ಪೀಪ್ಲಿ ಲೈವ್

ಪೀಪ್ಲಿ ಲೈವ್
ನಾನು ಬಹಳ ಸಮಯದ ನಂತರ ಸಿನೇಮಕ್ಕೆ ಹೋದೆ, ಇದು ನನ್ನ ಮನ ಮುಟ್ಟಿದ, ತಟ್ಟಿದ ಸಿನೇಮ. ನಿರ್ದೇಶಕಿ ಅನುಶಾ ರಿಜ಼್ವಿ ನಮ್ಮನ್ನು ಸಮಾಜದ , ನಮ್ಮ ರಾಜಕೀಯದ ಅತಿರೇಕಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ.  ನಾವು ನಮ್ಮ ಲೋಪ, ದೋಷಗಳನ್ನು ವ್ಯಂಗ್ಯ, ಹಾಸ್ಯಾಸ್ಪದ  ಸನ್ನಿವೇಶಗಳಿಂದ ನೋಡಲು ಅವಕಾಶ .ಇದರ ತಯಾರಕ ಹಿಂದಿ ಸಿನೇಮಾ ನಟ ಅಮೀರ್ ಖಾನ್.

ಕಥೆ ಬಡ ರೈತ ಬುಧುವ ಮತ್ತು ಅವನ ತಮ್ಮ ನತ್ಥಾನಿಂದ ಪ್ರಾರಂಭವಾಗುತ್ತದೆ. ಅವರು ತಮ್ಮ ಬಂಜರು ಭೂಮಿಯನ್ನು ಬಾಂಕಿಗೆ ಗಿರವಿಟ್ಟು, ಲಿಲಾವಿಯಲ್ಲಿ ಭೂಮಿಯನ್ನು ಕಳೆದುಕೊಳ್ಳುವ ಸನ್ನಿವೇಶಕ್ಕೆ ಹತ್ತಿರವಾಗುತ್ತಾರೆ. ಅಣ್ಣನೋ ಬ್ರಹ್ಮಚಾರಿ, ತಮ್ಮನೋ ತುಂಬಿದ ಕುಟುಂಬದ ಸಂಸಾರಿ. ಮನೆಯಲ್ಲಿ ಅಣ್ಣ ತಮ್ಮಂದಿರಲ್ಲದೆ ಹಾಸಿಗೆ ಹಿಡಿದ ಅಮ್ಮ,, ಜೋರು, ಬೆದರಿಕೆಗಳನ್ನೊಡ್ಡಿ ಕೆಲಸ ಮಾಡಿಸುವ ಹೆಂಡತಿ,ಮೂವರು ಮಕ್ಕಳು ಆ ಭೂಮಿಯಾಸರೆಯಲ್ಲಿ ಬದುಕಿದ್ದಾರೆ. ಪೀಪ್ಲಿ ಮುಖ್ಯ ಪ್ರದೇಶ ರಾಜ್ಯದಲ್ಲಿನ ಚಿಕ್ಕದೊಂದು ಹಳ್ಳಿ. ಆದರೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಆ ಪ್ರದೇಶದಿಂದ ಚುನಾಯಿತನಾಗಿ ಬಂದ ಕಾರಣ ಆ ಜಾಗಕ್ಕೆ ಪ್ರಾಮುಖ್ಯತೆ. ಅವ್ಯಾವುದನ್ನೂ ತಿಳಿಯದ ಮುಗ್ಧಮನಸ್ಸಿನ ಬಡ ರೈತರು ತಾವು ಬದುಕಿ ಉಳಿಯಲು ತಮ್ಮಿಂದಾದ ಎಲ್ಲ ಕೊನೇ ಪ್ರಯತ್ನಗಳನ್ನು ಮಾಡುತ್ತಾರೆ.
ಬಾಂಕಿನಿಂದ ಹಿಂದಿರುಗಿದ ಮಾರನೆಯ ದಿನ   ಬುಧುವ, ಹಳ್ಳಿಯ ಮುಖಂಡನೊಡನೆ ಆದ ಭೇಟಿಯಿಂದ ತಿಳಿದುಕೊಂಡ  ಮುಖ್ಯ ಸಂಗತಿ ಎಂದರೆ, ಸಾಲವಾಗಿ ಭೂಮಿ ಕಳೆದುಕೊಂಡ ರೈತ ಜೀವನೋಪಾಯ ತೋಚದೇ ಆತ್ಮಹತ್ಯೆ ಮಾಡಿದರೆ, ಅವನಿಗೆ ಸರಕಾರ ಒಂದು ಲಕ್ಷ ರೂ.ಗಳನ್ನು ಕೊಡುತ್ತದೆ, ಆದರೆ ಬದುಕಿ  ಉಳಿದವನಿಗೆ ಏನೇನೂ ಇಲ್ಲ, ಎಂದು. ಹಾಗಾಗಿ ಅಣ್ಣ-ತಮ್ಮ ಬಹಳ ಹೊತ್ತು ಚರ್ಚಿಸಿ, ತಮ್ಮ ದಿವಾಳಿ ಹೋದುದರಿಂದ ಆತ್ಮಹತ್ಯೆ ಮಾಡುವುದೆಂದು, ಅದನ್ನು ಜನರಲ್ಲಿ, ಬಹಿರಂಗ ಪಡಿಸುವುದೆಂದೂ ನಿಶ್ಚಯಿಸಿದರು. ಅಣ್ಣನಾಗಿ ಹಿಂದಿ ಟಿ.ವಿ.ನಟ ರಘುವೀರ್ ಯಾದವ್ ಸಹಜವಾಗಿ ನಟಿಸಿದ್ದಾರೆ.ತಮ್ಮನನ್ನು ಸ್ವಲ್ಪ ನಿಧಾನಿ,ತಿಳುವಳಿಕೆಯಿಲ್ಲದವನೆಂದು ತೋರಿಸಿದ್ದಾರೆ. ಇದು ನಡೆಯುತ್ತಿರುವುದು ಚುನಾವಣೆ ಹತ್ತಿರಕ್ಕೆ ಬಂದ ಕಾಲದಲ್ಲಿ. ಹಾಗಾಗಿ ಎಲ್ಲಾ ವಾರ್ತಾಪತ್ರಿಕೆಗಳು, ಟಿ.ವಿ.ಚಾನೆಲ್ ಗಳು ಸುದ್ದಿಗಾಗಿ ಕಾಯುತ್ತಿರುತ್ತವೆ. ಈ ಆತ್ಮಹತ್ಯೆಯ ಸುದ್ದಿಯನ್ನು ಕೇಳಿಸಿಕೊಂಡ ಆ ಪ್ರದೇಶದ ಟಿ.ವಿ.ಸುದ್ದಿಗಾರ ದೆಹಲಿಯಲ್ಲಿರುವ ತನ್ನ ಕಛೇರಿಗೆ ತಿಳಿಸುತ್ತಾನೆ, ಅವರು ಈ ವಾರ್ತೆಯನ್ನು ಹಬ್ಬಿಸಿ ಇದರ ಉಪಯೋಗ ಪಡೆಯುವ ಸಿದ್ಧತೆಯಲ್ಲಿ ತೊಡಗುತ್ತಾರೆ. ಅಲ್ಲಿನ ಅಧಿಕಾರಿ ನಂದಿತಾ ತನ್ನ ಗುಂಪಿನೊಡನೆ ಆ ಹಳ್ಳಿಗೆ ಧಾವಿಸಿ ಬಂದು,ನಂತರ ಅದು ದೇಶದಾದ್ಯಂತ ಸುದ್ದಿಯಾಗುತ್ತದೆ, ಮತ್ತು ಇತರ ಟಿ.ವಿ.ಚಾನೆಲ್ ಗಳೂ ಸ್ಪರ್ಧೆಗೆಂದು ಅಲ್ಲಿಗೆ ಧಾವಿಸುತ್ತಾರೆ. ಅಲ್ಲಿಂದ ಮತ್ತೆ ಆ ಹಳ್ಳಿಯ ಜನ ತಮ್ಮ ಊರಿಗೆ ಸಿಕ್ಕುವ ಪ್ರಾಮುಖ್ಯತೆಯನ್ನು ಅರಿತು,ಬರುತ್ತಿರುವ ಜನಸ್ತೋಮವನ್ನು ಕಂಡು ಜಾತ್ರೆ,ಸಂತೆ ,ಮಾರಾಟ ಎಂದು ತಯಾರಾಗುತ್ತಾರೆ. ಇತ್ತ ರಾಜಧಾನಿಯಲ್ಲಿ, ಮುಖ್ಯಮಂತ್ರಿಗೆ ಹಗರಣದಿಂದ ತನ್ನ ವ್ಯಕಿತ್ವಕ್ಕೆಲ್ಲಿ ಕುಂದಾಗುತ್ತದೋ ಎಂದು ಮಾನಸಿಕ ತುಮುಲ. ಉಳಿದ ರಾಜಕಾರಿಣಿಗಳು ದೊರಕಿದ ಸಂದರ್ಭವನ್ನು ಸುಸಂದರ್ಭವನ್ನಾಗಿಸಿಕೊಳ್ಳಲು ಯತ್ನಿಸುವುದು, ಪತ್ರಿಕೋದ್ಯಮಿಗಳು ಮತ್ತು ಟಿ.ವಿ.ಚಾನೆಲ್ ಗಳವರು ಈ ಘಟನೆಯನ್ನು ತಮಗೋಸ್ಕರ ಬಳಸಲು ತಯಾರಿ ಇತ್ಯಾದಿ, ಇತ್ಯಾದಿ.ಹಾಗಾಗಿ ಮುಖ್ಯಮಂತ್ರಿ ನತ್ಥಾನಿಗೆ ನೀನು ಸಾಯಬೇಡ, ನಿನಗೆ ನಾವು “ಲಾಲ್ ಬಹಾದ್ದೂರ್”( ಬೋರ್ ವೆಲ್ ನ ಭೂಮಿಯ ಮೇಲಿನ ಯಂತ್ರ) ಕೊಡಿಸುತ್ತೇವೆ ಎಂದನು. ಮರುದಿನವೇ ಅವನಿಗೆ ಜಿಲ್ಲಾಧಿಕಾರಿ ನೀರಿಲ್ಲದ ಭೂಮಿಗೆ,ಭಾವಿಯಿಲ್ಲದ ರೈತನಿಗೆ ಬೋರ್ ವೆಲ್ ಯಂತ್ರವನ್ನು ಪ್ರಧಾನ ಮಾಡುತ್ತಾರೆ.ಇವೆಲ್ಲ ನಮ್ಮ ದೇಶದ ಸರಕಾರ ಕೃಷಿಕನಿಗೆ ಕೊಡುತ್ತಿರುವ ಸವಲತ್ತುಗಳು, ತೋರಿಸುವ ಕಾಳಜಿಗಳಿಗೆ ಹಿಡಿದ ಕೈಗನ್ನಡಿ. ಪ್ರೇಕ್ಷಕನಿಗೆ ದುರಂತ, ವ್ಯಂಗ್ಯ ಅರ್ಥವಾದರೂ ಅದನ್ನು ತೋರಿಸುವ ಕುಹಕಯುಕ್ತ ವಿಧಾನ ನಗೆ ಬರಿಸದಿರಲು ಸಾಧ್ಯವಿಲ್ಲ. ಹಳ್ಳಿಯಿಡೀ ದಿನ-ದಿನ ಭೇಟಿ ನೀಡುವ ರಾಜಕಾರಣಿಗಳು, ೮-೧೦ ಪರಸ್ಪರ ಸ್ಪರ್ಧಿಸುತ್ತಿರುವ ಟಿ.ವಿ. ಚಾನೆಲ್ ಗಳ ಮಂದಿ ಎಂದು ಜನಜಂಗುಳಿಯಿಂದ ತುಂಬಿ ಹೋಗಿದೆ. ಇವರಲ್ಲಿ “ನತ್ಥಾ ನೀನು ಸಾಯಬೇಡ” ಎನ್ನುವ ಬಣವೊಂದು, ವಿರೋಧ ಪಕ್ಷದ ರಾಜಕಾರಿಣಿಗಳು “ನತ್ಥಾ ನೀನಿನ್ನು ಸಾಯದೇ ವಿಧಿಯೇ ಇಲ್ಲ, ಆಗಲೇ ನಿನಗೆ ಪರಿಹಾರ”ವೆನ್ನುವವರು ಇನ್ನೊಂದು ಬಣ. ಒಬ್ಬನಂತೂ ಬಂದು, ವಿದ್ಯುತ್ ಶಕ್ತಿಯಿಲ್ಲದ ಆ ಮನೆಗೆ ಟಿ.ವಿ.ಯನ್ನಿತ್ತು ನೀನಿನ್ನು ಸತ್ತು ಹೋಗು ಎಂದು ಹೇಳುತ್ತಾನೆ. ಹೀಗೆ ಇವೆಲ್ಲಾ ವಿಪರ್ಯಾಸಗಳನ್ನು ಬಹಳ ಸಹಜವಾದ ಅಭಿನಯದಿಂದ ನಮಗೆ ನಗುಬರಿಸುವ ಈ ರಂಗ ಭೂಮಿಯ ನಟರ ನಟನಾಕೌಶಲ್ಯ, ಮತ್ತು ನಿರ್ದೇಶಕಿಯ ಕಥಾ ನಿರೂಪಣೆ ಚೆನ್ನಾಗಿ ಮೂಡಿಬಂದಿದೆ. ಜಾನಪದ ಶೈಲಿಯ ಹಾಡುಗಳೂ ಸಾಂದರ್ಭಿಕವಾಗಿವೆ.
ಇದ್ದಕ್ಕಿದ್ದಂತೆ ಆ ಹಳ್ಳಿಯ ಮುಖಂಡ (ಮುಖ್ಯಮಂತ್ರಿಯ ಬೆಂಬಲಿಗ) ಏನೋ ಮಂತ್ರಾಲೋಚನೆ ಮಾಡಿ,ನತ್ಥಾನನ್ನು ತನ್ನ ಮನೆಗೆ ಕರೆದೊಯ್ದು, ತನ್ನದೊಂದು ಗೋದಾಮಿನಲ್ಲಿ ಬಚ್ಚಿಡುತ್ತಾನೆ. ಅದನ್ನು ಆ ಊರಿನ ಟಿ.ವಿ.ಸುದ್ದಿಗಾರ ಸಂಶಯಿಸಿ, ನಿಜವನ್ನು ಪತ್ತೆಹಚ್ಚಿ, ತನ್ನ ಮೇಲಿನ ಅಧಿಕಾರಿ ನಂದಿತಾಗೆ ಗುಟ್ಟಾಗಿ ತಿಳಿಸುತ್ತಾನೆ. ಅವಳೂ ತಾನು ಗುಟ್ಟಾಗಿ ಎಂದುಕೊಂಡು ಆ ಗೋದಾಮಿನತ್ತ ರಾತ್ರಿಯ ಹೊತ್ತಿನಲ್ಲಿ ವಾಹನದಲ್ಲಿ ಧಾವಿಸುತ್ತಾಳೆ.  ಅವಳನ್ನು ಹಿಂಬಾಲಿಸಿಕೊಂಡು ಇನ್ನೊಬ್ಬ, ಆ ಇನ್ನೊಬ್ಬನನ್ನು ಮತ್ತೊಬ್ಬ ಎಂದು ಆ ರಾತ್ರೊ ರಾತ್ರಿ ೮-೧೦ ವಾಹನಗಳು ಅಲ್ಲಿಗೆ ದೌಡಾಯಿಸಿ, ಪರಿಸ್ಥಿತಿ ಬಿಗಡಾಯಿಸುತ್ತದೆ. ಅಲ್ಲಿ ಈ ಗೊಂದಲದ ಮಧ್ಯದಲ್ಲಿ, ಗೋದಾಮಿನ ಮಾಲಕ ತನ್ನ ಪೆಟ್ರೋಮಾಕ್ಸ್ ದೀಪವನ್ನು ಹಚ್ಚಲು ಹೊರಟ. ಆಗ ಮೊದಲೇ ಚೆಲ್ಲಿದ್ದ ಸೀಮೆ ಎಣ್ಣೆಯಿಂದಾಗಿ ಇಡೀ ಗೋದಾಮು ಹತ್ತಿ ಉರಿಯಲಾರಂಭಿಸುತ್ತದೆ. ಈ ಕತ್ತಲಿನಲ್ಲಿ ಬೆದರಿದ ನತ್ಥಾ ಅಲ್ಲಿಂದ ತಪ್ಪಿಸಿಕೊಂಡ, ಆದರೆ ಆ ಊರಿನ ವಾರ್ತಾಕಾರ ಬೆಂಕಿಯಲ್ಲಿ ಉರಿದು ಹೋದ. ಮಾರನೇ ದಿನ ಜನರೆಲ್ಲಾ ಚದುರಿದರು, ಉರಿದು ಕರಕಿದ ವಾರ್ತಾಕಾರನ ದೇಹವೆ ನತ್ಥಾನದೆಂದು ಸರಕಾರ ಘೋಷಿಸಿತು, ಮತ್ತು ಎಲ್ಲಾ ಗೊಂದಲಗಳಿಗೂ ವಿರಾಮವಾಯಿತು,  ರಾಜಕಾರಿಣಿಗಳಿಗೆ ಒದಗಿ ಬಂದ ವಿಪತ್ತಿಗೆ ಪರಿಹಾರವಾಯಿತು. ರಾಜಕಾರಿಣಿಗಳು ಪರಸ್ಪರ ಸ್ಪರ್ಧಿಗಳೇ ಹೊರತು ವೈರಿಗಳಲ್ಲ ಎಂದು ಸಾಬೀತುಪಡಿಸಿದರು.
ಆದರೆ ನಮ್ಮ,ತಲೆ ತಪ್ಪಿಸಿಕೊಂಡ ನಾಯಕ ನತ್ಥಾ ದೆಹಲಿಗೆ ಹೋಗಿ ದಿನಕೂಲಿ ಕೆಲಸಕ್ಕೆ ಸೇರಿಕೊಂಡ. ಸರಕಾರ ಅವನ ಸಾವು ಆಕಸ್ಮಿಕ, ಆತ್ಮಹತ್ಯೆಯಲ್ಲ,  ಆದುದರಿಂದ ಪರಿಹಾರವಿಲ್ಲ ಎಂದು ಘೋಷಿಸುತ್ತದೆ. ಈ ರೀತಿಯಲ್ಲಿ ಅವನ ಕುಟುಂಬದವರು

ನತ್ಥಾನನ್ನೂ, ಭೂಮಿಯನ್ನೂ ಕಳೆದುಕೊಂಡು ತಮ್ಮ ನತದೃಷ್ಟ ಬದುಕಲ್ಲೇ ಮುಂದುವರಿಯುತ್ತಾರೆ. ಇತ್ತ ಅಸ್ತಿತ್ವ ಕಳೆದುಕೊಂಡ ನತ್ಥಾ ಆ ದೊಡ್ಡ ನಗರಿಯಲ್ಲಿ ಜೀವಚ್ಛವದಂತೆ ಹತಾಶನಾಗಿ ಬದುಕುತ್ತಾನೆ. ಒಟ್ಟಿನಲ್ಲಿ ನಮ್ಮ ಈ ಭೂಮಿಯಲ್ಲಿ ಬದುಕು ಬದುಕಾಗಿರುವುದು ಸಶಕ್ತರಿಗೆ, ಧನವಂತರಿಗೆ, ಅಧಿಕಾರವಿದ್ದವರಿಗೆ. ಉಳಿದ ಕಾರ್ಮಿಕ ವರ್ಗದ ಮಂದಿಗಳು, ಅವರ ಸಾವು,ನೋವುಗಳು, ಸಮಾಜದ ಯಾವುದೇ  ವ್ಯಕ್ತಿಗಳಿಗೂ ಸ್ಪಂದನಕ್ಕೆ ಬಾರದೇ, ಬದುಕುತ್ತಾರೆ, ಬದುಕಿಯೂ ಸಾಯುತ್ತಿರುತ್ತಾರೆ. ನಮ್ಮ ದೇಶದ ಎಷ್ಟೋ ರೈತಾಪಿ ಜನರ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ವಾರ್ತೆಗಳನ್ನು ನಾವು ನೋಡುತ್ತೇವೆ, ಓದುತ್ತೇವೆ,ಬರೇ ಮಾತಿನಲ್ಲೇ ನಮ್ಮೊಳಗೆ ಸ್ಪಂದಿಸುತ್ತೇವೆ. ಅವರ ಸಾವಿನ ಅಂಕೆಗಳು ಕೇವಲ ವಾರ್ತೆಯಲ್ಲಿ ಹೇಳಲಿರುವ ಲೆಕ್ಕಾಚಾರಗಳಷ್ಟೆ ಹೊರತು ಅವರ ಏಳಿಗೆಗೆ ಉಪಯೋಗವಾಗುವ ಅಂಕೆ ಸಂಕೆಗಳಲ್ಲ.

Advertisements

4 thoughts on “ಪೀಪ್ಲಿ ಲೈವ್

  1. ನಾನು ಈ ಸಿನೆಮ ನೋಡಿಲ್ಲ.. ನೋಡ ಬೇಕು ಅಂತ ಇರಬೇಕಾದ್ರೆ ಅದು ಇಲ್ಲಿಂದ ಹೊರತು ಹೋಯಿತು.. ಬ್ಲಾಗ್ ಒಳ್ಳೆದುಂಟು .. ಈ ಸಿನೆಮಾಕ್ಕೆ ವಿದರ್ಭ ಬಾಗದ ರೈತರಿಂದಲೇ ವಿರೋದ ಇರುವುವುದು ಗಮನೀಯ!!ಈ ಸಿನೆಮಾವು ವಿಧರ್ಭದಲ್ಲಿ ಚಿತ್ರೀಕರಣಗೊಂಡಿದೆ. ಅವರು ಹೀಳುವುದೀನೆಂದರೆ ರೈತರು ದುಡ್ಡಿನ ಆಸೆಗಾಗಿ ಆತ್ಮ ಹತ್ಯೆ ಮಾಡುತ್ತಿಲ್ಲ ಬದಲಾಗಿ ಸರಕಾರದಿ ಕೃಷಿ ನೀತಿ ಮತ್ತು ಖಾಸಗೀಕರಣ globalisation ನಿಂದ ಸಾಯುತ್ತಿದ್ದಾರೆ,, ಈ ಚಿತ್ರ ತಪ್ಪು ಸಂದೇಶ ರವಾನಿಸುತ್ತಿದೆ,, ಹಾಗಾಗಿ ಕೂಡಲೇ ಇದನ್ನು ನಿಷೇಧ ಮಾಡಬೇಕು ಎನ್ನುವುದು ಇವರ ವಾದ,,??? ಏನು ನಿಮ್ಮ ಅಭಿಪ್ರಾಯ

    • ಅಭಿಜಿತ್,
      ಸಿನೆಮ ಮಾಡಿದ್ದು ವಿದರ್ಭ ಇರಬಹುದು, ಆದರೆ ಅದರ ಕಥೆ ಯರೊಬ್ಬರನ್ನೆ ಹೇಳಿದಂತಿಲ್ಲ, ಸುಮ್ಮನೇ ಅರ್ಥವಾಗದೇ ಗಲಾಟೆಯಷ್ಟೆ! ಈ ಪೀಪ್ಲಿ ಹಳ್ಳಿ ಹರ್ಯಾನ ದಲ್ಲಿರುವುದು, ನಾವು ಪಿಲಾನಿಯಿಂದ ದೆಹಲಿಗೆ ಬರುವಾಗ ಸಿಕ್ಕಿದೆ. ಅಲ್ಲಿ ವಿಪರೇತ ಬಡತನ. ನಮ್ಮ ಆಂಧ್ರ ಪ್ರದೇಶದಲ್ಲೂ ಸಾಲ ತೀರಿಸಲಾಗದೇ ರೈತರು,ನೇಕಾರರು ಆತ್ಮ ಹತ್ಯೆ ಮಾಡಿದ್ದಾರೆ. ನನ್ನ ಪ್ರಕಾರ ಇದರಲ್ಲಿ ರೈತರನ್ನು ಹೀಗಳೆದಿಲ್ಲ, ಬದಲು ರಾಜಕೀಯದವರನ್ನು, ಸರಕಾರೀ ಅಧಿಕಾರಿಗಳನ್ನು, ಮತ್ತು ಪತ್ರಿಕಾ ಮತ್ತು ದೂರದರ್ಶನ ಮಾಧ್ಯಮಗಳವರನ್ನು ಗೇಲಿ ಮಾಡಿದ್ದಾರೆ.
      ಶೈಲಜ

  2. ಶ್ರೇಷ್ಟ ಚಿತ್ರದ ಎಲ್ಲ ಲಕ್ಷಣಗಳೂ ಸ್ಪಷ್ಟ ಗೋಚರಿಸುತ್ತವೆ, ನೋಡಲು ನಾನು ಕಾಯಬೇಕು, ನಿನ್ನ ನಿರೂಪಣೆ ಸವಿವರವಾಗಿ ಚೆನ್ನಾಗಿ ಬ೦ದಿದೆ, ವ೦ದನೆಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s