ಹಿಮಾಲಯದಾಹ್ವಾನ

ಹಿಮಾಲಯದಾಹ್ವಾನ

ಈ ಲೇಖನ ಎ.ಪಿ.ಗೌರಿಶಂಕರರ(ನನ್ನ ತಂದೆಯವರ) ಅನುಭವ ಕಥನವಾಗಿದೆ. ನಾನು ಮತ್ತು ನನ್ನ ಪತಿ ಶ್ಯಾಮ ಭಟ್ಟರು,ಮತ್ತು ನನ್ನ ತಂದೆ-ತಾಯಿ
ಒಟ್ಟಾಗಿ ಸದ್ಯ ಕಳೆದ ತಿಂಗಳಲ್ಲೇ ಕೇದಾರನಾಥ ಮತ್ತು ಬದ್ರಿನಾಥಗಳನ್ನು ನೋಡಿ ಬಂದೆವು. ನಾನು ಈ ಪ್ರಯಾಣದಲ್ಲಿ ಭಾಗಿಯಾಗಿದ್ದರೂ ಇದು ಕೇವಲ ನನ್ನ ತಂದೆಯವರ ಮಾತಿನಲ್ಲಿದೆ.

ಭಾರತದ ಹೆಚ್ಚಿನ ಪುಣ್ಯಕ್ಷೇತ್ರಗಳು ಪ್ರಕೃತಿ ಸೌಂದರ್ಯದ ಅಪೂರ್ವ ತಾಣಗಳು. ಧರ್ಮ ಶ್ರಧ್ಧೆಯುಳ್ಳ ಭಾರತೀಯರಿಗೆ ಧ್ಯಾನ ಹಾಗೂ ತಪಸ್ಸು ಮಾಡಲು ಅವಶ್ಯವಿರುವ ಮಾನಸಿಕ ಏಕಾಗ್ರತೆ ಮತ್ತು ಮನಶ್ಶಾಂತಿಯನ್ನು ಈ ಕ್ಷೇತ್ರಗಳು ಒದಗಿಸುತ್ತವೆ. ಹಾಗೆಂದೇ ಪುರಾತನ ಕಾಲದಿಂದಲೂ ಭಾವುಕ ಮುಮುಕ್ಷುಗಳು, ಮುನಿಗಳು, ಋಷಿಗಳು ಇಂಥಾ ಸೌಂದರ್ಯದ ತಾಣಗಳನ್ನರಸಿ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದಾರೆ.ಇಂದಿಗೂ ಈ ತೆರನ ಪ್ರವಾಸ ಮುಂದುವರಿದಿದೆ.ಹಿಮಾಲಯದ ಗಿರಿಶಿಖರಗಳು ಭಾರತದ ದಕ್ಷಿಣದ ತುದಿಯಿಂದ ಜನರನ್ನು ಆಕರ್ಷಿಸುತ್ತವೆ. ಇದು ಭಾವುಕರ ಅಥವಾ ಧರ್ಮಾಸಕ್ತರ ಪ್ರವಾಸಕ್ಕೆ ಕಾರಣವಾದರೆ, ಭಾವುಕರಲ್ಲದ, ಧರ್ಮನಿರಪೇಕ್ಷ ಮಂದಿಯೂ ಹಿಮಾಲಯದ ಸಮ್ಮೋಹನಕ್ಕೆ ಹೊರತಾದವರಲ್ಲ.

ಪ್ರಕೃತಿಯೊಡ್ಡುವ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗಳನ್ನು ಎದುರಿಸುವ ಛಲವುಳ್ಳ ಸಾಹಸಿಗರು ಪುರಾತನ ಕಾಲದಿಂದಲೂ ಹಿಮಾಲಯ ಹಾಗೂ ಇತರ ಪರ್ವತಗಳ ಶಿಖರಗಳನ್ನೇರಿ ತಮ್ಮ ಛಲ ಸಾಧಿಸಲು ಪ್ರಯತ್ನಿಸಿದ್ದಾರೆ. ಆದರೆ ನಾನು ಈ ಎರಡು ಬಣಗಳಿಗೂ ಹೊರತಾದ ವೃತ್ತಿನಿರತ,ಛಲರಹಿತ ಸುಖಾಪೇಕ್ಷಿ. ಧೈಹಿಕ ಶ್ರಮಕ್ಕೊಲ್ಲದ, ಕೇವಲ ತೆಳು ಮೇಲು ಪದರದ ಭಾವುಕ ಮತ್ತು ದೈವಭಕ್ತ. ಹಾಗಿದ್ದರೆ ನಾನೇಕೆ ಶ್ಯಾಮ ಮತ್ತು ಶೈಲಜಳ ಹಿಮಾಲಯ ಪ್ರವಾಸದ ಆಮಂತ್ರಣ ಸ್ವೀಕರಿಸಿದೆನೆಂಬುವುದು, ನನಗೇನೇ ತಿಳಿಯದು.ಶ್ಯಾಮ ಮತ್ತು ಶೈಲ ಅದೇನೋ ಕಾರಣದಿಂದ ಕೇದಾರನಾಥ,ಬದರೀನಾಥಗಳ ಪ್ರವಾಸ ಮಾಡುವ ಯೋಜನೆ ಮಾಡಿದರು. ಜೊತೆಗೆ ಶ್ಯಾಮ ಮಸ್ಸೂರಿಯಲ್ಲಿ ಕ್ಲಬ್ ಮಹೇಂದ್ರದ ರೆಸೊರ್ಟಿನಲ್ಲಿ ೩ ದಿನಗಳ ವಿಶ್ರಾಂತಿ ಪಡೆಯುವ ವ್ಯವಸ್ಠೆಯನ್ನೂ ಹೊಂದಿಸಿಕೊಂಡನು. ಅವರ ಈ ಪ್ರವಾಸ ಯೋಜನೆಯನ್ನು ಶೈಲ ಕಳೆದ ಅಗಸ್ಟ್ ತಿಂಗಳಲ್ಲಿ ಆಕೆಯ ಅಮ್ಮನಿಗೆ(ದೇವಕಿಗೆ) ತಿಳಿಸಿ ಆಹ್ವಾನಿಸಿದಾಗ ದೇವಕಿ ಸ್ವಾಭಾವಿಕವಾಗಿ(ವಯಸ್ಸು ೭೦ವರ್ಷ) ಉತ್ಸಾಹ ತೋರಿಸಲಿಲ್ಲ. ಆದರೆ ನಾನು ವಯಸ್ಸು(೭೮ವರ್ಷ) ಮತ್ತು ಧೈಹಿಕ ಸಾಮರ್ಥ್ಯಗಳನ್ನು ಗಣಿಸದೆ, ಕುರುಡು ಧೈರ್ಯದಲ್ಲಿ ಪೂರ್ಣ ಸಮ್ಮತಿ ದಿಡೀರಾಗಿತ್ತೆ. ಆಳ ತಿಳಿಯದೆ ಮಡುವೊಳಗೆ ಧುಮುಕುವ ನನ್ನ ಉತ್ಸಾಹದಿಂದ ದೇವಕಿಯೂ ಪ್ರೇರಿತಳಾಗಿ ಹಿಂಜರಿಕೆಯ ಒಪ್ಪಿಗೆ ಸೂಚಿಸಿದಳು.ಹಿಮವಂತನ ಅವ್ಯಕ್ತ ಕರೆಗೆ ನಮ್ಮೊಳಗಿನ ಗುಪ್ತ ಆಸೆಯ ತಂತು ಧನಾತ್ಮಕವಾಗಿ ಸ್ಪಂದಿಸಿತು. ಅಂತೂ ಸಪ್ಟಂಬರ್ ೨೬ರಂದು ನಾವಿಬ್ಬರೂ ಹೈದರಾಬಾದ್ ಸೇರಿಕೊಳ್ಳುವುದೆಂದೂ, ೨೮ರಂದು ಅಲ್ಲಿಂದ ಮುಂದಿನ ಪ್ರವಾಸ ಪ್ರಾರಂಭವೆಂದೂ ಕಾರ್ಯಕ್ರಮದ ಜೋಡಣೆ ಅಗೋಸ್ತು ೧೫ರೊಳಗೆ ನಡೆಯಿತು.
ಬದರೀನಾಥ,ಕೇದಾರನಾಥಗಳಂಥಾ ಅತಿ ಶೀತ ಪ್ರದೇಶಗಳಲ್ಲಿ ನಮಗೆ ಬೇಕಾಗಬಹುದಾದ ಬೆಚ್ಚಗಿನ ಉಡುಪುಗಳ ಶೇಖರಣಾ ಕಾರ್ಯ ಭರದಿಂದ ಮಾಡಿದೆವು.ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವೆನಿಸಬಹುದಾದ ಮದ್ದು, ಔಷಧಿಗಳ ತಪಾಸಣೆಯೂ ನಡೆಯಿತು. ಹಲವು ಮಂದಿ ಹಲವು ವಿಧದ ಮುಂಜಾಗ್ರತೆಯ ಎಚ್ಚರಿಕೆಗಳನ್ನಿತ್ತರು.
ಒಬ್ಬರಂತೂ “ನಿನ್ನ ಅಪ್ಪ ಮತ್ತು ಅಮ್ಮ ವಯಸ್ಸಾದವರು,ದೈಹಿಕ ನಿಶ್ಶಕ್ತರು,ಅಷ್ಟು ದೀರ್ಘ ಕಾಲದ ಪ್ರಯಾಣ ತ್ರಾಸ. ಹಿಮಾಲಯದ ಶೀತ,ಒಗ್ಗದ ಆಹಾರ ಸೇವನೆಯ ಪರಿಣಾಮಗಳನ್ನು ತಾಳಲಾರರು. ಅವರನ್ನುಳಿದು ನೀವು ಮಾತ್ರ ಪ್ರವಾಸ ಮಾಡುವುದೊಳಿತು” ಎಂದು ಶೈಲನಿಗೆ ಎಚ್ಚರಿಕೆ ನೀಡಿದರು. ಇಷ್ಟೆಲ್ಲಾ ಮುಂದುವರಿಯುತ್ತಿರುವಾಗ, ಉತ್ತರಾಂಚಲ ರಾಜ್ಯ ಸರಕಾರದ ಘಡ್ವಾಲ್ ಮಂಡಲ ವಿಕಾಸ ನಿಗಮದವರನ್ನು ಶ್ಯಾಮ ಸಂಪರ್ಕಿಸಿ ನಮ್ಮ ನಾಲ್ಕು ಮಂದಿಯ ಪ್ರವಾಸ ಕಾರ್ಯಕ್ರಮ ನಿಗಧಿ ಪಡಿಸಿದ್ದನು. ಸೆಪ್ಟೆಂಬರ್ ೨೮ರಿಂದ ಪ್ರಾರಂಭಿಸಿ, ಅಕ್ಟೋಬರ್ ೭ರ ತನಕ ನಮ್ಮ ಪ್ರವಾಸ ಯೋಜನೆ ಸಿಧ್ಧವಾಗಿತ್ತು.
ಮೊದಲ ಹಂತದ ಕೇದಾರನಾಥ:
ಸೆಪ್ಟೆಂಬರ್ ೨೮ರಂದು ಬೆಳಗ್ಗೆ ೮ ಗಂಟೆಗೆ ವಿಮಾನ ಮೂಲಕ ನವದೆಹಲಿಗೆ ಮಧ್ಯಾಹ್ನ ೧೨-೩೦ಕ್ಕೆ ತಲಪಿದೆವು.ಅಲ್ಲಿ ಜತೆಯಲ್ಲೇ ತಂದಿದ್ದ ಬುತ್ತಿ ಊಟ ಮುಗಿಸಿ, ಅಪರಾಹ್ನ ಗಂಟೆ ೩-೩೦ ರ ತನಕ ತೂಕಡಿಸುತ್ತಾ, ಹರಟುತ್ತಾ ಕಾಲಕ್ಷೇಪವಾಯ್ತು.ಅಲ್ಲಿಂದ ಪುನಃ ವಿಮಾನವೇರಿ ಸಂಜೆ ಗಂಟೆ ಸುಮಾರು ೪-೩೦ಕ್ಕೆ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿಳಿದೆವು. ಅದು ಸಮುದ್ರ ಮಟ್ಟದಿಂದ ೬೩೯ಮೀಟರ್ ಉನ್ನತ ಪ್ರದೇಶ. ಅಲ್ಲಿ ಶ್ಯಾಮನ ಪರಿಚಿತರು ಕಾರು ಸಹಿತ ನಮ್ಮನ್ನು ಕಾದು ನಿಂತಿದ್ದರು.ಅವರ ಕಾರಿನಲ್ಲಿ ಸಂಜೆ ಗಂಟೆ ಸುಮಾರು ೫-೩೦ಕ್ಕೆ ಋಷಿಕೇಶಕ್ಕೆ ತಲುಪಿದೆವು. ಇದು ಸುಮಾರು ೩೪೦ಮೀ. ಉನ್ನತ ಸಮಶೀತೋಷ್ಣ ಪ್ರದೇಶ. ಇಲ್ಲಿಂದ ೨೫ ಕಿ.ಮೀ. ದಕ್ಷಿಣದಲ್ಲಿ ಹರಿದ್ವಾರವಿದೆ. ಋಷಿಕೇಶ, ಹರಿದ್ವಾರಗಳಲ್ಲಿ ಗಂಗಾ ನದಿಯು ಕಲಂಕ ರಹಿತ ಪುಣ್ಯನದಿ, ಋಷಿಕೇಶದಲ್ಲಿ ಈ ನದಿಯ ಪಶ್ಚಿಮ ದಂಡೆಯಲ್ಲಿ ನದಿಗೆ ತೀರಾ ಸಮೀಪದಲ್ಲಿ ಘಡ್ವಾಲ್ ಮಂಡಲ್ ವಿಕಾಸ ನಿಗಮ (G M V)ದವರ ಗಂಗಾ ರೆಸಾರ್ಟಿನಲ್ಲಿ ರಾತ್ರಿ ತಂಗಿದೆವು. ಆ ಸಂಜೆ ದೋಣಿ ಮೂಲಕ ಗಂಗಾನದಿಯ ಪೂರ್ವ ದಡಕ್ಕೆ ಹೋದೆವು. ಅಲ್ಲಿ ಜನನಿಬಿಡ, ಅಗಲ ಕಿರಿದಾದ ಮಾರ್ಗದ ಎರಡೂ ಪಕ್ಕಗಳಲ್ಲಿ ಯಾತ್ರಿಕರಿಗೆ ಅಗತ್ಯ ಹಾಗೂ ಅನಗತ್ಯವಾದ ಎಲ್ಲಾ ವಿಧದ ಮಾಲುಗಳ ಅಂಗಡಿಗಳು ನಮ್ಮನ್ನು ಮರುಳುಗೊಳಿಸಿದವು. ದೇವಕಿ ಮತ್ತು ಶೈಲ ರುದ್ರಾಕ್ಷಿ ಮಾಲೆ ಮತ್ತು ಸ್ಫಟಿಕ ಸರಗಳನ್ನು ಕೊಂಡರು. ಅಲ್ಲಿನ ಗೈಡ್ ಒಬ್ಬನು ನಮ್ಮನ್ನು ಕರೆದೊಯ್ದನು. ಧರ್ಮ ಛತ್ರದಲ್ಲಿ ಯಾತ್ರಾರ್ಥಿಗಳಿಗೆ ಉಳಿಯಲು ಅನುಕೂಲ ವ್ಯವಸ್ಥೆಯಿದೆ. ಗಂಗಾನದಿಯನ್ನು ರಾಮಜೂಲಾದ ಮೂಲಕ ದಾಟಿ ಗಂಗಾ ರೆಸಾರ್ಟ್ ಇರುವ ಪಶ್ಚಿಮ ದಡಕ್ಕೆ ಹಿಂತಿರುಗಿ ರಾತ್ರಿಯಾಗುವ ಮುಂಚೆಯೇ ತಂಗುದಾಣ ತಲಪಿದೆವು.

ನಾವು ತಂಗಿದ “ಗಂಗಾ ರೆಸಾರ್ಟಿನ ಹೊರಗೆ”, ಗಂಗೆಯ ಸಾಮೀಪ್ಯದಲ್ಲಿ ಕಳೆದ ಸಂಜೆ

ಪಶ್ಚಿಮ ದಡದಲ್ಲಿರುವ ಗಂಗಾ ರೆಸಾರ್ಟಿನಿಂದ ತೀರಾ ಸಮೀಪದಲ್ಲಿ ಹರಿಯುವ ಗಂಗಾನದಿ ನೋಟಕ್ಕೆ ಅತಿ ಸುಂದರ. ಸೂರ್ಯ ಮುಳುಗಿದ ನಂತರ ಚಂದ್ರೋದಯ ಕಾಲದಲ್ಲಿ (ಮರುದಿನ ಅನಂತನ ಚತುರ್ದಶಿ) ಹರಿಯುವ ಗಂಗಾ ನದಿಯ ದೃಶ್ಯ ಮನಮೋಹಕ. ಕೇಳಲು ಇಂಪಾಗಿರುವ ನೀರ ಹರಿವಿನ ಜುಳು-ಜುಳು, ನೀರಿನಲ್ಲಿ ನಲಿಯುವ ಚಂದ್ರ ಬಿಂಬ, ನದೀ ಕಿನಾರೆಯ ವೃಕ್ಷ ಸಂಕುಲದ ವಿವಿಧ ಆಕಾರದ ನೆರಳು ಇವೆಲ್ಲಾ ನಮ್ಮನ್ನು ಸ್ವಪ್ನ ಲೋಕಕ್ಕೆ ಒಯ್ಯುತ್ತದೆ. ಗಂಗಾನದಿಯ ಪೂರ್ವ ಚರಿತ್ರೆ,ಪುರಾಣ ಕಥೆಗಳು,ಶಂತನು ಚಕ್ರವರ್ತಿಯ ಮೋಹ,ಗಂಗೆಯ ಶಾಪ ವಿಮೋಚನೆ, ಗಾಂಗೇಯನ ಜನನ, ಮಹಾಭಾರತ ಮಹಾಯುದ್ಧ, ವ್ಯಾಸ ಋಷಿ ಹೀಗೇ ಪಾಂಡವರು ಬದರೀನಾಥದಲ್ಲಿ ಸ್ವರ್ಗಾರೋಹಣ ಮಾಡುವ ವರೆಗೂ ಗಂಗಾ ನದಿಯ ನೀರ ಹರಿವು ನಮಗರಿವಿಲ್ಲದೇ ತೇಲಿಸಿಕೊಂಡು ಒಯ್ಯುತ್ತದೆ. ತಡ ರಾತ್ರಿಯ ತನಕ ರೆಸಾರ್ಟಿನ ಮಾಳಿಗೆಯ ಹೊರ ಜಗಲಿಯಿಂದ ಗಂಗಾನದಿಯನ್ನು ನೋಡುತ್ತಾ ಕಾಲಕಳೆದುದು ತಿಳಿಯದಾಯ್ತು. ಗಂಗಾ ರೆಸಾರ್ಟ್ ನಿಂದ ರಾತ್ರಿ ಕಾಲದ ನದಿ ಹರಿವಿನ ದೃಶ್ಯ ಮನಸ್ಸಿನಿಂದ ಎಂದೂ ಮಾಸದೆ ಉಳಿಯುವ ನೆನಪು ಇದು ಪೂರ್ವ ಜನ್ಮದ ಪುಣ್ಯ ಫಲದಂತೆ ಭಾಸವಾಗುತ್ತದೆ. ಸೆಪ್ಟೆಂಬರ್ ೨೮ರ ರಾತ್ರಿಯ ಗಂಗಾನದಿಯ ಸ್ಮೃತಿ ಬಹುಕಾಲ ಉಳಿಯುವಂಥಾದ್ದು. ಮಂದಗತಿಯ ಪುಣ್ಯನದಿ, ವ್ಯಾಸ ಭಾರತದ ಕತೆಯನ್ನು ತಟಗಳಲ್ಲಿ ವಾಸಿಸುವವರಿಗೆ ಸದಾಕಾಲ ಗುಣುಗುಣಿಸುವ ಹಾಡುಗಳಲ್ಲಿ ಹೇಳುತ್ತಿರುವಂತೆ ಅನಿಸುತ್ತದೆ.

ಮರುದಿನ ೨೯(ಮರಿಕೆ ಮನೆಯಲ್ಲಿ ಅನಂತನ ಚತುರ್ದಶಿ) ಮುಂಜಾನೆ ನಾನು ಮತ್ತು ಶ್ಯಾಮ ಗಂಗಾನದಿಯಲ್ಲಿ ಮನಸ್ವೀ ಮುಳುಗಿ ಸ್ನಾನ ಮಾಡಿದೆವು. ಹವೆಯು ಶೀತಲವಾಗಿತ್ತು. ನದೀ ನೀರಿನಲ್ಲಿ ಹಿಮ ವಿರಳವಾಗಿ ಹೊಗೆಯಂತೆ ಮೇಲೇರುತ್ತಿತ್ತು. ಬಹು ಮಂದಿ ಯಾತ್ರಿಕರೊಡನೆ ಸ್ನಾನ ಘಟ್ಟದಲ್ಲಿ ನಿಂತು ನೀರಿನಲ್ಲಿ ಮುಳುಗಿ ತೃಪ್ತಿಯಾಗುವಷ್ಟು ಕಾಲ ಸ್ನಾನ ಮಾಡಿ ಮೇಲೆ ಬಂದೆವು. ಅನಂತರ ಬೆಳಗಿನ ನಾಷ್ಟಾ ಪೂರೈಸಿ ೭ಗಂಟೆಗೆ ಮುಂದಿನ ಪಯಣಕ್ಕೆ ಸಿದ್ಧರಾದೆವು. G M V ಯವರು ಒದಗಿಸಿದ Innova-ಕಾರಿನಲ್ಲಿ ನಾಲ್ಕು ಮಂದಿ ಸಾವಕಾಶವಾಗಿ ಕಾಲು ನೀಡಿ ಸುಖವಾಗಿ ಪ್ರಯಾಣಿಸಿದೆವು. ಪ್ರಯಾಣ ಪ್ರಾರಂಭದ ಸಾಕಷ್ಟು ಮುಂಚಿತ, ಶ್ಯಾಮನ ಕಟ್ಟಪ್ಪಣೆಯಂತೆ ಶೈಲ ಮತ್ತು ನಾನು ವಾಂತಿ ನಿರೋಧಕ ಮಾತ್ರೆ ನುಂಗಿದೆವು. ನನ್ನ ಪೀಳಿಗೆಯವರು ಬಸ್ಸು ಕಾರುಗಳ ಪ್ರಯಾಣದಲ್ಲಿ ತಪ್ಪದೆ ಮೌಖಿಕವಾಗಿ ಹೊಟ್ಟೆ ಖಾಲಿಗೊಳಿಸುವ ಖ್ಯಾತಿ ಪಡೆದವರು. ಹಾಗೆಂದೇ ಶ್ಯಾಮನ ಅಪ್ಪಣೆಯನ್ನು ಪಾಲಿಸಿದೆವು. ಪರಿಣಾಮವಾಗಿ ಪ್ರಯಾಣ ಪ್ರಾರಂಭವಾಗಿ ಅರ್ಧ ಗಂಟೆಯೊಳಗೆ ಪ್ರಯಾಣಿಕರಿಬ್ಬರೂ ನಿಶ್ಶೇಷ್ಟಿತರಾಗಿ ಗೊರಕೆ ಹೊಡೆಯಲು ಪ್ರಾರಂಭ. ಮಾರ್ಗದ ಎರಡೂ ಬದಿಗಳಲ್ಲಿ ಕಾಣಿಸುವ ಘಟ್ಟ ಶ್ರೇಣಿಗಳು,ಜಲಪಾತಗಳು, ಪಾತಾಳದ ವರೆಗೆ ಬಾಯಿ ತೆರೆದಿರುವ ಭೀಕರ ಕಣಿವೆಗಳು,ಮುಸುಕುವ ಹಿಮ,ಉದಯಿಸುವ ಸೂರ್ಯನ ಮಾಟ ಇವೆಲ್ಲವುಗಳಿಂದ ಅವರು ವಂಚಿತರು. ಆದರೂ ಸುಖ ನಿದ್ರೆ ಅನುಭವಿಸಿದರು. ಅಲ್ಲಲ್ಲಿ ಶ್ಯಾಮನು ಕೆಮರಾ ಕ್ಲಿಕ್ಕಿಸಿ ಅಪೂರ್ವ ದೃಶ್ಯಗಳನ್ನು ಸೆರೆ ಹಿಡಿದನು. ಕಾರು ನಿಲ್ಲಿಸಿದಲ್ಲಿ ನಾವು ಕೆಳಗಿಳಿದು ಜುಳು ಜುಳು ನೀರಿನ ಶೀತಲ ಝರಿಗಳಲ್ಲಿ ಮುಖ ತೊಳೆದು ವಾಂತಿ ನಿರೋಧಕದ ಅಮಲಿನ ಜಡ ಜಾಡಿಸಿಕೊಂಡೆವು. ನಮ್ಮ ಆ ದಿನದ ಸುಮಾರು ೨೨೦ ಕಿ.ಮೀ. ದಾರಿ ಹೀಗಿದೆ : ಋಷೀಕೇಶ(ಮುನೀ ಕೀ ರೇಕಿ)-ದೇವ ಪ್ರಯಾಗ-ಶ್ರೀನಗರ-ರುದ್ರಪ್ರಯಾಗ(ಮಧ್ಯಾಹ್ನದ ಊಟದ ತಾಣ)-ಅಗಸ್ತ್ಯ ಮುನಿ-ಸೀಯಾಲ್ ಸೌರ್-ಗುಪ್ತ ಕಾಶಿ-ಕಾಲೀ ಮಠ್-ಸೋನಪ್ರಯಾಗ್,ಮತ್ತು ಕೊನೆಯಲ್ಲಿ ಗೌರೀ ಕುಂಡ, ಅದುವೇ ನಮ್ಮ ರಾತ್ರಿಯ ಠಾಣೆ. ಆ ದಾರಿಯನ್ನು G M V ಯವರು ಸೂಚಿಸಿದಂತೆ ನಾವು ಅನುಸರಿಸಿದೆವು. ನಮ್ಮ ಕಾರಿನ ಚಾಲಕ ಆರ್ಜುನ್ ಸಿಂಗ್ ಘಟ್ಟ ಪ್ರದೇಶದ ಅಗಲ ಕಿರಿದಾದ ರಸ್ತೆಯ ಕಾರು ಚಾಲನೆಯಲ್ಲಿ ನುರಿತವನು.ಅಲ್ಲದೆ ನಮ್ಮ ದಾರಿಯುದ್ದಕ್ಕೂ ಬರುವ ಪ್ರತಿಯೊಂದು ಪ್ರೇಕ್ಷಣೀಯ ಸ್ಥಳದ ಪುರಾಣೇತಿಹಾಸದ ಪ್ರಾಮುಖ್ಯತೆಯನ್ನು ಸುಲಭ ಮಾತಿನಲ್ಲಿ ನಿರರ್ಗಳವಾಗಿ ಹಿಂದಿಯಲ್ಲಿ ವಿವರಿಸಬಲ್ಲವನು. ಬೆಳಗ್ಗೆ ಕಾರು ಹತ್ತಿದ ನಂತರ, ದಿನದ ಅಂತ್ಯದ ಠಾಣೆಯ ತನಕ ಇನಿತೂ ಆಯಾಸ ಪಡದೇ ನಮಗೂ ಪ್ರಯಾಸವಾಗದಂತೆ ಆತನ ವಿವರಣೆ ಇರುತ್ತಿತ್ತು. ನಾವು ಕೇಳುವ ಪ್ರತೀ ಪ್ರಶ್ನೆಗೂ ಆತನಲ್ಲಿ ಸಮರ್ಪಕವಾದ ಉತ್ತರವಿರುತ್ತಿತ್ತು.

ರುದ್ರ ಪ್ರಯಾಗದಲ್ಲಿ ಕೇದಾರದಿಂದ ಬರುವ ಮಂದಾಕಿನಿ ಮತ್ತು, ಬದರೀನಾಥನ ಪದತಲದಿಂದ ಬರುವ ಅಲಕನಂದಾ ನದಿಗಳ ಸಂಗಮವಾಗುತ್ತದೆ

ರುದ್ರ ಪ್ರಯಾಗದಿಂದ ಸಿಯಾಲ್ ಸೌರ್ ಗೆ ಹೋಗುವಾಗ “ಅಗಸ್ತ್ಯ ಮುನಿ” ಎಂಬ ಸಣ್ಣ ಪೇಟೆಯಿದೆ. ಇಲ್ಲಿ ಮಂದಾಕಿನಿ ನದಿ ಘಟ್ಟ ಶ್ರೇಣಿಗಳ ಕಣಿವೆಯಲ್ಲಿ ಕುಣಿಯುತ್ತಾ ಹರಿದು,ಹಸಿರು ಕಾಡುಗಳ ಮಧ್ಯೆ ಸಿಲುಕಿ ಮೆಟ್ಟಲು ಮೆಟ್ಟಲಾಗಿ ಬೆಳೆ ಬೆಳೆಯಿಸಿದ ಗದ್ದೆಗಳಿಗೆ ನೀರುಣಿಸಿ ಹರಿಯುತ್ತದೆ.ಮಂದಾಕಿನಿ ತಟದಲ್ಲಿ ಹಿಂದೆ ಅಗಸ್ತ್ಯಮುನಿಗಳು ತಪಸ್ಸು ಮಾಡಿದ್ದರೆಂದು ಸ್ಥಳ ವದಂತಿ. ಅಗಸ್ತ್ಯ ಮುನಿಗಳ ದೇವಸ್ಥಾನ ಇಲ್ಲಿದೆ.

ಇಲ್ಲಿಂದ ಸುಮಾರು ೨೫ ಕಿ.ಮೀ.ಉತ್ತರಕ್ಕೆ ಹೋದಾಗ ೧೪೭೯ಮೀಟರ್ ಉನ್ನತಿಯಲ್ಲಿ ಗುಪ್ತ ಕಾಶಿಯಿದೆ.ಇಲ್ಲಿ ಶಿವ ಅಂತರ್ಧಾನವಾದನೆಂದು ಸ್ಥಳ ಪುರಾಣ. ಹಿಂದೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ವಂಶವನ್ನು ಯುದ್ಧದಲ್ಲಿ ಹತ್ಯೆ ಗೈದ ದುಃಖ ಶಮನಕ್ಕೆ ಹಾಗೂ ದೋಷ ಪರಿಹಾರಕ್ಕೆ ಪಾಂಡವರು ಪೂಜೆಗೈದಾಗ, ಅವರಿಗೆ ಪ್ರತ್ಯಕ್ಷನಾಗಲು ಒಲ್ಲದ ಶಿವ, ಕಾಶಿಯಿಂದ(ವಾರಣಾಸಿ) ಇಲ್ಲಿಗೆ ಮಾರು ವೇಷದಲ್ಲಿ ಬಂದನು. ಅವನ್ನು ಹಿಂಬಾಲಿಸುತ್ತಾ ಇಲ್ಲಿಗೆ ಬಂದ ಪಾಂಡವರು ಶಿವನ ಗುರುತು ಹಿಡಿದಾಗ, ಶಿವ ನಂದಿಯ ರೂಪದಲ್ಲಿ ಗುಹೆಯೊಳಗೆ ಗುಪ್ತನಾಗಿ ಹೋದ. ಹಾಗಾಗಿ ಇಲ್ಲಿಗೆ ಗುಪ್ತಕಾಶಿಯೆಂಬ ಹೆಸರು ಬಂದಿತು. ಮುಂದೆ ಅವನು ಕೇದಾರದಲ್ಲಿ ನಂದಿಯಾಗಿ ಕಾಣಿಸಿಕೊಂಡು ಹರಸುತ್ತಾನೆ. ಶಿವ ಮತ್ತು ಅರ್ಧನಾರೀಶ್ವರ ಇಲ್ಲಿನ ಮುಖ್ಯ ದೇವರುಗಳು. ಗಂಗೋತ್ರಿ ಮತ್ತು ಯಮುನೋತ್ರಿಗಳಿಂದ ಗಂಗಾಜಲ ಗುಪ್ತವಾಹಿನಿಯಾಗಿ ಇಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಭಕ್ತರ ನಂಬಿಕೆ. ಚೌಕುಂಬ ಗಿರಿ ಶಿಖರ ಮತ್ತು ಉಖೀ ಮಠಗಳು ಮುಂದಿನ ಕಣಿವೆಯಿಂದಾಚೆ ಬೆಳಗಿನ ಸೂರ್ಯೋದಯ ಕಾಲದಲ್ಲಿ ಬಹಳ ಸುಂದರವಾಗಿ ಇಲ್ಲಿಂದ ಕಾಣಿಸುತ್ತದೆ. ಇದು ಪೂರ್ವದಲ್ಲಿ ಸೂರ್ಯೋದಯದ ಮುಹೂರ್ತದಲ್ಲಿ ಕಾಣಿಸುವ ರಮ್ಯ ದೃಶ್ಯ. ಗುಪ್ತ ಕಾಶಿಯ ಸಮೀಪ ಉಖೀಮಠದಲ್ಲಿ (೧೩೧೧ಮೀ) ದೀಪಾವಳೀ ನಂತರ ೬ ತಿಂಗಳ ಕಾಲ ಚಳಿಗಾಲದಲ್ಲಿ ಕೇದಾರನಾಥೇಶ್ವರ ಮೂರ್ತಿಯನ್ನು ತಂದು ಅಲ್ಲಿ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ.

ಗುಪ್ತ ಕಾಶಿ

ದಾರಿಯಲ್ಲಿ ಸೋನಾಪ್ರಯಾಗದಲ್ಲಿ ನಮ್ಮ ಮುಂದಿನ ದಾರಿಯಿಂದ ಸುಮಾರು ೧೨ ಕಿ.ಮೀ.ಪಶ್ಚಿಮಕ್ಕೆ ತ್ರಿಯುಗಿ ನಾರಾಯಣವೆಂಬ ಪ್ರಸಿದ್ಧ ಸ್ಥಳವಿದೆ. ಅಲ್ಲಿನ ಅತಿ ಪ್ರಾಚೀನ ದೇವಸ್ಥಾನವನ್ನು ನೋಡಬೇಕೆಂದು ಅರ್ಜುನ್ ಸಿಂಗ್ ಸೂಚಿಸಿದನು. ಅದರಂತೇ ನಮ್ಮ ದಾರಿಯಿಂದ ೧೨ಕಿ.ಮೀ. ಪಶ್ಚಿಮಕ್ಕಿರುವ ಆ ಸ್ಥಳಕ್ಕೆ ಹೋದೆವು.ಅದು ಸುಮಾರು ೧೯೮೨ಮೀ. ಔನ್ನತ್ಯದಲ್ಲಿದೆ. ಅಲ್ಲಿ ಶಿವ-ಪಾರ್ವತಿಯರ ವಿವಾಹವಾದ ಹೋಮ ಕುಂಡವಿದೆ.ಇಲ್ಲಿ ಸದಾಕಾಲ ಅಗ್ನಿ ಉರಿಯುತ್ತಿರುತ್ತದೆ. ಶ್ಯಾಮ-ಶೈಲರು ಇಲ್ಲಿ ಪೂಜೆ ಸಲ್ಲಿಸಿಸ್ದರು.ಅಗ್ನಿಕುಂಡಕ್ಕೆ ೭ ಪ್ರದಕ್ಷಿಣೆ ಮಾಡಿ,ಪುರೋಹಿತರಿಗೆ ತೃಪ್ತಿಯಾಗುವಷ್ಟು ದಕ್ಷಿಣೆಯಿತ್ತು, ಶಿವ-ಪಾರ್ವತಿಯರಂತೆ, ನಿರಂತರ ಅನ್ಯೋನ್ಯ ದಾಂಪತ್ಯವಿರುವಂತೆ, ವರ ಪಡೆದರು. ದೇವಕಿ ಮತ್ತು ನಾನು ಪಿತೃಗಳಿಗೆ ತರ್ಪಣವಿತ್ತು, ಪೂಜೆ ಸಲ್ಲಿಸಿ ಯಥಾನು ಶಕ್ತಿ ದಕ್ಷಿಣೆ ನೀಡಿ ಋಷಿಗಳ ಆಶೀರ್ವಾದ ಪಡೆದೆವು. ಅದೊಂದು ಪುರಾತನ,ಸುಂದರ ಚಿಕ್ಕ ದೇವಸ್ಥಾನ. ಅಲ್ಲಿಗೆ ಹೋದವರು ಅಲ್ಲಿ ಸದಾಕಾಲ ಉರಿಯುತ್ತಿರುವ ಅಗ್ನಿಕುಂಡಕ್ಕೆ ಸೌದೆ ನೀಡಿ ಹರಕೆ ಅಥವಾ ಪೂಜೆ ಸಲ್ಲಿಸುವುದು ರೂಢಿ. ನಾವು ನಾಲ್ಕೂ ಮಂದಿ ಸೌದೆ ನೀಡಿ ನಮ್ಮ ಹರಕೆ ಸಲ್ಲಿಸಿ ಶಿವ-ಪಾರ್ವತಿಯರ ಕೃಪೆಗೆ ಪಾತ್ರರಾಗಿ ಧನ್ಯರಾದೆವು. ಆ ನಂತರ ನಾವು ಆ ದಿನದ ನಮ್ಮ ಕೊನೆಯ ತಾಣ ಗೌರೀಕುಂಡಕ್ಕೆ ತಲುಪಲು ಆತುರರಾಗಿದ್ದೆವು. ಆ ದಿನ (ತಾ.೨೯ ಸೆಪ್ಟೆಂಬರ್) ರಾತ್ರಿ ಸಂಜೆ ಗಂಟೆ ೭ ಕ್ಕಾಗುವಾಗ ಗೌರೀ ಕುಂಡವನ್ನು ತಲುಪಿದೆವು, ನಮ್ಮ ಠಾಣೆಯಾದ G M V ಯವರ ರೆಸಾರ್ಟಿನಲ್ಲುಳಿದೆವು.

 

ಕೇದಾರನಾಥದ ಅಂತಿಮ ಹಂತ:
ಗೌರೀ ಕುಂಡದಿಂದ ಕೇದಾರನಾಥ ಸುಮಾರು ೧೪ಕಿ.ಮೀ.ಕಾಲುದಾರಿಯ ದೂರ. ಗೌರೀಕುಂಡ ಸುಮಾರು ೧೯೮೧ಮೀ.ಉನ್ನತಿಯಲ್ಲಿದೆ. ಕೇದಾರನಾಥ ೩೫೮೧ ಮೀ. ಉನ್ನತಿಯಲ್ಲಿದೆ. ಈ ಕಾಲುದಾರಿ ಬಹಳ ಇಕ್ಕಟ್ಟು ಮತ್ತು ಕಡಿದಾಗಿದೆ. ಕುದುರೆ ಅಥವಾ ಡೋಲಿ(೪ ಮಂದಿ ಹೊರುವ ಪಲ್ಲಕಿ) ಅಥವಾ ಸಧೃಡರಿಗೆ ಕಾಲ್ನಡಿಗೆ ಇವಿಷ್ಟೇ ಕೇದಾರನಾಥನ ದರ್ಶನಕ್ಕೆ ಹೋಗಲಿಕ್ಕಿರುವ ವ್ಯವಸ್ಥೆ. ಈ ವಿಧಾನದಲ್ಲಿ ಸುಮಾರು ೪-೫ಗಂಟೆಗಳ ಕಾಲದ ಪ್ರಯಾಣ. ಗೌರೀ ಕುಂಡವನ್ನು ನಾವು ಸಂಜೆ ತಲುಪಿದಾಗ, ಅಲ್ಲಿನ ಏರು ಹತ್ತಿದಾಗ ದೇವಕಿಗೆ ಬಹಳ ಸುಸ್ತು, ಉಬ್ಬಸದ ಸ್ಪಷ್ಟ ಏದುಸಿರು.ಹಾಗಾಗಿ ಮರುದಿನ ತಾ.೩೦ರಂದು ಕೇದಾರನಾಥಕ್ಕೆ ಮೊದಲು ಯೋಜಿಸಿದಂತೆ ಕಾಲ್ನಡುಗೆ ಅಸಾಧ್ಯ. ಪರ್ಯಾಯ ,ಡೋಲಿ ಅಥವಾ ಕುದುರೆ, ಇದೂ ಬಹಳ ಕಷ್ಟ. ೪-೫ ಗಂಟೆಗಳ ಕಾಲ ಡೋಲಿಯೊಳಗಿನ ಕುಣಿತ ನಮ್ಮಂತ ವಯಸ್ಕರಿಗೆ ತ್ರಾಸದಾಯಕರವೆಂದು,  ಕೊನೆಯಲ್ಲಿ ಹೆಲಿಕಾಪ್ಟರ್ ಎಂದು ನಿರ್ಧರಿಸಬೇಕಾಗಿ ಬಂತು. ಗೌರೀ ಕುಂಡದ ಸಮೀಪ ಸೆರ್ಸಿಯಲ್ಲಿ ಹಿಮಾಲಯನ್ ಹೆಲಿ ಸರ್ವಿಸಸ್ ಲಿ.ಕಂಪೆನಿಯವರ ಹೆಲಿಪಾಡ್ ಹಾಗೂ ಪ್ರಯಾಣದ ವ್ಯವಸ್ಥೆಯಿದೆ. ನಮಗೆ ಅದರಲ್ಲಿ ಹೋಗಲು ಮೊದಲನೇ ದಿನವೇ ಟಿಕೀಟು ಖರೀದಿಸಿದೆವು. ಮಾರನೇ ದಿನ ಬೆಳಗ್ಗೆ ೭ಗಂಟೆಗೆ ನಾವಿಬ್ಬರು ವೃಧ್ಧರು ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣಿಸಿದೆವು. ಶೈಲ ಮತ್ತು ಶ್ಯಾಮ ಕಾಲ್ನಡುಗೆಯಲ್ಲಿ ಅಥವಾ ಡೋಲಿಯಲ್ಲಿ ಪ್ರಯಾಣಿಸಲು ಅಲ್ಲೇ ಉಳಿದರು. ತಾ.೨೯ರ ರಾತ್ರಿ ಮಲಗುವ ಮಂಚದಲ್ಲಿ ಚಳಿಗೆ ಹೊದೆಯಲೆಂದು ಕೊಟ್ಟ ದಪ್ಪದ ದುಪ್ಪಟಿಯ ಧೂಳಿನಿಂದ ಹಾಗೂ ಅಲ್ಲಿನ ಚಳಿಯಿಂದ ಶೈಲ ತೀವ್ರ ಅಸ್ತಮಾಗ್ರಸ್ತಳಾದಳು. ಉಸಿರಾಟ ಕಷ್ಟವಾಯಿತು. ಆಕೆಯ ಅಮ್ಮ ತನಗೆಂದು ಒಯ್ದಿದ್ದ ಔಷಧವೊಂದನ್ನು ಫೋನಿನಲ್ಲಿ ವೈದ್ಯನಾಗಿರುವ ಸಹೋದರನಲ್ಲಿ(ಡಾ.ಸತೀಶ) ಸಲಹೆ ಕೇಳಿ ಸೇವಿಸಿದಳು. ಅವರಿಬ್ಬರೂ ನಮ್ಮಿಬ್ಬರನ್ನು ಹೆಲಿಕಾಪ್ಟರಿನಲ್ಲಿ ಕಳುಹಿಸಿದ ನಂತರ ಕಾಲ್ನಡುಗೆ ಅಥವಾ ಪರ್ಯಾಯ ವ್ಯವಸ್ಥೆಯಲ್ಲಿ ಕೇದಾರಕ್ಕೆ ತಲುಪುವುದೆಂದು ನಮ್ಮ ಪೂರ್ವ ನಿಯೋಜಿತ ಯೋಜನೆ. ಆದರೆ ಶೈಲ ಆಸ್ತಮಾದ ಧಾಳಿಯಿಂದ ಮುಕ್ತಳಾಗಿರಲಿಲ್ಲ, ದೈಹಿಕವಾಗಿ ನಿಶ್ಶಕ್ತಳಾಗಿದ್ದಳು.ಈ ಕಾರಣದಿಂದ ಅವರಿಬ್ಬರೂ ಆ ದಿನ ತಮ್ಮ ಪ್ರಯಾಣವನ್ನು ರದ್ದುಗೊಳಿಸಬೇಕಾಯಿತು.

ಆಸ್ತಮಾ ಪೀಡಿತೆ ಗೌರೀಕುಂಡದಲ್ಲಿ ಅಲಕನಂದಾ ನದಿಯ ಪಕ್ಕದಲ್ಲಿ

ಆ ಹೊತ್ತಿಗಾಗುವಾಗ ನಾವಿಬ್ಬರೂ ನಮ್ಮ ೭ ನಿಮಿಷಗಳ ಹೆಲಿಕಾಪ್ಟರ್ ವಿಹಂಗಮ ಮುಗಿಸಿ ಕೇದಾರನಾಥನ ಸನ್ನಿಧಿಗೆ ತಲುಪಿದೆವು. ಗೌರೀಕುಂಡದಲ್ಲಿ ಶೈಲ ಆಸ್ತಮಾ ಪೀಡಿತೆಯಾಗಿ ಕುಳಿತಿರುವಾಗ ಕೇದಾರನಾಥದಲ್ಲಿ ನಾನು ಇನ್ನೊಂದು ಅನಿರೀಕ್ಷಿತ ಸಂಕಟಕ್ಕೊಳಗಾದೆ. ಹೆಲಿಪಾಡ್ ನಿಂದ ದೇವಸ್ಥಾನಕ್ಕೆ ಸುಮಾರು ೧/೨ಕಿ.ಮೀ. ನಡೆದು ಹೋಗಬೇಕು. ಅಲ್ಪವೇ ಏರುವ ೩ಅಡಿ ಅಗಲದ ಕಾಂಕ್ರೀಟ್ ರಸ್ತೆ ಮಂದಿರದ ವರೆಗಿದೆ. ಹೆಲಿಕಾಪ್ಟರ್ ಇಳಿದೊಡನೆ ಅಲ್ಲಿನ ವಾಯು ವಿರಳವಾಗಿರುವ ವಾತಾವರಣಕ್ಕೆ ನಾನು ಹೊಂದದಾದೆನು. ಆಮ್ಲಜನಕ ವಾಯು ಸಾಕಾಗದೇ ಉಸಿರಾಟ ಕಷ್ಟವಾಗಿ ತಲೆ ತಿರುಗುತ್ತಾ ಹೆಜ್ಜೆ ಮುಂದಿಡಲಾಗದೇ ನೆಲಕ್ಕೆ ಕುಸಿದೆ. ನನ್ನ ಈ ಅವಸ್ಥೆಯನ್ನೇ ನಿರೀಕ್ಷಿಸುತ್ತಿದ್ದ ಸಮೀಪದಲ್ಲೇ ನಿಂತಿದ್ದ, ಡೋಲಿ ಹೊರುವ ಶೆರ್ಪಾ ಆತನ ಕುರ್ಶಿಯಲ್ಲಿ ನನ್ನನ್ನು ಬಾಚಿ ತುಂಬಿದನು. ನನ್ನ ದುರವಸ್ಥೆ ನೋಡಿ ದೇವಕಿ ಕಂಗಾಲಾಗಿ ಇನ್ನೊಬ್ಬ ಶೆರ್ಪಾನ ಹೆಗಲೇರಿದಳು. ಅಂತೂ ೧೦ ನಿಮಿಷಗಳ ಕಾಲ್ನಡುಗೆಯ ದಾರಿಗೆ ರೂ.೬೦೦ ತೆತ್ತು, ಶೆರ್ಪಾಗಳ ಬೆನ್ನೇರಿ ನಾವಿಬ್ಬರೂ ದೇವಸ್ಥಾನವನ್ನು ತಲುಪಿದೆವು. ಆದರೆ ಅವರ ಕೆಲಸಕ್ಕೆ ಅದು ಅತ್ಯಲ್ಪ ಮೌಲ್ಯ. ಮನುಷ್ಯರನ್ನು ಹೊತ್ತು ಜೀವಿಸುವ ಅವರು ಕುಬ್ಜ ಕಾಯದ, ಕೃಶಾಂಗರು. ಟಿಬೆಟ್ ಜನಾಂಗದ ಮುಖಚರ್ಯೆ ಉಳ್ಳವರು. ವರ್ಷದಲ್ಲಿ ಕೇವಲ ೬ ತಿಂಗಳ ಕಾಲ ಬರುವ ಗಿರಾಕಿಗಳನ್ನು ಮೃದು ಮಾತುಗಳಲ್ಲಿ ಸ್ವಾಗತಿಸುತ್ತಾ ತಮ್ಮ ಸೇವೆಯನ್ನು ಒದಗಿಸಲು ಹಾತೊರೆಯುತ್ತಾರೆ. ಮನುಷ್ಯರನ್ನು ಹೊರುವ ಕಾಯಕದಿಂದಲೇ ಜೀವಿಸುವ ಈ ಮಂದಿಗಳನ್ನು ನೋಡುವಾಗ ಬಹಳ ಕನಿಕರವಾಗುತ್ತದೆ. ಗಿರಾಕಿಗಳು ಕೊಡುವ ಕೂಲಿಗಾಗಿ ದೈನ್ಯತೆಯಲ್ಲಿ ಹಪಹಪಿಸುವ ದೃಶ್ಯ ಅವರ ಹೆಗಲೇರಿದ ನಮಗೆ ಬಹಳ ಕಷ್ಟವೆನಿಸುತ್ತದೆ.

ಪೇಟೆಯೆಂದು ಕರೆಸಿಕೊಳ್ಳುವ ಕೇದಾರನಾಥ ನಿಜಕ್ಕೂ ಒಂದು ಹಳ್ಳಿ.ಇದು ಸುತ್ತುವರಿದಿರುವ ಪರ್ವತ ಸ್ಥೋಮಗಳ ಮಧ್ಯದ ಸಣ್ಣ ಕಣಿವೆ ಪ್ರದೇಶದಲ್ಲಿದೆ. ಭಾರತದಲ್ಲಿರುವ ಅತಿ ಪ್ರಸಿದ್ಧ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು ಇಲ್ಲಿನ ಪುರಾತನ ದೇವಸ್ಥಾನದಲ್ಲಿ ಸ್ಥಾಪಿತವಾಗಿದೆ. ದೈವೀಕ ಪ್ರಭೆ ಹೊಂದಿರುವ ಲಿಂಗವೇ ಜ್ಯೋತಿರ್ಲಿಂಗ. ಪುರಾಣಗಳು ಹೇಳುವಂತೆ ಇಲ್ಲಿನ ಜ್ಯೋತಿರ್ಲಿಂಗವನ್ನು ಸ್ಥಾಪಿಸಿ, ದೇವಸ್ಥಾನವನ್ನು ಕಟ್ಟಿಸಿದವರು ಪಾಂಡವರು. ಅವರ ಭ್ರಾತೃವರ್ಗದವರಾದ ಕೌರವರೆಲ್ಲರನ್ನು ಕುರುಕ್ಷೇತ್ರ ಯುದ್ಧದಲ್ಲಿ ಸೋಲಿಸಿ ಹತ್ಯೆಗೈದ ಪಾಪ ಪರಿಹಾರದ ಪ್ರಾಯಶ್ಚಿತ್ತವಾಗಿ ಈ ದೇವಸ್ಥಾನವನ್ನು ಕಟ್ಟಿಸಿದರೆಂದು ಪುರಾಣಗಳ ಉಲ್ಲೇಖ. ಇದು ಸಮುದ್ರ ಮಟ್ಟದಿಂದ ಸುಮಾರು ೩,೬೦೦ಮೀಟರ್(೧೧,೭೬೯ಅಡಿ) ಉನ್ನತ ಪ್ರದೇಶದಲ್ಲಿದೆ.ಇದು ಇಂದಿನ ಉತ್ತರಾಂಚಲ ರಾಜ್ಯದ ಘಡ್ವಾಲ್ ಜಿಲ್ಲೆಯಲ್ಲಿದೆ. ದೇವಸ್ಥಾನದ ಗರ್ಭಗೃಹದಲ್ಲಿ ಸ್ಥಾಪನೆಯಾಗಿರುವ ಲಿಂಗ ಸುಮಾರು ೩.೬ಮೀಟರ್(೧೨ಅಡಿ)ಸುತ್ತಳತೆ ಹೊಂದಿದೆ, ಮತ್ತು ೦.೬ಮೀಟರ್ (೨ಅಡಿ) ಎತ್ತರವಿದೆ. ಈ ಗರ್ಭಗೃಹದ ಎದುರಿಗೆ ವಿಶಾಲವಾಗಿರುವ ಸಭಾಂಗಣವಿದೆ. ಅಲ್ಲಿ ದೊಡ್ಡ ಗಾತ್ರದ ನಂದಿಯ ವಿಗ್ರಹವಿದೆ. ಅಲ್ಲದೆ ಅಲ್ಲಲ್ಲಿ ಹಲವಾರು ದೇವ,ದೇವಿಯರ ಸುಂದರ ವಿಗ್ರಹಗಳನ್ನು ಕಾಣಬಹುದು. ಪಾಂಡವರ ವಿಗ್ರಹಗಳೂ ಇಲ್ಲಿವೆ.

.

.

ಇಲ್ಲಿನ ಪೂಜಾಕ್ರಮ ಅತಿ ಸರಳ. ಲಿಂಗಕ್ಕೆ ಅಭಿಷೇಕ ಅಥವಾ ನೀರಿನಿಂದ ಸ್ನಾನ ಮಾಡಿಸುವ ಕ್ರಮವಿಲ್ಲ. ಭಕ್ತರು ತುಪ್ಪವನ್ನು ಅರ್ಪಿಸುತ್ತಾರೆ. ದಕ್ಷಿಣ ಭಾರತದ ಲಿಂಗಾಯತ ಮತದ ಗೋಸಾಯಿನ್ ಗಳು ಇಲ್ಲಿನ ಅರ್ಚಕರು. ಭಕ್ತರು ಲಿಂಗವನ್ನು ಸ್ಪರ್ಶಿಸಿ ಆಲಂಗಿಸಿಕೊಳ್ಳಲು ಅವಕಾಶವಿದೆ. ಪ್ರತಿ ವರ್ಷ ಅಕ್ಷಯಾತೃತೀಯ(ಎಪ್ರಿಲ್-ಮೇ) ದಿವಸದಂದು ದೇವಸ್ಥಾನವನ್ನು ಯಾತ್ರಿಕರ ಸಂದರ್ಶನಕ್ಕೆ ತೆರೆಯಲಾಗುತ್ತದೆ; ಮತ್ತು ದೀಪಾವಳಿಯ ಮರುದಿನದಂದು (ಸಾಧಾರಣ ನವೆಂಬರ್) ಮುಚ್ಚಲಾಗುತ್ತದೆ. ಚಳಿಗಾಲದ ೬ ತಿಂಗಳ ಕಾಲ ಉತ್ಸವ ಮೂರ್ತಿಯನ್ನು ಉಖೀಮಠವೆಂಬಲ್ಲಿಗೆ ಕೊಂಡೊಯ್ದು ಅಲ್ಲಿ ದೈನಂದಿನ ಪೂಜೆಯನ್ನು ಮಾಡುತ್ತಾರೆ.
ಕೇದಾರನಾಥ ದೇವಸ್ಥಾನದ ವಾಸ್ತು ಬಹಳ ಸುಂದರ. ಅದರ ಮಾಡು ಬಹಳ ಎತ್ತರವಾಗಿದೆ. ದೇವಸ್ಥಾನದ ಹಿಂಬದಿಯಲ್ಲಿ ಗಂಗಾ ನದಿಯ ಉಪನದಿ ಮಂದಾಕಿನಿಯು ಮಂದಗತಿಯಲ್ಲಿ ಹರಿಯುತ್ತದೆ. ಇಲ್ಲಿಗೆ ಸಮೀಪದಲ್ಲಿ ೫ ದೇವಸ್ಥಾನಗಳಿವೆ. ಅವುಗಳು ಬದ್ರಿ, ಕೇದಾರ, ಮಧ್ಯಮಹೇಶ್ವರ, ತುಂಗಾನಾಥ ಮತ್ತು ಕಲ್ಲೇಶ್ವರ; ಇವುಗಳನ್ನು ಒಟ್ಟಾಗಿ ಪಂಚ ಕೇದಾರವೆಂದು ಕರೆಯಲಾಗುತ್ತದೆ. ಮುಖ್ಯ ದೇವಸ್ಥಾನದ ಹಿಂಭಾಗದಲ್ಲಿ ಆದಿಶಂಕರರ ಗುಡಿಯಿದೆ. ಅಲ್ಲಿರುವ ಒಂದು ಗುಹೆಯೊಳಗೆ ಶಂಕರಾಚಾರ್ಯರು ಪ್ರವೇಶಿಸಿ ಅಂತರ್ಧಾನಗೊಂಡರೆಂದು ಪ್ರತೀತಿ. ಪುರಾಣಗಳಲ್ಲಿರುವಂತೆ ಲಿಂಗಾಯತರ ಮೊದಲಗುರು ಏಕೋರಾಮಾರಾಧ್ಯರವರ ಮಠ ಅಲ್ಲಿರುತ್ತಿತ್ತು.

ಕೇದಾರನಾಥದ ದೇವಸ್ಥಾನದಲ್ಲಿ ನಾವು ಪೂಜೆ ಸಲ್ಲಿಸಿ ಪುರೋಹಿತರಿಗೆ ಮೊದಲೇ ನಿಗಧಿಸಿದ ದಕ್ಷಿಣೆ ನೀಡಿ ಹೊರಬಂದೆವು. ಅಷ್ಟರಲ್ಲಿ ಆ ದಿನದ ಕಾಲ್ನಡಿಗೆಯ ಪ್ರವಾಸವನ್ನು, ಶೈಲನ ಅನಾರೊಗ್ಯದ ಪ್ರಯುಕ್ತ ರದ್ದು ಪಡಿಸಿದ ವಿಷಯವನ್ನು ಶ್ಯಾಮನ ಫೋನಿನ ಮೂಲಕ ತಿಳಿದೆವು. ಅದರಿಂದ ಗಾಬರಿಗೊಂಡು ನಮ್ಮ ಪ್ರಯಾಣವನ್ನು ಒಡನೆಯೇ ಮುಗಿಸಲೆಂದು ನಾವು ಆ ಮುಂದಿನ ಹೆಲಿಕಾಪ್ಟರಿನಲ್ಲಿ ನಾವು ಆ ರಾತ್ರಿಯುಳಿಯಲಿರುವ ರಾಮಪುರಕ್ಕೆ ಹಿಂದಿರುಗಿದೆವು. ನಮ್ಮ ಪೂರ್ವ ಯೋಜಿತ ಕೇದಾರ ಪ್ರಯಾಣವು ಆತಂಕಿತವಾದರೂ, ಶ್ಯಾಮ ಮತ್ತು ಶೈಲ ಮರುದಿನ ಹೆಲಿಕಾಪ್ಟರಿನಲ್ಲಿ ಅಲ್ಲಿಗೆ ಪ್ರಯಾಣಿಸಿದರು. ಶೈಲಳ ಅನಿರೀಕ್ಷಿತ ಅನಾರೋಗ್ಯದಿಂದ ಕೇದಾರನಾಥ ಪ್ರಯಾಣ ತೃಪ್ತಿಕರವಾಗಲಿಲ್ಲ, ರಾತ್ರಿಕಾಲ ಕೇದಾರದಲ್ಲಿ ಕಳೆಯಬೇಕೆಂಬ ಶ್ಯಾಮನ ಇಛ್ಚೆ ಪೂರೈಸಲಿಲ್ಲ.

ಕೇದಾರನಾಥ ಗಿರಿಯ ಬುಡದಲ್ಲಿ ನಿಂತು ನೋಡಿದರೆ ಭಾವನಾತ್ಮಕ ತನ್ಮಯತೆಯುಂಟಾಗುತ್ತದೆ. ನಮ್ಮ ಅಸ್ತಿತ್ವ ಮರೆತು ಶಿಖರದ ಭವ್ಯತೆಯಲ್ಲಿ ಕರಗಿ ಹೋಗುವ ಅಪೂರ್ವ ಅನುಭವ. ಸೂರ್ಯ ರಶ್ಮಿಯಲ್ಲಿ ಮಿನುಗುವ ಶಿಖರದ ಬೆಳ್ಳಿ, ಕಣಿವೆಗಳಲ್ಲಿ ಕರಗಿ ಕೆಳಗಿಳಿಯುವಂತೆ ಭಾಸವಾಗುತ್ತದೆ. ಬೆಳಕು ಬೀಳದ ಪರ್ವತ ಪ್ರದೇಶ, ಗುಪ್ತಗಂಭೀರ ಗುಹೆಗಳಂತೆ ಭಯವನ್ನುಂಟು ಮಾಡುತ್ತದೆ. ಕೇದಾರನಾಥನ ಸ್ವಪ್ನ ಲೋಕದಿಂದ ಮನಸ್ಸಿಲ್ಲದೆ ಅಕ್ಟೋಬರ್ ೧ ರ ಮಧ್ಯಾಹ್ನ ಹಿಂದಿರುಗುವ ಪ್ರಯಾಣ ಪ್ರಾರಂಭವಾಯಿತು. ನಮ್ಮ ಮುಂದಿನ ಗುರಿ ಬದರೀನಾಥ.

(ಮುಂದುವರಿಯುವುದು.)

ಕೇದಾರನಾಥದ ಹೆಲಿಪಾಡ್ ಗೆ ಹೋಗುವ ದಾರಿ

Advertisements

6 thoughts on “ಹಿಮಾಲಯದಾಹ್ವಾನ

  • raoavg,
   ನಮ್ಮ ಪ್ರವಾಸ ಸುಂದರವಾಗಿತ್ತು. ಅದು ನಮ್ಮೆಲ್ಲರ ಬಹುದಿನಗಳ ಕನಸಾಗಿತ್ತು. ಹಿಮಾಲಯದ ಆ ಮಡಿಲು ನಮ್ಮ ಹೆಚ್ಚಿನ ಪೌರಾಣಿಕ ಘಟನೆಗಳು(ಕಥೆ) ಜರಗಿದ ಸ್ಥಳ. ಜೀವನದಲ್ಲಿ ಒಮ್ಮೆಯಂತೂ ನೋಡಬೇಕಾದ ಜಾಗ.
   ಶೈಲಜ

 1. ಸರಳವಾದ ಭಾಷೆಯಲ್ಲಿ ಅನುಭವಸಿರಿಯನ್ನು ಹಂಚಿಕೊಳ್ಳುತ್ತಿರುವುದು ಖುಷಿಯೆನಿಸುತ್ತದೆ,ಈ ವಯಸ್ಸಿನಲ್ಲಿ ಶಂಕರಮಾವ ಮತ್ತು ದೇವಕಿ ಅತ್ತೆ ಈ ಕ್ಲಿಷ್ಟಕರ ಪ್ರವಾಸವನ್ನು ಕೈಗೊಂಡಿರುವುದು ಅಭಿನಂದನಾರ್ಹ.ಶೈಲಕ್ಕನ ಆರೋಗ್ಯ ಸುಧಾರಿಸಿ ಮುಂದಿನ ಪ್ರವಾಸ ನಿರ್ವಿಘ್ನವಾಗಿ ನೆರವೇರಿದೆಯೆಂದು ಆಶಿಸುತ್ತೇನೆ

  • ಜಯ,
   ಅಪ್ಪ-ಅಮ್ಮ ಈ ಪ್ರವಾಸದಲ್ಲಿ ಅರೋಗ್ಯವಾಗಿದ್ದುದು ಸಂತೋಶದ ವಿಷಯ. ಆ ರುದ್ರಭೂಮಿ ನಿಜವಾಗಿಯೂ ಪ್ರೇಕ್ಷಣೀಯ. ಮೊದಲಿನ ಕಾಲದಲ್ಲಿ ಅದನ್ನು ಕೇದಾರ ಖಂಡವೆನ್ನುತ್ತಿದ್ದರು. ಅಲ್ಲಿನ ಎಲ್ಲ ಸಣ್ಣ ಪುಟ್ಟ ಜಾಗಗಳಲ್ಲೂ ಒಂದು ಪೌರಾಣಿಕ ಕಥೆಯಿದೆ. ನಮ್ಮ ಎಲ್ಲಾ ದೇವ-ದೇವತೆಗಳ ಬಗ್ಗೆ ಉಲ್ಲೇಖವಿರುತ್ತದೆ. ಈಗ ಅದನ್ನು ಉತ್ತರಾಂಚಲ ಎನ್ನುತ್ತಾರೆ, ಹಾಗೂ ಹೆಮ್ಮೆಯಿಂದ ದೇವ ಭೂಮಿಯೆನ್ನುತ್ತಾರೆ.
   ಶೈಲಜ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s