ಮಕ್ಕಳ ಪ್ರಗತಿ, ಬೆಳವಣಿಗೆ ಸಂತೋಷಕರವೇ ?

ಮಕ್ಕಳ ಪ್ರಗತಿ, ಬೆಳವಣಿಗೆ ಸಂತೋಷಕರವೇ ?
ಈ ಯೋಚನೆ ನಾನು ನನ್ನಿಬ್ಬರು ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆಂದು ದೂರದೂರಾದ ಪಿಲಾನಿಗೆ ಕಳುಹಿದಾಗ ಕಾಡಿತು.
ನಮ್ಮ ಜೀವನ ನೀರಿನ ಪ್ರವಾಹವಿದ್ದಂತೆ,ಅದು ನಿರಂತರ ಸಾಗುತ್ತಿರುತ್ತದೆ ಮತ್ತು ಚಿರ ನೂತನ. ನಾನು ನನ್ನ ಬಾಲ್ಯವನ್ನು ನೆನೆದರೆ, ನಾನೂ ತಮ್ಮನೂ ಇನ್ನು ಬೇರೆ ಹಿರಿಯ ಕಿರಿಯರ ಓರಗೆಯಲ್ಲಿ ಬೆಳೆದುದು ನೆನಪಿಗೆ ಬರುತ್ತದೆ. ನನ್ನದೇನೂ ಮಂದಿಯೊಂದಿಗೆ ಹಂಚಿಕೊಳ್ಳುವಂತ ವಿಶಿಷ್ಟವಾದ ಜೀವನವೇನಲ್ಲ, ಅಪರೂಪದ ಘಟನೆಗಳೂ ನಡೆದಿಲ್ಲ. ಆದರೆ ಪ್ರತಿಯೊಂದು ಮಾನವ ಯಾ ಜೀವಿಯ ಬದುಕು ಅದರದರ ಸ್ಥಾನದಲ್ಲಿ ಪರಿಪೂರ್ಣ,ಪ್ರತಿ ಜೀವನ ಚಕ್ರಕ್ಕೊಂದು ಲಾಸ್ಯ, ಲಯವಿದೆ.
ನಾನು ವಿವಾಹಿತಳಾಗಿ  ಹೊಸ ಜೀವನ ಪ್ರಾರಂಭಿಸಿದಾಗ ನನ್ನನ್ನು ಪ್ರೌಢೆಯೆಂದೇನೂ ಭಾವಿಸಿರಲಿಲ್ಲ, ನನ್ನ ವಯೋಧರ್ಮಕ್ಕನುಗುಣವಾಗಿ ಯೋಚಿಸುತ್ತಿದ್ದೆ, ನಡೆಯುತ್ತಿದ್ದೆ. ಮುಂದಿನ ಕೆಲವು ವರ್ಷಗಳಲ್ಲಿ  ಪ್ರಕೃತಿ ನಿಯಮಾನುಸಾರವಾಗಿ ನನ್ನ ವಂಶದ ಪೀಳಿಗೆಯಾಗಿ ನನ್ನ ಮಗಳು ಇಲಾ ಮತ್ತು ಮಗ ಅನಿರುದ್ಧರ ಆಗಮನ. ಅವರ ಲಾಲನೆ-ಪಾಲನೆ, ಪೋಷಣೆಗಳಲ್ಲಿ ಕಲಿತುದು ಕಂಡುದು ಬಹಳ ವಿಚಾರ, ಅವರಿಂದಾಗಿ ನಾನು ಪ್ರೌಢಳಾದೆ ಎಂದೆನಿಸುತ್ತದೆ. ಮುಂದೆ ಈ ಮಕ್ಕಳೇ ಶಾಲೆ ಮೆಟ್ಟಲೇರುತ್ತಾ ಹದಿವಯಸ್ಸಿಗೆ ಕಾಲಿಡುತ್ತಾ ನನ್ನೆತ್ತರಕ್ಕೆ ಬೆಳೆದು ನಿಂತರು.ಆಗ ನಾನು ಅವರಿಂದ ಹೊಸ ಪ್ರಪಂಚವನ್ನು ಅರ್ಥ ಮಾಡಿಕೊಂಡೆ. ಕೆಲವೊಮ್ಮೆಈಗಿನ ಹೊಸ ವಿಚಾರಗಳನ್ನು ಅವರು ನನ್ನಿಂದ ಹೆಚ್ಚು ತಿಳಿದವರೆಂಬುವುದನ್ನು  ಅರಿತೆ.
ನನ್ನ ಮಗಳು ಮತ್ತು ಮಗ ಸ್ವಭಾವದಲ್ಲಿ ಪೂರ್ತಿ ಭಿನ್ನ, ಇವಳೋ ಚಟುವಟಿಕೆಗಳೊಂದಿಗೆ ವಾಚಾಳಿಯಾಗಿ ಓರಗೆಯವರೊಂದಿಗೆ ಸ್ನೇಹದಿಂದಿದ್ದರೆ ಇನ್ನೊಬ್ಬ ಮಿತಭಾಷಿಯಾಗಿ ಯಾವುದೇ ದೈಹಿಕ ಚಟುವಟಿಕೆಗಳಲ್ಲಿ  ಗಮನವನ್ನು ಹರಿಸದೆ, ತನ್ನ ಕೆಲವೇ ಸ್ನೇಹಿತರೊಂದಿಗೆ ಬೆರೆಯುತ್ತಾ, ತನ್ನ ಆಸಕ್ತಿಯ ಪುಸ್ತಕಗಳನ್ನು ಓದುತ್ತಾ ಬೆಳೆದನು.  ಮಗಳು ಇಲಾ ೧೦ನೇ ತರಗತಿ ದಾಟಿದಾಗ ತಾನು ಮುಂದೇನು ಓದಬೇಕೆಂಬ ಗೊಂದಲಕ್ಕೊಳಗಾದಳು,ಅವಳು ಇನ್ನೊಬ್ಬರ ಸಲಹೆಯನ್ನು ಸುಲಭವಾಗಿ ಸ್ವೀಕರಿಸುವವಳಲ್ಲ. ಅವಳು  ೧೧ನೇ ತರಗತಿಗೆ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಳು. ಅವಳ ಗೊಂದಲಗಳೊಂದಿಗೆ ೧೨ನೇ ತರಗತಿಯನ್ನು ಮುಗಿಸಿದಾಗ ಮುಂದಕ್ಕೇನು ಮಾಡುವುದೆಂದು ಸಮಸ್ಯೆ ಎದುರಾಯಿತು. ಅವಳು ಮಹತ್ವಾಕಾಂಕ್ಷಿ, ಆದರೆ ಅದಕ್ಕೆ ಸರಿಯಾಗಿ ಅವಳು ಪ್ರಯತ್ನ ಪಡಲಿಲ್ಲ; ಇದರಿಂದಾಗಿ ಅವಳು ತನಗೆ ಪ್ರವೇಶ ದೊರಕಿದ ಯಾವುದೇ ಕಾಲೇಜಿನಲ್ಲೂ ಸೇರಿಕೊಳ್ಳದೆ, ಪುನಃ ಚೆನ್ನಾಗಿ ಓದಿ ಮರು ವರ್ಷ ಪರೀಕ್ಷೆ ಬರೆಯುವ ನಿರ್ಧಾರವನ್ನು  ಕೈಗೊಂಡಳು.ಅವಳ ದೃಷ್ಟಿಯಿದ್ದುದು BITS Pilani (BIRLA INSTITUTE OF TECHNOLOGY AND SCIENCE) ಯತ್ತ. ಮರು ವರ್ಷ ಪುನಃ ಎಲ್ಲ ಪ್ರವೇಶ ಪರೀಕ್ಷೆಗಳನ್ನು ಬರೆದಳು, ಕೊನೆಯಲ್ಲಿ ಮಣಿಪಾಲದಲ್ಲಿ B.Pharma ಕ್ಕೆ ಸೇರಿಕೊಂಡಳು. ಆಗ ಅವಳ ಅಜ್ಜ-ಅಜ್ಜಿಯಂದಿರ ಸಂತೋಷಕ್ಕೆ ಪಾರವೇ ಇರಲಿಲ್ಲ, ಕಾರಣ ಮೊಮ್ಮಗಳು ಹತ್ತಿರದಲ್ಲಿರುತ್ತಾಳೆ ಎಂದು ! ಅವರ ಸಂತೋಷ ಬಹಳ ದಿನಗಳದ್ದಾಗಲಿಲ್ಲ. ಕೊನೆಯ ಹಂತದಲ್ಲಿ ಅವಳಿಗೆ BITS Pilani ಯಲ್ಲಿ B.Pharma ಪ್ರವೇಶಕ್ಕೆ ಕರೆ ಬಂದಿತು. ಅವಳ ಅಜ್ಜ-ಅಜ್ಜಿಯಂದಿರು ಮೊಮ್ಮಗಳು  ಅಷ್ಟು ದೂರ ಹೋಗುವುದನ್ನು ಒಕ್ಕೊರಲಿನಿಂದ ವಿರೋಧಿಸಿದರು ಮತ್ತು ತಡೆಯಲೆತ್ನಿಸಿದರು. ಕೊನೆಯಲ್ಲಿ ಅವಳ ಹಟವೇ ಗೆದ್ದಿತು.ಮುಂದಿನ ಮೂರು ದಿನಗಳೊಳಗೆ ಆಗಾಗಲೇ ಸೇರಿದ್ದ ಮಣಿಪಾಲದ ಕಾಲೇಜಿನಿಂದ ಕಾಗದ ಪತ್ರಗಳನ್ನು ಹಿಂದಕ್ಕೆ ಪಡೆದುಕೊಂಡು, ನಾವಿರುವ ಹೈದರಾಬಾದಿಗೆ ಬಂದು, ನಾವೆಲ್ಲಾ ಪಿಲಾನಿಯತ್ತ  ಪಯಣಿಸಿದೆವು. ನಿಗಧಿತ ದಿನ ಹೇಳಿದ ವೇಳೆಯಲ್ಲಿ ನಾವು ಅಲ್ಲಿ ಹಾಜರಾದೆವು.
ನಮ್ಮ ದೇಶದ ದೊಡ್ಡ ವರ್ತಕ ಸಮುದಾಯಕ್ಕೆ ಸೇರಿದ ಜಿ.ಡಿ.ಬಿರ್ಲಾರವರು( ಘನಶ್ಯಾಮ ದಾಸ್ ಬಿರ್ಲಾ) ಮೂಲತಃ ರಾಜಸ್ಥಾನದ ಪಿಲಾನಿಯವರು. ಇವರು ತಮ್ಮ ಹುಟ್ಟೂರಾದ ಪಿಲಾನಿಯಲ್ಲಿ
ವಿದ್ಯಾಭ್ಯಾಸಕ್ಕೇನೂ ಸವಲತ್ತುಗಳಿಲ್ಲದಿರುವುದನ್ನು ಮನಗಂಡು ಹೆಣ್ಣು-ಗಂಡು ಮಕ್ಕಳೀರ್ವರೂ ಓದಲಾಗುವಂತೆ ೧೯೦೦ ರಲ್ಲಿ ಪಾಠಶಾಲೆಯೊಂದನ್ನು ತೆರೆದರು. ಇವರು ಗಾಂಧಿ,ನೆಹರೂರವರ ಸಮಕಾಲೀನರು, ಆಪ್ತ ಮಿತ್ರರು ಹಾಗೂ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾದವರು. ಮುಂದೆ ಇದೇ ಶಾಲೆ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಮುಂದುವರಿಯುತ್ತಾ ವಿಜ್ಞಾನ,ಕಲೆ, ತಾಂತ್ರಿಕತೆ ಹೀಗೆ ವಿವಿಧ ವಿಷಯಗಳ ಅಧ್ಯಯನವನ್ನು ಅಳವಡಿಸಿಕೊಳ್ಳುತ್ತ ಬೆಳೆಯಿತು.  ೧೯೬೪ರ ಕಾಲದಲ್ಲಿ ಈ ಸಂಸ್ಥೆಯ ಎಲ್ಲ ಕಾಲೇಜುಗಳನ್ನು ಒಂದಾಗಿಸಿ ವಿಶ್ವವಿದ್ಯಾಲಯವಾಗಿ ಇದು ಮಾರ್ಪಟ್ಟಿತು. ಇದು ಜಾಗತಿಕ ಮಟ್ಟದಲ್ಲೇ ಹೆಸರುವಾಸಿಯಾಗುವಂತೆ ಬೆಳೆಯಿತು.  ಇಲ್ಲಿ ದೇಶದ ಎಲ್ಲಾ ರಾಜ್ಯಗಳ ೧೨ನೇ ತರಗತಿಯ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದವರಿಗೆ ಪ್ರವೇಶ ನೀಡುವ ಪದ್ಧತಿಯನ್ನು  ಇಟ್ಟುಕೊಂಡಿದ್ದಾರೆ.ಈ ವರೆಗೆ ಇಲ್ಲಿ ಯಾವುದೇ ಸಂದರ್ಭದಲ್ಲೂ ಯಾವುದೇ ರಾಜಕೀಯ ಶಿಫಾರಸು, ಒತ್ತಾಯಕ್ಕೆ ಮಣಿಯದೆ ತಮ್ಮದೆ ನಿಲುವಿಗನುಸಾರವಾಗಿ  ಅರ್ಹತೆಯೊಂದನ್ನೆ ಮನ್ನಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.ಈಗ ಕಳೆದ ೬-೭ ವರ್ಷಗಳಿಂದ ಪ್ರವೇಶ ಪರೀಕ್ಷೆ ನಡೆಸುತ್ತಿದ್ದಾರೆ.

BITS ನ ಆವರಣವು ಮರುಭೂಮಿಯ ಪ್ರಾರಂಭದ ಹಂತದಲ್ಲಿದೆ.ಇದು ಸಾಧಾರಣ  ದೆಹಲಿಯಿಂದ ೨೦೦ ಕಿ.ಮಿ.ದೂರದಲ್ಲಿದೆ.ಇಲ್ಲಿನದು ವೈಪರೀತ್ಯ ಹವಾಮಾನ.ಬೇಸಗೆಯಲ್ಲಿ ೪೦-೪೫ ”C,ಕೆಲವೊಮ್ಮೆ ಇನ್ನೂ ಹೆಚ್ಚಿಗೆ. ಬಿಸಿ ಗಾಳಿಯ ಒಣ ಹವೆ,  ಗಾಳಿಯಲ್ಲಿ ಉಸುಕು ಮಿಶ್ರವಾಗಿರುವುದೂ ಉಂಟು(dust storm). ಹಾಗಾಗಿ ಅಲ್ಲಿನ ಜನರು ಮುಖ ಮುಚ್ಚಿಕೊಳ್ಳುತ್ತಾರೆ, ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಬಿಸಿಲಿನಿಂದ ಚರ್ಮ ಸುಡದಂತೆ ಪೂರ್ತಿ ಮುಚ್ಚುವಂತ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಇಲ್ಲಿನ ಚಳಿಯೂ ಅತಿಯೇ, ಡಿಸೆಂಬರ್, ಜನವರಿ ತಿಂಗಳಲ್ಲಿ ತಾಪಮಾನ ೩-೪”C ಗೆ ಇಳಿಯುತ್ತದೆ. ಆಗ ವಿದ್ಯಾರ್ಥಿಗಳು ಬಿಸಿ ನೀರಿಗಾಗಿ ಕೆಟಲ್ ಇಟ್ಟುಕೊಳ್ಳುತ್ತಾರೆ. ಇಲ್ಲಿನ ಕಠಿಣ ಹವೆ ಹೇಗೆ ಜನರನ್ನು ಕಷ್ಟಸಹಿಷ್ಣುಗಳನ್ನಾಗಿಸುತ್ತದೆಯೋ, ಅಂತೆಯೇ  ಅವರ ವಿದ್ಯಾಭ್ಯಾಸ ಪದ್ಧತಿಯೂ ವಿದ್ಯಾರ್ಥಿಗಳನ್ನು  ಬದುಕಿನ ತೀವ್ರ ಸ್ಪರ್ಧಾತ್ಮಕ  ಸಂದರ್ಭಗಳಿಗೆ ಬೇಕಾದಂತೆ ತರಬೇತು ಮಾಡುತ್ತದೆ. ಒಟ್ಟಿನಲ್ಲಿ ಅವರು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯನ್ನು ಪ್ರೊತ್ಸಾಹಿಸುತ್ತಾರೆ.

ಪಿಲಾನಿಯ ವರ್ಣನೆ ನಮ್ಮಿಂದ ಕೇಳಿದ ಅಜ್ಜ-ಅಜ್ಜಿಯರಿಗೆ ತಾವೂ ಕಣ್ಣಾರೆ ಕಂಡು ಬರಬೇಕೆಂದೆನಿಸಿತು. ಹಾಗಾಗಿ  ಇಲಾಳ ಎರಡನೇ ವರ್ಷದಲ್ಲಿ  ನಾಲಕ್ಕು ಮಂದಿ (ನನ್ನ ಮತ್ತು ಶ್ಯಾಮನ ಅಪ್ಪ ಅಮ್ಮಂದಿರು)ರೈಲಿನಲ್ಲಿ ಅಲ್ಲಿಗೆ ಹೋಗಿ ನೋಡಿ ಸಂತೃಪ್ತರಾದರು.

ಮೊಮ್ಮಗಳನ್ನು ನೋಡಲು ಹೋದ ಅಜ್ಜ ಅಜ್ಜಿಯಂದಿರು, ಲೈಬ್ರರಿಯ ಎದುರು ನಿಂತಾಗ

ಪಿಲಾನಿ  ಊರು ಈ ವಿದ್ಯಾಸಂಸ್ಥೆಯ ಹೊರತಾಗಿ ಚಿಕ್ಕ ಹಳ್ಳಿ, ಅದೇನೂ ಪ್ರವಾಸೀ ತಾಣವಲ್ಲ. ಕಾಲೇಜಿನ ಆವರಣ ಬಹಳ ವಿಶಾಲವಾಗಿದೆ, ಸಾಧಾರಣ ೪-೫೦೦೦ ಮಂದಿ ವಿದ್ಯಾರ್ಥಿಗಳು, ಮತ್ತು ಶಿಕ್ಷಕ ವೃಂದದವರು ಸಂಸಾರದೊಂದಿಗೆ ಅಲ್ಲೇ ವಾಸವಾಗಿದ್ದಾರೆ. ಅಲ್ಲಿನ ಕೆಲಸಗಾರರೆಲ್ಲರೂ ಸುತ್ತುಮುತ್ತಲಿನ ಹಳ್ಳಿಯವರು. ಆವರಣದೊಳಗೆ ಎಲ್ಲೆಡೆಯಲ್ಲೂ ಹಸುರು, ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳು, ಅಲ್ಲಲ್ಲಿ ಉದ್ಯಾನ, ಕಾಡಿನಂತೆ ಬೆಳೆಸಿದ ಮರಗಳು, ಅವನ್ನು ಹೊಂದಿಕೊಂಡು  ಜೀವಿಸುವ ಮಯೂರಗಳು ಮತ್ತಿತರ ಪಕ್ಷಿ ಹಾಗೂ ಜೀವ ಸಂಕುಲಗಳು. ಮೊದಲ ಬಾರಿಗೆ ನಾನು ಅಲ್ಲಿಗೆ ಹೋಗಿದ್ದಾಗ ನವಿಲಿನ ಕೀರಲು ದ್ವನಿಯ ಕಿರುಚಾಟವನ್ನು ಮುಂಜಾವಿನ ಹೊತ್ತಿನಲ್ಲಿ ಬೆಕ್ಕು ಜೋರಾಗಿ ಕೂಗುತ್ತಿದೆ ಎಂದು ಭಾವಿಸಿದ್ದೆ. ಆ ಜಾಗ ಮಯೂರ ವನ ಎಂದು ಹೆಸರಿಸುವಂತಿದೆ. ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ಸಂಪರ್ಕ ಬೆಳೆಸಲು ಸಂದರ್ಭಗಳೇ ಕಮ್ಮಿ. ನಮ್ಮ ಹಳ್ಳಿಗಳಲ್ಲಿ ವಾಹನ ಸೌಕರ್ಯ ಬರುವ ಮುಂದು ಎತ್ತಿನ ಗಾಡಿ ಬಳಸಿದಂತೆ ಅಲ್ಲಿನ ಜನರು ಸಾಗಾಟಕ್ಕೆ ಒಂಟೆಗಾಡಿಯನ್ನು ಬಳಸುತ್ತಾರೆ.

ಪಿಲಾನಿಯ ಆವರಣದೊಳಗಣ ಸರಸ್ವತಿ ದೇವಾಲಯದ ಮೆಟ್ಟಲಲ್ಲಿ

ಮಗಳು ಇಲಾಳ ವಿದ್ಯಾಭ್ಯಾಸದ ಮೊದಲ ಎರಡು ವರ್ಷಗಳು ಮುಗಿಯುತ್ತಾ ಬಂದಂತೆ ಮಗ ಅನಿರುದ್ಧನ ಇಂಟರ್ ೨ನೇ ವರ್ಷ ಮುಗಿಯುತ್ತಾ ಬಂದು ಅವನು ಬೇರೆ, ಬೇರೆ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ತಯಾರಿ ಮಾಡಹತ್ತಿದ. ಅವನೊ I.I.T., BITS ಎಂದು ಹಲವಾರು ಪರೀಕ್ಷೆಗಳನ್ನು ಬರೆದನು. ಆದರೆ ಇವನ ಓದು, ತಯಾರಿಯ ಪದ್ಧತಿ ಅಕ್ಕನದಕ್ಕಿಂತ ಭಿನ್ನ, ಅವನು ಮೊದಲೇ ತನ್ನ ದಿಕ್ಕನ್ನು ನಿಶ್ಚಯಿಸಿದ್ದ. ಅವನು ದೃಷ್ಟಿಯಿಟ್ಟುದು  I.I.T ಗೆ,ಅವನು ಓದಿದ ಕಾಲೇಜಿನವರು ಈ ಮಕ್ಕಳನ್ನು ಬಿರುಸಾದ ತರಬೇತಿಯನ್ನಿತ್ತು  ಮಿಕ್ಕ ಪರೀಕ್ಷೆಗಳಿಗೂ ಸೈ ಎನ್ನುವಂತೆ ತಯಾರು ಮಾಡಿದ್ದರು. ಮೇ ತಿಂಗಳ ಕೊನೆಗಾಗುವಾಗ ಒಂದಾಗಿ ಒಂದರಂತೆ ಪ್ರವೇಶ ಪರೀಕ್ಷೆಗಳ  ಫಲಿತಾಂಶ ಹೊರಬಂತು, ಅವನ ದಾರಿ ಸ್ಪಷ್ಟವಾಗಹತ್ತಿತು. ಅವನಿಗೆ ಬೇಕೆಂದ I.I.T ಕಾಲೇಜು ಮತ್ತು ಅಭ್ಯಾಸ ವಿಷಯ  ಸಿಗಲಿಲ್ಲ, ಹಾಗಾಗಿ BITS ಗೆ ಸೇರುವುದಾಗಿ ನಿರ್ಧಾರವಾಯಿತು.
ನಮ್ಮ ಜೀವನದಲ್ಲಿ ಮಕ್ಕಳ ಪಾಲನೆ ಪೋಷಣೆಯಷ್ಟೇ  ಅವರ ವಿದ್ಯಾಭ್ಯಾಸದ ಘಟ್ಟವೂ ಪ್ರಾಮುಖ್ಯವಾದುದು. ಹೆತ್ತವರಾದ ನಮ್ಮ ಸಹಕಾರ,ತ್ಯಾಗ,ಮಾರ್ಗದರ್ಶನವಿಲ್ಲದೆ ಮಕ್ಕಳು ಮೇಲಕ್ಕೆ ಹತ್ತಲು ಸಾಧ್ಯವಿಲ್ಲ.ಆದರೆ ಇಂದಿನ ದಿನಗಳಲ್ಲಿ ದೊಡ್ಡ ಕಾಲೇಜಿನಲ್ಲಿ ಓದುವುದಕ್ಕೋಸ್ಕರ ಪಾಲಕರಾದ ನಮ್ಮಂತವರು ಅವರಿಗೆ ನೀಡುವ ಉಪಟಳ, ಒತ್ತಡ ವಿಪರೀತ. ಅವರೇ ಉತ್ಸಾಹದಲ್ಲಿ ಓದಿದಾಗಲೇ ಒತ್ತಡ ಭರಿಸಲು ಅಸಾಧ್ಯ! ಆದರೆ ಅದು ಒತ್ತಾಯದಲ್ಲಾದಾಗ ಪರಿಣಾಮ ಮಕ್ಕಳ ಮೇಲೆ ನಕಾರಾತ್ಮಕವಾಗಿರುತ್ತದೆ, ಕೆಡುಕುಗಳೇ ಆಗುತ್ತವೆ.

ಅನಿರುದ್ಧನ ಕಾಲೇಜು ಪ್ರವೇಶಕ್ಕೆ ಪಿಲಾನಿಗೆ ಹೋಗಲು ನಾವು ನಾಲಕ್ಕು ಮಂದಿಗೆ ಟಿಕೆಟು ತೆಗೆದಿರಿಸಿ ತಯಾರಾದೆವು. ನಮ್ಮ ಮನೆಯಲ್ಲೊಂದು ವಿಪರ್ಯಾಸವೆಂದರೆ ನಾವು ಎಷ್ಟೇ ಮುಂದಾಲೋಚನೆಯಲ್ಲಿ ನಮ್ಮ ಪ್ರವಾಸಗಳ ತಯಾರಿ ಮಾಡಿದರೂ ಕೊನೆಯ ನಿಮಿಷದ ವರೆಗೂ ಶ್ಯಾಮ ನಮ್ಮೊಂದಿಗೆ ಪಯಣಿಸುತ್ತಾರೋ ಇಲ್ಲವೋ ಎಂದು ನಮಗೆ ತಿಳಿದಿರುವುದಿಲ್ಲ, ಈ ಬಾರಿಯೂ ಹಾಗೇ ಕೊನೆಯ ಎರಡು ದಿನಗಳಿರುವಾಗ ಅವರ ಆಫೀಸ್ ಕೆಲಸದ ನಿಮಿತ್ತ ಬೇರೆಡೆಗೆ ಹೋಗಬೇಕಾಗಿ ಬಂತು. ನಾನೂ ಮಕ್ಕಳೀರ್ವರೂ ದೆಹಲಿಗೆ ಹೋಗಿ , ಅಲ್ಲಿಂದ ಮೊದಲೇ ನಿಗಧಿಸಿಟ್ಟಿದ್ದ ಬಾಡಿಗೆ ಕಾರಲ್ಲಿ ಪಿಲಾನಿಯಲ್ಲಿ ಬಂದಿಳಿದೆವು. ನಾನು ಆ ಮೊದಲೇ ೨ ಬಾರಿ ಹೋಗಿದ್ದುದರಿಂದ ,ಇಲಾ ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಪ್ರಯಾಣಿಸಿದ್ದುದರಿಂದ ಮಾನಸಿಕ ಆತಂಕಗಳೇನು ಇರಲಿಲ್ಲ. ಅಲ್ಲಿನ ಅತಿಥಿ ಗೃಹದಲ್ಲಿ ಇಳಿದೆವು. ಎಲ್ಲಾ ಮುಖ್ಯ ಕೆಲಸಗಳು ಮುಗಿದ ನಂತರ ಶ್ಯಾಮ ನಮ್ಮನ್ನು ಕೂಡಿಕೊಂಡರು.

ಪ್ರಯಾಣಕ್ಕೆ ಸಜ್ಜಾದ ನಾವು

ಮಾರನೇ ದಿನ ನಾನು ಮತ್ತು ಅನಿರುದ್ಧ ಅವನ ಕಾಲೇಜಿನ ಪ್ರವೇಶಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕಟ್ಟಲೆಗಳನ್ನು ಒಂದೊಂದಾಗಿ ಪೂರೈಸಿದೆವು. ಅಲ್ಲಿ ದೇಶದ ಯಾವ್ಯಾವುದೋ ಮೂಲೆಗಳಿಂದ ಬಂದ ಬಂದ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಆತಂಕಭರಿತ ಮುಖದಲ್ಲಿ ಒಬ್ಬರನ್ನೊಬ್ಬರು ಪ್ರಶ್ನಿಸುತ್ತ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಎಲ್ಲರ ಸಮಸ್ಯೆಯೂ ಒಂದೇ- ಅದು, ನಮ್ಮ ಮಗ ಅಥವಾ ಮಗಳು ಇಲ್ಲಿನ ಹವೆಗೆ, ಮತ್ತು ಇಷ್ಟು ದೂರದೂರಿಗೆ ಹೇಗೆ ಹೊಂದಿಕೊಳ್ಳುತ್ತಾರೆ? ನಾನು ಕಂಡಂತೆ ನೀರಿಗೆಸೆದರೆ ಹೇಗೆ ಈಜು ಬರುತ್ತದೆಯೋ ಹಾಗೇ ಅಲ್ಲಿ ಸಮಯ ಕಳೆದಂತೆ ಅದೇ ಬೆದರಿದ ಮಕ್ಕಳು ಆತ್ಮ ವಿಶ್ವಾಸದೊಂದಿಗೆ ಓದು, ಒಡನಾಟ,ವ್ಯವಹಾರಗಳನ್ನೆಲ್ಲ ನಿಭಾಯಿಸಲು ಸಮರ್ಥರಾಗುತ್ತಾರೆ.
ಉತ್ತರಭಾರತದಲ್ಲಿ ಅಗಸ್ಟ್ ತಿಂಗಳಿನಲ್ಲಿ ಮಳೆಯಾಗಿ ಸುಡು ಬಿಸಿ ತಗ್ಗಿ, ಹವೆಯಲ್ಲಿ ತೇವಾಂಶ ಹೆಚ್ಚುತ್ತದೆ. ಆ ಸಮಯದಲ್ಲಿ ದೆಹಲಿಯಲ್ಲಿ, ಪಿಲಾನಿಯಲ್ಲಿ ಮಳೆ ಬೀಳುತ್ತದೆ. ನನಗೆ ಅನುಭವವಾದಂತೆ ಆ ತಿಂಗಳಲ್ಲಿ ಅಲ್ಲಿ ವಿಪರೀತ ಬೆವರುವ ಹವೆ. ಅಭ್ಯಾಸವಿಲ್ಲದವರಿಗೆ ಬೆವರಿನಿಂದಾಗಿ ದೇಹದ ಉಪ್ಪಿನಂಶ ಹೊರಹೋಗಿ,ನೀರಿನಂಶ ತಗ್ಗಿ ದಣಿವಾಗುತ್ತದೆ. ಹಾಗಾಗಿ  ನಾವು  ಅಲ್ಲಿ ನೀರು ಕುಡಿಯುತ್ತಲೇ ಇರಬೇಕು.
ಅಲ್ಲಿ ಕಾಲೇಜಿನೊಳಗೆ ಎಲ್ಲೆಡೆಯಲ್ಲಿ ಶುದ್ಧಿಸಿದ, ಶೀತಲೀಕರಿಸಿದ ನೀರನ್ನಿಟ್ಟು (Water cooler) ಜನರಿಗೆ ತಿಳಿಯುವಂತೆ ಬರೆದಿರುತ್ತಾರೆ. ನನಗೆ ಮೊದಲ ಬಾರಿ, ನಿದ್ರೆ ಕೆಟ್ಟು ಪ್ರಯಾಣಿಸಿ, ದಣಿವು ಬಾಯಾರಿಕೆಗಳಿಂದ  ಅಸ್ವಸ್ಥಳಾಗಿ ಅಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಪರೀಕ್ಷಿಸುವ ಸಂದರ್ಭ ಒದಗಿತ್ತು.

ನಾವು ಈಗಿನ ವಿಭಕ್ತ,ಸಣ್ಣ  ಕುಟುಂಬ ಪದ್ಧತಿಯಲ್ಲಿ, ದೊಡ್ಡ ಪಟ್ಟಣಗಳಲ್ಲಿ ಮಕ್ಕಳನ್ನು ತುಂಬ ಮುಚ್ಚಟೆಯಲ್ಲಿ ಬೆಳೆಸಿರುತ್ತೇವೆ. ಅವರಿಗೆ ಬಟ್ಟೆಬರೆ ತೊಳೆಯುವುದು, ಜೋಡಿಸಿಟ್ಟುಕೊಳ್ಳುವುದು, ತಮ್ಮ ವಸ್ತುಗಳನ್ನು ಕಾಪಾಡಿಕೊಳ್ಳುವುದು ಅಭ್ಯಾಸವಿರುವುದಿಲ್ಲ. ಮತ್ತು ಇತರರೊಂದಿಗೆ ಹೊಂದಿಕೊಂಡು ನಡೆಯುವುದು, ನುಡಿಯುವುದು ತಿಳಿದಿರುವುದಿಲ್ಲ.ಮಕ್ಕಳು ಕಾಲೇಜು ಮಟ್ಟಲು ಹತ್ತುವುದೆಂದರೆ ಪ್ರೌಢ ಜೀವನದ ಮೊದಲ ಮೆಟ್ಟಲು ತುಳಿಯುವುದು. ಅವರು ಅಮ್ಮನ ಕಣ್ಣಳತೆಯಿಂದ ದೂರಾದಾಗ ಬೇಗನೇ ಜವಾಬ್ದಾರಿಯುತರಾಗುತ್ತಾರೆ ಮತ್ತು ಪ್ರಪಂಚವನ್ನು ಅರ್ಥೈಸಿಕೊಳ್ಳಲು ಯತ್ನಿಸುತ್ತಾರೆ. ನಾನು ನನ್ನಿಬ್ಬರು ಮಕ್ಕಳು ಮುಂಬರುವ ವರುಷಗಳಲ್ಲಿ ಈ ಮರುಭೂಮಿಯೂರಲ್ಲಿ ಓದಿ, ಕಲಿತು ಸಧೃಡರಾಗಿ ಬೆಳೆದು ಲೋಕದ ಸತ್ಪ್ರಜೆಗಳಾಗಲಿ ಎಂದು ಮನದಲ್ಲಿ ಹಾರೈಸುತ್ತ ಹಿಂದಿರುಗಿದೆ.
ನನ್ನ ಸೋದರ ಭಾವನಾದ ಅಶೋಕ ವರ್ಧನರು ” ನಿನ್ನ ಕರುಳ ಕುಡಿಗಳನ್ನು ಮರುಭೂಮಿಯಲ್ಲಿ ನೆಟ್ಟು ಬಂದುದನ್ನು ನಮಗೆ ಬರೆದು ತಿಳಿಸು” ಎಂದುದಕ್ಕಾಗಿ ನಾನಿದನ್ನು ಬರೆದೆ.

15 thoughts on “ಮಕ್ಕಳ ಪ್ರಗತಿ, ಬೆಳವಣಿಗೆ ಸಂತೋಷಕರವೇ ?

  1. ಜೀವನ ಪಯಣದಲ್ಲಿ ಎಲ್ಲರೂ ಇಂದು ಅನುಭವಿಸಲೇ ಬೇಕಾದ ಸನ್ನಿವೇಶದ ಸನ್ನಿವೇಶದ ವರ್ಣನೆ ಇದು. ಚೆನ್ನಾಗಿ ಮೂಡಿಬಂದಿದೆ.

    ಮಕ್ಕಳು ತಂದೆತಾಯಿಯರ ಭಾವಬಂಧನವನ್ನು ಕಳಚಿಕೊಂಡು ಸ್ವತಂತ್ರವಾಗಿ ಬಾಳ್ವೆನಡೆಸಲು ಕಲಿಯುವ ನಿಟ್ಟಿನಲ್ಲಿ ಇಡುವ ಮೊದಲ ಅನಿವಾರ್ಯ ಹೆಜ್ಜೆ ಇದು. ಬಹುಶಃ ಇಂದಿನ ‘ಫಾಸ್ಟ್’ ಜಗತ್ತಿನಲ್ಲಿ ಅಪೇಕ್ಷಣೀಯ. ಆದರೆ, ಸಮಸ್ಯೆ ಎದುರಾಗುವುದು ಕೃಷಿಯೇತರ ಉದ್ಯೋಗವನ್ನು ಅವಲಂಬಿಸಿರುವ ಇಂದಿನ ಚಿಕ್ಕ ವಿಭಕ್ತ ಕುಟುಂಬಗಳ ತಂದೆತಾಯಿಯರಿಗೆ, ಅವರನ್ನು ವೃದ್ಧಾಪ್ಯದ ಸಮಸ್ಯೆಗಳು ಕಾಡತೊಡಗಿದಾಗ.ಇದರ ಅರಿವು ಇಂದಲ್ಲ ನಾಳೆ ಎಲ್ಲರಿಗೂ ಆಗುವುದು ಖಚಿತ.(ಕೃಷಿ ಅವಲಂಬಿತ ಚಿಕ್ಕ ವಿಭಕ್ತ ಕುಟುಂಬಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗುತ್ತಿದೆ). ಸಮಸ್ಯೆ ಹಣದ ಕೊರತೆಯಿಂದ ಉದ್ಭವಿಸಿದವು ಅಲ್ಲ ಎಂಬುದು ಗಮನಾರ್ಹ. ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಹುಡುಕಬೇಕಿದೆ.

    • ನೀವು ಹೇಳಿದ್ದು ಅಕ್ಷರಶಃ ನಿಜ, ಈ ಸಮಸ್ಯೆ ಸಾರ್ವತ್ರಿಕ, ಮತ್ತು ನಿಭಾಯಿಸಲೇಬೇಕಾದ ಘಟ್ಟ. ಬಹುಶಃ ನಮ್ಮ ಇಳಿಪ್ರಾಯಕ್ಕಾಗುವಾಗ ನಮ್ಮ ದೇಶದಲ್ಲೂ ವೃದ್ಧಾಶ್ರಮ ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಸಾಮಾನ್ಯವಾಗುತ್ತದೆ. ಪಿಲಾನಿಯಲ್ಲಿ ನಮ್ಮೂರಿನವರು ಇಬ್ಬರು ಸಂಸಾರವಂದಿಗರಾಗಿದ್ದಾರೆ. ಅವರಲ್ಲೊಬ್ಬರು ಪ್ರಸ್ತುತ ಡೈರೆಕ್ಟರ್ ಆಗಿರುವ ರಘುರಾಮ್ ಎಂಬವರು, ಇನ್ನೊಬ್ಬರು ಲೈಬ್ರೆರಿಯನ್ ಈಶ್ವರ ಭಟ್. ನನ್ನ ಫೊಟೊದಲ್ಲಿ ಅವರನ್ನು ಕಾಣಬಹುದು.
      ಶೈಲಜ

  2. Both of us liked your blog very much. You have expressed yourself very well. We felt that we were in Pilani with you and all those other parents who have to lead a life without their children with them all the time. The next stage in life.
    In the beginning we miss our children but then when we have our own interests and we also start leading the next stage in our life.
    Life goes on and it is in our hands to make life interesting and worth living.
    All the best
    Bava and Lakshmi

  3. ಶೈಲಗಾ
    ನಿನ್ನ ಮತ್ತು ತಮ್ಮಣ್ಣನ (ಎ.ಪಿ ಸುಬ್ರಹ್ಮಣ್ಯಂ ಉರುಫ್ ಜಿಂಕೆ ಸುಬ್ಬ) ಬಾಲ್ಯದಲ್ಲಿ ಕೀಟಲೆಕೋರನಾಗಿಯೇ ಇದ್ದ ನನಗೆ (ನನ್ನ ತಮ್ಮ ಆನಂದನೂ ಕಡಿಮೆಯೇನೂ ಅಲ್ಲ) ನೀನು ಗೃಹಸ್ಥಳಾಗಿ ದೂರವಾದರೂ ಮಂಗಳೂರಿನಲ್ಲಿ ನಿನ್ನಪ್ಪಮ್ಮರ ನೆರೆಮನೆಯವನಾದ ಭಾಗ್ಯದಲ್ಲಿ ಇಳಾನಿರುದ್ಧರ ಒಡನಾಟ ಕಡಿಮೆ ಸಿಕ್ಕಿಲ್ಲ. ಗಾಯತ್ರಂಗಿ (ಬಾತ್ರುಚ್ಚೆ- ಇಳಾ), ಗೌರ್ನಮೆಂಟ್ ಬಸ್ಸಾ (ರೆಡ್ ಸಾಂಬಾರ್ ಉರುಫ್ Oniಯಣ್ಣ – ಅನಿರುದ್ಧ) ಇಂದು ಬೆಳೆದು, ಪರೋಕ್ಷವಾಗಿ ಸ್ವತಂತ್ರರಾಗಿ ನಿಂತ ಕತೆ ತುಂಬ ಕುಶಿಕೊಟ್ಟಿತು. ಎಲ್ಲರಿಗೂ ಶುಭಾಶಯಗಳು
    ಅಸಕ್ಕ ಭಾವ

  4. Gives an account of a confident mother’s optimism about her children’s ability though it hides the feeling of pain to remain away from her loved ones for a while.
    It reflects the affection, positiveness, brave outlook and the ache of separation in a subtle way which only the parents can feel from the writing.
    Keep it up and all the best.
    Bava

  5. ಶೈಲಾ, ಆಪ್ತ ಬರವಣಿಗೆ. ಮನದ ಭಾವಕ್ಕೆ ಬಾಷೆಯ ಕಾವು. ಮಕ್ಕಳು ದೊಡ್ಡವರಾದ ಹಾಗೆ ಅವರಿಂದ ನಾವು ಕಲಿಯುವುದೇ ಹೆಚ್ಚು ಎಂಬ ಹಮ್ಮು ಬಿಟ್ಟ ಭಾವ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುತ್ತದೆ. ನಿನ್ನ ಮಕ್ಕಳಿಬ್ಬರು ಕಣ್ಣು ಬಿಟ್ಟು ಈಗ ಜಗದಗಲವ ಆಳೆಯಲು ಹೊರಟ ಪರಿಯ ಸೊಬಗು ನಮಗೆಲ್ಲ ಖುಷಿಯ ಕೊಡುವ ಹೊತ್ತು. ಸಸಿಗಳ ತಾಯಿ ಬೇರು ಗಟ್ಟಿಯಾಗಿವೆ – ಸಿಕ್ಕ ಪೋಷಕಾಂಶಗಳಿಂದ. ಮರುಭೂಮಿಯಲ್ಲೂ ನಳನಳಿಸಿ ಬರಲಿವೆ. ಇಂದು ನಿನ್ನ ಅನುಭವ ನಾಳೆ ನಮ್ಮದೂ. ಹಾಗೆ ನೋಡಿದರೆ ಎಲ್ಲರದೂ – ಕಥೆ ಸದಾ ನೆಮ್ಮದಿಯದ್ದಾದರೆ ಸಾಕು.
    ರಾಧಕ್ಕ.

    • ರಾಧಾ,
      ಮಕ್ಕಳು ನಮ್ಮ ಎತ್ತರಕ್ಕೆ ಬೆಳೆಯುವುದು, ನಮ್ಮನ್ನು ಮೀರಿ ಬೆಳೆದಾಗ ನಾವು ಸಂತೋಷ ಪಡುವುದು ಪ್ರಕೃತಿ ಧರ್ಮ. ನಮ್ಮಿಂದ ದೂರವಾಗುವುದಂತು ಅನಿವಾರ್ಯ. ಗರಿ ಬೆಳೆದ ಹಕ್ಕಿ ಹಾರದಿದ್ದಲ್ಲಿ ಆ ಮರಿ ಮತ್ತು ತಾಯಿ ಇಬ್ಬರಿಗೂ ಅದು ದುಃಖದ ವಿಷಯ, ಹಾಗಾಗಿ ನಾವು ಸಂತೋಷ ಪಡುವುದರಲ್ಲೆ ನಮ್ಮ ಬುದ್ಧಿವಂತಿಕೆಯಿದೆ.
      ಶೈಲಜ

Leave a reply to ಅಶೋಕವರ್ಧನ ಪ್ರತ್ಯುತ್ತರವನ್ನು ರದ್ದುಮಾಡಿ