ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೨

ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ- ಭಾಗ ೨

https://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/  .  ಇದು  ಮೊದಲಿನ ಭಾಗ

 

ಈ ಮೊದಲಿನ ಭಾಗದಲ್ಲಿ ನಾವು ಸ್ಥೂಲವಾಗಿ ಬೌದ್ಧ ಧರ್ಮದ ಸಂಸ್ಕೃತಿ ಅಪಘಾನಿಸ್ಥಾನ,ಮಧ್ಯ ಏಶಿಯಾ, ಚೀನಾದೇಶ ಮತ್ತು ಕೊರಿಯಾಗಳಲ್ಲಿ ಹರಡಿದ್ದನ್ನು ಪರಿಗಣಿಸಿದೆವು. ಬೌದ್ಧ  ಧರ್ಮದ ಸಂಸ್ಕೃತಿ ಎಂದರೆ ಅದು  ಆ ಜನರ ದೈನಂದಿನ ಸ್ವಂತ ಬದುಕು, ಸಾಮಾಜಿಕ ವಿಧಿ ನಿಯಮಗಳು, ಆಚಾರ ವಿಧಾನಗಳು,ಸಾಂಘಿಕ ವ್ಯವಸ್ಥೆ,  ನೀತಿ ತತ್ತ್ವಗಳು, ಆಧ್ಯಾತ್ಮಿಕತೆ, ಆಡಳಿತ ವಿಧಿ ನಿಯಮಗಳು, ನ್ಯಾಯ ತತ್ತ್ವಗಳು, ಆರ್ಥಿಕ  ಬದುಕು ಇವೆಲ್ಲವೂ ಸೇರುತ್ತದೆ. ಈ ಧರ್ಮವು ಇಸ್ಲಾಮ್ ಆಕ್ರಮಣಕಾರರಿಂದಾಗಿ ಅಪಘಾನಿಸ್ಥಾನ, ಮಧ್ಯ ಏಶಿಯಾದಲ್ಲಿ ಕ್ರಿ.ಶ.೭-೮ರ  ಶತಮಾನದಲ್ಲಿ  ಕೊನೆಗೊಂಡಿತು.ಆದರೆ ಚೀನಾದಲ್ಲಿ ಅದು ಭವ್ಯವಾಗಿ, ಯಶಸ್ವಿಯಾಗಿ  ಕಳೆದ ೨೦೦೦ ಸಾವಿರ ವರ್ಷಗಳಿಂದ  ಬೆಳೆಯಿತು, ಮತ್ತು  ಕೊರಿಯಾದಲ್ಲಿ ಕಳೆದ ೧೫೦೦ ವರ್ಷಗಳಲ್ಲಿ ಓಲಾಡುತ್ತಾ (ಏರಿಳಿಯುತ್ತಾ )   ಅಸ್ತಿತ್ವದಲ್ಲಿತ್ತು.

ಜಪಾನ್-
ಪ್ರಪಂಚದಲ್ಲೇ  ಪ್ರಭಲವಾದ ಈ ದೇಶವೂ ಚೀನಾ  ಮತ್ತು ಕೊರಿಯಾ ದೇಶಗಳಂತೆ ಬೌದ್ಧ ಧರ್ಮವನ್ನು  ಆದರದಿಂದ ಬರಮಾಡಿಕೊಂಡಿತು  ಮತ್ತು  ಸ್ವೀಕರಿಸಿತು. ಕ್ರಿ.ಶ. ೬ನೇ ಶತಮಾನದಲ್ಲಿ ಕೊರಿಯಾದ ಪಾಕ್ಚೆ ಪ್ರಾಂತ್ಯದ  ರಾಜ, ಗೌತಮ ಬುದ್ಧನ ಆಕೃತಿಗಳು ಮತ್ತು ಧರ್ಮ ಶಾಸ್ತ್ರಕ್ಕೆ ಸಂಬಂಧಿಸಿದ ಬರಹಗಳನ್ನು ಜಪಾನಿನ  ರಾಜನ  ಆಸ್ಥಾನಕ್ಕೆ ಕಳುಹಿಸಿದನು. ಆದರೊಂದಿಗೆ ಕೊರಿಯಾದಲ್ಲಿ  ಆ ಧರ್ಮಕ್ಕೆ ಮನ್ನಣೆ ಲಭಿಸಿತು ಮತ್ತು  ಅದು  ಜನರಿಂದ ಸ್ವೀಕೃತವಾಯಿತು.೭ನೇ ಶತಮಾನದಲ್ಲಿ  ಜಪಾನಿನ  ಪ್ರಸಿದ್ಧ  ರಾಜಕುಮಾರ ಶೊಟೊಕು ಜಪಾನಿನ  ಪ್ರಥಮ ರಾಜ್ಯ ಆಡಳಿತ ಸಂಹಿತೆಯನ್ನು ಬರೆದನು. ಅದರಲ್ಲಿ  ಬೌದ್ಧ  ಧರ್ಮದಲ್ಲಿ  ಉಲ್ಲೇಖಿಸಲ್ಪಟ್ಟ  ನೈತಿಕ  ಹಾಗೂ ಸಾಮಾಜಿಕ  ನೀತಿಗಳನ್ನು ಅಳವಡಿಸಲಾಯಿತು.ಈ ರಾಜನು  ಬೌದ್ಧ ಧರ್ಮವನ್ನು ತನ್ನ ಪ್ರಜೆಗಳ ಮಧ್ಯದಲ್ಲಿ   ಬಿರುಸಾಗಿ  ಪ್ರೋತ್ಸಾಹಿಸಿದನು. ಆಗ ಬಹಳಷ್ಟು  ಬೌದ್ಧ ಧರ್ಮದ ಶಾಲೆಗಳ  ನಿರ್ಮಾಣವಾಯಿತು, ಮತ್ತು ಧರ್ಮಕ್ಕೆ  ಸಂಬಂಧಿಸಿದ  ಕಲಾ ವೈವಿಧ್ಯಗಳು  ಬೆಳೆಯತೊಡಗಿದವು.  ಧರ್ಮ ಸಂಬಂಧಿತ ಓದಿಗೆ, ಅಭ್ಯಾಸಕ್ಕೆ  ಮುನಿಗಳನ್ನು    ನೆರೆಯ ರಾಜ್ಯವಾದ ಚೀನಾಕ್ಕೆ ಕಳುಹಿಸಲಾಯಿತು. ಈ ರಾಜ ಶೊಟೊಕು ಸ್ವತಃ ಆ ಧರ್ಮದ ಮೇಲೆ  ಹಲವಾರು  ವ್ಯಾಖ್ಯಾನ, ಠೀಕೆ,  ಟಿಪ್ಪಣಿಗಳನ್ನು  ಬರೆದನು. ಅವೆಲ್ಲವನ್ನೂ ಜತನದಿಂದ  ಕಾಪಾಡಲಾಗಿದೆ.

ನಾರಾದ ತೋಡೈಜಿ ದೇವಾಲಯ

ನಾರಾರಾಜರ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ.೮ನೇ ಶತಮಾನ)   ಹಲವಾರು  ಬುದ್ಧ ದೇವಾಲಯಗಳ  ನಿರ್ಮಾಣವಾಯಿತು. ಧರ್ಮಕ್ಕೆ ಸಂಬಂಧಿಸಿದ  ಪುಸ್ತಕ, ವ್ಯಾಖ್ಯಾನಗಳು  ಭಾಷಾಂತರವಾದವು  ಮತ್ತು  ಅದರ  ವಿತರಣೆಯೂ ನಡೆಯಿತು.  ಆ ಕಾಲದಲ್ಲಿ  ಕಟ್ಟಿಸಿದ ನಾರಾದ ತೋಡೈಜಿ ದೇವಾಲಯವು  ಬಹಳ  ಪ್ರಸಿದ್ಧ  ಮತ್ತು  ಹೆಸರುವಾಸಿಯಾದುದು. ಚೀನಾ ದೇಶದ  ಮುನಿಗಳು (ಭಿಕ್ಷುಗಳು) ಜಪಾನಿಗೆ  ಬಂದು  ಧರ್ಮ  ಬೋಧನೆಗಿಳಿದರು. ಆ ಕಾಲದಲ್ಲಿ ಜಪಾನಿನ ಬೌದ್ಧ ಭಿಕ್ಷುಗಳನ್ನು ಧರ್ಮ ಸಂಬಂಧಿಯಲ್ಲದ ರಾಜನ ಆಸ್ಥಾನ ಕಾರ್ಯಕ್ರಮಗಳಿಗೆ, ಸಾರ್ವಜನಿಕ  ಕೆಲಸಗಳಿಗೆ , ಸರಕಾರದ ಆಡಳಿತಕ್ಕೆ  ನೇಮಿಸಲಾಯಿತು. ಆಗ  ಅಲ್ಲಿ  ಮೊದಲಿಂದ ಜನರು ಪಾಲಿಸುತ್ತಿದ್ದ  ಶಿಂಟೋ ಧರ್ಮದೊಂದಿಗೆ ಹೊಂದಿಕೊಂಡು ಬೌದ್ಧ ಧರ್ಮವು ಬೆಳೆಯಿತು, ಜೊತೆ ಜೊತೆಯಾಗಿ ವೈಮನಸ್ಯವಿಲ್ಲದೇ  ಮುಂದುವರಿದವು.

The  Kinkaku-ji Temple (aka the Golden Temple) in Kyoto, Japan. (Stephane  D'Alu)

ಆಗಿನ  ಕಾಲದಲ್ಲಿ  “ಹೀನ್”(Heian)  ಎಂದು ಕರೆಸಿಕೊಂಡ ಈ (ರಾಜಧಾನಿ) ನಗರವನ್ನು ಹೊಸದಾಗಿ ನಿರ್ಮಿಸಲಾಗಿತ್ತು.  ಈಗ ಅದನ್ನು ಕ್ಯೋಟೊ  ಎಂದು ಗುರುತಿಸುತ್ತಾರೆ. ಇಲ್ಲಿನ ಇಬ್ಬರು ಸೈಕೊ(Saicho ) ಮತ್ತು ಕುಕೈ( Kukai ) ಎಂಬ ಬೌದ್ಧಮುನಿಗಳು ಚೀನಾ ದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದರು, ನಂತರ  ಚೀನಾ ದೇಶದ ಬೌದ್ಧ  ಧರ್ಮದ ಎರಡು ಹೊಸ ಪಂಥಗಳನ್ನು  ತಮ್ಮ ದೇಶದಲ್ಲಿ ಪ್ರಾರಂಭಿಸಿದರು. ಸೈಕೊ, ಟಿಯಾನ್ ಟೈ(Tian-tai ) ಮತ್ತು ಕುಕೈ ವಜ್ರಯಾನಾ ಎಂಬ ಬೌದ್ಧ ಪಂಥಗಳನ್ನು  ಹೊಸತಾಗಿ  ಪರಿಚಯಿಸಿದರು. ಟಿಯಾನ್ ಟೈ ಶಾಲೆಯು  ಕಮಲದ  ಪಂಥ ( ಕಮಲದ ಸೂತ್ರವನ್ನಾಧರಿಸಿದೆ)ದ  ಶಾಲೆಯೆಂದೇ ಪ್ರಸಿದ್ಧವಾಗಿದೆ.ಇದನ್ನು  ಚೀನಾದ ಟಿಯಾನ್ ಟೈ ಪರ್ವತದಲ್ಲಿ   ಝಿಯಿ(Zhiyi ) ಎಂಬವನು ಪ್ರಾರಂಭಿಸಿದನು.ಅವನು  ಹಲವಾರು  ಬರಹಗಳನ್ನು ಸಂಶ್ಲೇಷಿಸಿದನು. ಅವುಗಳಲ್ಲಿ  ಕೆಲವು ವಿವಾದಾತ್ಮಕವಾಗಿದ್ದವು, ನಂತರ ಅವನು ಕಮಲದ ಸೂತ್ರವನ್ನು ತಿಳಿಸಿ, ಅದರಲ್ಲಿ ಹೇಳಿದಂತೆ ಧರ್ಮ, ಶಾಸ್ತ್ರಗ್ರಂಥಗಳ  ಅಧ್ಯಯನವು  ಅಧ್ಯಾತ್ಮಿಕ ಬೆಳವಣಿಗೆಗೆ , ನಿರ್ವಾಣವನ್ನು ಹೊಂದಲು  ಅಗತ್ಯವೆಂದು ಪ್ರತಿಪಾದಿಸಿದನು. ಆದರೆ  ಬೌದ್ಧ ಧರ್ಮದ ವಜ್ರಯಾನಾ ಪಂಥವು  ತಾಂತ್ರಿಕ ಕ್ರಿಯಾ ವಿಧಿ, ವಿಧಾನಗಳ ತಳಪಾಯದ ಮೇಲೆ ನಿಂತಿದೆ. ಟಿಬೆಟಿನಲ್ಲಿ ವಜ್ರಯಾನಾ ಪಂಥವು  ಪ್ರಮುಖವಾಗಿದೆ. ಬೌದ್ಧ ಧರ್ಮದಲ್ಲಿ  ಹೀನಾಯಾನ, ಮಹಾಯಾನ ಮತ್ತು ವಜ್ರಯಾನ ಎಂಬ ಮೂರು ಮುಖ್ಯ ಪಂಥಗಳು.
ಚೀನಾ ದೇಶದ  “ಸಮುರೈ”ಎಂದು ಕರೆಸಿಕೊಂಡ ಯೋಧರ ಪಂಗಡದವರು  ಅಧಿಕಾರದಲ್ಲಿದ್ದ  ರಾಜರನ್ನು  ಉರುಳಿಸಿ ತಾವು ರಾಜ್ಯವಾಳಹತ್ತಿದ್ದರು.  ೧೨ನೇ ಶತಮಾನದಲ್ಲಿ  ಕಾಮಕೂರ ಅವರು ವಾಸಮಾಡಿದ್ದ ತಾಣವಾಗಿತ್ತು. ಇವರು ಬಂದ ನಂತರ ಬೌದ್ಧ ಧರ್ಮದ ಬೇರೆ  ಪಂಗಡಗಳು  ಪ್ರಾರಂಭವಾದವು. ಜೋಡೊ ಶಿಸ್ಸು ಪಂಗಡದವರು ಅಮಿತಾಭ ಎಂಬ ಹೆಸರಿನ ಪುನರುರಚ್ಛರಣೆ (ಜಪಿಸುವುದು)  ಆ ವ್ಯಕ್ತಿಗೆ ಮುಕ್ತಿಯನ್ನು ಕೊಡುತ್ತದೆ ಎಂದು ನಂಬಿದ್ದರು. ನಿಚಿರೆನ್ ಪಂಗಡದವರು ಕೇವಲ ಕಮಲದ ಪಂಥದ  ಶ್ರಧ್ಧಾಂಜಲಿಯ ಪುನರುಚ್ಛಾರದಿಂದ ದಿವ್ಯಜ್ಞಾನ ಪ್ರಾಪ್ತವಾಗುತ್ತದೆ ಎಂದು ವಾದಿಸಿದರು.  ಝೆನ್ ಎಂಬ ಪಂಗಡದವರು  ( ಮೂಲತಃ ಚಿನಾದ ಛಾನ್ ಪಂಥ)  ದೇಹ ಮತ್ತು ಮನಸ್ಸಿನ ಶಿಸ್ತು  ಪ್ರಮುಖವೆಂದರು. ಇದರಿಂದ  ಜಪಾನಿನ ಪ್ರಸಿದ್ಧವಾದ ಚಹಾ(ಟೀ) ಸಮಾರಂಭದ  ಆಚರಣೆಯು ಶುರುವಾಯಿತು ಮತ್ತು ಅದುವೇ  ಮುಂದುವರಿದು ಜಪಾನಿನ ಕಪ್ಪು ವರ್ಣದ ಶಾಯಿಯ ( black ink) ಚಿತ್ರಕಲೆ  ಮತ್ತು ಪುಷ್ಪ ವಿನ್ಯಾಸದ ರಚನೆಗಳು ಬೆಳೆದವು.
ಆದರೆ  ೧೬ನೇ ಶತಮಾನದ ನಂತರ ಆಡಳಿತ ನಡೆಸುತ್ತಿದ್ದ ಸಮುರೈ ರಾಜರು ಬೌದ್ಧ ಧರ್ಮಕ್ಕೆ ಕೊಡುತ್ತಿದ್ದ ಪ್ರೋತ್ಸಾಹವನ್ನು  ಹಿಂತೆಗೆದುಕೊಂಡರು. ಆದರೆ ಇದರಿಂದ ವಿವಿಧ ಪಂಗಡಗಳ ಧಾರ್ಮಿಕ ವಿಧಿ, ವಿಧಾನಗಳ ಆಚರಣೆಗೆ ಏನೂ ತಡೆ ಬರಲಿಲ್ಲ. ಆಗಿನ ಬೌದ್ಧ ದೇವಾಲಯಗಳು, ಮಂದಿರಗಳು ವಿದ್ಯಾಭ್ಯಾಸ, ಸಮಾಜಸೇವೆಯಲ್ಲಿ  ಮುಖ್ಯಪಾತ್ರ ವಹಿಸುತ್ತಿದ್ದವು.

ಜಪಾನಿನ ಸಾಂಪ್ರದಾಯಿಕ ಕೆತ್ತನೆಗಳ ಕೃತಿಗಳು-ಅಲ್ಲಿ ಮೊದಲಿನಿಂದ ಬಂದ ಶಿಂಟೋ ಧರ್ಮ ಮತ್ತು ಬೌದ್ಧ ಧರ್ಮದ ಪ್ರಭಾವವನ್ನು ತೋರುತ್ತಿದೆ

ಬಟ್ಸುಝೋ    (Butsuzo)

butsuzo

butsuzo2

ಟೋಕಿಯೋದ ಸೆನ್ಸೋಜಿ ದೇವಾಲಯ; ಅಮಿದ(ಅಮಿತಾಭಾ)

೧೮೬೮ ರಲ್ಲಿ ಜಪಾನಿನ ರಾಜವಂಶದವರು ಸಮುರೈಗಳಿಂದ  ರಾಜ್ಯವನ್ನು ಪುನಃ ವಶಪಡಿಸಿಕೊಂಡರು.  ಅದನ್ನು ಮಿಜಿ ಪುನರ್ಸ್ಥಾಪನೆ (Meiji Restoration ) ಎನ್ನುತ್ತಾರೆ.  ಮಿಜಿ ಎಂದರೆ ಜಪಾನೀ ಭಾಷೆಯಲ್ಲಿ ಅರಿವು, ಪ್ರಜ್ಙೆ  ಮೂಡಿದ ಎಂದು.ಆಗ ರಾಜರಿಂದ  ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕದೇ ಕೆಡುಕುಗಳಾದವು; ಕೆಲವೊಂದು ಮಂದಿರಗಳು, ವಿಗ್ರಹಗಳು, ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ನಾಶವಾದವು. ಆಗ ರಾಜನಾದವನಿಗಿದ್ದ  ಸ್ಥಾನ ಮಾನ, ದೇವತಾ ಸ್ವರೂಪನೆಂಬ ಭಾವನೆಗಳನ್ನು ನೋಡಿದರೆ  ಇದೇನೂ  ಅಸ್ವಾಭಾವಿಕವೇನಲ್ಲ. ರಾಜ ಪ್ರಾಚೀನ ಕಾಲದಿಂದ ಪ್ರಕೃತಿ ಆರಾಧನೆಯೇ ಮುಖ್ಯವಾಗಿದ್ದ ಶಿಂಟೋ ಧರ್ಮವನ್ನೇ ದೇಶದ ಅಧಿಕೃತ ಧರ್ಮವೆಂದು ಘೋಷಿಸಿದನು. ಶಿಂಟೋ ಧರ್ಮದಲ್ಲಿ ಸೂರ್ಯ, ಕಲ್ಲು, ವೃಕ್ಷ, ಧ್ವನಿ (sound ) ಗಳೇ ಮೊದಲಾದವುಗಳನ್ನು ಆರಾಧಿಸುತ್ತಿದ್ದರು. ಆದರೆ  ಆಗಲೇ ಅಳವಾಗಿ  ಬೇರೂರಿದ್ದ ಬೌದ್ಧ ಧರ್ಮವು ಇದ್ಯಾವುದೇ ಹೊಸ ಬದಲಾವಣೆಗಳ  ಒತ್ತಡಕ್ಕೆ ಒಳಗಾಗದೇ; ಆ ಕಾಲದಲ್ಲಿ ವಿದ್ಯಾಭ್ಯಾಸದಿಂದ  ಹೊಸ ವಿಧಾನಗಳನ್ನು ಮೈಗೂಡಿಸಿಕೊಂಡು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ತೆರೆಯಲಾಯಿತು.
ಟಿಬೆಟ್
ಬೌದ್ಧ ಧರ್ಮವು ಟಿಬೆಟಿಗೆ ಪ್ರವೇಶಿಸಲು ಬಹಳ ಕಾಲ ಹಿಡಿಯಿತು. ಭಾರತದ ಸುತ್ತುಮುತ್ತಲಿನ ಶ್ರೀಲಂಕಾ , ಅಪಘಾನಿಸ್ತಾನ, ಮಧ್ಯ ಏಶಿಯಾದ ದೇಶಗಳಲ್ಲಿ ಹಬ್ಬಿದ ನಂತರ ಅದು ಟಿಬೆಟಿಗೆ ಪ್ರವೇಶಿಸಿತು. ಏಕೆಂದರೆ ಟಿಬೆಟ್ ಈ ಎಲ್ಲಾ  ದೇಶಗಳಿಂದ ಪ್ರತ್ಯೇಕವಾಗಿ; ರೇಶ್ಮೆವ್ಯಾಪಾರದ ಮಾರ್ಗದಿಂದ ದೂರಾಗಿದೆ. ಸಾಧಾರಣ ಕ್ರಿ.ಶ.೫೦೦ ರ ವೇಳೆಗಾಗುವಾಗ ಟಿಬೆಟ್ ದೇಶದ ೨೮ನೇ ರಾಜನ ಕಾಲದಲ್ಲಿ  ಬೌದ್ಧ ಧರ್ಮದ ಗ್ರಂಥ , ಸಾಹಿತ್ಯಗಳು ಆ ದೇಶಕ್ಕೆ ಬಂದವು, ಆದರೆ ಅವುಗಳ ಅನುವಾದವಾಗಲಿಲ್ಲ.ಕ್ರಿ.ಶ.೬೭೦ ರ ಕಾಲಕ್ಕಾಗುವಾಗ ೩೩ನೇ ರಾಜ ಗಾಂಪೊ ಈ ಧರ್ಮಕ್ಕೆ ಸಂಬಂಧಪಟ್ಟ ಗ್ರಂಥ, ಸಾಹಿತ್ಯ, ಠೀಕೆ, ಟಿಪ್ಪಣಿ, ವ್ಯಾಖ್ಯಾನಗಳನ್ನು ಅನುವಾದಿಸುವ ವ್ಯವಸ್ಥೆ ಮಾಡಿದನು ಮತ್ತು ಚೀನಾ ಹಾಗೂ ನೇಪಾಳದ  ರಾಜಮನೆತನದ ಬೌದ್ಧ ಧರ್ಮದ ಅನುಯಾಯಿಗಳಾದ  ರಾಜಕುಮಾರಿಯರನ್ನು ಮದುವೆಯಾದನು.ಈ ರೀತಿಯಲ್ಲಿ  ಟಿಬೆಟ್ ನಲ್ಲಿ  ಈ  ಧರ್ಮವು ತಳವೂರಿತು.
ಟಿಬೆಟಿನ ೩೭ನೇ ರಾಜ ಡೆಟ್ಸನ್(Detsen)  ಭಾರತ ದೇಶದ ಪದ್ಮ ಸಂಭವ ನೆಂಬ ಮುನಿಯನ್ನು ಟಿಬೆಟಿಗೆ ಆಹ್ವಾನಿಸಿದನು. ಮುನಿ ಪದ್ಮ ಸಂಭವ ಗುರು ರೀನ್ ಪೊಚೆ( Guru Rinpoche)      ಎಂದು ಪ್ರಸಿದ್ಧನಾಗಿದ್ದಾನೆ.ಇವನು ಆ ದೇಶದಲ್ಲಿ ಆ ಧರ್ಮದ ದೇವಾಲಯ, ಆಶ್ರಮ, ಮಠ ಇತ್ಯಾದಿಗಳ  ಮತ್ತು, ಧರ್ಮದ ಬೆಳವಣಿಗೆಗೆ ಬೇಕಾದ ಬೇರೆ ಸಂಘಟನೆಗಳನ್ನು ಮಾಡಿದನು. ನಂತರ ಭಾರತದಿಂದ ತರಲಾದ ಬೌದ್ಧ ಧರ್ಮ ಸಂಬಂಧಿತವಾದ ಶಾಸ್ತ್ರಾದಿ  ವ್ಯಾಖ್ಯಾನಗಳು ಅನುವಾದವಾಗುವಂತೆ ವ್ಯವಸ್ಥೆ ಮಾಡಿದನು.
ಈ ಬೌದ್ಧಮುನಿಯನ್ನು ಚೀನಾ ದೇಶಕ್ಕೆ ಧರ್ಮ ಪ್ರಚಾರಕ್ಕೆಂದು ಹೋದ ಕುಮಾರ ಜೀವನಿಗೆ ಹೋಲಿಸಬಹುದು.  ಪದ್ಮಸಂಭವನಿಂದಾಗಿ  ಟಿಬೆಟಿನಲ್ಲಿ ಬೌದ್ಧ ಧರ್ಮವು ಆಳವಾಗಿ ಬೇರೂರಿತು. ಕಾಲ ಕ್ರಮೇಣ ಈ ಧರ್ಮದ  ವಿವಿಧ ಪಂಗಡಗಳು ಹುಟ್ಟಿಕೊಂಡವು.

ನ್ಯಿಂಗ್ಮಾ( NYINGMA ) ಪಂಗಡವು  ಗುರು ರೀನ್ ಪೋಚೆಯವರ ಬೋಧನೆಯನ್ನು ಆಧರಿಸಿ  ಹುಟ್ಟಿಕೊಂಡಿತು. ಇಲ್ಲಿ ವಿವರಗಳನ್ನು ಕೈಬಿಡಲಾಗಿದೆ, ಕೇವಲ ಮುಖ್ಯಾಂಶಗಳನ್ನು ಮಾತ್ರಹೇಳುತ್ತೇನೆ.

Padmasambhava

ಗುರು ರೀನ್ ಪೋಚೆಯವರ  ನ್ಯಿಂಗ್ಮಾ ಪಂಗಡವು ತರ್ಕ ಶಾಸ್ತ್ರ, ತತ್ವ ಶಾಸ್ತ್ರಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತದೆ. ಕಾಲ ಕ್ರಮೇಣ ಈ ಪಂಥದವರು ತಾಂತ್ರಿಕ ವಿಧಾನಗಳ ಆಚರಣೆಯನ್ನು ಅಳವಡಿಸಿದರು  ಮತ್ತು  ಬಳಕೆಗೆ ತಂದರು.
ಕಡಮ್( KADAM ) ಪಂಗಡದವರು ಶೂನ್ಯ  ಮತ್ತು ಪ್ರೀತಿಯನ್ನು ಮುಖ್ಯವೆಂದರು.

ಕರಗ್ಯು( KARAGYU )  ಪಂಥದವರು  ಧ್ಯಾನ ಮತ್ತು ತತ್ತ್ವಶಾಸ್ತ್ರಗಳನ್ನು ಮುಖ್ಯವೆಂದು ಗಣಿಸಿದರು. ಟಿಬೆಟಿನ ಪ್ರಸಿದ್ಧ ಬೌದ್ಧಮುನಿ ಮಿಲರೆಪಾ(Milarepa  )  ಕರಗ್ಯು ಪಂಥಕ್ಕೆ  ಸೇರಿದವನು. ಅವನು ಒಂದೇ ಜನ್ಮದಲ್ಲಿ  ಬುದ್ಧ ಸ್ಥಿತಿಗೆ  ತಲುಪಿದನು ಎಂದು ಹೇಳುತ್ತಾರೆ. ಭಾರತದಿಂದ ಹೋದ ಗುರು ನರೋಪಾ ಹೇಳಿದ  ಮಹಾಮುದ್ರೆ  ಮತ್ತು ಆರು ಯೋಗಗಳ  ಅಭ್ಯಾಸ  ಈ ಕರಗ್ಯು ಪಂಥದಲ್ಲಿ ಪ್ರಾಮುಖ್ಯವಾಗಿದೆ.

Milarepa


ಸಖ್ಯ ಸಂಪ್ರದಾಯವನ್ನು ಕೆಲವು ಶತಮಾನಗಳ  ಕಾಲ ಜನರು ಟಿಬೆಟಿನಲ್ಲಿ ಪರಿಪಾಲಿಸುತ್ತಿದ್ದರು, ಅದಕ್ಕೆ ಬಹಳ ಹಿಂಬಾಲಕರಿರಲಿಲ್ಲ.  ಕ್ರಿ.ಶ.೧೨೪೭ ರಲ್ಲಿ  ಮಂಗೋಲರ ರಾಜಕುಮಾರ ಗೋಡಾನ್ ಖಾನ್ ಟಿಬೆಟಿನ ಮೇಲೆ  ಆಕ್ರಮಣ ಮಾಡಿ ದೇಶವನ್ನು  ವಶಪಡಿಸಿಕೊಂಡನು. ನಂತರ  ಅದರ ಆಡಳಿತವನ್ನು ಆಗಿನ ಸಖ್ಯ ಸಂಪ್ರಾದಾಯದ  ಲಾಮ “ಸಖ್ಯ ಪಂಡಿತ”ನಿಗೆ ಒಪ್ಪಿಸಿದನು.ಮುಂದೆ ಕೆಲ ವರ್ಷಗಳ ನಂತರ ಮಂಗೋಲ  ರಾಜ ಕುಬ್ಲೈ ಖಾನ್ ಬೌದ್ಧ ಧರ್ಮವನ್ನು ತನ್ನ ದೇಶದ ಧರ್ಮವೆಂದು ಘೋಷಿಸಿದನು; ಮತ್ತು ಸಖ್ಯಪಂಡಿತನನ್ನು ಧಾರ್ಮಿಕ ನೇತಾರ ಮತ್ತು ಟಿಬೆಟ್ ದೇಶದ ಆಡಳಿತಗಾರನೆಂದು ನೇಮಿಸಿದನು.

Sakya  Pandita

 

ಇದಾಗಿ  ಹಲವು  ವರ್ಷಗಳ ನಂತರ, ಕೊನೆಯಲ್ಲಿ ಗೆಲುಗ್ ( yellow hat) ) ಪಂಥವು ಕ್ರಿ.ಶ.೧೪೦೦ ರಲ್ಲಿ ಪ್ರಾರಂಭವಾಯಿತು. ಈಗಿನ ದಲೈ ಲಾಮಾ ಗೆಲುಗ್ ಸಂಪ್ರದಾಯದವರು. ದಲೈ ಲಾಮಾ ಎಂದರೆ  ಜ್ಞಾನದ ಸಾಗರ ಎಂದರ್ಥ.ಮುಂದಿನ ದಿನಗಳಲ್ಲಿ ಮಂಗೋಲದ ರಾಜರು ದಲೈ ಲಾಮಾನನ್ನು ಆಡಳಿತಗಾರನಾಗಿ ನೇಮಿಸಿದರು.ಈ ಸಂಪ್ರದಾಯವು ನೈತಿಕತೆ, ಪಾಂಡಿತ್ಯ ಮತ್ತು  ಜ್ಞಾನಕ್ಕೆ  ಮಹತ್ವವನ್ನು ಕೊಡುತ್ತದೆ. ದಲೈ  ಲಾಮಾಗಳು ಗೆಲುಗ್ ಸಂಪ್ರದಾಯದ ಲೌಕಿಕ ವಿಷಯಗಳ  ಕುರಿತಾದ ನಾಯಕರು, ಮತ್ತು ದೇಶದ ಆಡಳಿತವನ್ನೂ ಅವರೇ  ನಡೆಸುತ್ತಿದ್ದರು.ಆದರೆ ಇವರ ಆಧ್ಯಾತ್ಮಿಕ ಗುರು ಗಾಡೆನ್ ತ್ರಿಪಾ ಆಗಿದ್ದರು.

ಗೆಲುಗ್ (GELUG)

Je Tsongkhapa

ಬೌದ್ಧ  ಧರ್ಮದ ವಿವಿಧ ಪಂಥಗಳು ಎಲ್ಲವೂ ಹೀನಾಯಾನ, ಮಹಾಯಾನ ಮತ್ತು  ವಜ್ರಯಾನದ ಸಿದ್ಧಾಂತಗಳನ್ನೇ ಉಪದೇಶಿಸಿದವು. ಈಗಿನ ವರ್ತಮಾನ  ಕಾಲದಲ್ಲಿ
ಟಿಬೆಟ್, ನೇಪಾಳ, ಸಿಕ್ಕಿಮ್, ಲಡಾಕ್, ಭೂತಾನ್, ಮಂಗೋಲಿಯಾ  ಮತ್ತು  ಸೈಬೀರಿಯಾದಲ್ಲಿರುವ ಬೌದ್ಧ ಪಂಥವು ಗೆಲುಗ್ ಸಂಪ್ರದಾಯದ್ದಾಗಿದೆ, ಇದಕ್ಕೆ ಟಿಬೆಟಿನ ಬೌದ್ಧ ಧರ್ಮ ಎಂದೇ ಹೆಸರಾಗಿದೆ.

ಮುಂದುವರಿಯುವುದು.

ಇದರೊಳಗಿನ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿಕೊಳ್ಳಲಾಗಿದೆ.

Advertisements

2 thoughts on “ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೨

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s