೨೦ನೇ ಶತಮಾನದ ರೋಮಾಂಚಕಾರಿ ಕಮ್ಯುನಿಸ್ಟ್ ಸಂಚು( ನಾಗಿರೆಡ್ಡಿ ಸಂಚಿನ ಮೊಕದ್ದಮೆ)

೨೦ನೇ ಶತಮಾನದ ರೋಮಾಂಚಕಾರಿ ಕಮ್ಯುನಿಸ್ಟ್ ಸಂಚು( ನಾಗಿರೆಡ್ಡಿ  ಸಂಚಿನ ಮೊಕದ್ದಮೆ)

ಈ  ಘಟನೆ ನಡೆದುದು ಕಳೆದ ಶತಮಾನದ ೬೦ರ ದಶಕದಲ್ಲಿ, ಈ ಮೊಕದ್ದಮೆಯ ರುವಾರಿ ಯಾನೆ ಶಿಲ್ಪಿ ಎನಿಸಿಕೊಂಡ ವ್ಯಕ್ತಿ  ಶ್ರೀ ಜಿ.ರಾಘವ ರೆಡ್ಡಿಯವರು(ಐ.ಪಿ.ಎಸ್.). ಇದು ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದೊಳಗಿನ ಅತಿ ದೊಡ್ಡ “ಸಂಚಿನ ಮೊಕದ್ದಮೆ”( Conspiracy case) ಎನಿಸಿಕೊಂಡಿದೆ.
ಮೊದಲಿಗೆ  ಈ ಸಂಚಿನ ಹಿನ್ನೆಲೆ, ಆಗಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳನ್ನು ನೋಡುವ. ಈ ಸಂಚಿನ ಅಪರಾಧಿ ಸ್ಥಾನದಲ್ಲಿದ್ದ ವ್ಯಕ್ತಿ  ತರಿಮೆಲ್ಲ ನಾಗಿ ರೆಡ್ಡಿಯವರು ಆಗಿನ,  ವಿದ್ಯಾವಂತ,  ಸುಸಂಸ್ಕೃತ, ದೊಡ್ಡ  ಜಮೀನುದಾರ ಮನೆತನದವರು, ಆಂಧ್ರಪ್ರದೇಶದ ಅನಂತಪುರದಿಂದ  (೧೯೬೯ರಲ್ಲಿ) ಚುನಾಯಿತರಾದ  ಶಾಸಕರು MLA ; ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರ ಭಾವ( ತಂಗಿಯ ಗಂಡ).

Nagi Reddy

ಕಳೆದ ಶತಮಾನದಲ್ಲಿ  ಭಾರತ ದೇಶ ಬ್ರಿಟಿಷ್ ಆಳ್ವಿಕೆಯಿಂದ ಹೊರಬಂದರೂ, ಬಹಳ ಕಾಲದ ವರೆಗೆ ಕಷ್ಟ ಪರಂಪರೆಗಳನ್ನು ದಾಟಿಹೊರಬರಲಾಗಲಿಲ್ಲ. ದೇಶದ ಬಹುಭಾಗಗಳಲ್ಲಿ ಬಡತನ, ಶೋಷಣೆ   ತುಂಬಿಹೋಗಿತ್ತು.  ನಿಜಾಮನ ರಾಜ್ಯವಾಗಿದ್ದ ಹೈದರಾಬಾದ್ ಇದಕ್ಕೆ ಹೊರತಾಗಿರಲಿಲ್ಲ. ಜನರಲ್ಲಿ ಶೋಷಣೆ, ದಬ್ಬಾಳಿಕೆಗಳಿಂದಾಗಿ ಮತ್ತು  ಆ ವರೆಗೆ ನಡೆದ ಎರಡೆರಡು ವಿಶ್ವಯುದ್ಧಗಳಿಂದ ಕಾರ್ಗತ್ತಲಿನಂತೆ  ಕವಿದಿದ್ದ ಕಷ್ಟಕೋಟಲೆಗಳಿಂದ ಅಸಮಾಧಾನ ದಿನೇ ದಿನೇ ಬೆಳೆಯುತ್ತಿತ್ತು.
ಸ್ವಾತಂತ್ರಪೂರ್ವದಲ್ಲಿ ಹೈದರಾಬಾದಿನಲ್ಲಿ, ರಜಾಕರ್ ಎಂಬ ಗುಂಪಿನ ಮಂದಿ, ನಿಜಾಮನ ಅನಧಿಕೃತ  ಒಪ್ಪಿಗೆಯಿದ್ದು, ಜನಸಾಮಾನ್ಯರನ್ನು ಕೊಲೆ, ಲೂಟಿ,ಹಿಂಸೆಗಳನ್ನು ಮಾಡಿ ಪೀಡಿಸುತ್ತಿದ್ದರು. ಇದಕ್ಕೆ ಶ್ರೀಮಂತ, ಬಡವರೆಂದು ಯಾರೂ  ಹೊರತಾಗಿರಲಿಲ್ಲ.ಆಗ ಇಲ್ಲಿನ ಕಮ್ಯುನಿಸ್ಟ್ ನಾಯಕರಾದ ರಾವಿ ನಾರಾಯಣ ರೆಡ್ಡಿಯವರು   ಸ್ಥಳೀಯ ರೈತಸಮುದಾಯದವರನ್ನು ಒಂದುಗೂಡಿಸಿ, “ಸಾಯುಧ ರೈತು ಪೋರಾಟಮು”  ( Armed peasants struggle) ಅನ್ನು ಪ್ರಾರಂಭಿಸಿದರು. ಮುಂದೆ ಇದೇ ವ್ಯಕ್ತಿ ಹೈದರಾಬಾದಿನ ಬಿಡುಗಡೆಗೆ  ಭಾರತದ ಸ್ವಾತಂತ್ರ ಸಂಗ್ರಾಮದಲ್ಲೂ ಭಾಗಿಯಾದರು.ಇವರು ಈ ಪ್ರದೇಶದ ಇತಿಹಾಸದಲ್ಲಿ ಅಮರರಾಗಿರುವ ವ್ಯಕ್ತಿ.
ಭಾರತದಲ್ಲಿ ಕಮ್ಯುನಿಸ್ಟ್ ತತ್ವಗಳ ತಿಳುವಳಿಕೆ, ಚಳವಳಿ ಪ್ರಾರಂಭವಾದುದು ಕಲ್ಕತ್ತಾ ನಗರದಲ್ಲಿ. ದೇಶಕ್ಕೆ ಸ್ವಾತಂತ್ರ ಬಂದ  ಕೆಲವೇ ವರ್ಷಗಳಲ್ಲಿ (೧೯೪೮-೫೧ರ ಮಧ್ಯದಲ್ಲಿ) ಆಂಧ್ರ ಮತ್ತು ತೆಲಂಗಾಣ  ಪ್ರದೇಶದ  ಸಿ.ಪಿ.ಐ.ಯ ಕಾರ‍್ಯಕರ್ತರು,  ಪಾರ್ಟಿಯ ಬೆಂಬಲದಿಂದ  ಭೂಗತರಾಗಿ  ಹಿಂಸಾಚಾರಗಳಲ್ಲಿ ಪ್ರವೃತ್ತರಾದರು,ಬಹಳಷ್ಟು ಕೊಲೆ,ದೊಂಬಿ ಇತ್ಯಾದಿ ಕೃತ್ಯಗಳನ್ನೆಸಗಿದರು. ಆಗ ಸ್ಥಳೀಯ ಹಾಗೂ ಕೇಂದ್ರ ಸರಕಾರಗಳು  ಸಕಾಲದಲ್ಲಿ ಆಗಿನ ಗೆರಿಲಾ  ಯುದ್ಧವನ್ನು ನಿಲ್ಲಿಸುವುದರಲ್ಲಿ ಯಶಸ್ವಿಯಾದವು. ಕೊನೆಯಲ್ಲಿ ಸಿ.ಪಿ.ಐ.ಪಕ್ಷವು ಯಾವುದೇ ಶರತ್ತುಗಳಿಲ್ಲದೇ ಶರಣಾಯಿತು. ಆದರೆ ಅವರು ನಿಷ್ಕ್ರಿಯರಾಗಿ ಮರೆಯಲ್ಲಿದ್ದರೇ ಹೊರತು, ಅವರ ಧ್ಯೇಯವನ್ನು ಮರೆತಿರಲಿಲ್ಲ. ದೇಶಕ್ಕೆ ಸ್ವಾತಂತ್ರ ಲಭಿಸಿ ಹಲವಾರು ವರ್ಷಗಳಾದರೂ ಬಡಜನರ ಕಷ್ಟ ತಗ್ಗಲಿಲ್ಲ, ಅಭಿವೃದ್ಧಿಯಾಗಲಿಲ್ಲ ಎಂದಾದಾಗ , ಕಮ್ಯುನಿಸ್ಟ್ ತತ್ವಗಳನ್ನು ಅನುಸರಿಸುವ ಮಂದಿಗಳು ವಿಹ್ವಲಿತರಾದರು. ಆಂಧ್ರಪದೇಶದ ಕಮ್ಯುನಿಸ್ಟ್ ಹಿಂಬಾಲಕರು ತಮ್ಮ ಪಕ್ಷದ  ಕಾರ‍್ಯಕಲಾಪಗಳಲ್ಲಿಹಸ್ತಕ್ಷೇಪಮಾಡಿದರು, ಆಗ ಪಕ್ಷದ ಪದಾಧಿಕಾರಿಗಳೂ ಬದಲಾದರು, ಕಮ್ಯುನಿಸ್ಟ್ ತತ್ವಗಳ ಪ್ರಯೋಗವನ್ನು ನಗರ ವಲಯದಿಂದ (ಚೀನಾ ದೇಶದಲ್ಲಿದ್ದಂತೆ) ಹಳ್ಳಿಗಳ ಮಟ್ಟಕ್ಕೆ  ತರಲಾಯಿತು. ಸ್ವಾತಂತ್ರಪೂರ್ವದಲ್ಲಿ ಬ್ರಿಟಿಶ್ ವಸಾಹತುಗಳಿದ್ದ ಬೇರೆ ದೇಶಗಳಲ್ಲಿ(ಇಂಡೊನೇಶಿಯಾ,ಮಲೇಶಿಯಾ,ಫಿಲಿಪೈನ್) “ಸಾಯುಧ ರೈತು ಪೋರಾಟಮು”  ( Armed peasants struggle) ನಂತಹ ಹೋರಾಟ  ನಡೆಯುತ್ತಿತ್ತು.
ರಷ್ಯಾದ ಕಮ್ಯುನಿಸ್ಟ್ ನಾಯಕ ಸ್ಟಾಲಿನ್ ೧೯೫೩ರಲ್ಲಿ ಮರಣ ಹೊಂದಿದಾಗ, ಕ್ರುಶ್ಚೇವ್ ಆ ಪದವಿಗೇರಿದರು.ಅವರ ಕಾರ‍್ಯವೈಖರಿ ಚೈನಾದ ಮಾವೋ ಮತ್ತು ಅವರ ಸಹವರ್ತಿಗಳಿಗೆ ಸರಿಬರಲಿಲ್ಲ, ಕ್ರಮೇಣ ಎರಡು ದೇಶಗಳು ಭಿನ್ನಭಿಪ್ರಾಯಗಳಿಂದಾಗಿ ದೂರ ಸರಿದು, ಪಕ್ಷ ಇಬ್ಭಾಗವಾಯಿತು,ನಮ್ಮ ದೇಶದ ಕಮ್ಯುನಿಸ್ಟ್-ಮಾರ್ಕ್ಸಿಸ್ಟ್ ಸದಸ್ಯರು ಮಾವೋನನ್ನು ಅನುಮೋದಿಸಿದರು.ಈ ಉಗ್ರಗಾಮಿ ಸದಸ್ಯರು ಚಾರು ಮುಝಮ್ದಾರ್, ಮತ್ತು ಕಾನುಸನ್ಯಲ್ ಅವರ ಮುಂದಾಳತ್ವದಲ್ಲಿ ೧೯೬೭ ರ ಸಮಯದಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬಾರಿ ಎಂಬ ಹಳ್ಳಿಯಲ್ಲಿ ಗೆರಿಲಾ ಯುದ್ಧವನ್ನು ಪ್ರಾರಂಭಿಸಿದರು.ಇವರ ಈ ಯುದ್ಧವನ್ನು ಅಲ್ಲಿನ ಸರಕಾರ ಯಶಸ್ವಿಯಾಗಿ ಎಳವೆಯಲ್ಲೇ ಚಿವುಟಿ ಹಾಕಿತು. ಆದರೆ ಈ ಸಂದರ್ಭದಲ್ಲಿ ತೆಲಂಗಾಣದ ಕಮ್ಯುನಿಸ್ಟ್ ಸದಸ್ಯರು ನಿಶ್ಶಬ್ದವಾಗಿ ಕಾರ‍್ಯಪ್ರವೃತ್ತರಾಗಿದ್ದರು.ಆಗಲೇ ಅವರಲ್ಲಿ ಅಭಿಪ್ರಾಯ-ಬೇಧಗಳಿಂದಾಗಿ ಎರಡು ಬಣಗಳಾಗಿದ್ದವು, ಎರಡನೇ ಬಣ C P M-Extremists (ನಕ್ಸಲೈಟ್ ಉಗ್ರವಾದಿಗಳು) ನ ನಾಯಕ ತರಿಮೆಲ್ಲ ನಾಗಿರೆಡ್ಡಿಯವರು.ಆಗಿನ ಹೆಚ್ಚಿನ ರಾಜಕೀಯ ನಾಯಕರು ತತ್ವನಿಷ್ಠರು,ವಿದ್ಯಾವಂತರಾಗಿದ್ದರು. ಆದರ್ಶವಾದಿ ನಾಯಕ, ಅನಂತಪುರದಿಂದ ಚುನಾಯಿತರಾದ (೧೯೬೮ರಲ್ಲಿ) ಶಾಸಕ ನಾಗಿರೆಡ್ಡಿಯವರಿಗೆ, ಪ್ರಜಾಪ್ರಭುತ್ವದ ಚುನಾಯಿತ ಸರಕಾರದಲ್ಲಿಭ್ರಮೆನಿರಸನವಾಯಿತು. ಅವರು ಸರಕಾರದ  ಶಾಸಕರ ಸಭೆ ಸೇರಿದ್ದಲ್ಲಿ(ಹೈದರಾಬಾದಿನಲ್ಲಿ),ಎದ್ದು ನಿಂತು ಆಗಿನ ಆಡಳಿತ ಪದ್ಧತಿಯನ್ನು ಧಿಕ್ಕರಿಸಿ, ” ನಮ್ಮ ದೇಶಕ್ಕೆ ಕ್ರಾಂತಿಯೊಂದೇ (ಸಾಯುಧ ಪೋರಾಟಮು- Armed  struggle )   ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ,  ಮತಪತ್ರಗಳನ್ನು ತುಪಾಕಿನ ಗುಂಡುಗಳು ಸ್ಥಳಾಂತರಿಸಬೇಕು ” ಎಂದು ಹೇಳಿ ಪದ ತ್ಯಾಗ ಮಾಡಿದರು. ನಂತರ ಅವರು  ಸಾರ್ವಜನಿಕರ ಹಾಗೂ ಪತ್ರಕರ್ತರ ಸಮಕ್ಷಮದಲ್ಲಿ ತಮ್ಮ ಭವಿಷ್ಯದ ಉದ್ದೇಶವನ್ನು ಘೋಷಿಸಿ ,ಕ್ರಾಂತಿಕಾರಿ ಬದುಕಿಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಳ್ಳುವುದಾಗಿ ಹೇಳಿ ಭೂಗತರಾದರು.
ಈ ಉಗ್ರವಾದಿ ನಕ್ಸಲೀಯರು ನಾಗಿರೆಡ್ಡಿಯವರ ಮುಖಂಡತ್ವದಲ್ಲಿ ಗುಪ್ತ ಸಂದೇಶ ರವಾನಿಸುವ ಪದ್ಧತಿಯನ್ನುಆವಿಷ್ಕರಿಸಿಕೊಂಡರು, ನಂತರ ವಿದ್ಯಾವಂತ ನಿರುದ್ಯೋಗಿ  ತರುಣರನ್ನು ಮನವೊಲಿಸಿ  ಗೆರಿಲಾ ಹೋರಾಟಕ್ಕೆ  ಅವರನ್ನು ಸಜ್ಜುಗೊಳಿಸಿದರು. ಕೆಲವೇ ತಿಂಗಳೊಳಗಾಗಿ ರಾಜ್ಯಾದಾದ್ಯಂತ ಆಗಿನ ನವೀನ-ಆಯುಧಗಳೊಂದಿಗೆ ಕೊಲೆ, ದೊಂಬಿಗಳಂತಹ  ಹಿಂಸಾಕೃತ್ಯಗಳಿಂದ ಭಯಾನಕ  ವಾತಾವರಣವನ್ನು ಸೃಷ್ಟಿಸಿದರು. ಅವರು  ಆ ಅಲ್ಪ ಕಾಲದಲ್ಲಿ೨೮ ಮಂದಿ ಭೂಮಾಲಕರ ಕೊಲೆ, ಇನ್ನೆಷ್ಟೋ ಗಂಭೀರ ಅಪರಾಧಗಳಿಂದ  ಮೇಲ್ನೋಟಕ್ಕೆ ಅರಾಜಕತೆ  ಕಾಣುವಂತಹ ಪರಿಸ್ಥಿತಿಯನ್ನುಂಟುಮಾಡಿದರು.ಇದರಿಂದ ಆಗಿನ ಸರಕಾರದ  ಮೇಲೆ  ಅಪರಾಧಗಳನ್ನು ಹತ್ತಿಕ್ಕಲು, ಕಾನೂನನ್ನು ಹೇರುವ ಒತ್ತಡ  ಬಂದಿತು. ಆಗ ಇ.ಎನ್.ಪುರುಷೊತ್ತಮನ್(ಡಿ.ಎಸ್.ಪಿ) ಅವರ ನಾಯಕತ್ವದಲ್ಲಿ  ಪೋಲೀಸ್ ಗುಪ್ತಚರ ದಳದವರು  ಮದ್ರಾಸಿನಲ್ಲಿ ಜರಗಲಿರುವ ನಕ್ಸಲೈಟ್ ಮುಖಂಡರ ಗುಪ್ತಸಭೆಯ  ಮಾಹಿತಿಯನ್ನು ಸಂಗ್ರಹಿಸಿ,  ಅವರ  ಬೆನ್ನುಹತ್ತಿ, ಬಂಧನದ ಪ್ರಯತ್ನಮಾಡಿದರು.
ಮತ್ತು ಅವರ ಪ್ರಯತ್ನವು ಯಶಸ್ವಿಯಾಯಿತು,೧೯೬೯ ರ ಡಿಸೆಂಬರ್ ೧೯ ರಂದು ನಾಗಿರೆಡ್ಡಿಯವರು ಮತ್ತು ಇನ್ನುಳಿದ ೮ ಮಂದಿ  ನಾಯಕರೆಲ್ಲರೂ, ಪ್ರಮುಖ ಪುರಾವೆ, ದಾಖಲೆ ಪತ್ರಗಳೊಂದಿಗೆ ಸಿಕ್ಕಿಬಿದ್ದರು. ಇಂದಿನ ವರೆಗೆ ಆ ರೀತಿಯಲ್ಲಿ ಗುಪ್ತ ಸಭೆಗೆ ಬಂದ ಸದಸ್ಯರೆಲ್ಲರನ್ನು ಬಂಧಿಸಿದ್ದಿಲ್ಲ.ಹಾಗೆ ಬಂಧಿಸಲ್ಪಟ್ಟ ಆಪಾದಿತರನ್ನು ,ಮದ್ರಾಸಿನಿಂದ  ಪೋಲೀಸ್ ವಾಹನದಲ್ಲಿ ಹೈದರಾಬಾದ್ ನಗರಕ್ಕೆ ತರಲಾಯಿತು. ಆ ಸದಸ್ಯರಲ್ಲಿ ಪ್ರಮುಖರಾಗಿದ್ದ ನಾಗಿರೆಡ್ಡಿಯವರನ್ನು ಪ್ರತ್ಯೇಕವಾಗಿ ಕರೆ ತರುವ ಜವಾಬ್ದಾರಿಯನ್ನು ರಾಘವ ರೆಡ್ಡಿಯವರಿಗೆ (ಡಿ.ಎಸ್.ಪಿ. ಸಿ.ಐ.ಡಿ)  ಒಪ್ಪಿಸಲಾಯಿತು, ಅವರನ್ನು ಈ ಬೃಹತ್ ಗಾತ್ರದ ಪ್ರಾಮುಖ್ಯ ಮೊಕದ್ದಮೆಯ ಮುಖ್ಯ ತನಿಖಾಧಿಕಾರಿಯನ್ನಾಗಿ ಮಾಡಲಾಯಿತು,ಮತ್ತು ಅವರ ಸಹಚರರಾಗಿ ಇನ್ನು ಕೆಲವೊಂದು ಅಧಿಕಾರಿಗಳ  ತಂಡವನ್ನು ರಚಿಸಲಾಯಿತು.ಅವರು ನಾಗಿ ರೆಡ್ಡಿಯವರನ್ನುತಮ್ಮ ಕಾರಿನಲ್ಲಿ ಬಿಗಿಯಾದ ರಕ್ಷಣಾವ್ಯವಸ್ಥೆಯೊಂದಿಗೆ ಹೈದರಾಬಾದಿಗೆ  ಕರೆತಂದರು.ಆಗ ಅವರಿಗೆ ನಾಗಿರೆಡ್ಡಿಯವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಒದಗಿ ಬಂತು.ಆಗ ಕಮ್ಯುನಿಸ್ಟ್ ತತ್ವಗಳನ್ನು ಮತ್ತು ಆದರ್ಶಗಳನ್ನು ಅವರಿಂದಲೇ ತಿಳಿಯುವಂತಾಯಿತು. ಮತ್ತು ಅವರ ಈ ಸಂಭಾಷಣೆ ಮುಂದೆ ಈ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಅದರ ಬೆಳವಣಿಗೆಯನ್ನು ಅರ್ಥೈಸಿಕೊಳ್ಳಲು ಸಹಾಯವಾಯಿತು.

ಒಂದು ಹಂತದಲ್ಲಿ ನಾಗಿ ರೆಡ್ಡಿಯವರ ವಿಚಾರಧಾರೆ ರಾಘವ ರೆಡ್ಡಿಯವರನ್ನು ಬಹಳ ಪ್ರಭಾವಿತರನ್ನಾಗಿಸಿತು,ಆದರೆ ಅವರೆಂದೂ ಹಿಂಸಾಚಾರದ ಹಾದಿಯನ್ನು ಒಪ್ಪಲಿಲ್ಲ. ನಾಗಿ ರೆಡ್ಡಿಯವರು  “ಒಂದು ಉತ್ತಮ ಸಮಾಜದಲ್ಲಿ ವಸ್ತುವಿನ ( ಅಹಾರ ಅಥವಾ ಇತರ ಸಾಮಾನು) ಉತ್ಪತ್ತಿ ಯಾನೆ ತಯಾರಿ ಸಮಾಜೀಕೃತವಾಗಿರುತ್ತದೆ, ಮತ್ತು ಅದರ  ವಿತರಣೆ ರಾಷ್ಟ್ರೀಕೃತವಾಗಿರುತ್ತದೆ.” ಎಂದು ಹೇಳಿದರು ಮತ್ತು ನಂಬಿದರು, ಅವರು ಈ ತತ್ವಗಳ ಸಾಧನೆಗೆ ತಮ್ಮ ಜೀವನಪರ‍್ಯಂತ (೧೯೧೭-೧೯೭೬)  ತಮ್ಮದೆಲ್ಲವನ್ನೂ ತ್ಯಾಗಮಾಡಿದರು, ಕೊನೆಗಾಲದಲ್ಲಿ ಅನಾಮಧೇಯರಾಗಿ ಸಾವನ್ನಪ್ಪಿದರು.
ಈ ಕಮ್ಯುನಿಸ್ಟ್  ಸಂಚಿನ ಮೊಕದ್ದಮೆಯಲ್ಲಿ ೬೭ ಮಂದಿ ಮೇಲಿನ ಹಂತದ ನಕ್ಸಲೈಟ್ ಸದಸ್ಯರನ್ನು ,ಆಂಧ್ರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಹರಡಿದ್ದ ೫೫೦ ಮಂದಿ ಸಾಕ್ಷಿಗಳನ್ನು ಪರೀಕ್ಷಿಸಬೇಕಿತ್ತು,ಅದಲ್ಲದೇ ನಡೆದ ೨೮ ಕೊಲೆ,೧೫೦ ದರೋಡೆ ಕಳ್ಳತನಗಳ,ಕಾನೂನು  ಬಾಹಿರವಾಗಿ ಸಂಗ್ರಹಿಸಲ್ಪಟ್ಟ ಆಯುಧಗಳು ಇತ್ಯಾದಿ  ಪ್ರಕರಣಗಳ ಪ್ರತ್ಯಕ್ಷ ಸಾಕ್ಷಿ ಹಾಗೂ ಸಂಗ್ರಹಿಸಿದ ೭೭೭ ದಾಖಲೆ ಪತ್ರಗಳು  ಎಲ್ಲವೂ ತನಿಖಾಧಿಕಾರಿಯಾದ ರಾಘವ ರೆಡ್ಡಿಯವರ ಕೆಲಸವನ್ನು ಹಿರಿದಾಗಿಸಿತ್ತು.ಅದರಲ್ಲಿ ಅತ್ಯಂತ ಕ್ಲಿಷ್ಟವಾದುದು ಆ ಎಲ್ಲಾ ನೂರಾರು ಅಪರಾಧಗಳನ್ನು,ಅಪರಾಧಿಗಳನ್ನು ಒಂದಕ್ಕೊಂದು ಜೋಡಿಸುವುದು ,ಮತ್ತು ಜೀವಕ್ಕೇ ಸಂಚಕಾರವಿರುವ  ಸಾಕ್ಷಿಗಳನ್ನು,ಜೀವಭಯವಿರುವಂತಹ ಕಾಡುಮೇಡುಗಳಿಂದ ಕರೆತಂದು, ಸಂದರ್ಭಕ್ಕೆ ಸರಿಯಾಗಿ ಹೊಂದಿಸಿಕೊಳ್ಳುವುದು ಇತ್ಯಾದಿ.ಈ ಎಲ್ಲಾ ಕೆಲಸವನ್ನು ರಾಘವ ರೆಡ್ಡಿಯವರೂ ಅವರ ತಂಡದವರು ಕಾನೂನಿನ ಚೌಕಟ್ಟಿನೊಳಗೆ ಅವರಿಗಿದ್ದ ಸಮಯಾವಧಿಯಲ್ಲಿ ಸಾಧಿಸಿದರು.
ರಾಘವ ರೆಡ್ಡಿಯವರು ತನಿಖಾಧಿಕಾರಿಯಾಗಿ  ಮೊಕದ್ದಮೆಯನ್ನು ಬರಹದಲ್ಲಿದಾಖಲಿಸಬೇಕಾಗಿತ್ತು.ಅವರ “ಕೇಸ್ ಡೈರಿ” ೧೨೦೦ ಪುಟಗಳ ಟೈಪ್ ಮಾಡಿದ ದಾಖಲೆಪತ್ರವಾಗಿತ್ತು,ಅವುಗಳನ್ನು ನಿರಂತರವಾಗಿ ಬದಲಾಯಿಸುತ್ತಾ, ದೂಷಿತರಾಗಿದ್ದ ೬೭ ಮಂದಿ ನಕ್ಸಲೈಟ್ ವಿವಿಧ ಅಪರಾಧಿಗಳ ಹಿನ್ನೆಲೆಗೆ   ಹೊಂದುವಂತೆ ಬರೆಯಬೇಕಾಗುತ್ತಿತ್ತು. ಮುಂದುವರಿದಂತೆ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಪತ್ರಗಳು ಒಬ್ಬೊಬ್ಬ ಅಪರಾಧಿಗೆ ೯೦೦೦ ಪುಟಗಳಾದವು,ಅಂತಹ  ೬೭ ಮಂದಿ ಅಪರಾಧಿಗಳ ಕಾಗದಪತ್ರಗಳು  ಒಟ್ಟಾಗಿ ೭,೦೦,೦೦೦ ಮುದ್ರಿತ ಕಾಗದಗಳಾದವು. ಆಪಾದಿತರು  ತಮಗೆ ಒದಗಿ ಬಂದ ಸಣ್ಣ ಕಾರಣಗಳಿಗೂ ಮೊಕದ್ದಮೆಗೆ ತಡೆ ತರಲು ಪ್ರಯತ್ನಿಸುತ್ತಿದ್ದರು,ಹಾಗಾಗಿ  ತನಿಖಾಧಿಕಾರಿಯಾಗಿ  ರಾಘವ ರೆಡ್ಡಿಯವರು  ಮತ್ತು ತಂಡದವರು ಹಗಲು ರಾತ್ರಿ ಅವಿಶ್ರಾಂತರಾಗಿ ದುಡಿಯಬೇಕಾಗಿತ್ತು,  ಆಗ ಆ ಕಾಗದ ಪತ್ರಗಳ ಸುರಕ್ಷತೆಗಾಗಿ ರೆಡ್ಡಿಯವರೂ ಅವರ ಕೆಲವು ಅಧಿಕಾರಿಗಳು ಮುದ್ರಣಾಲಯದಲ್ಲೇ  ರಾತ್ರಿಯಲ್ಲಿ ಮಲಗುತ್ತಿದ್ದರು.ಅವಷ್ಟನ್ನೂ ನಿಗಧಿತ ೯೦ ದಿನಗಳೊಳಗಾಗಿ ಒದಗಿಸಿದರು.  ಆ ಸಂದರ್ಭದಲ್ಲಿ ಜಲಗಂ ವೆಂಗಲ ರಾವ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದರು,ಸರಕಾರವು ಈ ಕಾಗದ ಪತ್ರಗಳ ಮುದ್ರಣಕ್ಕೆ ಪೋಲೀಸ್ ಇಲಾಖೆಗೆ ಬೇಕಿದ್ದ ೨೦೦ ಮಿಕ್ಕಿದ  typists ಗಳನ್ನು ಬೇರೆ  ಇಲಾಖೆಗಳಿಂದ ತತ್ಕಾಲಿಕವಾಗಿ ಒದಗಿಸಿತು.  ಆ ದಾಖಲೆ ಪತ್ರಗಳನ್ನು ಪೊಲೀಸ್ ಲಾರಿಗಳಲ್ಲಿ,ಹಿಂದಿನಿಂದ ನಕ್ಸಲೈಟ್ ಅಪಾದಿತರನ್ನು ಕೃಷ್ಣವರ್ಣದ  ಮರಿಯದಲ್ಲಿ(black Maria)  ನ್ಯಾಯಾಲಯಕ್ಕೆ ಕರೆತರಲಾಗುತ್ತಿತ್ತು.
ಆಗಿನ ಮುಖ್ಯಮಂತ್ರಿಯಾಗಿದ್ದ ಜಲಗಂ ವೆಂಗಲ್ ರಾವ್ ಬಹಳ ಬುದ್ಧಿವಂತ ನಾಯಕರಾಗಿದ್ದರು,ಅವರು ಜನರನ್ನು, ಸನ್ನಿವೇಶಗಳನ್ನು  ತುಂಬಾ ಚೆನ್ನಾಗಿ  ಅರ್ಥೈಸುತ್ತಿದ್ದರು. ನಂತರದ ದಿನಗಳಲ್ಲಿ, ಅವರು ಈ ನಕ್ಸಲೈಟ್ ಬೆಳವಣಿಗೆಗೆ ಹಳ್ಳಿಗಳ, ಹಿಂದುಳಿದ  ಜನಾಂಗಗಳ ಬೆಳವಣಿಗೆಯಲ್ಲಾದ  ವಿಳಂಬವೇ ಕಾರಣ ಎಂದು, ಶ್ರೀಕಾಕುಲಮ್ ಜಿಲ್ಲೆಯ ಮೂಲನಿವಾಸಿಗಳಾದ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಹಲವಾರು  ಕಾರ್ಯಕ್ರಮಗಳನ್ನು ಕೈಗೊಂಡರು.
ನ್ಯಾಯಾಲಯದಲ್ಲಿ ಆಪಾದಿತ ನಕ್ಸಲೈಟ್ ನಾಯಕರು  ತಮಗೆ ಪ್ರಜಾಪ್ರಭುತ್ವದ ಸರಕಾರ ಪದ್ಧತಿಯಲ್ಲಿ ನಂಬಿಕೆಯಿಲ್ಲ ಎಂದು ಎಲ್ಲರ ಸಮಕ್ಷಮದಲ್ಲಿ ಘೋಷಿಸಿ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ನ್ಯಾಯಾಲಯದ ಆವರಣದೊಳಗೆ ಉಂಟಾಗುತ್ತಿದ್ದ ಉದ್ರೇಕಕಾರಿ ಸನ್ನಿವೇಷಗಳನ್ನು ಹತ್ತಿಕ್ಕುವುದು, ರಕ್ಷಣಾ ಮುನ್ನೆಚ್ಚರಿಕೆಗಳನ್ನು ವಹಿಸುವುದು ರಾಘವ ರೆಡ್ಡಿಯವರ ಜವಾಬ್ದಾರಿಯಾಗಿತ್ತು.ದೇಶದಾದ್ಯಂತ  ಹರಡಿದ್ದ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಸಾಕ್ಷಿಹೇಳಿಕೆಗಾಗಿ ರಕ್ಷಣಾವ್ಯವಸ್ಥೆಯೊಂದಿಗೆ ಕರೆತಂದಾಗ,  ಆ ಸಂದರ್ಭದಲ್ಲಿ ನೆರೆದಿದ್ದ ನಕ್ಸಲೈಟ್  ಸದಸ್ಯರು ಅವರನ್ನು ಅವಮಾನಿಸುವುದು, ತೆಗಳುವುದು  ಹಾಗೂ ಕ್ರಾಂತಿಕಾರಿ ಹಾಡುಗಳೊಂದಿಗೆ   ಭಯಭೀತರನ್ನಾಗಿಸುವುದು ಇತ್ಯಾದಿ  ಮಾಡುತ್ತಿದ್ದರು.ಆದರೆ ಆ  ಎಲ್ಲಾ ಸಂದರ್ಭದಲ್ಲಿ ರಾಘವ ರೆಡ್ಡಿಯವರು ತೋರಿದ ತಾಳ್ಮೆ, ಸಹನೆ ಹಾಗೂ ನಿರಂತರ ಪರಿಶ್ರಮ ಆ ಕ್ರಾಂತಿಕಾರಿ ಮಂದಿಗಳಲ್ಲೂ ಅವರ ಆ ನಡವಳಿಕೆಯ ಬಗ್ಗೆ ವ್ಯತಿರಿಕ್ತ ಭಾವನೆಗಳನ್ನು ತರಿಸಿತು.
ಈ ಮೊಕದ್ದಮೆ ಆಂಧ್ರಪ್ರದೇಶದ  ಪೋಲೀಸ್ ಇಲಾಖೆಯ ಇತಿಹಾಸದಲ್ಲೇ ಯಶಸ್ವೀಯಾಗಿ ಬಗೆಹರಿದ  ಹಾಗೂ ಮುಂಬರುವ ಪೋಲೀಸ್ ಅಧಿಕಾರಿಗಳಿಗೆ ನಿರಂತರ ಸ್ಫೂರ್ತಿ ನೀಡುವ  ಮೊಕದ್ದಮೆ  ಎಂದು ಶ್ರೀ ವಿ.ಕೆ.ರಾವ್( ICS-Chief Secretary to Govt of AP) ಹೇಳಿದ್ದಾರೆ.ಒಟ್ಟಿನಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಮಂದಿ ೩೨೪, ಕೊನೆಯ ಸಾಕ್ಷಿ ಸ್ವತಃ ರಾಘವ ರೆಡ್ಡಿಯವರು. ಮೊಕದ್ದಮೆಯ ಮುಕ್ತಾಯದ ಹಂತದಲ್ಲಿ ಆಪಾದಿತರ ನಾಯಕ ನಾಗಿ ರೆಡ್ಡಿಯವರೇ ಸ್ವತಃ, ಇದು ಅತ್ಯಂತ ನ್ಯಾಯಯುತವಾಗಿ ಬಗೆಹರಿದ ದಾವೆ, ಎಂದು ತನಿಖಾಧಿಕಾರಿಯಾದ ರಾಘವ ರೆಡ್ಡಿಯವರನ್ನು ಮುಕ್ತವಾಗಿ  ಪ್ರಶಂಸಿಸಿದ್ದಾರೆ,  ಮತ್ತು ಕೊನೆಯಲ್ಲಿ ಯಾವುದೇ ದ್ವೇಷ-ಮನೋಭಾವನೆಯಿಲ್ಲದೇ  ಪೋಲೀಸರೂ, ಅಪರಾಧಿಗಳೂ ಬೀಳ್ಕೊಂಡಿದ್ದಾರೆ. ಪ್ರಾಯಶಃ ಪೋಲೀಸರಿಗೆ ಇದಕ್ಕಿಂತ ದೊಡ್ಡ ಬಹುಮಾನ ಇನ್ನೊಂದಿಲ್ಲ. ನಾಗಿ ರೆಡ್ಡಿಯವರು ಮತ್ತು ಇನ್ನಿತರ ೨೨ ಮಂದಿ ಅಪರಾಧಿಗಳಿಗೆ  ಪ್ರತ್ಯೇಕವಾಗಿ ರಚಿಸಲ್ಪಟ್ಟ ಸೆಷನ್ಸ್ ಕೋರ್ಟ್, ೪ ವರ್ಷಗಳ  ತೀವ್ರಜೈಲು ಶಿಕ್ಷೆಯನ್ನು  ವಿಧಿಸಿತು. ಆದರೆ  ನಾಗಿ ರೆಡ್ಡಿಯವರು ಜಾಮೀನಿನಿಂದ ತಲೆ  ತಪ್ಪಿಸಿಕೊಂಡು  ಭೂಗತರಾಗಿ,  ಕೊನೆಗಾಲದ  ವರೆಗೂ ಧ್ಯೇಯ  ಸಾಧನೆಯಲ್ಲಿ ನಿರತರಾಗಿದ್ದರು  ಮತ್ತು ಕೊನೆಯಲ್ಲಿ ಸಹಜವಾಗಿ  ೧೯೭೬ ರಲ್ಲಿ ಸಾವನ್ನಪ್ಪಿದರು, ಉಳಿದ ಶಿಕ್ಷೆಗೊಳಗಾದವರು ತಮ್ಮ ಶಿಕ್ಷಾವಧಿಯನ್ನು ಪೂರೈಸಿ ಹೊರಬಂದರು.
ರಾಘವ ರೆಡ್ಡಿಯವರೇ ಹೇಳಿದಂತೆ ಈ ತೆರನಾದ ಸಂಚಿನ ತನಿಖೆಯು ಅತ್ಯಂತ ಕ್ಲಿಷ್ಟವಾದುದು, ಇದು ನಮ್ಮ ದೇಶದ ಇತಿಹಾಸದಲ್ಲೇ ಸಾಟಿಯಿಲ್ಲದ, ಯಶಸ್ವಿಯಾಗಿ ಬಗೆಹರಿದ ಸಂಚಿನ ಮೊಕದ್ದಮೆಯಾಗಿದೆ. ಇದರನ್ನು ಎದುರಿಸುವ ಅಧಿಕಾರಿಗೆ  ಈ ಕೆಳಗಿನ ಗುಣಗಳಿರಬೇಕು.
೧.ಅಂತರ್ ದೃಷ್ಟಿ                   (Perception)
೨.ಸಹನೆ                              (Patience)
೩.ಸಿದ್ಧತೆ                              (Preparation)
೪.ಪೂರ್ವ ಸಿದ್ಧತೆ,ಯೋಜನೆ    (Planning)
೫.ಮನವೊಲಿಸುವಿಕೆ              (Persuasiveness)
೬.ನಿರಂತರ ಪರಿಶ್ರಮ           (Perseverance)
೭.ನಿರೂಪಣೆ                         (Presentation)
ಈ ಮೊಕದ್ದಮೆ ನಡೆಸಿಕೊಟ್ಟ  ಕೆ. ಜಯಚಂದ್ರ ರೆಡ್ಡಿ(Chief Public Prosecutor) ಯವರು ಇಂತಹ ಕ್ಲಿಷ್ಟವಾದ ದಾವೆಯಿಂದಾಗಿ ಬಹಳ ಪ್ರಶಂಸಿಸಲ್ಪಟ್ಟರು  ಮತ್ತು ಆಂಧ್ರ ಪ್ರದೇಶದ ಉಚ್ಚನ್ಯಾಯಾಧೀಶರಾಗಿ ,ತರುವಾತ ಭಾರತ ದೇಶದ (supreme court) ನ್ಯಾಯಾಧೀಶರಾಗಿ ಭಡ್ತಿ ಹೊಂದಿದರು.
ಇ.ಎನ್.ಪುರುಷೊತ್ತಮನ್(ಡಿ.ಎಸ್.ಪಿ,ನಿವೃತ್ತ ಅಧಿಕಾರಿ)  ರಾಘವ ರೆಡ್ಡಿಯವರ ಕಾರ್ಯವೈಖರಿಯನ್ನು ತಮ್ಮ ಬರಹದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.ರಾಘವ ರೆಡ್ಡಿಯವರು ಸರಳ ಸ್ವಭಾವದ ನಿಗರ್ವೀ ವ್ಯಕ್ತಿ, ಪೋಲೀಸ್ ಅಧಿಕಾರಿಯಾಗಿ  ಅವರಿಗೆ ಅದುವೇ ಆಯುಧವಾಗಿತ್ತು.ಬಹಳ ಗಡಸಾಗಿ ತರಬೇತಾದ ,ಕಠೋರ  ಅನುಭವಗಳನ್ನು ಹೊಂದಿದ ನಕ್ಸಲೈಟ್ ಬಂಧಿತರನ್ನು ವಿಚಾರಣೆ  ಮಾಡುವುದು ದುಸ್ಸಾಧ್ಯವಾದ ಕೆಲಸ. ಆದರೆ ಆ ಬಂಧಿತರು ರಾಘವ ರೆಡ್ಡಿಯವರಂತಹ ಮೃದು ಹೃದಯಿ ಮತ್ತು ದಯಾರ್ದ್ರ  ಸ್ವಭಾವದ  ವ್ಯಕ್ತಿಯನ್ನು ನಿರೀಕ್ಷಿಸಿರಲಿಕ್ಕಿಲ್ಲ,ಇವರ ಪ್ರೋತ್ಸಾಹನೀಯ ಹೊಗಳಿಕೆಗಳನ್ನು ಅವರು ಎದುರಿಸಲು ತಿಳಿಯದೇ, ತಮ್ಮ ತಪ್ಪೊಪ್ಪುವಂತಾಯಿತು ಮತ್ತು ಅಪರಾಧಗಳಲ್ಲಿ ತಾವು ವಹಿಸಿದ ಪಾತ್ರಗಳನ್ನು ತಿಳಿಸುವಂತಾಯಿತು. ಈ ಮೊಕದ್ದಮೆ ಇದರ ಗಾತ್ರ ಹಾಗೂ ಸ್ನೇಹಮಯ ಮತ್ತು ದಯಾಭರಿತ ವಿಚಾರಣಾ ವಿಧಾನದಿಂದ ಸ್ಮಾರಕಪ್ರಾಯವಾಗಿದೆ. ಇದರ ಪೂರ್ತಿ ಹೆಗ್ಗಳಿಕೆ ರಾಘವ ರೆಡ್ಡಿಯವರಿಗೆ ಸಲ್ಲುತ್ತದೆ.
ಇವರ ಈ ಕೆಲಸವನ್ನು ಗುರುತಿಸಿ,  ಅವರ ಕಾರ್ಯದಕ್ಷತೆಗಾಗಿ, ರಾಜ್ಯದಲ್ಲಿ ಹೆಚ್ಚುತ್ತಿದ್ದ ಅಪರಾಧಗಳ  ಶೋಧನೆಗಾಗಿ  ಅವರನ್ನು ಆ ಇಲಾಖೆಯ  ಸೇವೆಗೆ ನೇಮಕ ಮಾಡಲಾಯಿತು, ಅವರಿಗೆ  ಉನ್ನತ ಮಟ್ಟದ ಕೆಲಸಕ್ಕೊಸ್ಕರ ೧೯೭೩ ರಲ್ಲಿ ರಾಜ್ಯ ಸರಕಾರದ  ಪೋಲೀಸ್ ಮೆಡಲ್ ಅನ್ನು ಕೊಟ್ಟು ಗೌರವಿಸಲಾಯಿತು.ನಾಗಿ ರೆಡ್ಡಿ ಸಂಚಿನ ಮೊಕದ್ದಮೆಯ ಯಶಸ್ಸನ್ನು ಕಂಡು ಆ ನಂತರದ  ಚಾರು ಮುಝಂದಾರ್, ಕನು ಸನ್ಯಾಲ್ ಅಂತಹ  ನಾಯಕರಿದ್ದ ಕಮ್ಯುನಿಸ್ಟ್ ಮೊಕದ್ದಮೆಗಳನ್ನು ರಾಘವ ರೆಡ್ಡಿಯವರಿಗೆ ಒಪ್ಪಿಸಲಾಯಿತು. ಅವುಗಳು ಪಾರ್ವತಿಪುರಮ್ ಸಂಚು,ಕ್ರಾಂತಿಕಾರೀ ಬರಹಗಾರರ ಸಂಚಿನ ಮೊಕದ್ದಮೆಗಳು,  ಆದರೆ ಅವ್ಯಾವುದೂ  ಮೊದಲಲ್ಲಿ ಹೇಳಿದ ನಾಗಿ ರೆಡ್ಡಿ ಸಂಚಿನಂತೆ ಬಗೆಹರಿಯಲಿಲ್ಲ ಮತ್ತು ಅಪರಾಧಿಗಳಿಗೆ  ಸುಪ್ರಿಂ ಕೋರ್ಟ್ ಮಟ್ಟದಲ್ಲಿ ಶಿಕ್ಷೆಯಾಗಲಿಲ್ಲ. ರಾಘವ ರೆಡ್ಡಿಯವರಿಗೆ  ದೇಶದಲ್ಲೇ ಅವರ ಕೆಲಸಕ್ಕೆ ಮನ್ನಣೆ ದೊರೆಯಿತು ಮತ್ತು ೧೯೮೨ ರಲ್ಲಿ ರಾಷ್ಟ್ರಪತಿಯವರ ಪೋಲೀಸ್ ಮೆಡಲ್ ಅನ್ನು ಕೊಟ್ಟು ಗೌರವಿಸಲಾಯಿತು.ಅವರು ತಮ್ಮ ಕೆಲಸದಲ್ಲಿ ತೋರಿದ ಸಾಹಸ, ಧೈರ್ಯ  ಮತ್ತು ಶ್ರದ್ಧೆ  ನ್ಯಾಯನಿಷ್ಠೆಗಳಿಂದ  ತಮ್ಮ ಎಲ್ಲಾ ಸಹೋದ್ಯೋಗಿಗಳ ಮತ್ತು ಮೇಲಿನ ಅಧಿಕಾರಿಗಳ  ಗೌರವ, ಪ್ರೀತಿಗಳನ್ನು ಗಳಿಸಿದ್ದಾರೆ. ಅವರು ಮುಂಬರುವ ಯುವ ಅಧಿಕಾರಿಗಳಿಗೆ ಸ್ಫೂರ್ತಿದಾಯಕರಾಗಿದ್ದಾರೆ.

ರಾಘವ ರೆಡ್ಡಿಯವರು ಕಮ್ಯುನಿಸ್ಟ್ ತತ್ವಗಳು ಎಂದಿಗೂ ಫಲಕಾರಿಯಾಗದು,ಹಿಂಸಾಮಾರ್ಗವು  ಎಂದಿಗೂ ಶಾಂತಿಯುತ ಬದುಕನ್ನು ಕೊಡಲಾರದು ಎನ್ನುತ್ತಾರೆ, ಅವರು ನಿಷ್ಠಾವಂತ ಗಾಂಧಿವಾದಿ.
ವಿ.ಸೂ.-  ನನ್ನ ಮೊದಲಿನ (ಪ್ರಥಮ)  ಕನ್ನಡ ಬ್ಲಾಗ್ ಶ್ರೀ ರಾಘವ ರೆಡ್ಡಿಯವರ ಜೀವನ ಚರಿತ್ರೆಯನ್ನು ಹೇಳುತ್ತದೆ.ಈ ಬರಹವೂ ಅವರ ಆತ್ಮ ಕಥನವಾದ ”  As I Look Back”   ಅನ್ನು   ಆಧರಿಸಿ ಬರೆದುದು.

Advertisements

4 thoughts on “೨೦ನೇ ಶತಮಾನದ ರೋಮಾಂಚಕಾರಿ ಕಮ್ಯುನಿಸ್ಟ್ ಸಂಚು( ನಾಗಿರೆಡ್ಡಿ ಸಂಚಿನ ಮೊಕದ್ದಮೆ)

 1. MY DEAR SHAILAJA.I AM THE AUTHOR OF THE BOOKas “i look back” FROM WHICH YOU PUBLISHED THIS FAMOUS NAGI REDDY CONSPIRACY CASE.YOU HAVE DONE A GREAT SERVICE TO KANNADA EADERS IN TRANSLATING IN TO KANNADA.THE KANNADA READERS WILL KNOW THE TRUE CASE CORRECTLY AND ON IDEALOGY. A GRAT LITERARY WORK WHICH I AM SURE WILL BE WELL APPRECATED.I THAK YOU AND CONVEY MY HEARTY CONGRATULATIONS.

 2. Dear Sir,
  After reading your book “As I Look Back “, I thought I have this small responsibility of passing this information of your life and work. As I feel every generation has some leaders, some inspiring personalities all the time, it is our(youngsters) duty to identify who is our source of inspiration in our life.I feel your and T.Nagi Reddy’s life were both inspiring in different ways, I agree with your way of thinking and performing duties in the life. I gratefully accept your Blessings and Congratulations.
  With Regards,
  Shailaja

 3. ಪ್ರಿಯ ಶೈಲಕ್ಕಾ
  ನಿನ್ನ ಲೇಖನಗಳ ಪ್ರತಿಕ್ರಿಯೆ ಅಂಕಣದಲ್ಲಿ ಆಗಾಗ ಕಾಣುತ್ತಿದ್ದ ಈ ರಾಘವರೆಡ್ಡಿ ಗೊಂಗಿಡಿ ಹೆಸರು ಕಂಡಾಗೆಲ್ಲ ದೂರದೂರಿನಲ್ಲಿ ಸಮಾಜ ಸಂಪರ್ಕದ ಅನಿವಾಯರ್ತೆಯಲ್ಲಿ ಮತ್ತೆ ಪರಿಚಯದ ದಾಕ್ಷಿಣ್ಯಕ್ಕೆ ಅದ್ಯಾರೋ (ಮುದೂಕ) ನಿವೃತ್ತ ಅಧಿಕಾರಿ ನಿನಗೆ ತಗುಲಿಕೊಂಡದ್ದನ್ನು ಸುಧಾರಿಸಿಕೊಂಡಿದ್ದಿಯಾಂತ ಅಂದುಕೊಂಡಿದ್ದೆ. ಹಾಗಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ ಈ ಬರಹಕ್ಕೆ ಕೃತಜ್ಞತೆಗಳು. ರಚ್ಚೆ ಹಿಡಿದ ಸ್ವಂತ ಮಗುವಿಗೇ ಆದರೂ ನಾಲ್ಕು ಬಾರಿಸಿ, ದಾರಿಗೆ ತರುವ (?) ಮನೋಭಾವ ರೂಢಿಸಿಕೊಂಡ ನಮಗೆ ಪ್ರೌಢ, ಘೋಷಿತ ಅಪರಾಧಿಗಳು ಕೈಯಲ್ಲಿದ್ದು, ಸುಲಭ ದಂಡನೆಗಿಳಿಯುವ ತರಬೇತಿ ಮತ್ತು ಅಧಿಕಾರದ ಭ್ರಮೆಗಳು ಆವರಿಸುವ ವಾತಾವರಣದಲ್ಲಿ ರೆಡ್ಡಿಯವರ ಸಂಯಮಪೂರ್ಣ ನಿರ್ವಹಣೆ ನಿಜಕ್ಕೂ ಅನುಕರಣೀಯ. ಸೆರೆಮನೆಯಲ್ಲಿ ಸಾವು, ಎನ್ಕೌಂಟರ್ ಎಂಬೆಲ್ಲ ಹೆಸರುಗಳಲ್ಲಿ ಬಹುತೇಕ ಪೊಲಿಸ್ ದೌರ್ಜನ್ಯಗಳು ಮುಚ್ಚಿಹೋಗುವ ಈ ಕಾಲಕ್ಕೆ ರೆಡ್ಡಿಯವರ ಸಾಧನೆ ಆದರ್ಶವಾಗಬೇಕು. ಅವರಿಗೆ ನನ್ನ ಗೌರವಪೂರ್ಣ ನಮನಗಳು.
  ಅಸಕ್ಕಭಾವ

 4. ಅಶೋಕ ಭಾವ,
  ನೀನು ಹೇಳಿದಂತೆ ಈ ವ್ಯಕ್ತಿಯ ಸರಳಸ್ವಭಾವದಿಂದಲೇ ನನಗೆ ಇವರೊಡನೆ ಸಂಪರ್ಕ ಬೆಳೆದುದು.ನಾನು ನನ್ನ ಅನುಭವದ ಮಿತಿಯಲ್ಲಿ ಅವರನ್ನು ಅಳೆಯಲಾರೆಯಾದರೂ, ವ್ಯಕ್ತಿಯಾಗಿ ಅವರನ್ನು ಹಿರಿಯವರು ಎಂದು ಅರ್ಥೈಸಿಕೊಂಡೆ, ಹಾಗಾಗಿ ನನ್ನ ಗೌರವವನ್ನು ವ್ಯಕ್ತ ಪಡಿಸಲು ಇದರನ್ನು ಬರೆದೆ.ಇದರಲ್ಲಿ ಯಾವ ಉತ್ಪ್ರೇಕ್ಷೆಯಿಲ್ಲ, ಅವರ ಜೀವನೋತ್ಸಾಹ ಮತ್ತು ಕೆಲಸ ಮಾಡಲಿರುವ ಛಲ ನನಗೆ ನಿನ್ನಪ್ಪನನ್ನು ನೆನಪಿಗೆ ತರಿಸುತ್ತದೆ.ಕೆಲವೊಂದರಲ್ಲಿ ಅವರು ನಾರಾಯಣ ಮಾವನಷ್ಟೇ, ಪ್ರಾಯಕ್ಕೆ ಮೀರಿದ ಉತ್ಸಾಹ, ಸ್ನೇಹವನ್ನು ತೋರಿಸುತ್ತಾರೆ. ಜೀವನದಲ್ಲಿ ನಾವು ನೋಡಿ ಕಲಿಯುವುದು ಬಹಳ ಇದೆ ಎಂಬುವುದು ವಯಸ್ಸಾದಂತೆ ,ಅನುಭವದಿಂದಾಗಿ ತಿಳಿಯುತ್ತದೆ.
  ಶೈಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s