ಬಲರೆಟ್(Ballarat) ,ಹತ್ತೊಂಬತ್ತನೇ ಶತಮಾನದ ಕನಕಪುರ (The Golden City)

ನಮ್ಮ ಮೂರನೆಯ ದಿನದ ಸಾಯಂಕಾಲಕ್ಕಾಗುವಾಗ ತಾ.೧೮ರಂದು ಬಲರೆಟ್(Ballarat) ತಲುಪಿದೆವು. ಇದು ಆಸ್ಟ್ರೇಲಿಯಾದ ರಾಜಧಾನಿ ಮೆಲ್ಬೋರ್ನದ ಪಶ್ಚಿಮೋತ್ತರ ದಿಕ್ಕಿನಲ್ಲಿದೆ, ಅಂದರೆ ದಕ್ಷಿಣ ಕರಾವಳಿಯಿಂದ ಮೇಲಕ್ಕೆ(ಸುಮಾರು ೧೦೫ಕಿ.ಮೀ) ಒಳನಾಡಿನಲ್ಲಿದೆ. ಇದು ವಿಕ್ಟೋರಿಯಾ ಪ್ರಾಂತ್ಯದ ದಕ್ಷಿಣದ ಬಯಲು ಪ್ರದೇಶದಲ್ಲಿ ಯಾರೋವಿ ನದಿ ತೀರದಲ್ಲಿದೆ.ಈ ಪಟ್ಟಣಕ್ಕೆ ಆಸ್ಟ್ರೇಲಿಯಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಸ್ಥಾನವಿದೆ. ಜನಸಂಖ್ಯೆಯಲ್ಲಿ ಇಡೀ ಆಸ್ಟ್ರೇಲಿಯದಲ್ಲಿ ಒಳನಾಡಿನಲ್ಲಿ ನೆಲೆಯೂರಿದ ಪ್ರದೇಶಗಳಲ್ಲಿ ಇದಕ್ಕೆ ೫ನೆ ಸ್ಥಾನ. ಈ ಹೆಸರು ಇಲ್ಲಿನ ಮೂಲನಿವಾಸಿಗಳ ಭಾಷೆಯಾದ ವತಾರೊಂಗ್ ನಲ್ಲಿ ,”balla arat” ಅಂದರೆ ವಿಶ್ರಮಿಸುವ ಸ್ಥಳ ಎಂದು. ಸ್ಕಾಟ್ ಲಾಂಡಿನ ಮೊದಲನೆ ಆಕ್ರಮಣಕಾರ ಆರ್ಕಿಬಾಲ್ಡ್ ಯುಲಿ ಎಂಬವರು ತಮ್ಮ ಕುರಿಮಂದೆಗಳೊಂದಿಗೆ ಇಲ್ಲಿ ನೆಲೆಸಿದರು, ಮತ್ತು ಈ ಹೆಸರು ಅವರು ಮೂಲನಿವಾಸಿಗಳ ಭಾಷೆಯಿಂದ ಬಳುವಳಿ ಪಡೆದರು.
ಇದು ವಿಕ್ಟೋರಿಯಾ ರಾಣಿಯ ಕಾಲದ ಹೆಸರುವಾಸಿ ಪಟ್ಟಣ. ಇದು ಮೊದಲಿಗೆ ಕುರಿಗಳನ್ನು ಸಾಕುವುದರಿಂದ ಪ್ರಾರಂಭವಾದ ಬ್ರಿಟಿಷರ ತಂಗುದಾಣ, ನಂತರದ ಕಾಲದಲ್ಲಿ೧೯ನೇ ಶತಮಾನದ ಸ್ವರ್ಣಹುಡುಕಾಟದ ಸಂದರ್ಭದಲ್ಲಿ ಪ್ರಪಂಚ ಮಟ್ಟದಲ್ಲಿ ಬೆಳಕಿಗೆ ಬಂತು. ೧೮ ಆಗಸ್ಟ್ ೧೮೫೧ರಲ್ಲಿ ಈ ಪ್ರದೇಶದಲ್ಲಿ ಚಿನ್ನದ ವಾಸ್ತವ್ಯದ ಅರಿವಿನೊಂದಿಗೆ ಚಿನ್ನದ ಹುಡುಕಾಟ, ಅದಕ್ಕಾಗಿ ಹೋರಾಟ ಪ್ರಾರಂಭ. ಬಲರೆಟ್ ನ ಗಣಿಗಳಲ್ಲಿ ಚಿನ್ನದ ಉತ್ಪಾದನೆಯು ೧೮೫೧ ರಿಂದ ಪ್ರಾರಂಭಿಸಿ ಮುಂದಿನ ಕೆಲವು ದಶಕಗಳ ವರೆಗೆ ಮುಂದುವರಿಯಿತು.

WP_20130919_015

ಬಲರೆಟ್   ಪಟ್ಟಣ

ಇಲ್ಲಿನ ಚಿನ್ನದ ಗಣಿಗಳು ಇಂಗ್ಲಿಷರನ್ನು ಧನಿಕರನ್ನಾಗಿಸಿತು, ಮತ್ತು ಭೌಗೋಲಿಕವಾಗಿ ಅವರಿಗೆ ಸಾರ್ವಭೌಮತ್ವವನ್ನು ತರಿಸಿತು. ಮತ್ತು ಮುಂದಕ್ಕೆ ಬ್ರಿಟಿಷರ ವಸಾಹತುಗಳು ಭದ್ರವಾಗಿ ನೆಲೆಯೂರಿದವು. ಮೊದಲಲ್ಲಿ ಆಸ್ಟ್ರೇಲಿಯಾಕ್ಕೆ ಬಂದ ಬ್ರಿಟಿಷರಲ್ಲಿ ಹೆಚ್ಚಿನವರು ತಾಯ್ನಾಡಿನಿಂದ ಗಡಿಪಾರಾದ ತಪ್ಪಿತಸ್ಥರು, ಶಿಕ್ಷೆಗೊಳಗಾದವರು. ಕ್ರಮೇಣ ಅದೇ ಮಂದಿಗಳು ಇಲ್ಲಿನ ಹವೆ, ನೀರು, ಪ್ರಕೃತಿಗಳನ್ನು ಅರಿತು, ಹೊಂದಿಕೊಂಡು, ವ್ಯವಸಾಯ, ಕೈಗಾರಿಕೆ, ವ್ಯಾಪಾರ, ಉದ್ದಿಮೆ, ವಿದ್ಯಾಭ್ಯಾಸ ಎಲ್ಲಾ ರಂಗಗಳಲ್ಲಿ ಮುಂದುವರಿದರು. ನಂತರದ ದಿನಗಳಲ್ಲಿ ಹೊಸ ಬದುಕನ್ನು ಪ್ರಾರಂಭಿಸುವ ಕನಸನ್ನು ಹೊತ್ತ ಎಷ್ಟೋ ಸಾಹಸೀ ಪ್ರವೃತ್ತಿಯ ಮಂದಿ ಇಂಗ್ಲೆಂಡಿನಿಂದ, ಅಮೇರಿಕಾದಿಂದ ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದರು ಮತ್ತು ಈ ದೇಶವನ್ನು ಕಟ್ಟಿದರು ಬೆಳೆಸಿದರು ಈಗಿನ ಸ್ಥಿತಿಗೆ ತಂದರು.

WP_20130919_054

ಗಣಿಯ ಆದಾಯದಿಂದ ಲಾಲಸಿಗರಾದ ಮಾಲಕರು ಕಾರ್ಮಿಕರನ್ನು ಕಮ್ಮಿ ಸಂಬಳಕ್ಕೆ ಹೆಚ್ಚು ದುಡಿಸಿ ಧನ ಸಂಚಯನವನ್ನು ಪ್ರಾರಂಭಿಸಿದರು. ಇದರಿಂದ ಬಲರಟ್ ನಲ್ಲಿ ಚಿನ್ನದ ಗಣಿ ಕಾರ್ಮಿಕರು ಬ್ರಿಟಿಷ್ ವಸಾಹತು ಮತ್ತು ಅಧಿಕಾರಿಗಳ ವಿರುದ್ಧ ಅವರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಬಂಡಾಯವೆದ್ದರು, ಈ ಘಟನೆ ಯುರೇಕಾ ದಂಗೆ ಎಂದು ಹೆಸರುವಾಸಿ, ಆಸ್ಟ್ರೇಲಿಯಾದ ಚರಿತ್ರೆಯಲ್ಲಿ ಕೇವಲ ಇದೊಂದೇ ಸಶಸ್ತ್ರ ದಂಗೆ. ಯುರೇಕಾ ಕಾಪುಗೋಡೆಯ ಈ ಯುದ್ಧ ೧೮೫೪ ಡಿ.೩ರಂದು ನಡೆಯಿತು. ಕಾರ್ಮಿಕ ವರ್ಗದವರು ಬ್ರಿಟಿಷ್ ರಾಣಿ, ಅವಳ ಅಧಿಕಾರ ಮತ್ತವಳ ಅಧಿಕಾರಿಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಹೊರಾಡಿ, ಕ್ರಮೇಣ ಕೆಲವು ವರ್ಷಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ, ಅಧಿಕಾರವನ್ನು ಪಡೆದರು. ಅದರೊಂದಿಗೇ ಆ ನಾಡೂ ಬೆಳೆಯಿತು, ಜನರೂ ಬೆಳೆದರು. ಈ ಬಂಡಾಯವು ಮುಂದಿನ ದಿನಗಳ ಪ್ರಜಾಪ್ರಭುತ್ವದ ಹುಟ್ಟಿಗೂ, ಬೆಳವಣಿಗೆಗೂ ನಾಂದಿಯಾಯಿತು. ಈ ದಂಗೆಯ ಸಂದರ್ಭದಲ್ಲಿ ಉಪಯೋಗಿಸಿದ ಪತಾಕೆ, ಮತ್ತದರ ಸಂಕೇತಿಕವಾದ ಚಿಹ್ನೆ ಇಂದಿಗೂ ಈ ದೇಶದ ರಾಷ್ಟ್ರೀಯ ಧ್ವಜದಲ್ಲಿದೆ.

ನಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ರವಿ-ಮತ್ತು ಯಾಸ್ಮಿನ್ ರ ಪೂರ್ವ ತಯಾರಿಯಾಗಿತ್ತು. ಬಲರೆಟ್ ನಲ್ಲಿ “sovereignhill” ನೋಡಲು ಹೋಗುವುದೆಂದು ಮಾತ್ರ ನಮಗೆ ತಿಳಿಸಲಾಗಿತ್ತು. ಅಲ್ಲಿ ಏನಿದೆ, ನಾವು ಏನನ್ನು ನೋಡಲು ಅಲ್ಲಿಗೆ ಹೋಗುತ್ತಿದ್ದೇವೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ನಾವು ಆ ಪಟ್ಟಣಕ್ಕೆ ತಲುಪುವಷ್ಟರಲ್ಲಿ ಸಾಯಂಕಾಲ ಗಂ.೬. ನಮ್ಮ ವಸತಿ ಗೃಹಕ್ಕೆ ಹೋಗಿ, ಅಲ್ಲಿ ಒದಗಿಸಿದ್ದ ಸಾಮಗ್ರಿಗಳಿಂದ ನಾವು ಚಹಾ,ಬಿಸ್ಕಿಟ್ ಇತ್ಯಾದಿಗಳನ್ನು ಸೇವಿಸಿ, ಮುಖ ಮಾರ್ಜನಗಳನ್ನು ಪೂರೈಸಿ “sovereignhill” ನೋಡಲು ತಯಾರಾದೆವು. ಅಂದು ಹವಾಮಾನ ತಣ್ಣಗಿದ್ದು,ಮಳೆ ಬರುವಂತಿತ್ತು. ನಾವು ಕೊಡೆ, ಕೋಟ್ ಇತ್ಯಾದಿಗಳೊಂದಿಗೆ ಸಜ್ಜಾಗಿದ್ದರೂ ವಯಸ್ಸಾದ ಮಾವ-ಅತ್ತೆಯರಿಗೆ ಅಂದಿನ ಕೊರೆಯುವ ಚಳಿ, ಮಳೆಯ ನೆನಪು ಎಂದಿಗೂ ಹಸಿರಾಗಿರುವಂತೆ ಮಾಡಿತು.
ನಾವು ಸಾವರೀನ್ ಹಿಲ್ ಅನ್ನು ನಮಗಿತ್ತ ಸಮಯಕ್ಕೆ ಸರಿಯಾಗಿ ತಲುಪಿದೆವು. ಅಲ್ಲಿ ೧೯ನೇ ಶತಮಾನದಲ್ಲಿ ಜರಗಿದ ಗಣಿ ಕಾರ್ಮಿಕರ ಹೋರಾಟದ ಅನುಭವದ ಪ್ರಾತ್ಯಕ್ಷಿಕವು ನಮ್ಮನ್ನು ಕಾಯುತ್ತಿತ್ತು.
ಆ ಪ್ರದೇಶದಲ್ಲಿ ಅಂದಿನ ದಿನಗಳಲ್ಲಿ ಚಿನ್ನದ ಗಣಿಯಿದ್ದಿತು, ಮತ್ತು ಆ ಕಾರ್ಮಿಕರು ಅಲ್ಲೇ ಪಕ್ಕದಲ್ಲಿ ಗುಡಿಸಲುಗಳಲ್ಲಿ ವಾಸವಾಗಿದ್ದರು. ಅಲ್ಲೇ ಹತ್ತಿರದಲ್ಲಿ ಬ್ರಿಟಿಷ್ ಅಧಿಕಾರಿಗಳು, ಅವರ ಮನೋರಂಜನೆಯ ಸ್ಥಳಗಳು, ವಸತಿಗೃಹಗಳು ಇದ್ದವು. ಈ ಪ್ರದರ್ಶನವು ನಮ್ಮನ್ನು ಆ ಸ್ಥಳಗಳ ಹತ್ತಿರಕ್ಕೆ ಕರೆದೊಯ್ಯುತ್ತದೆ. ಪ್ರಾರಂಭದಲ್ಲಿ ನೆರೆದಿದ್ದ ವೀಕ್ಷಕರಿಗೆ ಆ ದಿನಗಳ ರಾಜಕೀಯ, ಜೀವನ ಪದ್ಧತಿಯ ಮೇಲೆ ಸಣ್ಣ ಪರಿಚಯವಿತ್ತು ನಮ್ಮೆಲ್ಲರನ್ನು, ಗಣಿಪ್ರದೇಶಕ್ಕೆ, ಮಣ್ಣಿನಿಂದ ಚಿನ್ನವನ್ನು ಗಾಳಿಸುವ ಜಾಗಕ್ಕೆ ಒಯ್ಯುತ್ತಾರೆ. ಆಗೆಲ್ಲಾ ನಾವು ಸಣ್ಣದಾಗಿ ಬೀಳುತ್ತಿದ್ದ ಮಳೆಯಲ್ಲೇ ಅಡಿಯಿಡುತ್ತಾ, ಹಿನ್ನೆಲೆಯಿಂದ ಕೇಳಿಬರುತ್ತಿದ್ದ ಮಾತುಗಳನ್ನಾಲಿಸುತ್ತಾ, ದೃಶ್ಯಾವಳಿಗಳನ್ನು ನೋಡುತ್ತ, ಮಾನಸಿಕವಾಗಿ ೧೯ನೇ ಶತಮಾನದ ಸಮಯಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೆವು. ರಾತ್ರಿಯ ಚಳಿಗಾಳಿ, ಮಳೆಹನಿಗಳೊಂದಿಗೆ ನಾವು ನಡುಗುತ್ತಾ ಮುಂದುವರಿದು, ಆಗಿನ ಕಾಲದ ಜನ ವಸತಿ, ಬ್ರಿಟಿಷರ ಕಛೇರಿ, ಧನಿಕ ವರ್ಗದ ಉಪಾಹಾರ ಮಂದಿರ(ಹೋಟೆಲ್ ಯುರೇಕಾ) ಇವುಗಳ ಬಳಿಯಿಂದ ಪ್ರಯಾಣಿಸುತ್ತಿದ್ದ ರೈಲುಗಾಡಿಯನ್ನು ಹತ್ತಿದೆವು. ಇವೆಲ್ಲ ಕಟ್ಟಡಗಳೂ ಪ್ರದರ್ಶನಕ್ಕಾಗಿ ಸೃಷ್ಟಿಸಿದ ಮಾದರಿಗಳು. ಇದೆಲ್ಲಾ ಪ್ರದರ್ಶನದ ಅಂಗವೇ ಆಗಿತ್ತು. ಎಷ್ಟೋ ಶಾಲಾಮಕ್ಕಳನ್ನು ಇಲ್ಲಿಗೆ ೨-೩ ದಿನಗಳ ಪ್ರವಾಸಕ್ಕೆಂದು ಕರೆತರುತ್ತಾರೆ. ಆ ಮಕ್ಕಳಿಗೆ ತಮ್ಮ ದೇಶದ ಚರಿತ್ರೆಯು ಸ್ವತಃ ಕಂಡು, ಅನುಭವಿಸಿ ತಿಳಿಯುತ್ತದೆ. ಕೊನೆಯ ಹಂತದಲ್ಲಿ ನಾವೆಲ್ಲಾ ಅಡ್ಡ ಗೋಡೆಗಳಿಲ್ಲದ, ತೆರೆದ ದೊಡ್ಡ ಹಜಾರದಲ್ಲಿ ಆಸೀನರಾಗಿ, ಆ ದಿನಗಳ ನಿರ್ಣಾಯಕ ಘಟನೆಗಳು ನಮ್ಮ ಕಣ್ಮುಂದೆ ಬಿಚ್ಚಿಕೊಳ್ಳುವುದನ್ನು ಕಾಣುತ್ತೇವೆ.

WP_20130919_004       WP_20130919_006

ಯುರೇಕಾ ಹೋಟೆಲಿನಲ್ಲಿ ನಡೆದ ಕೊಲೆ, ತರುವಾತ ಗುಂಡು ಹೊಡೆತ, ಜನರ ಮಧ್ಯದಲ್ಲಿ ಜರುಗಿದ ಚಕ-ಮಕಿ ಕೊನೆಯಲ್ಲಿ ಸೈನಿಕರು ಬಂಡೆದ್ದ ಕಾರ್ಮಿಕರ ವಿರುದ್ಧ ಗುಂಡುಗಳ ಧಾಳಿ ಇವೆಲ್ಲ ಪ್ರತ್ಯಕ್ಷವಾಗಿ ಕಾಣುತ್ತದೆ. ಈ ಸಂದರ್ಭದಲ್ಲಿ ೨೨ ಮಂದಿ ಕಾರ್ಮಿಕರು ಸೈನ್ಯದ ಗುಂಡೇಟಿಗೆ ಧಾಳಿಯಾಗುತ್ತರೆ. ಕೊನೆಗೂ ಬ್ರಿಟಿಷ್ ರಾಣಿ, ಮೇಲಧಿಕಾರಿಗಳು ಕಾರ್ಮಿಕರೊಂದಿಗೆ ಒಪ್ಪಂದಕ್ಕೆ ಬರುತ್ತಾರೆ. ಇದರಿಂದ ಸಾಮಾನ್ಯ ವರ್ಗದ ಜನರಿಗೂ ಆರ್ಥಿಕ ಪರಿಸ್ಥಿತಿಯ ಅಭಿವೃದ್ಧಿಯ ಲಾಭವು ದೊರೆಯುವಂತಾಯಿತು. ಆ ೧೮೫೦ ರ ದಿನಗಳಲ್ಲಿ ಬಲರೆಟ್ ಈ ಕನಕ ವೃಷ್ಟಿಯಿಂದಾಗಿ “The Golden City”-ಗೋಲ್ಡನ್ ಸಿಟಿ ಎಂಬ ಅಡ್ಡ ಹೆಸರನ್ನು ಪಡೆಯಿತು. ಪ್ರದರ್ಶನದ ಕೊನೆಯಲ್ಲಿ ಎರಡಂತಸ್ತಿನ ಕಛೇರಿಯೊಳಗಿಂದ ಹೊರಬಂದ ಆಂಗ್ಲ ಅಧಿಕಾರಿಯು ಸಾಮಾನ್ಯ ಜನತೆಯ ಪರವಾಗಿ ರಾಣಿ ತೆಗೆದುಕೊಂಡ ನಿರ್ಣಯಗಳನ್ನು ಘೋಷಿಸುತ್ತಾನೆ. ಇದೆಲ್ಲಾ ನಡೆಯುವಾಗ ಮಾವನವರಿಗೆ ಚಳಿಯಿಂದ ಕಾಲು ಮರಗಟ್ಟಿ ನಡೆಯಲು ಸಾಧ್ಯವಾಗದೇ ಶ್ಯಾಮನನ್ನು ಆಧರಿಸಿ ನಡೆಯಬೇಕಾಗಿ ಬಂತು. ಅಂತೂ ನಾವು ಸುಮಾರು ೩ತಾಸುಗಳ ಅವಧಿಯ ಪ್ರದರ್ಶನ ಮುಗಿಸಿ ನಾವಿಳಿದ ವಸತಿಗೆ ತಲುಪಿ ನಮ್ಮ ಕಳೆದ ಸಂಜೆಯ ಕಾರ್ಯಕ್ರಮದ ಬಗ್ಗೆ, ಹವಾಮಾನದ ಬಗ್ಗೆ ಮಾತನಾಡಿಕೊಂಡೆವು. ಬಹುಶಃ ನಾವು ರಾತ್ರಿಯಲ್ಲಾದ ಆ ಪ್ರದರ್ಶನ ತೆರೆದ ಬಯಲು, ಚಳಿ-ಮಳೆಗಳ ಮಧ್ಯದಲ್ಲೆಂದು ಮೊದಲೇ ತಿಳಿದಿದ್ದರೆ ವಯಸ್ಸಾದವರನ್ನು ಕರೆದೊಯ್ಯುವುದು ಸೂಕ್ತವಲ್ಲವೆಂದು ನಿಶ್ಚಯಿಸಿ ಮಾವ-ಅತ್ತೆಯರು ಬರದಂತಾಗುತ್ತಿತ್ತು.

WP_20130919_035       WP_20130919_041
ಮಾರನೇ ದಿನ ನಾವು ಬಲರೆಟ್ ಪಟ್ಟಣವನ್ನು ನೋಡಿದೆವು. ರಸ್ತೆ, ಮನೆಗಳು, ಕಟ್ಟಡಗಳು, ಸಾಲು ಮರಗಳು ಒಪ್ಪ-ಓರಣಕ್ಕೆ ಮಾದರಿಯಂತೆ ಕಂಡಿತು. ಜನರು ಎಷ್ಟೇ ವೈಭವೋಪೇತವಾಗಿದ್ದರೂ ತಾವಿರುವ ಊರು, ರಸ್ತೆ, ಪರಿಸರಗಳ ಬಗ್ಗೆ ತುಂಬಾ ಕಾಳಜಿ ತೆಗೆದುಕೊಳ್ಳುತ್ತಾರೆ, ತಮ್ಮ ಊರಿನ ಶುಚಿತ್ವಕ್ಕೆ, ಸೌಂದರ್ಯಕ್ಕೆ ಅವರು ಪ್ರಾಮುಖ್ಯತೆ ಕೊಡುತ್ತಾರೆ. ಮಧ್ಯಾಹ್ನದ ಊಟವನ್ನು ಪೂರೈಸಿ ನಾವು ನಾಡಿನೊಳಗಿನ ಸೊಬಗನ್ನು ಸವಿಯುವ ಸಲುವಾಗಿ ಹೆದ್ದಾರಿಯನ್ನು ಆಯ್ದುಕೊಳ್ಳದೆ ಸಣ್ಣ ಊರುಗಳಿಂದಾಗಿ, ಸರೋವರಗಳ ಪರಿಸರವನ್ನು ಹಾದುಕೊಂಡು ಹೋಗುವ ದಾರಿಯಲ್ಲಿ ಮರು ಪಯಣ ಪ್ರಾರಂಭಿಸಿದೆವು.

WP_20130919_065

ಬಲರೆಟ್ ಪಟ್ಟಣದ ಹೊರಗಿನ ಸರೋವರ

WP_20130919_106

ಮಾಂಸಕ್ಕಾಗೇ ಬೆಳೆಸುವ ಬ್ಲಾಕ್ ಆಂಗಸ್ ದನಗಳು

WP_20130919_113

ಮಾನವ ನಿರ್ಮಿತ ಸರೋವರ, ಲೇಕ್ ಎಪ್ಪಲೊಕ್. ಇದು ಬೆಂಡಿಗೋ ಮತ್ತು ಹೀತ್ ಕೋಟ್ ಪಟ್ಟಣಕ್ಕೆ ನೀರನ್ನು ಒದಗಿಸಲು ನಿರ್ಮಿಸಲಾಯಿತು. ಇದರ ನೀರಿನ ಆಕರ ಕಂಪಾಸ್ಪೆ ನದಿ, ಇದು ಉತ್ತರ ಮಧ್ಯ ವಿಕ್ಟೋರಿಯಾ ಪ್ರಾಂತ್ಯದಲ್ಲಿದೆ.

ಅಲ್ಲಿನ ರಸ್ತೆಗಳಲ್ಲಿ ನಿಯಮಪಾಲಿಸಿದರೆ ವಾಹನ ಚಾಲಕನಿಗೆ ಕೆಲಸ ಬಹಳ ಸರಳ, ಆದರೆ ನಮ್ಮ ಭಾರತೀಯ ಪದ್ಧತಿಯಂತೆ ವಾಹನ ನಡೆಸುವ ಅಭ್ಯಾಸವಿದ್ದವರು ಕೈಕುಂಠಿತರಾಗುತ್ತಾರೆ. ಪ್ರತಿ ಹಳ್ಳಿ ಬಂದಾಗ, ಶಾಲೆಯ ವಠಾರದ ಹತ್ತಿರ, ಪಶುಪಾಲನೆಯ (ದನಗಳು, ಕುರಿಗಳು) ಸ್ಥಳದ ಪರಿಸರಗಳಲ್ಲಿ ವೇಗಮಿತಿ ೪೦ಕಿ.ಮಿ. ಹೀಗೆ ಜನರ ಸುರಕ್ಷತೆಗೆ ಬಹಳಷ್ಟು ಕಟ್ಟುಪಾಡುಗಳಿವೆ. ನಮ್ಮ ದೇಶೀಯ ವಾಹನ ಚಾಲಕರಿಗೆ ಅಲ್ಲಿನ ಸುಂದರ ರಸ್ತೆಗಳಲ್ಲಿ ವೇಗಮಿತಿಯನ್ನು ಪಾಲಿಸಲು ಮರೆತು ಹೋಗುವ ಸಂದರ್ಭವೇ ಹೆಚ್ಚು! ಹಾಗಾಗಿ ಶ್ಯಾಮ ಸ್ವಲ್ಪ ದೂರ ಕಾರನ್ನು ನಡೆಸಿ ರವಿಯೇ ನಡೆಸುವಂತೆ ಬಿಟ್ಟು ಕೊಡಬೇಕಾಗಿ ಬಂತು.

WP_20130919_140

ನಮ್ಮ ಗುರಿಯಿದ್ದುದು ಕತ್ತಲಾಗುವುದರೊಳಗೆ ಶೆಪರ್ ಟನ್ನಿನಲ್ಲಿರುವ ನಮ್ಮ ಮನೆಗೆ ತಲುಪುವುದು. ಇನ್ನು ದಾರಿ ಕೇವಲ ಒಂದು ಗಂಟೆಯಷ್ಟಿದೆ ಎಂದಾದಾಗ ನಾವು ನಾಗಂಬಿ ಎಂಬ ಊರೊಂದನ್ನು ತಲುಪಿದೆವು. ಇದು ಅಲ್ಲಿನ ಸರೋವರದ ನೋಟ, ಸಂಜೆಯ ಸೂರ್ಯಾಸ್ತಮಾನದ ಹೊಂಬೆಳಕು ಪ್ರಕೃತಿಯ ರಂಗೇರುವಂತೆ ಮಾಡಿತ್ತು. ನಾವು ೧೯ರ ರಾತ್ರಿಯೂಟದ ವೇಳೆಗೆ ರವಿ-ಯಾಸ್ಮಿನ್ ರ ಬೆಚ್ಚನೆಯ ಗೂಡನ್ನು ಸೇರಿದೆವು. ಮರುದಿನ ಕಾದಿತ್ತು ರವಿಯ ಹುಟ್ಟುಹಬ್ಬದ ಆಚರಣೆ, ಮುಖ್ಯವಾಗಿ ಯಾಸ್ಮಿನ್ನಳ ಸ್ವಾದಿಷ್ಟವಾದ ಕೇಕ್.ಮುಂದಿನ ಮೂರು ದಿನಗಳು ನಾವು ವಿಶ್ರಾಂತಿ, ಮಕ್ಕಳ ನಾಟಕ ಪ್ರದರ್ಶನ ಎಂದು ಮನೆಯಲ್ಲೇ  ಇದ್ದೆವು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s