ಹಿಮಾಲಯದಾಹ್ವಾನ-ನಮ್ಮ ಪಯಣ ಬದರೀನಾಥದೆಡೆಗೆ

ಇದು ನಾನು ಮತ್ತು ನನ್ನ ಪತಿ ಶ್ಯಾಮ ಹಾಗೂ ನನ್ನ ತಂದೆ-ತಾಯಿಯರು ಒಟ್ಟಾಗಿ ಮಾಡಿದ ಹಿಮಾಲಯ ಯಾತ್ರೆಯ ಕಥನ. ಇದರ ಮೊದಲಿನ ಕಂತು “ಹಿಮಾಲಯದಾಹ್ವಾನ”ದಲ್ಲಿ ನಮ್ಮ ಪಯಣ ಕೇದಾರನಾಥನ ದರ್ಶನದೊಂದಿಗೆ ನಿಂತಿತು. ಇದು ನನ್ನ ತಂದೆ
“ಗೌರೀಶಂಕರ”ರ ಅನುಭವ ಕಥನ.

ಎರಡನೆಯ ಮಜಲು: ಬದರೀನಾಥ

ತಾ ೧-೧೦-೧೨ರಂದು ಮಧ್ಯಾಹ್ನ ಸುಮಾರು ಹನ್ನೆರಡೂವರೆ ಗಂಟೆಗೆ ಜಿ.ಎಂ.ವಿ.ಯವರ ರಾಮಪುರದ ಅತಿಥಿ ಗೃಹದಿಂದ ನಮ್ಮ ಬದರೀ ಪ್ರಯಾಣ ಪ್ರಾರಂಭ, ದಾರಿ – ಸೋನ್ ಪ್ರಯಾಗ್,  ಕಾಲೀ ಮಠ್, ಸಿಯಾಲ್ ಸೌರ್, ರುದ್ರ ಪ್ರಯಾಗ್. ಇಲ್ಲಿಯ ತನಕ ಕೇದಾರನಾಥಕ್ಕೆ ನಾವು ಹೋಗಿದ್ದ ರಸ್ತೆಯಲ್ಲೇ ದಕ್ಷಿಣಕ್ಕೆ ಹಿಂದೆ ಬಂದು, ರುದ್ರಪ್ರಯಾಗದಿಂದ ಪೂರ್ವ ದಿಕ್ಕಿಗೆ ದಾರಿ ಸಾಗುತ್ತದೆ. ಹೋಗುತ್ತಾ ಗೌಚರ್ (ಪ್ರಾಯಃ ನಮ್ಮ ಊರಿನ ಗೋಚರಾವು ಅಥವಾ ಗೋಮಾಳ. ವಿಶಾಲ ಮೈದಾನವಿದೆ, ಮೇಯುತ್ತಿದ್ದ ಜಾನುವಾರುಗಳು ಗೋಚರವಾಗುತ್ತವೆ.), ಅದನ್ನು ದಾಟಿ ಕರ್ಣ ಪ್ರಯಾಗ್. ಇಲ್ಲಿ ಹಿಮವಂತನ ಹಿಮ ಕರಗಿಳಿಯುವ ಮಹಾಪೂರ, ಅಲಕ ನಂದಾ ನದಿಯೊಂದಿಗೆ ಸಂಗಮಿಸುತ್ತದೆ. ಹಿಮನದಿಯನ್ನು ಪಿಂಡಾರಿ ಎಂದು ಅರ್ಜುನ್ ಸಿಂಗ್ ಪರಿಚಯಿಸಿದನು. ಮುಂದುವರಿಸುತ್ತಾ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಸತ್ಯವಾಗಿ ಸಾಕ್ಷಿ ನುಡಿಯುವವನ ಸ್ಥಿರ ದಾಟಿಯಲ್ಲಿ ಇಲ್ಲಿಯೇ ಶ್ರೀ ಕೃಷ್ಣನು ಬ್ರಾಹ್ಮಣನ ವೇಷದಲ್ಲಿ ಕರ್ಣನನ್ನು ಎದುರಾಗಿ ಆತನ ಕರ್ಣಕುಂಡಲಗಳ ದಾನ ಕೇಳಿ ಪಡೆದ. ದಾನ ಪಡೆಯುವಾಗ ಆತನ ಅಮೃತ ಕಲಶವನ್ನು ಬರಿದುಗೊಳಿಸಿದನು. ಪರಿಣಾಮವಾಗಿ ಮಹಾರಥಿ ಕರ್ಣನು ಅರ್ಜುನನಿಂದ ಹತನಾದನು. ಅನಂತರ ಶ್ರೀ ಕೃಷ್ಣನು ಸ್ವತಃ ನಿಂತು ಕರ್ಣನ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರಗಳನ್ನು ಈ ಪ್ರಯಾಗ ಸ್ಥಳದಲ್ಲೇ ಜರಗಿಸಿದನು. ಅರ್ಜುನ್ ಸಿಂಗನ ಖಚಿತ ಹೇಳಿಕೆಯು ಭಾವುಕತೆಯ ಕಂಪನದಿಂದೊಡಗೂಡುತ್ತಿತ್ತು. (ನನಗಂತೂ ಹಾಗೇ ಕೇಳಿಸಿತು) ಪ್ರಯಾಗವೆಂದರೆ ನದಿಗಳು ಸಂಗಮಿಸುವ ಸ್ಥಳ. ಈಗ ಇದೊಂದು ಜನ ನಿಬಿಡ, ಕಿರಿದಾರಿಯ ಚಿಕ್ಕ ಪೇಟೆ. ಅಲಕ ನಂದಾ ಮತ್ತು ಪಿಂಡಾರಿ ನದಿಗಳ ಸಂಗಮಸ್ಥಾನವನ್ನು ಕಾರಿನಿಂದ ಕೆಳಗಿಳಿಯದೆ, ಮೇಲಿನಿಂದಲೇ ನೋಡಿ, ಕರ್ಣನಿಗಾಗಿ ಕಣ್ಣೀರ ತರ್ಪಣ ಕೊಟ್ಟು, ಉತ್ತರ ಮುಖಿಗಳಾಗಿ ಮುಂದುವರಿದೆವು. ಆ ದಿನ (೧-೧೦-೧೨) ಸಂಜೆಗಾಗುವಾಗ ಚಮೋಲಿ ಜಿಲ್ಲೆಯ ಮುಖ್ಯ ಪಟ್ಟಣ – ಗೋಪೇಶ್ವರ ತಲಪಿದೆವು (೧೩೦ ಕಿಮೀ). ಇಲ್ಲಿ ಜಿಎಂವಿಯವರ ಅತಿಥಿ ಗೃಹದಲ್ಲಿ ರಾತ್ರಿ ಕಳೆದೆವು.

ಗೋಪೇಶ್ವರದ  ದೇವಸ್ಥಾನ

ಗೋಪೇಶ್ವರ ಜನನಿಬಿಡ ಪಟ್ಟಣ. ನಾವು ಕೋಣೆಯಲ್ಲುಳಿದು ಪ್ರಯಾಣದ ದಣಿವಾರಿಸುತ್ತಿರುವಾಗ, ಶ್ಯಾಮ ಪೇಟೆಯೊಳಗೆ ನುಸುಳಿ ಅಲ್ಲಿ ಏನೆಲ್ಲಾ ಇದೆ ಎಂದು ನೋಡುತ್ತಾ ಹೋದನು. ಆತನಿಗೆ ಡಾ.ಆರ್.ಜಿ. ಭಟ್ಟ, ಬಿ.ಎ.ಎಂ.ಎಸ್, ಯಂ.ಎನ್.ಒ.ಪಿ ಇತ್ಯಾದಿ ಹಲವು ಸಾಲಿನ ಬಿರುದಾಂಕಿತ ಆಯುರ್ವೇದೀಯ ವೈದ್ಯರ ದವಾಖಾನೆ ಕಂಡಿತು. `ಭಟ್ಟ’ ಎಂಬ ಹೆಸರು ಶ್ಯಾಮನಲ್ಲಿ ಅನುಕಂಪ ಮೂಡಿ, ಒಳ ಹೊಕ್ಕಾಗ ಮಧ್ಯ ಪ್ರಾಯ ದಾಟಿದ ಡಾಕ್ಟರ್ ಎದುರಾದರು. ಶೈಲನ ಒಣ ಕೆಮ್ಮಲಿಗೆ ತುರ್ತು ಮಾತ್ರೆಗಳನ್ನು ಪಡೆದು, ಲೋಕಾಭಿರಾಮದಲ್ಲಿ ಸಂಗ್ರಹಿಸಿದಂತೆ, ಆ ಪ್ರದೇಶದಲ್ಲಿ ಬಹು ಮಂದಿ ಭಟ್ಟರು ನೆಲೆಸಿದ್ದಾರಂತೆ,ಗೋಪೇಶ್ವರ ಪುರಮಂದಿ ಆದಿ ಶಂಕರಾಚಾರ್ಯರ ಆದ್ಯ ಶಿಷ್ಯ ಪರಂಪರೆ ಇತ್ಯಾದಿ ಮಾಹಿತಿ ಸಂಗ್ರಹಿಸಿ, ತಾನೂ ಆದಿ ಶಂಕರಾಚಾರ್ಯರ ಶಿಷ್ಯ ಪರಂಪರೆಯ ಭಟ್ಟ – ಎಂದು ತಿಳಿಸಿ ಕೈಕುಲುಕಿ ಲಗುಬಗೆಯಲ್ಲಿ ಹಿಂದೆ ಬಂದನು. ನಾವು ರಾತ್ರಿಯನ್ನು ಅತಿಥಿಗೃಹದಲ್ಲಿ ಕಳೆದು ಮರುದಿನ (ತಾ ೨) ಮುಂಜಾನೆ ಮುಂದಿನ ಪಯಣಕ್ಕೆ ಸಿದ್ಧರಾದೆವು. ಕಾರು ಏರುವ ಮುಂಚೆ ಅರ್ಜುನ್ ಸಿಂಗ್ ನಮ್ಮನ್ನು ಅಲ್ಲಿನ ಪ್ರಮುಖ ದೇವಸ್ಥಾನ ಮತ್ತು ಗುಡಿಗಳಿಗೆ ಕರೆದೊಯ್ದನು. ಅಲ್ಲಿ ಕಾಣಿಕೆ ಹಾಕಿ, ಪೂಜೆಗೈದು, ಆರತಿ ಮಾಡಿ ಧನ್ಯರಾದೆವು. ಶಾಮ ಆತನ ಧಾಟಿಯಲ್ಲಿ ಅರ್ಚಕರ ಯೋಗಕ್ಷೇಮ, ಸಂಸಾರ, ಸುಖ-ದುಃಖಗಳನ್ನು ವಿಚಾರಿಸಿಕೊಂಡ. ಅಲ್ಲಿನ ಒಂದು ಗುಡಿಯಲ್ಲಿ ನಮಗೆ ಸಿಕ್ಕ ವೃದ್ಧ ಅರ್ಚಕನೆಂದಂತೆ ಕೆಲವು ತಲೆಮಾರಿನ ಹಿಂದೆ ಅವರ ಪೂರ್ವಜರು ಶೃಂಗೇರಿಯಿಂದ ಇಲ್ಲಿಗೆ ಬಂದು ನೆಲೆಸಿದ್ದರಂತೆ. ಅವರೆಲ್ಲರೂ ಆದಿ ಶಂಕರಾಚಾರ್ಯರ ಶಿಷ್ಯ ಪರಂಪರೆಗೆ ಸೇರಿದವರಂತೆ. ಆದರೆ ಅವರಲ್ಲಿ ಯಾರೊಬ್ಬರಿಗೂ ಪರಂಪರೆಯ ನೇರ ಸಂಪರ್ಕದ ಕೊಂಡಿಯೇನೂ ನಮಗೆ ಕಾಣಿಸಲಿಲ್ಲ. ನಾನು ಅಲ್ಲಿ ಕಂಡ ಇನ್ನೊಂದು ವಿಶೇಷತೆಯೆಂದರೆ ಅವರು ನಾವು ಬ್ರಾಹ್ಮಣರೆಂದ ಕೂಡಲೇ ನಮ್ಮ ಗೋತ್ರವೇನೆಂದು ವಿಚಾರಿಸುವುದು.ಇಲ್ಲಿನ ಈ ಭಟ್ಟರು ಬಹು ಮಂದಿ ಪರಾಶರ ಗೋತ್ರಜರೆಂದರು.ಅವರ ವಾಸದ ಜೋಪಡಿಗಳು, ಮನೆಮಂದಿಯ ದುರವಸ್ಥೆ, ಉಡುಪುಗಳು ಯಾವುವೂ ವಲಸೆಯಿಂದ ಸುಖ ಜೀವನ ಪಡೆದಿರುವಂತೆ, ಕನಿಷ್ಠ ವಲಸೆ ತೃಪ್ತಿ ತಂದಿರುವಂತೆ ಕಾಣಿಸಲಿಲ್ಲ. ನಮ್ಮಂತೆ ಅಪರೂಪಕ್ಕೆ ಬರುವ ಸಹ ಪರಂಪರೆಯವರೊಂದಿಗೆ ಹಳೆಯ ಕತೆಗಳ ಮೆಲುಕು ಹಾಕುತ್ತಾ ತಟ್ಟೆ ದಕ್ಷಿಣೆಯ ಭಾಗ್ಯಕ್ಕೆ ಕೈಯೊಡ್ಡುತ್ತಾರೆ. ಇವರು ಆಧುನಿಕ ಶಿಕ್ಷಣವಂಚಿತರು. ಆರ್ಥಿಕ ಸ್ವಾವಲಂಬನೆ ಕೇವಲ ಕನಸು; ಗೌರವ ಜೀವನಕ್ಕೆ ಅವಕಾಶವಿಲ್ಲ. ಭವಿಷ್ಯ ಕತ್ತಲು. ಇವರು ಯಾರಿಗೂ ಬೇಡದವರು. ಮಂಡಲ್ ಕಮಿಶನ್ ವರದಿಯ ಯಾವುದೇ ವರ್ಗೀಕರಣಕ್ಕೆ ಸಿಲುಕದ ವರ್ಣಾತೀತರು. ಅಂದಿನ ಪ್ರಧಾನ ಮಂತ್ರಿ ವಿ.ಪಿ. ಸಿಂಗರ ರಾಜಕೀಯ ಸುಸ್ಥಿರತೆ ಕಾಪಾಡಿಕೊಳ್ಳಲು ಸಮಾಜದ ಈ ಪದರದ ಜನರು ಮೂಕಬಲಿಪಶುಗಳು.ಗೋಪೇಶ್ವರದಿಂದ ನಾವು ಮಧ್ಯಾಹ್ನಕ್ಕಾಗುವಾಗ ಪಿಪಲ್‌ಕೋಟ್ ಮೂಲಕ ಜೋಷಿಮಠ(ಜ್ಯೋತಿರ್ಮಠದ ಅಪಭ್ರಂಶವೇ ಜೋಷಿಮಠ) ತಲಪಿದೆವು (೧೮೭೫ ಮೀ). ಪ್ರತಿ ವರ್ಷವೂ ದೀಪಾವಳಿ ಅನಂತರ ೬ ತಿಂಗಳ ಕಾಲದ ಚಳಿಗಾಲದಲ್ಲಿ ಬದರೀನಾಥದ ಉತ್ಸವ ಮೂರ್ತಿಯನ್ನು ಜೋಷಿಮಠಕ್ಕೆ ತರುತ್ತಾರೆ. ಮತ್ತದಕ್ಕೆ ನಿತ್ಯಪೂಜೆ ಸಲ್ಲಿಸುತ್ತಾರೆ. ಗೋಪೇಶ್ವರದಿಂದ ಬದರೀನಾಥಕ್ಕೆ ಹೋಗುವ ರಸ್ತೆ ಪರ್ವತಗಳ ಕಣಿವೆಗಳನ್ನು ಹಲವು ಹಂತಗಳ ಸುತ್ತಿನಲ್ಲಿ ದಾಟುತ್ತದೆ. ಅಗಲ ಕಿರಿದಾದ ತಿರುಗಣಿ ಸುತ್ತಿನ ದಾರಿ. ಎಡಬದಿ ಗಗನಚುಂಬಿ ಪರ್ವತ, ಬಲಬದಿಗೆ ಬಾಯ್ದೆರೆದ ಪಾತಾಳ.

ದಾರಿಯಲ್ಲಿ ಸಿಕ್ಕಿದ ಕೆಲವೊಂದು ರಸ್ತೆಗಳ ಮೇಲೆ ಪರ್ವತದ ಮೈಯು(ದೊಡ್ಡ ಬಂಡೆಗಳು) ಬಗ್ಗಿ ಮುಂದಕ್ಕೆ ಬಂದಿದೆ.(ಇದು ಅಂತರ್ಜಾಲದ ಚಿತ್ರವಾಗಿದೆ)

ಇಲ್ಲಿನ ಪರ್ವತಗಳಲ್ಲಿನ ಕಲ್ಲು ಪದರಕಲ್ಲುಗಳು. ಅವು ನಿಧಾನವಾಗಿ ಕೆಳಗೆ ಜಾರುತ್ತಿರುವಂತೆ ಕಾಣಿಸುತ್ತದೆ. ರಸ್ತೆ ಕಡಿದಾದಾಗ ಕಲ್ಲಿನ ಪದರಕ್ಕೆ ಕೆಳಗಿನ ಆಧಾರವಿಲ್ಲದೆ, ಕೆಳಗೆ ಜರಿಯುವುದು ಸ್ವಾಭಾವಿಕ. ನನಗೆ ಕಂಡಂತೆ ಕೇದಾರನಾಥಕ್ಕೆ ಹೋಗುವ ರಸ್ತೆ ಒಂದು ಕಣಿವೆಯ ಮೈಯಿಂದ ಇನ್ನೊಂದಕ್ಕೆ ದಾಟುವಲ್ಲಿ ನಿರಂತರ ಹರಿಯುವ ನೀರ ಝರಿಗಳಿವೆ. ಆದರೆ ಬದರಿ ರಸ್ತೆಯಲ್ಲಿ ಆ ವಿಧದ ನೀರಝರಿಗಳಿರುವುದಿಲ್ಲ. ಅಲಕನಂದಾ ನದಿಯು ಪಾತಾಳದಲ್ಲಿ ಹರಿಯುವುದನ್ನು ಕಾಣಬಹುದಾದರೂ ರಸ್ತೆ ಬದಿಯಲ್ಲಿ ಧುಮುಕುವ ನೀರಝರಿಗಳು ಕಾಣಿಸಲಿಲ್ಲ. ಈ ರಸ್ತೆ ದಟ್ಟ ಕಾಡುಗಳನ್ನು ಹಾದು ಹೋಗುವುದಾದರೂ ನಮ್ಮ ಹತ್ತಿರದ ಜ್ಞಾತಿವರ್ಗದ ಕೋತಿಗಳಲ್ಲದೆ ಇತರ ಯಾವುದೇ ವನ್ಯಜೀವಿಗಳು ನಮಗೆ ಗೋಚರಿಸಲಿಲ್ಲ. ಉಲ್ಲಾಸ ಕಾರಂತರ ಮಾತು, ಮನುಷ್ಯನ ಇರವು ತಿಳಿದೊಡನೆಯೇ ವನ್ಯಜೀವಿಗಳು ಕಣ್ಮರೆಯಾಗುವುವು, ನೆನಪಿಗೆ ಬಂತು. ಅರ್ಜುನ್ ಸಿಂಗ್ ಮಧ್ಯಾಹ್ನದ ಊಟದ ಕಾಲಕ್ಕೆ ಜೋಷೀಮಠಕ್ಕೆ ನಮ್ಮನ್ನು ಸುರಕ್ಷಿತವಾಗಿ ಒಯ್ದನು. ಇದು ಸುಮಾರು ೧೮೭೫ ಮೀಟರ್ ಔನ್ನತ್ಯದಲ್ಲಿದೆ.

(ಇದು ಅಂತರ್ಜಾಲದ ಚಿತ್ರವಾಗಿದೆ)

ಇಲ್ಲಿನ ಕಲ್ಪವೃಕ್ಷವೊಂದರ ಅಡಿಯಲ್ಲಿ ಕುಳಿತು ಆದಿಶಂಕರಾಚಾರ್ಯರು ತಪಸ್ಸು ಮಾಡಿದರಂತೆ. ಅವರಿಗೆ ಬ್ರಹ್ಮಜ್ಞಾನ ಸಾಕ್ಷಾತ್ಕಾರವಾಯಿತಂತೆ. ಅಲ್ಲಿನ ಗುಹೆಯಲ್ಲಿ ಕುಳಿತು ಶಂಕರ ಭಾಷ್ಯವನ್ನು ಬರೆದು ಹಿಂದೂ ಧರ್ಮದ ಪುನರುತ್ಥಾನಗೈದರೆಂದು ಚರಿತ್ರೆ ಇದೆ. ಅವರು ಸ್ಥಾಪಿಸಿದ ಮೊದಲ ಮಠ ಜೋಷೀ ಮಠ. ಅನಂತರ ಬದ್ರಿನಾಥದಲ್ಲಿ ಮೊದಲ ಧಾಮವನ್ನು ಸ್ಥಾಪಿಸಿದರು. ಇತರ ಧಾಮಗಳನ್ನು ಇತರೆಡೆಗಳಲ್ಲಿ ಸ್ಥಾಪಿಸಿದರು. ಇಲ್ಲಿ ಸಾಲಿಗ್ರಾಮ ಶಿಲೆಯಿಂದ ಕಡಿದ ಅತಿಸುಂದರ ನರಸಿಂಹ ವಿಗ್ರಹವಿದೆ. ಸ್ಥಳೀಯರ ನಂಬಿಕೆಯಂತೆ ಈ ವಿಗ್ರಹದ ಒಂದು ತೋಳು ಪ್ರತಿದಿನವೂ ಕೃಶವಾಗುತ್ತಾ ಹೋಗುತ್ತಿದೆ. ಕಲಿಯುಗ ಪ್ರಪಂಚವನ್ನೆಲ್ಲಾ ಆವರಿಸಿಕೊಂಡಾಗ ಆ ತೋಳು ಮುರಿಯುತ್ತದೆ, ವಿಷ್ಣು ಪ್ರಯಾಗದಲ್ಲಿರುವ ಜಯ ಮತ್ತು ವಿಜಯವೆಂಬ ಪರ್ವತಗಳು ಕುಸಿಯುತ್ತದೆ ಮತ್ತು ಬದರೀನಾಥಕ್ಕೆ ಹೋಗುವ ದಾರಿಯು ಶಾಶ್ವತವಾಗಿ ಸಂಪೂರ್ಣ ಮುಚ್ಚಿಹೋಗುತ್ತದೆ. ಆ ಕಾಲದಲ್ಲಿ ಬದರೀ ದೇವಸ್ಥಾನದ ಉತ್ಸವ ಮೂರ್ತಿಯನ್ನು ಜೋಷೀ ಮಠಕ್ಕೆ ತರಲಾಗುತ್ತದೆ. ಹಾಗಿರುವುದಾದರೂ ಯುಗಾವರ್ತ ಕಾಲದಲ್ಲಿ ದೈವೇಚ್ಛೆಯಂತೆ ನೀತೀ ಕಣಿವೆಯಲ್ಲಿರುವ ತಪೋವನ ಕ್ಷೇತ್ರದಲ್ಲಿ ಭವಿಷ್ಯತ್ತಿನ ಬದರಿ ಉದ್ಭವಿಸಲಿದೆ. ಇತ್ತೀಚಿನ ದಿನಗಳಲ್ಲಿ ತಂಪು ಹವೆಯ ಜೋಷೀ ಮಠವು ವಿಹಾರಧಾಮವಾಗಿ ಬೆಳೆಯುತ್ತಿದೆ. ಔಲೀ ಪರ್ವತದ ಸುಂದರ ಕಣಿವೆಯು ಇಲ್ಲಿಂದ ಕೇವಲ ೧೪ ಕಿಮೀ ದೂರದಲ್ಲಿದೆ. ಅಲ್ಲಿಗೆ ಜೋಷೀ ಮಠದಿಂದ ಉಕ್ಕಿನ ತಂತಿಗಳಿಂದ ನಿರ್ಮಿಸಿರುವ ೩.೯೨ ಕಿಮೀ ಉದ್ದದ ಜೋಲು ಸೇತುವೆಯ ವಿಶೇಷ ಸೌಕರ್ಯವಿದೆ. ಈ ವಿಧದ ಆಧುನಿಕ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗಳನ್ನು ಆಕರ್ಷಿಸಿದರೆ, ಪೌರಾಣಿಕ ಹಾಗೂ ನಿಜ ಚಾರಿತ್ರಿಕ ಹಿನ್ನೆಲೆಗಳು ಮರೆಯಾಗಿ ಕೇವಲ ರಜಾದಿನಗಳ ಮಜಾ ಕಾಲಕ್ಷೇಪದ ಪಟ್ಟಣವೊಂದು ಅಲ್ಲಿ ತ್ವರಿತ ಗತಿಯಲ್ಲಿ ಸಿದ್ಧವಾಗಬಹುದು. ಅದರ ಜತೆಯಲ್ಲೇ ಕೊಳಚೆ, ಕಸಗಳ ಪರ್ವತಗಳು ಕಣಿವೆಯನ್ನು ಮುಚ್ಚಬಹುದು.

ಗಗನ ಚುಂಬಿ ಪರ್ವತಗಳು

ಜೋಷಿಮಠದಿಂದ ಮುಂದುವರಿದು ಗೋವಿಂದ ಘಾಟಿಗಾಗಿ ಬದರಿನಾಥಕ್ಕೆ ಹೋಗುವ ದಾರಿಯಲ್ಲಿ ಬಲಬದಿಯಲ್ಲಿ ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರವಾದ ಹೇಮಕುಂಡ ಸಾಹಿಬ್ ಮತ್ತು ಪ್ರಪಂಚ ವಿಖ್ಯಾತವಾದ Valley of Flowers ಗೆ ಹೋಗಲಿರುವ ಕಾಲ್ನಡುಗೆಯ ದಾರಿ ಸಿಗುತ್ತದೆ. ಇವೆರಡಕ್ಕೂ ವಾಹನ ಹೋಗಲು ಸೌಕರ್ಯಗಳಿಲ್ಲ. ಹೇಮಕುಂಡ ಸಾಹಿಬ್ ಗೆ  ಸಾಧಾರಣ 19ಕಿ.ಮೀ. ದೂರ.

ಇಲ್ಲಿಂದ ಮುಂದೆ ಬದರಿಗೆ ೧೫ಕಿ.ಮೀ ದೂರವಿರುವಾಗ ಹನುಮಾನ್ ಚೆಟ್ಟಿ ಬರುತ್ತದೆ. ಈ ಸ್ಥಳದ ವಿಶೇಷತೆಯೆಂದರೆ- ಪಾಂಡವರು ವನವಾಸದಲ್ಲಿದ್ದಾಗ ಭೀಮಸೇನನು ತನ್ನ ಪತ್ನಿ ದ್ರೌಪದಿಯ ಮನೋಕಾಂಕ್ಷೆಯನ್ನು ಪೂರೈಸಲು ಸುಗಂಧ ಪುಷ್ಪವನ್ನು ಹುಡುಕಿಕೊಂಡು ಕಾಡಿನೊಳಗೆ ಹೋಗುತ್ತಾನೆ. ಆಗ ಅವನ ದಾರಿಯಲ್ಲಿ ವೃದ್ಧ ಕಪಿಯ ರೂಪದಲ್ಲಿ ಹನುಮಂತನು ದಾರಿಗಡ್ಡವಾಗಿ ಮಲಗಿರುತ್ತಾನೆ. ಭೀಮನಿಗೆ ಅವನ ನಿಜ ಸ್ವರೂಪ, ಅರಿವು ಆದ, ಹನುಮಂತನ ಬಾಲವೆತ್ತಲು ಪ್ರಯತ್ನಿಸಿ ಅಸಫಲನಾದ ಘಟನೆ ನಡೆದ ಜಾಗವಿದು.

ಜೋಷಿಮಠದಿಂದ ಉತ್ತರಕ್ಕೆ ಸಾಗುತ್ತಾ ಗೋವಿಂದ ಘಾಟ್, ಪಾಂಡುಕೇಶ್ವರ್‌ಗಳನ್ನು ಕಳೆದು ಸಂಜೆ ಸುಮಾರು ೪.೩೦ಕ್ಕೆ ಬದರಿನಾಥ ತಲಪಿದೆವು. ನಮ್ಮ ಕಾರು ಬದರೀನಾಥದ ಸಮೀಪವಾದಂತೆ ರಸ್ತೆಯ ತಿರುಗಣಿ ಸುತ್ತುಗಳು ಮತ್ತು ಏರುಗತಿ ಹೆಚ್ಚುತ್ತಾ ಹೋಗುತ್ತದೆ. ಪ್ರತಿಯೊಂದು ತಿರುಗಣಿ ಸುತ್ತಿನ ಕೊನೆಯಲ್ಲಿ ಬದರೀನಾಥ ನಾವು ತಲಪುವಂತೆ ನಮಗೆ ಭಾಸವಾಗುತ್ತದೆ. ತಿರುಗಣಿ ಪೂರ್ತಿಯಾದಾಗ ಪುನಃ ಶಿಖರವು ಬಹುದೂರ ಹೋಗಿರುವಂತೆ ಅನಿಸುತ್ತದೆ.

ನಮ್ಮ ವಾಹನ ಮಾರ್ಗವು ಎಲ್ಲಾ ಸಂದರ್ಭದಲ್ಲೂ ಹರಿಯುವ ನದಿಯ ಪಕ್ಕದಲ್ಲೇ ಇರುತ್ತಿತ್ತು.ನಾವು ಒಂದು ಪರ್ವತದಿಂದ ಇನ್ನೊಂದು ಪರ್ವತವನ್ನು ದಾಟುವಾಗ ಹೆಚ್ಚಾಗಿ ನದಿ ಮತ್ತು ಸೇತುವೆಯು ದೊರಕುತ್ತಿತ್ತು.

ಜಿ.ಎಂ.ವಿ.ಯವರ ರೆಸಾರ್ಟಿನಲ್ಲಿ ನಮಗಾಗಿ ಕಾಯ್ದಿರಿಸಿದ ವಿಶಾಲ ಬೆಚ್ಚಗಿನ ಕೋಣೆಗಳು ಸಿಕ್ಕಿದವು. ಹಗಲು ಇನ್ನೂ ಇದ್ದುದರಿಂದ ಅರ್ಜುನ್ ಸಿಂಗನ ಸೂಚನೆಯಂತೆ ೪ಕಿ.ಮೀ.ದೂರದ “ಮಾನ” ಎಂಬ ಹಳ್ಳಿಗೆ ಹೋದೆವು. ಅಲ್ಲಿಂದ ಮುಂದೆ ಉತ್ತರಾಭಿಮುಖವಾಗಿ ಸುಮಾರು ಮೂರು ಕಿಮೀ ದೂರದಲ್ಲಿ ಭಾರತ-ತಿಬೆಟ್ ಗಡಿಪ್ರದೇಶವಿದೆ. ನಾವು ಅಲ್ಲಿ ಕಾಲ್ನಡುಗೆಯಲ್ಲಿ ಆ ಬೆಟ್ಟಗಳ ಮಧ್ಯದಲ್ಲಿರುವ ಮಾನದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ದಾರಿಯುದ್ದಕ್ಕೂ ಹಲವು ಬಗೆಯ ಬಣ್ಣದ, ಕೈಕಸೂತಿಯ ಉಣ್ಣೆಯ ಉಡುಪುಗಳು ಶಾಲುಗಳು ಕುಲಾವಿಗಳ ಅಂಗಡಿಗಳು. ನಾವು ಉಷ್ಣದ ಊರಿನವರಾದ್ದರಿಂದ ಅವುಗಳ ಉಪಯೋಗ ನಮಗಿಲ್ಲ. ಯಾವುದನ್ನೂ ಖರೀದಿಸಲಿಲ್ಲ. ಅರ್ಜುನ್ ಸಿಂಗ್ ಅಷ್ಟರಲ್ಲೇ ನಮ್ಮನ್ನೆಚ್ಚರಿಸಿದ್ದನು, ಇಲ್ಲಿ ಬೆಲೆಯೂ ದುಬಾರಿ ಮತ್ತು ಮಾಲು ಖಾತ್ರಿಯೂ ಅಲ್ಲ ಎಂದು. ಇತರ ತಿಂಡಿ ತೀರ್ಥಗಳ ಅಂಗಡಿಗಳೂ ಸಾಕಷ್ಟು ಜನರನ್ನು ಆಕರ್ಷಿಸುತ್ತಿದ್ದವು. ಅರ್ಜುನ್ ಸಿಂಗ್ ನಮಗೆ ಮಹರ್ಷಿ ವೇದವ್ಯಾಸರು ತಪಸ್ಸು ಮಾಡಿದ ಗುಹೆ, ಮಹಾಗಣಪತಿಗೆ ಉಕ್ತಲೇಖನವಾಗಿ ಮಹಾಭಾರತದ ೮೮೦೦ ಶ್ಲೋಕಗಳನ್ನು ಹೇಳಿದ ಸ್ಥಳ, ಗಣಪತಿ ಕುಳಿತಿದ್ದ ಗುಹೆಯ ದ್ವಾರಗಳನ್ನು ತೋರಿಸಿದನು. ಮತ್ತೂ ಮುಂದೆ ಪಾಂಡವರು ದ್ರೌಪದಿ ಸಹಿತ ಸ್ವರ್ಗಾರೋಹಣಕ್ಕಾಗಿ ಸಾಗಿದ್ದ ಕಣಿವೆ ದಾರಿಯನ್ನೂ ತೋರಿಸಿದನು. ನಾವು ನಡೆಯುತ್ತಿದ್ದ ಕಾಲ್ದಾರಿಯ ಎಡಬದಿಯಲ್ಲಿ ಬಿದ್ದಿದ್ದ ಹೆಬ್ಬಂಡೆಯನ್ನು ವಿಶೇಷವಾಗಿ ತೋರಿಸಿದನು. ಪಾಂಡವರ ದಾರಿಯಲ್ಲಿ ಕಂದಕ ಇತ್ತಂತೆ. ಇತರರು ಮುಂದುವರಿದಾಗ, ಕೊನೆಯಲ್ಲಿರುತ್ತಿದ್ದ ದ್ರೌಪದಿಗೆ ಅಲ್ಲಿದ್ದ ಕಂದಕವನ್ನು ದಾಟಿ ಸಾಗಲು ಸಾಧ್ಯವಾಗಲಿಲ್ಲ. ಆಗ ಭೀಮನು ಆತನ ಗದಾಪ್ರಹಾರದಿಂದ ಬಂಡೆಯನ್ನು ದಾರಿಯಿಂದ ಕೆಳಗೆ ಉರುಳಿಸಿ, ಕಂದಕವನ್ನು ದಾಟಲು ಮೆಟ್ಟುವ ದಾರಿಯಂತೆ ಎತ್ತಿಟ್ಟು ಸುಗಮಗೊಳಿಸಿದನು. ಹಾಗಾಗಿ ಅದರ ಹೆಸರು “ಭೀಮ್ ಪುಲ್” ಎಂದರೆ ಭೀಮನ ಸೇತುವೆ ! ಮುಂದುವರಿಯುತ್ತ ದ್ರೌಪದಿ ಕುಸಿದುಬಿದ್ದ ಜಾಗವನ್ನು ತೋರಿಸಿದನು. ಪಾಂಡವರು ಸ್ವರ್ಗಾರೋಹಣದಲ್ಲಿ ಮುಂದುವರಿಯುತ್ತಾ ಏರುವ ಕಣಿವೆಯ ಮಾರ್ಗವನ್ನು ದೂರದಿಂದಲೇ ಕಲ್ಪನೆಯಲ್ಲಿ ನೋಡಿದೆವು. ಭೀಮಗಾತ್ರದ ಬಂಡೆಗಳು ಯಾವ ಕ್ಷಣದಲ್ಲೂ ಕೆಳಗುರುಳುವ ಸ್ಥಿತಿಯಲ್ಲಿ ಉಳಿದಿರುವಂತೆ ತೋರುವುವು.ಅಲ್ಲೇ ನಮ್ಮ ವೇದ ಪುರಾಣಗಳಲ್ಲಿ ಉಲ್ಲೇಖಿಸುವ ಸರಸ್ವತೀ ನದಿಯು ಮೇಲಿಂದ ಹರಿದು ಬರುತ್ತದೆ, ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಅವಳು ಗುಪ್ತಗಾಮಿನಿಯಾಗಿ ಕಾಣದಾಗುತ್ತಾಳೆ. ಶೀತಲ ಗಾಳಿ ಸುಯ್ಯಲು ನಮ್ಮಲ್ಲಿ ನಡುಕ ಉಂಟುಮಾಡುತ್ತಿತ್ತು. ಸ್ವರ್ಗಾರೋಹಣ ಕಣಿವೆ ದಾರಿ ಹಿಮದೊಳಗೆ ನುಸುಳಿ ಕಣ್ಮರೆಯಾಗುವ ತನಕ ಪಾಂಡವರ ದ್ರುತಗತಿಯನ್ನು ಸಾಕ್ಷಾತ್ಕರಿಸಿಕೊಂಡೆವು. ನಾವು ನಿಂತಿದ್ದ ಸ್ಥಳದಿಂದ ಅತಿ ಎತ್ತರದಲ್ಲಿ ಗಡಿ ಕಾವಲು ಸೈನಿಕರು ಗಸ್ತು ತಿರುಗುವ ಸುತ್ತು ಸುತ್ತಾದ ರಸ್ತೆ ಹಲವು ಸ್ತರಗಳಲ್ಲಿ ಮೇಲೆ ಏರುತ್ತಿತು. ಸೈನಿಕರ ಜೀಪೊಂದು ಹೋಗುತ್ತಿದ್ದುದನ್ನೂ ನೋಡಿದೆವು. ನಮ್ಮ ಕಾಲ್ನಡೆಯ ದಾರಿಯ ಅಂತ್ಯದಿಂದ ಸ್ವಲ್ಪ ಮುಂದೆ ಮಾನದ ಗಡಿ ಪ್ರದೇಶ ಅಂತ್ಯ.ಇಲ್ಲಿ ಚಳಿಗಾಲದ ತಿಂಗಳಲ್ಲಿ ಹಿಮ ಬೀಳುವುದರಿಂದ ಅಲ್ಲಿನ ವಾಸಿಗಳೆಲ್ಲ ಕೆಳಗಿನ ಜಾಗಗಳಿಗೆ ವಲಸೆ ಹೋದರೂ, ನಮ್ಮ ಭಾರತೀಯ ಸೈನಿಕ ಸಮುದಾಯ ದೇಶದ ಗಡಿ ರಕ್ಷಣೆಗಾಗಿ ಅಲ್ಲೇ ಕಾವಲಿರುತ್ತಾರೆ.

ವೇದವ್ಯಾಸ ಮಹಾಭಾರತ ಹೇಳಿದ ಗುಹೆ, ಗಣಪತಿ ಅದನ್ನು ಬರೆದುಕೊಂಡ ಗುಹೆ, ಪಾಂಡವರು ಸ್ವರ್ಗಾರೋಹಣ ಮಾಡಿದ ಕಣಿವೆ ಮಾರ್ಗ, ಸುತ್ತಲಿನ ಹಿಮ ಮುಚ್ಚಿದ ಪರ್ವತ ಶಿಖರಗಳು, ಯಾವ ಹೊತ್ತಿಗೂ ಕೆಳಗೆ ಉರುಳುವಂತಿರುವ ಹೆಬ್ಬಂಡೆಗಳು, ಸುಯ್ಗುಟ್ಟುವ ಶೀತಲ ಗಾಳಿ ನಮ್ಮನ್ನು ಅರಿವಿಲ್ಲದೆ ಪುರಾಣಲೋಕಕ್ಕೆ ತೇಲಿಸಿ ಒಯ್ಯುತ್ತವೆ. ದೂರದ ಕಣಿವೆಯಲ್ಲಿ ಮುಂದೆ ಮುಂದೆ ಸಾಗುತ್ತಿರುವ ಯುಧಿಷ್ಟಿರ, ಹಿಂಬಾಲಿಸುತ್ತಿರುವ ತಮ್ಮಂದಿರು, ದ್ರೌಪದಿ, ಪಕ್ಕದಲ್ಲಿರುವ ನಾಯಿ, ಒಬ್ಬೊಬ್ಬರಾಗಿ ಧರೆಗುರುಳುವ ದೃಶ್ಯವೆಲ್ಲಾ ಮನಸ್ಸಿನಲ್ಲಿ ಮೂಡುತ್ತವೆ. ಒಂದು ವಿಧದ ಅನಿರ್ವಚನೀಯ, ಉತ್ಕಟ, ಆಕಾಂಕ್ಷೆ, ನಮ್ಮ ಜೀವನದ ನಶ್ವರತೆಯೊಂದೇ ಸತ್ಯ ಎಂಬ ದುಃಖ, ಜೊತೆಗೇ ಸದ್ಯದ ಇರುವಿಕೆಯ ಸಮಾಧಾನ, ಎಲ್ಲವೂ ಹಿಮಮುಸುಕುವಂತೆ ಭಾಸವಾಗುತ್ತದೆ! ಅಷ್ಟರಲ್ಲಿ ಆಕಾಶದಲ್ಲಿ ಕರಿಮೋಡಗಳು ದಟ್ಟಣಿಸಿ ಗಾಳಿ ಸುಯ್ಲೆದ್ದು ಬೀಸುಮಳೆ ಸುರಿಯುವಂತಾಯ್ತು. ಅರ್ಜುನ್ ಸಿಂಗ್ ನಮ್ಮನ್ನು ಎಚ್ಚರಿಸಿ ಅವಸರದಲ್ಲಿ ಬಂದ ದಾರಿಯಲ್ಲೇ ಹಿಂದಿರುಗಿ ಕಾರು ಹತ್ತಿದೆವು. ಬಳಿಕ ನಮ್ಮ ಕೋಣೆಗಳನ್ನು ಸೇರಿಕೊಂಡು ಆ ದಿನದ ರಾತ್ರಿಯ ಪೂಜೆಗೆ ಅಣಿ ಮಾಡಿದೆವು. ಅಂದು ರಾತ್ರಿ ಅಲ್ಲಿಯೇ ಊಟ ವಿಶ್ರಾಂತಿ.

ಬದರೀನಾಥದ ದಾರಿಯಲ್ಲಿ ಬೆಳಗ್ಗೆ ಟೀ ಕುಡಿಯಲು ನಾವು ಅಗಸ್ತ್ಯಮುನಿ ಎಂಬ ಊರಲ್ಲಿ ನಿಂತಿದ್ದಾಗ ಬಾಗಲಕೋಟೆಯ ಒಬ್ಬನನ್ನು ಅಕಸ್ಮಾತ್ತಾಗಿ ಸಂಧಿಸಿದೆವು. ಆತನು ದೇಶಪಾಂಡೆ. ಆತನ ತಂದೆ ಬದರೀನಾಥದಲ್ಲಿ ಕ್ಷೇತ್ರ ಪುರೋಹಿತ. ಆತನ ಮೂಲಕ ಫೋನಾಯಿಸಿ ನಾವು ಬದರೀನಾಥ ತಲಪಿದ ರಾತ್ರಿಯಲ್ಲೇ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಮತ್ತು ಮರುದಿನ ಪ್ರಾತಃ ಕಾಲದಲ್ಲಿ ಪಿತೃಗಳಿಗೆ ಶ್ರದ್ಧಾಕಾರ್ಯಗಳನ್ನು ಮಾಡಿಸುವ ಏರ್ಪಾಡು ಮಾಡಿದ್ದೆವು. ಆದುದರಿಂದ ಆ ದಿನ ರಾತ್ರಿ ದೇವಕಿ ಮತ್ತು ನಾನು ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಮಾಡಿಸಿದೆವು. ನಮ್ಮ ಪುರೋಹಿತ ಆಜಾನುಬಾಹು, ಜಠಾಧಾರಿ. ಎರಡೆರಡು ಉಣ್ಣೆಕೋಟುಗಳನ್ನು ಧರಿಸಿ, ಕೈಬೀಸಿ ನಡೆಯುತ್ತಿರುವ ಗತ್ತು, ಠೀವಿ, ಮುಖದ ವರ್ಚಸ್ಸುಗಳು ಕ್ಷೇತ್ರ ಪುರೋಹಿತನ ಗೌರವ ಸ್ಥಾನಕ್ಕೆ ಯೋಗ್ಯನಂತೆ ಕಾಣಿಸುತ್ತಿತ್ತು. ಶ್ಯಾಮ ಮತ್ತು ಶೈಲ ಬೇರೇ ಪೂಜೆ(ಸಾಮೂಹಿಕ) ಮಾಡಿಸಿದರು. ನಾವೆಲ್ಲಾ ಜರಗಿಸಿದ (ಸಾಮೂಹಿಕ) ಪೂಜೆಯಲ್ಲಿ ಗರ್ಭಗುಡಿಯೊಳಗೆ ೫೦-೬೦ ಮಂದಿ ಗುಂಪಾಗಿ ಕುಳಿತು ಪೂಜೆ ಸಲ್ಲಿಸಲಾಗುತ್ತದೆ. ಸಂಜೆಯಿಂದ ನಡುರಾತ್ರಿಯತನಕ ಹಲವು ಗುಂಪುಗಳಾಗಿ ಸರದಿಯಲ್ಲಿ ಸಾಮೂಹಿಕ ಪೂಜೆಗಳು ನಡೆಯುವುವು. ಪ್ರತಿಯೊಬ್ಬರೂ ಬದರೀನಾಥ ಮೂರ್ತಿಯನ್ನು ಹತ್ತಿರದಿಂದ ನೋಡಿ, ಪ್ರಸಾದ ಸ್ವೀಕರಿಸಿ, ಸಾಷ್ಟಾಂಗ ನಮಸ್ಕರಿಸಲು ಕಾಲ ಮತ್ತು ಅವಕಾಶ ಒದಗುತ್ತದೆ. ನಾವು ಸಮರ್ಪಿಸುವ ನೈವೇದ್ಯವನ್ನು ನಮ್ಮ ಕೈಯಿಂದ ಅರ್ಚಕರು ಸ್ವೀಕರಿಸಿ, ನಮಗೆ ಪ್ರಸಾದ ನೀಡುತ್ತಾರೆ. ನಮಗೆ ಈ ಪೂಜೆಗಾಗಿ ಸುಮಾರು ಒಂದು ಗಂಟೆಯ ಕಾಲ ಸರದಿಯ ಸಾಲಿನಲ್ಲಿ ನಿಲ್ಲಬೇಕಾಯ್ತು. ಅನಂತರ ಗರ್ಭಗುಡಿಯಲ್ಲಿ ಸುಮಾರು ಅರ್ಧಗಂಟೆಯ ಕಾಲ ಪೂಜಾ ಕಾರ್ಯಕ್ರಮ. ನಮ್ಮ ನಂತರ ಶ್ಯಾಮ ಮಾತ್ತು ಶೈಲಜರು ಮಾಡಿಸಿದ ಪೂಜೆ ಸ್ವಲ್ಪ ದೀರ್ಘ ಕಾಲವಿತ್ತು. ಈ ಮಧ್ಯೆ ನಾನು ಅಲ್ಲಿನ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡಿದೆ. ಬಿಸಿ ನೀರನ್ನು ಸಣ್ಣ ಬಕೇಟಿನಲ್ಲಿ ಎತ್ತಿ ತಲೆಯ ಮೇಲೆ ಎಷ್ಟು ಸುರಿದುಕೊಂಡರೂ ತೃಪ್ತಿಯಿಲ್ಲದ ಅತಿ ಸುಖಕರ ಮಜ್ಜನ. ಗಂಧಕದ ಹಬೆ, ಸುತ್ತಲಿನ ಚಳಿ, ಮಬ್ಬುಗತ್ತಲೆ ಏನೋ ಒಂದು ವಿಧದ ಸ್ವಪ್ನಲೋಕ. ಅಲ್ಲೇ ಪಕ್ಕದಲ್ಲಿ ಹೆಂಗಸರಿಗೆ ಮರೆಯೊಳಗೆ (ಹೊರಗೆ ಕಾಣದಂತೆ) ಮೀಯಲು ಪ್ರತ್ಯೇಕ ವ್ಯವಸ್ಥೆಯಿದೆ.

ವಾಸದ ಕೊಠಡಿಗೆ ರಾತ್ರಿ ಸುಮಾರು ೯ ಗಂಟೆಗೆ ವಾಪಾಸು. ಪ್ರಾಯಃ ದಿನವಿಡೀ ಮಾಡಿದ ಪ್ರಯಾಣದ ಆಯಾಸ, ಸುಮಾರು ಒಂದು ಗಂಟೆಯ ಕಾಲ ಕೊರೆಯುವ ಚಳಿಯಲ್ಲಿ ಸರದಿ ಸಾಲಿನಲ್ಲಿ ನಡುಗುತ್ತಾ ನಿಂತು ಶಕ್ತಿಗುಂದಿದ ಬಡಕಲು ದೆಹಕ್ಕೆ ಬಿಸಿನೀರಿನ ಮಜ್ಜನ, ಅನಂತರ ಸುಮಾರು ಅರ್ಧ ಕಿಮೀ ದೂರದ ವಾಸದ ಕೊಠಡಿಗೆ ಏರುವ ದಾರಿಯಲ್ಲಿ ಎಡವುತ್ತಾ ಮರುನಡಿಗೆ, ಶೀತಲಗಾಳಿ ಇವೆಲ್ಲಾ ನನ್ನ ದೇಹ ತಡೆಯದಾಯಿತು. ಕೊಠಡಿ ತಲಪಿದೊಡನೆಯೇ ಉಸಿರಾಟದ ತೊಡಕುಂಟಾಯಿತು. ದಪ್ಪ ಹಾಸಿಗೆಗೊರಗಿ ಎರಡು ಸ್ವೆಟ್ಟರ್, ಎರಡೆರಡು ಕಾಲುಚೀಲ, ಕೈಚೀಲ ತಲೆಗೆ ಕಂಬಳಿ ಟೊಪ್ಪಿ, ಎರಡು ಹಾಸಿಗೆಯಷ್ಟು ದಪ್ಪದ ದುಪ್ಪಟ್ಟಿಯೊಳಗೆ ನುಸುಳಿದರೂ ಒಳ ಎಲುಬುಗೂಡಿನಿಂದ, ಜಠರದಿಂದ, ಶ್ವಾಸಕೋಶಗಳಿಂದ ಶೀತದಲೆಗಳು ನನ್ನನ್ನು ಆವರಿಸಿಕೊಂಡಂತಾಯಿತು. ಕುತ್ತಿಗೆಯಿಂದ ಉಂಗುಷ್ಟದ ತನಕ ಸ್ನಾಯುಗಳೆಲ್ಲಾ ನೋಯಲು ಪ್ರಾರಂಭವಾಯಿತು. ಏನೋ ಅರಚಿಕೊಂಡೆ. ದೇವಕಿ, ಶೈಲ, ಶ್ಯಾಮ ಮೂವರೂ ನನ್ನ ಕಾಲಿನಿಂದ ತಲೆಯತನಕ ಅವರ ಭಾರ ಶಕ್ತಿ ಸೇರಿಸಿ ಮಸಾಜ್ ಕ್ರಿಯೆ ಮಾಡಿದರು. ಒಂದು ಸಲ ನಡುಕ ಕಡಮೆಯಾಯಿತು. ಊಟದ ಹಾಲಿಗೆ ಹೋಗಿ ಬಿಸಿ ಪರೋಠ ನುಂಗಿ, ಬಿಸಿ ನೀರು ಕುಡಿದು, ಹಾಸಿಗೆಯೊಳಗೆ ಸುರುಳಿ ಮಲಗಿದೆ. ಪುನಃ ಚಳಿಯ ಛಳಕು, ಸ್ನಾಯುಗಳ ಸೆಳೆತ. ಆಮ್ಲಜನಕ ಸೇವನೆ ಮಾಡಿ ಸ್ವಲ್ಪ ಹಿತವಾಯಿತು. ಒಂದು ಕ್ರೋಸಿನ್ ಮಾತ್ರೆ ನುಂಗಿ, ಶಿವ ಧ್ಯಾನ ಮಾಡುತ್ತಾ, ಥರಥರ ನಡುಗುತ್ತಾ ಮಲಗಿದ ನೆನಪು. ಯಾವಾಗ ಏನಾಯಿತೆಂಬುದು ಅರಿಯದು. ಯಾವುದೋ ಸುಖವಾದ ಅಪ್ರಜ್ಞಾವಸ್ಥೆಗೆ ಜಾರಿಹೋದೆ. ಬೆಳಗ್ಗೆ ಸುಮಾರು ಆರು ಗಂಟೆಗೆ ಶ್ಯಾಮ ಮತ್ತು ಶೈಲ ಬಂದು ಬಾಗಿಲು ಬಡಿಯುವಾಗಲೇ ಪುನಃ ಪ್ರಜ್ಞಾವಸ್ಥೆಗೆ ಬಂದೆ. ಅಂತೂ ಸಾವು, ಮರುಜನ್ಮದ ಕಿಂಚಿತ್ತಾದರೂ ಅನುಭವವಾಯಿತು.

ಬ್ರಹ್ಮಕಪಾಲ- ಇದು ಅಲಕನಂದಾ ನದಿ ದಂಡೆ. ಇಲ್ಲೇ ಸಮೀಪದ ನೀರಿನಾಳದಿಂದ ಶಂಕರಾಚಾರ್ಯರು ಮುಳುಗಿ ಬದ್ರಿನಾರಾಯಣನ ಮೂರ್ತಿಯನ್ನು

ಕೈಯ್ಯಲ್ಲೆತ್ತಿಕೊಂಡು ಬಂದರೆಂದು ಸ್ಥಳಪುರಾಣ.

ಬೆಳಗ್ಗೆ ಬೇಗ ಸ್ನಾನ ಪೂರೈಸಿ ಸುಮಾರು ಎಂಟು ಗಂಟೆಗೆ ಪುರೋಹಿತರ ಜತೆಯಲ್ಲಿ ದೇವಕಿಯೊಡನೆ ಬದರೀ ದೇವಸ್ಥಾನದ ವಠಾರದಲ್ಲೇ ಇರುವ ಬ್ರಹ್ಮಕಪಾಲ ಎಂಬ ಸ್ಥಳ ತಲಪಿದೆವು. ಇಲ್ಲಿ ನಮ್ಮ ಪಿತೃಗಳಿಗೆ ಶ್ರದ್ಧಾಕ್ರಿಯೆಗಳನ್ನು ಮಾಡಿ, ಪಿಂಡ ಪ್ರದಾನಿಸಿ, ತರ್ಪಣೆ ಮಾಡಬೇಕಾಗಿ, ಈ ಕೆಲಸಗಳನ್ನು ಮುಖ್ಯ ಪುರೋಹಿತರ ಶಿಷ್ಯ ಮಾಡಿಸಿದನು. ನರ ಮತ್ತು ನಾರಾಯಣ ಪರ್ವತಗಳ ಮಧ್ಯೆ ಹರಿಯುವ ಅಲಕನಂದಾ ನದಿಯ ಕಿನಾರೆಯಲ್ಲಿ, ಕಲ್ಲು ಹಾಸಿನ ನೆಲದಲ್ಲಿ ಕ್ರಿಯೆ ಪ್ರಾರಂಭವಾಯಿತು. ಪುರೋಹಿತರು ಎಲ್ಲಾ ಸಾಮಗ್ರಿಗಳನ್ನು ಜೋಡಿಸಿ ತಂದಿದ್ದರು. ಅವರು ತಂದ ಅನ್ನದಿಂದ ದೇವಕಿ ೩೧ ಪಿಂಡಗಳನ್ನು ರಚಿಸಿದಳು. ಪುರೋಹಿತರೆಂದಂತೆ ನಾನು ತಪ್ಪು ತಪ್ಪಾಗಿ ಮಂತ್ರೋಚ್ಛಾರಣೆ ಮಾಡುತ್ತಾ ಕಳೆದ ಮೂವತ್ತು ವರ್ಷಗಳಿಂದ ವರ್ಷಕ್ಕೆರಡು ಸಲ ಮಾಡಿದಂತೆಯೇ ಶ್ರದ್ಧಾ ಕಾರ್ಯಗಳನ್ನು ನಿರ್ವಹಿಸಿದೆ. ನಮ್ಮ ಮುತ್ತಜ್ಜನ ಅಜ್ಜನ ಮತ್ತು ಅಜ್ಜಿಯ ತನಕದವರ ಹೆಸರು ಹೇಳಿ, ಗೋತ್ರ, ಪ್ರವರ ನುಡಿದು ಪಿಂಡ ಪ್ರದಾನಿಸಿದೆನು. ದೇವಕಿಯು ಆಕೆಯ ತಂದೆ ತಾಯಿ, ಅಜ್ಜ ಮತ್ತು ಅಜ್ಜಿಯ ತನಕದ ಪಿತೃಗಳಿಗೆ ಪಿಂಡ ಪ್ರದಾನಿಸಿದಳು. ಅವರುಗಳಿಗಿಂತ ಪುರಾತನ ಪಿತೃಗಳಿಗೆ ಒಟ್ಟಾಗಿ, ಬ್ರಹ್ಮ ವಿಷ್ಣು, ಮಹೇಶ್ವರರ ಹೆಸರುಗಳನ್ನು ಪ್ರತಿನಿಧಿಸುವ ಒಂದಾನೊಂದು ಹೆಸರುಳ್ಳ ಪಿತೃಗಳೇ ಎಂದು ಸಂಬೋಧಿಸಿ ಪಿಂಡ ಪ್ರದಾನಿಸಲಾಯಿತು. ಅಜ್ಜಿಯಂದಿರ ಸರದಿಯಲ್ಲಿ, ಗಂಗ ಯಮುನ ಸರಸ್ವತೀ ದೇವಿಯರ ಹೆಸರುಳ್ಳವರೇ ಎಂದು ಸಂಬೋಧಿಸಿದೆವು. ಪಿಂಡಪ್ರದಾನಿಸಿ, ತರ್ಪಣ ಎರೆದು, ೩೧ ಪಿಂಡಗಳನ್ನು ಅಲಕನಂದಾ ನದಿಯಲ್ಲಿ ಸಮರ್ಪಿಸಿದೆವು. ಪುರೋಹಿತರೆಂದಂತೆ ಗೋದಾನ, ಶ್ರೋತ್ರೀಯ ಬ್ರಾಹ್ಮಣರಿಗೆ ಮೃಷ್ಟಾನ್ನಭೋಜನ, ಭೂದಾನ ಇತ್ಯಾದಿಗಳನ್ನು ದಕ್ಷಿಣೆಯ ರೂಪದಲ್ಲಿ, ಕ್ರಿಯಾದಕ್ಷಿಣೆ ಸಹಿತ ಸಂತೋಷದಲ್ಲಿ ನೀಡಿದೆವು. ಪುರೋಹಿತರಿಗೆ ತಲೆಬಾಗಿ ನಮಸ್ಕರಿಸಿದೆವು. ಉತ್ತರೋತ್ತರ ಅಭಿವೃದ್ಧಿಮಸ್ತು ಎಂದು ನನಗೆ ಆಶೀರ್ವಾದ ಮಾಡಿದರು. ಬ್ರಹ್ಮಕಪಾಲದ ಭೂದೇವಿಗೂ ನಮಿಸಿ, ಮಂತ್ರಾಕ್ಷತೆ ಕಾಳನ್ನು ಶಿರದಲ್ಲಿ ಧರಿಸಿ, ಧನ್ಯತೆಯಲ್ಲಿ ಎದ್ದು ನಿಂತೆವು. ಇಷ್ಟೆಲ್ಲಾ ಮಾಡುತ್ತಿರುವಾಗ ಪಿತೃಗಳು – ಮುಖ್ಯವಾಗಿ ಅಪ್ಪ ಅಮ್ಮ ತೀರಾ ಸಮೀಪದವರು, ಅಲಕನಂದಾ ನದೀ ತೀರದ ಬಂಡೆಗಳ ಮೇಲೆ ಕುಳಿತು ನಮ್ಮ ಕ್ರಿಯೆಗಳನ್ನೆಲ್ಲಾ ನೋಡುತ್ತಿರುವಂತೆ ಅನಿಸುತ್ತಿತ್ತು. ನಮ್ಮ ಕ್ರಿಯೆಗಳಲ್ಲಿ ಯಾವುದೇ ಲೋಪದೋಷಗಳಿದ್ದಂತೆ ಅವರು ಅನ್ನಲಿಲ್ಲ ಅಥವಾ ನಮಗೆ ಅರಿವಾಗುವಂತೆ ತೋರಿಸಲಿಲ್ಲ ಎಂಬ ಸಮಾಧಾನವಾಯಿತು.

ನಾವಿಲ್ಲಿ ನದಿನೀರಿನಿಂದ ಚಪ್ಪಟೆ ಕಲ್ಲುಗಳನ್ನು ಹೆಕ್ಕಿಕೊಂಡೆವು. ಇದು “ಗರುಡಾ ಗಂಗಾ”, ಈ ನದಿಯ ಕಲ್ಲನ್ನು ಮನೆಯಲ್ಲಿಟ್ಟುಕೊಂಡರೆ ಹಾವಿನ ಭಯವಿಲ್ಲ ಎಂದನು ಅರ್ಜುನ್ ಸಿಂಗ್.

ಶ್ಯಾಮ ಮತ್ತು ಶೈಲರು ಅವರ ಪೂಜೆ, ಹರಕೆಗಳನ್ನು ಪೂರೈಸಿ ನಮ್ಮನ್ನು ಸೇರಿಕೊಂಡರು. ಅವರು ಪುರೋಹಿತರಿಗೆ ಕೈತುಂಬಾ ದಕ್ಷಿಣೆ ನೀಡಿ, ಬಹುತ್ ಖುಶ್ ಹುವಾ ಎಂಬ ರಶೀದಿಯನ್ನೂ ಪಡೆದರು. ದೇವಸ್ಥಾನದ ಮುಂಭಾಗದಲ್ಲಿ ವೃತ್ತಿ ಫೋಟೋಗ್ರಾಫರ್ ನಮ್ಮ ನಾಲ್ಕು ಮಂದಿಯ ಫೋಟೊ ಕ್ಲಿಕ್ ಮಾಡಿದನು. ದೇವಸ್ಥಾನದಲ್ಲಿ ಒಬ್ಬ ವ್ಯಕ್ತಿ ಕೇವಲ ಪ್ಯಾಂಟ್ ಮತ್ತು ಶರ್ಟುಗಳಲ್ಲಿದ್ದನು. ಉಣ್ಣೆ ಉಡುಪುಗಳಿಲ್ಲದೆ, ಆ ಶೀತ ಹವೆಯಲ್ಲಿ ಅವನು ಹೇಗಿರುತ್ತಾನೆಂದು ಶ್ಯಾಮನು ಅವನನ್ನು ಕೇಳಿದನು. ಅವನೆಂದಂತೆ, ಆತ ಕೇರಳದ ಮೂಲದವನು, ಪಕ್ಷಿಗಳನ್ನು ನೋಡಿ ಅಬ್ಯಾಸಮಾಡುವ ಪ್ರವೃತ್ತಿಯುಳ್ಳವನು.ಯಾವನೋ ವರ್ಚಸ್ವೀ ಯೋಗಿಯ ಶಿಷ್ಯನಾಗಿ, ಆತನ ಮಾರ್ಗದರ್ಶನದಲ್ಲಿ ಮಾಡಿದ ಯೋಗಸಾಧನೆಗಳ ಫಲವಾಗಿ ಶೀತ ಉಷ್ಣಗಳ ದ್ವಂದ್ವಗಳಿಂದ ಮುಕ್ತನಾಗಿದ್ದಾನೆ. ಆತನಿಗೆ ೪೦-೪೫ ವಯಸ್ಸಿರಬಹುದು. ಬದರೀನಾಥದಲ್ಲಿ ನಮ್ಮ ಕೆಲಸಗಳನ್ನು ಪೂರೈಸಿ, ನಾಷ್ಟಾ ಮುಗಿಸಿ ಸುಮಾರು ೯-೩೦ಕ್ಕೆ ದಕ್ಷಿಣಾಭಿಮುಖವಾಗಿ ಬಂದ ದಾರಿಯಲ್ಲೇ ಹಿಂದೆ ಬಂದೆವು. ಚಮೋಲಿ, ಗೋಪೇಶ್ವರಗಳನ್ನು ಕಳೆದು ಸುಮಾರು ಸಂಜೆ ಐದು ಗಂಟೆಗೆ ಗೌಚರ್‌ನಲ್ಲಿರುವ ಜಿಎಂವಿಯವರ ಅತಿಥಿ ಗೃಹ ತಲಪಿದೆವು. ಬದರೀನಾಥದಿಂದ ಅದು ಸುಮಾರು ೧೪೦ ಕಿಮೀ ಅಂತರದಲ್ಲಿದೆ. ಅಲ್ಲಿಂದ ಮರುದಿನ ಬೆಳ್ಳಂ ಬೆಳಿಗ್ಗೆ ಹೊರಟು ಪಶ್ಚಿಮಾಭಿಮುಖವಾಗಿ ಪುನಃ ರುದ್ರಪ್ರಯಾಗ್, ಶ್ರೀನಗರಕ್ಕಾಗಿ ಮಧ್ಯಾಹ್ನ ಕೌಡಿಯಾಲ ತಲಪಿದೆವು.

ತೆಹ್ರಿ ನದಿಯ ಅಣೆಕಟ್ಟು,ನಾವು ಚಿತ್ರದಲ್ಲಿ ಕಾಣುವ ಅಣೆಕಟ್ಟಿನ ಮೇಲಿನ ದಾರಿಯಾಗಿ ಪ್ರಯಾಣಿಸಿದೆವು.

ದಾರಿಯಲ್ಲಿ ತೆಹ್ರಿ ನದಿಯ ಅಣೆಕಟ್ಟನ್ನು ನೋಡಿದೆವು. ಅಲ್ಲಿಂದ ಚಂಬಾ ಮೂಲಕ ಸಂಜೆ ಸುಮಾರು ೪ ಗಂಟೆಗೆ ಮಸ್ಸೂರಿ ತಲಪಿದೆವು. ಇಲ್ಲಿಗೆ ನಮ್ಮ ಘಡ್ವಾಲ್ ಮಂಡಲದವರ ಪ್ರವಾಸ ಮುಗಿದು, ನಾವು ನಮ್ಮದೇ ಯೋಜಿತ ಪ್ರವಾಸದಲ್ಲಿ ಮುಂದುವರಿದೆವು. ಇಲ್ಲಿ ಕ್ಲಬ್ ಮಹೇಂದ್ರದವರ (ಕಂಪೆನಿಯವರ) ರೆಸಾರ್ಟಿನಲ್ಲಿ ನವೆಂಬರ್ ೪ ರ ಸಂಜೆಯಿಂದ ೭ ರ ಬೆಳಿಗ್ಗೆಯ ತನಕ ತಂಗಿದೆವು. ಈ ರೆಸಾರ್ಟಿನಲ್ಲಿ ಒಂದು ಕಾಟೇಜ್ ನಮಗಾಗಿ ಕಾದಿರಿಸಲಾಗಿತ್ತು. ಒಂದು ವಾಸದ ವಿಶಾಲವಾದ ಕೋಣೆ, ಎರಡು ಮಲಗುವ ಕೋಣೆಗಳು, ಅಡಿಗೆಕೋಣೆ ಇತ್ಯಾದಿಗಳಿರುವ ಎಲ್ಲಾ ವಿಧದ ಸೌಕರ್ಯಗಳಿರುವ ಸಣ್ಣ ಮನೆ. ಮಸ್ಸೂರಿ ೨೦೦೫ ಮೀಟರ್ ಔನ್ನತ್ಯದಲ್ಲಿದೆ. ಅಲ್ಲಿಂದ ಸುಮಾರು ೩೨ ಕಿಮೀ ದಕ್ಷಿಣಕ್ಕೆ ಡೆಹರಾಡೂನ್ ಇದೆ. ಇದರ ಔನ್ನತ್ಯ ೬೩೯ ಮೀಟರ್. ಸ್ವಾತಂತ್ರ್ಯ ಪೂರ್ವದಲ್ಲಿ ಯುರೋಪಿಯನ್ನರು ನೆಲೆಸುತ್ತಿದ್ದ ವಿಶ್ರಾಂತಿ ಕೇಂದ್ರಗಳಲ್ಲಿ ಮಸ್ಸೂರಿಯೊಂದು. ಪ್ರವಾಸೋದ್ಯಮವೇ ಇಲ್ಲಿನ ಮುಖ್ಯ ಜೀವನ ನಿರ್ವಹಣ ಉದ್ಯೋಗವೆನ್ನಬಹುದು. ರಸ್ತೆಯ ಎರಡೂ ಪಕ್ಕಗಳಲ್ಲಿ ಹಲವು ಬಣ್ಣಗಳ, ಬಹುವಿಧದ ಆಕಾರಗಳ, ಹೊಳಪಿನ ಉಣ್ಣೆ ಉಡುಪುಗಳು , ಶಾಲುಗಳು, ಗೃಹೋಪಯೋಗೀ ಸಲಕರಣೆಗಳು, ವಿಲಾಸೀ ಜೀವನ ಸೌಕರ್ಯಗಳು, ತಿಂಡಿಪೇಯಗಳು, ಇತ್ಯಾದಿಗಳನ್ನು ಮಾರಾಟ ಮಾಡುವ ಅಂಗಡಿಗಳು, ಅಗಲ ಕಿರಿದಾದ ಸುತ್ತುವ ರಸ್ತೆಗಳ ಎರಡೂ ಬದಿಗಳಲ್ಲಿವೆ. ಪೇಟೆಯೆಂದರೆ ಒಂದು ಮುಖ್ಯ ರಸ್ತೆ. ಅದರ ಕೊನೆಯಲ್ಲಿ ವಾಹನಗಳು ತಂಗುವ ಸ್ವಲ್ಪ ವಿಶಾಲವಾದ ಸ್ಥಳ. ಸುತ್ತಲೂ ಅಂಗಡಿಗಳು, ಹಲವು ಹೋಟೆಲುಗಳು. ಹೆಚ್ಚಿನ ಹೋಟೆಲುಗಳು ಶಾಕಾಹಾರ ಮತ್ತು ಮಾಂಸಾಹಾರ ಒಟ್ಟಿಗೆ ಇರುವವುಗಳು. ಉಡುಪಿಯ ಮತ್ತು ಜೈನರ ಶುದ್ಧ ಶಾಕಾಹಾರಿ ಹೋಟೆಲುಗಳು ಕೆಲವಿವೆ. ಇತರ ಹೋಟೆಲುಗಳಲ್ಲಿ ಮಾಂಸಾಹಾರ ಮಾತ್ರ. ಇಲ್ಲಿನ ಪೇಟೆಯಲ್ಲಿ ವಾರ್ತಾಪತ್ರಿಕೆಗಳ ಮಾರಾಟದ ಅಂಗಡಿ ಕಂಡುಬರಲಿಲ್ಲ. ನಾವು ತಂಗಿದ್ದ ರೆಸಾರ್ಟ್‌ನಲ್ಲಿಯೂ ಉತ್ತಮ ತರಗತಿಯ ರಾಷ್ಟ್ರೀಯ ವೃತ್ತಪತ್ರಿಕೆಗಳು ಇರಲಿಲ್ಲ. ಮನೆ ಕಟ್ಟಡಗಳೆಲ್ಲ ಬಹಳ ಹಿಂದಿನವುಗಳು. ಬಯಲು ಪ್ರದೇಶಗಳಲ್ಲಿನ ನಗರಗಳಲ್ಲಿರುವಂತೆ ಬಹುಮಹಡಿಗಳ ಹೊಸ ಕಟ್ಟಡ ಸಂಕೀರ್ಣಗಳು ಕಾಣಿಸುವುದಿಲ್ಲ. ಪಾಶ್ಚಾತ್ಯ ಉಡುಪುಗಳನ್ನು ತೊಟ್ಟು ವಿಲಾಸಿ ಹೋಟೆಲುಗಳು ಮತ್ತು ರೆಸಾರ್ಟುಗಳಲ್ಲಿನ ಪ್ರವಾಸಿಗರಲ್ಲದ ಸ್ಥಳೀಯರ ಜೀವನ ಮಟ್ಟ ಬಹಳ ಕೆಳಸ್ತರದ್ದಿರುವಂತೆ ಕಾಣಿಸುತ್ತದೆ.

ಕೆಂಪ್ಟೀ ಜಲಪಾತ

ಮಸ್ಸೂರಿಯಿಂದ ಸುಮಾರು ೨೦ ಕಿಮೀ ಉತ್ತರಕ್ಕಿರುವ ಕೆಂಪ್ಟೀ ಜಲಪಾತಕ್ಕೆ ಹೋದೆವು. ಜಲಪಾತವು ಸುಂದರವಾಗಿತ್ತು. ಸುತ್ತಲೂ ದಟ್ಟ ಕಾಡಿರುವ ಸುಂದರ ಪ್ರದೇಶ. ಕೆಳಧುಮುಕುವ ಜಲಧಾರೆ ಗೆರಸೊಪ್ಪೆ ಜಲಪಾತಕ್ಕೆ ಸಮನಾಗಿಲ್ಲ. ಇತರ ಎಲ್ಲಾ ಪ್ರವಾಸಿಗಳ ವಿಹಾರ ಕೇಂದ್ರಗಳಂತೆ ಇದು ಕೂಡಾ ಎಲ್ಲಾ ವಿಧದ ಕಸದ ಕೊಂಪೆ. ಪರಿಸರವನ್ನು ಚೊಕ್ಕಟವಾಗಿರಿಸಿಕೊಳ್ಳಬೇಕೆಂಬ ಇರಾದೆ ಪ್ರವಾಸಿಗಳಿಗಿಲ್ಲ. ಕೇಂದ್ರದಲ್ಲಿರುವ ಅಂಗಡಿ ವ್ಯಾಪಾರಸ್ಥರಿಗಾಗಲೀ ಆಡಳಿತ ನಡೆಸುವ ಸರಕಾರದ ಅಧಿಕಾರಿಗಳಿಗಾಗಲೇ ಮಾಲಿನ್ಯದ ಕುರಿತು ಸ್ವಲ್ಪವೂ ಚಿಂತೆ ಇರುವಂತೆ ಕಾಣಿಸಲಿಲ್ಲ. ಪ್ರವಾಸಿಗಳ ವಾಹನಗಳು ಜಲಪಾತದ ಸ್ಥಳದವರೆಗೂ ಬರುತ್ತವೆ. ಅವುಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲ. ಕಾಲ್ನಡೆಯಲ್ಲಿ ನಿಧಾನವಾಗಿ ಸಂಚರಿಸುತ್ತಾ ಸುತ್ತಲಿನ ದೃಶ್ಯ, ಪ್ರಕೃತಿ ಸೌಂದರ್ಯಗಳನ್ನು ನೋಡಿ ಸವಿಯಲು ಸ್ವಲ್ಪವೂ ಅವಕಾಶವಿರದ ಸಂತೆ ಮಾಳದಂತೆ ಕಾಣಿಸುತ್ತದೆ ಈ ಪ್ರವಾಸೀ ತಾಣ. ಅಲ್ಲಿಗೆ ಬರುವ ಬಹುಮಂದಿ ತಿಂದು ಕುಡಿಯುವುದೊಂದೇ ತಮ್ಮ ಜೀವನ ಧ್ಯೇಯವೆಂಬಂತೆ ಕಾಣಿಸುತ್ತಾರೆ. ಅಂತೂ ಕೆಂಪ್ಟೀ ಜಲಧಾರೆಯನ್ನು ಕೂಡಾ ನಾವು ನೋಡಿದ್ದೇವೆಂಬ ಹೆಗ್ಗಳಿಕೆಯಲ್ಲಿ ಹಿಂದಿರುಗಿದೆವು.

ಮಸ್ಸೂರಿಯಿಂದ (ಅಕ್ಟೋಬರ್ ೭) ಡೆಹ್ರಾಡೂನ್,  ಋಷಿಕೇಶದ ಮೂಲಕ ಹೈದರಾಬಾದಿಗೆ ನಮ್ಮ ಮರುಪಯಣ. ಋಷಿಕೇಶದಲ್ಲಿ ಶಿವಾನಂದಾಶ್ರಮವನ್ನು ನೋಡಲು ಸ್ವಲ್ಪ ಕಾಲವಿದ್ದೆವು. ಬಹಳ ಸುವ್ಯವಸ್ಥೆಯಲ್ಲಿರುವ ವಿಶಾಲವಾದ ಆಶ್ರಮವಿದು. ಅಲ್ಲಿ ಸುಮಾರು ೨ ಗಂಟೆಗಳ ಕಾಲವಿದ್ದೆವು. ಈ ಆಶ್ರಮದಲ್ಲಿ ಕನಿಷ್ಠ ಒಂದು ದಿವಸವಾದರೂ ಕಳೆಯಬೇಕಿತ್ತು ಎಂದು ಅನಿಸಿತು. ಆದರೆ ನಮಗೆ ಕಾಲಾವಕಾಶವಿರಲಿಲ್ಲ. ಮಧ್ಯಾಹ್ನ ಡೆಹ್ರಾಡೂನ್ ನಿಂದ   ಹೊರಟ ನಾವು ಸಂಜೆಗೆ ದೆಹಲಿ, ನಂತರ ರಾತ್ರಿ ೮ ಗಂಟೆಗೆ ಹೈದರಾಬಾದಿನ ವಿಮಾನವನ್ನು ಹತ್ತಿದೆವು. ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಹೈದರಾಬಾದ್ ತಲಪಿದೆವು.

Advertisements

4 thoughts on “ಹಿಮಾಲಯದಾಹ್ವಾನ-ನಮ್ಮ ಪಯಣ ಬದರೀನಾಥದೆಡೆಗೆ

  1. ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ . ಅಲ್ಲಿನ ಚಳಿ.ಆಮ್ಲಜನಕದ ಕೊರತೆ ಇದರಿಂದಾಗಿ ನನಗೆ ಅಲ್ಲಿಗೆ ಹೋಗುವ ಧೈರ್ಯ ಇಲ್ಲ. ಓದಿ ಸಂತೋಷ ಪಟ್ಟೆ . ಧನ್ಯವಾದಗಳು. ನೀವು ಬರೆದದ್ದು ಕಂಪ್ಯೂಟರ್ ನಲ್ಲಿಯಾದರು ತಪ್ಪಿಲ್ಲದೆ ಬರೆದದ್ದು ವಿಶೇಷ . ಅಭಿನಂದನೆಗಳು

    • ವೀಣ,
      ಕಂಪ್ಯೂಟರ್ ಬರಹ ನನ್ನ ಮತ್ತು ಅಶೋಕಭಾವನ ಕೆಲಸ. ಈ ಬ್ಲೋಗಿನ ಪ್ರಕಟಣೆಗೆ ಸಂಬಂಧಿಸಿದ ಕೆಲಸಗಳು (ಚಿತ್ರಗಳು, ವಿನ್ಯಾಸ) ನನ್ನದು. ಇನ್ನು ನೀನು ಅಲ್ಲಿಗೆ ಹೋಗುವ ವಿಚಾರ, ನಿನ್ನ ಪ್ರಾಯದವರು ಅಲ್ಲಿಗೆ ಹೋಗಲು ಹೆದರುವ ಅವಶ್ಯಕತೆಯಿಲ್ಲ. ಊಟ-ತಿಂಡಿಯೂ ಸುಧಾರಿಸುವಂತಿದೆ. ಖಂಡಿತವಾಗಿಯೂ ನೀನು, ಬಂಧುಗಳೊಡನೆ ಅಥವಾ ಸ್ನೇಹಿತರೊಡನೆ ಹೋಗಬೇಕು.
      ಶೈಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s