ನಮ್ಮ ಸಿಕ್ಕಿಂ ಪ್ರವಾಸ

ನಾವು ಕಳೆದ ವರ್ಷ ನಮ್ಮ ಭಾರತ ದೇಶದ ಉತ್ತರ ಪೂರ್ವದಲ್ಲಿರುವ ಸಿಕ್ಕಿಂ ರಾಜ್ಯಕ್ಕೆ ಹೋಗಿದ್ದೆವು. ಅದು ನೇಪಾಳ, ಟಿಬೆಟ್ ಮತ್ತು ಭುತಾನ್ ದೇಶಗಳಿಂದ ಸುತ್ತುವರಿದಿದೆ. ಸಿಕ್ಕಿಂ ಹಿಮಾಲಯದ ಕೆಳಗಿನ ಹಂತದಲ್ಲಿರುವ ರಾಜ್ಯ.ಇಲ್ಲಿ ಹಿಂದು, ಬೌದ್ಧ ಧರ್ಮಗಳು ಮುಖ್ಯವಾದುದು. ಅದು ನಮ್ಮ ದೇಶದೊಂದಿಗೆ ೧೯೭೫ ರಲ್ಲಿ ಪ್ರಜೆಗಳ ಬೇಡಿಕೆ,ಒತ್ತಾಯದಿಂದ ಸೇರಿಕೊಂಡಿತು. ಇಲ್ಲಿನ ಜನರಲ್ಲಿ ನೆಪಾಳಿಗಳು, ಟಿಬೆಟನ್ನರು, ಮತ್ತು ಮುಂಚಿನಿಂದಲೇ ವಾಸವಾಗಿದ್ದ ಲೆಪ್ಚಾ ಜನಗಳು ಮತ್ತು ಇತರ ವಲಸೆ ಹೋದವರು ಇದ್ದಾರೆ. ನಮ್ಮ ಬಂಧುಗಳ ಮಗನೊಬ್ಬ(ನರೇಶ) ಅಲ್ಲಿನ ಹುಡುಗಿಯೊಬ್ಬಳನ್ನು(ಪ್ರಿಯಾ) ಬಾಳ ಸಂಗಾತಿಯಾಗಿ ಆರಿಸಿಕೊಂಡ, ನಾವೆಲ್ಲ ಅವನ ಮದುವೆಯ ಆಚರಣೆ ಮತ್ತು ಸಂಭ್ರಮದಲ್ಲಿ ಭಾಗಿಗೊಳ್ಳಲು ಕುಟುಂಬದವರೆಂದು ಹೋದೆವು. ನಮ್ಮ ಉದ್ದೇಶವಿದ್ದುದು ಮದುವೆಯೊಂದಿಗೆ ಆ ಸುಂದರವಾದ ಊರಿನ, ಹಿಮಾಲಯ ಪರ್ವತಗಳ ದರ್ಶನವನ್ನೂ ಪೂರೈಸುವುದು. ನಾವು ಉಳಿದುಕೊಂಡ ಊರು ಸಿಕ್ಕಿಂನ ರಾಜಧಾನಿ ಗಾಂಗ್ಟಾಕ್ ಪಟ್ಟಣ.

WP_000895

ಇದಕ್ಕೆ ಅತಿ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಶ್ಚಿಮ ಬಂಗಾಳದ ಬಾಗ್ ಡೋಗ್ರದ ಭಾರತೀಯ ವಾಯುಸೇನೆಯವರದು. ಇದು ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ ಎಂಬ ಪಟ್ಟಣದ ಸಮೀಪದಲ್ಲಿದೆ. ನಾವು ಹೈದರಾಬಾದಿನಿಂದ ಮುಂಜಾನೆ ಹೊರಟು ವಾಯುಮಾರ್ಗದಲ್ಲಿ ಬೆಳಗ್ಗೆ ೧೦ಕ್ಕೆ ಕಲ್ಕತ್ತ ನಗರ, ಆ ಬಳಿಕ ಮಧ್ಯಾಹ್ನದ ಹೊತ್ತಿಗಾಗುವಾಗ ಬಾಗ್ ಡೋಗ್ರದ ವಿಮಾನ ನಿಲ್ದಾಣದಲ್ಲಿಳಿದೆವು. ನಮ್ಮೊಂದಿಗೆ(ನಾನು ಹಾಗೂ ಶ್ಯಾಮ) ನನ್ನ ಮಾವ-ಅತ್ತೆಯವರು ಮತ್ತು ಮುಂಬಯಿನಿಂದ ಬಂದ  ಶ್ಯಾಮನ ಅಣ್ಣ-ಅತ್ತಿಗೆ ಇದ್ದರು. ನಾವು ಮುಂಚಿತವಾಗಿ ಕಾದಿರಿಸಿದ ಕಾರಿನಲ್ಲಿ ಬಾಗ್ ಡೋಗ್ರಾದಿಂದ ನಿಧಾನವಾಗಿ ಹಿಮಾಲಯದ ಮೈಯ್ಯನ್ನೇರುತ್ತ, ದಾರಿಯಲ್ಲಿ ಬೆಟ್ಟವನ್ನು ತೊಳೆಯುತ್ತಾ ಕೆಳಗಿಳಿದು ಬರುವ ತೀಸ್ತಾ ನದಿಯ ಪಕ್ಕದಲ್ಲೇ ಪ್ರಯಾಣಿಸಿದೆವು. ತೀಸ್ತಾ ನದಿ ಸಿಕ್ಕಿಂ ಮತ್ತು ಪ.ಬಂಗಾಳವನ್ನು ಪ್ರತ್ಯೇಕಿಸುವಂತೆ ಎರಡರ ಮಧ್ಯದಲ್ಲಿ ಹರಿಯುತ್ತಾಳೆ. ನಮ್ಮ ಸುತ್ತಲಿನ ಪ್ರಕೃತಿಯನ್ನು, ಅವಳ ಕುಶಲತೆಗಳನ್ನು,ದೂರದ ಗಿರಿ ಶಿಖರಗಳನ್ನು ಕಣ್ತುಂಬಾ ನೋಡುತ್ತಾ ದಾರಿ ಸವೆಸಿದೆವು. ನಮ್ಮ ದಾರಿ ಸುಮಾರು ೧೨೦ಕಿ.ಮೀ. ದೂರದ್ದಾದರೂ ಪರ್ವತದ ಮೈಯ್ಯನ್ನು ನಿಧಾವಾಗಿ ಮೇಲೇರಬೇಕಾಗಿರುವುದರಿಂದ ೪ ೧/೨ ತಾಸಿನಲ್ಲಿ ಗಾಂಗ್ ಟಾಕನ್ನು ತಲುಪಿದಾಗ ಸಾಯಂಕಾಲ ಗಂಟೆ ೭ ಆಗಿತ್ತು.

WP_000898
ನಮ್ಮ ಮುಖ್ಯ ಕಾರ್ಯಕ್ರಮ ನರೇಶ ಮತ್ತು ಪ್ರಿಯಾರ ಮದುವೆಯಲ್ಲಿ ಪಾಲ್ಗೊಳ್ಳುವುದು, ಅದು ಮಾರನೆಯ ದಿನದ್ದಾಗಿತ್ತು. ಮದುವೆಯ ಕಾರ್ಯಕ್ರಮವನ್ನು ಅವರು ಗಾಂಗ್ ಟಾಕ್ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಹಳ್ಳಿಮನೆಯಲ್ಲಿ ಇಟ್ಟುಕೊಂಡಿದ್ದರು. ಅಲ್ಲಿನ ಜನಜೀವನ, ಬೆಳೆ, ವ್ಯಾಪಾರ ವೃತ್ತಿಗಳು ನಮ್ಮ ದಕ್ಷಿಣ ಭಾರತದ ಭಾರತೀಯರಿಗಿಂತ ಭಿನ್ನವಾಗಿದ್ದರೂ ನಮ್ಮನ್ನೆಲ್ಲಾ ಸೂತ್ರದಂತೆ ಆವರಿಸಿದಂತಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳು ನಮ್ಮನ್ನು ಹತ್ತಿರಕ್ಕೆ ತಂದವು. ಪ್ರಿಯಾನ ಮನೆಯವರು ನೇಪಾಲಿ ಭಾಷೆ ಮಾತಾಡುತ್ತಾರೆ. ನಾವು ಗಂಡಿನ ಕಡೆಯವರು, ನಮ್ಮನ್ನು ಅವರು ಭಾಜಾಬಜಂತ್ರಿಯೊಂದಿಗೆ ಎದುರುಗೊಂಡು ಉಪಚರಿಸಿದರು.

1167432_10153106288345408_1911382200_onaresh priya

 

ಅಲ್ಲಿನ ಆಹಾರ, ಊಟ, ಧಾರ್ಮಿಕ ಪದ್ಧತಿಗಳು ನಮ್ಮಿಂದ ಸ್ವಲ್ಪ ಬೇರೆಯಾದರೂ ಇಂದಿನ ಆಧುನಿಕ  ತಂತ್ರಜ್ಞಾನವು ಮಾನಸಿಕ ಮತ್ತು ಭೌಗೋಲಿಕ ದೂರವನ್ನು ಹತ್ತಿರವಾಗಿಸಿದೆ, ಅದರ ಫಲವೇ ಇಂದಿನ ಹೊಸ ಜನಾಂಗದವರಿಗೆ ಯಾರೂ ಪರಜನರಲ್ಲ, ಅನ್ಯರಲ್ಲ. ಪ್ರಿಯಾನ ಹಳ್ಳಿಯ ಜನರು, ಸಂಬಂಧಿಗಳು ತನು-ಮನ-ಧನಗಳ ಸಹಕಾರದಿಂದ ಮದುವೆ, ಊಟ, ಉಪಚಾರ ಎಲ್ಲವನ್ನು ಚೊಕ್ಕವಾಗಿ ಪೂರೈಸಿದರು. ನಮ್ಮಲ್ಲಿ ಈ ಸ್ನೇಹ, ಪರಸ್ಪರ ಸಹಕಾರ ಇತ್ಯಾದಿ ಸರಳ ಜೀವನ ಹಳೆಕಾಲದ ಪದ್ಧತಿಯೆನಿಸಿಕೊಳ್ಳುವಷ್ಟು ಬದಲಾವಣೆ ಬಂದಿದೆ. ಮದುವೆಯೂಟ ಮುಗಿಸಿಕೊಂಡು ನಾವು ಆ ಹಳ್ಳಿಯೂರಿನಿಂದ ಗಾಂಗ್ಟಾಕ್ ಗೆ ಹಿಂತಿರುಗೆದೆವು.

WP_000887

ದಾರಿಯಲ್ಲಿ ರೂಮ್ ಟೆಕ್ ಎಂಬ ಬೌದ್ಧ ವಿಹಾರವನ್ನು ನೋಡಿಕೊಂಡು ಬಂದೆವು. ಇಲ್ಲಿ ಕೇವಲ ದೇವಾಲಯ ಮಾತ್ರವಲ್ಲದೆ ಭಿಕ್ಷುಗಳಿಗೆ ಶಿಕ್ಷಣ,ತರಬೇತಿ ನಡೆಯುತ್ತದೆ. ಇದು ಸುಮಾರು ೫೦೦ ವರ್ಷಗಳ ಇತಿಹಾಸವಿರುವ ಸ್ಥಳ, ಇದನ್ನು ಬಹಳ ಎತ್ತರದ ಬೆಟ್ಟವೊಂದರಲ್ಲಿ ಕಟ್ಟಿದ್ದಾರೆ. ಇಂತಹ ರಮಣೀಯವಾದ ಪ್ರಕೃತಿಯ ನಡುವೆ ನಮ್ಮ ಋಷಿಮುನಿಗಳು ಏಕಾಂತವೆಂದು ಸಾಧನೆಗಾಗಿ ಉಳಿದಿದ್ದರೆ ಆಶ್ಚರ್ಯವಿಲ್ಲ !
ನಮ್ಮ ಮಾರನೆಯ ದಿನದ ತಿರುಗಾಟವೆಂದರೆ ಗಾಂಗ್ ಟಾಕ್ ನ ಮುಖ್ಯ ಪ್ರವಾಸೀಧಾಮಗಳ ದರ್ಶನ. ನನಗಂತೂ ಬೇರೆಲ್ಲ ಪ್ರದೇಶಕ್ಕಿಂತ ನಾವು ನೋಡಿದ ಭಾರತ-ಚೀನಾ ದೇಶದ ಗಡಿಪ್ರದೇಶ ವಿಶಿಷ್ಟವೆನಿಸಿತು. ಇದು ಗಾಂಗ್ ಟಾಕ್ ನಿಂದ ಸಾಧಾರಣ ೪೦ಕಿ.ಮಿ. ದೂರದಲ್ಲಿದೆ. ಆ ದಾರಿಯಲ್ಲಿ ಹಿಮದಿಂದ ಮುಚ್ಚಿದ ಪರ್ವತಗಳ ಮಧ್ಯ ಎಷ್ಟೋ ಸಾವಿರ ವರ್ಷಗಳಿಂದ ವರ್ತಕರು, ಪ್ರವಾಸಿಗಳು ನಡೆದು ಬರುತ್ತಿದ್ದರು, ಅದರ ಹೆಸರು ನಾ ತುಲಾ ( Nathula)ಚರಿತ್ರೆಯಲ್ಲಿ ನಾವು ಓದಿದ Silk route ಇದೇ. ಇದು ಸಿಕ್ಕಿಮನ್ನು ಟಿಬೆಟ್ ನೊಂದಿಗೆ ಜೋಡಿಸಲಿರುವ ದಾರಿ. ಇಲ್ಲಿಗೆ ಸಾಮಾನ್ಯವಾಗಿ ಆಗೋಗ್ಯವಾಗಿರುವವರು, ವಿಪರೀತವಾದ ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯದವರನ್ನೇ ಹೋಗಲು ಬಿಡುತ್ತಾರೆ. ಹಾಗಾಗಿ ನನ್ನ ಅತ್ತೆ-ಮಾವನವರಿಗೆ ಈ ಪ್ರಯಾಣ ತಪ್ಪಿತು. ನಮ್ಮ ದೇಶದ ಗಡಿ ಕಾವಲಿಗೆ ಅಲ್ಲಿನ ಕೊರೆಯುವ ಚಳಿಯಲ್ಲಿ ಎಲ್ಲಾ ಕಾಲದಲ್ಲಿ ಸೈನಿಕರು ಪಹರೆ ಮಾಡುತ್ತಿರುತ್ತಾರೆ. ನಮ್ಮ ಭಾರತೀಯ ಸೇನೆಯ ಸರಹದ್ದಿನವರ ಠಿಕಾಣಿಯಿದ್ದಂತೆ ಚೀನಾದವರೂ ನಮ್ಮ ಕಛೇರಿಯ ಪಕ್ಕದಲ್ಲಿ ಅವರ ಕಛೇರಿ, ಸಂಬಂಧಿತ ಅಧಿಕಾರಿಗಳನ್ನು ಸ್ಥಾಪಿಸಿದ್ದಾರೆ. ನಮ್ಮ ಆ ಗಡಿನಾಡಿನ ಭೇಟಿಗೆ ಸೈನ್ಯದ ಅಧಿಕಾರಿಗಳ ಒಪ್ಪಿಗೆ ಪತ್ರ, ನಾವು ಇಲ್ಲಿನ ಪ್ರಜೆಗಳೆಂದು ತೋರಿಸಲು ಸಹಕರಿಸುವ ಕಾಗದ-ಪತ್ರಗಳು, ಭಾವಚಿತ್ರಗಳು ಅಗತ್ಯವಿದೆ. ನಮಗೆ ಮೊದಲೇ ಆ ವಿಚಾರವನ್ನು ಮಿತ್ರರೊಬ್ಬರು ತಿಳಿಸಿದ್ದ ಕಾರಣ ಅವೆಲ್ಲಕ್ಕೂ ನಾವು ಸಿದ್ಧರಾಗೇ ಹೋಗಿದ್ದೆವು. ಅದು ಸಮುದ್ರ ಮಟ್ಟದಿಂದ ೧೫,೦೦೦ ಅಡಿ ಮೇಲಿದೆ. ಹೋಗುವ ದಾರಿ ದುರ್ಗಮ, ಸರಕಾರದಿಂದ ಅಲ್ಲಿಗೆ ಹೋಗುವ ದಾರಿಯ ದುರಸ್ತಿಗೆ ಹೆಚ್ಚಿನ ಧನ ಸಹಾಯ ದೊರಕದೇ ದೀನ ಮತ್ತು ಅಪಾಯಕರ ಸ್ಥಿತಿಯಲ್ಲಿದೆ. ಹಿಮಾಲಯದ ಎಲ್ಲಾ ಬೆಟ್ಟಗಳೂ ಅತೀ ನಾಜೂಕು, ಅಲ್ಲಿನ ಕಲ್ಲು ಬಂಡೆಗಳು, ಮಣ್ಣು ಬಲು ಬೇಗ ಜರಿದು ಬೀಳುತ್ತವೆ. ಇದರಿಂದಾಗಿ ಹಿಮಾಲಯದಲ್ಲಿ ಪ್ರಯಾಣ ಯಾವತ್ತೂ ಅನಿಶ್ಚಿತ, ಮಳೆಗಾಲದಲ್ಲಿ ಇದ್ದಕ್ಕಿದ್ದಂತೆ ರಸ್ತೆ ಮುಚ್ಚಿ ಹೋಗುತ್ತವೆ, ಬೆಟ್ಟಗಳಿಂದ ಇಳಿದು ಬರುವ ನದಿ ಉಕ್ಕಿ ಪ್ರವಾಹ ದಿಕ್ಕು ಬದಲಾಯಿಸಬಹುದು, ಚಳಿಗಾಲದಲ್ಲಿ ಹಿಮಪಾತವಾಗಬಹುದು.
ನಾವು ೪ ಮಂದಿ ಬೊಲೆರೋ ವಾಹನದಲ್ಲಿ ಸರ್ವ ಸಿದ್ಧತೆಗಳೊಂದಿಗೆ ಬೆಳಗ್ಗಿನ ೯ಗಂ ಹೊತ್ತಿಗೆ ಹೊರಟೆವು. ಚೆಂಗು ಸರೋವರ (Changu) ಹೋಗುವ ದಾರಿಯಲ್ಲಿ ಸಿಗುತ್ತದೆ. ಅಲ್ಲಿ ಬೆಟ್ಟದ ಮೈ ಸಮತಟ್ಟಾಗಿರುವುದರಿಂದ ಭಾರತೀಯ ಸೈನ್ಯದವರ ಕಟ್ಟಡ, ಸಣ್ಣ ನೆಲೆದಾಣವಿದೆ. ನಾವು ಅಲ್ಲಿ ನಮ್ಮ ಪರಿಚಯಸ್ಥರ ಕೃಪೆಯಿಂದಾಗಿ ಸರೋವರವನ್ನು ವೀಕ್ಷಿಸುತ್ತಾ ಬಿಸಿ-ಬಿಸಿಯಾದ ಆಲೂ ಪರಾಟ ಮತ್ತು ಟೀಗಳನ್ನು ಸೇವಿಸಿದೆವು. ಅದು ಬ್ರಿಟಿಷ್ ಸೇನೆ ಕಳೆದ ೨ ಶತಮಾನಗಳ ಹಿಂದೆ ವ್ಯಾಪಾರ, ಮತ್ತಿತರ ಕಾರಣಗಳಿಗಾಗಿ ಸ್ಥಾಪಿಸಿದ ಮಿಲಿಟರಿ ಕ್ಯಾಂಪ್.

WP_000944

ಅಲ್ಲಿಂದ ಮುಂದೆ ದಾರಿ ಕಡಿದಾಗುತ್ತಾ ಹತ್ತುತ್ತಲೇ ಹೋಗುತ್ತದೆ. ಮುಂದೆ ಒಂದು ಚಿಕ್ಕ ಹಳ್ಳಿಯಲ್ಲಿ ಚಳಿಯಿಂದ ನಮ್ಮನ್ನು ಮುಚ್ಚಿಕೊಳ್ಳಲು ಅಗತ್ಯವಿರುವ ದಪ್ಪಗಿರುವ ಕೋಟ್, ಗಂ ಬೂಟು, ಕೈಬೆರಳನ್ನು ಬೆಚ್ಚಗಿರಿಸಲು ಗ್ಲೌಸು ಇತ್ಯಾದಿಗಳನ್ನು ಬಾಡಿಗೆಗೆ ಕೊಂಡೆವು. ಇವುಗಳಿಲ್ಲದಿದ್ದರೆ ನಾವು ೧೫,೦೦೦ ಅಡಿಗಳ ಮೇಲಿರುವ ನಾತುಲಾ ತಲುಪುವಷ್ಟರಲ್ಲಿ ನಡುಕದಿಂದ ಪಜೀತಿಯಾಗುತ್ತಿತ್ತು. ಅಲ್ಲಿ ಅಲಂಕರಿಸಿರುವ ಯಾಕ್(ಎಮ್ಮೆಯ ವರ್ಗಕ್ಕೆ ಸೇರಿದ ಪ್ರಾಣಿ)ಗಳು ಯಾತ್ರಿಕರನ್ನು ಸವಾರಿಗೆಂದು ಆಕರ್ಷಿಸುತ್ತಿದ್ದವು. ಚಳಿಯ ಪ್ರದೇಶವಾದ್ದರಿಂದ ಅಲ್ಲಿನ ಮಕ್ಕಳು, ಹೆಂಗಸರ ಮುಖ ಕೆಂಪಗಿರುತ್ತದೆ, ಜನರು ಬಹಳ ಕಷ್ಟಸಹಿಷ್ಣುಗಳು. ಜೀವನೋಪಾಯಕ್ಕೆ ಹೆಚ್ಚಿನ ಮಾರ್ಗಗಳಿಲ್ಲದೆ ಪ್ರವಾಸಿಗರನ್ನು ಆಕರ್ಶಿಸಲು ತುಂಬಾ ಹೆಣಗುತ್ತಾರೆ. ದಾರಿಯುದ್ದಕ್ಕೂ ಚಿಕ್ಕ-ಚಿಕ್ಕ ಹಳ್ಳಿಗಳು ಕಾಣ ಸಿಗುತ್ತವೆ. ಕಣ್ಣು ಹಾಯಿಸಿದತ್ತೆಲ್ಲ ನಮಗೆ ಕಾಣುವುದು ಕೇವಲ ಬಿಳೀ ಬಣ್ಣ, ಎಲ್ಲವೂ ಹಿಮಾಚ್ಛಾದಿತವಾಗಿ ಶ್ವೇತ ವರ್ಣ ಕಣ್ಣು ಕೋರೈಸುವಂತಿದೆ. ಅಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳೂ ಆ ಚಳಿಯನ್ನು ಸಹಿಸಲು ತಮ್ಮನ್ನು ಬದಲಾಯಿಸಿಕೊಂಡಿದ್ದಾವೆ.
ಅಲ್ಲೊಂದು ಊರಲ್ಲಿ ರಸ್ತೆಯಲ್ಲಿ ತಡೆ ಬಾಗಿಲಿದೆ, ಅಲ್ಲಿ ಸೇನೆಯವರು ಎಲ್ಲರನ್ನು ನಿಲ್ಲಿಸಿ ನಮ್ಮ ಕಾಗದ ಪತ್ರಗಳನ್ನು ಪರೀಕ್ಷೆ ಮಾಡುತ್ತಾರೆ. ಅದು ಪ್ರವಾಸಿಗರಿಗಿಂತಲೂ ವ್ಯಾಪಾರಸ್ಥರಿಗೆ ಅತಿ ಮುಖ್ಯವಾದುದು. ಆ ರಸ್ತೆಯಿಂದ ಚೀನಾದ ಮತ್ತು ನಮ್ಮ ದೇಶದ ವಸ್ತುಗಳು ಸಾಗಾಟವಾಗುತ್ತವೆ. ಅಲ್ಲಿ ಕಾರು, ಲಾರಿ, ಮಿಲಿಟರಿ ವಾಹನಗಳು ಸಾಲಿನಲ್ಲಿ ತಮ್ಮ ಸರತಿಗೆ ಕಾಯುತ್ತಿದ್ದರು.ಆ ದುರ್ಗಮವಾದ ದಾರಿಯನ್ನು ನಾವು ಏರುವುದು ವರ್ಣನಾತೀತ ಅನುಭವ. ಕೆಳಗಿನ ಕಣಿವೆ ಕಂದರಗಳಲ್ಲಿ ಮನುಷ್ಯ ವಾಸವಿದೆ, ಸಣ್ಣ ಪುಟ್ಟ ಹಳ್ಳಿಗಳು ದೂರದಿಂದ ಚಿತ್ರ ಬರೆದಂತೆ ಕಾಣುತ್ತವೆ. ನಮ್ಮ ರಸ್ತೆಯು ಕೆಲವೊಂದು ಭಾಗಗಳಲ್ಲಿ ಜರಿದಿತ್ತು, ಕೆಲವು ಭಾಗದಲ್ಲಿ ಮೇಲಿಂದ ಕುಸಿದು ಬಿದ್ದ ಗುಡ್ಡದ ಮಣ್ಣಿನಿಂದ ಅರ್ಧದಷ್ಟು ಮುಚ್ಚಿ ಹೋಗಿತ್ತು,ಎಷ್ಟೋ ಕಡೆಗಳಲ್ಲಿ ಸಣ್ಣ-ಸಣ್ಣ ನೀರಿನ ಝರಿಗಳು ರಸ್ತೆಯ ಅಡ್ಡಕ್ಕೆ ಹರಿದು ಹೋಗುತ್ತವೆ. ಆ ಪ್ರದೇಶದಲ್ಲಿ ಪ್ರಯಾಣಿಸಲು ವಾಹನ ಚಾಲಕರು ಅಲ್ಲಿನ ಹವಾಮಾನ ತಿಳಿದ ಅನುಭವಸ್ತರಿದ್ದರೆ ನಮ್ಮ ಜೀವ ಸುರಕ್ಷಿತ. ಕೆಲವೊಮ್ಮೆ ಎಷ್ಟೇ ನುರಿತ ಚಾಲಕನಿದ್ದರೂ ಮನುಷ್ಯ ಮಿತಿಗೆ ಹೊರತಾದ ಘಟನೆಗಳು ಅಲ್ಲಿನ ರಸ್ತೆಗಳಲ್ಲಿ ನಡೆಯುತ್ತಲೇ ಇರುತ್ತವೆ. ನಾವು ದಾರಿಯಲ್ಲಿ ರಸ್ತೆ ಪಕ್ಕದಲ್ಲಿ ಗ್ರಹಿಸದ ಸ್ಥಳಗಳಲ್ಲಿ ದೇವರ ಗುಡಿಗಳನ್ನು ಕಂಡು ಪ್ರಶ್ನಿಸಿದಾಗ ದೊರೆತ ಉತ್ತರ, ಕೆಲವು ಪ್ರದೇಶಗಳಲ್ಲಿ ಪದೇ-ಪದೇ ವಾಹನ ಅವಘಡ ಮತ್ತು ಮನುಷ್ಯನ ಆಕಸ್ಮಿಕ ಸಾವು, ಜನರು ತಮ್ಮ ರಕ್ಷಣೆಗೆ ದೇವರ ಮೊರೆಹೋಗುವಂತೆ ಗುಡಿಯ ನಿರ್ಮಾಣವನ್ನು ಪ್ರೇರೇಪಿಸುತ್ತದೆ. ಹೀಗೇ ಒಂದು ಪರ್ವತ ಇಳಿದು ಇನ್ನೊಂದನ್ನು ಹತ್ತುತ್ತಾ ಕ್ರಮಬದ್ಧವಾಗಿ ಎತ್ತರಕ್ಕೆ ಹೋದೆವು. ಅಲ್ಲಿ ಬೆಟ್ಟದ ಮೈಯಲ್ಲಿ ದೂರದಿಂದ ಕಾಣುವಂತೆ ಬರೆದ ಅಲ್ಲಿ ಠಾಣೆ ಹೂಡಿದ ಭಾರತೀಯ ಸೇನೆಯ ಪಡೆಯ ಹೆಸರನ್ನು ಓದಿದೆವು. ಪ್ರತೀ ಬೆಟ್ಟಗಳ ತಪ್ಪಲಲ್ಲಿ ಹಿಮಗಟ್ಟಿದ ಸರೋವರ, ಒಂದೊಂದಕ್ಕೂ ಮನುಷ್ಯನ ಅನುಕೂಲಕ್ಕಾಗಿ ಒಂದು ನಾಮಧೇಯ.

1094521_10153106312630408_1375487535_owalking at sikkim
ನಾನಂತು ನನ್ನ ಸಣ್ಣ ವರ್ತುಲದಿಂದ ಹೊರಬಂದವಳು, ಹಿಮಾಲಯದ ದರ್ಶನವು ನನ್ನನ್ನು ದಂಗಾಗಿಸಿತು. ನಮ್ಮ ಪೂರ್ವಜರು ಹಿಮಾಲಯವನ್ನು ದೇವಭೂಮಿಯೆಂದು ಕರೆದುದು ಸರಿ ಎಂಬ ಭಾವನೆ ಬಂದಿತು. ಕಣ್ಮುಂದೆ ಕಾಣುವ ಪರ್ವತ ರಾಶಿ ಈ ವಿಶ್ವವು ಅನಂತ, ವಿಶಾಲವೆಂದರೆ ಹೇಗೆ ಎಂಬ ಕಿಂಚಿತ್ ಕಲ್ಪನೆಯನ್ನು ಕೊಟ್ಟಿತು. ನಾವು ನತುಲಾಕ್ಕೆ ತಲುಪಿದಾಗ ಅಲ್ಲಿ ಪರ್ವತದ ಎತ್ತರದಲ್ಲಿ ಭಾರತೀಯ ಮತ್ತು ಚೀನಾದ ಸರಹದ್ದಿನ ರಕ್ಷಣಾ ಪಡೆಗಳು, ಅವರ ಕಛೇರಿ, ಪಹರೆ ನಡೆಸುವ ಸೈನಿಕರು ಎಲ್ಲವನ್ನು ಕಂಡು ದಂಗಾಗಿ ಹೋದೆ. “ಚೀನಾ ದೇಶವು ನಮ್ಮಿಂದ ಬೇರೆ ಅಲ್ಲ, ನಾನು ನಿಂತಿದ್ದ ಭೂಮಿಯ ಮುಂದುವರಿದ ಭಾಗ, ಆ ಪರ್ವತ ರಾಜನಿಗೆ ನಾವೆಲ್ಲ ಪರಸ್ಪರ ಸಂಶಯಿಸುತ್ತಿರುವ ಹುಲು ಮಾನವರು. ಈ ಪರ್ವತ ರಾಜ ಅದೆಷ್ಟು ದೊಡ್ಡವನೆಂದರೆ ಅವನೇ ನಮ್ಮ ಭರತ ವರ್ಷಕ್ಕೆ ಮಳೆ, ಗಾಳಿ, ನೀರು ಇತ್ಯಾದಿಗಳನ್ನು ಕೊಡುವ ಇತ್ಯರ್ಥ ಮಾಡುತ್ತಾನೆ” ಎಂಬ ಭಾವನೆ ನನ್ನಲ್ಲಿ ಬಂದಿತು.
ಅಲ್ಲಿ ನಾವು ಬೀಸುತ್ತಿದ್ದ ಗಾಳಿಗೆ ಮೈಯ್ಯೊಡ್ಡಿ ಮನಸಾರೆ ಪರ್ವತ ರಾಜನ ದರ್ಶನ ಮಾಡಿದೆವು. ನಮಗೆ ಅಲ್ಲಿರುವ ಭಾರತೀಯ ಕಛೇರಿಯೊಳಗೆ ಟೀ, ನೀರು ಇತ್ಯಾದಿಗಳ ಉಪಚಾರವಾಯಿತು. ಕೊನೆಯಲ್ಲಿ ನಮ್ಮ ನಾಲ್ಕು ಮಂದಿಗಳ ಫೋಟೋ ತೆಗೆಸಿಕೊಂಡೆವು. ನಮ್ಮ ಆ ಪ್ರಯಾಣದ,ಭೇಟಿಯ ನೆನಪಿಗಾಗಿ ಅಲ್ಲಿನ ಕಛೇರಿಯವರು ನಮಗೊಂದು ಅವರ ಮುದ್ರೆಯೊತ್ತಿದ್ದ ಪತ್ರವನ್ನೂ ಕೊಟ್ಟರು. ಇಷ್ಟನ್ನು ಪಡೆದುಕೊಂಡು ಸಂತೃಪ್ತಿಯೊಂದಿಗೆ ಹಿಂದಿರುಗಲು ವಾಹನವನ್ನೇರಿದೆವು.

WP_000962

 

ನಮ್ಮ ಮರುಪ್ರಯಾಣವೂ ತುಂಬಾ ಆಸಕ್ತಿಕರವಾಗೇ ಇತ್ತು. ಕೆಳಗಿಳಿಯುತ್ತಾ ಹೋಗುವಾಗ ನಾವು ಬೆಟ್ಟವೊಂದರ ತಪ್ಪಲಲ್ಲಿ ದೇವಸ್ಥಾನವೊಂದನ್ನು ಕಂಡೆವು. ಆಗ ನಮ್ಮೊಂದಿಗೆ ಅರ್ಧ ದಾರಿಯ ನಂತರ ಪ್ರಯಾಣಿಸಿದ್ದ (ನಮ್ಮ ಪರಿಚಿತ ವರಿಷ್ಠ ಸೇನಾ ಅಧಿಕಾರಿ ನಮಗೆ ಮಾರ್ಗ ದರ್ಶಕನಾಗಿ ಕಳುಹಿದ್ದರು)ಸೈನಿಕನೊಬ್ಬ ಅದು “ಬಾಬಾಜಿ ಕ ಮಂದಿರ್” ಎಂದ. ನಂತರ ನಮಗೆ ಬಾಬಾಜಿ ಎಂದರೆ ಯಾರು ಎಂಬ ಪರಿಚಯವನ್ನು ಹೇಳಿದ. ೧೯೬೬ರಲ್ಲಿ ಪಶ್ಚಿಮ ಪಂಜಾಬದ ಸದ್ರಾನ ಜಿಲ್ಲೆಯ(ಈಗಿನ ಪಾಕಿಸ್ತಾನ) ಹರ್ ಭಜನ್ ಸಿಂಗ್ಎಂಬಾತ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇರಿಕೊಂಡ. ಬಳಿಕ ಪಂಜಾಬ್ ೨೩ ರಲ್ಲಿ ಆತ ಪೂರ್ವ ಸಿಕ್ಕಿಂನಲ್ಲಿ ಕೆಲಸ ಮಾಡಹತ್ತಿದ. ಆ ಎತ್ತರದ ಗುಡ್ಡಗಾಡುಗಳಲ್ಲಿ ಸಾಮಾನು ಸಾಗಾಟಕ್ಕೆ ಕತ್ತೆಗಳನ್ನು ಉಪಯೋಗಿಸುತ್ತಾರೆ. ಕೆಲಸ ಮಾಡುತ್ತಿದ್ದಾಗ ಒಂದು ದಿನ ಅವನು ಕತ್ತೆಗಳ ಹಿಂಡನ್ನು ಹಿಂಬಾಲಿಸಿಕೊಂಡು ಆ ಪರ್ವತಪ್ರದೇಶದಲ್ಲಿ ಟುಕುಲಾ ದಿಂದ ಡೊಂಗ್ಚೂಲಾ ಕಣಿವೆಗೆ ಬರುತ್ತಿರಬೇಕಾದರೆ ಕಾಲು ಜಾರಿ ಕಂದಕದೊಳಗೆ ಬಿದ್ದು ಕಾಣೆಯಾಗುತ್ತಾನೆ. ಎರಡು ದಿನಗಳಿಂದ ಪತ್ತೆ ಸಿಗದೆ ಇದ್ದ ಸಂದರ್ಭದಲ್ಲಿ ಅವನ ಗೆಳೆಯ ಸೈನಿಕನೊಬ್ಬನಿಗೆ ರಾತ್ರಿ ನಿದ್ದೆಯಲ್ಲಿ ಕನಸಾಗಿ ಹರ್ ಭಜನ್ ಸಿಂಗ ತನ್ನ ದೇಹ ನೀರಲ್ಲಿ ಬಿದ್ದ ಪ್ರದೇಶದಿಂದ ೨ಕಿ.ಮಿ. ದೂರದಲ್ಲಿದೆ ಎಂದು ತಿಳಿಸುತ್ತಾನೆ. ಹಾಗೂ ಅವನು ತನ್ನ ದೇಹವನ್ನು ಅಲ್ಲಿ ಸಮಾಧಿ ಮಾಡಬೇಕೆಂದು ತಿಳಿಸುತ್ತಾನೆ.

WP_000950               WP_000957

 

ಆ ಬಳಿಕ ಅವನ ಜೊತೆಯವರಿಗೆ ಅವನ ಆತ್ಮ ಇನ್ನೂ ಸೈನಿಕನ ಕೆಲಸ(ಪಹರೆ) ಮಾಡುತ್ತಿರುವ ಅನುಭವ, ತಮ್ಮ ಜೊತೆಯಲ್ಲಿ ಬೇರೆ ಕೆಲಸ ಮಾಡುವಂತೆ ಅನುಭವ ಆಗುತ್ತದೆ. ಮತ್ತು ಅವನ ಅಮಾನವೀಯ ಶಕ್ತಿ ಎಷ್ಟೋ ಬಾರಿ ಭಾರತೀಯ ಸೇನೆಗೆ ಕಾವಲಿಗೆ ಸಹಾಯ ಮಾಡಿದಂತೆ ಭಾಸವಾಗಿ, ಎಲ್ಲರ ಬೇಡಿಕೆಯ ಮೇರೆಗೆ ಅವನ ಸೈನಿಕ ವೃತ್ತಿಯು ಮುಂದುವರಿಯಿತು. ಅವನಿಗೆ ಈಗಲೂ ಬೇರೆಲ್ಲ ಸೈನ್ಯದ ಉದ್ಯೋಗನಿರತರಿಗಿರುವ ಸಂಬಳ, ವರ್ಷಕ್ಕೊಮ್ಮೆ ಸ್ವಂತ ಊರಿಗೆ ಹೋಗಲು ರೈಲಿನ ಟಿಕೆಟ್, ಸವಲತ್ತು ಎಲ್ಲ ಭಾರತ ಸರ್ಕಾರ ಒದಗಿಸುತ್ತಿದೆ. ಅದು ಪಂಜಾಬಿನಲ್ಲಿರುವ ಅವನ ವಿಧವೆಗೆ ತಲುಪುತ್ತದೆ. ಆ ಬಳಿಕ ೧೯೮೨ ರಲ್ಲಿ ಸಮಾಧಿ ಸ್ಥಳದಿಂದ ೯ ಕಿ.ಮಿ. ದೂರದಲ್ಲಿ ಜನರ ನಂಬಿಕೆ, ಬೇಡಿಕೆಯ ಮೇರೆಗೆ ಮಂದಿರವನ್ನು ಕಟ್ಟಲಾಯಿತು. ಬಾಬಾಜಿ ಮಹಿಮಾನ್ವಿತ, ಪೂಜನೀಯನೆಂದು ಸೈನಿಕರೆಲ್ಲರೂ ಅವನನ್ನು ಗೌರವಿಸುತ್ತಾರೆ. ಅವನಿನ್ನೂ ಗಡಿಪ್ರದೇಶವನ್ನು ಕಾಯುತ್ತಿದ್ದಾನೆ. ಅವನನ್ನು ನಂಬಿದವರಿಗೆ ಒಳ್ಳೆಯದಾಗಿದೆ, ಅವನ ಇರವನ್ನು ಧಿಕ್ಕರಿಸಿದವರಿಗೆ, ಅವಮಾನಿಸಿದವರಿಗೆ ಕಷ್ಟ, ಸಾವು ಬಂದಂತ ಉದಾಹರಣೆಗಳನ್ನು ಅಲ್ಲಿನ ಮಂದಿ ಕೊಡುತ್ತಾರೆ.

WP_000938
ಇವನ್ನೆಲ್ಲಾ ನೋಡಿ, ಕೇಳಿ, ಮನಸ್ಸಲ್ಲೇ ಮೆಲುಕು ಹಾಕುತ್ತಾ ತುಂಬಿದ ಮನಸ್ಸಿನೊಂದಿಗೆ ನಾವು ಸಂಜೆಯ ಹೊತ್ತಿಗೆ ನಮ್ಮ ವಸತಿಗೆ ತಲುಪಿದೆವು. ಇದು ನಮ್ಮ ಪ್ರಯಾಣದ ಕೊನೆಯ ಹಂತ, ಮರುದಿನ ಬೆಳಗ್ಗೆ ಉಪಾಹಾರ ಸೇವಿಸಿ, ಸಿಕ್ಕಿಮಿನ ನೆಲಕ್ಕೆ, ಜನರಿಗೆ ವಿದಾಯ ಹೇಳಿ ಬೆಟ್ಟವಿಳಿಯ ಹತ್ತಿದೆವು. ಹೋಗುವಾಗ ನಮ್ಮ ದಾರಿಯ ಬಲ ಪಕ್ಕದಲ್ಲಿ ಹರಿಯುತ್ತಿದ್ದ ತೀಸ್ತಾನದಿ ಈಗ ನಮಗೆ ಎಡಬದಿಯಲ್ಲಿ ಕಾಣುತ್ತಿದ್ದಳು.ಇವಳು ಸಿಕ್ಕಿಂನ ಜೀವನದಿ. ಮುಂದೆ ಅವಳು ಪೂರ್ವಕ್ಕೆ ತಿರುಗಿ ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರಾ ನದಿಯನ್ನು ಸೇರುತ್ತಾಳೆ,ಮತ್ತು ಉಪನದಿಯೆನಿಸಿಕೊಳ್ಳುತ್ತಾಳೆ. ಇದು ಪ್ರಕೃತಿಯ ಚಮತ್ಕಾರ. ಮುಂದಿನ ಪ್ರಯಾಣ,  ಮೊದಲು ಹೋದ  ದಾರಿಯಲ್ಲಿ ವಾಪಾಸಾಗಿ ರಾತ್ರಿ ೯ ರ ವೇಳೆಗೆ ಹೈದರಾಬಾದಿಗೆ ತಲುಪಿದೆವು.
ನಮ್ಮ ಪ್ರವಾಸ ಹಸಿರಾಗಿರಲು ನನ್ನ ಸಣ್ಣ ಪ್ರಯತ್ನವೇ ಲೇಖನ.

Advertisements

6 thoughts on “ನಮ್ಮ ಸಿಕ್ಕಿಂ ಪ್ರವಾಸ

  1. ಶೈಲಜಕ್ಕ, ಸೊಗಸಾಗಿ ಬರೆದಿದ್ದೀರ. ಯಾಕ್ ಅಂದರೆ ಚಮರೀಮೃಗ ಅನಿಸುತ್ತದೆ(ಚಾಮರ). ನಾನೂ 2009ರ ಅಕ್ಟೋಬರ್‌ನಲ್ಲಿ ಸಕುಟುಂಬಿಕನಾಗಿ ಈ ಯಾತ್ರೆ ಕೈಗೊಂಡಿದ್ದೆ. ನಮಸ್ಕಾರ!

    • ಈಶ್ವರಣ್ಣ,
      ನೀವು ಹೇಳಿದಂತೆ “ಯಾಕ್” ಚಮರೀ ಮೃಗ. ಬದರೀನಾಥದಲ್ಲಿ ಚಮರೀಮೃಗದ ಉಲ್ಲೇಖವಿದೆ. ಅದರ ಬಾಲವನ್ನು ಬದರೀ ನಾರಾಯಣನ ಚಾಮರದಲ್ಲಿ ಉಪಯೋಗಿಸುತ್ತಾರೆ. ಬದರೀ ನಾರಾಯಣನು ಉತ್ತರ ಟಿಬೆಟ್ ನತ್ತದಿಂದ ಓಡಿ ಬಂದಾಗ ಯ್ಯಾಕ್ ನ ಬಾಲದ ಗುಚ್ಚದ ಮರೆಯಲ್ಲಿ ಬಚ್ಚಿಟ್ಟು ಹುಡುಕುವವರ ಕಣ್ಣಿನಿಂದ ತನ್ನನ್ನು ಕಾಯ್ದುಕೊಳ್ಳುವ ಉಲ್ಲೇಖವಿದೆ. ಹಾಗಾಗಿ ಅವನ ಚಾಮರಕ್ಕೆ ಯಾಕ್ ನ ಬಾಲದ ಕೇಶವೇ ಬೇಕು. ಹಿಮಾಲಯದ ಎಲ್ಲಾ ಪ್ರದೇಶಗಳೂ ವಿಶಿಷ್ಟ.
      ಶೈಲಜ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s