ಪಿ. ಆರ್. ಜಯಲಕ್ಷಮ್ಮ

ಪಿ. ಆರ್. ಜಯಲಕ್ಷಮ್ಮ

ಕೆಲವೊಮ್ಮೆ ಮನುಷ್ಯನನ್ನು ಜೀವನದ ಅನುಭವಗಳು ಬೆಳೆಸುತ್ತದೋ ಅಥವಾ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಜೀವನದ ಸನ್ನಿವೇಶಗಳನ್ನು ತನ್ನ ಆವಶ್ಯಕತೆಗಳಿಗನುಸಾರವಾಗಿ ಪರಿವರ್ತಿಸಿ ತಾನೇ ಬೆಳೆಯುತ್ತಾನೋ ಎಂದು  ನಾನು ಸಂದೇಹಕ್ಕೊಳಗಾಗುತ್ತೇನೆ. ಜೀವನ ಮತ್ತು ಜೀವಿ ಒಂದನ್ನೊಂದು ಅವಲಂಬಿಸಿಕೊಂಡು ಮುಂದುವರಿಯುವುದು ಪ್ರಕೃತಿ ಧರ್ಮ.ನನಗೆ ಶ್ರೀಮತಿ ಜಯಲಕ್ಷಮ್ಮನವರನ್ನು ಲೇಖನಗಳನ್ನು ಓದಿ ಅರಿಯಲೆತ್ನಿಸಿದಾಗ ಬಂದ ಭಾವ ಇದು.ಅವರು ನಮ್ಮ ಕನ್ನಡ ನಾಡಿನ ಹಿರಿಯ ಪತ್ರಿಕೋದ್ಯಮಿ, ಕನ್ನಡದ ಜನಪ್ರಿಯ ವಾರ್ತಾ ಪತ್ರಿಕೆಯಾದ “ತಾಯಿನಾಡು”ವಿನ ಸ್ಥಾಪಕರಾದ ಪಿ. ಆರ್.ರಾಮಯ್ಯನವರ ಪತ್ನಿ. ಅವರಿಬ್ಬರ ವಿವಾಹವಾದಾಗ ಜಯಲಕ್ಷಮ್ಮನವರಿನ್ನೂ ೮ ವಯಸ್ಸಿನ ಬಾಲ್ಯದಲ್ಲಿದ್ದರು.ಅವರು ಬೆಳೆಯುತ್ತಾ ಪತಿಯಿಂದ ಮತ್ತು ತಮ್ಮ ಪಾಲಿಗೊದಗಿ ಬಂದ ಜೀವನದ ಸತ್ಯಗಳನ್ನು ಸ್ವೀಕರಿಸುತ್ತಾ ಹಿರಿದಾದರು, ಅವರ  ಬೆಳವಣಿಗೆ  ಬಹಳ ಮಂದಿಗೆ ನಿಲುಕದ ಎತ್ತರಕ್ಕಿದೆ.

ಬೆಂಗಳೂರು ನಗರಸಭೆಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ  ಶ್ರೀಮತಿ ಇಂದಿರಾಗಂಧಿ ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರೊಂದಿಗೆ
ನಮ್ಮ ವರ್ತಮಾನ ಕಾಲದಲ್ಲಿ ಹೆಣ್ಣು ಮಕ್ಕಳು ಓದುವುದು, ಸಾಧಿಸುವುದರಲ್ಲೇನೂ ವಿಶೇಷವಿಲ್ಲ, ಆದರೆ ಕಳೆದು ಹೋದ ೨೦ನೇ ಶತಮಾನದ ಪ್ರಾರಂಭದಲ್ಲಿ ಮಧ್ಯಮ ವರ್ಗದ ಸಂಪ್ರದಾಯಸ್ಥರ  ಹೆಣ್ಣು ಮಕ್ಕಳಿಗಿದ್ದ ಜೀವನೋದ್ದೇಶಗಳೆಂದರೆ; ಕೂಸು ಚಿಕ್ಕವಳಿದ್ದಾಗ ಅಕ್ಷರಾಭ್ಯಾಸ, ನಂತರ ಸ್ವಲ್ಪ ಓದು ಬರಹ, ಆದರೆ ನಂತರ ಹಾಡು ಹಸೆ ಎಂದು ಭಾವೀ ಜೀವನದ ತಯಾರಿ, ಅಡುಗೆ ಊಟದ ಕಲಿಕೆಯಂತು ತಪ್ಪಿದ್ದಲ್ಲ.ಈ ರೀತಿಯ ವಾತಾವರಣದಲ್ಲಿ ಬೆಳೆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ನಮ್ಮ ಕೆಲವು ಹಿರಿಯ ಹೆಂಗಳೆಯರು ಜೀವನದಲ್ಲಿ  ತಮ್ಮ ಸಾಮರ್ಥ್ಯವನ್ನು,ಮೇಧಾವಿತನವನ್ನು, ಬೌದ್ಧಿಕ ತಿಳುವಳಿಕೆಯನ್ನು ತೋರಿದ್ದಾರೆ. ಜಯಲಕ್ಷಮ್ಮನವರೂ ಈ ತೆರನಾದ ಹೆಂಗಳೆಯರ ಪಂಕ್ತಿಯಲ್ಲಿ ಬರುತ್ತಾರೆ. ಇವರ ಮಾತಾಪಿತೃಗಳು ಹಾಸನದ ಶಿರಸ್ತೇದಾರ್ ಭವಾನಿ ಶಂಕರ ಅಯ್ಯರ್ ಮತ್ತು ಲಕ್ಷಮ್ಮನವರು; ಈಕೆ ಈ ದಂಪತಿಗಳ ಕೊನೆಯ ಮಗಳಾಗಿ ೧೯೦೮ ರಲ್ಲಿ ಹಾಸನದಲ್ಲಿ ಹುಟ್ಟಿದರು. ಮನೆಯಲ್ಲಿ ಮುದ್ದಿನಿಂದ ಬೆಳೆದಾಕೆ; ಆಗಿನ ಸಾಮಾಜಿಕ ಸ್ಥಿತಿಗನುಗುಣವಾಗಿ ವಯಸ್ಸು ೮ ದಾಟುತ್ತಲೇ ಮದುವೆಯ ಪ್ರಯತ್ನ ನಡೆಯಿತು. ಆಗಿನ್ನೂ ಆ ಚಿಕ್ಕ ಹುಡುಗಿ ಪ್ರಾಥಮಿಕ ಶಾಲೆಯೊಳಗೆ ಕಲಿಯುತ್ತಿದ್ದಳಷ್ಟೆ ! ಇವರಿಂದ ೧೪ ವರ್ಷ ಹಿರಿಯ ವಯಸ್ಕನಾದ ರಾಮಯ್ಯನವರಲ್ಲಿ ಕನ್ಯಾ ಮಾತಾಪಿತೃಗಳು ಅನುರೂಪನಾದ ವರನನ್ನು ಕಂಡರು.

ಆದರೆ ಮುಂದೆ ಈ ಚಿಕ್ಕ ವಯಸ್ಸಿನ ಹುಡುಗಿ ಎಲ್ಲಾ ರೀತಿಯಲ್ಲಿ ಹಿರಿಯನಾಗಿದ್ದ ತನ್ನ ಪತಿಯೊಂದಿಗೆ ಸರಿ ಸಮಾನಳಾಗಿ ಕಷ್ಟಸುಖಗಳಲ್ಲಿ ಹೆಗಲನ್ನಿತ್ತು, ಅವನ ಜೀವನದ ಎಲ್ಲಾ ರಂಗಗಳಲ್ಲೂ ಸಹಧರ್ಮಿಣಿಯಾದಳು.ಇವರ ವಿವಾಹ ಕಾಲದಲ್ಲಾಗಲೇ ರಾಮಯ್ಯನವರಿಗೆ ಮೊದಲನೇ ಪತ್ನಿಯಿದ್ದರು, ಆದರೆ ಆಕೆ ಇನ್ನೂ ತೌರು ಮನೆಯಲ್ಲೇ ಇದ್ದರು.ರಾಮಯ್ಯನವರು  ಆಗಿನ ಕಾಲಕ್ಕೆ ತುಂಬಾ ವಿದ್ಯಾವಂತರು, ಮತ್ತು ಕಾಶಿಯಂತಾ ಊರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದ ಹೆಗ್ಗಳಿಕೆಯಿದ್ದವರು, ಈ ಎಲ್ಲ ಕಾರಣಗಳಿಂದ ಇವರ ವಿವಾಹ ರಾಮಯ್ಯನವರೊಂದಿಗೆ ನಡೆದಿರಬೇಕು. ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದ ಈ ಹೆಣ್ಣುಮಗಳು ಪೂಜೆ, ಪುನಸ್ಕಾರ,ಮಡಿ-ಮೈಲಿಗೆಗಳೆಲ್ಲವನ್ನೂ ಚಿಕ್ಕಂದಿನಲ್ಲೇ ಮೈಗೂಡಿಸಿಕೊಂಡರು. ಈ ಮದುವೆಯ ನಂತರವೇ ರಾಮಯ್ಯನವರ ಮೊದಲನೇ ಪತ್ನಿ ಮನೆಸೇರಿದರು. ಆಗಿನ ಕಾಲದಲ್ಲಿ ಜನ ಅವಿಭಕ್ತ ಕುಟುಂಬಗಳಲ್ಲಿದ್ದುದರಿಂದ ಸುಖ ದುಃಖಗಳಲ್ಲಿ ಮನೆಮಂದಿಗಳು ಮತ್ತು ಬಂಧುಗಳೇ  ಜೊತೆಯಾಗುತ್ತಿದ್ದರು, ಹಾಗಾಗಿ ತುಂಬಿದ ಸಂಸಾರ ಅಂದಿನವರಿಗೆ ಬೇಕೆಂದು ಬಯಸುವ ವಿಚಾರವಾಗಿತ್ತು.

ಜಯಲಕ್ಷಮ್ಮನವರು ೧೯೧೬ರಲ್ಲಿ ವಿವಾಹವಾಗಿ ರಾಮಯ್ಯನವರ ಮನೆಸೇರಿದಾಗ ಅವರಿಗಿದ್ದ ಜವಾಬ್ದಾರಿ ಬಹಳ, ಅವರು ತಮ್ಮ ಪತಿಯ ಮೊದಲ ಪತ್ನಿಯೊಡನೆ ಎಲ್ಲವನ್ನು ಹಂಚಿಕೊಂಡು  ಯಾವುದೇ ಸಂಘರ್ಷಗಳಿಲ್ಲದೇ ಬಾಳಿದರು. ಕಟ್ಟಾ ಗಾಂಧಿವಾದಿಯಾಗಿದ್ದ ರಾಮಯ್ಯನವರು ಸಣ್ಣ ವಯಸ್ಸಿನಲ್ಲಿ ತುಂಬ ಕೋಪಿಷ್ಠರಾಗಿದ್ದರು, ಆ ದಿನಗಳಲ್ಲಿ ಒಮ್ಮೆ ತಮ್ಮಿಂದ ಕಿರಿಯರಾದ ಆ  ಪತ್ನಿಯರು(ಹುಡುಗಿಯರು) ತಾಂಬೂಲ ಸವಿಯುತ್ತಾ  ನಗುತ್ತಾ ಮಾತಿನಲ್ಲಿ ಇದ್ದಾಗ “ಲೋಕದಲ್ಲಿ ಮಂದಿ ಕಷ್ಟದಿಂದ ಬಳಲುತ್ತಿದ್ದರೆ ನೀವು ನಗುತ್ತಾ ಕುಳಿತಿರಲ್ಲಾ ?”ಎಂದು ಕುಪಿತರಾಗಿ ಕಪೋಲಕ್ಕಿಟ್ಟಿದ್ದರಂತೆ ! ಅವರ ಮೊದಲನೇ ಪತ್ನಿ ಕೆಲವೇ ವರ್ಷ ಬಾಳಿದರು.  ರಾಮಯ್ಯನವರಿಗೆ ತಾಯಿ ಮೇಲೆ ಹಾಗೂ ತಮ್ಮಂದಿರ ಮೇಲೆ ತುಂಬಾ ಪ್ರೀತಿ, ಇದರಿಂದ ಕೆಲವೊಮ್ಮೆ ಆ ಪುಟ್ಟ ಹುಡುಗಿ ಜಯಲಕ್ಷಮ್ಮ ವಿನಾ ಕಾರಣ ಪತಿಯಿಂದ ಶಿಕ್ಷೆ ಅನುಭವಿಸಿದ್ದರಂತೆ. ಆದರೆ ಅತ್ತೆಗೆ ಈ ಚಿಕ್ಕ ವಯಸ್ಸಿನ ಸೊಸೆಯ  ಮೇಲೆ ತುಂಬ ಅಕ್ಕರೆ, ಪ್ರೇಮವಿತ್ತು.

ಹದಿ ವಯಸ್ಸು ದಾಟುತ್ತಲೇ (೧೯೨೪-೧೯೨೯)ಅವರು ಮೊದಲ ಎರಡು ಗಂಡು ಮಕ್ಕಳ ತಾಯಿಯಾದರು. ಆ ದಿನಗಳಲ್ಲಿಯೇ ೧೯೨೭ರಲ್ಲಿ “ತಾಯಿನಾಡು” ಪತ್ರಿಕೆ ಮೈಸೂರಿನಲ್ಲಿ ಪ್ರಾರಂಭವಾಯಿತು. ಆರ್ಥಿಕವಾಗಿ ರಾಮಯ್ಯನವರು ಬಹಳ ಕಷ್ಟದಲ್ಲಿದ್ದರು, ಜೊತೆಗೆ ಆಗಿನ ಸರಕಾರವು ರಾಮಯ್ಯನವರ ದಿಟ್ಟ ಅಭಿಪ್ರಾಯಗಳನ್ನು ವಿರೋಧಿಸಿ ಅಡಚಣೆಗಳನ್ನು ಒಡ್ಡಹತ್ತಿತು. ಇದರಿಂದಾಗಿ ರಾಮಯ್ಯನವರು ಸಂಸಾರವನ್ನು ಮತ್ತು ಪತ್ರಿಕೋದ್ಯಮನ್ನು ಬೆಂಗಳೂರಿಗೆ ಸ್ಥಳಾಂತರಿಸಿದರು. ರಾಮಯ್ಯನವರಿಗೆ ಸಂಸಾರದ ಬೆಂಬಲವಿದ್ದುದರಿಂದ ಕೆಲಸ ಮುಂದುವರಿಯಿತು. ಮನೆ ಮಂದಿಗಳೆಲ್ಲಾ ಸೇರಿ ಬರಹ,ಮುದ್ರಣ,ವಿತರಣೆ ಎಂದು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಆ ಚಿಕ್ಕ ವಯಸ್ಸಿನಲ್ಲಿ(೨೦ರ ಹರೆಯ) ಪತಿಯ ಕೆಲಸ ಕಾರ್ಯಗಳಿಗೆ ಸಹಕಾರ,ತನ್ನ ಚಿಕ್ಕ ಮಕ್ಕಳ ಲಾಲನೆ-ಪಾಲನೆ, ಮನೆಯಲ್ಲಿರುವ ಹಿರಿಯರ-ಕಿರಿಯರ ಸುಖ-ದುಃಖಗಳ ವ್ಯವಸ್ಥೆ, ಮತ್ತು ಬರವಣಿಗೆ, ಪ್ರಕಟಣೆಗಳಲ್ಲಿ ಜೊತೆಗೂಡುತ್ತಿದ್ದ  ರಾಮಯ್ಯವರ ಒಡಹುಟ್ಟಿದ ಸಹೋದರರ ವಿದ್ಯಾಭ್ಯಾಸ ಎಂದು ಕೆಲಸ, ಜವಾಬ್ದಾರಿಗಳೆಲ್ಲವನ್ನೂ ಜಯಲಕ್ಷಮ್ಮನವರು ತುಂಬಾ ಸಹನೆ ಮತ್ತು ಸಹೃದಯತೆಯಿಂದ ನಿಭಾಯಿಸಿದರು. ಅವರ ಈ ಗುಣ ಹುಟ್ಟಿನಿಂದಲೇ ಬಂದ ಬಳುವಳಿ. ರಾಮಯ್ಯನವರಿಗೆ ನಾಲ್ಕು ಜನ ಸಹೋದರರು ಮತ್ತು ಒಬ್ಬಳು ತಂಗಿ, ಆ ತುಂಬಿದ ಮನೆಯಲ್ಲಿ ಬಂದು ಹೋಗುವ ಅತಿಥಿ, ಅಭ್ಯಾಗತರಿಗೆ ಕೊರತೆಯೇ ಇರುತ್ತಿರಲಿಲ್ಲ. ಅವರ ಮನೆಯ ಕದ ಸದಾ ತೆರೆದಿರುತ್ತಿತ್ತು. ಎಲ್ಲಾ ಸಂಸಾರ ತಾಪತ್ರಯಗಳೊಂದಿಗೇ ಈ ದಂಪತಿಗಳು ತಮ್ಮ ಪತ್ರಿಕೋದ್ಯಮವನ್ನು ಬೆಳೆಸಿದರು, ತಮ್ಮಂದಿರು ಪ್ರಾಪ್ತ ವಯಸ್ಕರಾದಾಗ ಅವರ ಮದುವೆ, ತಮ್ಮ ಮಕ್ಕಳ ಮುಂಜಿ, ವಿದ್ಯಾಭ್ಯಾಸಗಳನ್ನು ಪೂರೈಸಿದರು. ೪೦ರ ದಶಕದಲ್ಲಿ ಪತ್ರಿಕೆ ತಾಯಿನಾಡು ಏಳಿಗೆ ಹೊಂದುತ್ತಾ ಅವರ ಆರ್ಥಿಕ ಬವಣೆಗಳು ತಗ್ಗಿದವು. ೧೯೩೫-೪೨ ರ ಮಧ್ಯಕ್ಕಾಗುವಾಗ ಕೊನೆಯ ಮಕ್ಕಳಾದ ರಾಮೇಶ್ವರಿ ಮತ್ತು ವಿಶ್ವನಾಥರ ಜನನವಾಯಿತು. ಇವರು ಮನೆಮಂದಿಗಳಿಗೆ ಹಾಗೂ ಸಮೀಪವರ್ತಿಗಳಿಗೆ ಅಣ್ಣ- ಅಕ್ಕಮ್ಮ ಎಂದೇ ಪರಿಚಿತರು. ಇದು ರಾಮಯ್ಯ ಮತ್ತು ಜಯಲಕ್ಷಮ್ಮನವರು ತೋರಿದ ಪ್ರೀತಿ, ಅಕ್ಕರೆಯ ಫಲವಾಗಿತ್ತು.

ರಾಮಯ್ಯನವರು ತಮ್ಮ ಹದಿ ವಯಸ್ಸಿನಲ್ಲೇ ಆ ಕಾಲದ ವಿಚಾರಗಳಿಂದ ಭಿನ್ನವಾಗಿ ಯೋಚಿಸಿದವರು, ಬೆಳೆಸಿದ ಸ್ವಂತ ತಂದೆಯ ವಿಚಾರಗಳಿಗೆ ವಿರೋಧವಾಗಿ ಕಾಶಿಗೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಪೂರೈಸಿ, ನಂತರ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಿಸಿಯೇರುತ್ತಿದ್ದಾಗ ಅದರಲ್ಲಿ ಭಾಗಿಯಾಗುವುದು ತನ್ನ ಕರ್ತವ್ಯವೆಂದು ತಿಳಿದು ಪತ್ರಿಕೋದ್ಯಮಕ್ಕೆ ಇಳಿದವರು. ಅವರು ಪ್ರವಾಹದ ವಿರುದ್ಧ ಈಸುವ ಕೆಚ್ಚು ಮತ್ತು ಧೈರ್ಯವಿದ್ದ ವ್ಯಕ್ತಿ. ಅವರ ನಡೆ, ನುಡಿ, ಆಚಾರ,ವಿಚಾರ ಎಲ್ಲವೂ ಆಗಿನ ಸಮಾಜದ ಗತಿಯಿಂದ ತೀವ್ರವಿತ್ತು.ಆದರೆ ಅರ್ಧಾಂಗಿಯಾದ ಜಯಲಕ್ಷಮ್ಮನವರು ಪತಿಯೊಂದಿಗೆ ಸಮತೂಗಿಸಿಕೊಳ್ಳುವುದು, ಸುಖದುಃಖಗಳೊಂದಿಗೆ ಸಹಭಾಗಿಯಾಗಿರುವುದು ತಮ್ಮ ಕರ್ತವ್ಯವೆಂದು ಭಾವಿಸಿದರು, ಅವರು ತಮ್ಮ ಅನುಭವಗಳ ಒಳಿತು ಕೆಡಕುಗಳನ್ನು ಗ್ರಹಿಸಿಕೊಂಡರು. ಅವರ ಪ್ರಬುದ್ಧತೆ ನಾವು ಸಾಮಾನ್ಯವಾಗಿ ಕಾಣುವಂತೆ ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿ ಬಂದುದಲ್ಲ; ಬದಲಿಗೆ ಜೀವನದ ತಿದಿಗೆ ಒಡ್ಡಿ ತಿದ್ದಿ, ತೀಡಿ ಪರಿಷ್ಕೄತವಾದುದಾಗಿತ್ತು. ಅದರಲ್ಲಿ ಜನರ ಮೇಲಿನ ವಿಶ್ವಾಸ,ಪ್ರೀತಿ,ಉಳಿದವರ ಒಳಿತಿನ ಬಗ್ಗೆ ಕಳವಳ, ಸಮಾಜಕ್ಕೆ ತನ್ನಿಂದಾದ ಉಪಕಾರ ಮಾಡುವ ನಿಸ್ವಾರ್ಥ ಸೇವೆಯ ಮನೋಭಾವ ವ್ಯಕ್ತವಾಗುತಿತ್ತು.
೧೯೪೨ರ ವೇಳೆಗಾಗುವಾಗ ಈ ದಂಪತಿಗಳು ಆರ್ಥಿಕವಾಗಿ ಸುಧಾರಿಸಿದ್ದರು, ಅವರು ತಾವು ವಾಸವಾಗಿದ್ದ ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯಿಂದ ಹೊಸದಾಗಿ ಬಸವನಗುಡಿಯಲ್ಲಿ ಕಟ್ಟಿಸಿಕೊಂಡ  ತುಂಬಿದ ಸಂಸಾರಕ್ಕೆ ಬೇಕಾದಂತಾ ವಿಶಾಲವಾದ ಮನೆಗೆ ಹೋದರು. ನಂತರ ಅವರಿಗೆ ಅಡಿಗೆ, ಮನೆಕೆಲಸಗಳಿಗೆ ಸಹಾಯಕ್ಕೆ ಸಹಾಯಕರೂ ಬಂದರು, ಇದರಿಂದಾಗಿ ಜಯಲಕ್ಷಮ್ಮನವರಿಗೆ ಬೇರೆಡೆ ಗಮನವೀಯಲು ಅವಕಾಶ, ಸಮಯ ದೊರೆಯಿತು. ತಮ್ಮ ಸಂಸಾರದ ಜವಾಬ್ದಾರಿ ಮತ್ತು ಕೆಲಸಗಳ ಮಧ್ಯೆ ಅವರು ಜನಸಂಪರ್ಕ ಬೆಳೆಸಿಕೊಂಡರು. ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಠಾಗೋರ್,ವಿಜಯಲಕ್ಶ್ಮಿ ಪಂಡಿತ್,ಸರೋಜಿನಿ ನಾಯ್ಡು ಮುಂತಾದ ದೇಶಸೇವಕರ ನಡೆ ನುಡಿಗಳಿಂದ ಪ್ರಭಾವಿತರಾಗಿ, ಜನಸಾಮಾನ್ಯರ ಹಿತ ಸಾಧನೆಗೆ ದುಡಿಯುವ ಉನ್ನತ ಧ್ಯೇಯವನ್ನು ತಮ್ಮದಾಗಿಸಿಕೊಂಡರು.

ರಾಮಯ್ಯನವರ ತಮ್ಮ ಶ್ರೀನಿವಾಸನ್ ರವರು ಹೇಳಿದಂತೆ ಜಯಲಕ್ಷಮ್ಮನವರು ವರ್ಣಾಶ್ರಮದಲ್ಲಿ ಆಳವಾಗಿ ವಿಶ್ವಾಸವನ್ನಿಟ್ಟಿರಲಿಲ್ಲ.ಫಲಾಪೇಕ್ಷೆಯಿಲ್ಲದ ಜನಸೇವೆಯ ಆದರ್ಶವನ್ನು ಹೊತ್ತು ಅವರು ಕಾಂಗ್ರೆಸ್ ಮತ್ತು ರಾಜಕೀಯವೆರಡನ್ನೂ ಪ್ರವೇಶಿಸಿದರು. ಜನರೊಡನೆ ಒಡನಾಟ ಅವರ ಬದುಕಿನ ಅಂಗವಾಯಿತು. ಅವರ ವಿಶಾಲ ಹೃದಯ ಹಾಗೂ ಆತ್ಮವಿಸ್ತಾರವೇ ಪರಮ ಜಯಕ್ಕೆ ಸಾಧನವಾಯಿತು. ಅವರು ಜೀವನವನ್ನು ಮತ್ತು ಜೀವಿಸುವುದನ್ನು ಬಹಳ ಮಹತ್ವದ್ದೆಂದು ನಂಬಿದ್ದರು. ಅವರು ಯಾವುದೇ ಸಾಧನೆಗೆ ಮನುಷ್ಯ ಪ್ರಯತ್ನ ಬಹಳ ಮುಖ್ಯ; ಹಾಗೂ ಪೌರುಷ ಪ್ರವೃತ್ತಿಯಲ್ಲಿ ನಂಬಿಕೆಯನ್ನಿಡಬೇಕು ಎನ್ನುತ್ತಿದ್ದರು.

ಮಹಿಳಾ ಕಾರ್ಪೋರೇಟರ್ ಕೆಲಸದಲ್ಲಿ ಮಗ್ನರಾಗಿ

ಜೀವನದುದ್ದಕ್ಕೂ ಬಂದೆಲ್ಲಾ ಸಮಸ್ಯೆಗಳಲ್ಲಿ ರಾಮಯ್ಯ ಜಯಲಕ್ಷಮ್ಮನವರಿಬ್ಬರೂ ಸಹಭಾಗಿಗಳಾಗಿದ್ದರೂ, ಅವರ ಗೃಹಕೃತ್ಯ ನಿಭಾಯಿಸುವುದು, ಸಂಸಾರದ ಮೇಲುಸ್ತುವಾರಿ  ಕೇವಲ ಜಯಲಕ್ಷಮ್ಮನವರದು. ಮನೆಯಲ್ಲಿ ಪ್ರಾರಂಭವಾದ ಸಾರ್ವಜನಿಕ ಕೃತ್ಯಗಳು ಅವರಿಗೆ ವಿಶಾಲಪ್ರಪಂಚವನ್ನೇ  ತೆರೆದಿಟ್ಟಿತು. ಅವರು ೧೯೫೭ರಲ್ಲಿ ಬೆಂಗಳೂರಿನ ಬಸವನಗುಡಿ ಪ್ರದೇಶದಿಂದ  ನಗರಸಭೆಗೆ ಮಹಿಳಾ ಕಾರ್ಪೋರೇಟರಾಗಿ ಚುನಾಯಿತರಾದರು. ಎರಡನೇ ಬಾರಿ ಚುನಾಯಿತರಾದಾಗ ಅವರನ್ನು ಉಪಮೇಯರಾಗಿ ನೇಮಿಸಲಾಯಿತು. ಅವರು ಈ ೮ ವರ್ಷಗಳ ಅವಧಿಯಲ್ಲಿ ಶ್ರೀಮತಿ ಲೀಲಾದೇವಿ ಪ್ರಸಾದರೊಂದಿಗೆ(ಇನ್ನೊಬ್ಬ ಮಹಿಳಾ ಕಾರ್ಪೋರೇಟರ್) ಒಡಗೂಡಿಕೊಂಡು ಬಹಳಷ್ಟು ಕೆಲಸಗಳನ್ನು ಮಾಡಿದರು. ಲೀಲಾದೇವಿಯವರು ಹೇಳಿದ ಸಣ್ಣದೊಂದು ಘಟನೆ ಜಯಲಕ್ಷಮ್ಮನವರ ಸಂಪ್ರದಾಯಬದ್ಧ ಆಚಾರಗಳ ಮೇಲೆ,ನಂಬಿಕೆಗಳ ಮೇಲೆ ಬೆಳಕು ಬೀರುತ್ತದೆ. ಬೆಳೆದು ಬಂದ ಪರಿಸರದ ಪ್ರಭಾವದಿಂದಾಗಿ ದೇವರು,ಪೂಜೆ,ಪುರಸ್ಕಾರಗಳಲ್ಲಿ ಬಹಳ ನಂಬಿಕೆಯಿದ್ದ ಜಯಲಕ್ಷಮ್ಮನವರು ಎಂದೂ ಸ್ನಾನ ಮತ್ತು ಪೂಜೆ ಮಾಡದೆ ನೀರನ್ನೂ ಸೇವಿಸಿದವರಲ್ಲ. ಇವರು  ಬೆಂಗಳೂರು ನಗರಸಭೆಗೆ ಕೆಲಸ ಮಾಡುತ್ತಿದ್ದಾಗ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸುವ ಸಂದರ್ಭ ಬಂದಿತು. ಆಗ ೬೦ರ ದಶಕದಲ್ಲಿ ದೆಹಲಿಗೆ ಹೋಗಬೇಕಾದರೆ ಈಗಿನ ಚೆನ್ನೈಯಿಂದ ದಿನವಿಡೀ ರೈಲು ಪ್ರಯಾಣ ಮಾಡಬೇಕಾಗಿತ್ತು. ಪ್ರಯಾಣಕ್ಕೆ ತಂದ ತಿಂಡಿ-ತಿನಿಸುಗಳನ್ನು ತಮ್ಮೊಂದಿಗೆ ಬಂದವರಿಗೆ ಹಂಚಿದರು, ತಾವು ಮಾತ್ರ ಸ್ನಾನ ಮಾಡಿರದಿದ್ದುದರಿಂದ ನೀರನ್ನೂ ಕುಡಿಯದೇ ಬಾಕಿಯಾದರು. ಉಪವಾಸದಲ್ಲಿದ್ದ ಜಯಲಕ್ಷಮ್ಮನವರನ್ನು ಕಂಡು ಮುಜುಗರಗೊಂಡ ಲೀಲಾಪ್ರಸಾದರು ಅವರ ಸ್ನಾನಕ್ಕೆ ನಾಗಪುರದಲ್ಲಿ ರೈಲು ನಿಂತಾಗ ವ್ಯವಸ್ಥೆ ಮಾಡಿದರು. ಸ್ನಾನ ಪೂರೈಸಿದ ಜಯಲಕ್ಷಮ್ಮನವರು ಪುನಃ ಗಾಡಿ ಹತ್ತುವಷ್ಟರಲ್ಲಿ ರೈಲು ಹೊರಟೇಬಿಟ್ಟಿತು. ಮಡಿಯಲ್ಲಿದ್ದ ಅವರನ್ನು ಮೇಲೆಳೆದುಕೊಳ್ಳಲು ಆಸಾಧ್ಯವಾದುದರಿಂದ ಲೀಲಾಪ್ರಸಾದರು ರೈಲು ಹೊರಡಲು ಹಸುರು ನಿಶಾನೆ(ಪತಾಕೆ) ಹೊತ್ತು ನಿಂತಿದ್ದ ರೈಲ್ವೇಗಾರ್ಡನ ಕೈಸೆಳೆದು ಕೆಂಪು ನಿಶಾನೆಯನ್ನು ಎತ್ತಿ ಹಿಡಿದು ರೈಲು ನಿಲ್ಲುವಂತೆ ಮಾಡಿದರು. ಇದರಿಂದಾಗಿ ಇವರಿಬ್ಬರೂ ರೈಲ್ವೇ ಅಧಿಕಾರಿಗಳ ಅಸಮಾಧಾನಕ್ಕೊಳಗಾದರೂ ಈ ಘಟನೆಯನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತಾಯಿತು. ಹೀಗಿತ್ತು ಮಡಿಯಿಂದಾದ ಆವಾಂತರ ! ಈ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅವರೆಷ್ಟೋ ಕೊಳೆಗೇರಿ, ಸಣ್ಣ ಊರು, ಹಳ್ಳಿಗಳಿಗೆ ಭೇಟಿಯಿತ್ತು, ಜನರನ್ನು ಸಂಪರ್ಕಿಸಬೇಕಿತ್ತು.ಆಗೆಲ್ಲಾ ಅವರು ದಿನವಿಡೀ ಕೇವಲ ಎಳೆನೀರೊಂದನ್ನು ಮಾತ್ರ ಸೇವಿಸುತ್ತಿದ್ದರು, ರಾತ್ರಿಯಲ್ಲಿ ಎಲ್ಲಾದರೂ ತಂಗಿದರೆ ಸ್ವತಃ ತಾವೇ ಬೇಯಿಸಿ ಉಣ್ಣುತ್ತಿದ್ದರು. ಅವರೆಂದೂ ತಮ್ಮ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರಲಿಲ್ಲ, ತಮ್ಮ ನಿಲುವು, ಯೋಚನೆಗಳನ್ನು ಬದಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ನಂಬಿಕೆ, ವಿಚಾರಧಾರೆ ಕೆಲವೊಂದು ಕಾಲ ಹಾಗೂ ಅವರ ಜೀವನಾನುಭವಗಳಿಂದ ಬದಲಾದರೂ ಪ್ರತ್ಯೇಕ-ಪ್ರತ್ಯೇಕವಾಗಿ ವಿಂಗಡಿತವಾಗಿದ್ದವು. ಕ್ರಾಂತಿಕಾರೀ ವಿಚಾರಗಳನ್ನು ಅವರು ಒಪ್ಪದಿದ್ದರೂ ಅವರು ವಿಧವಾ ವಿವಾಹ,ದಾಂಪತ್ಯ ವಿಚ್ಛೇದನ, ಮರುವಿವಾಹಗಳು ಎದುರು ನಿಂತಾಗ ಅದನ್ನು ಖಂಡಿಸುತ್ತಿರಲಿಲ್ಲ, ಸ್ವೀಕರಿಸುತ್ತಿದ್ದರು ಮತ್ತು ಕೈಲಾದ ಸಹಾಯಕ್ಕೂ ಸಿದ್ಧರಿರುತ್ತಿದ್ದರು.

 

ನಿರ್ಗತಿಕ ಹೆಣ್ಣುಮಕ್ಕಳಿಗೆಂದು ಪ್ರಾರಂಭಿಸಿದ ಅಬಲಾಶ್ರಮ, ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ  ನಡೆಸುತ್ತಿದ್ದ ಗೋಕುಲಂ ಗಾರ್ಡನ್ ಶಾಲೆ, ಅಶಕ್ತ ಪೋಷಕ ಸಭಾ ಇವು ಕೆಲವೊಂದು ಅವರು ಕಟ್ಟಿದ ಸಂಘ-ಸಂಸ್ಥೆಗಳು. ಅವರು ಎಷ್ಟೋ ಬಾರಿ ಈ ಸಂಸ್ಥೆಗಳಿಗೆ ತಮ್ಮ ಸ್ವಂತ ಸಂಪತ್ತನ್ನು ವಿನಿಯೋಗಿಸಿ ಮನೆಯವರ ವಿರೋಧವನ್ನು ಕಟ್ಟಿಕೊಂಡದ್ದೂ ಇದೆ. ಅಲ್ಲಿನ ಮಕ್ಕಳು, ಹೆಣ್ಣುಮಕ್ಕಳು ಅವರಿಗೆ ತಮ್ಮ ಸ್ವಂತದವರೆಂಬ ಭಾವನೆಯಿತ್ತು, ಅವರು ಬಡವ ಬಲ್ಲಿದರೆಂಬ ಬೇಧವಿಲ್ಲದೇ ಎಲ್ಲರನ್ನೂ ಪ್ರೀತಿಸಿದರು. ರಾಮಯ್ಯನವರು ರಾಜಕೀಯದಲ್ಲಿ ಕ್ರಿಯಾಶೀಲರಾಗಿದ್ದಾಗ  ಜಯಲಕ್ಷಮ್ಮನವರು ತಾವಿದ್ದ ಬಸವನಗುಡಿ ಪ್ರದೇಶದ ಕೊಳೆಗೇರಿಯಲ್ಲಿ ಅಲ್ಲಿನ ಮಕ್ಕಳಿಗೆಂದು ಶಾಲೆಯೊಂದು ಪ್ರಾರಂಭಿಸಿದರು.  ಅವರ ನಿರಂತರ ಭೇಟಿ, ಮತ್ತು  ಸಂಪರ್ಕಗಳಿಂದ ಜನರ ಮನವೊಲಿಸಿ  ಮಕ್ಕಳನ್ನು ಶಾಲೆಗೆ ಕಳುಹುವಂತೆ ಮಾಡುವುದರಲ್ಲಿ ಜಯಶೀಲರಾದರು. ನಂತರ ಈ ಶಾಲೆಯಲ್ಲಿ ಮಕ್ಕಳು ಕ್ರಮೇಣ ಮುಂದುವರಿದು ಪ್ರಾಥಮಿಕ ವಿದ್ಯಾಭ್ಯಾಸದಿಂದ ಮೇಲಿನ ಹಂತಕ್ಕೆ ಮುಂದುವರಿಯಲೂ ವ್ಯವಸ್ಥೆ ಮಾಡಲಾಯಿತು.

ಅವರ ಕೊನೆಯ ದಿನಗಳಲ್ಲಿ ಕಣ್ಣಂತಿದ್ದ ಗೋಕುಲಮ್ ಗಾರ್ಡನ್ ಶಾಲೆ

ಅವರು ಯಾವುದೇ ಕೆಲಸವನ್ನು ಹಿಡಿದರೂ ಅದನ್ನು ಕೊನೆಯೆತ್ತಿಸದೇ ಬಿಡುತ್ತಿರಲಿಲ್ಲ. ಅವರ ಎಷ್ಟೋ ಸಂಬಂಧಿಗಳ ಮಕ್ಕಳಿಗೆ ಮನೆಯಲ್ಲಿ ಆಶ್ರಯ ಕೊಟ್ಟು, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದ್ದರು. ಕೊನೆಯ ಮಕ್ಕಳು ರಾಮೇಶ್ವರಿ ಮತ್ತು ವಿಶ್ವನಾಥರು ಬೆಳೆಯುತ್ತಿದ್ದಾಗ ಅವರು ಮನೆಯಲ್ಲಿ ಉಪಸ್ಥಿತರಿದ್ದ ಬೇರೆ ಹಿರಿಯರನ್ನವಲಂಬಿಸುತ್ತಿದ್ದರು, ಆ ಕಾಲಕ್ಕಾಗುವಾಗಲೇ ಜಯಲಕ್ಷಮ್ಮನವರು ಸಾರ್ವಜನಿಕ ಕೆಲಸಗಳಿಗೆ ಇಳಿದಿದ್ದರು. ಆಗಲೆಲ್ಲಾ ಅವರು ಹೆಚ್ಚಾಗಿ ಬೆಳಗ್ಗೆ ಮನೆಯಿಂದ ಹೊರಟರೆ ರಾತ್ರೆಗಾಗುವಾಗಲೇ ಹಿಂದಕ್ಕೆ ಬರುತ್ತಿದ್ದರು. ಅವರ ಅದ್ಭುತ ಗ್ರಹಣಶಕ್ತಿ ಅವರೊಂದಿಗೆ ಕೆಲಸ ಮಾಡಿದ ಮಂದಿಗಳಿಗೆ ಅನುಭವಕ್ಕೆ ಬಂದಿದೆ. ಅವರ ಚೈತನ್ಯಶೀಲ ಪ್ರವೃತ್ತಿ ಯಾವುದೇ ಹೊಸ ವಿಚಾರವನ್ನು ನೋಡಿದಾಗಲೂ ಇದರಿಂದ ನಾಲ್ಕು ಮಂದಿ ಹೇಗೆ ಉಪಯೋಗ ಪಡೆಯಬಹುದೆಂದು ವಿಚಾರ ಮಾಡುತ್ತಿತ್ತು.


ದಂಪತಿಗಳಿಬ್ಬರೂ ಕಟ್ಟಿ ಸ್ವತಃ ಬೆಳೆಸಿದ ತಾಯಿನಾಡು ಪತ್ರಿಕೆ ಹಸ್ತಾಂತರವಾದಾಗ ತುಂಬಾ ನೊಂದರು, ಆ ನಂತರ ಅವರನ್ನು ಕಾಡಿದ ಸಂಕಷ್ಟಗಳ ಸಂದರ್ಭದಲ್ಲಿ ಅವರಿಗೆ ಸಾಂತ್ವಾನ ನೀಡಿದ ವಿಚಾರವೆಂದರೆ,  ಗಾಂಧೀಜಿಯವರು ರಾಮಯ್ಯನವರ ಡೈರಿಯಲ್ಲಿ ಬರೆದ ಭಗವದ್ಗೀತೆಯ ಈ ಕೆಳಗಿನ ಸಾಲುಗಳು.
ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ !
ತತೋ ಯುದ್ಧಾಯ ಯುಜಸ್ವ ನೈವಂ ಪಾಪಮವಾಪ್ಸ್ಯಸಿ !
ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧದಲ್ಲಿ ತೊಡಗಿದಾಗ, ನೀನು ಯಾವುದೇ ಪಾಪಗಳಲ್ಲೂ  ಪಾಲ್ಗೊಳ್ಳದೇ ಮುಕ್ತನಾಗುತ್ತೀಯ.
೧೯೭೧ರಲ್ಲಿ ರಾಮಯ್ಯನವರ ನಿಧನರಾದಾಗ ಅವರು ದುಃಖ ಪಟ್ಟರೂ ಕಂಗೆಡಲಿಲ್ಲ.
ದಂಪತಿಗಳಿಬ್ಬರನ್ನು ಹತ್ತಿರದಿಂದ ಬಲ್ಲವರು ಜಯಲಕ್ಷಮ್ಮನಂತ ಪತ್ನಿಯಿದ್ದುದರಿಂದ ರಾಮಯ್ಯನವರು ಇಷ್ಟೊಂದು ಕೆಲಸ ಮಾಡುವಂತಾಯಿತೋ, ಅಥವಾ ರಾಮಯ್ಯನವರಂತ ಪತಿಯಿದ್ದುದರಿಂದ ಜಯಲಕ್ಷಮ್ಮ ಇಂತಾ ಸಾಧನೆ ಮಾಡುವಂತಾಯಿತೋ ಎಂದು ಉದ್ಘಾರವೆತ್ತಿದ್ದಾರೆ. ಅವರಿಬ್ಬರಲ್ಲೂ ಅಸಾಧಾರಣ ಚೈತನ್ಯವಂತೂ ಅಡಗಿತ್ತು.   ಅವರು ತಮ್ಮ ಬದರಿಕಾಶ್ರಮದ ಯಾತ್ರೆಯ ನಂತರ ಸ್ವಂತ ಅನುಭವಗಳನ್ನಾಧರಿಸಿ ವಿವರವಾಗಿ ಪುಸ್ತಕವನ್ನು ಬರೆದರು. ಹಾಗೇ ಅವರು ತಮ್ಮ ವಿಚಾರ ಧಾರೆಗಳನ್ನು ಪ್ರಸ್ತುತ ಪಡಿಸಿ ಲೇಖನಗಳನ್ನು, ತಮಗೆ ತಿಳಿದಿದ್ದ ಪದ್ಯ, ಶ್ಲೋಕಗಳನ್ನು ಪುಸ್ತಕ ರೂಪದಲ್ಲಿ ಬರೆದು ಪ್ರಕಟಿಸಿದ್ದಾರೆ. ಇವರಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಭಿರುಚಿಯಿತ್ತು. ವೇದಿಕೆಯ ಮೇಲೆ ವೇಷ ಧರಿಸಿ ಅವರು ನಾಟಕವನ್ನಾಡಿದ್ದಾರೆ. ಅವರಿಗೆ ತಾವು ಹೆಚ್ಚಿನ ವಿದ್ಯಾಭ್ಯಾಸ ಹೊಂದಲಿಲ್ಲ ಎಂಬ ಕೊರಗು ಒಳಗಿಂದ ಇತ್ತು. ತಮಗೆ ತಿಳಿದ ಇಂಗ್ಲಿಷ್ ಭಾಷೆಯಲ್ಲಿ ಅವರು ಸಂಭಾಷಿಸುತ್ತಿದ್ದರು. ೧೯೬೩ರಲ್ಲಿ ಜಯಲಕ್ಷಮ್ಮನವರ ಕೆಲಸಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರ ಪ್ರಶಸ್ತಿಯಿತ್ತು ಗೌರವಿಸಿತು. ಅವರ ಅನವರತ ದುಡಿಮೆಯಿಂದಾಗಿ ಅರೋಗ್ಯ ಕ್ಷೀಣಿಸಿತು, ೧೯೯೧ರ ಎಪ್ರಿಲ್ ೨೦ರಂದು ಅವರು ತಮ್ಮೆಲ್ಲಾ ಕೆಲಸಗಳಿಗೆ ಪೂರ್ಣ ವಿರಾಮ ಹಾಕಿದರು.  ೨೦೦೮ ರ ಜುಲೈ ೬ ರಂದು ಅವರ ೧೦೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಟುಂಬದವರು ಮತ್ತು ಅಭಿಮಾನಿಗಳು ಒಟ್ಟುಗೂಡಿ ಶತಮಾನೋತ್ಸವವನ್ನಾಚರಿಸಿದರು. ಆ ಸಂದರ್ಭದಲ್ಲಿ  ಅವರ ನೆನಪುಗಳನ್ನು ಪ್ರಸ್ತುತ ಪಡಿಸಿದ “ಸ್ಮರಣೀಯ ಚೇತನ”ವೆಂಬ ಪುಸ್ತಕವೊಂದನ್ನು ಬಿಡುಗಡೆಗೊಳಿಸಲಾಯಿತು.

ಈ ಲೇಖನವನ್ನು ಬರೆಯಲು ಮಾಹಿತಿಗಳನ್ನು ಒದಗಿಸಿದ ಶ್ರೀಯುತ ಪಿ.ಆರ್.ವಿಶ್ವನಾಥರಿಗೆ( ರಾಮಯ್ಯನವರ -ಜಯಲಕ್ಷಮ್ಮನವರ ಕೊನೆಯ ಮಗ-ಪ್ರಸ್ತುತ ಬೆಂಗಳೂರು ನಗರ ನಿವಾಸಿ) ನನ್ನ ಕೃತಜ್ಞತೆಗಳು.

http://www.tainadu.blogspot.com/

ಈ ಮೇಲಿನ ಲಿಂಕ್ ಉಪಯೋಗಿಸಿ ಜಯಲಕ್ಷಮ್ಮನವರ ಜೀವನ ಮತ್ತು ಕೆಲಸಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.

Advertisements

4 thoughts on “ಪಿ. ಆರ್. ಜಯಲಕ್ಷಮ್ಮ

 1. ಮಾಡಿದ ಕೆಲಸದ ಬಗ್ಗೆ ವಿಪರೀತ ಗದ್ದಲ ಮಾಡಿ’ತಾರಾಮೌಲ್ಯ’ ಗಳಿಸುವ ಗೊಡವೆಗೆ ಹೋಗದೆಯೇ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ ಇಂಥ ಇನ್ನೆಷ್ಟು ಮಂದಿ ಆಗಿಹೋಗಿದ್ದಾರೋ. ಇದ್ದಾರೋ? ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • raoavg,
   ನಾನು ಜಯಲಕ್ಷಮ್ಮನವರ ಮೇಲಿನ ಬರಹದಿಂದ ತುಂಬ ಪ್ರಭಾವಿತಳಾದೆ. ಆ ಕಾಲದಲ್ಲಿ ಹೆಣ್ಣು ಮಗಳೊಬ್ಬಳು ಅಷ್ಟು ಕಲಸ ಮಾಡಬೇಕಿದ್ದರೆ ಸಾಹಸಿಯೇ ಇರಬೇಕು.ಅಲ್ಲದೇ ಅವರ ಕೊಡುಗೆಯೂ ಸಮಾಜಕ್ಕೆ ಹಿರಿಯದು.ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
   ಶೈಲಜ

 2. Dear Ms Shailaja

  thank you very much for your detailed article on our mother.. You seem to have understood her mental makeup . WE knew she was a great lady but we could never express our feelings properly when she was alive. As I wrote in one of my articles on her , the most important characteristic she had was her compassion. Added to it she was proactive and thus could achieve her goals in her life. Thanks again ( I am not sure that teh cpation for one of the pics is correct. I do not thinks it was Smt Nijalingappa. )
  namskaragalu

  Vishwanath

  • ವಿಶ್ವನಾಥರಿಗೆ,
   ನಾನು ನನ್ನ ಎಲ್ಲ ವಿವರಗಳಿಗೆ ಮತ್ತು ಚಿತ್ರಗಳಿಗೆ ನೀವಿತ್ತ ಪುಸ್ತಕ ಮತ್ತು ಫೋಟಗಳನ್ನು (ಬ್ಲಾಗಿನಲ್ಲಿದ್ದ) ಆಧರಿಸಿದೆ. ಅದು ತಪ್ಪಿದ್ದಲ್ಲಿ ನಾನು ಬರೆದ ವಿವರವನ್ನು ಅಳಿಸಿಬಿಡುತ್ತೇನೆ. ಅವರು ನಿಮ್ಮ ತಾಯಿಯವರು ಕೇವಲ ಮನೆಯೊಳಗಿನ ಹಿರಿಯ ವ್ಯಕ್ತಿಯಾಗಿರಲಿಲ್ಲ, ಸಮಾಜಕ್ಕೂ ಅವರಿತ್ತ ಕೊಡುಗೆಗಳು ಬಹಳ ಅಪರೂಪದವಾಗಿದ್ದವು.
   ಶೈಲಜ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s