ರಾಮಯ್ಯನವರು ತಂದೆಯವರಿಗೆ ಬರೆದ ಪತ್ರ

(೧೯ನೇ ಶತಮಾನದ ಪ್ರಾರಂಭದಲ್ಲಿ ಮಕ್ಕಳ ಮತ್ತು ಹೆತ್ತವರ ನಡುವಿನ ಸಂಬಂಧದ ಚಿತ್ರಣ)

ಆರಂಭದಲ್ಲಿ ಈ ಪತ್ರದ ಲೇಖಕರ ಕಿರು ಪರಿಚಯ. ಇಲ್ಲಿ ಮಗನೆಂದರೆ ಕನ್ನಡದ ಮೊದಲ ವಾರ್ತಾಪತ್ರಿಕೆಯಾದ ತಾಯಿ ನಾಡನ್ನು ಪ್ರಾರಂಭಿಸಿದ ಪಾಲಹಳ್ಳಿ ರಾಮಯ್ಯನವರು. ಅವರ ತಂದೆ ಪಾಲಹಳ್ಳಿ ರಾಮಸ್ವಾಮಿಯವರು. ಅವರ ಪತ್ರಿಕೆ ಆಗಿನ ದಿನಗಳಲ್ಲಿ ಸ್ವಾತಂತ್ರ್ಯ ಚಳವಳಿಗೆ ಕನ್ನಡಿಗರಿಗೆ ಬಹಳ ಹುಮ್ಮಸ್ಸನ್ನು, ದೇಶದ ಆಗು-ಹೋಗುಗಳ ಬಗ್ಗೆ ಅರಿವನ್ನು ನೀಡಿತ್ತು. ಇವರ ಬಾಲ್ಯ,ವಿದ್ಯಾಭ್ಯಾಸ ಬಹಳ ಕಷ್ಟದಲ್ಲಿ ಕಳೆಯಿತು. ಹದಿ ವಯಸ್ಸಿಗೆ ಬಂದಾಗ ಅವರಿಗೆ ತಾನು ವಿದ್ಯಾಭ್ಯಾಸ ಪಡೆದು ಮುಂಬರಬೇಕೆನ್ನಿಸಿತು. ಅವರು ಹಿರಿಯರನ್ನು ವಿರೋಧಿಸಿ ಅವರ ಇಚ್ಛೆಯ ವಿರುದ್ಧ,
ಅವರಾರಿಗೂ ತಿಳಿಸದೇ, ಮನೆಬಿಟ್ಟು ನಡೆದು, ತಿಳಿಯದ ದೂರದ ಊರಾದ ವಾರಣಾಸಿಗೆ ಹೋದರು. ಈ ಪತ್ರವನ್ನು ಅವರ ವಿದ್ಯಾಭ್ಯಾಸ ಮುಗಿಯುವ ಹಂತದಲ್ಲಿ, ತಮ್ಮ ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಬರೆದರು.

ರಾಮಯ್ಯನವರ ವಿದ್ಯಾಭ್ಯಾಸವು ಸ್ವಾತಂತ್ರ್ಯ ಪೂರ್ವದ ೧೯೧೩-೧೯೨೦ ರ ಕಾಲದಲ್ಲಾಯಿತು. ಆ ದಿನಗಳಲ್ಲಿ ನಮ್ಮ ಸಮಾಜವು ಸಂಪ್ರದಾಯಬದ್ಧತೆ ಮತ್ತು ಮೂಢನಂಬಿಕೆಗಳಿಂದಿತ್ತು. ಅದಲ್ಲದೇ ಜನಸಾಮಾನ್ಯರು ಬಡತನದಿಂದ ಬಳಲುತ್ತಿದ್ದರು. ಬ್ರಿಟಿಷ್ ಆಡಳಿತವು ಎಲ್ಲಾ ವರ್ಗದ ಜನರಲ್ಲಿ ರೊಚ್ಚನ್ನು ಕೆರಳಿಸಿತ್ತು. ಹೊಸತನವನ್ನು,ಬದಲಾವಣೆಯನ್ನು ಬಯಸಿದ ರಾಮಯ್ಯನವರು ತಾವಂದುಕೊಂಡದ್ದನ್ನು ಸಾಧಿಸುತ್ತಾರೆ, ಮತ್ತು ಭವಿಷ್ಯದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಗೆ ಕನ್ನಡನಾಡಿನ ಕೊಡುಗೆಯಾಗಿ, ಸ್ವಾತಂತ್ರ್ಯ ಚಳವಳಿಗೆ ಹೊಸತೊಂದು ರೂಪವನ್ನಿತ್ತ ಕರ್ನಾಟಕದ ಮೊದಲ ಕನ್ನಡ ದೈನಂದಿಕವಾದ “ತಾಯಿ ನಾಡ”ನ್ನು ಪ್ರಾರಂಭಿಸುತ್ತಾರೆ. ಅವರಿಗಿದ್ದ ಬಂಡವಾಳ ಕೇವಲ ಗಾಂಧೀವಾದ, ದೇಶಸೇವೆ ಮಾಡುವ ತೀವ್ರ ಇಚ್ಛೆ ಮತ್ತು ಹುಮ್ಮನಸ್ಸು ಹಾಗೂ ತನ್ನ ಸಾಮರ್ಥ್ಯದ ಮೇಲಿದ್ದ ವಿಶ್ವಾಸವಷ್ಟೆ! ಬಾಲ್ಯದಿಂದ ತನ್ನ ಮನಸ್ಸಿನೊಳಗೇ ಹುದುಗಿದ್ದ,ಬಚ್ಚಿಟ್ಟಿದ್ದ ಭಾವನೆಗಳನ್ನು ತಮ್ಮ ತೀರ್ಥರೂಪರಾದ ರಾಮಸ್ವಾಮಿಯವರಿಗೆ ನಿವೇದಿಸಿ, ತರುವಾತ ದೇಶಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ.ಈ ಕೆಳಗಿನಂತಿದೆ ರಾಮಯ್ಯನವರ ಪತ್ರ.

                                                                                        ಕೆ.ಇ.ಹೊಸ್ಟೆಲ್,ಸಿ.ಹೆಚ್.ಕಾಲೇಜ್,ಬನಾರಸ್,

೦೯/೧೨/೧೯೨೦

ಪೂಜ್ಯ ತಂದೆಯವರೆ,
ನಿಮ್ಮ ಪತ್ರ ಕೈಸೇರಿತು. ನಿಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಸಂತೋಷಪಡುತ್ತೇನೆ. ನಮ್ಮ ಆ ಬಂಧುವೊಬ್ಬರು ನಮ್ಮಲ್ಲೆರನ್ನು ಅಗಲಿ ಹೋದ ಸಮಾಚಾರ ತಿಳಿದು ದುಃಖವಾಯಿತು. ಅವರು ಇನ್ನು ಕೆಲವು ದಿನ ಬಾಳಿದ್ದಲ್ಲಿ ನಾನು ಎಂತಹ ವ್ಯಕ್ತಿ, ಬಹುಮಂದಿ ಅಭಿಪ್ರಾಯ ಪಟ್ಟಂತೆ ಮೂರ್ಖನಲ್ಲ, ಯೋಗ್ಯನೆಂದು ತಿಳಿದು ಸಂತೋಷಪಡುತ್ತಿದ್ದರು.ನಾನು ಯಾವತ್ತಿಗೂ ಉಚ್ಛ-ಸಿದ್ಧಾಂತಗಳನ್ನು ಹೊಂದಿದವನು, ಇನ್ನೊಬ್ಬರ ಬಲಪ್ರಯೋಗಕ್ಕೆ ಮಣಿಯುವವನಲ್ಲ, ಕೇವಲ ಪ್ರೀತಿ ವಿಶ್ವಾಸಕ್ಕೆ ಮಾತ್ರ ಮಣಿಯುವವನು.ಇನ್ನೊಂದು ಮುಖ್ಯ ವಿಚಾರವನ್ನು ನಾನು ನಿಮಗೆ ತಿಳಿಸಲು ಸಂತೋಷಿಸುತ್ತೇನೆ. ಆ ಭಗವಂತ ನನ್ನ ಸಮಸ್ಯೆಯೊಂದಕ್ಕೆ ದಾರಿ ತೋರಿದ್ದಾನೆ. ನನಗಿಂದು ಅವನ ಕೃಪೆಯಿಂದ ನನ್ನ ಜೀವನದ ಅರ್ಥವೇನೆಂದು ತಿಳಿದಿದೆ, ಆ ದಿಕ್ಕಿನತ್ತ ಮುಂದುವರಿಯುವುದೇ ನನ್ನ ಪರಮ ಧ್ಯೇಯವಾಗಿದೆ.ಹಾಗೂ ನನಗೊಬ್ಬ ಮಾರ್ಗದರ್ಶನ ಮಾಡಬಲ್ಲ ಗುರುವೊಬ್ಬನೂ ದೊರಕಿದ್ದಾನೆ.ನಾನು ಆ ಗುರುವನ್ನು ಮನ್ನಿಸುತ್ತೇನೆ. ನಾನು ಸಂಪತ್ತು, ಐಶ್ವರ್ಯಗಳ ಬೆನ್ನು ಹತ್ತದೇ ನನ್ನ ಮಾತೃಭೂಮಿಗಾಗಿ, ಜನರಿಗಾಗಿ ದುಡಿಯುವುದಲ್ಲೇ ಜೀವನದ ಸಾರ್ಥಕ್ಯವಿದೆಯೆಂದು ಕಂಡುಕೊಂಡಿದ್ದೇನೆ. ಅದುವೇ ನನ್ನ ಕರ್ತವ್ಯವೆಂದು, ಆ ಧರ್ಮದ ಪಾಲನೆ ಮಾಡಲು ನಿರ್ಧರಿಸಿದ್ದೇನೆ.

ನಿಮಗೆ ತಿಳಿದಿರುವಂತೆ ಬ್ರಿಟಿಷ್ ಸರಕಾರ ಈಚಿನ ದಿನಗಳಲ್ಲಿ ಭಾರತೀಯರನ್ನು ಗುಲಾಮ ಸಮಾನರಾಗಿ ಕಾಣುತ್ತಿದ್ದಾರೆ. ಅವರು ನಮ್ಮ ಹಿತವನ್ನು ಬಯಸುತ್ತಿಲ್ಲ, ತಮ್ಮ ಮಂದಿಯ ಒಳಿತನ್ನು ಮಾತ್ರ ಯೋಚಿಸುತ್ತಿದ್ದಾರೆ. ಅವರು ಈ ನೆಲದಿಂದ ಸಂಪನ್ಮೂಲಗಳನ್ನು ದೋಚಿ ತಮ್ಮ ನಾಡಿಗೆ ಒಯ್ಯುತ್ತಿದ್ದಾರೆ, ನಮ್ಮನ್ನು,ನಮ್ಮ ಹಿತವನ್ನು ಕಡೆಗಣಿಸುತ್ತಿದ್ದಾರೆ. ಅವರು ಅನಧಿಕೃತವಾಗಿ, ಸದಸ್ಯರ ಅಭಿಪ್ರಾಯಕ್ಕೆ ವಿರೋಧವಾಗಿ “ರೋವ್ಲೆಟ್ ಬಿಲ್”ಗೆ ಒಪ್ಪಿಗೆ ಕೊಟ್ಟಿದ್ದಾರೆ.ಅವರು ಪಂಜಾಬಿನಲ್ಲಿ ಯುದ್ಧವನ್ನು ಸಾರುವಂತ ಕಾನೂನನ್ನು ಜಾರಿಗೆ ತಂದಿದ್ದಾರೆ. ಇಷ್ಟಲ್ಲದೇ ನಮ್ಮ ದೇಶವನ್ನು ಬಂಧಿಸುವಂತ ಒಡಂಬಡಿಕೆಗಳನ್ನು ಇನ್ನೂ ಬಿಗಿಯಾಗಿ ಮಾಡುತ್ತಿದ್ದಾರೆ. ಜರ್ಮನಿ ಮತ್ತು ಟರ್ಕಿಯೊಂದಿಗಿನ ಯುದ್ಧ ಸಂದರ್ಭದಲ್ಲಿ ಅವರು ಮುಸಲ್ಮಾನರನ್ನು ತಮಗೆ ಸಹಾಯ ಮಾಡಲು ಯಾಚಿಸಿದ್ದರು.ಯುದ್ಧಾ ನಂತರ ಟರ್ಕಿಯನ್ನು ವಿಂಗಡಿಸಿ, ಮುಸಲ್ಮಾನರ ಧಾರ್ಮಿಕ ಪ್ರದೇಶಗಳನ್ನು ವಶಪಡಿಸಿಕೊಂಡರು. ಅದು ಭಾರತೀಯ ಮುಸಲ್ಮಾನರಿಗೆ ಸರಿ ಬರಲಿಲ್ಲ, ಹಾಗಾಗಿ ಆ ಧಾರ್ಮಿಕ ಸ್ಥಳಗಳನ್ನು ಮುಸಲ್ಮಾನರ ವಶಕ್ಕೆ ಬಿಡಬೇಕೆಂದು ಇಂಗ್ಲೆಂಡಿನ ಮುಖ್ಯಮಂತ್ರಿಗೆ ಮನವಿ ಮಾಡಿದರು.ಆದರೆ ಅವರ ಮನವಿಗಳನ್ನು ಉಪೇಕ್ಷಿಸಲಾಯಿತು.

ಕಲಕತ್ತಾ ನಗರದಲ್ಲಿ ಜರಗಿದ ವಿಶೇಷ ಕಾಂಗ್ರೆಸ್ ಅಧಿವೇಶನವು, ನಾವೆಲ್ಲಾ ಒಗ್ಗಟ್ಟಿನಿಂದ ನಮ್ಮೆಲ್ಲರ ಅಸಹಕಾರವನ್ನು ವ್ಯಕ್ತಪಡಿಸುವಂತಹ ಠರಾವನ್ನು ಮಂಜೂರು ಮಾಡಿದೆ. ಅದರ ಪ್ರಕಾರ ನಾವು ಪ್ರಜೆಗಳು ಸರಕಾರದೊಂದಿಗೆ ಎಲ್ಲಾ ರೀತಿಯ ಸಹಕಾರವನ್ನು ಸ್ಥಗಿತಗೊಳ್ಳಿಸಬೇಕು. ವಕೀಲರು ತಮ್ಮ ವಕೀಲಿ ವೃತ್ತಿಯನ್ನು ತೊರೆದು, ಬ್ರಿಟಿಷ್ ಸರಕಾರದ ಪ್ರಭಾವ, ಆಸರೆಯಿಂದ ಹೊರಬಂದು, ಪ್ರತ್ಯೇಕ ನ್ಯಾಯಕಟ್ಟೆಗಳನ್ನು, ಕಚೇರಿಗಳನ್ನು ಪ್ರಾರಂಭಿಸಬೇಕು.C.I.E, K.C.S.I.ಇತ್ಯಾದಿ ಪದವಿಗಳನ್ನು ಹೊಂದಿದವರು ಅವುಗಳನ್ನು ತ್ಯಜಿಸಬೇಕು. ವಿದ್ಯಾರ್ಥಿಗಳು ಬ್ರಿಟಿಷರಿಂದ ಪೋಷಿಸಲ್ಪಟ್ಟ, ಅವರ ಸಹಾಯವನ್ನು ನೆಚ್ಚಿಕೊಂಡಿರುವ ವಿದ್ಯಾಸಂಸ್ಥೆಗಳನ್ನು ವಿರೋಧಿಸಿ ಹೊರಬರಬರಬೇಕು, ಮತ್ತು ಸ್ವತಂತ್ರವಾಗಿ ನಡೆಸಲ್ಪಡುವ ಮತ್ತು ಭಾರತೀಯ ಸಂಘಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕು.ಈ ಅಸಹಕಾರ ಚಳವಳಿಯ ನೇತೃತ್ವವನ್ನು ಸಂತ ಸಮಾನರಾಗಿರುವ ಮಹಾತ್ಮ ಗಾಂಧೀಜಿ ವಹಿಸಿಕೊಂಡಿದ್ದಾರೆ.ಆವರ ಜೀವನವೇ ದೇಶಸೇವೆಗೆ ಮುಡಿಪಾಗಿದೆ. ಇನ್ನು ಈ ಚಳವಳಿ ಹಬ್ಬುವುದನ್ನು ಗಮನಿಸಿದರೆ, ಬಹಳ ಮಂದಿ ವಿರೋಧಿಸಿರುವುದು ಕಾಣುತ್ತದೆ. ಕೆಲವರು ದೇಶವಿನ್ನೂ ಆ ಮಟ್ಟಕ್ಕೆ ತಯಾರಾಗಿಲ್ಲ, ಇನ್ನು ಕೆಲವರು ಇದನ್ನು ಕಾರ್ಯರೂಪಕ್ಕಿಳಿಸಲು ಅಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಮತ್ತೊಂದು ಅಭಿಪ್ರಾಯವೆಂದರೆ ಈ ಚಳವಳಿ ದೇಶದ ಶಾಂತಿಯನ್ನು ಕಲಕುತ್ತದೆ. ಅಂತೂ ಈ ವರೆಗೆ ಇದಕ್ಕೆ ದೊರತಿರುವ ಪ್ರತಿಕ್ರಿಯೆ ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ.
ಇನ್ನು ನಾನು ನನ್ನ ಅಭ್ಯಾಸ, ಓದಿನ ಬಗ್ಗೆ ಹೇಳುವುದಾದರೆ, ನಾನು ಈ ವರ್ಷದ ಪ್ರಾರಂಭದಿಂದಲೇ ಶಿಸ್ತುಬದ್ಧವಾಗಿ ಅಭ್ಯಾಸ ನಡೆಸುತ್ತಿದ್ದೇನೆ, ನನ್ನ ಶಕ್ತ್ಯಾನುಸಾರ ಪರಿಶ್ರಮ ಪಡುತ್ತಿದ್ದೇನೆ. ಆದರೆ ನಾನು ಅಗಿಂದಾಗ್ಗೆ ಈ ಮೇಲಿನ ವಿಷಯಗಳನ್ನು ಉಳಿದವರಲ್ಲಿ ಮಾತನಾಡಿದ್ದೇನೆ, ಮತ್ತು ವಾರ್ತಾಪತ್ರಿಕೆಗಳಲ್ಲಿ ಓದಿದ್ದೇನೆ.ಇದರಿಂದಾಗಿ ನನ್ನಲ್ಲಿ ದಿನ ಕಳೆದಂತೆ ಈ ಅಸಹಕಾರ ಚಳವಳಿಯ ಬಗ್ಗೆ ಸ್ಪಷ್ಟ ಅಭಿಪ್ರಾಯ ಮೂಡಿದೆ. ನಾನು ಈ ಚಳವಳಿಯನ್ನು ನನ್ನ ಜೀವನಕ್ಕೆ ಸಂಬಂಧಿಸಿದಂತೆ ಚಿಂತಿಸಿದ್ದೇನೆ.ನನಗೆ ತೋಚಿದ್ದನ್ನು ಈ ಕೆಳಗೆ ತಿಳಿಸುತ್ತಿದ್ದೇನೆ.
ನಾನು ಯೋಚಿಸುವಂತೆ, ನನ್ನ ೧೫ನೇ ವರ್ಷ ಪ್ರಾಯದಲ್ಲಿ ನನ್ನ ಜೀವನದ ತಿರುವು ಬಂತು.ಅದಕ್ಕಿಂತ ಮೊದಲು ನಾನು ನಿಧಾನಿಯೂ,ಮಂದ ಸ್ವಭಾವದವನೂ ಆಗಿದ್ದೆ, ನನ್ನನ್ನು ಕಂಡವರು ನಾನು ಕೆಲಸಕ್ಕೆ ಬಾರದವನೆಂದುಕೊಂಡಿದ್ದರು.ಪ್ರಾಯಶಃ ನನ್ನೊಡನೆ ಬಾಲ್ಯದಲ್ಲಿ ವಿಶ್ವಾಸ, ಕಳಕಳಿಯಿಂದ ಒಡನಾಟವಿಟ್ಟುಕೊಂಡಿದ್ದಲ್ಲಿ, ಕೇವಲ ಶಿಕ್ಷೆ, ಹೊಡೆತಗಳನ್ನು ಅನುಭವಿಸದಿದ್ದಲ್ಲಿ ನಾನು ಚೆನ್ನಾಗಿ ಓದಿ, ಬರೆದು ಬುದ್ಧಿವಂತನಾಗಿರುತ್ತಿದ್ದೆ. ಬಾಲ್ಯದಲ್ಲಿ ನನಗೆ ದೊರೆತ ಶಿಕ್ಷೆ,ಹೊಡೆತಗಳು ನನ್ನನ್ನು ಮಂದವಾಗಿಸಿತ್ತು, ಮತ್ತು ನನ್ನ ಬುದ್ಧಿಮತ್ತೆಯನ್ನು ಕುಗ್ಗಿಸಿತ್ತು.ಅದೇನೇ ಇದ್ದರೂ ನಾನು ನನ್ನ ೧೫ನೇ ವರ್ಷದಲ್ಲಿ ನನ್ನದೊಂದು ವ್ಯಕ್ತಿತ್ವದ ಬಗ್ಗೆ ಅರಿತುಕೊಳ್ಳಲು ಪ್ರಾರಂಭಿಸಿದೆ. ನನ್ನಲ್ಲಿ ಆ ಭಾವನೆಗಳು ಜಾಗೃತವಾದವು, ಸ್ವತಂತ್ರವಾಗಿ ಯೋಚಿಸುವುದನ್ನು ಪ್ರಾರಂಭಿಸಿದೆ. ಆಗಿನಿಂದ ನಾನು ನನ್ನ ಓದಿನಲ್ಲಿ ಆಸಕ್ತಿ, ಶ್ರದ್ಧೆ ವಹಿಸಲು ಮೊದಲುಮಾಡಿದೆನು.ಇದನ್ನೇನು ನಾನು ನಿಮ್ಮಲ್ಲಿ ಅಗೌರವವಿದ್ದು ಹೇಳಿದ್ದಲ್ಲ. ನಾನು ನನ್ನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಬಗ್ಗೆ ತಿಳಿಸಲು ಹೇಳಿದೆನಷ್ಟೆ ! ಮತ್ತು ಆ ದಿನಗಳಿಂದ ನಾನು ಸ್ವತಂತ್ರನಾದೆ ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದೆ. ನನ್ನ ಓದು ಕೇವಲ ನನ್ನ ಶ್ರಮದ ಪ್ರತಿಫಲವಷ್ಟೆ,ಇದರಲ್ಲಿ ಇನ್ನೊಬ್ಬರ ಪ್ರಭಾವವಿಲ್ಲ.ಆ ನಂತರದ ದಿನಗಳಲ್ಲಿ ಏನೇನು ನಡೆಯಿತೆಂಬುವುದು ನಿಮಗೆ ತಿಳಿದೇ ಇದೆ. ಆಗಿನ ದಿನಗಳಲ್ಲಾದ ಕ್ಲೇಶಕರ ಘಟನೆಗಳೇನೇ ಇದ್ದರೂ ಅದು ನಿಮ್ಮ ಹಳೇ ಮನೋಭಾವದ ಶಿಸ್ತುಹೇರಿಕೆ ಮತ್ತು ಯೋಚನಾಕ್ರಮದಿಂದ. ನೀವು,ನಿಮ್ಮ ಪ್ರಾಯಕ್ಕೆ ಬಂದ ಮಗ ಅಕ್ಷರಶಃ ನಿಮ್ಮ ಮಾತು, ಅಪ್ಪಣೆಗಳನ್ನು ಪಾಲಿಸಿಕೊಂಡು ವಿಧೇಯನಾಗಿರಬೇಕೆಂದು ಬಯಸಿದ್ದಿರಿ. ಬಹುಶಃ ನಾನು ನಿಮ್ಮನ್ನು ಮೀರಿ ನಡೆದುಕೊಂಡಿದ್ದರೆ ನಮ್ಮಿಬ್ಬರ ಆ ಎಲ್ಲಾ ಪಾಡುಗಳನ್ನು ತಪ್ಪಿಸಬಹುದಿತ್ತು. ೧೯೧೧ರಲ್ಲಿ ನೀವು ನನ್ನ ಮದುವೆಯ ನಿರ್ಧಾರವನ್ನು ನನಗೇ ಬಿಟ್ಟಿದ್ದರೆ ನಮ್ಮಿಬ್ಬರ ಮನಸ್ಸಂತೋಷ ಉಳಿದಿರೋದು.ಆದರೆ ನೀವು ಅವೆಲ್ಲಾ ದೈವೇಚ್ಛೆ ಎಂದು ಭಾವಿಸುತ್ತೀರಿ. ಮಾಡಿದ ತಪ್ಪುಕಣ್ಣ ಎದುರಿರುವಾಗ ಕಾಣದ ದೇವರ ಮೇಲೇಕೋ ಈ ಆರೋಪಣೆ ! ನೀವೇನು ಮಾಡಿದ್ದರೂ ಅದು ಕೇವಲ ನನ್ನ ಒಳಿತಿಗೆಂದು ಭಾವಿಸಿ, ನನ್ನ ಮನಸ್ಸಿನಲ್ಲಿದ್ದುದನ್ನು ನಿಮ್ಮ ಮುಂದು ಬಿಚ್ಚಿಡುತ್ತಿದ್ದೇನೆ.ನೀವೆಂದೂ ನನ್ನ ಕೆಡುಕನ್ನು ಬಯಸಿಲ್ಲ, ನನ್ನ ಪಾಲನೆ ಪೋಷಣೆಯಲ್ಲೇನೂ ಕಮ್ಮಿಯಾಗಿಲ್ಲ. ಆದರೆ ನೀವು ನನಗೆ ಬೇಕಿದ್ದ ವ್ಯಕ್ತಿ ಸ್ವಾತಂತ್ರ್ಯ ಕೊಡಲಿಲ್ಲ, ಚಿಕ್ಕಂದಿನಲ್ಲಿ ನನಗೆ ಯೋಚಿಸುವುದಕ್ಕೂ ಸ್ವಾತಂತ್ರ್ಯವಿರಲಿಲ್ಲ. ನೀವಿನ್ನೂ ಅಂದಿನಂತೆಯೇ ಇದ್ದೀರ. ನಿಮ್ಮ ಇನ್ನೊಂದು ಪ್ರವೃತ್ತಿಯೆಂದರೆ (ದಯವಿಟ್ಟು ಕ್ಷಮಿಸಿ) ನಿಮಗೆ ಮನುಷ್ಯನಲ್ಲಿ, ಅವನ ಸಾಮರ್ಥ್ಯದಲ್ಲಿ ನಂಬುಗೆಯಿಲ್ಲ ಬದಲಿಗೆ ಅವನ ವಿಧಿಯ ಮೇಲೆ ಭರವಸೆ ! ೧೯೧೩ ರಲ್ಲಿ ನಾನು ಪ್ರಥಮ ಬಾರಿಗೆ ಮೆಟ್ರಿಕ್ಯುಲೇಶನ್ ಬರೆಯಲಿರುವಾಗ ನೀವು, ನಾನು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ ಎಂದು ನನ್ನ ಜಾತಕ ಹೇಳುತ್ತದೆ ಎಂಬ ನಿಮ್ಮ ನಂಬುಗೆಯನ್ನು ನನ್ನಲ್ಲಿ ಹೇಳಿದಿರಿ. ಅದೇಕೆ ನೀವು ಆ ಮಾತುಗಳನ್ನು ನನ್ನಲ್ಲಿ ಯಾ ಇನ್ನೊಬ್ಬರಲ್ಲಿ ಹೇಳದೇ ಇರಬಹುದಿತ್ತೆಂದು ಯೋಚಿಸಲಿಲ್ಲ ? ಇದು ನಿಮ್ಮಿಂದಾದ ದೊಡ್ಡ ತಪ್ಪು.ನನ್ನ ಹೆಚ್ಚಿನ ದೌರ್ಬಲ್ಯಗಳು ನಿಮ್ಮ ನಿರಂತರ ಮೂದಲಿಕೆ, ಅವಹೇಳನ,ಖಂಡನೆಗಳಿಂದ ಉಂಟಾದುದು. ನೀವು ನನ್ನನ್ನು ನಿರುತ್ಸಾಹಗೊಳಿಸದಿದ್ದಲ್ಲಿ ನಾನೇನು ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದೆನೆಂದು ನಾನೇನು ಆಲೋಚಿಸಿಲ್ಲ. ಆದರೆ ಮನುಷ್ಯ ಪ್ರಯತ್ನಪಟ್ಟಲ್ಲಿ ಅವನು ತನ್ನ ವಿಧಿಲಿಖಿತ ಭವಿಷ್ಯವನ್ನು ಮೀರಿ ಯಶಸ್ವಿಯಾಗಬಹುದು. ಮಾನವ ಕೇವಲ ಹುಲ್ಲುಕಡ್ಡಿಯಂತಲ್ಲ, ಅವನಿಗೆ ಸ್ವತಂತ್ರ ಬುದ್ಧಿಶಕ್ತಿಯಿದೆ. ಭಗವಂತ ಹಿರಿಯವನು, ಅವನು ಮನುಷ್ಯನಿಗೆ ಸಹಕಾರಿಯಾಗಿರುತ್ತಾನೆ.
ಇನ್ನು ಬನಾರಸಿಯಲ್ಲಿ ನನ್ನ ಓದಿನ, ಬದುಕಿನ ಬಗ್ಗೆ ಹೇಳುವುದಾದರೆ,ನನ್ನನ್ನು ನನ್ನ ಪಾಡಿಗೆ ಬಿಟ್ಟುದಕ್ಕಾಗಿ ನಾನು ನಿಮಗೆ ಕೃತಜ್ಞನೂ, ಆಭಾರಿಯೂ ಆಗಿದ್ದೇನೆ. ನೀವು ಪ್ರೀತಿಯಿಂದ ನನ್ನನ್ನು ಮೈಸೂರಿಗೆ ಬಂದು ಹೋಗುವಂತೆ ಪತ್ರ ಬರೆದಿರಿ, ಆದರೆ ನಾನು ನನ್ನ ಧೃಡ ನಿರ್ಧಾರದಿಂದಾಗಿ ಇಲ್ಲೇ ಉಳಿದುಕೊಂಡೆ. ನನ್ನಲ್ಲಿ ಈಗಿನ ಉತ್ತಮ ಗುಣಗಳೇನಿದ್ದರೂ ಅವುಗಳು ನಾನು ಬನಾರಸಿಯಯಲ್ಲಿ ಸ್ವತಂತ್ರನಾಗಿ ಕಳೆದುದರಿಂದಾಗಿವೆ, ನನಗನಿಸುವಂತೆ ಮೈಸೂರಿನಲ್ಲಿದ್ದರೆ ಇದು ಅಸಾಧ್ಯವಿತ್ತು.ನಾನಿಲ್ಲಿ ಕಳೆದ ಉತ್ತಮ ಬದುಕು, ಗಂಗಾನದಿಯ ತಟದಲ್ಲಿ ಧ್ಯಾನಮಾಡುತ್ತ ಸವೆಸಿದ ಅದೆಷ್ಟೋ ವೇಳೆ ನನ್ನನ್ನು ಮೇಲ್ಮಟ್ಟಕ್ಕೆತ್ತಿದೆ. ನನಗಿಲ್ಲಿ ಮಹಾನ್ ವ್ಯಕ್ತಿಗಳ ಸಂಪರ್ಕ,ಸಾನ್ನಿಧ್ಯ ದೊರೆಯಿತು, ಇಲ್ಲೇ ನನ್ನ ಬದುಕಿನ ಉದ್ದೇಶವನ್ನು ಕಂಡುಕೊಂಡೆ. ಹೆಚ್ಚೇಕೆ, ನನ್ನೊಳಗಿನ ಆ ಭಗವಂತನ ಅಸ್ತಿತ್ವದ ಅರಿವು ಇಲ್ಲೇ ಆಯಿತು. ನಾನು ಯಾವತ್ತೂ ಈ ಬನಾರಸಿಗೆ ಋಣಿಯಾಗಿರುವೆನು, ನನ್ನ ಭವಿಷ್ಯದಲ್ಲಿ ಇಲ್ಲಿಗೆ ಮರಳಿ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಬಹುಶಃ ಈ ಪಾವನವಾದ ಗಂಗಾನದಿ, ಅದರ ನೀರು ನನ್ನ ಜೀವನವನ್ನು ಶುದ್ಧೀಕರಿಸಿದೆ,ನನ್ನ ಪೂರ್ವಜನ್ಮದ ಪಾಪಗಳನ್ನು ತೊಳೆದಿದೆ. ನಾನು ನನ್ನ ಬಹಳಷ್ಟು ಬಂಧುಮಿತ್ರರಿಗಿಂತ ಶುದ್ಧಜೀವನ ನಡೆಸುತ್ತಿದ್ದೇನೆಂಬುವುದು ನನ್ನ ಭಾವನೆ. ನಾನಿಲ್ಲಿ ಸ್ವತಂತ್ರನಾಗಿ ಯೋಚಿಸಲು ಕಲಿತೆ. ನಾನೆಂದಿಗೂ ಇನ್ನೊಬ್ಬರಿಗೆ ಕೇಡನ್ನು ಬಯಸಲಾರೆ.ನನ್ನ ಜೀವನವನ್ನು ಸರಳವಾದ ಬದುಕು ಮತ್ತು ಉತ್ತಮ ಯೋಚನೆಗಳಿಂದ ಸುಂದರವಾಗಿ ಕಟ್ಟುತ್ತೇನೆ.
ನಾನು ಬಹಳಷ್ಟು ಕಾಲ ನನ್ನ ಈ ಯೋಚನೆಗಳು ಕೇವಲ ಆದರ್ಶ, ಕೆಲಸಕ್ಕೆ,ವ್ಯವಹಾರಕ್ಕೆ ಬಾರದವು ಎಂಬ ಭಾವನೆಯಿಂದಿದ್ದೆ. ನನಗೆ ಬಾಹ್ಯ ತೋರಿಕೆ,ವೈಭವ ಇವ್ಯಾವುದೂ ಮನಸ್ಸಿಗೆ ಒಪ್ಪಿಗೆಯಾಗುವುದಿಲ್ಲ. ನಾನು ಸಜ್ಜನರ ಸಹವಾಸ,ಸಾಮೀಪ್ಯವನ್ನು ಇಷ್ಟಪಡುತ್ತೇನೆ, ನನಗೆ ಇವೆಲ್ಲ ಯಾಕಾಗಿ ಆ ರೀತಿಯಲ್ಲಿ ತೋರುತ್ತದೆ ಎಂಬುವುದಕ್ಕೆ ಉತ್ತರವಿಲ್ಲ. ಆದರೆ ನನಗೆ ಈಗ ಇವೆಲ್ಲವುಗಳಿಗೆ ಸಮಾಧಾನ, ಉತ್ತರ ದೊರಕಿದೆ. ದೇವರು ನನ್ನ ಬದುಕನ್ನು ಸೇವೆಗಾಗಿಯೇ ಸೃಷ್ಟಿ ಮಾಡಿದ್ದಾನೆ ಎಂಬ ಸತ್ಯ ಮನವರಿಕೆಯಾಗಿದೆ. ನಾನು ಅಧಿಕಾರ, ಸ್ಥಾನಮಾನಗಳಿಗಾಗಿ, ಜನರನ್ನು ಆಳಲು, ಧನಾರ್ಜನೆ ಮಾಡಲು ಹುಟ್ಟಿ ಬಂದಿಲ್ಲ. ನಾನು ೧೯೧೩ರಲ್ಲಿ ವಾರಣಾಸಿಗೆ ಬಂದಾಗ, ವಿದ್ಯಾವಂತನಾಗಿ ಬಹಳ ಧನ ಸಂಪಾದಿಸುವೆನೆಂದು ಯೋಚಿಸಿಯೇ ಇರಲಿಲ್ಲ, ನಂತರ ಕಾಲೇಜು ಮೆಟ್ಟಲೇರಿದಾಗಲೂ ಆ ತೆರನಾದ ಭಾನೆಗಳಿರಲಿಲ್ಲ. ಮುಂದೆ ೧೯೧೮ರಲ್ಲಿ ನನ್ನ ಪರೀಕ್ಷೆ ಸಮೀಪಿಸುತ್ತಿದ್ದಾಗ ಆ ಯೋಚನೆ ಯಾಕೋ ಬಂತು, ಅದರ ಪ್ರಭಾವದಿಂದಲೋ, ನನಗೆ ತಿಳುವಳಿಕೆಗೋ ಎಂಬಂತೆ ನಾನು ಆ ಬಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ನಾನು ಆ ಬಾರಿಯೂ ಚೆನ್ನಾಗಿ ಓದಿ ತಯಾರಾಗಿದ್ದರೂ ಯಾಕಾಗಿ ಅಸಫಲನಾದೆನೆಂದು ತಿಳಿಯಲಿಲ್ಲ. ಆದರೆ ಆ ಬಳಿಕ ೧೯೧೯ರಲ್ಲಿ ಪುನಃ ಆ B.Sc.ಪರೀಕ್ಷೆ ಯಲ್ಲಿ ಯಶಸ್ಸನ್ನು ಕಂಡಾಗ, ನನ್ನ ಧನಾರ್ಜನೆಯ ಆಸೆಗೋಸ್ಕರ ಆ ಭಗವಂತನೇ ಪ್ರಾಯಶಃ ನನ್ನನ್ನು ಶಿಕ್ಷಿಸಿರಬಹುದೆಂಬ ಭಾವನೆ ಮೂಡಿತು. ಸಕಾಲದಲ್ಲಿ ನನ್ನ ದುರಾಸೆಯನ್ನು ಅವನು ತಡೆದ !
ನನ್ನ ಆ ಪ್ರಾರಂಭದ ದಿನಗಳಲ್ಲಿ ವಿದ್ಯಾರ್ಜನೆ ವ್ಯಕ್ತಿತ್ವದ ಬೆಳವಣಿಗೆಗೆ, ಜ್ಞಾನವೃದ್ಧಿಗೆ ಎಂದೇ ತಿಳಿದಿದ್ದೆ, ಅದೊಂದು ಜೀವನೋಪಾಯಕ್ಕಿರುವ ಸಾಧನವೆಂದು ತಿಳಿದಿರಲಿಲ್ಲ. ಆಗ ೧೯೧೪ರಲ್ಲಿ ನೀವು ಕಾಲೇಜು ವಿದ್ಯಾಭ್ಯಾಸ ಉತ್ತಮ ಸಂಬಳದ ಉದ್ಯೋಗವನ್ನು ಒದಗಿಸುವುದಿಲ್ಲ, ಹಾಗಾಗಿ ಬೇಡವೆಂದಿರಿ(ನಿಮಗೆ ನೆನಪಿನಲ್ಲಿದೆಯೆಂದು ಭಾವಿಸುತ್ತೇನೆ) . ಆದರೆ ನಾನು ನನ್ನಿಚ್ಛೆಯಂತೇ ಮುಂದುವರಿದೆ, ಸ್ಥಿರಚಿತ್ತನಾಗಿದ್ದೆ, ಶ್ರಮ ವಹಿಸಿ ಅಭ್ಯಸಿಸಿದೆ. ಆದರೆ ಕಳೆದ ವರ್ಷ ನಾನು ರಜಾಕ್ಕೆ ಊರಿಗೆ ಬಂದಾಗ, ಬಂಧುವರ್ಗದವರು ನಾನು ನೂರಾರು ರೂ.ಗಳನ್ನು ಸಂಪಾದಿಸುವಂತೆ ಅಪೇಕ್ಷೆ ಪಟ್ಟರು. ನಾನು ಗೊಂದಲಕ್ಕೊಳಗಾದೆ ಮತ್ತು ನನ್ನನ್ನೇ ಸಂಶಯಿಸಿದೆ. ನನಗೆ ಆ ಭಗವಂತನ ಕರುಣೆಯಿಂದ ವಿಶಾಲ ಹೃದಯವೂ, ಸರಳ ಅಭ್ಯಾಸಗಳೂ ಬಂದಿವೆ. ನನ್ನೊಳಗಿಂದ ಯಾವತ್ತೂ ನಾನು, ಈ ಪ್ರಪಂಚದಲ್ಲಿ ಧನ ಸಂಚಯನಕ್ಕೆ ಬಂದವನಲ್ಲವೆಂದು ತಿಳಿದೆ. ಊರಿಂದ ಹಿಂತಿರುಗಿದ ಮೇಲೆ ನಾನು ವಿದ್ಯಾಭ್ಯಾಸ ಮುಂದುವರಿಸಲು M.Sc.ಗೆ ಭರ್ತಿಯಾದೆ.ಆ ವರ್ಷಾಪೂರ್ತಿ ಧ್ಯಾನ, ನನ್ನ ಭವಿಷ್ಯದ ಬಗ್ಗೆ ಆಳವಾದ ಯೋಚನೆಯಲ್ಲಿ ಮುಳುಗಿದೆ. ನನಗೆ ಭವಿಷ್ಯದ ದಾರಿಯನ್ನು ತೋರುವ ಗುರುವನ್ನು ಕಾತರದಿಂದ ಕಾಯುತ್ತಿದ್ದೆ. ಹಿಮಾಲಯದ ಮಡಿಲಲ್ಲಿ ಕೆಲವು ದಿನ ಶಾಂತವಾಗಿ, ಧ್ಯಾನದಲ್ಲಿ ಕಾಲ ಕಳೆಯಲು ಯೋಚಿಸುತ್ತಿದ್ದಾಗ್ಯೂ ನಾನು ರಜಾಕ್ಕೆ ಮನೆಗೆ ಬಂದೆ, ಆಗ ನಡೆದ ಘಟನೆ ಏನೆಂದು ನಿಮಗೆ ಗೊತ್ತೇ ಇದೆ.ಅದರಿಂದ ನನ್ನ ಅಂದಿನ ಬದುಕೆಲ್ಲಾ ಕಹಿಯಾಯಿತು( ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ನನ್ನ ಬಗ್ಗೆ ಏನು ಯೋಚಿಸುತ್ತೀರಿ ಹಾಗೂ ನಾನೆಷ್ಟು ಯೋಗ್ಯನೆಂದು ನನಗೆ ತಿಳಿದಿದೆ.) ನಮ್ಮಿಬ್ಬರ ಮಧ್ಯದ ಘರ್ಷಣೆಗಳಿಗೆ ಕಾರಣ ಕೇವಲ ನಿಮ್ಮ “ಬದುಕಿನ ಬಗೆಗಿನ ತಪ್ಪು ಕಲ್ಪನೆ, ತಪ್ಪಾದ ದೃಷ್ಟಿಕೋನ”. ನೀವು ಯಾವತ್ತೂ ಜನರನ್ನು ಮೆಚ್ಚಿಸಲು ಬಯಸಿದಿರಿ. ಎಂದಿಗೂ ನಿಮ್ಮ ಮನಸ್ಸಾಕ್ಷಿಯಂತೆ ನಡೆಯಲಿಲ್ಲ. ನೀವು ಧೃಡ ಚಿತ್ತರಾಗಿದ್ದಲ್ಲಿ ನಮ್ಮಿಬ್ಬರ ಮಧ್ಯದಲ್ಲಿ ಎಷ್ಟೋ ಮನಸ್ತಾಪಗಳು ಜರಗುತ್ತಲೇ ಇರಲಿಲ್ಲ. ನಾನೆಂದಿಗೂ ನನ್ನ ಮನಸ್ಸಾಕ್ಷಿಗೆ ವಿರುದ್ಧ ಹೋಗಲಾರೆ, ಈ ಲೋಕವಿಡೀ ನನ್ನನ್ನು ವಿರೋಧಿಸಿದರೂ, ನಾನು ನನ್ನ ಅಂತರಂಗವನ್ನು ಮಾರುವುದಿಲ್ಲ.ನನಗೆ ಕೇವಲ ಪ್ರಾಪಂಚಿಕನಾಗಿ ಬದುಕಲು ಸಾಧ್ಯವಿಲ್ಲ. ಮಂದಿ ನನ್ನನ್ನು ಬುದ್ಧಿಹೀನ, ಮಂಕುಬುದ್ಧಿ ಎಂದೆಲ್ಲ ಕರೆದರೂ ನಾನು ಅವರ ಮನವೊಲಿಸಲು ನನ್ನನ್ನು ಬದಲಿಸಲಾರೆ. ನನ್ನ ಮದುವೆಯ ಸಂದರ್ಭದಲ್ಲಿ ನೀವು ನಿರಂಕುಶವಾಗಿ ವರ್ತಿಸಿದಿರಿ, ನಾನು ಕೇವಲ ಮೂಕನಾಗಿ, ಅಸಹಾಯಕನಾಗಿ ಹೋದೆ. ನೀವು ನಿಮ್ಮ ಮತ್ತು ನನ್ನ ಪ್ರತ್ಯೇಕ ಅಸ್ತಿತ್ತ್ವವನ್ನೇ ಮರೆತಿರಿ, ನನಗಾವ ವ್ಯಕ್ತಿ ಸ್ವಾತಂತ್ರ್ಯವನ್ನು ಕೊಡಲಿಲ್ಲ. ತತ್ಪರಿಣಾಮ ನನ್ನ ಮನಸ್ಸಿಡೀ ಕಹಿಯಾಗಿ, ನಾನು ಮನೆಯಿಂದ ತೀರಾ ತಿರಸ್ಕಾರ ಭಾವನೆಗಳೊಂದಿಗೆ ಹೊರಡಬೇಕಾಗಿ ಬಂತು. ವಾಸ್ತವದಲ್ಲಿ ನನಗೆ ಇದೊಂದೇ ದಾರಿ ಉಳಿದಿದ್ದುದು. ಈಗ ನೀವು ನನ್ನನ್ನು ನನ್ನ ವರ್ತನೆಗಳಿಂದ ಅಪಾರ್ಥ ಮಾಡಿಕೊಳ್ಳದಂತೆ, ತಪ್ಪಾಗಿ ತಿಳಿಯದಂತೆ ಈ ಪತ್ರ ಬರೆಯಬೇಕಾಗಿ ಬಂತು.
ಇನ್ನು ನನ್ನ ಈಗಿನ ವಿದ್ಯಾಭ್ಯಾಸವನ್ನು ಹೇಳುವುದಾದರೆ, ನಾನು ಪ್ರಾರಂಭದಿಂದಲೇ ಚೆನ್ನಾಗಿ ಅಭ್ಯಾಸ ಮಾಡಿದೆ. ನನ್ನೊಳಗಿನ ಗೊಂದಲದಿಂದಾಗಿ ರಾಸಾಯನ ಶಾಸ್ತ್ರವನ್ನು ಓದಿ ಮುಂದೇನು ಮಾಡಬೇಕೆಂಬುವುದನ್ನು ಯೋಚಿಸದೇ ಮುಂದುವರಿದೆ.ನನಗಿರುವುದು ಪ್ರಯೋಗಶಾಲೆಯೊಳಗೆ ಸಂಶೋಧನೆ ಮಾಡುವ ಕೆಲಸ, ನಾನು ಜೀವನದ ಇತರ ಕ್ಷೇತ್ರದಲ್ಲಿ ಇದಕ್ಕಿಂತ ಉತ್ತಮವಾಗಿ ದುಡಿಯಬಲ್ಲೆನೆಂದು ನನ್ನ ಭಾವನೆ. ಈ ಎಲ್ಲ ಮಾನಸಿಕ ತುಮುಲಗಳೊಂದಿಗೇ ನಾನು ನನ್ನ ಪ್ರಯೋಗಗಳನ್ನು ಮತ್ತು ಪುಸ್ತಕಾಭ್ಯಾಸವನ್ನು ಮಾಡಿ ಮುಗಿಸಿದೆ. ನನಗನಿಸುವಂತೆ ನಾನು ಅಧಿಕಾರವನ್ನು ಬಯಸುವುದಿಲ್ಲ, ಸೇವೆಯನ್ನು ಮಾಡಲಿಚ್ಛಿಸುತ್ತೇನೆ. ಆದರೆ ಯಾರ ಸೇವೆ ? ಬ್ರಿಟಿಷ್ ಸರಕಾರದ್ದೇ ? ಇಲ್ಲ, ನನ್ನದು ಪೂರ್ಣ ಸ್ವತಂತ್ರ ವ್ಯಕಿತ್ವ,ಹಾಗಾಗಿ ನಾನು ದೇಶದ ಸೇವೆಯನ್ನು ಮಾಡಬೇಕು, ಇದುವೇ ನನ್ನ ಬದುಕಿನ ಉದ್ದೇಶ.
ಈ ವರ್ಷದಲ್ಲಿ ನಾನು ರಾಜಕೀಯ ರಂಗ ಮತ್ತು ವಿದ್ಯಾಭ್ಯಾಸಗಳೆರಡು ನನ್ನ ಜೀವನದ ಕಾರ್ಯಕ್ಷೇತ್ರವೆಂದು ಅರ್ಥೈಸಿಕೊಂಡೆ. ಹಾಗಾಗಿ ನಾನು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡೆ. ಆರಂಭದಲ್ಲಿ ನಾನು ನನ್ನ ವಿದ್ಯಾಭ್ಯಾಸವನ್ನು ಪೂರೈಸಿ, ಬಳಿಕ ದೇಶಸೇವೆಗೆ ಇಳಿಯುವುದೆಂದು ನಿರ್ಧರಿಸಿದೆ. ಆದರೆ ಅಸಹಕಾರ ಚಳವಳಿಯ ಉದ್ದೇಶವೇ ಆಂಗ್ಲರ ಸಂಘಸಂಸ್ಥೆ, ವಿದ್ಯಾಸಂಸ್ಥೆಗಳನ್ನು ಬಹಿಷ್ಕರಿಸುವುದು, ಮತ್ತು ಆಂಗ್ಲರ ಸಹಾಯವನ್ನು ಪಡೆದಿರುವ ಸಂಸ್ಥೆಗಳಿಂದ ಪದವಿ ಪಡೆಯದೇ ಹೊರಬರುವುದು. ನಾನು ಹಲವು ದೇಶನಾಯಕರ, ಮತ್ತು ಗಾಂಧೀಜಿಯವರ ಭಾಷಣಗಳನ್ನು ಕೇಳಿದೆ. ಗಾಂಧಿಯವರು ಧೀಮಂತ ವ್ಯಕ್ತಿಯು ಜೀವನದಲ್ಲಿ ಒಳಿತು ಮತ್ತು ಕೆಡುಕನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಧೈರ್ಯ ತೋರಿ ಒಳಿತನ್ನು ಆಯುತ್ತಾನೆ ಮತ್ತು ಅದರೊಂದಿಗೆ ಬರುವ ಕೆಟ್ಟ ಪರಿಣಾಮಗಳನ್ನು ಸ್ವೀಕರಿಸುತ್ತಾನೆ ಎಂದು ನಮಗೆ ಧೈರ್ಯ ತುಂಬಿದ್ದಾರೆ. ಅವರು ನಮ್ಮ ಅಂತರಂಗದ ಕರೆಗೆ ಕಿವಿಗೊಡುವಂತೆ ಹೇಳಿದ್ದಾರೆ. ನಾನೇನಾದರೂ ಇನ್ನೊಬ್ಬರಿಗೆ ಹಾನಿಯುಂಟು ಮಾಡುತ್ತಿರುವೆನಾ ಎಂದು ನನ್ನ ಬಗ್ಗೆ ಯೋಚಿಸಿಕೊಂಡೆ. ಇನ್ನು ನನ್ನ ಕುಟುಂಬವನ್ನು ಪೋಷಿಸುವ ನನ್ನ ಜವಾಬ್ದಾರಿಯನ್ನು ಯೋಚಿಸಿದರೆ, ನಾನು ನನಗಿರುವ ವಿದ್ಯಾಭ್ಯಾಸ, ಅರ್ಹತೆಗಳಿಂದ ಸಂಭಾಳಿಸಬಲ್ಲೆ ಎಂದು ಹೇಳಬಹುದು. ನಾನು ಇದನ್ನು ಮಾಡಲು ಸರಳ ಜೀವನ ನಡೆಸುವೆ, ಮಂದಿ ನನ್ನನ್ನು ಮತಿಗೇಡಿ ಎಂದು ಅಪಹಾಸ್ಯ ಮಾಡಿದರೆ ನಾನದನ್ನು ನಿರ್ಲಕ್ಷಿಸುವೆ. ನನ್ನ ವಾಸ ಸ್ಥಾನ ಗುಡಿಸಲಿರಲಿ ಇಲ್ಲಾ ಅರಮನೆಯಿರಲಿ, ಉಣ್ಣುವ ಊಟ ತಿಳಿಸಾರನ್ನವಿರಲಿ ಇಲ್ಲಾ ಮೃಷ್ಟಾನ್ನ ಭೋಜನವಿರಲಿ, ಉಡುವ ಬಟ್ಟೆ ಹರುಕಾಗಿರಲಿ ಇಲ್ಲಾ ಉತ್ಕೃಷ್ಟ ರೇಶಿಮೆಯಿರಲಿ ನನಗದು ನಗಣ್ಯ, ಕೇವಲ ಸೇವಾಧರ್ಮವೇ ನನ್ನ ಜೀವನದ ಧ್ಯೇಯ. ಪರರ ಹೊಗಳಿಕೆ ಯಾ ತೆಗಳಿಕೆ ಮುಖ್ಯವಲ್ಲ, ಆ ಪರಮಾತ್ಮ ನನ್ನ ಬಗ್ಗೆ ಸಂತುಷ್ಟನಿದ್ದಾನೆ, ನಾನು ಅವನನ್ನೇ ಅನುಸರಿಸುತ್ತೇನೆ. ಆಡಂಬರ ಮತ್ತು ತೋರಿಕೆಯನ್ನು ನನ್ನ ಜೀವನದಿಂದ ಕಿತ್ತೊಗೆಯಲು ನಿರ್ಧರಿಸಿದ್ದೇನೆ. ಆದರೂ ನನಗೆ,ನಾನೆಲ್ಲಿ ನಿಮಗೆ ಒಳ್ಳೆ ವೈಭವ, ಸೌಕರ್ಯಗಳನ್ನು ಕೊಡದೇ ಕರ್ತವ್ಯಚ್ಯುತನಾಗುತ್ತಿದ್ದೇನೋ ಎಂಬ ಶಂಕೆ ಬಂದಿತು. ನಿಮ್ಮ ಈ ವಯಸ್ಸಿನಲ್ಲಿ ನಿಮ್ಮಿಂದ ಸಂಸಾರದ ಜವಾಬ್ದಾರಿಯ ಭಾರವನ್ನು ತೆಗೆದುಕೊಳ್ಳುವುದು ಮತ್ತು ನಿಮ್ಮ ಆಸಕ್ತಿಯ ಧಾರ್ಮಿಕ ಜೀವನ ನಡೆಸಲು ಅನುವು ಮಾಡುವುದು ನನ್ನ ಕರ್ತವ್ಯ. ಹಾಗೆಯೇ ನನ್ನ ತಮ್ಮಂದಿರ ವಿದ್ಯಾಭ್ಯಾಸವನ್ನು ಹೇಳುವುದಾದರೆ, ನನ್ನ ಕೆಲಸವೇ ವಿದ್ಯೆ, ಓದು ಬರಹವಿರುವ ಕಾರಣ ಅದು ಹೆಚ್ಚಿನ ಕಷ್ಟವಾಗದು ಎಂದುಕೊಂಡಿದ್ದೇನೆ.ಇನ್ನು ಮಿಕ್ಕುಳಿದ ಮಂದಿಯ ಅಭಿಪ್ರಾಯಗಳನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾನಿದನ್ನು ನಿಮಗೆ ತಿಳಿಸಲೆಂದು,ನಿಮ್ಮ ಗಮನಕ್ಕೆ ತರಲೆಂದು ಹೇಳುತ್ತಿದ್ದೇನೆ. ನೀವು ನನ್ನ ನಿಲುವನ್ನು,ನನ್ನ ಭವಿಷ್ಯದ ಹಾದಿಯನ್ನು ಒಪ್ಪುತ್ತೀರೆಂಬ ಭರವಸೆಯಿದೆ. ಇಷ್ಟೆಲ್ಲ ಯೋಚನೆಗಳೊಂದಿಗೆ ನಾನು ನಿಮ್ಮ ಇಷ್ಟವನ್ನು ಮೀರುತ್ತಿದ್ದೇನೊ, ನಮ್ಮ ವಂಶಕ್ಕೆ ಅಪಕೀರ್ತಿ, ಕಳಂಕ ತರುತ್ತೇನೋ ಎಂಬ ಕಳವಳವಿತ್ತು. ನಮ್ಮ ವಂಶಸ್ಥರು ಬಹಳಷ್ಟು ಮಂದಿಗೆ ಅನ್ನದಾನ ಮಾಡಿದವರು, ಅವರ ಉದಾತ್ತ ಗುಣಗಳಿಗೆ ಹೆಸರಾದವರು.ನೀವೂ ಜನರಿಗೆ ನಿಮ್ಮ ಶಕ್ತ್ಯಾನುಸಾರ ಸಹಾಯ ಮಾಡುತ್ತಿದ್ದೀರ.ನಾನು ಏನು ಮಾಡಬಹುದು,ಸರಕಾರದಡಿಯಲ್ಲಿ ಕೆಲಸ ಮಾಡಿ, ಅಥವಾ ಹೆಚ್ಚಿನ ಧನ ಸಂಪಾದನೆಗಾಗಿ ಬೇರೆ ಕೆಲಸ ಮಾಡಿ, ನಾನು ಪರರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಸಂಪಾದನೆ ಮಾಡಿದ ಮಾತ್ರಕ್ಕೆ ಉಪಕಾರವನ್ನು ಮಾಡಲು ಆಗುವುದಿಲ್ಲ. ಈಗಿನ ಕಾಲದಲ್ಲಿ ಬಡಬ್ರಾಹ್ಮಣರಿಗೆ ಅನ್ನದಾನ ಮಾಡಿದುದನ್ನು ಪುಣ್ಯಕಾರ್ಯವೆಂದು ಹೇಳಲು ಆಗುವುದಿಲ್ಲ. ಮಾತೃಭೂಮಿಗಾಗಿ ಕೆಲಸ ಮಾಡಿದವನನ್ನು ಹೆಚ್ಚಿನ ಕೆಲಸ ಮಾಡಿದವನೆಂದು ತಿಳಿಯುತ್ತಾರೆ.ಹಾಗಾಗಿ ನಾನು, ನನ್ನ ಕುಟುಂಬದವರ ಮನೋಭಾವಕ್ಕೆ ವಿರೋಧ ಹೋದಂತೆ ಆಗುವುದಿಲ್ಲ, ಬದಲಿಗೆ ಕುಟುಂಬದ ಹೆಸರು, ಕೀರ್ತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದೇನೆಂದು ಭಾವಿಸುತ್ತಿದ್ದೇನೆ.ಇವೆಲ್ಲ ನನ್ನ ಯೋಚನೆಗಳು.ನಾನು ನನ್ನ ಪದವಿಯನ್ನು ಬಿಡಲು ಬಹಳ ತ್ಯಾಗ ಮಾಡಬೇಕಾಯಿತು. ಆದರೆ ಇದರಿಂದ ನಾನು ಶುದ್ಧನಾಗಿದ್ದೇನೆ, ಮೇಲಕ್ಕೇರಿದ್ದೇನೆ.
ನನಗೆ ಬಂದ ಇನ್ನೊಂದು ಯೋಚನೆಯೆಂದರೆ, ಕಳೆದ ಇಷ್ಟೊಂದು ವರ್ಷಗಳಿಂದ ನೀವು ನನಗೆ ಹಣ ಕಳುಹಿಸಿದುದೇನೋ ಸಹಾಯವಾಗಿದೆ, ಆದರೆ ನಿಮ್ಮ ಆ ಸಹಾಯ ನಾನಾಗಿಯೇ ಮಾಡಿದ ಕಾರ್ಯಕ್ಕಿಂತ ಹೆಚ್ಚಿನದೇನೂ ಅಲ್ಲ. ನೀವು ನನ್ನ ಬಹಳಷ್ಟು ಕಷ್ಟ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡಿದ್ದಕ್ಕೆ ನಾನು ಋಣಿಯಾಗಿ ಇದ್ದೇನೆ. ಆದರೆ ಅದರೊಂದಿಗೇ ನಾನು ಇಲ್ಲಿನ ಜನರ, ಸ್ನೇಹಿತರ ಹಾಗೂ ಈ ಕಾಲೇಜಿನವರ ಸಹಾಯದಿಂದಲೇ ನನ್ನ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಯಿತು. ನಾನು ಅವರೆಲ್ಲರಿಗೂ ನನ್ನ ಕರ್ತವ್ಯವನ್ನು ಪೂರೈಸಬೇಕು.ಹಾಗಾಗಿ ನಾನು ನಿಮ್ಮಿಬ್ಬರಿಗೂ ಸಂದುವಂತಹ ಸತ್ಕಾರ್ಯಗಳಲ್ಲಿ ಮುಂದುವರಿಯಬೇಕು. ಇವೆಲ್ಲ ವಿಷಯಗಳು ನನ್ನನ್ನು ಕಾಲೇಜು ವಿದ್ಯಾಭ್ಯಾಸವನ್ನು ನಿಲ್ಲಿಸಿ ದೇಶಕ್ಕೆ ಉಪಯುಕ್ತವಾಗುವಂತಹ ಕೆಲಸ ಮಾಡುವಂತೆ ಪ್ರೇರೇಪಿಸಿತು.ನನ್ನ ಬಹಳಷ್ಟು ಹಿತೈಷಿಗಳು, ಮಿತ್ರರು ನನ್ನನ್ನು ಪದವಿ ಪಡೆದ ಮೇಲೆ, ಕಾಲೇಜು ಬಿಡುವಂತೆ ವಿನಂತಿಸಿದರು. ಆದರೆ ನಾನು ಪದವಿಗಾಗಿ ಕಾಲೇಜಿನಲ್ಲಿ ಮುಂದುವರಿದರೆ, ನಾನು ನನಗೇ ಅಸತ್ಯವನ್ನು ಆಡಿಕೊಂಡಂತಾಗುತ್ತದೆ. ನಾನು ನಿಜವಾದ ಅಸಹಕಾರಿ ಚಳವಳಿಗಾರನಾಗುವುದಿಲ್ಲ. ಅದರ ಮೂಲಭೂತ ಸಿದ್ಧಾಂತಕ್ಕೆ ವಿರೋಧಿಯಾದಂತಾಗುತ್ತೇನೆ.ನನಗೆ ಪದವಿ ಪ್ರದಾನ ಮಾಡುವ ವಿದ್ಯಾಲಯ, ನನ್ನದೇ ನೆಲದ ಜನರ ರಕ್ತದಿಂದ ಕಲಂಕಿತವಾದ ಸರಕಾರದಿಂದ ಧನಸಹಾಯ ಪಡೆಯುತ್ತದೆ. ಹಾಗಾಗಿ ನಾನು ಪದವಿಯನ್ನು ತಿರಸ್ಕರಿಸಿ ಹೊರಬರಲು ನಿಶ್ಚಯಿಸಿದೆ. ಇಷ್ಟಲ್ಲದೇ, ನಾನೆಲ್ಲಿ ,ಹೇಗೆ ಕೆಲಸ ಮಾಡುವುದು ?ಎಂಬ ಸಮಸ್ಯೆ ಎದುರಾಯಿತು.ಮೈಸೂರು ರಾಜ್ಯದೊಳಗೆ ನಾನು NCO ದಲ್ಲಿ ಕೆಲಸ ಮಾಡುವಂತಿಲ್ಲ. ಹಾಗಾಗಿ ನಾನು ಅತೀ ಹೇಚ್ಚಿಗೆ ಉಪಯುಕ್ತವಾಗುವ ಕೆಲಸ ಮಾಡಲಾಗುವ ಪ್ರದೇಶವನ್ನು ಆರಿಸಿಕೊಳ್ಳಬೇಕು. ನಾನು ಮುಂಬಯಿ ಕರ್ಣಾಟಕವನ್ನು ಆಯ್ಕೆ ಮಾಡಿದೆ. ಅಲ್ಲಿ ಕನ್ನಡ ಮಾತಿರುವ ಕಾರಣ ನಾನು ಅಲ್ಲೇ ಕೆಲಸ ಮಾಡಬಹುದು. ಈ ಎಲ್ಲಾ ಯೋಚನೆಗಳೊಂದಿಗೆ ನಾನು ಗಾಂಧಿಯವರನ್ನು ಕಂಡು ನನ್ನೆಲ್ಲಾ ವಿಚಾರಗಳನ್ನು ತಿಳಿಸಿದೆ, ಅವರು ನನ್ನನ್ನು ಬೆಳಗಾಮಿಗೆ ಕಳುಹಿದರು. ಅಲ್ಲಿನ ರಾಜಕೀಯ ಧುರೀಣರಿಗೆ ನನ್ನನ್ನು ಪರಿಚಯಿಸಿದರು.ನಾನು ಅವರಿಗೆ ಪತ್ರ ಬರೆದು, ಅವರಿಂದ ಉತ್ತರವೂ ಬಂದಿದೆ, ನನಗೆ ಅವರು ಸ್ವಾಗತವನ್ನು ಕೋರಿದ್ದಾರೆ.
ಈ ಮಧ್ಯೆ, ನಾನು ನನ್ನ ಪ್ರಾಧ್ಯಾಪಕರೊಂದಿಗೆ ಮಾತನಾಡಿ, ವಾದಿಸಿದ್ದೇನೆ.ಅವರು ನನ್ನನ್ನು ಮೆಚ್ಚಿದ್ದಾರೆ.ಅವರೂ ನಾನು M.Sc.ಪದವಿ ಪಡೆಯುವ ವರೆಗೆ ಕಾಯುವಂತೆ ಹೇಳಿದ್ದಾರೆ. ಆದರೆ ನಾನು ಅವರ ಮಾತನ್ನು ಒಪ್ಪಲಾಗುವುದಿಲ್ಲ. ಅದು ಅಸಹಕಾರ ಚಳವಳಿಯ ಸಿದ್ಧಾಂತಕ್ಕೆ ವಿರೋಧವಾಗುತ್ತದೆ. ಆ ನಂತರ ನಾನು ಪಂಡಿತ ಮಾಲವೀಯರನ್ನು ಕಂಡೆ. ಅವರು ನಮ್ಮ ಈ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿದವರು, ಈಗಿನ ಉಪಕುಲಪತಿಯಾಗಿದ್ದಾರೆ.ಅವರಲ್ಲಿ ಎರಡು ತಾಸುಗಳ ಕಾಲ ಮಾತನಾಡಬೇಕಾಗಿ ಬಂತು.ಅವರೂ ನನಗೆ ವಿದ್ಯಾಭ್ಯಾಸ ಪೂರೈಸುವಂತೆ ಸಲಹೆಯಿತ್ತರು. ನಾನು ಗಾಂಧೀಜಿಗೆ ಇತ್ತ ವಚನದ ಬಗ್ಗೆ ತಿಳಿಸಿದ ನಂತರ ಅವರು ನನಗೆ ಮುಂದಿನ ಕೆಲಸಗಳಲ್ಲಿ ಯಶಸ್ವಿಯಾಗುವಂತೆ ಆಶೀರ್ವದಿಸಿದರು.ಇದಿಷ್ಟೇ ಅಲ್ಲ, ಅವರು ನಾನು ಅವರೊಂದಿಗೆ ಪತ್ರಮುಖೇನ ಸಂಪರ್ಕವಿಟ್ಟುಕೊಳ್ಳುವಂತೆ ಹೇಳಿದರು. ತಂದೆಯವರೇ, ಮಾಲವೀಯರು ಉತ್ತಮ ನಾಯಕ. ಅವರಿಂದ ಉತ್ತೇಜಿಸಲ್ಪಡುವುದು ಮತ್ತು ಅವರೊಡನೆ ಸಂಪರ್ಕ ಹೊಂದಿರುವುದೇ ನನಗೆ ಸ್ಪೂರ್ತಿದಾಯಕವಲ್ಲವೇ,ಹೆಗ್ಗಳಿಕೆಯ ಮಾತಲ್ಲವೇ ? ಗಾಂಧೀಜಿಯವರ ಮತ್ತು ಮಾಲವೀಯರ ಮಾರ್ಗದರ್ಶನದಿಂದ ನಾನು ಜೀವನದಲ್ಲಿ ಎತ್ತರಕ್ಕೆ ಬೆಳೆಯುವುದಿಲ್ಲವೇ ? ಮಾಲವೀಯರು ನನಗೆ ಮುಂದಿನ ಅಗತ್ಯಗಳಿಗೆಂದು ರೂ.೫೦ ರನ್ನು ಕೊಟ್ಟುದು ನಿನಗೆ ಸಂತೋಷ ಕೊಡಬಹುದು.ಆ ಭಗವಂತನು ನನ್ನನ್ನು, ನಾನು ಈ ಮುಂದು ಕೈಗೊಳ್ಳಲಿರುವ ಕೆಲಸಕ್ಕಾಗೇ ಸೃಷ್ಟಿಸಿದ್ದಾನೆ.
ಈ ಪತ್ರ ತುಂಬಾ ದೀರ್ಘವಾಯಿತು. ಇನ್ನೂ ನಾನು ಅಂದುಕೊಡಿದ್ದೆಲ್ಲಾ ವ್ಯಕ್ತಪಡಿಸಿಲ್ಲ, ಏನೇ ಆಗಲಿ,ನಾನು ನನ್ನ ಉತ್ತಮ ಗುಣಗಳನ್ನು ಹೊರತರುತ್ತೇನೆ, ಎಂದು ಆಶ್ವಾಸನೆ ಕೊಡಬಲ್ಲೆ. ನಾನು ಉದಾತ್ತ ಉದ್ದೇಶಗಳನ್ನು ಹೊಂದಿದವನು. ನನಗೆ ಶಕ್ತಿ ಕೊಡೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.ನೀವೂ ನನ್ನ ಕಾರ್ಯಸಿದ್ಧಿಗೆ ಅಶೀರ್ವಾದಿಸಿ. ನೀವು ಕೇವಲ ನಾನು ಸರಿಯಾದ ಕೆಲಸ ಮಾಡುತ್ತಿದ್ದೇನೆ ಎಂಬುವುದನ್ನು ಯೋಚಿಸಿ, ಮಂದಿ ಏನನ್ನುತ್ತಾರೆಂಬುವುದನ್ನು ಗಣಿಸಬೇಡಿ. ಉದಾತ್ತ ಗುಣವಿರುವ ಯಾವುದೇ ವ್ಯಕ್ತಿ ನನ್ನನ್ನು ಮೆಚ್ಚುತ್ತಾನೆ ಎಂಬ ಭರವಸೆ ನನಗಿದೆ.ನಾನಿಲ್ಲಿಗೆ ನನ್ನ ಈ ಪತ್ರವನ್ನು ಕೊನೆಗೊಳಿಸುತ್ತೇನೆ. ನಾನು ಬನಾರಸಿಯಿಂದ ನಾಗಪುರಕ್ಕೆ, ಆ ನಂತರ ಬೆಳಗಾಮಿಗೆ ಹೋಗಲಿದ್ದೇನೆ. ಅಲ್ಲಿ ಮುಂದೆ ಏನು ಮಾಡುವೆನೆಂದು ಬರೆವೆನು. ಕೊನೆಯಲ್ಲೊಮ್ಮೆ ವಿನಂತಿ, ದಯವಿಟ್ಟು ದೇವರಾಣೆಯಾಗಿ, ಅನಾವಶ್ಯಕವಾಗಿ ಕೆಲಸದಿಂದ ನನ್ನನ್ನು ಕರೆಯಬೇಡಿ. ನಿಮ್ಮಿಂದಾದ ಎಲ್ಲ ಉತ್ತೇಜನವನ್ನು ಕೊಡಿ. ನಾನು ಚೆನ್ನಾಗಿದ್ದೇನೆ. ಇದರೊಂದಿಗೇ ನನ್ನ ಅಧ್ಯಾಪಕರೊಬ್ಬರು ನನ್ನನ್ನು ಮತ್ತು ನನ್ನ ಕೆಲಸವನ್ನು ಪ್ರಶಂಸಿದ ಪತ್ರವನ್ನು ನಿಮ್ಮ ತಿಳುವಳಿಕೆಗೋಸ್ಕರ ಲಗತ್ತಿಸುತ್ತಿದ್ದೇನೆ.
ಇತೀ,
ರಾಮಯ್ಯ.
ಈ ಮೇಲಿನ ಪತ್ರದ ಮೂಲಪ್ರತಿ ಇಂಗ್ಲಿಷಿನಲ್ಲಿ ಪಾಲಹಳ್ಳಿ ವಿಶ್ವನಾಥರವರು(ರಾಮಯ್ಯನವರ ಕೊನೆ ಮಗ) ಪ್ರಕಟಿಸಿದ ಅಂತರ್ಜಾಲ ತಾಣದಲ್ಲಿ ದೊರಕಿತು. ಆ ಪತ್ರದಲ್ಲಿ ನನ್ನನ್ನು ಆಕರ್ಷಿಸಿದುದು ರಾಮಯ್ಯನವರ ಭಯರಹಿತ ದಿಟ್ಟ ನಿಲುವು, ಮತ್ತು ತಮ್ಮ ಧ್ಯೇಯ ಸಾಧನೆಗೆ ಅವರಿಗಿದ್ದ ಸಮರ್ಪಣಾ ಭಾವ. ನನ್ನ ವಯೋಮಾನದವರು ಎಂದೂ ಯೋಚಿಸಿರದ ಆ ಕಾಲದ ಜೀವನದ ಸಂಕಷ್ಟಗಳು,ಮತ್ತು ಆಗಿನ ಮಕ್ಕಳ ಮತ್ತು ಹೆತ್ತವರ ನಡುವಣ ಸಂಬಂಧದ ಚಿತ್ರಣ ನನ್ನನ್ನು ಇದರ ಅನುವಾದ ಮಾಡಲು ಪ್ರೇರೇಪಿಸಿತು. ಈ ಬರನಣಿಗೆಗೆ ವಿಶ್ವನಾಥರ ಒಪ್ಪಿಗೆ,ಮತ್ತು ಸಹಕಾರಕ್ಕೆ ನಾನು ಋಣಿಯಾಗಿದ್ದೇನೆ.

Advertisements

3 thoughts on “ರಾಮಯ್ಯನವರು ತಂದೆಯವರಿಗೆ ಬರೆದ ಪತ್ರ

 1. ದಿಟ್ಟ ನಿಲುವು ಮೆಚ್ಚಬೇಕಾದದ್ದೇ ಆದರೂ ಅಪ್ರಿಯವಾದ ಸತ್ಯವನ್ನು ಪ್ರಿಯವಾದ ರೀತಿಯಲ್ಲಿ ಹೇಳಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯ. ಜನ್ಮದಾತೃಗಳು ನಮಗೆ ಏನು ಮಾಡಲಿಲ್ಲ, ಅವರ ಲೋಪದೋಷಗಳೇನಿತ್ತು ಅನ್ನುವುದನ್ನು ವಿಮರ್ಶಿಸುವುದಕ್ಕಿಂತ ತಮ್ಮ ಇತಿಮಿತಿಗಳೊಳಗೆ ಅವರು ನಮಗೆ ಮಾಡಿದ ಒಳಿತುಗಳನ್ನು ನೆನಪಿಸಿಕೊಂಡು ಕೃತಜ್ಞತೆಗಳನ್ನು ಅರ್ಪಿಸುವುದು ಕರ್ತವ್ಯ ಎಂಬುದು ನನ್ನ ನಿಲುವು.

  • ಗೋವಿಂದ ರಾವ್ ಸಾರ್,
   ನಾನು ನೀವು ಹೇಳಿದ್ದನ್ನು ಒಪ್ಪುತ್ತೇನೆ, ನಾವು ಅಪ್ರಿಯವಾದ ಸತ್ಯವನ್ನು ಪ್ರಿಯವಾಗಿ ಹೇಳಬೇಕು. ಆದರೆ ನೀವು ರಾಮಯ್ಯನವರ ಬದುಕನ್ನು ಗಮನಿಸಿದರೆ ಅವರ ನಡವಳಿಕೆ ಸಹಜ ಎಂದನ್ನಿಸುತ್ತದೆ. ಅವರ ಜೀವನವ ಕೇವಲ ನಿಸ್ವಾರ್ಥ ಸೇವೆಗಾಗಿ ಮೀಸಲಿತ್ತು. ಅಂದಿನ ದಿನಗಳ ಬದುಕಿನಲ್ಲಿ ಕೇವಲ ಶಕ್ತಿ ಸಾಮರ್ಥ್ಯವಿದ್ದವನು ಬಾಳಿ ಮುಂದಕ್ಕೆ ಬರುವುದು ಸಾಧ್ಯವಿತ್ತು. ಇವರು ತಮ್ಮ ಬದುಕನ್ನು ಮಾತ್ರ ಬಾಳಿದವರಲ್ಲ, ಇನ್ನೊಬ್ಬರಿಗಾಗಿ ಬದುಕಿದವರು. ಹಾಗಾಗಿ ರಾಮಯ್ಯನವರು ಮೊದಲ ಬಾರಿಗೆ ತಮ್ಮಜೀವನದ ಬಗ್ಗೆ ನಿರ್ಧಾರ ಕೈಗೊಂಡಾಗ ಅದು ನಯವಾದ ಮಾತುಗಳಿಂದ ಹೊರ ಬರಲು ಸಾಧ್ಯವಿಲ್ಲ.ನನಗನ್ನಿಸಿದ ಹಾಗೆ ಅವರದೊಂದು ಯೋಧನ ಜೀವನ. ಯಾವುದೇ ಕಲ್ಲು ಕೆತ್ತಿ,ಕೆತ್ತಿ ಒಳ್ಳೆ ರೂಪಕ್ಕೆ ಬರುತ್ತದಷ್ಟೆ? ಇವರಾದರೂ ಅದಕ್ಕೆ ಅಪವಾದವಲ್ಲ.ಅವರು ತಮ್ಮ ಪತ್ರಿಕೆಯನ್ನು ನಿಲ್ಲಿಸಿದಾಗ ಅವರಿಗಿದ್ದುದು ಕೇವಲ ಸಾಲದ ಹೊರೆ. ಜೀವನದುದ್ದಕ್ಕೂ ಹೋರಾಡಿದ ವ್ಯಕ್ತಿಯೊಬ್ಬ ಮೃದು, ಕೋಮಲ ಭಾವನೆಗಳಿದ್ದಾಗ್ಯೂ ಅದನ್ನು ವ್ಯಕ್ತ ಪಡಿಸಲು ಅಸಮರ್ಥನಾಗಿರುತ್ತಾನೆ. ಅವರ ಪತ್ನಿ ಜಯಲಕ್ಷಮ್ಮನವರು ಎಂದಂತೆ ಅವರು ಸಣ್ಣ ವಯಸ್ಸಿನಲ್ಲಿ ಕೋಪಿಷ್ಟರಾಗಿದ್ದರು. ಹಾಗಾಗಿ ನನಗನಿಸುವಂತೆ ೨೩-೨೪ರ ತಾರುಣ್ಯದಲ್ಲಿದ್ದ ರಾಮಯ್ಯನವರ ಆ ಪತ್ರ ಜಲಪಾತದ ನೀರು ರಭಸದಿಂದ ಕೆಳ ಧುಮುಕುವಂತೆ ಮನದಾಳವನ್ನು ವ್ಯಕ್ತ ಪಡಿಸಲು ಮಾಡಿದ ಪ್ರಯತ್ನವಷ್ಟೆ ! ಆ ತಂದೆಯಾದರೋ ತಮ್ಮ ಪುತ್ರನ ಆ ಪತ್ರವನ್ನು ತುಂಬಾ ಅಭಿಮಾನದಿಂದ ಕಾಪಾಡಿದ್ದರು. ಅದು ಶ್ರೀಯುತ ವಿಶ್ವನಾಥರಿಗೆ ರಾಮಯ್ಯನವರ ಮರಣದ ನಂತರ ದೊರಕಿತು. ಹಾಗಾಗಿ ನೀವೆ ಊಹಿಸಿಕೊಳ್ಳಿ ಆ ತಂದೆ ಮತ್ತು ಮಗನ ನಡುವಣ ಸಂಬಂಧ !
   ಶೈಲಜ

 2. Madam Shailaja ಈ ಬ್ಲಾಗ್ ಬರೆದಿದ್ದಕ್ಕೆ ಬಹಳ ಧನ್ಯವಾದಗಳು

  Following was the introduction I had given in English for this article –

  (This letter was written by my father studying in Benares to my grandfather who was in Mysore. He talks about how he met Mahatma Gandhi and his decision to stop the studies and jump into the freedom movement. The letter is interesting for several reasons :(1) How an important turning point was reached in the life of a student (There were many like him in India of those days) (2) A letter written in times (even today it is true)when the interaction between a father and a son was very little (3) How he defies a father who commands and demands respect(4) How the old gentleman ( the grandfather ) preserved this letter for fuure in a country which is innocent of record keeping etc

  K.E.Hostel, C.H. College,Benares,9-12-20

  ———————————————————————————————————————
  ಕನ್ನಡದಲ್ಲಿ ಇದ್ರ ಬಗ್ಗೆ ನಾನು ತರ೦ಗದಲ್ಲಿ ೧೯೯೬ರಲ್ಲಿ ಬರೆದಿದ್ದೆ. ಅದರ ಕಾಪಿ ಇದೆ. ಆದರೆ ಅದನ್ನು ಓದುವುದು ಕಷ್ಟ. ಪ್ರಾಯಶ: ಅದನ್ನು ನಿಮಗೆ ಕಳಿಸಿದ್ದೆ . ಎಲ್ಲರ ಜೀವನದಲ್ಲೂ ಒ೦ದು ‘ ಟರ್ನಿ೦ಗ್ ಪಾಯಿ೦ಟ್ ‘ ಬರುತ್ತದೆ.ಅದು ನಮ್ಮ ತ೦ದೆಯವರ ಜೀವನ್ದಲ್ಲಿ ಆ ಸಮಯದಲ್ಲಿ ಬ೦ದಿದ್ದಿತು. ಅಷ್ಟು ಚಿಕ್ಕ ವಯಸ್ಸಿಗೆ ಅವರು ತಮ್ಮ ಧ್ಯೇಯವನ್ನು ಹೇಗೆ ಗೊತ್ತುಮಾಡಿಕೊ೦ಡರು ಎನ್ನುವುದು ನನಗೆ ಆಶ್ಚರ್ಯವಾಗಿತ್ತು. ಅ೦ತಹ ಸಮಯ್ದಲ್ಲಿ ಬೇರೆಲ್ಲ ಮುಖ್ಯವಾಗುವುದಿಲ್ಲ. ತ೦ದೆ ಮಗನ ಮಧ್ಯೆ ಆಗಾಗ್ಗೆ ಚಕಮಕಿಗಳಿದ್ದರೂ ಇಬರೂ ಬಹಳ ಹತ್ತಿರ ಇದ್ದರು ಎ೦ದು ಕೇಳಿದ್ದೇನೆ.
  ಪಾಲಹಳ್ಳಿ ವಿಶ್ವನಾಥ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s