಡ್ಡದ ಮೇಲಿರುವ ದೇವಾಲಯವು ಇಡೀ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ. ಲಾಮ ಡ್ರುಕ್ಪಾಕ್ಯುನ್ಲೆ ಎಂಬ ಬೌದ್ಧ ಮುನಿ ಈ ಪ್ರದೇಶದಲ್ಲಿ ಮಾರು ವೇಷದಲ್ಲಿದ್ದ-ಶ್ವಾನ ರೂಪದಲ್ಲಿದ್ದ ಮಾಂತ್ರಿಕ ರಾಕ್ಷಸಿಯನ್ನು ಗುರುತು ಹಿಡಿದು ತನ್ನ ಶಕ್ತಿಯಿಂದ ಅವಳನ್ನು ವಶಪಡಿಸಿಕೊಂಡು ವಧಿಸುತ್ತಾನೆ. ಈ ಎಲ್ಲಾ ಕಾರಣಗಳಿಂದ ಈ ಪ್ರಾಕೃತಿಕ ಸ್ಥಳ ಮಹತ್ವದ್ದಾಗಿದೆ. ಈ ಪ್ರದೇಶ ತುಂಬಾ ತಣ್ಣಗಿತ್ತು. ನಂತರ ನಾವು ಇಲ್ಲಿಂದ ಮುಂದುವರಿದು ಮಧ್ಯಾಹ್ನದ ಊಟದ ಹೊತ್ತಿಗಾಗುವಾಗ ಸಣ್ಣ ಹಳ್ಳಿಯೊಂದರನ್ನು ಸಮೀಪಿಸಿದೆವು. ಪುನಾಕಾ ಕಣಿವೆಗೆ ಹೋಗುವ ದಾರಿಯಲ್ಲಿರುವ ಈ ಹಳ್ಳಿಯಲ್ಲಿ ಯಾತ್ರಿಕರಿಗೆ ಉಪಾಹಾರ, ಊಟಗಳನ್ನೊದಗಿಸಲು ಹೋಟೆಲುಗಳಿವೆ. ಇವುಗಳು ಸರಳವಾಗಿ, ಸ್ವಚ್ಛವಾಗಿದ್ದು ಸ್ಥಳೀಯ ಆಹಾರವನ್ನು ಒದಗಿಸುತ್ತವೆ. ನಾವು ಉಂಡ ಹೋಟೇಲಿನ ಕಿಟಿಕಿಯಿಂದ ದೂರದ ಹೊಲ-ಗದ್ದೆ, ದುಡಿಯುತ್ತಿರುವ ರೈತ ಜನರು, ಹಳ್ಳಿ, ದೇವಸ್ಥಾನ ಎಲ್ಲಾ ಕಾಣುತ್ತಿದ್ದವು.

WP_20141103_049 WP_20141103_057

ಈ ಹಳ್ಳಿಯಲ್ಲಿ ಭುತಾನಿನ ಜನ ಮುಗಿಬಿದ್ದು ಬರುವ ವಿಶೇಷಪಟ್ಟ ದೇವಸ್ಥಾನ ಚಿಮೆ ಲಖಾಂಗ್ ಇದೆ. ಇದಕ್ಕೊಂದು ಸ್ವಾರಸ್ಯಕರ ಕಥೆಯಿದೆ. ಇಲ್ಲಿ (೧೪೫೫-೧೫೭೦ ಕಾಲದಲ್ಲಿ ಬದುಕಿದ್ದ) ಲಾಮ ಡ್ರುಕ್ಪಾಕ್ಯುನ್ಲೆಯ ಶಿಶ್ನವನ್ನು ಪೂಜಿಸುತ್ತಾರೆ. ಈ ಲಾಮ/ಮುನಿ ಸ್ವೇಚ್ಚಾ ಪ್ರವೃತ್ತಿಯವನಾಗಿದ್ದು ಅವನ ಸಾಮೀಪ್ಯಕ್ಕೆ ಬಂದ ಬಹಳಷ್ಟು ಹೆಂಗಸರನ್ನು ಭೋಗಿಸಿದ್ದನಂತೆ. ಅವನು ತೀರ ಅಸಾಂಪ್ರದಾಯಿಕವಾಗಿ ಬೋಧನೆ ಮಾಡಿದ್ದನಂತೆ. ಈ ಬೌದ್ಧ ಮುನಿ ಈ ಪ್ರದೇಶದಲ್ಲಿ ಮಾರು ವೇಷದಲ್ಲಿದ್ದ-ಶ್ವಾನ ರೂಪದ ಮಾಂತ್ರಿಕ ರಾಕ್ಷಸಿಯನ್ನು ಗುರುತು ಹಿಡಿದು ತನ್ನ ಶಕ್ತಿಯಿಂದ ಅವಳನ್ನು ವಶಪಡಿಸಿಕೊಂಡು ಬಳಿಕ ವಧಿಸುತ್ತಾನೆ. ಆ ನಂತರ ಅವಳನ್ನು ಈ ಹಳ್ಳಿಯ ಗುಡ್ಡವೊಂದರಲ್ಲಿ ಮಣ್ಣಿನಡಿಯಲ್ಲಿ ಹೂತುಬಿಟ್ಟು ಅಡಗಿಸಿಬಿಡುತ್ತಾನೆ. ಅದರ ಮೇಲೆ ಸ್ತೂಪವೊಂದನ್ನು ಕಟ್ಟಿ “ಚಿ ಮೆಡ್” ಎಂದನು, ಎಂದರೆ “ನಾಯಿ ಇಲ್ಲ” ಎಂದರ್ಥ. ನಂತರದ ದಿನಗಳಲ್ಲಿ ಅದರ ಮೇಲೆ ದೇವಸ್ಥಾನವೊಂದನ್ನು ಕಟ್ಟಲಾಯಿತು, ಇದನ್ನು ಚಿಮೆ ಲಖಾಂಗ್ ಎಂದು ಕರೆದರು. ಚಿಮೆ ಲಖಾಂಗ್ ಎಂದರೆ “ನಾಯಿ ಇಲ್ಲ”ದ ದೇವಸ್ಥಾನ, ಇದನ್ನು ಫಲನೀಡುವ ದೇವಸ್ಥಾನವೆಂದೂ ಹೇಳುತ್ತಾರೆ. ಈ ಮುನಿ ದೈವೀ ಸ್ವರೂಪಿ ಉನ್ಮತ್ತ ಮನುಷ್ಯನೆಂದೇ ಪ್ರತೀತಿ. ಈ ಮುನಿ ಇವನ ಮಹಾತ್ಮೆಯಿಂದ ಈ ದೇವಸ್ಥಾನದಲ್ಲಿ ಮಕ್ಕಳಾಗಬೇಕೆಂದು ಪ್ರಾರ್ಥಿಸಿದವರಿಗೆ ಬೇಗನೇ ಮಕ್ಕಳಾಗುತ್ತದೆ ಎಂದು ಜನ ನಂಬುತ್ತಾರೆ. ಈ ಊರು ಬೆಟ್ಟಗಳ ಮಧ್ಯದ ಕಣಿವೆ ಪ್ರದೇಶ, ಇಲ್ಲಿ ಹರಿವ ನೀರಿರುವ ಕಾರಣ ಜನ ವ್ಯವಸಾಯ ಮಾಡುತ್ತಾರೆ, ಅಕ್ಕಿ, ಆಲೂಗಡ್ಡೆ, ತರಕಾರಿ, ಹಸಿ ಮೆಣಸು ಇತ್ಯಾದಿಗಳನ್ನು ಬೆಳೆಸುತ್ತಾರೆ. ನಾವು ಆ ಹೋಟೇಲಿನಲ್ಲಿ ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಸುಮಾರು ೨ಕಿ.ಮೀ ದೂರದ ಈ ದೇವಸ್ಥಾನಕ್ಕೆ ಹೋದೆವು. ಆಗ ಅಲ್ಲಿನ ಬಿಸಿಲಲಿನ ಝ್ಹಳ ಜೋರಾಗೇ ಇತ್ತು. ಈ ದೈವೀ ಸ್ವರೂಪಿ ಉನ್ಮತ್ತ ಮನುಷ್ಯನನ್ನು ಸ್ಮರಿಸುತ್ತಾ ನಾವು ಅಲ್ಲಿಂದ ಹೊರಟು ಸುಮಾರು ಸಂಜೆ ೪ಕ್ಕೆ ಪುನಾಕಾ ಕಣಿವೆಗೆ ತಲುಪಿದೆವು. ನಾವು ಉಳಿದುಕೊಂಡ ಹೋಟೇಲು ಧೆನ್ಸಾ ಸಣ್ಣದೊಂದು ಬೆಟ್ಟದ ಇಳಿಜಾರಿನಲ್ಲಿತ್ತು. ಇಲ್ಲೇ ಪಕ್ಕದ ಗುಡ್ಡದ ಮೇಲೆ ಬೌದ್ಧ ಸನ್ಯಾಸಿನಿಗಳ ಆಶ್ರಮವೊಂದಿತ್ತು. ಅಲ್ಲಿಗೆ ಒಳಗೆ ಹೋಗಲು ಅನುಮತಿ ಪಡೆದೇ ಹೋಗಬೇಕಷ್ಟೆ. ನಾವಿದ್ದ ಗುಡ್ಡದ ತುಸು ದೂರದಲ್ಲಿ ಇಡೀ ಪುನಾಕಾ ಕಣಿವೆ ಮತ್ತು ಪಟ್ಟಣ ಕಾಣುತ್ತದೆ. .
ರಾತ್ರಿ ನಾವು ಅಲ್ಲಿನ ಗುಡ್ಡದ ಪೈನ್ ಮರಗಳ ಎಲೆಗಳ ಸದ್ದಿನ ಜೋಗುಳಕ್ಕೆ ಆ ಜನರ ಜೀವನವನ್ನು ಮನದೊಳಗೇ ಚಿತ್ರಿಸುತ್ತ ನಿದ್ರೆ ಹೋದೆವು. ಅಲ್ಲಿನ ಎಲ್ಲಾ ಪಟ್ಟಣಗಳಲ್ಲಿ ಜನ ಕೃಷಿ, ಪ್ರವಾಸೋದ್ಯಮಗಳನ್ನಾಧರಿಸಿಯೇ ಬದುಕುತ್ತಾರೆ. ಹಾಗಾಗಿ ಎಲ್ಲಉದ್ಯೋಗಸ್ಥ ಮಂದಿಗಳಿಗೂ ಇಂಗ್ಲಿಷ್, ಮತ್ತು ಕೆಲವರಿಗೆ ಹಿಂದಿ ಭಾಷೆ ಬರುತ್ತದೆ. ಇನ್ನೂ ಕೆಲವರು ಪ್ರವಾಸೋದ್ಯಮಕ್ಕಾಗೇ ಫ್ರೆಂಚ್,ಡಚ್,ಜರ್ಮನ್,ಜಪಾನೀ ಭಾಷೆಗಳನ್ನು ಕಲಿತಿರುತ್ತಾರೆ. ನಾವು ಹೋದಲ್ಲೆಲ್ಲಾ ವಿದೇಶೀ ಪ್ರವಾಸಿಗಳು ಕಂಡುಬಂದರು.

WP_20141104_026 WP_20141104_034 WP_20141104_046 WP_20141104_071

ನಾವು ಮರುದಿನ ಬೆಳಗ್ಗೆ ಬಿಸಿಲೇರುವುದಕ್ಕೆ ಮೊದಲೇ ಗುಡ್ಡದ ಮೇಲಿರುವ “ಖಮ್ಸುನ್ ಯುಲ್ಲೆ ಚೊರ್ಟಾನ್” ಹತ್ತಲೆಂದು ಹೊರಟೆವು. ಇದಕ್ಕೆ ಸುಮಾರು ೩ಕಿ.ಮಿ. ನಡೆಯುವ ದಾರಿ. ಗದ್ದೆಗಳ ಕಟ್ಟೆ ಪುಣಿಗಳ ಮೇಲೆ ನಡೆಯುತ್ತಾ, ಹಚ್ಚ-ಹಸಿರಿನ ಭತ್ತದ ಪೈರಿನ ಮದ್ಯದಿಂದಾಗಿ ಗುಡ್ಡೆಯ ಪದತಲಕ್ಕೆ ಸೇರಿದೆವು. ಅಲ್ಲಿಂದ ಹತ್ತುವ ದಾರಿ. ನೋಟ ಹಾಯಿಸಿದೆತ್ತಲೂ ಹಸಿರು ಪೈರು, ಮರಗಳು, ಹರಿಯುವ ನೀರು, ದೂರದಾಗಸದಲ್ಲಿ ಅಲೆಗಳಂತೆ ಕಾಣುವ ಹಿಮಾಲಯದ ಮರಿ ಪರ್ವತಗಳ ಸರಣಿ, ಕಣ್ಣಿಗೆ ಹಬ್ಬವೇ ಸರಿ. ನಾವು ಮೇಲೆ ತಲುಪಿದ್ದೇ ಅರಿವಿಗೆ ಬರಲಿಲ್ಲ. ಇಲ್ಲಿ ರಾಜ ಮಾತೆ ತನ್ನ ಜನರಿಗೆ, ಊರಿಗೆ ಮತ್ತು ವಂಶಸ್ಥರ ಅಭ್ಯುದಯಕ್ಕೆಂದು ಬೌದ್ಧ ಸ್ತೂಪವೊಂದನ್ನು ಕಟ್ಟಿಸಿದ್ದಾಳೆ, ಇದು ಬಹಳ ಸುಂದರವಾಗಿದೆ. ಅಲ್ಲಿನ ದೇವಾಲಯವನ್ನು ನೋಡಿ, ಸುತ್ತಲಿನ ಪ್ರಕೃತಿಯನ್ನು ಮನಸ್ಸಿನೊಳಗೆ ತುಂಬಿಕೊಂಡು ಬೆಟ್ಟವನ್ನಿಳಿದೆವು.

ಮುಂದೆ ನಾವು ಮಧ್ಯಾಹ್ನದ ಊಟ ಮುಗಿಸಿ ಕೋಟೆಯನ್ನು ನೋಡಲು ಹೋದೆವು. ಚಾರಿತ್ರಿಕವಾಗಿ ಪುನಾಕಾ ಪಟ್ಟಣಕ್ಕೆ, ಅಲ್ಲಿರುವ ಕೋಟೆಗೆ ಪ್ರಾಮುಖ್ಯತೆಯಿದೆ. ವಾಂಗ್ಚುಕ್ ವಂಶದವರು ಇದನ್ನೇ ತಮ್ಮ ರಾಜಧಾನಿಯಾಗಿರಿಸಿಕೊಂಡಿದ್ದರು. ಈಗಿನ ರಾಜನ ಮದುವೆ, ಪಟ್ಟಾಭಿಷೇಕ ಈ ಕೋಟೆಯೊಳಗೇ ನಡೆಯಿತು. ಬ್ರಿಟಿಷರ ಕಾಲದಲ್ಲಿ ಇಲ್ಲಿನ ರಾಜನಿಗೆ ಅವರೊಡನೆ ಆದ ಒಪ್ಪಂದವೂ ಇದರಲ್ಲೇ ನಡೆಯಿತು. ಕೋಟೆಯೊಳಗೆ ಒಂದು ಭಾಗದಲ್ಲಿ ಸರಕಾರದ ಕಛೇರಿಯಿದ್ದರೆ ಇನ್ನೊಂದು ಭಾಗದಲ್ಲಿ ಬೌದ್ಧ ಸನ್ಯಾಸಿಗಳು ವಾಸವಾಗಿದ್ದಾರೆ. ಅಲ್ಲಿ ಅವರ ದೇವಾಲಯವೂ ಇದೆ. ರಾಜವಂಶದವರು ಧಾರ್ಮಿಕ ವಿಧಿಗಳನ್ನು ಆಡಳಿತದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಈ ಕೋಟೆ ಸುಂದರ ಮತ್ತು ವಿಶಾಲವಾಗಿದೆ. ಇದರ ಪಕ್ಕದಲ್ಲೇ ಮೊಚು ಮತ್ತು ಪೊಚು ನದಿಗಳು ಹರಿಯುತ್ತವೆ.

DSC02060 DSC02259 DSC02229

DSC02323    DSC02359

ಈ ನದಿಯನ್ನು ದಾಟಿ ಕೋಟೆಗೆ ಹೋಗಲು ಆ ಕಾಲದಲ್ಲೆ ವಿಶಾಲವಾದ ಸೇತುವೆಯೊಂದನ್ನು ಕಟ್ಟಿದ್ದರು. “ಮೊಚು-ಅಮ್ಮ, ಪೊಚು-ಅಪ್ಪ” ನದಿಗಳೆಂಬ ಅರ್ಥ ಬರುತ್ತದೆಯೆಂದು ಗೈಡ್ ದೋರ್ಜಿ ನಮಗೆ ವಿವರಿಸಿದರು. ಈ ಹೆಸರು ಆ ನದಿಗಳ ನೀರಿನ ಹರಿವಿನ ಸೆಳತಕ್ಕನುಗುಣವಾಗಿದೆ. ಮುಂದೆ ಇವೆರಡು ನದಿಗಳ ಸಂಗಮ ಕೋಟೆಯ ಪಕ್ಕದಲ್ಲೇ ಆಗುವುದರಿಂದ ಇಲ್ಲಿನ ಸೇತುವೆ ಬಹಳಷ್ಟು ಬಾರಿ ನೆರೆ ನೀರಿನ ಧಾಳಿಗೊಳಗಾಗಿ ನಾಶವಾಗಿದೆ. ಎರಡೂ ನದಿ ಸಂಗಮಿಸಿ ಸಂಕೋಷ್ ನದಿಯಾಗಿ ಹರಿಯುತ್ತಾ ದಕ್ಷಿಣದಲ್ಲಿ ಬಾಂಗ್ಲಾ ದೇಶದೊಳಗೆ ಬ್ರಹ್ಮಪುತ್ರನದಿಯನ್ನು ಸೇರುತ್ತದೆ.

ಕೋಟೆಯನ್ನು ಪೂರ್ತಿಯಾಗಿ ನೋಡಿ ಹೊರಬರಲು ೧.೩೦ ತಾಸು ಸಮಯ ಹಿಡಿಯಿತು. ಈ ಕೋಟೆಯನ್ನು ಇಂಗವಾನಗ್ ನಮ್ಜಿಲ್ ಝಬ್ಡ್ರುಂಗ್ ರಿಂಪೋಚೆ ಅವರ ಅಪ್ಪಣೆಯ ಮೇರೆಗೆ ಕ್ರಿ.ಶ.೧೬೩೨ ನೇ ಇಸವಿಯಲ್ಲಿ ಕಟ್ಟಲಾಯಿತು. ಇವರು ಭುತಾನ ದೇಶವನ್ನು ಏಕೀಕರಿಸಿದ ರಾಜ. ಪುನಾಕದ ಕೋಟೆ ೧೯೫೫ ನೇ ಇಸವಿಯ ವರೆಗೆ ಎಲ್ಲಾ ರಾಜ್ಯಾಡಳಿತದ ಕೆಲಸಗಳಿಗೆ ಕೇಂದ್ರವಾಗಿತ್ತು. ಆ ಬಳಿಕ ಪುನಾಕಾದಿಂದ ೭೨ಕಿ.ಮಿ. ದೂರದಲ್ಲಿರುವ ಟಿಂಫೂ ಪಟ್ಟಣಕ್ಕೆ ರಾಜಧಾನಿಯು ಸ್ಥಳಾಂತರಿಸಲ್ಪಟ್ಟಿತು. ಪುನಾಕಾ ಕಣಿವೆಯು ಸಮುದ್ರ ಮಟ್ಟದಿಂದ ೧೨೦೦ಮಿ.ಎತ್ತರದಲ್ಲಿದೆ. ಇದು ಈ ದೇಶದ ಅಕ್ಕಿ ಬೆಳೆಯುವ ಪ್ರದೇಶ. ಇಲ್ಲಿನ ಉಷ್ಣಭರಿತ ,ತೇವಭರಿತ ಹವೆ, ಎಲ್ಲಾ ಕಾಲಗಳಲ್ಲಿ ತುಂಬಿ ಹರಿಯುವ ಪೋಚು ಮತ್ತು ಮೋಚು ನದಿಗಳು ಇದನ್ನು ಜನರು ಬಹುಕಾಲದಿಂದ ವಾಸಕ್ಕಾಗಿ ಆಯ್ಕೆ ಮಾಡುವ ಪ್ರದೇಶವನ್ನಾಗಿಸಿತ್ತು. ಇಲ್ಲಿನ ಜನ ಜೋಂಕಾ ಭಾಷೆಯನ್ನು ಆಡುತ್ತಾರೆ.

ಈ ಕೋಟೆಯಿಂದ ಹೊರ ಬಂದು ನಾವು ಪಟ್ಟಣವನ್ನು ನೋಡಲು ಹೋದೆವು. ಅದು ಸಣ್ಣ ಊರು. ಅಲ್ಲಿನ ಎಲ್ಲ ಊರುಗಳಲ್ಲು ವಿದ್ಯಾಭ್ಯಾಸ, ವೈದ್ಯಕೀಯ ಸಹಾಯಕ್ಕೆ ಬೇಕಾದ ಆಸ್ಪತ್ರೆ, ವೈದ್ಯರು, ಔಷಧಗಳು ಇತ್ಯಾದಿ ವ್ಯವಸ್ಥೆಗಳಿವೆ. ವಿದ್ಯಾಭ್ಯಾಸ, ಉತ್ತಮ ವೈದ್ಯಕೀಯ ಸೇವೆ ಸರಕಾರಿ ಅಸ್ಪತ್ರೆಗಳಲ್ಲಿ ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಲಭ್ಯ. ಆದರೆ ಇಲ್ಲಿ ಉನ್ನತ ವಿದ್ಯಾಭ್ಯಾಸಕ್ಕಿನ್ನೂ ಸಾಕಷ್ಟು ಸೌಲಭ್ಯಗಳಿಲ್ಲ. ಕೆಲವೇ ಕೆಲವು ವಿದ್ಯಾರ್ಥಿಗಳು ದೇಶದೊಳಗೇ ಉನ್ನತ ವಿದ್ಯಾಭ್ಯಾಸ ಮಾಡುತ್ತಾರೆ. ಇನ್ನು ಉಳಿದವರು ಭಾರತಕ್ಕೆ, ಶ್ರೀಲಂಕಾಕ್ಕೆ, ಹಾಗೇ ಶ್ರೀಮಂತರು ಯುರೋಪಿನ, ಅಮೇರಿಕಾದ ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ. ತಾಂತ್ರಿಕ/ಇಂಜಿನೇರಿಂಗ್, ವೈದ್ಯಕೀಯ ವಿದ್ಯಾಭ್ಯಾಸಗಳಿಗೆ ಅಲ್ಲಿ ಬೇಕಷ್ಟು ವ್ಯವಸ್ಥೆಗಳಿಲ್ಲ. ಅಲ್ಲಿನ ಆರ್ಥಿಕ ವ್ಯವಸ್ಥೆ ಮುಖ್ಯವಾಗಿ ಕೃಷಿ, ಪ್ರವಾಸೋದ್ಯಮಗಳನ್ನಾಧರಿಸಿದೆ. ಹೆಚ್ಚಿನ ಕೈಗಾರಿಕಾ ವಸ್ತುಗಳು ಮತ್ತು ಆಹಾರ, ಬಟ್ಟೆ ಇತ್ಯಾದಿ ಭಾರತದಿಂದ ರವಾನೆಯಾಗುತ್ತದೆ. ಭೂತಾನಿನ ಹೆಣ್ಮಕ್ಕಳು ಎಷ್ಟೋ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ ಗೌರವಯುತ ಅಪಾಯರಹಿತ ಬಾಳನ್ನು ಬಾಳುತ್ತಾರೆ. ನಾವು ಆ ಬಗ್ಗೆ ನಮ್ಮ ಮಾರ್ಗದರ್ಶಕರಾದ ದೋರ್ಜಿಯವರಿಂದಲೇ ತಿಳಿದೆವು. ಅಲ್ಲಿ ಯಾವುದೇ ಹೆಣ್ಮಗಳು ತನ್ನ ಮೇಲೆ ಗಂಡೊಂದು ಕೈಮಾಡಿದನೆಂದು ದೂರಿತ್ತರೆ ಸಾಕು ಪೊಲೀಸರು ಅವನನ್ನು ಜೈಲಿನಲ್ಲಿ ಹಾಕಿಬಿಡುತ್ತಾರೆ. ಅತ್ಯಾಚಾರದಂತಹ ಅಪರಾಧ ಕೇಳಿ ಬರುವುದಿಲ್ಲವಂತೆ.
ಪುನಾಕಾ ಪಟ್ಟಣದ ದರ್ಶನವಾಗಿ, ನಂತರ ನಾವು ನಮ್ಮ ಧೆನ್ಸಾ ರೆಸೊರ್ಟ್ ಗೆ ಹೋದೆವು. ಮರುದಿನ ನಾವು ಪುನಃ ಬೆಳಗ್ಗೆ ಬೇಗನೇ ಹೊರಡಬೇಕಿತ್ತು. ಅಲ್ಲಿನ ಮುಖ್ಯ ರಸ್ತೆಗಳ ಕಾಮಗಾರಿ ಕೆಲಸಕ್ಕಾಗಿ ಅವರು ಹೋಗುವ ಬರುವ ವಾಹನಗಳಿಗೆ ನಿಗಧಿತ ಸಮಯ ಕೊಟ್ಟಿದ್ದರು. ನಾವು ಬೆಳಗ್ಗೆ ಬೇಗನೇ ಹೊರಟುದರಿಂದ ರಸ್ತೆ ಮೇಲೆ ಕಾಯುವ ಸಮಯವನ್ನು ಉಳಿಸಿದೆವು.
ನಮ್ಮ ಮರು ಪ್ರಯಾಣವು ಪಾರೋ ಕಣಿವೆಯತ್ತ. ಅದು ಟಿಂಫೂಗೆ ಸಮೀಪದಲ್ಲೇ ಇದೆ. ನಾವು ಹೋಗಲು ಬಳಸಿದ ರಸ್ತೆಯಲ್ಲೇ ವಾಪಾಸು ಪ್ರಯಾಣಿಸುತ್ತಾ ದಾರಿಯಲ್ಲಿ ಸಿಗುವ ರಾಯಲ್ ಬೊಟಾನಿಕಲ್ ಗಾರ್ಡನ್ನಿನ ದರ್ಶನ ಮಾಡಿದೆವು.

DSC02410   DSC02488

ಭುತಾನಿನಲ್ಲಿ ಪ್ರಪಂಚದ ಬೇರೆಡೆಯಲ್ಲಿ ಕಾಣಲು ಸಿಗದ ಎಷ್ಟೋ ಹಿಮಾಲಯದ ಸಸ್ಯ-ಪ್ರಾಣಿಜೀವ ವೈವಿಧ್ಯ ಇದೆ. ಇಲ್ಲಿನ ಸರಕಾರ ಹಾಗಾಗಿ ದೇಶದಿಂದ ಹೊರ ಹೋಗುವ ಯಾತ್ರಿಕರು ಯಾವುದೇ ಜೀವಿಗಳನ್ನು, ಪ್ರಾಕೃತಿಕ ವಸ್ತುಗಳನ್ನು(ಹೂವು. ಹಣ್ಣು,ಬೀಜ, ಕಲ್ಲು….) ಸರಕಾರೀ ಅನುಮತಿಯಿಲ್ಲದೇ ಒಯ್ಯಬಾರದೆಂಬ ನಿಯಮ ಹಾಕಿದೆ. ತಪಾಸಣೆಯಲ್ಲಿ ಸಿಕ್ಕಿ ಬಿದ್ದವರು ದಂಡ ತೆರಬೇಕು, ಇಲ್ಲಾ ವಿರೋಧಿಸಿದ ಕೆಲಸಕ್ಕನುಗುಣವಾಗಿ ಶಿಕ್ಷೆ ಅನುಭವಿಸಬೇಕು. ಅಲ್ಲಿ ವಿದೇಶೀ ಪ್ರವಾಸಿಗಳು ಗೈಡ್ ಇಲ್ಲದೇ ಪ್ರಯಾಣಿಸಬಾರದೆಂಬ ನಿಯಮವಿದೆ. ದೇಶದ ನೀತಿ-ನಿಯಮಗಳನ್ನು ತಿಳಿ ಹೇಳುವುದು ಗೈಡಿನ ಕರ್ತವ್ಯವಾಗಿದೆ. ಹಿಮಾಲಯದ ಎಲ್ಲಾ ಊರುಗಳೂ ಸುಂದರ, ಜನರು ಸ್ನೇಹಪರರು ಎಂದು ನನಗನಿಸಿತು. ಸಿಕ್ಕಿಂ ಮತ್ತು ಇಲ್ಲಿ ಹೊಸಬರು, ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸಿ ಉದ್ದದ, ಸಪುರಕ್ಕಿರುವ ಶಲ್ಯವೊಂದನ್ನುಕೊರಳಲ್ಲಿ ಹಾಕಿ ಒಳಗೆ ಕರೆದೊಯ್ಯುತ್ತಾರೆ.

DSC02606

ಈ ಸೇತುವೆ ೧೪ನೇ ಶತಮಾನದ ಬೌದ್ಧ ಸಂತ ಡ್ರುಪ್ತಾಪ್ ಚಜ಼ನ್ಪಾ ಎಂಬವನು ನಿರ್ಮಿದನು. ಅವನು ಟಿಬೆಟಿನಿಂದ ಬಂದು ಇಲ್ಲಿ ನೆಲೆಸಿ ಇಡೀ ಭುತಾನದೊಳಗೆ ಒಟ್ಟು ೧೦೮ ಸೇತುವೆಗಳನ್ನು ಕಟ್ಟಿದ್ದಾನೆ.

ನಾವು ಸುಮಾರು ಮಧ್ಯಾಹ್ನ ೨ಗಂಟೆಯ ಹೊತ್ತಿಗಾಗುವಾಗ ಪಾರೋ ಪಟ್ಟಣವನ್ನು ತಲುಪಿದೆವು. ಅಲ್ಲಿನ ಸಣ್ಣ ಹೋಟೇಲಿನಲ್ಲಿ ಉಪಾಹಾರ ಸೇವಿಸಿ ಆ ಊರಿನ ಚರಿತ್ರೆ ತಿಳಿಸುವ ಮ್ಯುಸಿಯಮಿಗೆ ಹೋದೆವು. ಈ ಊರು ಅಲ್ಲಿನ ಬೌದ್ಧ ಧರ್ಮದ ವಿಕಾಸದಲ್ಲಿ, ರಾಜ್ಯದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ದೇಶದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿದೆ. ನಾವು ಅಲ್ಲೇ ವಿಮಾನದಲ್ಲಿ ಬಂದಿಳಿದೆವು. ರಿನ್ಮುಪುನ್ ಡ್ಜಾಂಗ್ ಹದಿನೇಳನೇ ಶತಮಾನದ ಒಂದು ಕೋಟೆ. ಈಗ ಇಲ್ಲಿ ಮುಖ್ಯವಾಗಿ ಬೌದ್ಧಸನ್ಯಾಸಿಗಳ ಶಾಲೆ, ಆಶ್ರಮವಿದೆ. ಹಾಗೂ ಅದರ ಒಂದು ಪಾರ್ಶ್ವದಲ್ಲಿ ಸರಕಾರದ ಆಡಳಿತದ ಕಛೇರಿಯಿದೆ. ಮ್ಯುಸಿಯಮಿನಲ್ಲಿ ಮುಖ್ಯವಾಗಿ ಈ ದೇಶದ ಇತಿಹಾಸ, ಬೌದ್ಧ ಧರ್ಮದ ಬೆಳವಣಿಗೆ, ಮುಖ್ಯ ಪ್ರೇಕ್ಷಣೀಯ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳ ಬಗ್ಗೆ ತೋರಿಸಿದ್ದಾರೆ.

DSC02680 DSC02700

DSC02725 DSC02797

ನಾನಿಲ್ಲಿ ನಮ್ಮ ಮಾರ್ಗದರ್ಶಿ ಶಿರಿನ್ ದೋರ್ಜಿಯವರೊಂದಿಗೆ

ಇದು ಪಾರೋದ ಅರಮನೆಯ ಸಮೀಪದಲ್ಲಿ, ಅದೇ ಗುಡ್ಡದ ಮೇಲಿನ ಸ್ತರದಲ್ಲಿದೆ. ನಮಗೆ ಕೇವಲ ಮ್ಯುಸಿಯಮಿನ ಒಳಗೆ, ಹಾಗೂ ಅವರ ದೇವಾಲಯದ ಒಳಗೆ ಮಾತ್ರ ನೋಡಲು ಪ್ರವೇಶ, ಹಳೆ ಅರಮನೆಯ ದುರಸ್ತಿ ಕೆಲಸ ನಡೆಯುತ್ತಿತ್ತು. ನಂತರ ನಾವು ಬೌದ್ಧ ಭಿಕ್ಷುಗಳ ವಿದ್ಯಾಭ್ಯಾಸ, ತರಬೇತಿ ನಡೆಯುವ ಕೋಟೆಯ ಒಳಗೆ ಪ್ರವೇಶಿಸಿ ದೇವಾಲಯವನ್ನು ದರ್ಶಿಸಿದೆವು. ಈ ಭಿಕ್ಷುಗಳು ಅವರ ಬಾಲ್ಯದಲ್ಲೇ ಸಾಂಸಾರಿಕ ಜೀವನವನ್ನು ತೊರೆದು ಅಲ್ಲಿಗೆ ಬರುತ್ತಾರೆ. ನಮ್ಮ ಗೈಡ್ ನಮಗೆ ಸನ್ಯಾಸಿಗಳು, ತರಬೇತಿ ಇವುಗಳ ಬಗ್ಗೆ ಮಾಹಿತಿ ಹೇಳಿದರು. ಅವರು ಹೇಳಿದಂತೆ ೯-೧೦ ಶತಮಾನಗಳ ಹಿಂದೆ ಬೌದ್ಧ ಧರ್ಮದ ಆಚರಣೆ ಪ್ರಾರಂಭವಾದ ನಂತರ ಆ ಪ್ರದೇಶದಲ್ಲಿ ಸುಸಂಸ್ಕೃತ ಜೀವನ, ನಾಗರೀಕತೆ ಬಂದಿತು, ಅದಕ್ಕೆ ಮೊದಲು ಅವರು ಕೇವಲ ಗುಡ್ಡಗಾಡಿನ ಜನರಾಗಿ ಬೇಟೆಯಾಡಿಕೊಂಡು ಬದುಕುತ್ತಿದ್ದರು.
ಕೋಟೆ, ಕಲಿಕೆಯಲ್ಲಿರುವ ತರುಣ ಮುನಿಗಳನ್ನು ನೋಡಿ ನಾವು ಆ ಧರ್ಮದ ವಿಚಾರಗಳನ್ನು ವಿಮರ್ಶಿಸುತ್ತಾ ಗುಡ್ಡದ ಇನ್ನೊಂದು ಮೈಯಿಂದಾಗಿ ಕೆಳ ಇಳಿದು ಬಂದೆವು. ನಮ್ಮ ನಡಿಗೆಯ ದಾರಿ ಬಹಳ ಸುಂದರವಾಗಿತ್ತು. ಪಾರೋ ಪಟ್ಟಣವು ನಮ್ಮ ಮುಂದೆ ಪೂರ್ತಿಯಾಗಿ ಗೋಚರಿಸಿತು.

WP_20141105_057   WP_20141105_037

WP_20141105_073  WP_20141105_065

ಹರಿಯುವ ನದಿ, ಕೃಷಿಗೆ ಅಳವಡಿಸಿದ ಭೂಮಿ, ನೀರಿನ ಇಕ್ಕೆಲದಲ್ಲಿ ಪಟ್ಟಣ, ಜನವಸತಿ, ಹಾಗೂ ಮದ್ಯ-ಮದ್ಯದಲ್ಲಿ ಕಾಣುವ ವಿವಿಧ ವರ್ಣಗಳ ಗಿಡ-ಮರಗಳು ನಮ್ಮನ್ನು ಅಲ್ಲೇ ಬಹಳ ಹೊತ್ತುಎತ್ತರದಲ್ಲಿ ನಿಂತು ನೋಡುವಂತೆ ಮಾಡಿದವು. ಇಳಿದು ಕೆಳಗೆ ಬರುವಾಗ ನಮ್ಮ ದಾರಿಗಡ್ಡವಾಗಿ ನದಿಯೊಂದು ಹರಿಯುತ್ತಾ ಜೀವರಾಶಿಗಳ ತೃಷೆ ತೀರಿಸುತ್ತಾ, ಉಣಬಡಿಸುತ್ತಾ, ಕೊಳಕನ್ನು ತೊಳೆಯುತ್ತಾ ಹೋಗುತ್ತಿತ್ತು. ನದಿಯ ಸೇತುವೆಯನ್ನು ದಾಟಿ ನಮ್ಮ ವಾಹನ ನಿಲ್ಲಿಸಿದಲ್ಲಿಗೆ ಬಂದೆವು. ಅಂದು ನಾವು ಉಳಿದುಕೊಂಡ ರೆಸಾರ್ಟ್ ಝ್ಹಿವಾಲಿಂಗ್ ಅಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಿದ ಕಟ್ಟಡವಾಗಿತ್ತು. ಮೊದಲಿನ ಕಾಲದಲ್ಲಿ ಅರಮನೆ, ಕೋಟೆಗಳನ್ನು ಅದೇ ಪದ್ಧತಿಯಲ್ಲಿ ಕಟ್ಟುತ್ತಿದ್ದರಂತೆ. ಅಲ್ಲಿನ ಕಪ್ಪು ಕಲ್ಲಿನ ಗೋಡೆ, ಮರದ ನೆಲ ಒಟ್ಟು ಅನುಭವ ನಮ್ಮನ್ನು ಮೊದಲಿನ ಕಾಲದ ಅಲ್ಲಿನ ಅವರ ಅರಮನೆ, ಕೋಟೆಯೊಳಗಿನ ಜೀವನ ದೃಶ್ಯಗಳನ್ನು ಕಲ್ಪಿಸುವಂತೆ ಮಾಡುತ್ತಿದ್ದವು. ರಾತ್ರಿಯಲ್ಲಿ ನಾವು ಮರುದಿನ ನಾವು ಏರಲಿರುವ ಟಕ್ಸ್ ಟಾಂಗ್ ದೇವಾಲಯದ ವಿವರಗಳನ್ನು ಓದಿ ಮಾನಸಿಕವಾಗಿ ತಯಾರಾದೆವು.

DSC_0467 DSC02870 DSC02890

ಟಕ್ಸ್ ಟಾಂಗ್ ದೇವಾಲಯ ಅವರ ಧರ್ಮಕ್ಕೆ ಸಂಬಂಧಪಟ್ಟಂತೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಇನ್ನೊಂದು ಹೆಸರು “ಟೈಗರ್ಸ್ ನೆಸ್ಟ್ -(Tiger’s Nest)”, ಈ ದೇವಾಲಯದ ಹಿಂದೆ ರೋಮಾಂಚಕಾರಿ ಕಥೆಯಿದೆ. ನಾವು ಉಳಿದುಕೊಂಡಿದ್ದ ಪಾರೋ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು ೬೦೦೦ ಅಡಿಗಳ ಎತ್ತರದಲ್ಲಿದೆ. ಈ ದೇವಾಲಯವನ್ನು ೩೦೦೦ಅಡಿ ಎತ್ತರದಲ್ಲಿರುವ ಬೆಟ್ಟದ ಮೇಲೆ ಕಟ್ಟಲಾಗಿದೆ. ಇದು ಪಾರೋದಿಂದ ೧೦ಕಿ.ಮೀ. ದೂರದಲ್ಲಿದೆ. ನಾವು ಸುಮಾರು ೫-೬ಕಿ.ಮೀ( ಅದು ಸಾಧಾರಣ ೩೦೦೦ ಅಡಿಎತ್ತರದ ಬೆಟ್ಟ) ನಡೆಯಲಿರುವ ಕಾರಣ ಬಿಸಿಲೇರುವ ಮೊದಲೇ ಬೆಟ್ಟದ ತಲಕ್ಕೆ ತಲುಪಿದೆವು. ಈ ಬೆಟ್ಟದ ಮೇಲಿರುವ ಗುಹೆಯೊಳಗೆ ಪದ್ಮ ಸಂಭವ( ಇಲ್ಲೆಲ್ಲಾ ಗುರು ರಿಂಪೋಚೆ ಎಂದೇ ಪ್ರಸಿದ್ಧಿ) ಎಂಬ ಬೌದ್ಧ ಮುನಿ ತಪಸ್ಸು ಮಾಡಿ ಅಲ್ಲಿರುವ ಅಸುರೀ ಶಕ್ತಿಗಳನ್ನು ವಶ ಪಡಿಸಿಕೊಂಡರು, ನಂತರದ ದಿನಗಳಲ್ಲಿ ಆ ಕಣಿವೆ ಪ್ರದೇಶದಲ್ಲಿ ಬೌದ್ಧಧರ್ಮ ವ್ಯಾಪಿಸಿತು. ಅವರ ಶಿಷ್ಯನು ಗುರು ರಿಂಪೋಚೆ ತಪಸ್ಸಾಚರಿಸಿದ ಗುಹೆಯೊಳಗೆ ಕ್ರಿ.ಶ.೧೬೯೨ ಕಾಲದಲ್ಲಿ ದೇವಾಲಯವನ್ನು ನಿರ್ಮಿಸಿದನು. ಗುರು ರಿಂಪೋಚೆ ಟಿಬೆಟಿನಿಂದ ಹುಲಿಯ ಮೇಲೆ ಕುಳಿತುಕೊಂಡು ಆಕಾಶ ಮಾರ್ಗದಲ್ಲಿ ಈ ಬೆಟ್ಟದ ತುದಿಗೆ ಬಂದನೆಂದು ಪ್ರತೀತಿ, ಹಾಗಾಗಿ ಈ ಗುಹೆಗೆ ಟೈಗರ್ಸ್ ನೆಸ್ಟ್ ಎಂದು ಹೆಸರು ಬಂತು. ಈ ಗುಹೆ ತೀರ ಲಂಬವಾಗಿರುವ ದೊಡ್ಡದಾದ ಬಂಡೆಕಲ್ಲಿನ ಸಂದಿಯೊಳಗಿದೆ. ನಾವು ಬೆಟ್ಟ ಏರುತ್ತಿರುವಾಗ ನಮಗೆ ದೂರದಿಂದ ಕಾಣುವ ಅದರ ಆಕಾರ, ಗಾತ್ರ ಹತ್ತಿರವಾದಾಗ ಭಾಸವಾಗುವುದಿಲ್ಲ. ಆ ಕಾಲದಲ್ಲಿ ಅಂತಹ ದುರ್ಗಮ ಪ್ರದೇಶದಲ್ಲಿ ದೇವಾಲಯವನ್ನು ಹೇಗೆ ನಿರ್ಮಿಸಿದರೆಂದು ಆಶ್ಚರ್ಯವಾಗುತ್ತದೆ. ನಾವು ಹತ್ತಲು ಪ್ರಾರಂಭಿಸಿದ ಕಲ್ಲಿನ ಬೆಟ್ಟವನ್ನು ಹತ್ತಿ ಇಳಿದು ಇನ್ನೊಂದು ಬೆಟ್ಟವನ್ನು ಏರಿದಾಗಲೇ ಟೈಗರ್ಸ್ ನೆಸ್ಟ್ ನ ಸಮೀಪಕ್ಕೆ ಬರುತ್ತೇವೆ. ಇದರನ್ನು ಅವರು ಭುತಾನಿನ ಪ್ರವಾಸದ ಕೊನೆಯಲ್ಲಿ ತೋರಿಸುತ್ತಾರೆ. ಬಹುಷಃ ನಮ್ಮ ಮೊದಲ ದಿನಗಳ ಬೆಟ್ಟ ಹತ್ತಿದ ತರಬೇತಿ ಕೊನೆಯ ದಿನಕ್ಕಾಗುವಾಗ ನಮ್ಮನ್ನು ಮಾನಸಿಕವಾಗಿ ತಯಾರಾಗುವಂತೆ ಮಾಡುತ್ತದೆ. ಇದನ್ನು ನೋಡಿದ ನಂತರ ಪ್ರಕೃತಿಯ ಸಾಮೀಪ್ಯದಲ್ಲಿ ಮಾತ್ರ ದೇವರ ಅಸ್ತಿತ್ವವನ್ನು ಅನುಭವಿಸಲು ಸಾಧ್ಯವೆಂಬ ನಿರ್ಧಾರಕ್ಕೆ ಬಂದೆ. ಅಲ್ಲಿನ ಪ್ರಶಾಂತ, ನೀರವ, ಸುಂದರ ವಾತಾವರಣ, ಹಿಮಾಲಯದ ಕಠೋರ ಹವೆಯ ಮಧ್ಯದಲ್ಲಿ ಮಾಡಿದ ತಪಸ್ಸು ಆ ಮುನಿಗೆ ತಿಳುವಳಿಕೆಯನ್ನು ಕೊಟ್ಟಿತ್ತು. ಈ ದೇವಾಲಯಕ್ಕೆ ಹೋದ ಅನುಭವ ನನಗೆ ಏನೋ ಒಂದು ರೀತಿಯ ಪ್ರಬುದ್ಧತೆ ಮತ್ತು ತಿಳುವಳಿಕೆಯನ್ನು ಕೊಟ್ಟಿತು.

DSC02960 DSC02968
ಇಲ್ಲಿಂದ ಕೆಳಗಿಳಿದ ಮೇಲೆ ಸಾಯಂಕಾಲ ನಾವು ಕೊನೆಯದಾಗಿ ಅದೇ ಪ್ರದೇಶದಲ್ಲಿರುವ ಇನ್ನೊಂದು ಕೋಟೆಯನ್ನು ವೀಕ್ಷಿಸಲು ಹೋದೆವು. ಡ್ರುಕ್ಜಿಲ್ ಡ್ಜಾಂಗ್ -Drukgyel Dzong- ಈ ಕೋಟೆಯನ್ನು ಟಿಬೆಟಿನಿಂದ ಆಕ್ರಮಿಸಿ ದೇಶದೊಳಗೆ ಬರುವ ಶತ್ರುವನ್ನು ಕಾಣುವಂತೆ ಕಟ್ಟಿದ್ದಾರೆ. ಅಲ್ಲಿಂದ ಈ ಎರಡು ದೇಶಗಳ ಗಡಿ ಪ್ರದೇಶಕ್ಕೆ ಹೆಚ್ಚಿನ ದೂರವಿಲ್ಲ. ಈಗಿನ ಬದಲಾದ ಜೀವನ ಪದ್ಧತಿಯು ಕಳೆದ ಶತಮಾನಗಳ ವರೆಗೆ ನಡೆಯುತ್ತಿದ್ದ ಯುದ್ಧಗಳನ್ನು ತೀರ ಇಲ್ಲವಾಗಿಸಿದೆ. ಹಾಗಾಗಿ ಬೆಂಕಿ ಹೊತ್ತಿ ಉರಿದು ಭಸ್ಮಗೊಂಡ ಈ ಕೋಟೆಯನ್ನು ಸರಕಾರವು ಪುನರುಜ್ಜೀವನಗೊಳಿಸಲು ಯತ್ನಿಸಿಲ್ಲ. ಅಲ್ಲಿನ ಹಳೆ ಕಟ್ಟಡಗಳಲ್ಲಿ ಮರಗಳನ್ನು ತುಂಬಾ ಉಪಯೋಗಿಸಿದ್ದಾರೆ, ಹಾಗಾಗಿ ಕಲ್ಲಿನಿಂದ ಕಟ್ಟಿದ ಭಾಗಗಳು ಮಾತ್ರ ಉಳಿದುಕೊಂಡಿವೆ. ಇದು ಮೊದಲಿನ ಕಾಲದಲ್ಲಿ ಸೇನೆ, ಸೇನೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಂಗ್ರಹಿಸಿಡುವ ಜಾಗವಾಗಿತ್ತು. ಹಾಗಾಗಿ ಇಲ್ಲಿ ಅರಮನೆ ಇವುಗಳಿಗೆ ಪ್ರಾಮುಖ್ಯತೆಯಿಲ್ಲ. ಹಗಲಿನಲ್ಲಿ ಬೆಟ್ಟ ಹತ್ತಿ ಅಯಾಸಗೊಂಡಿದ್ದ ನಾವು ಇಲ್ಲಿನ ಕೋಟೆಯನ್ನು ಬೇಗನೇ ನೋಡಿ ಮುಗಿಸಿದೆವು.ಇದರೊಂದಿಗೆ ನಮ್ಮ ಭುತಾನ್ ವಾಸ, ಪ್ರವಾಸ ಮುಗಿಯಿತು.

DSC_0515

ನಮ್ಮ ಮುಂದಿದ್ದುದು ಇನ್ನು ಮರುದಿನ ನವೆಂಬರ್ ೭-೨೦೧೪ ರ ಬೆಳಗ್ಗೆ  ಪಾರೋ ವಿಮಾನ ನಿಲ್ದಾಣದಿಂದ ನೇಪಾಲದ ಕಟ್ಮಂಡುವಿಗೆ ಹೋಗುವುದು. ನಮ್ಮ ವಿಮಾನದ ದಾರಿ ಹಿಮಾಲಯದ ತಪ್ಪಲಲ್ಲಿರುವ ಸಣ್ಣ ಪರ್ವತ ಶ್ರೇಣಿಗಳ ಪಕ್ಕದಲ್ಲೇ. ಈ ಪ್ರಯಾಣದಿಂದ ನಮಗೆ ಸರಸ್ವತೀ ದೇವಿಯ ಕುರಿತಾದ ತುಷಾರ ಹಾರ ಧವಳ ಎಂಬ ವರ್ಣನೆಯ ಅರ್ಥ ಸರಿಯಾಗಿ ಮನದಟ್ಟಾಯಿತು. ಹಿಮಾವೃತ ಶ್ವೇತವರ್ಣದ ಗಿರಿಗಳ ಗಂಭೀರ ಸೌಂದರ್ಯ ಕೇವಲ ಅನುಭವಿಸಿಯೇ ತಿಳಿಯಬೇಕಷ್ಟೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s