ವೀಣಾ ವಿದ್ವಾಂಸ ಬಾಲಚಂದರ್

ಕರ್ಣಾಟಕ  ಸಂಗೀತದ  ಅಭಿರುಚಿಯಿರುವ ಯಾರಿಗೂ ಬಾಲಚಂದರ್ ಅವರ ಪರಿಚಯವನ್ನು ಹೇಳುವ ಅಗತ್ಯವಿಲ್ಲ.ಅವರು ಬಾಲಪ್ರತಿಭೆಯೆಂದು ಲೋಕಕ್ಕೆ ಪರಿಚಿತರಾಗಿ, ಕಳೆದ ಶತಮಾನದ ನಲ್ವತ್ತರ  ಮತ್ತು  ಐವತ್ತರ  ದಶಕದಲ್ಲಿ  ತಮಿಳು ಚಿತ್ರರಂಗದಲ್ಲಿ ನಾಯಕ ನಟನಾಗಿ, ಸಂಗೀತ, ನಿರ್ದೇಶನ, ಹಿನ್ನೆಲೆ ಗಾಯಕನಾಗಿ, ನಂತರದ ವರುಷಗಳಲ್ಲಿ  ಕರ್ಣಾಟಕ ಸಂಗೀತದ ಗಣ್ಯ  ಕಲಾಕಾರನಾಗಿ ಮಿಂಚಿದವರು.
ಬಾಲಚಂದರ್ ಮದ್ರಾಸಿನ (ಈಗಿನ ಚೆನ್ನೈ) ಪ್ರಮುಖ ವಕೀಲರಾದ ಸುಂದರಂ  ಅಯ್ಯರ್ ಅವರ ಎರಡನೆಯ ಮಗ (ಮಕ್ಕಳಲ್ಲಿ  ಕಿರಿಯವನು). ೧೯೨೭ ಜನವರಿ ೧೮ ಅವರ ಜನ್ಮದಿನ,   ಇವರು  ತಮ್ಮ ೬೩ನೇ ವಯಸ್ಸಿನಲ್ಲಿ ತೀರಿಕೊಂಡರು.ಸುಂದರಮ್ ಅಯ್ಯರ್ರವರ  ಮನೆಯೆಂದರೆ  ಸಂಗೀತದ ದಿಗ್ಗಜರೆನಿಸಿದ  ಅರಿಯಾಕುಡಿ ರಾಮಾನುಜ ಅಯ್ಯಂಗಾರ್,ಮುತ್ತಯ್ಯ ಭಾಗವತರ್, ಮಧುರೆ ಮಣಿ ಅಯ್ಯರ್ ಮುಂತಾದ ಮಂದಿಗಳು ಬಂದು ಹಾಡಿ ,ಉಂಡು, ಪುರಸ್ಕೄತರಾಗಿ ಹೋಗುವ ತಾಣವಾಗಿತ್ತು. ಮನೆಯ ಈ ವಾತಾವರಣದಿಂದಾಗಿ ಹಿರಿಯ  ಮಗ ರಾಜಂ ಮತ್ತು ಎರಡನೆಯವನಾದ ಬಾಲಚಂದರ್ ಅವರ ಸುಪ್ತಪ್ರತಿಭೆ ಸಕಾಲದಲ್ಲಿ ಬೆಳಕಿಗೆ ಬಂದು, ಅವರು ಹಿರಿಯ ಕಲಾವಿದರಾಗಲು  ಅನುವು ಮಾಡಿಕೊಟ್ಟಿತು.
ಬಾಲಚಂದರ್ ತೀರ ಎಳೆ ವಯಸ್ಸಿನಲ್ಲೇ ಬಾಲಪ್ರತಿಭೆ ಎಂದು ಗುರುತಿಸಲ್ಪಟ್ಟರು.ಅವರು ಚಿತ್ರಕಲೆಯಲ್ಲಿ, ಸಂಗೀತದಲ್ಲಿ, ನಟನೆಯಲ್ಲಿ ಹೀಗೆ ಬಹಳಷ್ಟು  ಕಲೆಗಳಲ್ಲಿ  ನೈಪುಣ್ಯತೆ ತೋರಿದರು.ಲೋಕಪದ್ಧತಿಯಂತೆ ಅವರು ಶಾಲೆಗೆ ಹೋದರೂ  ೧೦ನೇ ತರಗತಿಯ ನಂತರ ಶಾಲಾವಿದ್ಯಾಭ್ಯಾಸವನ್ನು ನಿಲ್ಲಿಸಿ, ಕಲೆಯ ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತಾ ಪರಿಣತರಾದರು. ಅವರಿಗೆ ಹಾಡುಗಾರನಿಗೆ  ಬೇಕಾದ ಶಾರೀರವಿರಲಿಲ್ಲ ಎಂಬುದು ಅವರ ಅಣ್ಣ ರಾಜಂ ಹಾಗು ಇನ್ನೂ ಕೆಲವರ ಅಭಿಪ್ರಾಯ. ಅವರು ತಮ್ಮ ಜೀವನದ ಒಂದು ಹಂತದಿಂದ ಮತ್ತೆ ಕೇವಲ ವೀಣಾವಾದನವೊಂದಕ್ಕೇ ತಮ್ಮನ್ನು ಮುಡಿಪಾಗಿಟ್ಟುಕೊಂಡರು.

ಸರಸ್ವತಿ ವೀಣೆ

ಬಾಲಚಂದರ್ ಚಿಕ್ಕಂದಿನಲ್ಲಿ  ಚೆಸ್ ಆಟದಲ್ಲಿ ಪರಿಣತಿ ಸಾಧಿಸಿ ಅಂತಃರಾಷ್ಟ್ರೀಯ ಮಟ್ಟದ  ಸ್ಪರ್ಧೆಗೆ ಸಿಲೋನಿಗೆ ಹೋಗಿದ್ದರು. ಅಲ್ಲಿ ಹೋದಲ್ಲಿ ಅವರು ಚೆಸ್ಸಿಗೆ ಸಂಬಂಧಿಸಿದ ಕ್ಲಿಷ್ಟ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸಿ ನೆರೆದ ಮಂದಿ  ಹಾಗು ತಜ್ಞರನ್ನು ಬೆರಗುಪಡಿಸಿದ್ದರು.ಬೆಳೆದು ದೊಡ್ಡವರಾದಂತೆ ಹೆಸರುವಾಸಿಯಾಗುತ್ತಾ ಮದ್ರಾಸಿನ  ಜನರ ಬಾಯಲ್ಲಿ ಎಸ್.ಬಿ. ಆಗಿಹೋದರು. ಅವರ  ಅಕ್ಕ ಜಯಲಕ್ಶ್ಮಿ  ಆಗಲೇ, ಆಗಿನ ತಮಿಳು ಸಿನೆಮಾ ಶಿವಕಾವಿಯಲ್ಲಿ ತ್ಯಾಗರಾಜ ಭಾಗವತರೊಂದಿಗೆ ನಟಿಸಿ ಹೆಸರು ಮಾಡಿದ್ದರು.
ಅವರ ಮೊದಲ ಸಿನೆಮಾ  (ತಮಿಳು) ಸೀತಾಕಲ್ಯಾಣದಲ್ಲಿ ಬಾಲನಟನಾಗಿ, ರಾವಣನ  ಆಸ್ಥಾನದಲ್ಲಿ  ಕಂಜೀರ ನುಡಿಸುವ  ಬಾಲಕನಾಗಿ ನಟಿಸಿದರು, ಆಗ ವಯಸ್ಸು ಕೇವಲ ಆರು.ಈ ಸಿನೇಮಾ ಬಂದುದು ೧೯೩೩-೩೪ ರಲ್ಲಿ. ಹಿಂದಿ ಸಿನೇಮಾದ ವಿ.ಶಾಂತಾರಾಮ್ ಈ ಸಿನೇಮಾದ ನಿರ್ಮಾಪಕ.ಇದರಲ್ಲಿ ಸುಂದರಮ್ ಅಯ್ಯರ್ ಜನಕ ಮಹಾರಾಜನಾಗಿ, ಹಿರಿಯಣ್ಣ ರಾಜಂ ಶ್ರೀರಾಮನಾಗಿ,ಅಕ್ಕಂದಿರಾದ ಜಯಲಕ್ಷ್ಮಿ ಸೀತೆಯಾಗಿ,ಮತ್ತು  ಸರಸ್ವತಿ ಊರ್ಮಿಳೆಯಾಗಿ  ಪಾತ್ರ ವಹಿಸಿದ್ದರು. ಅವರ ಹದಿಮೂರರ ವಯಸ್ಸಿನಲ್ಲಿ ಅಭಿನಯಿಸಿದ ಋಷ್ಯಶೃಂಗ ಎಂಬ ಪೌರಾಣಿಕ ಕಥಾವಸ್ತುವಿದ್ದ   ಸಿನೇಮಾದಲ್ಲಿ, ಈ ಲೋಕದ ರೀತಿ ನೀತಿಗಳನ್ನರಿಯದ, ತೇಜಸ್ವಿಯಾದ  ತಪಸ್ವೀ ಬಾಲಕ  ರಾಜನಿಂದ ಆಹ್ವಾನಿತನಾಗಿ  ಆ ರಾಜ್ಯದೊಳಗೆ ಕಾಲಿಟ್ಟಾಗ ಅಲ್ಲಿ ಮಳೆಯಾಗುತ್ತದೆ, ಮುಂದೆ  ರಾಜಕುಮಾರಿ  ಅವನನ್ನು ಮೋಹಿಸಿ  ಮದುವೆಯಾಗುತ್ತಾಳೆ.ಆ ಪಾತ್ರ ಮಾಡಿದ ಶಾಂತ  ಕೊನೆಗೆ ನಿಜಜೀವನದಲ್ಲೂ ಅವರನ್ನು ಮದುವೆಯಾಗುತ್ತಾಳೆ.ಈ ಚಿತ್ರದ ಹಲವು ಗೀತೆಗಳನ್ನು ಬಾಲಚಂದರವರೇ ಹಾಡಿದ್ದಾರೆ. ಆದರೆ ಕುಟುಂಬದೊಳಗೆ ರಾಜಂನಂತಹ ಸುಮಧುರ ಶಾರೀರದವರಿದ್ದಾಗ,  ಮಧುರವಿಲ್ಲದ ಧ್ವನಿಯ ಬಾಲಚಂದರ್ ಗೆ ಹಾಡಲು ಹೆಚ್ಚಿನ ಉತ್ತೇಜನ ಸಿಗಲಿಲ್ಲ,ಬದಲು ಅವರು ಇನ್ನೆಷ್ಟೋ ವಾದ್ಯಗಳಿಗೆ ಜೀವ ತುಂಬುವಂತಾಯಿತು, ಮತ್ತು ಅವರು ವೀಣೆಯಿಂದ ಹಾಗೂ ವೀಣೆ ಅವರಿಂದ ಗುರುತಿಸಿಕೊಳ್ಳುವಂತಾಯಿತು.

ಸುಂದರ ಯುವಕ, ಆಂಗ್ಲರನ್ನು ಹೋಲುವ  ಬಿಳಿವರ್ಣದ ಬಾಲಚಂದರ್

ಸುಂದರಂ ಅವರು  ಮಗ ದೊಡ್ಡವನಾದಂತೆ ಸಿನೇಮಾದಲ್ಲಿ  ಮುಂದುವರಿಯುವುದನ್ನು ಇಷ್ಟಪಡಲಿಲ್ಲ.ಆದರೆ ಹದಿನಾರರ ಬಾಲಚಂದರ್ ಜೆಮಿನಿ ಸ್ಟುಡಿಯೊದಲ್ಲಿನ ಚಟುವಟಿಕೆಗಳನ್ನು ಆಸಕ್ತಿಯಿಂದ ಆಳವಾಗಿ  ಗಮನಿಸುತ್ತಿದ್ದ.ಇದು  ಮುಂದೆ ಸಂಗೀತ ನಿರ್ದೇಶನದಲ್ಲಿ ಮುಂದುವರಿಯಲು  ಅವರಿಗೆ ಸಹಾಯವಾಯಿತು.ಅವರನ್ನು ಪ್ರಸಿದ್ಧಿಗೆ ತಂದ ಇನ್ನೊಂದು ಸಿನೆಮಾ ” ಇದು ನಿಜಮಾ”.ಇದರಲ್ಲಿ ಅವರಿಗೆ ಅವಳಿ ಸಹೋದರರಿರುವ ನಾಯಕ ಪಾತ್ರ.  ಆಗಿನ್ನೂ ಅವರು ಇಪ್ಪತ್ತರ ಯುವಕ. ಈ ಚಿತ್ರದ  ಕಥಾ ಬರವಣಿಗೆ, ಸಂಗೀತ ರಚನೆ ಮತ್ತು ನಿರ್ದೇಶನವನ್ನು   ಇವರೇ ಮಾಡಿದರು. ಇದರಲ್ಲಿ  ಹಲವು ಹಾಡುಗಳನ್ನೂ ಹಾಡಿದ್ದಾರೆ. ಬಾಲಚಂದರ್ ಅವರು  ಹೆಚ್ಚಿನ ಸಿನೇಮಾಗಳಲ್ಲಿ ನಾಯಕನಾಗಿಯೇ ಅಭಿನಯಿಸಿದರು ಮತ್ತು ಅವರೇ ಹಾಡಿದರು. ಅವರೊಂದಿಗೆ ನಟಿಸಿದ ನಾಯಕಿಯರು ವೈಜಯಂತಿ ಮಾಲಾ,ಮಾಧುರಿ ದೇವಿ,ಅಂಜಲಿ ದೇವಿ  ಮುಂತಾದವರು. ಈ ಸಮಯದಲ್ಲಾಗಲೇ ಅವರು ತಮ್ಮ  ಹೆಚ್ಚಿನ ಸಮಯವನ್ನು ವೀಣಾವಾದನಕ್ಕೂ,ಅದರ ಅಭ್ಯಾಸಕ್ಕೂ ಮೀಸಲಾಗಿಟ್ಟರು.ಮತ್ತು ಕೆಲವೇ ಆರಿಸಿದ, ಹಾಗೂ ಮೆಚ್ಚಿಗೆಯಾದ ಸಿನೇಮಾಗಳಲ್ಲಿ ನಟಿಸಿದರು. ಆ ಕಾಲದಲ್ಲಿ ಬಾಲಚಂದರ್ ನಿರ್ದೇಶನದ “ಅಂಧಾನಾಲ್” ಎಂಬ ಸಿನೆಮಾ ಪ್ರಶಸ್ತಿಗಳ ಸುರಿಮಳೆಯನ್ನೇ ತಂದಿತು. ಶಿವಾಜಿ ಗಣೇಶನ್ ಈ ಚಿತ್ರದಲ್ಲಿ ಅಭಿನಯಿಸಿದರು; ಈ ಸಿನೇಮಾ ಇಂದಿನ ವರೆಗೆ ನಿರ್ಮಿಸಿದ ಹತ್ತು ಅತ್ಯುತ್ತಮ ಸಿನೇಮಾಗಳಲ್ಲೊಂದು.ಆಗಿನ್ನೂ  ಅವರಿಗೆ ಇಪ್ಪತ್ತೇಳರ ವಯಸ್ಸು.  ಅವರು ತಾವು ನಟಿಸಿದ  ಹೆಚ್ಚಿನ  ಸಿನೇಮಾಗಳಲ್ಲಿ  ತಾವೇ  ಹಾಡಿದ್ದಾರೆ. ಆದರೆ ಅವರು  ಇಷ್ಟೆಲ್ಲಾ  ಸಿನೇಮಾಗಳಲ್ಲಿ ನಟಿಸಿ,ನಿರ್ದೇಶಿಸಿದರೂ , ಅವರ  ಮನಸ್ಸು  ಮಾತ್ರ ಸಿನೇಮಾದಲ್ಲಿ ಇರಲಿಲ್ಲ, ಅವರ ಜೀವನದ ಧ್ಯೇಯ ವೀಣೆಯಾಗಿಯೇ ಉಳಿಯಿತು.   ಸರಸ್ವತಿ ವೀಣೆಯ ಭಕ್ತರಾದ  ಬಾಲಚಂದರವರಿಗೆ  ಸಿನೇಮಾದ  ಲೋಕ ಕೇವಲ ಕ್ಷಣಿಕ, ಅರ್ಥಹೀನವಾಗಿ  ಕಂಡಿತು.

ಜೆಮಿನಿ ಗಣೇಶನ್ ಮತ್ತು ಬಾಲಚಂದರ್ “ಪೆಣ್”(ಹುಡುಗಿ) ಚಿತ್ರದಲ್ಲಿ

ಬಾಲಚಂದರ್ ಮತ್ತು ಅವರ ಸಂಗೀತದ ಪ್ರಪಂಚ: ಇವರದು ಬಹುಮುಖ ಪ್ರತಿಭೆ,ಅವರ ಕಲಾವಿದನ ಚಿಲುಮೆ ಬಹಳ ದಿಕ್ಕುಗಳಲ್ಲಿ ಹರಿಯುತಿತ್ತು, ಅದರ ಸೆಳೆತ ಶಕ್ತಿಭರಿತವಾಗಿತ್ತು. ಅವರು ಆರರ ವಯಸ್ಸಿನಲ್ಲಿ ನಟಿಸಿದ ಸಿನೇಮಾ ಸೀತಾಕಲ್ಯಾಣದ ನಿರ್ದೇಶಕ ವಿ.ಶಾಂತಾರಾಮ್ ಅವರು  ಹುಡುಗನ ಪ್ರತಿಭೆಯನ್ನು ಕಂಡು, ಅವನಿಗೆ  ತಬಲಾವನ್ನು  ಉಡುಗೊರೆಯಾಗಿತ್ತು  ಪ್ರೋತ್ಸಾಹಿಸಿದರು. ಅವರು ಹತ್ತರ ವಯಸ್ಸಿನಲ್ಲಿ ತಮ್ಮ  ಹಿರಿಯಣ್ಣ ರಾಜಂ ಅವರೊಂದಿಗೆ ತಾಳವಾದ್ಯದವನಾಗಿ ಕಛೇರಿ ಕೊಡಲು ಹೋಗುತ್ತಿದ್ದರು. ಹಾಗೆ ಕರಾಚಿಗೆ ಹೋದಲ್ಲಿ (೧೯೩೮ರಲ್ಲಿ) ಶ್ರೀಮತಿ ಕೃಷ್ಣಬಾಯಿಯವರು ಈ ಚಿಕ್ಕ ಬಾಲಕನಿಗೆ ಸಿತಾರ್ ವಾದ್ಯವನ್ನಿತ್ತು ಉತ್ತೇಜನ  ಕೊಟ್ಟರು.ಆ ನಂತರ ಆ ಚಿಕ್ಕ ಹುಡುಗ ಸಿತಾರ್  ವಾದನದಲ್ಲಿ  ಪ್ರಾವೀಣ್ಯತೆ ಗಳಿಸಿದ. ಅದರಿಂದ ಮತ್ತೆ  ಅವರು ಹೆಚ್ಚಿನ ತಂತಿ ವಾದ್ಯಗಳನ್ನು  ತಾವೇ॑ ನುಡಿಸಿ ಪ್ರಾಚೀಣ್ಯತೆಯನ್ನು ಪಡೆದರು. ಅವರ  ಹೆಚ್ಚಿನ ಕಲಿಕೆಯೂ ಸ್ವಂತ ಪರಿಶ್ರಮದ ಫಲ, ಗುರುಮುಖೇನ  ಕಲಿತುದಲ್ಲ.  ಹದಿನೈದರಿಂದ ಹದಿನೆಂಟರ  ವಯಸ್ಸಿನ  ವರೆಗೆ  ಅವರು ಆಕಾಶವಾಣಿ ಕಲಾವಿದನಾಗಿ  ಕೆಲಸ ಮಾಡುತ್ತಿದ್ದರು, ಆಗ ಅವರು  ಕೈಯಾಡಿಸಿ ನೋಡದ  ವಾದ್ಯವಿಲ್ಲ,  ಕೊನೆಯಲ್ಲಿ ವೀಣೆಯೇ ಅವರನ್ನು ಕರೆಯಿತೊ ಎಂಬಂತೆ ಅದರಲ್ಲಿ ಅವರು ಸ್ಥಿರವಾಗಿ ಮುಂದುವರಿದರು.

ಅವರ ಸಹಿಯು ವೀಣೆಯಾಕಾರದಲ್ಲಿತ್ತು. ಮೇಲಿನ  ಚಿತ್ರದಲ್ಲಿ  ಇದನ್ನು ನೋಡಬಹುದು.

ವೀಣೆಯ  ಮೇಲಿನ ಅವರ ಗೀಳನ್ನು ಶ್ರಧ್ಧೆಯೋ,ಭಕ್ತಿಯೋ,ಚಟವೋ  ಅಥವಾ ಪೂಜಾಮನೋಭಾವವೋ ಎಂದು ಏನೇ ಹೇಳಿದರೂ ಸರಿಹೋಗದು.ಅವರು ವೀಣೆ ಹಿಡಿದು ಪೂಜಾಮಂದಿರವನ್ನು  ಹೊಕ್ಕರೆ ಗಂಟೆಗಟ್ಟಲೆ ಅಲ್ಲೇ ಇದ್ದುಬಿಡುತ್ತಿದ್ದರು. ವೀಣೆಯನ್ನು ಕಛೇರಿಯ ಮುಖ್ಯವಾದ್ಯವನ್ನಾಗಿ ಮಾಡಿದ  ಹೆಗ್ಗಳಿಕೆ ಇವರಿಗೇ ಸಲ್ಲುತ್ತದೆ.ಅವರು  ತಮ್ಮ ವೀಣೆಯೊಂದಿಗೆ ಪ್ರಪಂಚವಿಡೀ  ತಿರುಗಿದ್ದಾರೆ.ಒಮ್ಮೆಯಂತೂ ಮಾರುಕಟ್ಟೆಯಲ್ಲಿ ಅವರ ಧ್ವನಿ ಸುರುಳಿ (ಎಲ್.ಪಿ.ರೆಕಾರ್ಡ್) ಬೇರೆಲ್ಲಾ  ಸಂಗೀತಗಾರರದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿತ್ತು. ಅವರಿಗೆ ವಿಶ್ವಖ್ಯಾತಿವೆತ್ತರಾದ ಸಿತಾರ್  ವಾದಕ ಪಂಡಿತ್ ರವಿಶಂಕರ್,ಪಾಶ್ಚಾತ್ಯ ಸಂಗೀತಕಾರರಾದ ಯಹೂದಿ ಮೆನನ್ ಮುಂತಾದವರೊಂದಿಗೆ ಗೆಳೆತನವಿತ್ತು. ಹೊರ ಪ್ರಪಂಚ ಅವರನ್ನು ವೀಣಾ ಬಾಲಚಂದರ್ ಎಂದೇ ಗುರುತಿಸುತ್ತಿತ್ತು.
೧೯೭೭ರಲ್ಲಿ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿಯನ್ನು  ನವದೆಹಲಿಯಲ್ಲಿ ರಾಷ್ಟ್ರಪತಿಯವರಿಂದ  ಪಡೆದರು.ನಂತರ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಭಾರತ ಸರಕಾರ ಪ್ರಧಾನಿಸಿ  ಗೌರವಿಸಿತು.  ” World Academy of Arts and Culture” ನವರು ಅವರಿಗೆ ಗೌರವ ಡಾಕ್ಟರೇಟ್ ಅನ್ನು ಇತ್ತು ಸನ್ಮಾನಿಸಿದರು.ಅವರ ಪ್ರಮುಖ ಶಿಷ್ಯರಲ್ಲಿ ಕೆಲವರು ಗಾಯತ್ರಿ ರಾಮಚಂದ್ರನ್(ನಾರಾಯಣನ್),ಎಸ್.ವಿ.ಮಾಧವನ್ ಮುಂತಾದವರು.ಇವರು ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿ ಕೃತಿರಚನೆ ಮಾಡಿದ್ದಾರೆ.
ಇವರನ್ನು ಅಪ್ರತಿಮ ಮೇಧಾವಿ  ಎಂದು ಪರಿಗಣಿಸುತ್ತಾರೆ, ಇವರು ಬಹಳಷ್ಟು ಹೊಸ ಪ್ರಯೋಗಗಳನ್ನು ಬಳಕೆಗೆ ತಂದವರು, ವೀಣೆಯಲ್ಲಿ ಧ್ವನಿವರ್ಧಕವನ್ನು ಅಳವಡಿಸುವುದನ್ನು ಬಳಕೆಗೆ ತಂದರು. ಅವರ ವಾದನ ಶೈಲಿ ,ಗಮಕಕ್ಕೆ ಅವರದೇ ಹೆಸರು; “ಬಾಲಚಂದರ್ ಬನಿ” ಎನ್ನುತ್ತಾರೆ ತಮಿಳಿನಲ್ಲಿ. ಈ ಶೈಲಿಯ ಬಗೆಗೆ ಬಹಳ  ವಿವಾದಗಳಿವೆ,ಇವರ ತಂದೆಯವರೇ ಇವರ ವೀಣೆ ಮೀಟುವುದರ (ವೇಗದ)ಬಗ್ಗೆ ವಿರೋಧಿಸುತ್ತಾರೆ. ಇನ್ನೊಬ್ಬರು ಮದ್ರಾಸಿನ ಹೆಸರಾಂತ ವಿಮರ್ಶಕ ಹಾಗೂ ಹತ್ತಿರದ ಸಂಬಂಧಿ,  ಇವರ ಗಮಕ ನುಡಿಸುವ ವಿಧಾನದಲ್ಲಿ ಅಪಸ್ವರ ಹೊಮ್ಮುತ್ತದೆ ,ಕೆಲವೊಮ್ಮೆ ಹಿಂದುಸ್ಥಾನಿ ಶೈಲಿಯೂ ಬರುತ್ತದೆ ಎಂದಿದ್ದಾರೆ. ಆದರೆ ಮಾಮೂಲಾಗಿ ಅತಿ ಮೇಧಾವಿಗಳಾದವರು ಮಾಡುವ ಹೊಸ ಪ್ರಯೋಗಗಳು ವಿಮರ್ಷಕರಿಂದ ಒಪ್ಪಿಗೆ ಪಡೆಯುವುದಿಲ್ಲ. ಇವರ ಸ್ವಭಾವದ ಬಗ್ಗೆ ಹೇಳುವುದಾದರೆ, ತುಸು ಕೋಪಿಷ್ಟರೆನ್ನಬಹುದು.ಕಛೇರಿಯ ವೇಳೆಯಲ್ಲಿ  ಅತ್ತಿತ್ತ ನಡೆದಾಡುವ ಪ್ರೇಕ್ಷಕರನ್ನು, ಕೂಗಿ ಕಿರಿಚಾಡುವ ಮಕ್ಕಳನ್ನು ಕಂಡರೆ, ವೀಣಾವಾದನವನ್ನು ನಿಲ್ಲಿಸಿ ದಿಟ್ಟಿಸಿ  ನೋಡುತ್ತಿದ್ದರು.

ಬಾಲಚಂದರ್ ಕಚೇರಿಯೊಂದರಲ್ಲಿ

ಎಸ್.ಬಿಯವರ ತಿಳುವಳಿಕೆ, ಬುಧ್ಧಿಮತ್ತೆಯನ್ನು ಓದಿ, ಕೇಳಿ, ಮಾತುಕತೆ ವಿಚಾರ ವಿನಿಮಯಗಳಿಂದ ಹೆಚ್ಚಿಸಿಕೊಳ್ಳುತ್ತಿದ್ದರು.ಇವರಿನ್ನೂ  ಶಾಲಾವಿದ್ಯಾರ್ಥಿಯಾಗಿದ್ದಾಗಲೇ  ಆಕಾಶವಾಣಿಯಲ್ಲಿ ಸಂಗೀತ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು,ಆಗ  ಅವರ ತಂದೆಯವರು (ಸುಂದರಂ ಅಯ್ಯರ್) ಮಗನ ಕೆಲಸದಲ್ಲಿರಬಹುದಾದ ಬರವಣಿಗೆಗೆ ಸಂಬಂಧಪಟ್ಟದ್ದನ್ನು ಪೂರೈಸಲು, ಮತ್ತು ಅವನ  ಸಂಬಳವನ್ನು(ಸರಕಾರ ಕಾನೂನಿನಂತೆ ಪ್ರಾಪ್ತ  ವಯಸ್ಕನಲ್ಲದುದಂದರಿಂದ) ಸಹಿ  ಹಾಕಿ  ತೆಗೆದುಕೊಳ್ಳಲು ಹೋಗುತ್ತಿದ್ದರು. ಎಸ್.ಬಿ.ಯವರ ಇಂಗ್ಲಿಷ್ ಭಾಷಾಜ್ಞಾನ ಆಳವಾಗಿತ್ತು, ಅವರು ಉತ್ತಮ  ವಾಗ್ಮಿ, ಅವರ ಭಾಷಣಗಳು ವಿಷಯಭರಿತವಾದ  ಅಮೂಲ್ಯ ರತ್ನವಾಗಿತ್ತು. ಚಿಕ್ಕ ವಯಸ್ಸಿನಲ್ಲೇ ವೃಧ್ಧಿಸುತ್ತಿದ್ದ ತಮ್ಮ ಪ್ರಸಿಧ್ಧಿಯನ್ನು,ಅವರು ಬಹಳ ಚೆನ್ನಾಗಿಯೇ ನಿಭಾಯಿಸಿದರು. ಇವರ ಸಂಗೀತ  ಹಾಗೂ  ಸಂಗೀತಶಾಸ್ತ್ರದ ಕುರಿತಾದ ಅಸಂಖ್ಯಾತ ಬರಹಗಳು  ಅಮೋಘ ನಿಧಿಯಂತೆ  ಕಾಣುತ್ತದೆ.ಶೆಮ್ಮಂಗುಡಿ ಶ್ರೀನಿವಾಸ  ಅಯ್ಯರ್ ಮತ್ತು ಎಸ್.ಬಿ.ಯವರಿಗಿದ್ದ(ಅವರ  ಕೊನೆಗಾಲದಲ್ಲಿ)  ಭಿನ್ನಭಿಪ್ರಾಯ ಬಹುಮಂದಿಗೆ ತಿಳಿದಿರುವ ವಿಷಯ. ಹಾಗೇ ಇವರು ಕೇರಳದ ಮಹಾರಾಜ ಬಹು ಭಾಷಾ ಪಾರಂಗತ, ಹಿರಿಯ ವಿದ್ವಾಂಸ, ದೊಡ್ಡ ಕಲಾಗಾರನೆಂದು  ಪರಿಗಣಿಸಲ್ಪಟ್ಟ ಸ್ವಾತಿ ತಿರುನಾಳ್ ಅವರ ಪಾಂಡಿತ್ಯದ ಮೇಲೆ  ಸಂಶಯ ವ್ಯಕ್ತ ಪಡಿಸಿದ್ದಾರೆ, ಮಾತ್ರವಲ್ಲ  ಆ  ವ್ಯಕ್ತಿ ಕಾಲ್ಪನಿಕ ಎಂದು  ಅಸ್ತಿತ್ವವನ್ನೇ ಅಲ್ಲಗಳೆದಿದ್ದಾರೆ. ಸಂಗೀತಾಭಿಮಾನಿಗಳಾದ  ಮದ್ರಾಸಿನ  ಜನರು ಸಂಗೀತಕ್ಕೆ ಸಂಬಂಧಿಸಿದ  ವಿವಾದಗಳನ್ನೂ ಇಷ್ಟಪಡುತ್ತಾರೆ.
ಬಾಲಚಂದರ್ ಹಾಗೂ ಶಾಂತಾರವರಿಗೆ  ಒಬ್ಬನೇ ಮಗ, ಅವರು ಎಸ್.ಬಿ.ಎಸ್.ರಾಮನ್, ವೃತ್ತಿಯಲ್ಲಿ ಹೈಕೋರ್ಟ್ ವಕೀಲರು.  ಇವರ ಪತ್ನಿ ಧರ್ಮ,ಮತ್ತು   ರಾಮನ್ ಅವರಿಗೆ ಮೂವರು ಮಕ್ಕಳು.ಹಿರಿ ಮಗ ಭಾರದ್ವಜ ತನ್ನ ಅಜ್ಜನಂತೆ ವೀಣೆ  ನುಡಿಸುತ್ತಾನೆ,ಕಛೇರಿಗಳನ್ನು ಕೊಡುತ್ತಾನೆ. ಮಗಳು ತಾರಾ ವಿಮರ್ಷಕರಿಂದ  ಪ್ರಶಂಸಿಸಲ್ಪಟ್ಟ ಭರತ ನಾಟ್ಯ ಕಲಾವಿದೆ.ಸಣ್ಣ ಮಗ ಚಟುವಟಿಕೆಗಳಿಂದ  ಕೂಡಿದ ಉತ್ಸಾಹಿ.
ಇದರಲ್ಲೊಂದು ಸಣ್ಣ  ನಗು ಬರಿಸುವ ಘಟನೆಯೊಂದನ್ನು ಹೇಳಬಯಸುತ್ತೇನೆ. ಇದರ ಮೂಲ ಲೇಖಕರಾದ ವಿ.ಎಸ್.ಗೋಪಾಲರು, ತಮ್ಮ ಮಾವ(ಎಸ್.ಬಿ.) ಅವರನ್ನು  ಮನೆಗೆ ಕರೆ ತಂದಿದ್ದಾಗ ಉಪಚರಿಸಿ ,ಮಾತನಾಡಿ,ನಂತರ  ವಿರಾಮದ  ವೇಳೆಯಲ್ಲಿ,  ಅವರಿಗೆ  ತಾನು ಹಾಡಿದ ಹಿಂದಿಯ “ತಲಾತ್  ಮಹಮೂದ್” ಹಾಡಿದ ಪದ್ಯಗಳನ್ನು ರೆಕಾರ್ಡ್ ಮಾಡಿದ್ದನ್ನು ಹಾಕಿ  ಕೇಳಿಸಿದರು,ಮತ್ತು ಮಾವನಲ್ಲಿ ಅಭಿಪ್ರಾಯವನ್ನು ಕೇಳಿಯೇ ಬಿಟ್ಟರು, ಪೂರ್ತಿ ಆತ್ಮವಿಶ್ವಾಸದಿಂದ. ಆಗ  ಆ  ಮಾವ  ಅದನ್ನು ಕೇಳಿ “ಇದಕ್ಕೆ ನಾಲಕ್ಕು ಕಾಸು ಕೊಡುವಂತಿದೆ”  ಎನ್ನಬೇಕೆ!!!

ತಮ್ಮ  ಅರುವತ್ತಮೂರರ ವಯಸ್ಸಿನಲ್ಲಿ ತೀರಿಹೋದ ಈ ಕಲಾಗಾರ ಬದುಕಿದ್ದರೆ ಇನ್ನೆಷ್ಟೊ ವಿಷಯಗಳನ್ನು  ಸಾಧಿಸಿ  ಸಂಗೀತದ  ಪ್ರಪಂಚವನ್ನು ಶ್ರೀಮಂತವಾಗಿಸುತ್ತಿದ್ದರು.

ಈ ಲೇಖನದ ಮೂಲ ಲೇಖಕರು ವಿ.ಎಸ್.ಗೋಪಾಲಕೃಷ್ಣ  ಅಯ್ಯರ್(ನಿವೃತ್ತ  ಐ.ಎ.ಎಸ್.ಅಧಿಕಾರಿ,ಮಹಾರಾಷ್ಟ್ರ ವಲಯದವರು) ಬಾಲಚಂದರವರ  ಅಕ್ಕ  ಸರಸ್ವತಿಯವರ  ಮಗ.ತಮ್ಮ ಮಾವನ ಪುಣ್ಯ ತಿಥಿಯಂದು ಅವರ ನೆನಪಿಗಾಗಿ ಬರೆದ ಲೇಖನ,ಸುಲೇಖ ಅಂತರ್ಜಾಲದ  ಬ್ಲಾಗಿನಲ್ಲಿ ಪ್ರಕಟವಾದ  ಲೇಖನ.

Advertisements

9 thoughts on “ವೀಣಾ ವಿದ್ವಾಂಸ ಬಾಲಚಂದರ್

 1. ಹಿ೦ದೆ hmv ಕ೦ಪೆನಿ ಇದ್ದಾಗ ಬಾಲಚ೦ದರ್ ಅವರ ೭೨ ಮೇಳಕರ್ತ ರಾಗಗಳ ಕೆಸೆಟ್ ತಯಾರಿಸಿದ್ದರು. ಕೆಲವಾರು ಆ ಹಳೆಯ ಕೆಸೆಟ್ ಈಗಲೂ ಕೆಸೆಟ್ ಅ೦ಗಡಿಗಳಲ್ಲಿ ಸಿಗಬಹುದು. ಒ೦ದೆರಡು ವರ್ಷ ಹಿ೦ದೆ ಬೆ೦ಗಳೂರು ಜಯನಗರ ೪ ನೇ ಬ್ಲೋಕ್ ಹತ್ತಿರದ ದೊಡ್ಡ ಕೆಸೆಟ್ ಅ೦ಗಡಿಯೊ೦ದರಲ್ಲಿ ನೋಡಿದ ನೆನಪು. hmv ಕ೦ಪೆನಿ ಈಗ ಸರೆಗಮಾ ಆಗಿದೆ. ಅವರ ವೆಬ್ ಸೈಟ್ hamaracd.com ಗೆ ಭೇಟಿ ನೀಡಬಹುದು. ಅ೦ತೆಯೇ ಮೇಳಕರ್ತ ರಾಗಗಳ ಕುರಿತು sangeethapriya@googlegroups.com ಮತ್ತು arvindsdad.blogspot.com ಇವುಗಳನ್ನೂ ಭೇಟಿಯಾಗಬಹುದು. ಶುಭವಾಗಲಿ ಜಿ೦ಕೆ ಸುಬ್ಬಣ್ಣ, ಪುತ್ತೂರು.

 2. ಜಿಂಕೆ ಸುಬ್ಬಣ್ಣರವರೆ,
  ನಿಮ್ಮ ಸಲಹೆಗೆ ಕೃತಜ್ಞತೆಗಳು. ನನಗೆ ಶಾಂತಾ ಬಾಲಚಂದರವರು ಹೇಳಿದಂತೆ ಎಸ್.ಬಿ.ರವರು ಮೇಳಕರ್ತರಾಗಗಳಲ್ಲಿ ಕೃತಿರಚನೆ ಮಾಡಲಿಲ್ಲ, ಅವರು ಕೋಟೀಶ್ವರ ಅಯ್ಯರ್ ರವರ ಕೃತಿಗಳನ್ನು ಬಳಕೆಗೆ ತಂದರು.ಏನೇ ಇರಲಿ ಆ ಕೃತಿಗಳು ಹೊರಗೆ ಮಾರುಕಟ್ಟೆಯಲ್ಲಿ ದೊರಕುವುದಾದರೆ, ಸಂಗೀತಸೇವೆಯಲ್ಲಿ ನಮ್ಮದೂ ಪಾತ್ರವನ್ನು ಕಲ್ಪಿಸಿಕೊಂಡಂತೆ.
  ಶೈಲಜ

 3. ಶೈಲ, ಹಟಾತ್ತನೆ ಬಂದೆ ನಿನ್ನ ಮನೆಗೆ. ಲೇಖನ ಚೆನ್ನಾಗಿದೆ. ಎಷ್ಟೊಂದು ವಿವರ ನೀಡಿದ್ದಿ!
  ಅಂದ ಹಾಗೆ ಜಿಂಕೆಯ ಸುಬ್ಬಣ್ಣ ಹೇಳಿದ priya@googlegroups.com ಮತ್ತು arvindsdad.blogspot.com ಸಂಗೀತ ಪ್ರಿಯರೆಲ್ಲರೂ ಭೇಟಿ ನೀಡಲೇ ಬೇಕಾದ ತಾಣಗಳು.ಅಲ್ಲಿ ಅನರ್ಘ್ಯ ರತ್ನಗಳು ಲಭ್ಯ. ಇಂಥ ಇನ್ನೂ ಹಲವಿರಬಹುದು. ನಿನಗೂ ಗೊತ್ತಿದ್ದರೆ ತಿಳಿಸು.
  ಹೀಗೆ ಬರೆಯುತ್ತಾ ಇರು. ನಿನ್ನ ಬ್ಲಾಗಿನ ಬಣ್ಣ, ಚಿತ್ರಗಳನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಬಹುದೇನೋ.
  ನನ್ನ ತಾಣದಲ್ಲಿ ಚಟುವಟಿಕೆ ಗ್ರಹಣಕ್ಕೆ ನಿಂತಿದೆ!
  ರಾಧಕ್ಕ

 4. ರಾಧಕೃಷ್ಣರವರೆ (ರಾಧಕ್ಕ),
  ನಿಮ್ಮ ಪ್ರೋತ್ಸಾಹಕ್ಕೆ ಮತ್ತು ವಿಮರ್ಶೆಗೆ ಕೃತಜ್ಞತೆಗಳು. ಈ ಲೇಖನಗಳಲ್ಲಿ ನನಗೆ ಲಭ್ಯವಿದ್ದ ಚಿತ್ರಗಳು ಇವು ಮಾತ್ರ, ಮತ್ತು ಇವುಗಳ ವಸ್ತು ಆ ರೀತಿಯದು. ಗ್ರಹಣ ಬರಲು ನನಗೂ ಕಷ್ಟವಿಲ್ಲ, ಬಿಡಲೇ ಕಷ್ಟವಿರುವುದು.
  ಶೈಲಜ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s