ಪಾಲಹಳ್ಳಿ ರಾಮಯ್ಯನವರು “ತಾಯಿ ನಾಡು ” ಕನ್ನಡದ ಜನಪ್ರಿಯ ವಾರ್ತಾಪತ್ರಿಕೆಯ ಸ್ಥಾಪಕರು

ಕಾಲಗತಿಯಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ,ಅವರಲ್ಲಿ ಕೆಲವರೇ ತಮ್ಮ ವ್ಯಕಿತ್ವ, ಕೆಲಸಗಳಿಂದ ತಾವು ಮೇಲಕ್ಕೇರುತ್ತಾರಲ್ಲದೇ, ತಮ್ಮ ಸಂಪರ್ಕಕ್ಕೆ ಬಂದ ಮಂದಿಗಳ ಜೀವನದಲ್ಲೂ ಪ್ರಭಾವ ಬೀರುತ್ತಾರೆ. ಇನ್ನು ಕೆಲವರು ತಮ್ಮ ಅಪರೂಪವಾದ ವ್ಯಕ್ತಿತ್ವ,ಬೌದ್ಧಿಕ ಸಾಮರ್ಥ್ಯ,ಧ್ಯೇಯಗಳಿಂದ ತಾವು ಬಾಳಿ, ಉಂಡ ನೆಲಕ್ಕೆ ,ತಮ್ಮ ಸಮಾಜಕ್ಕೆ ಕೊಡುಗೆಯನ್ನಿತ್ತು  ತೆರಳುತ್ತಾರೆ. ಇಂತಹ ಹಿರಿಜೀವಿಗಳಲ್ಲೊಬ್ಬರು ಪಾಲಹಳ್ಳಿ ರಾಮಯ್ಯನವರು; ಅವರ ಪತ್ನಿ ಶ್ರೀಮತಿ ಜಯಲಕ್ಷಮ್ಮನವರು ಅವರಿಗೆ ಅನುರೂಪರಾಗಿದ್ದವರು.ಈ ದಂಪತಿಗಳಿಬ್ಬರೂ ಕನ್ನಡಮ್ಮನ ಸೇವೆ  ಮಾಡಿದ ಮತ್ತು ತಾಯಿ ನಾಡಿಗಾಗಿ ದುಡಿದ (ದೇಶದ ಸ್ವಾತಂತ್ರ್ಯಕ್ಕೆ ದುಡಿದವರು) ಗೌರವಾನ್ವಿತ ವ್ಯಕ್ತಿಗಳು.

ಜೀವನದ ಸಂಜೆಯಲ್ಲಿ ಸಂತೃಪ್ತ ರಾಮಯ್ಯನವರು ಮತ್ತು ಜಯಲಕ್ಷಮ್ಮನವರು

ಸ್ವಾತಂತ್ರ್ಯಪೂರ್ವದ ಮೈಸೂರು ಸಂಸ್ಥಾನದಲ್ಲಿ ಜನಜಾಗೃತಿಯನ್ನು ಉಂಟುಮಾಡಲು ಪತ್ರಿಕೆ ತಾಯಿನಾಡು ಜನ್ಮವೆತ್ತಿತು, ಇದು ಕನ್ನಡದ ಜನಪ್ರಿಯ ವಾರ್ತಾಪತ್ರಿಕೆ, ಪಾಲಹಳ್ಳಿ ರಾಮಯ್ಯನವರು ಅದರ ಸ್ಥಾಪಕರು. ಇವರು ಕಟ್ಟಾಗಾಂಧೀವಾದಿ, ವಿದ್ಯಾರ್ಥಿಯಾಗಿದ್ದಾಗ ಗಾಂಧೀಜಿಯ ಆದರ್ಶವನ್ನು ಸಾಧಿಸುವುದಕ್ಕಾಗಿ ವಾರಣಾಸಿಯಲ್ಲಿ(ಕಾಶಿ) ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಧೀರ ವ್ಯಕ್ತಿ.  ರಾಮಯ್ಯನವರು ಮತ್ತು ಜಯಲಕ್ಷಮ್ಮನವರು ತಮ್ಮ ಕುಟುಂಬದವರನ್ನೆಲ್ಲ ಒಡಗೂಡಿಸಿಕೊಂಡು ತಾಯಿನಾಡು ಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ಅವರೀರ್ವರು ತಾವು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡದ್ದಲ್ಲದೇ, ಪತ್ರಿಕಾ ಮಾಧ್ಯಮದಿಂದ ಜನರಲ್ಲಿ ದೇಶಪ್ರೇಮ, ಜಾಗೃತಿಯನ್ನು ಮೂಡಿಸಿದರು. ರಾಮಯ್ಯನವರು ಕೆಲ ಸಮಯ ಜೈಲುವಾಸವನ್ನು ಕೂಡಾ ಅನುಭವಿಸಿದರು. ದಂಪತಿಗಳಿಬ್ಬರು ಹತ್ತಿರದವರಿಗೆ ಅಣ್ಣ ಮತ್ತು ಅಕ್ಕಮ್ಮ ಎಂದೇ ಪರಿಚಿತರು. ಆ ಹೆಸರಿಗೆ ಅನ್ವರ್ಥಕರಾಗಿ ಹಿರಿಯಣ್ಣನಾಗಿ, ದಾರಿದೀಪವಾಗಿ, ಒಡನಾಡಿಗಳನ್ನು ವಾತ್ಸಲ್ಯದಿಂದ ನಡೆಸಿಕೊಂಡರು. ಇವರಿಬ್ಬರ ಕಾರ್ಯವೈಖರಿ ಪರಸ್ಪರ ಭಿನ್ನವಾಗಿದ್ದು ಒಂದಕ್ಕೊಂದು ಪೂರಕವಾಗಿತ್ತು.

ರಾಮಯ್ಯನವರ ಪೂರ್ವಜರು ಶ್ರೀರಂಗಪಟ್ಟಣದ ಹತ್ತಿರದ ಪಾಲಹಳ್ಳಿ ಎಂಬ ಸಣ್ಣ ಊರಿನವರು. ತಂದೆ ರಾಮಸ್ವಾಮಯ್ಯ ತಮ್ಮ ಸಂಸಾರದ ಹೊಟ್ಟೆ, ಬಟ್ಟೆಗಾಗಿ ಮೈಸೂರಿನಲ್ಲಿ ಮರದ ವ್ಯಾಪಾರಿಯೊಬ್ಬನಲ್ಲಿ ಉದ್ಯೋಗ ಮಾಡುತ್ತಿದ್ದರು.ಹಿರಿ ಮಗ  ರಾಮಯ್ಯನವರಿಗೆ (೧೮೯೪ ರಲ್ಲಿ ಇವರ ಜನನ) ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲೇ ನಡೆಯಿತು. ತಂದೆ ಕಟ್ಟಾಸಂಪ್ರದಾಯವಾದಿಗಳು, ಧರ್ಮಬೀರು; ಅವರಿಗೆ ಮಗನ ಯೋಗ್ಯತೆಗಿಂತ  ಜ್ಯೊತಿಷಿ ಹೇಳಿದ ಅವನ ಭವಿಷ್ಯವಾಣಿಯ ಮೇಲೆ ನಂಬಿಕೆ.   ಆದರೆ ಮಗ ತಂದೆಯ ಒಪ್ಪಿಗೆಯಿಲ್ಲದೇ, ಮನೆಯಲ್ಲಿ ಅರುಹದೇ, ದುಡ್ಡು ತೆಗೆದುಕೊಂಡು ೧೯೧೩ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಯುತ್ತಲೇ ವಾರಣಾಸಿಯತ್ತ ವಿದ್ಯಾಭ್ಯಾಸಕ್ಕೆಂದು ಹೊರಟು ಹೋದ, ಅಲ್ಲಿ ರಾಮಯ್ಯನಿಗೆ ಇಡಬೇಕಾದ ಪ್ರತಿಹೆಜ್ಜೆಗೂ ಬಹಳ ಕಷ್ಟಪಡಬೇಕಾಗಿ ಬಂತು. ರಾಮಯ್ಯನವರು ತೋರಿದ ಈ ಧೈರ್ಯ, ದಿಟ್ಟತನ,ಛಲ ಮತ್ತು ಆತ್ಮವಿಶ್ವಾಸ ಜೀವನದುದ್ದಕ್ಕೂ ಗೋಚರವಾಗುತ್ತದೆ.  ಮುಂದೆ ಇದೇ ಸಾಹಸ ಪ್ರವೃತ್ತಿಯಿಂದ  ಜೀವನದ ಎಲ್ಲಾ ಸಂಗ್ರಾಮಗಳನ್ನು ಹೋರಾಡಿ ಗೆಲ್ಲುವಂತಾಯಿತು.

ಕಾಶೀ ಸೆಂಟ್ರಲ್ ಕಾಲೇಜಿನಲ್ಲಿ ರಾಮಯ್ಯನವರ ಬಿ.ಎಸ್.ಸಿ. ವಿದ್ಯಾಭ್ಯಾಸ ೧೯೧೩-೧೯೨೦ ರ ಕಾಲದಲ್ಲಿ  ನಡೆಯಿತು. ಅಲ್ಲಿ ಓದುತ್ತಿದ್ದ ಸಂದರ್ಭದಲ್ಲೇ  ಅವರಿಗೆ ಸ್ವಾತಂತ್ರ್ಯ ಚಳವಳಿಯ ಅರಿವು, ಚಳವಳಿಕಾರರ ಸಂಕಷ್ಟಗಳು, ಅವರ ಮಹತ್ತರವಾದ ತ್ಯಾಗಗಳು ತಿಳಿದವು. ಅವರಿದ್ದ ವಿದ್ಯಾಸಂಸ್ಥೆಯ ಉಪ ಕುಲಪತಿಗಳು ಮದನ ಮೋಹನ ಮಾಲವೀಯರು. ಆಗಷ್ಟೇ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ತಮ್ಮ ದೇಶಕ್ಕೆ ಹಿಂದಿರುಗಿ, ದೇಶದ ಪರಿಸ್ಥಿತಿಯ ಬದಲಾವಣೆಗೆ ಶ್ರಮಿಸಲು ತೊಡಗಿದ್ದರು. ಗಾಂಧೀಜಿ ಭಾರತದಾದ್ಯಂತ ತಮ್ಮ ಸಹಚರರೊಡನೆ ಸಂಚರಿಸಿ, ಜನಮನದಲ್ಲಿ ಜಾಗೃತಿ, ದೇಶಪ್ರೇಮವನ್ನು ಎಚ್ಚರಗೊಳಿಸುತ್ತಿದ್ದರು. ಇಂತಹ ಸಭೆಯೊಂದರಲ್ಲಿ ಗಾಂಧೀಜಿಯ ಭಾಷಣವನ್ನು ಕೇಳಿ  ರಾಮಯ್ಯನವರ ಭವಿಷ್ಯದ ಯೋಜನೆಗಳು ಬದಲಾದವು. ಅವರು ತಾವು ಓದುತ್ತಿದ್ದ ರಾಸಾಯನಶಾಸ್ತ್ರ  ಸ್ನಾತಕೋತ್ತರ (Chemistry M.Sc )ಪದವಿಯನ್ನು (೧೯೨೦ ರಲ್ಲಿ) ೨ನೇ ವರ್ಷದಲ್ಲಿ ಕೊನೆಯ ಪರೀಕ್ಷೆಗೆ ಮೊದಲೇ ಕೈಬಿಡುವ ನಿರ್ಧಾರವನ್ನು ಕೈಗೊಂಡರು. ಅವರ ಈ ನಿರ್ಧಾರ ಗಾಂಧೀಜಿಯ ಹೇಳಿಕೆಯ ಪ್ರೇರಣೆಯಿಂದಾಗಿತ್ತು. ಆ ದಿನಗಳಲ್ಲಿ ಪ್ರಾರಂಭವಾದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ವಿದ್ಯಾರ್ಥಿಗಳಿಗೆ  ಬ್ರಿಟಿಷ್ ಪ್ರಭುತ್ವವನ್ನು, ಅದರ ಅಧಿಕಾರವನ್ನು ಪ್ರಶ್ನಿಸಿ ಅವರಿಂದ ಸಹಾಯ ಪಡೆಯುತ್ತಿರುವ ವಿದ್ಯಾಸಂಸ್ಥೆಗಳ ಪರೀಕ್ಷೆಯನ್ನು ನಿರಾಕರಿಸಿ ಎಂದು ಕರೆಯಿತ್ತಿದ್ದರು. ಆ ಮಾತಿನಿಂದ ಪ್ರೇರಿತರಾದ ರಾಮಯ್ಯನವರು ವಾರಣಾಸಿಯನ್ನು ಬಿಡಲು,  ಗುರುಸ್ಥಾನದಲ್ಲಿದ್ದ ಮಾಲವೀಯರು ಓದು ಮುಗಿಸಿ ನಂತರ ಚಳವಳಿಯಲ್ಲಿ ಪಾಲ್ಗೊಳ್ಳಬಹುದಲ್ಲ ಎಂಬ ಸಲಹೆಯಿತ್ತರು. ವಿದ್ಯಾರ್ಥಿ ರಾಮಯ್ಯನವರು ತಾನು ಮಹಾತ್ಮ ಗಾಂಧೀಜಿಗೆ ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವ ವಚನವಿತ್ತುದನ್ನು ತಿಳಿಸಿ, ಅವರನ್ನು ಒಪ್ಪಿಸಿದರು. ನಂತರ ಮಾಲವೀಯರು ಅವರನ್ನು ಆಶೀರ್ವದಿಸಿ, ಪ್ರಯಾಣಕ್ಕೆಂದು ೫೦ರೂ.ಗಳನ್ನಿತ್ತು, “ನಿನ್ನ ಪಥ ಸುಗಮವಾಗಲಿ, ನನ್ನೊಂದಿಗೆ ಸಂಪರ್ಕದಲ್ಲಿರು” ಎಂದು ಹರಸಿ ಕಳುಹಿ ಕೊಟ್ಟರು.

ವಾರಣಾಸಿಯಿಂದ ಹಿಂದಿರುಗಿ ಬಂದ ರಾಮಯ್ಯನವರು ಪ್ರಾರಂಭದಲ್ಲಿ ಬೆಳಗಾವಿಯಲ್ಲಿ ಹಿಂದೀ ಅಧ್ಯಾಪಕನಾಗಿ, ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿದರು. ವಿದ್ಯಾರ್ಥಿ ಜೀವನದ ೧೦ ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಕಾಶಿಯಲ್ಲಿದ್ದಾಗ ಅವರು ಪತ್ರಿಕೋದ್ಯಮ ರಂಗದಲ್ಲಿ ದುಡಿದ ಕಾರಣ, ಆ ಅನುಭವ ಪತ್ರಿಕೋದ್ಯಮದ ಮತ್ತು ಬರಹದ ತಿಳುವಳಿಕೆಯನ್ನು ಮೂಡಿಸಿತು. ಆಗ ಅವರ ಕೆಲಸವನ್ನು ಡಾ.ಹರ್ಡಿಕರ್ ತುಂಬಾ ಮೆಚ್ಚಿಕೊಂಡಿದ್ದರು. ನಂತರ ೧೯೨೨ ರಲ್ಲಿ ಇವರ ಪತ್ರಕರ್ತನ ಜೀವನ ಇಂಗ್ಲಿಷ್ ಪತ್ರಿಕೆಯಾದ ಸ್ವರಾಜ್ಯದೊಂದಿಗೆ ಅದರ ಸ್ಥಾಪಕ ಟಿ.ಪ್ರಕಾಶಮ್ ಅವರ ಕೆಳಗೆ ಉಪ ಸಂಪಾದಕರಾಗಿ ಮದ್ರಾಸಿನಲ್ಲಿ, ನಂತರ ಬೆಂಗಳೂರಲ್ಲಿ ಮುಂದುವರಿಯಿತು. ಆ ನಂತರ ಆಂಧ್ರಕೇಸರಿ ಮತ್ತು ಸ್ವರಾಜ್ಯ ಎರಡೂ ಪತ್ರಿಕೆಗಳ ಸುದ್ದಿಗಾರನಾಗಿ ದುಡಿದರು. ಅವರ ಸುದ್ದಿಗಾರನ ಕೆಲಸದ ತಿರುಗಾಟ ಈ ಉದ್ಯಮದ ಒಳ ಹೊರಗನ್ನು ತಿಳಿಸಿತು. ಇವರು ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು.

ರಾಮಯ್ಯನವರು ಮೈಸೂರಿನ ತಾತಯ್ಯ ಎಂದೆನಿಸಿಕೊಂಡ ವೆಂಕಟಕೃಷ್ಣಯ್ಯನವರಿಂದ ಪ್ರಭಾವಿತರಾದರು. ಅವರು ೧೯೨೫ ರ ಸಮಯದಲ್ಲಿ ಮೈಸೂರಿನಲ್ಲಿ ಅವರ ಪತ್ರಿಕೆ “ಸಂಪದಭ್ಯುದಯ”ದ ಸಂಪಾದಕರಾಗಿ ಸೇರಿಕೊಂಡರು. ಆಗ ಮಿರ್ಝಾ ಇಸ್ಮಾಯಿಲ್ ರವರು ದಿವಾನರಾಗಿದ್ದರು. ಇವರ ಬ್ರಿಟಿಷರ ಮೇಲಿನ ನೇರ ಹಾಗೂ ತೀಕ್ಷ್ಣ ಖಂಡನೆಯ ಪತ್ರಿಕಾ ವರದಿಗಳಿಂದ ಕುಪಿತಗೊಂಡ ಸರಕಾರ ಪತ್ರಿಕೆಯನ್ನು ನಿಲ್ಲಿಸಿಬಿಟ್ಟಿತು. ಇದರಿಂದ ಯುವ-ಉತ್ಸಾಹೀ ಪತ್ರಿಕೋದ್ಯಮಿಯೇನೂ ಕಂಗೆಡಲಿಲ್ಲ.  ಇದ್ದ ಆರ್ಥಿಕ ಮುಗ್ಗಟ್ಟನ್ನು ಸವಾಲಾಗಿ ಸ್ವೀಕರಿಸಿ, ೧೯೨೭ರಲ್ಲಿ ಹೊಸಾ ಪತ್ರಿಕೆ ತಾಯಿನಾಡನ್ನು ಹುಟ್ಟು ಹಾಕಿದರು. ಇದು ವಾರ ಪತ್ರಿಕೆಯಾಗಿತ್ತು. ಆ ದಿನಗಳಲ್ಲಿ ಈ ಪತ್ರಿಕೆ ಕುಟುಂಬದ ಸದಸ್ಯರೆಲ್ಲ ಸೇರಿ ದುಡಿದುದರಿಂದ ತಲೆಯೆತ್ತುವಂತಾಯಿತು. ರಾಮಯ್ಯನವರ ಮುಖ್ಯ ಬಂಡವಾಳ ಅವರ ಧ್ಯೇಯ ಮತ್ತು ಮನೆಯವರೆಲ್ಲರ( ಪತ್ನಿ ಮತ್ತು ಸಹೋದರರು ) ಪೂರ್ಣ ಸಹಕಾರ. ಅವರ ಆಗಿನ ಕಷ್ಟದ ದಿನಗಳಲ್ಲಿ ಮಾಲಕನಿಗೆ ಮತ್ತು ಕೆಲಸಗಾರರಿಗೆ  ಅಂತರವಿರಲಿಲ್ಲ, ಮನೆಯವರೆಲ್ಲ ಸೇರಿ ಬರವಣಿಗೆ,ಮಾರಾಟ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು.ಇದೇ ಪತ್ರಿಕೆ ಭವಿಷ್ಯದಲ್ಲಿ ದೈನಿಕವಾಗಿ ಬೆಳೆಯಿತು.

ಅವರು ಕಾಶಿಯನ್ನು ಬಿಟ್ಟು ಬಂದ ಪ್ರಾರಂಭದ ದಿನಗಳಲ್ಲಿ ಆರ್ಥಿಕವಾಗಿ ಮುಗ್ಗಟ್ಟಿನಲ್ಲಿದ್ದರು. ಅವರ ಸಂಸಾರ ತಾಯಿ,ತಂದೆ, ನಾಲಕ್ಕು ತಮ್ಮಂದಿರು, ತಂಗಿ ಎಂದು ದೊಡ್ಡದಾಗಿತ್ತು. ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮೊದಲನೇ ಮದುವೆಯಾಗಿತ್ತು, ಆದರೆ ಆಕೆ ಇವರ ಮನೆ ಸೇರಿರಲಿಲ್ಲ. ಇಂತಹ ಸಂದರ್ಭದಲ್ಲಿ  ವಿದ್ಯಾಭ್ಯಾಸ ಪಡೆದ ಬುದ್ಧಿವಂತ ವರನೆಂಬ ಕಾರಣದಿಂದಲೋ ಏನೋ,ಅನುಕೂಲಸ್ಥರಾಗಿದ್ದ ಹಾಸನದ ಶಿರಸ್ತೇದಾರ್ ಭವಾನಿ ಶಂಕರ ಅಯ್ಯರ್ ಮತ್ತು ಲಕ್ಷ್ಮಮ್ಮನವರ ಕೊನೇ ಮಗಳು ೮ ವರ್ಷ ವಯಸ್ಸಿನ ಜಯಲಕ್ಷಮ್ಮನೊಡನೆ ೧೯೧೬ ನೇ ಇಸವಿಯಲ್ಲಿ  ಮದುವೆ ನಡೆದು ಹೋಯಿತು. ಆಗಿನ ಕಾಲದಲ್ಲಿ ದೊಡ್ಡ ಕುಟುಂಬ, ವಯಸ್ಸು ಇತ್ಯಾದಿಗಳನ್ನು ಯಾರೂ ಹೆಚ್ಚು ಗಮನಿಸುತ್ತಿದ್ದಿರಲಿಲ್ಲ. ಈ ಮದುವೆಯ ಸಂದರ್ಭದಲ್ಲಿ ಜಯಲಕ್ಷಮ್ಮನ ತಾಯಿಯವರ ಒತ್ತಾಯದ ಮೇರೆಗೆ ಮೊದಲ ಹೆಂಡತಿಯೂ ಮನೆ ಸೇರುವಂತಾಯಿತು. ರಾಮಯ್ಯನವರು ಚಿಕ್ಕ ವಯಸ್ಸಿನಲ್ಲಿ ಅತೀ ಕೋಪಿಯೂ, ಬಹಳ ಶಿಸ್ತಿನವರೂ ಆಗಿದ್ದರು, ಹಣಕ್ಕೂ ಕೊರತೆಯಿತ್ತು. ಆದರೆ ಇವೆಲ್ಲ ಸಮಸ್ಯೆಗಳನ್ನು, ಹೊಸ ಮನೆ ಸೇರಿದ ಆ ಚಿಕ್ಕ ವಯಸ್ಸಿನ ಹುಡುಗಿ ಜಯಲಕ್ಷಮ್ಮ ಹೃದಯವಂತಿಕೆ, ಬುದ್ಧಿವಂತಿಕೆ ಸಂಸ್ಕಾರಗಳಿಂದ ತುಂಬಾ ಚೆನ್ನಾಗಿ ನಿಭಾಯಿಸಿದರು. ಈ ಇಬ್ಬರು ಪತ್ನಿಯರು ಸವತಿ ಪದಕ್ಕಿದ್ದ ಕಳಂಕವನ್ನು ಅಳಿಸಿ, ಸಹ ಸತಿಯರಾಗಿ ಬಾಳಿದರು.ಇವರಿಗೆ ಮೊದಲ ಪತ್ನಿಯಲ್ಲಿ ಒಬ್ಬ ಮಗ ಮತ್ತು ಜಯಲಕ್ಷಮ್ಮನಿಂದ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದರು. ಮೊದಲ ಪತ್ನಿ ಸಣ್ಣ ವಯಸ್ಸಿನಲ್ಲೇ ತೀರಿಕೊಂಡರು, ನಂತರ ರಾಮಯ್ಯನವರ ಜೀವನದೆಲ್ಲ ಸಮಸ್ಯೆಗಳಿಗೂ ಜಯಲಕ್ಷಮ್ಮನೇ  ಹೆಗಲನ್ನಿತ್ತರು. ಇವರದು ಅನುಕೂಲ ದಾಂಪತ್ಯ.

ತಾಯಿನಾಡು ಪ್ರಾರಂಭವಾಗಿ ಎರಡು ವರ್ಷಗಳ ನಂತರ ಪತ್ರಿಕೆಯ ಕಾರ್ಯಾಲಯವನ್ನು ತಂದೆ ರಾಮಸ್ವಾಮಯ್ಯನವರ  ಕಾಲಾನಂತರ ಮೈಸೂರಿನಿಂದ ಬೆಂಗಳೂರಿಗೆ ಸ್ಥಾನಾಂತರಿಸಬೇಕಾಗಿ ಬಂದಿತು. ಇದರಿಂದ ಕುಟುಂಬದವರೆಲ್ಲಾ ವಸತಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದರು. ಪತ್ರಿಕೆ ದಿನ ಕಳೆದಂತೆ ಜನಪ್ರಿಯವಾಗುತ್ತಾ ಹೋಯಿತು; ರಾಮಯ್ಯನವರ ಹಣಕಾಸಿನ ಮುಗ್ಗಟ್ಟು ಕಮ್ಮಿಯಾಗುತ್ತಾ ಬಂತು. ಈ ಪತ್ರಿಕೆಯನ್ನು ರಾಮಯ್ಯನವರು ಗಾಂಧೀಜಿಯ ಆಶೀರ್ವಾದದೊಂದಿಗೆ ಪ್ರಾರಂಭಿಸಿದ್ದರು. ಅದರ ಕುರುಹಾಗಿ, ಗಾಂಧೀಜಿಯ ಕೈಬರಹದಲ್ಲಿ ಬಂದ ಪೋಸ್ಟ್ ಕಾರ್ಡ್ ನಲ್ಲಿದ್ದ ಭಗವದ್ಗೀತೆಯ ಶ್ಲೋಕವನ್ನು,  ನಿತ್ಯ ತಾಯಿನಾಡು ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸುತ್ತಿದ್ದರು.

ತಾಯಿನಾಡು ಪತ್ರಿಕೆಯ ಮುಖಪುಟ

ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ !

ತತೋ ಯುದ್ಧಾಯ ಯುಜಸ್ವ ನೈವಂ ಪಾಪಮವಾಪ್ಸ್ಯಸಿ !

ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧದಲ್ಲಿ ತೊಡಗಿದಾಗ, ನೀನು ಯಾವುದೇ ಪಾಪಗಳಲ್ಲೂ  ಪಾಲ್ಗೊಳ್ಳದೇ ಮುಕ್ತನಾಗುತ್ತೀಯ.

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಪತ್ರಿಕೋದ್ಯಮಿಯಾಗಿ ರಾಮಯ್ಯನವರ ಪಾತ್ರ ಹಿರಿಯದು. ಅವರು ಸತ್ಯವನ್ನು ಜನರ ಮುಂದಿಡಲು ಎಂದೂ ಹೆದರಲಿಲ್ಲ. ಅವರನ್ನು ಆಮಿಷಗಳ ಬಲೆಯೊಡ್ಡಿ ಧ್ಯೇಯವನ್ನು ಮರೆಸುವ ಪ್ರಯತ್ನವನ್ನು ಮಾಡಿದಾಗ, ಅವರು ವಾಸ್ತವವನ್ನು ಅರಿತುಕೊಂಡು, ಸ್ಥಿರವಾದ ತಮ್ಮ ಮೌಲ್ಯಯುಕ್ತ ನಿಲುವನ್ನು ವ್ಯಕ್ತ ಪಡಿಸಿದರು. ಇವರಿಗಿದ್ದ ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ ನಂತರದ ದಿನಗಳಲ್ಲಿ ಇವರು ಪ್ರಾರಂಭಿಸಿದ Daily News  ಪತ್ರಿಕೆಯಲ್ಲಿ ಅರಿವಾಗುತ್ತದೆ. ಇದು ಸಂಜೆಯ ಹೊತ್ತಿನಲ್ಲಿ ಪ್ರಕಟವಾಗುತ್ತಿತ್ತು. ೧೯೩೯ ರ ವೇಳೆಗಾಗುವಾಗ ಅವರು ಪತ್ರಿಕೋದ್ಯಮ ರಂಗದಲ್ಲಿ ಪ್ರಮುಖವ್ಯಕ್ತಿಯಾಗಿ ಮನ್ನಣೆ ಗಳಿಸಿದರು. ಅವರನ್ನು ಕರ್ನಾಟಕ ರಾಜ್ಯದ ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾಗಿ ಚುನಾಯಿಸಲಾಯಿತು; ಹಾಗೂ ಅವರ ಮೌಲ್ಯಯುಕ್ತ ಧೋರಣೆಗಳಿಂದ ಅವರನ್ನು ಮೈಸೂರು ಸಂಸ್ಥಾನದ ಹರಿಜನ ಸಂಘದ ಅಧ್ಯಕ್ಷರನ್ನಾಗಿ ಆರಿಸಲಾಯಿತು. ನಂತರದ ದಿನಗಳಲ್ಲಿ ಶುರುವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಇವರು ನಿರ್ಭಯರಾಗಿ  ಬ್ರಿಟಿಷ್ ಆಡಳಿತದ ಮೇಲೆ ಖಂಡಿಸಿ ಬರೆದ ಲೇಖನಗಳು  ಸರಕಾರದ ಗಮನಕ್ಕೆ ಬಂದಿತು. ೧೯೪೨ನೇ ಇಸವಿಯಲ್ಲಿ ರಾಮಯ್ಯನವರು ಕೂಡಾ ಇತರ ಪ್ರಮುಖ ಚಳವಳಿಗಾರರಂತೇ ಬಂಧಿತರಾದರು. ಆದರೆ ಕೆಲವೇ ದಿನಗಳಲ್ಲಿ ಇವರನ್ನು ಬಿಡುಗಡೆ ಮಾಡಲಾಯಿತು. ಆ ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ತಮ್ಮ ಪತ್ನಿ ಜಯಲಕ್ಷಮ್ಮನಿಗೂ ಅದರ ಮಹತ್ವ ತಿಳಿಯಲು ಅವರನ್ನು ತಾವು ಹೋದೆಡೆಗಳಿಗೆ ಕರೆದೊಯ್ದರು, ಮತ್ತು ತಮ್ಮ ಕಾರ್ಯಗಳಲ್ಲಿ ಸಹಭಾಗಿಯಾಗುವಂತೆ ಮಾಡಿದರು. ಇದರಿಂದ ಮುಂದೆ ಜಯಲಕ್ಷಮ್ಮನವರ ತಿಳುವಳಿಕೆ, ಅನುಭವ ಹೆಚ್ಚಿತು, ಅವರ ಭವಿಷ್ಯದ ರಾಜಕೀಯ ಜೀವನದಲ್ಲಿ ಮತ್ತು ಸಮಾಜಸೇವೆಗೆ  ಸಹಾಯವಾಯಿತು.

ಬೆಂಗಳೂರಿನ ಪತ್ರಿಕೋದ್ಯಮಿಗಳು ರಾಮಯ್ಯನವರನ್ನು ಸನ್ಮಾನಿಸಿದಾಗ, ಕಾರ್ಯಕ್ರಮಕ್ಕೆ ಆಗಮಿಸಿದ ನೆಹರೂರವರು,(೧೯೫೦ ರ ದಿನಗಳಲ್ಲಿ); ಮುಂದಿನ ಸಾಲಿನಲ್ಲಿ ನಿಂತವರು-ವ್ಯಾಸ ರಾವ್,ರಾಮಸ್ವಾಮಿ(ಹಿಂದು ಪತ್ರಿಕೆ),ವೆಂಕೋಬ ರಾವ್(ವಿಶ್ವ ಕರ್ನಾಟಕ), ಕೆ.ಸಿ.ರೆಡ್ಡಿ(ಮೈಸೂರಿನ ಮುಖ್ಯಮಂತ್ರಿ),ನೆಹರು, —-, ಹನುಮಂತಯ್ಯ,—,ಸಾಗರ್, ರಾಮಯ್ಯನವರು ಹಾಗೂ ಪ್ರಜಾವಾಣಿಯ ಜಯಶೀಲ ರಾವ್

ರಾಮಯ್ಯನವರು ಪತ್ರಿಕೋದ್ಯಮ ಮತ್ತು ರಾಜಕೀಯ ರಂಗಗಳೆರಡರಲ್ಲೂ ನ್ಯಾಯಯುತವಾಗಿ, ಯಾವುದೇ ವ್ಯಾಮೋಹಗಳಿಗೂ ಒಳಗಾಗದೇ, ಧೈರ್ಯದಿಂದ ತಲೆಯೆತ್ತಿ ಬಾಳಿದರು ಮತ್ತು ಬದಲಾವಣೆಗಳನ್ನು ತಂದರು. ಪ್ರಸಿದ್ಧರಾದ ಹಿಂದೂ ಪತ್ರಿಕೆಯ ಕಸ್ತೂರಿ ರಂಗ ಅಯ್ಯಂಗಾರ್ ಮತ್ತು ಕನ್ನಡದ ದಿಗ್ಗಜರಾದ ಡಿ.ವಿ.ಗುಂಡಪ್ಪನವರೊಡನೆ ಇವರನ್ನು ಹೋಲಿಸಲಾಗಿದೆ. ಇವರನ್ನು ಕನ್ನಡದ ಪತ್ರಿಕೋದ್ಯಮ ರಂಗದಲ್ಲಿ ಚಿರವಾಗಿ ಮಿನುಗುವ ನಕ್ಷತ್ರ ಎಂದು ತಿಳಿಯಲಾಗಿದೆ. ಈ ಪತ್ರಿಕೆ ಸರಳ ಆಡು ನುಡಿಯಲ್ಲಿದ್ದು, ಜನರಲ್ಲಿ  ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. ತಾಯಿನಾಡು ಪತ್ರಿಕೆ ಒಟ್ಟಿನಲ್ಲಿ ೩೦ ವರ್ಷಗಳ ಕಾಲ ನಡೆಯಿತು, ನಂತರ ೧೯೫೫ ರ ಸಮಯದಲ್ಲಿ ಸ್ವಂತ ಸಂಸ್ಥೆಯಾಗಿ (private limited company) ಪರಿವರ್ತಿಸಲು ಅಗತ್ಯವಿದ್ದ ಧನ ಬಲವಿರದೆ, ಬೇರೆಯವರಿಂದ ಯಾಚಿಸಲಾಗದಿದ್ದುದರಿಂದ ಮಾರ ಬೇಕಾಗಿ ಬಂತು. ರಾಮಯ್ಯನವರು ಎಲ್ಲಾ ಸನ್ನಿವೇಶಗಳಲ್ಲೂ ನಿರ್ಮೋಹರಾಗಿ ಈ ಮೇಲೆ ಹೇಳಿದ ಭಗವದ್ಗೀತೆಯ ಮಾತಿನಂತೆ  ನಡೆದರು. ಸ್ವಾತಂತ್ರ್ಯಾ ನಂತರ ಅವರು ದೇಶದ ಬೆಳವಣಿಗೆಯತ್ತ ತಮ್ಮ ಗಮನ ಹರಿಸಿ, ತಮ್ಮಿಂದಾದ ಕಾರ್ಯಗಳನ್ನು, ಸೇವೆಯನ್ನು ರಾಜಕೀಯ ರಂಗದಲ್ಲಿದ್ದುಕೊಂಡು ಮಾಡಿದರು.  ಮೈಸೂರು ಸಂಸ್ಥಾನವನ್ನು ಪ್ರತಿನಿಧಿಸಿದ ಕೆಲವೇ ಕಾಂಗ್ರೆಸ್ಸಿಗರಲ್ಲಿ ಇವರೊಬ್ಬರು. ರಾಮಯ್ಯನವರು ಬೆಂಗಳೂರು ನಗರ ಸಭೆಗೆ ಎರಡು ಬಾರಿ( ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ) ಚುನಾವಣೆಯಲ್ಲಿ ಆರಿಸಿ ಬಂದು ಶ್ರದ್ಧೆಯಿಂದ  ಜನರ ಏಳಿಗೆಗೆ ದುಡಿದರು. ಇವರು ೧೯೫೨ರಲ್ಲಿ ಬಸವನಗುಡಿ ಪ್ರದೇಶದಿಂದ ವಿದಾನಸಭೆಗೆ ಯಶಸ್ವಿಯಾಗಿ ಚುನಾಯಿತರಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ (MLA). ಆಧುನಿಕ ರಷ್ಯಾ, ಫ಼್ರಾನ್ಸಿನ ಮಹಾಕ್ರಾಂತಿ, ದಯಾಸಾಗರ ವೆಂಕಟಕೃಷ್ಣಯ್ಯ, Mysore’s political evolution, ಗಾಂಧೀಜಿ ಹಾಗೂ ತಮ್ಮ ಆತ್ಮಚರಿತ್ರೆ ಮುಂತಾದ ಕೆಲವೊಂದು ಪುಸ್ತಕಗಳನ್ನು ಬರೆದರು.  ಇವರ ಘನ ಕಾರ್ಯಗಳನ್ನು ಗುರುತಿಸಿ, ಕರ್ನಾಟಕ ಸರಕಾರ ೧೯೬೯ ರಲ್ಲಿ ರಾಜ್ಯಪ್ರಶಸ್ತಿಯನ್ನಿತ್ತು ಗೌರವಿಸಿತು.

೧೯೯೬ ರಲ್ಲಿ ರಾಮಯ್ಯನವರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ಹೊರತಂದ ಹೊತ್ತಗೆ  (ಆತ್ಮಚರಿತ್ರೆ)

ಇವರ ಮೊದಲ ಮಗ ಬ್ರಹ್ಮಾನಂದರು ನಮ್ಮ ದೇಶದ ಹೆಮ್ಮೆಯ ಅರ್ಥಶಾಸ್ತ್ರಜ್ಞ,   ಎರಡನೇ ಮಗ ಇಂಜಿನಿಯರ್, ರಾಮಸ್ವಾಮಿ  ಇವರೊಂದಿಗೆ ಇದ್ದರು,  ಮತ್ತು ಮಗಳು ರಾಮೇಶ್ವರಿಯವರು ಪ್ರಾಧ್ಯಾಪಕಿ ಹಾಗೂ ಕೊನೆ ಮಗನಾದ ವಿಶ್ವನಾಥ್ ಬಾಹ್ಯಾಕಾಶ ವಿಜ್ಞಾನಿ. ಇವರ ಪತ್ನಿ ಜಯಲಕ್ಷಮ್ಮನವರು  ಬೆಂಗಳೂರು ನಗರ ಪಾಲಿಕೆಗೆ ಚುನಾವಣೆಯಲ್ಲಿ ಆರಿಸಿ ಬಂದ ಕಾರ್ಪೊರೇಟರ್, ಮತ್ತು ನಂತರ Deputy mayor ಆಗಿದ್ದು ತಮಗಿದ್ದ ಸ್ಥಾನಮಾನಗಳನ್ನು, ಅಧಿಕಾರವನ್ನು ಸದ್ವಿನಿಯೋಗ ಮಾಡಿಕೊಂಡು, ಹಲವೊಂದು ಸಮಾಜೋಪಕಾರಿ ಕೆಲಸಗಳನ್ನು ಮಾಡಿದಾಕೆ. ೧೯೭೦ ರಲ್ಲಿ ತಮ್ಮ ೭೬ನೇ ವಯಸ್ಸಿನಲ್ಲಿ ರಾಮಯ್ಯನವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.

ಈ ಲೇಖನವನ್ನು ಬರೆಯಲು ಮಾಹಿತಿಗಳನ್ನು ಒದಗಿಸಿದ ಶ್ರೀಯುತ ಪಿ.ಆರ್.ವಿಶ್ವನಾಥರಿಗೆ( ರಾಮಯ್ಯನವರ ಕೊನೆಯ ಮಗ-ಪ್ರಸ್ತುತ ಬೆಂಗಳೂರು ನಗರ ನಿವಾಸಿ) ನನ್ನ ಕೃತಜ್ಞತೆಗಳು.

http://www.tainadu.blogspot.com/

ಈ ಮೇಲಿನ ಲಿಂಕ್ ಉಪಯೋಗಿಸಿ ರಾಮಯ್ಯನವರ ಜೀವನ ಮತ್ತು ಕೆಲಸಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.


Advertisements

15 thoughts on “ಪಾಲಹಳ್ಳಿ ರಾಮಯ್ಯನವರು “ತಾಯಿ ನಾಡು ” ಕನ್ನಡದ ಜನಪ್ರಿಯ ವಾರ್ತಾಪತ್ರಿಕೆಯ ಸ್ಥಾಪಕರು

  • ರಾಧಾ,
   ನನಗೆ ನಿನಗೆಲ್ಲ ರಾಮಯ್ಯನವರ ಬರಹದ ಪರಿಚಯವಿರುವ ಸಾಧ್ಯತೆಯಿಲ್ಲ. ನಾನು ಪಾಲಹಳ್ಳಿ ವಿಶ್ವನಾಥರ ಲೇಖನದಿಂದ ಬಹಳ ಪ್ರಭಾವಿತಳಾದೆ. ಹಾಗಾಗಿ ನಾನು ಅವರ ಭೇಟಿಯಾಗಿ ಅವರಿಂದ ನನ್ನ ಲೇಖನಕ್ಕೆ ಒಪ್ಪಿಗೆ ಮತ್ತು ಮಾಹಿತಿಯನ್ನು ಪಡೆದುಕೊಂಡೆ.ಇವರ ಜೀವನ ಚರಿತ್ರೆ ಇನ್ನೂ ಆಳವಾಗಿ ಪರಿಣಾಮಕಾರಿಯಾಗಿರಬಹುದು ಎಂದು ಅನಿಸುತ್ತದೆ.ಇನ್ನೂ ಬಹಳಷ್ಟು ಹೇಳಲು ಬಾಕಿಯುಳಿದಿದೆ. ಅದನ್ನು ಬೇರೊಂದು ಲೇಖನದಲ್ಲಿ ಬರೆಯುವೆ.
   ಶೈಲಜ

 1. ನಾನು ಪಿ ಯು ಸಿ ಓದುತ್ತಿದ್ದಾಗಲೂ ‘ತಾಯಿನಾಡು’ ಬಲು ಜನಪ್ರಿಯ ದೈನಿಕವಾಗಿತ್ತು.ಅಂದಿನ ದಿನಗಳಲ್ಲಿ ನಾನು ಬರೆದಿದ್ದ ೆರಡು ಲೇಖನಗಳು ‘ತಾಯಿನಾಡು’ವಿನಲ್ಲಿ ಪ್ರಕಟವಾಗಿದ್ದನ್ನೂ ಅದರಿಂದಾಗಿ ಕನ್ನಡದಲ್ಲಿ ಬರೆಯುವುದನ್ನು ರೂಢಿಸಿಕೊಳ್ಳುವ ಹಂಬಲ ಮೂಡಿದ್ದನ್ನೂ ನೆನಪಿಸಿಕೊಳ್ಳಲು ಕಾರಣವಾದ ಈ ಲೇಖನ ಬರೆದದ್ದಕ್ಕೆ ಧನ್ಯವಾದಗಳು.ಸಂಕ್ಷಿಪ್ತ ಜೀವನಚರಿತ್ರೆ ಚೆನ್ನಾಗಿ ಮೂಡಿಬಂದಿದೆ.

  • ನಿಮ್ಮನ್ನು ಹೇಗೆ ಸಂಬೊಧಿಸಬೇಕೆಂದು ತಿಳಿದಿಲ್ಲ, (ಬಹುಶಃ ಚಿಕ್ಕಪ್ಪ), ಈ ಪತ್ರಿಕೆಯನ್ನು ಓದಿ, ಅದರಲ್ಲಿ ಬರೆದಿರುವ ನೀವು ನನ್ನ ಮೊದಲ ಓದುಗರಾಗಿ ಸಿಕ್ಕಿದ್ದನ್ನು ಭಾಗ್ಯವೆಂದು ತಿಳಿಯಲೆ?
   ನಾನು ಮೊದಲ ಬಾರಿ ರಾಮಯ್ಯನವರು ಅವರ ತಂದೆಗೆ ಬರೆದ ಪತ್ರವನ್ನು ಓದಿದಾಗ ಪರವಶಳಾಗಿಬಿಟ್ಟಿದ್ದೆ. ಹಾಗಾಗಿ ನನಗೆ ಆ ಪತ್ರವನ್ನು ಇಂಗ್ಲಿಷ್ ಮೂಲದಿಂದ ಕನ್ನಡಕ್ಕೆ ಭಾಷಾಂತರಿಸಬೇಕು. ಇನ್ನು ಅವರ ಪತ್ನಿ ಜಯಲಕ್ಷಮ್ಮನವರದೂ ಅಪರೂಪದ ವ್ಯಕ್ತಿತ್ವವೆನಿಸಿತು. ನನ್ನದೆಲ್ಲ ಓದಿ ತಿಳಿದ ಅನುಭವಷ್ಟೆ!.
   ಶೈಲಜ

 2. ಮರುಕೋರಿಕೆ (Pingback): ‘ತಾಯಿ ನಾಡು’ ವಾರ್ತಾಪತ್ರಿಕೆಯ ಸ್ಥಾಪಕ ಪಾಲಹಳ್ಳಿ ರಾಮಯ್ಯ « Media Mind

 3. ನನ್ನ ತಾಯಿನಾಡು ದಿನಗಳು ಲೇಖನದಲ್ಲಿ ಕನ್ನಡ ನಾಡಿನ ಹಿರಿಯ ಪತ್ರಕರ್ತ ‘ತಾಯಿನಾಡು’ ರೂಪಿಸಿದ “ಸುದ್ದಿಜೀವಿ” ಶ್ರೀ. ಹೆಚ್. ಆರ್. ನಾಗೇಶ ರಾವ್ ವ್ಯಕ್ತ ಪಡಿಸಿದ್ದು ಈ ರೀತಿಯಲ್ಲಿ.

  “ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ ತತೋ ಯುದ್ಧಾಯ ಯುಜಸ್ವ ನೈವಮ್ ಪಪಮವಾಪ್ಸ್ಯಸಿ – ಗೀತಾ” – ಇದು ‘ತಾಯಿನಾಡು’ ಪತ್ರಿಕೆಯ ನಾಮ ಲಾಂಛನದಡಿ ಮುಖಪುಟದಲ್ಲಿ ಮುದ್ರಿತವಾಗುತ್ತಿದ್ದ ಶ್ಲೋಕ ವಾಕ್ಯ; ಇದೇ ಕೀರ್ತಿಶೇಷ ಪಿ.ಆರ್.ರಾಮಯ್ಯನವರನ್ನು ಎಂತಹ ಸತ್ವಪರೀಕ್ಷೆ-ಸಂಕಷ್ಟ-ಸವಾಲುಗಳ ಎದುರಿನಲ್ಲೂ ಧೃತಿಗೆಡದೆ ಮುನ್ನಡೆಸುತ್ತಿದ್ದ ನಿಷ್ಕಾಮ ಕರ್ಮಸೂತ್ರ. ಜತೆಗೆ “ವಂದೇ ಮಾತರಂ” ಎಂಬ ದೇಶಭಕ್ತಿ ಘೋಷವೂ ‘ತಾಯಿನಾಡು’ ಅಂಕಿತದ ಮೇಲೆ ಅನ್ವರ್ಥವಾಗಿ ರಾರಾಜಿಸುತ್ತಿತ್ತು.

  ಬೆಂಗಳೂರಿನ ಪತ್ರಿಕೆಗಳಲ್ಲಿ ‘ತಾಯಿನಾಡು’ವಿಗೇ ಅಗ್ರಮಾನ್ಯತೆ. ಸಿಬ್ಬಂದಿಗೆ ನಿಗದಿತ ದಿನದಲ್ಲಿ ತಿಂಗಳ ಸಂಬಳ ತಪ್ಪದೆ ಬರುತ್ತಿತ್ತು. ಕೊನೆಯ ಕೆಲವು ವರ್ಷಗಳಲ್ಲಿ ಬೋನಸ್ ಕೂಡ ಲಭಿಸಿತು. ಕಾನೂನಿನಲ್ಲಿ ಇಲ್ಲದಿದ್ದರೂ, ಶ್ರೀ ರಾಮಯ್ಯನವರೇ ನೌಕರರಿಗೆ ಪ್ರಾವಿಡೆಂಡ್ ಫಂಡ್ ಸೌಲಭ್ಯ ಆರಂಭಿಸಿದ್ದರು.

  ಇಂತಹ ಮಹಾನ್ ವ್ಯಕ್ತಿತ್ವವನ್ನು ನಾಡಿನ ಮತ್ತು ವಿದೇಶದ ಕನ್ನಡ ಜನತೆಯ ಮುಂದಿಟ್ಟ ಶ್ರೀಶೈಲಕ್ಕನಿಗೆ ಹೃತ್ಪೂರ್ವಕ ವಂದನೆಗಳು.

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

 4. ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.,
  ನಾನು ರಾಮಯ್ಯನವರ ಬಗ್ಗೆ ಮೊದಲು ಓದಿದುದು ಅವರ ಮಗನಾದ ವಿಶ್ವನಾಥರ ಬರಹದಲ್ಲಿ.ಓದಿ ತುಂಬಾ ಪ್ರಭಾವಿತಳಾದೆ.ಹಾಗಾಗಿ ಅವರನ್ನು ಕಂಡು ಅನುಮತಿ ಪಡೆದೆ.ರಾಮಯ್ಯನವರದು ಆಗಿನ ಸ್ವಾತಂತ್ರ ಚಳುವಳಿಯಲ್ಲಿ ಪಾಲ್ಗೊಂಡ ಇತರ ಪ್ರಮುಖರಂತೆ ನಿಸ್ವಾರ್ಥ ಮತ್ತು ತ್ಯಾಗಮಯ ಜೀವನ. ಅವರ ಪತ್ನಿಯದೂ ಅವರಂತೆ ಸರಳ ಹಾಗೂ ದಿಟ್ಟ ನೇರ ನಡೆನುಡಿಯಂತೆ.ತುಂಬಾ ದೊಡ್ಡ ವ್ಯಕ್ತಿತ್ವದ ಜೀವಿ. ನಿಮ್ಮ ಮೆಚ್ಚುಗೆಗೆ ವಂದನೆಗಳು.
  ಶೈಲಜ

 5. Dear Madam Shylaja

  I would like to express thanks on behalf of our family to you for the article and to the commentators for the kind words on my father Sri P.R.Ramaiya. If possible I request you to put my taranga article also on your site. You could also give the link to my blogspot blogs and the sulekha article. As you have said, i was very fascinated when I read that letter he wrote to his father . This was the turning point in his life. People like Goenka of Indian express are praised rightly. My father also had similar achievementa but in a smaller sphere.

  Another thing i would like to streas is that the kannada newspapers in the first half of the last century played a very important part in getting many people literate. It is in this context that contribution of journalists like my father have to be recognized. Sahitis are praised very rightly for the contributions to kannada language. But journalists of that time have been totally ignored.
  Kannada jurnalists like Mohare Hanumanthrao ( in Hubli area), TT Sharma and my father need to be given importance

  Innu kannadadalli bareyalu kalitilla, sorry

  regads

  • Dear Vishwanath Sir,
   I am thankful to you for the kind appreciation. I should have mentioned the point how Tayinadu helped in those days to spread literacy , now also I can edit and include that point.Your Taranga article is the scanned copy and it is not possible to publish as write up.When I translate the letter of your father definitly I will add the taranga article in support to my article.
   Thanks.
   Shailaja

 6. ಅವರ ಬರಹಗಳು ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು,ಇವರ ಬರಹಗಳು ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು ಅಂತ ಕೇಳಿ ಗೊತ್ತಿತ್ತೇ ವಿನಃ ತಾಯಿನಾಡು ಪತ್ರಿಕೆಯ ರಾಮಯ್ಯ-ಜಯಲಕ್ಷ್ಮಮ್ಮ ದಂಪತಿಯ ಬಗ್ಗೆ ತಿಳಿದೇ ಇರಲಿಲ್ಲ,ಅವರ ಬಗ್ಗೆ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿ ಈ ಬರಹವನ್ನು ತಯಾರು ಮಾಡಿದ್ದಕ್ಕೆ ಶೈಲಕ್ಕನಿಗೆ ಅಭಿನಂದನೆಗಳು,ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s