ಕ್ಯಾಂಗರುಗಳ ನಾಡಲ್ಲಿ ನಾವು

ನಾನು ಮತ್ತು ಶ್ಯಾಮ ತುಂಬಾ ತಿರುಗಾಡಿಗಳಲ್ಲದಿದ್ದರೂ ಇತ್ತೀಚೆಗೆ ಒಂದೆರಡು ವರ್ಷಗಳಲ್ಲಿ ನಾವು ನೋಡಬೇಕಾದ ಸ್ಥಳಗಳೆಂದು ನಿರ್ಧರಿಸಿದ ಊರುಗಳನ್ನು ನೋಡಲು ಪ್ರಾರಂಭಿಸಿದ್ದೇವೆ. ನಮ್ಮ ಪಟ್ಟಿಯಲ್ಲಿದ್ದ ಊರುಗಳಲ್ಲಿ ಆಸ್ಟ್ರೇಲಿಯಾವು ಒಂದು. ಇಲ್ಲಿ ಡಾ.ರವಿ(ಶ್ಯಾಮನ ತಮ್ಮ) ಮಾನಸಿಕ ತಜ್ಞನಾಗಿ ಮೆಲ್ಬೋರ್ನನ ಹತ್ತಿರದಲ್ಲಿರುವ ಶೆಪರ್ ಟನ್ ಎಂಬ ಚಿಕ್ಕ ಊರೊಂದಲ್ಲಿ ಸರಕಾರಿ ಹುದ್ದೆಯಲ್ಲಿದ್ದಾರೆ. ಅವರ ವೈದ್ಯಕೀಯ ಕೆಲಸ ವೃದ್ಧಾಪ್ಯದಲ್ಲಿರುವ ಮಂದಿಗಳಿಗೆ ಮಾನಸಿಕ ಚಿಕಿತ್ಸೆ, ಹಾಗೂ ಸಂಬಂಧಿಸಿದ ಸಹಾಯ ಮಾಡುವುದು. ರವಿ ಮತ್ತು ಯಾಸ್ಮಿನ್(ರವಿಯ ಪತ್ನಿ) ಆಸ್ಟ್ರೇಲಿಯಾಕ್ಕೆ ೧೯೯೮ ರಲ್ಲೇ ಹೋದರೂ ನಾವು ಇಷ್ಟು ವರ್ಷಗಳಲ್ಲಿ ಅವರ ಮನೆಗೆ ಹೋಗಲು ಆಗಿರಲಿಲ್ಲ. ಹಾಗಾಗಿ ನಮಗಿದ್ದ ಆಕರ್ಷಣೆ ಕಳೆದ ವರ್ಷ(೨೦೧೩ ಸೆಪ್ಟೆಂಬರ್)ದಲ್ಲಿ ನಾವು ಈ ಕಾಂಗರುಗಳ ನಾಡನ್ನು ನೋಡುವಂತೆ ಮಾಡಿತು. ನಮ್ಮೊಂದಿಗೆ ಮಾವ-ಅತ್ತೆಯವರು ಸಣ್ಣ ಮಗನ ಮನೆಗೆ ಹೊರಟರು.

WP_20130924_003
ನಮ್ಮ ವಿದೇಶ ಪ್ರವಾಸಕ್ಕೆ ಬೇಕಾದ ವೀಸಾ, ಹಾಗೂ ಮಾವ- ಅತ್ತೆಯರಿಗೆ(ಶ್ಯಾಮನ ಅಪ್ಪ-ಅಮ್ಮ) ಬೇಕಾದ ವೈದ್ಯಕೀಯ ತಪಾಸಣೆ ಎಲ್ಲ ಮುಗಿಸಿ, ಸಕಲ ತಯಾರಿಗಳೊಂದಿಗೆ ಸೆಪ್ಟೆಂಬರ ೧೩ರ ಮಧ್ಯರಾತ್ರಿ ಮಲೇಶಿಯಾದವರ ವಿಮಾನದಲ್ಲಿ ಸ್ವಸ್ಥಾನವಾದ ಹೈದರಾಬಾದಿನಿಂದಲೇ ಹಾರಿದೆವು. ನಾವು ಮಲೇಶಿಯಾದ ರಾಜ್ಯಧಾನಿಯಾದ ಕೌಲಾಲಂಪುರದಲ್ಲಿ ಇನ್ನೊಂದು ವಿಮಾನವನ್ನು ಹಿಡಿಯಬೇಕು. ನಾವು ಹೈದರಾಬಾದಿನಿಂದ ಹೊರಟುದು ರಾತ್ರಿ ಗಂ.೧ಕ್ಕೆ, ಒಟ್ಟು ೪ಗಂಟೆಗಳ ದಾರಿ ಕೌಲಾಲಂಪುರಕ್ಕೆ ಮತ್ತು ಅಲ್ಲಿಂದ ೨ಗಂ.ಗಳ ಅಂತರದಲ್ಲಿ ಪುನಃ ಮುಂದಿನ ಪ್ರಯಾಣ. ನಾವು ಅಲ್ಲಿನ ಬೆಳಗ್ಗೆ ೧೦ಕ್ಕೆ ನಮ್ಮ ಆಸ್ಟ್ರೇಲಿಯಾದ ಪ್ರಯಾಣ ಪ್ರಾರಂಭಿಸಿದೆವು. ಅದು ೭.೫ ಗಂಟೆಗಳ ಪ್ರಯಾಣ. ರಾತ್ರೆ ೯ಕ್ಕೆ ಮೆಲ್ಬೋರ್ನ್ ನಲ್ಲಿ ಇಳಿದೆವು.ಆಸ್ಟ್ರೇಲಿಯಾ ದೇಶದೊಳಗೆ ಪ್ರವೇಶ ಮಾಡಲು ನಾವು ತುಂಬಾ ನಿಗಾ ತೆಗೆದುಕೊಂಡಿದ್ದೆವು, ನಾವು ರವಿಯ ಸಲಹೆಯ ಮೇರೆಗೆ ಹೆಚ್ಚಿನ ತಿಂಡಿ-ತಿನಿಸನ್ನು ಒಯ್ದಿರಲಿಲ್ಲ.ಇದರಿಂದಾಗಿ ನಮಗೆ ಮೆಲ್ಬೋರ್ನ್ ವಿಮಾನ ನಿಲ್ದಾಣದಿಂದ ಬೇಗನೇ ಹೊರಬರಲಾಯಿತು. ಅಲ್ಲಿ ಹೊರಗಿನ ದೇಶಗಳಿಂದ ತರುವ ತಿಂಡಿ-ತಿನಿಸುಗಳನ್ನು ಪರೀಕ್ಷಿಸುತ್ತಾರೆ ಮತ್ತು ಅವರ ಮಾಪನೆಗೆ ಬರದವುಗಳನ್ನು ಮುಖ್ಯವಾಗಿ ನಾವು ಮನೆಯಲ್ಲಿ ಮಾಡಿ ಸರಿಯಾದ ರೀತಿಯಲ್ಲಿ ಕಟ್ಟಿ, ಆವರಣ ಹೊದಿಕೆಗಳಿಲ್ಲದ(sealed package) ವಸ್ತುಗಳನ್ನು ಎಸೆದುಬಿಡುತ್ತಾರೆ.
ರವಿ ನಮ್ಮನ್ನು ಎದುರ್ಗೊಳ್ಳಲು, ಹಾಗೂ ಅವನಿರುವ ಊರಾದ ಶೆಪರ್ ಟನ್ನಿಗೆ ಕರೆದೊಯ್ಯಲು ಸ್ನೇಹಿತನೊಬ್ಬನ ದೊಡ್ಡ ಕಾರಿನೊಂದಿಗೆ ಬಂದಿದ್ದ. ಅಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವವರು ಮುಂದು ಹಾಗೂ ಹಿಂದೆ ಕುಳಿತುಕೊಳ್ಳುವವರು ಬೆಲ್ಟ್ ಕಟ್ಟಿಕೊಳ್ಳಬೇಕು. ಮಿತಿಗಿಂದ ಹೆಚ್ಚಿಗೆ ಮಂದಿ(ಹಿಂದಿನ ಸೀಟುಗಳಲ್ಲಿ೩) ಕುಳಿತುಕೊಳ್ಳುವಂತಿಲ್ಲ. ಮೆಲ್ಬೋರ್ನ್ ಇರುವುದು ದಕ್ಷಿಣದ ಕರಾವಳಿ ತೀರದಲ್ಲಿ, ನಾವು ಅಲ್ಲಿಂದ ಉತ್ತರ ದಿಕ್ಕಿಗೆ, ಒಳನಾಡಾದ ಶೆಪರ್ಟನ್ ಗೆ ಸುಮಾರು ೨೦೦ ಕಿ. ಮಿ. ದೂರ ಹೋಗಬೇಕಿತ್ತು. ಅದು ಶನಿವಾರದ ದಿನವಾಗಿತ್ತು. ಭಾನುವಾರದಂದು ನಮಗೆ ನಾವು ಉಳಿದಿದ್ದ ಊರಿನ ದರ್ಶನ. ಸೋಮವಾರದಿಂದ ಪ್ರಾರಂಭಿಸಿ ಮುಂದಿನ ೧೩ ದಿನಗಳನ್ನು ತಿರುಗಾಟದಲ್ಲಿ ,ಊರು ನೋಡುವುದರಲ್ಲಿ ಕಳೆದೆವು.

WP_20130919_142

ನಾಗಾಂಬಿ ಎಂಬಲ್ಲಿನ ಸರೋವರದ ತೀರ
ಆಸ್ಟ್ರೇಲಿಯಾ ದೇಶವು ಈಗಿನಂತೆ ರೂಪುಗೊಂಡದ್ದು ಬ್ರಿಟಿಷರ ವಸಾಹತುಗಳಿಂದಾಗಿ. ಅಲ್ಲಿನ ಊರುಗಳು, ಮನೆಗಳು ಎಲ್ಲದರಲ್ಲು ಬ್ರಿಟಿಷರ ಮುದ್ರೆ, ಛಾಪು ಎದ್ದು ಕಾಣುತ್ತದೆ. ಅಲ್ಲಿನ ಮೂಲನಿವಾಸಿಗಳಿನ್ನೂ ಅಲ್ಲಿ ವಾಸವಿದ್ದರೂ ನಮಗೆ ಕಾಣಬರುವುದು ಹೆಚ್ಚಾಗಿ ಬಿಳಿಜನರನ್ನು, ಚೀನಾ, ಕೊರಿಯಾ, ಮಲೇಶಿಯಾದವರನ್ನು, ನಿರಾಶ್ರಿತರಾಗಿ ಬಂದ ಇರಾಕಿನವರನ್ನು, ನಮ್ಮಂತಿರುವ ಹಿಂದುಸ್ತಾನದವರು ಮತ್ತು ಪಾಕಿಸ್ತಾನಿಗಳನ್ನು. ಮೆಲ್ಬೋರ್ನ್ ನಿಂದ ಶೆಪರ್ ಟನಿಗೆ ಹೋಗುವ ದಾರಿಯಲ್ಲಿ ಮಂಗಳೂರು ಸಿಗುತ್ತದೆ. ಈ ಮಂಗಳೂರು ಎಂಬ ಹೆಸರನ್ನು ೨ನೇ ವಿಶ್ವಯುದ್ಧದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸೈನಿಕರು ಮಂಗಳೂರಿನಲ್ಲಿದ್ದರೆಂಬ ಕಾರಣಕ್ಕಾಗಿ ಕೊಡಲಾಯಿತು. ಇಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವಿದೆ. ವಿಕ್ಟೋರಿಯಾ ಪ್ರಾಂತ್ಯ ಬಹಳ ವಿಶಾಲವಾದ ಪ್ರದೇಶ, ಶೆಪರ್ ಟನ್ ಅಲ್ಲಿರುವ ಒಂದು ಮುಖ್ಯ ಊರು, ಅದು ಗೋಲ್ಬರ್ನ್ ಕಣಿವೆಯೊಳಗಿದೆ. ಆದರೆ ನಮ್ಮ ಕಣ್ಣಿಗೆ ತೋರುವಂತೆ ಆ ಪ್ರದೇಶವಿಡೀ ನಮ್ಮ ದಕ್ಕಣ ಪೀಠಭೂಮಿಯಂತೆ ಮಟ್ಟಸವಾದ ಪ್ರದೇಶವಾಗಿದೆ, ಕಣಿವೆಯ ಪ್ರಸ್ತಾಪ ಯಾಕೆಂದು ಯಾರಿಗೂ ತಿಳಿದಿಲ್ಲವೆಂದು ರವಿಯ ಅಂಬೋಣ. ಇಲ್ಲಿನ ಜೀವನ ಮಟ್ಟ ಚೆನ್ನಾಗಿದೆ. ಆಹಾರ, ಮನೆ, ವಿದ್ಯಾಭ್ಯಾಸ, ಆರೋಗ್ಯ ಇವು ದೊರೆಯಲು ಮಂದಿ ತುಂಬ ಶ್ರಮಿಸಬೇಕಿಲ್ಲ, ಅಲ್ಲಿನ ಬಡತನದ ,ಬಡಜನರ ಮಟ್ಟ ಮುಂದುವರಿದ ರಾಷ್ಟ್ರಗಳಲ್ಲಿರುವಂತೆ ನಮಗಿಂತ ತುಂಬ ಮೇಲಿದೆ. ಹವಾಮಾನ ವಿಪರೀತ ಚಳಿ ಮತ್ತು ಸೆಖೆಗಳಿಂದ ಕೂಡಿದೆ. ಇಡೀ ಆಸ್ಟ್ರೇಲಿಯಾವು ಬಹಳ ವಿಶಾಲವಾದುದು, ಮತ್ತು ಅಲ್ಲಿ ಎಲ್ಲಾ ತರನಾದ ಹವೆ, ಮಣ್ಣು, ಮರಮಟ್ಟುಗಳು, ಬೇರೆಲ್ಲೂ ಕಾಣದ ಜೀವಸಂಕರಗಳು ಕಂಡು ಬರುತ್ತವೆ. ನಾವು ಅಲ್ಲಿದ್ದ ೧೫ ದಿನಗಳ ಕಾಲದಲ್ಲಿ ಊರು, ಜನಜೀವನ ಎರಡನ್ನೂ ಸಮನಾಗಿ ನೋಡಲು ಅವಕಾಶ ದೊರಕಿತು. ಅದೇನಿದ್ದರೂ ನಾವು ಇಷ್ಟೊಂದು ಚೆನ್ನಾಗಿ ಆಸ್ಟ್ರೇಲಿಯಾ ದರ್ಶನ ಮಾಡಿದರೆ ಅದು ರವಿ-ಯಾಸ್ಮಿನ್ ಮತ್ತು ಮಕ್ಕಳಾದ ಆರೆನ್ ಹಾಗೂ ರಯಾನ್ ಇವರ ಪರಿಶ್ರಮದಿಂದಲೇ. ಅವರಿರುವ ಶೆಪರ್ ಟನ್ ಚಿಕ್ಕ ಊರು, ಅಲ್ಲಿ ಪ್ರಪಂಚದ ಎಲ್ಲೆಡೆಯ ಜನರೂ ವಾಸವಾಗಿದ್ದಾರೆ. ನಾವು ಅಲ್ಲಿ ಅಪ್ಘಾನಿಸ್ತಾನದ ರೊಟ್ಟಿ, ಪಾಕಿಸ್ತಾನದ ಅಹಾರ ತಿನಿಸುಗಳು, ಭಾರತೀಯ ಎಲ್ಲ ಮಾದರಿಯ ಮಸಾಲೆ, ಸಿಹಿ,ಖಾರ, ಹುರಿದ ತಿನಿಸುಗಳು ಮತ್ತು ಅಲ್ಲಿನ ಹಾಲು,ಹಣ್ಣು, ತರಕಾರಿ, ಇತರ ವಸ್ತುಗಳನ್ನು ತಿಂದೆವು. ಅಂಗಡಿಗಳಲ್ಲಿ ಎಲ್ಲ ತರನಾದ ವಸ್ತುಗಳನ್ನು ನೋಡಿ, ಬೆಲೆ ಪರೀಕ್ಷಿಸಿ ತೃಪ್ತಿ ಪಟ್ಟೆವು(ನಾವು ನಮ್ಮ ತಾಯ್ನಾಡಿನಲ್ಲಿ ರೂಪಾಯಿಯಲ್ಲಿ ಅಲ್ಲಿಗಿಂತ ಕಮ್ಮಿ ಖರ್ಚಿನಲ್ಲಿ ಖರೀದಿಸುತ್ತೇವೆಂದು). ನಮ್ಮ ಪರಿಚಿತ ಮಂದಿಗಳು ಹೇಳಿದಂತೆ ಆಸ್ಟ್ರೇಲಿಯಾವು ದುಬಾರಿ, ಮುಖ್ಯವಾಗಿ ನಮ್ಮಂತೆ ಊರು ನೋಡಲು ಹೋಗುವ ಏಶಿಯಾದ ಜನತೆಗೆ.
ಸೋಮವಾರದ(ಸೆ.೧೬) ಬೆಳಗ್ಗೆ ನಮ್ಮ ಮಾರ್ಗದರ್ಶಕ, ನಮ್ಮ ಪ್ರಯಾಣದ ವಾಹನದ ಚಾಲಕ ರವಿಯೊಂದಿಗೆ ಪ್ರಯಾಣ ಶುರು. ನಾವು ನಾಲ್ಕು ಮಂದಿ ಮತ್ತು ರವಿ, ಯಾಸ್ಮಿನ್ ನಮಗೆ ಕೊಟ್ಟ ಚಳಿಯ ವಸ್ತ್ರಗಳು, ತಿನಿಸು ಪದಾರ್ಥ,ನಮ್ಮ ಬಟ್ಟೆ-ಬರೆ, ಔಷಧಗಳೊಂದಿಗೆ ಯಾಸ್ಮಿನ್ ಮತ್ತು ಮಕ್ಕಳಿಗೆ ಶುಭ ಹೇಳುತ್ತಾ ಸಮುದ್ರದತ್ತ ಹೊರಟೆವು. ನಮ್ಮ ಮೊದಲ ಪ್ರಯಾಣ ಆಸ್ಟ್ರೇಲಿಯಾದ ಪ್ರಪಂಚ ಖ್ಯಾತಿಯ ಗ್ರೇಟ್ ಓಶನ್ ರೋಡ್( Great Ocean road) ನತ್ತ. ಇದು ಆಸ್ಟ್ರೇಲಿಯಾ ದೇಶದ ಹೆಮ್ಮೆಯ ಸ್ಮಾರಕ. ಇದು ಮೊದಲನೇ ಮಹಾ ವಿಶ್ವ ಯುದ್ಧದ ನಂತರ ಹಿಂತಿರುಗಿದ ಅಲ್ಲಿನ ಸೈನಿಕರು ಮೃತರಾದ ತಮ್ಮ ಒಡನಾಡಿಗಳ ಸ್ಮರಣಾರ್ಥ ಸ್ವತಃ ಗೆಯ್ದು ಕಟ್ಟಿದ ೨೪೩ಕಿ.ಮೀ. ಉದ್ದದ ರಸ್ತೆ.

WP_20130917_070

ಲೋರ್ನ್ ನಲ್ಲಿ ಬೆಳಗಿನ ನಡೆದಾಟ

WP_20130918_111
ದಕ್ಷಿಣ ಪೂರ್ವಾಭಿಮುಖವಾಗಿರುವ ಸಮುದ್ರ ತೀರದುದ್ದಕ್ಕೆ ಚಾಚಿದೆ. ಅಲ್ಲಿ ಕಾಣ ಸಿಗುವ ವಿಕ್ಟೋರಿಯಾ ಪ್ರಾಂತ್ಯದ ಮುಖ್ಯ ಊರುಗಳು ಟೊರ್ಕ್ವೆ ಮತ್ತು ಆಲನ್ಸ್ ಫ಼ೋರ್ಡ್.ಆ ರಸ್ತೆಯ ನಿರ್ಮಾಣದ ಉದ್ದೇಶ ಸಮುದ್ರ ಕರೆಯಲ್ಲಿರುವ ರೇವು ಪಟ್ಟಣಗಳನ್ನು ಸಾಮಾನು ಸಾಗಾಟಕ್ಕಾಗಿ, ಸಂಪರ್ಕಕ್ಕಾಗಿ ಜೋಡಿಸುವುದು ಕೂಡಾ. ಅದರ ನಿರ್ಮಾಣ ಮಾಡಿದ ಆ ಸಂಸ್ಥೆಯ ಅಧ್ಯಕ್ಷ ಹೊವಾರ್ಡ್ ಹಿಚ್ ಕಾಕ್ ಎಂಬಾತ, ಅವನ ಮುಂದಾಳುತ್ವದಲ್ಲಿ ೧೯೧೯ ರಲ್ಲಿ ಪ್ರಾರಂಭವಾಗಿ ೧೯೩೨ ರ ವರೇಗೆ ರಸ್ತೆ ನಿರ್ಮಾಣದ ಕೆಲಸ ನಡೆಯಿತು. ಆಗ ಅದು ವಾಹನ ಸಂಚಾರಕ್ಕೆ ಉತ್ತಮವಾಗಿರಲಿಲ್ಲ. ಗುಡ್ಡ-ಬೆಟ್ಟಗಳ ಮಧ್ಯದಿಂದ, ಕಾಡು-ಹುಲ್ಲುಗಾವಲುಗಳನ್ನು ಹಾದು, ಹೆಚ್ಚಿನ ಸಂದರ್ಭಗಳಲ್ಲಿ ಸಮುದ್ರಕ್ಕೆ ಸಮೀಪದಲ್ಲಿ ಓಡುವ ಆ ರಸ್ತೆ ರಮಣೀಯ ದೃಶ್ಯಗಳೊಂದಿಗೆ ನಮ್ಮ ನೆನಪಿನಲ್ಲಿ ಉಳಿಯುವಂತಾ ಅನುಭವವನ್ನು ಕೊಟ್ಟಿತು. ನಾವು ಆ ರಸ್ತೆಯುದ್ದಕ್ಕೆ ಸಿಗುವ ಊರುಗಳಲ್ಲಿ ಕೆಲವನ್ನು ಆಯ್ದು ಲೋರ್ನ್, ಪೋರ್ಟ್ ಕಾಂಬೆಲ್ ಗಳಲ್ಲಿ ರಾತ್ರಿ ಉಳಿದೆವು. ಅದೆಲ್ಲ ಅಡುಗೆ ಮಾಡಲು ಸುಸಜ್ಜಿತ ಅಡುಗೆಮನೆಯಿರುವ ೨ ಬೆಡ್ ರೂಮ್ ಇರುವ ಮನೆಗಳಾಗಿದ್ದವು. ಇವೆರಡೂ ಊರುಗಳಲ್ಲಿ ನಾವು ಸಮುದ್ರವನ್ನು ನಾವಿಳಿದುಕೊಂಡಿದ್ದ ಮನೆಯಿಂದ ಕಾಣುವಂತಿತ್ತು. ನಾವು ಅಲ್ಲಿಗೆ ಹೋದ ಸಮಯ ಅತ್ಯುತ್ತಮ ಹವಾಮಾನದ ಕಾಲ. ತಂಪಾದ ಹವೆ, ಕೆಲವೊಮ್ಮೆ ಬಿಸಿಲಿದ್ದು, ಬೆಚ್ಚಗಿದ್ದರೆ ನಾವು ಯೋಚನೆ ಮಾಡುವುದರೊಳಗೆ ಮಳೆರಾಯನ ದರ್ಶನವಾಗುತ್ತಿತ್ತು. ಅಲ್ಲಿನ ಎಲ್ಲ ಹೋಟೆಲುಗಳಲ್ಲಿ ಕೊಡೆಯಿರುತ್ತದೆ. ನಾವು ಲೋರ್ನ್ ಸಮುದ್ರ ಕಿನಾರೆಯಲ್ಲಿ ಬೆಳಗಿನ ಹೊತ್ತು ನಡೆದೆವು. ಸ್ವಛ್ಛತೆಗೆ ಅಲ್ಲಿನವರು ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ರಸ್ತೆ, ಸಮುದ್ರ ತೀರ, ನಾವಿಳಿದಿದ್ದ ಹೋಟೆಲು ಎಲ್ಲವೂ ನಾವು ಸ್ವಛ್ಚವಾಗಿ ಇಟ್ಟುಕೊಳ್ಳಬೇಕೆಂದು ಜನ ನಿರೀಕ್ಷೆ ಮಾಡುತ್ತಾರೆ. ಎಲ್ಲೆಲ್ಲಿ ಮನುಷ್ಯನ ಕೆಲಸವು ಅನಿವಾರ್ಯವೋ ಆ ಸೇವೆಗಳೆಲ್ಲವೂ ದುಬಾರಿ.

WP_20130917_115 WP_20130918_104        WP_20130917_133
ತಾ.೧೭ ರಂದು ನಾವು ಲೋರ್ನ್ ನಿಂದ ಮುಂದೆ ನಾವು ಜಲಪಾತವೊಂದನ್ನು ನೋಡುತ್ತಾ ಮುಂದುವರಿದು ಪೋರ್ಟ್ ಕಾಂಬೆಲ್ ಎಂಬ ಸಮುದ್ರ ತೀರದ ಪಟ್ಟಣದಲ್ಲುಳಿದುಕೊಂಡೆವು. ಅಲ್ಲಿಗೆ ಹತ್ತಿರದ ಸಮುದ್ರದಲ್ಲಿ “ಟುವೆಲ್ವ್ ಅಪೊಸ್ಟೆಲ್ಸ್ ” ಕಾಣಬಹುದು. “ಟುವೆಲ್ವ್ ಅಪೊಸ್ಟೆಲ್ಸ್ “ಎಂದೇ ಪ್ರಸಿದ್ಧವಾಗಿರುವ ಪ್ರಾಕೃತಿಕವಾಗಿ ನೀರಿನ ಮಧ್ಯೆ ಸಮುದ್ರ ನೀರಿನ ಕೊರೆತದಿಂದ ನಿರ್ಮಿತವಾದ ಕಲ್ಲಿನ, ಮಣ್ಣಿನ ಕಂಬಗಳನ್ನು, ದ್ವೀಪಗಳಂತಿರುವ ರಚನೆಯಿದು.

WP_20130918_061      WP_20130918_074      WP_20130918_070

ಇದರ ಬಹುಭಾಗ ಈಗಲೂ ನೀರಿನ ಕೊರೆತಕ್ಕೊಳಗಾಗಿದೆ. ಈ ಪ್ರದೇಶದಲ್ಲಿ ಸುಣ್ಣಮಿಶ್ರಿತ ಕಲ್ಲು ಕಂಡುಬರುತ್ತದೆ. ಇದರ ಸೌಂದರ್ಯ ದರ್ಶನವು ನಮ್ಮನ್ನು ಮೂಕರನ್ನಾಗಿಸುತ್ತದೆ. ಪ್ರಾಯಶಃ ಪ್ರಕೃತಿಯೇ ದೇವರು, ಇದೆಲ್ಲಾ ಸೃಷ್ಟಿಯ ಮುಂದೆ ನಾವು ತುಂಬಾ ಸಣ್ಣವರು ಎಂಬ ಭಾವನೆ ನನ್ನನ್ನು ಇನ್ನೂ ಕುಬ್ಜಳಾಗಿಸಿತು. ಈ ಪ್ರದೇಶಗಳು ನಮ್ಮ ದೇವಸ್ಥಾನ ಇತ್ಯಾದಿ ಯಾತ್ರಾಪ್ರದೇಶಗಳಂತೆ ಪವಿತ್ರಭಾವನೆ ಬರಿಸುತ್ತವೆ. ನಾವು ಈ ಎಲ್ಲಾ ಪ್ರಯಾಣದ ಸಂದರ್ಭಗಳಲ್ಲಿ ನಮಗೆ ಊಟವಾಗಿ ಏನು ಲಭ್ಯವೋ ಅದನ್ನು ಸ್ವೀಕರಿಸಿದೆವು, ಕೆಲವೊಮ್ಮೆ ನಾವು ಒಯ್ದಿರುವ ಬ್ರೆಡ್,ಜಾಮ್,ಬೆಣ್ಣೆ, ಕೆಲವೊಮ್ಮೆ ದಾರಿ ಪಕ್ಕದ ಹೋಟೆಲಿನಲ್ಲಿ ಸಿಗುವ ಸಾಂಡ್ ವಿಚ್,ಪಿಟ್ಜ , ಹಣ್ಣು ಇತ್ಯಾದಿ.
ನಾವು  ಪೋರ್ಟ್ ಕಾಂಬೆಲ್ ನಿಂದ ಮುಂದುವರಿದು ಆಟ್ವೇ ಪಾರ್ಕ್ ಎಂಬಲ್ಲಿಗೆ ಹೋದೆವು. ಅದು ನಾವು ಊಹಿಸದ ರೀತಿಯ ನೀಲಗಿರಿ ಮರಗಳ ಕಾಡು. ಅಲ್ಲಿನ ಮರಗಳು ದೈತ್ಯ ಗಾತ್ರದವುಗಳು, ಇವು ಸುಮಾರು ೩೦೦ ಅಡಿಗಳಿಂದ ೪೦೦ ಅಡಿ, ಕೆಲವು ಇನ್ನೂ ಹೆಚ್ಚಿನ ಎತ್ತರದವು. ಈ ಕಾಡು ಸುಮಾರು ೧೦೩ ಚದರ ಕಿ.ಮೀ.ವಿಸ್ತೀರ್ಣ ಪ್ರದೇಶದಲ್ಲಿ ಆವರಿಸಿದೆ. ಅಲ್ಲಿ ನಾವು ಈ ಮರಗಳ ಮೇಲಿನ ಎತ್ತರಕ್ಕೆ ನಾವು ನಡೆದುಕೊಂಡು ತಲುಪುತ್ತೇವೆ. ಕಬ್ಬಿಣದ ಸೇತುವೆಗಳ ಜಾಲ ನೆಲಮಟ್ಟದಿಂದ ಕ್ರಮೇಣ ಮೇಲೇರುತ್ತಾ ಒಂದು ಹಂತದಲ್ಲಿ ೪೦೦-೪೫೦ ಅಡಿಗಳ ಎತ್ತರಕ್ಕೆ ನಾವು ಏರುತ್ತೇವೆ. ಒಂದು ಎತ್ತರದ ಹಂತದಲ್ಲಿ ನಮಗೆ ಕಾಡೆಲ್ಲಾ ಕಾಣುವಂತೆ ವೃತ್ತಕಾಕಾರದ ಏಣಿ ಮೆಟ್ಟಲಿಟ್ಟಿದ್ದಾರೆ. ಆ ಎತ್ತರ ನಮ್ಮಂತ ಸಾಹಸಿಗಳಲ್ಲದವರಿಗೆ ತಲೆ ಸುತ್ತು ಬರಿಸುವಂತಿದೆ.

otway park

otway park 1

 

great-otway-national-park-06

ಅಲ್ಲೂ ಕೆಲವು ಮರಗಳು ಇನ್ನೂ ಎತ್ತರಕ್ಕೆ ಬೆಳೆದುದನ್ನು ಕಂಡೆವು. ಈ ದೇಶಗಳಲ್ಲಿ ವಿಶೇಷವೆಂದರೆ ಎಲ್ಲೆಡೆಯಲ್ಲೂ ಎಲ್ಲ ವಯೋಮಾನದವರು ಸ್ಥಳ ವೀಕ್ಷಣೆಗೆ ಬರುತ್ತಾರೆ, ವಯಸ್ಸು ಅವರ ಉತ್ಸಾಹಕ್ಕೆ ತಡೆ ಹಾಕುವುದಿಲ್ಲ. ಈ ರಾಷ್ಟ್ರೀಯ ಉದ್ಯಾನ ಆಟ್ವೇ ಪಾರ್ಕ್ ಸುಮಾರು ೩-೫ ಗಂಟೆ ಕಾಲ ನೋಡುವಂತದು. ನಾವು ಕೊನೆಯ ಹಂತದಲ್ಲಿ ನೆಲಕ್ಕೆ ಈಳಿದು ಮರಗಳ ಪದತಲದಲ್ಲಿ ನಡೆಯತೊಡಗಿದೆವು. ಅಲ್ಲಿ ನಮಗೆ ವಿವಿಧ ತರಾವಳಿಯ ಝ್ಹರಿ ಗಿಡಗಳು, ಹಾಮಾಸುಗಳು, ಸಸ್ಯ ಶಾಸ್ತ್ರದವರಿಗೆ ಹುಚ್ಚು ಹಿಡಿಸುವಂತಾ ಕೇವಲ ಪುಸ್ತಕದಲ್ಲಿ ಮಾತ್ರ ಕಾಣ ಸಿಗುವ ಜಾತಿಯ ಸಸ್ಯಗಳು ಕಾಣ ಸಿಗುತ್ತವೆ. ಡೈನಾಸಾರ್ ಕಾಲದಲ್ಲಿ ಬದುಕಿದ್ದ ಫರ್ನ್ (ಝ್ಹರಿ) ಮರಗಳು ಅಲ್ಲಿ ರಾರಾಜಿಸುತ್ತವೆ, ಪ್ರಪಂಚದಲ್ಲೆಲ್ಲೂ ಅದು ಕಾಣ ಸಿಗುವುದಿಲ್ಲ. ಇಲ್ಲಿನ ಹುಳ-ಹುಪ್ಪಟೆಗಳೂ ಅಷ್ಟೆ ನಾವು ಬೇರೆ ಕಡೆಗಳಲ್ಲಿ ಕಾಣೆವು. ಇದೊಂದು ನೆಲದಲ್ಲಿ ಮಾತ್ರ ಆ ಪುರಾತನ ಜೀವಿಗಳು ಉಳಿದುಕೊಂಡಿವೆ.
ಈ ಕಾಡಿನ ನಡೆ ಮುಗಿಯುವಾಗ ನಾವು ಹಸಿದಿದ್ದೆವು, ಆಯಾಸಿಗಳಾಗಿದ್ದೆವು. ಆದರೆ ನಮಗೆ ದಾರಿ ಇನ್ನು ಮುಂದೆ ಹೋಗುವುದು ಬಾಕಿಯಿತ್ತು. ಕಾಡಿನ ದಾರಿಮಧ್ಯದಲ್ಲಿ ಮುಂದುವರಿಯುತ್ತಾ ಕತ್ತಲಾಗುವ ಹೊತ್ತಿಗಾಗುವಾಗ ಬಲರೆಟ್ ಎಂಬ ಸಾಧಾರಣ ಗಾತ್ರದ ಊರೊಂದಕ್ಕೆ ಬಂದೆವು. ಇಲ್ಲಿನ ಅನುಭವಕ್ಕೆ ಪ್ರತ್ಯೇಕ ಲೇಖನವೇ ಬೇಕು.

Advertisements

One thought on “ಕ್ಯಾಂಗರುಗಳ ನಾಡಲ್ಲಿ ನಾವು

  1. ಚೆನ್ನಾಗಿದೆ, ಮುಂದುವರಿಸು. ಲೇಖನದ ಚಿತ್ರಗಳನ್ನು ಹಿಗ್ಗಿಸಿ ನೋಡುವ ಸೌಕರ್ಯ ಅಳವಡಿಸು. ಈಗ ಇರುವಂತೆ ಕುತೂಹಲದ ಕಣ್ಣುಗಳಿಗೆ ಅವು ಸಾಕಾಗುವುದಿಲ್ಲ.
    ಆಸ್ಟ್ರೆಲಿಯಾದ ಮಂಗಳೂರಿನಲ್ಲಿ ನಡೆದ ವಿಮಾನ ಮೇಳ ಒಂದರ ಕುರಿತು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಯಾವುದೋ ವಿದೇಶೀ ಪತ್ರಿಕೆಯಲ್ಲಿ ಲೇಖನ ನೋಡಿ ನಾನು ನಮ್ಮ ಮಂಗಳೂರು ಪತ್ರಿಕೆಗೆ ಲೇಖನ ಬರೆದದ್ದು ನೆನಪಾಯ್ತು. ಅಲ್ಲಿ ಉಲ್ಲಾಳ, ಕಲ್ಕತ್ತ ಸೇರಿದಂತೆ ಭಾರತದ ಹಲವು ಹೆಸರುಗಳು ಪುನರುಜ್ಜೀವನಗೊಂಡಿವೆ ಎಂದು ಆಗ ತಿಳಿಯಿತು. ಅದೆಲ್ಲ ಭಾರತದಲ್ಲಿ ಸೇವಾನಿರತರಾಗಿದ್ದು, ನಿವೃತ್ತಿಯಲ್ಲಿ ಆಸ್ಟ್ರೆಲಿಯಾವನ್ನು ನೆಚ್ಚಿಕೊಂಡ ಬ್ರಿಟಿಷರ ಸ್ಮರಣಿಕೆಗಳೇ ಆಗಿವೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s