ನಾ ಕಂಡ ರಾಘವ ರೆಡ್ಡಿ ಗೊಂಗಿಡಿಯವರು

ಇವರು ಆಂಧ್ರಪ್ರದೇಶದ ಪೋಲೀಸ್ ಸೇವೆಯಲ್ಲಿದ್ದ, ನಿವೃತ್ತ  ಪೋಲೀಸ್ ಅಧಿಕಾರಿ.(ಐ.ಪಿ.ಎಸ್). ೮೩ ರ ಹರೆಯದ ಈ ವ್ಯಕ್ತಿಯ ಅನುಭವಗಳು ಸಾಮಾನ್ಯರ ಜೀವನದಲ್ಲಿ ಕಾಣದಂತದು. ಅವರು ವಿದ್ಯಾರ್ಥಿ ಜೀವನದಲ್ಲಿ  ಸಕ್ರಿಯವಾಗಿ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲುಗೊಂಡವರು,  ವೃತ್ತಿಯಲ್ಲಿ ಶ್ರೇಷ್ಠ ಪೋಲೀಸ್ ಅಧಿಕಾರಿಯಾಗಿ ಮೆರೆದವರು,ನಿವೃತ್ತ ಜೀವನದಲ್ಲಿ ಅವಿಶ್ರಾಂತವಾಗಿ ದುಡಿದು ಉತ್ತಮವಾದ ಕೃಷಿಪ್ರಯೋಗಗಳನ್ನು ಬಳಕೆಗೆ ತಂದವರು.ಆದರೆ ಕೊನೆಗೆ ತಮ್ಮ ಆ ತೋಟವನ್ನು ಸರಕಾರಕ್ಕೆ ಒಪ್ಪಿಸಬೇಕಾಗಿ ಬಂತು.ನಾನು ಅವರನ್ನು ಕಂಡುದು ಸುಲೇಖಾ ಅಂತರ್ಜಾಲದಲ್ಲಿ.ಅವರ ಬರವಣಿಗೆಯಿಂದ ಆಕರ್ಷಿತಳಾದ ಸಂದರ್ಭದಲ್ಲಿ ಅವರು, ಅವರ ಗತ ಜೀವನದ ನೆನಪುಗಳನ್ನು ಬರೆದುದನ್ನು ತಿಳಿಸಿದರು.ನಾನು ಆ ಪುಸ್ತಕಕ್ಕಾಗಿ ಹೈದರಾಬಾದ್ ನಗರದಲ್ಲೆಲ್ಲ ಹುಡುಕಿ  ಸಿಗದಾಗ, ಅವರೇ ಅದರ ವ್ಯವಸ್ಥೆ ಮಾಡಿದರು. ನಾನು, ನನಗೆ ಕಾದಿರಿಸಿದ ಆ ಪುಸ್ತಕವನ್ನು (As I Look Back) ಅವರ ಮನೆಯಲ್ಲೇ ಪಡೆದೆ. ನಾನೇನೋ  ಒಬ್ಬ ಐ.ಪಿ.ಎಸ್. ಅಧಿಕಾರಿ ಎಂದಾಗ ಏನೋ ಕಲ್ಪನೆಯಿಂದ ಹೋದವಳಿಗೆ, ತೀರ ಗಲಿಬಿಲಿಯಾಗುವಂತಾಯಿತು.ಅವರೋ ತೀರಾ ಆತ್ಮೀಯವಾಗಿ ಮನೆಯ ಹಿರಿಯವರೆಂಬಷ್ಟು ಪ್ರೀತಿಯಿಂದ ಮಾತನಾಡಿಸಿದರು.ಕೊನೆಯಲ್ಲಿ ನನ್ನಲ್ಲೊಂದು ವಿನಂತಿ ಮಾಡಿದರು, ಅದು-ನಾನು ಪುಸ್ತಕ ಓದಿ, ಅದರ ಮೇಲೆ ವಿಮರ್ಶೆ ಬರೆಯಲು.ನಾನು ಅವರಂದಂತೆ ಬರೆದೆ;ವಿಮರ್ಶೆಯನ್ನಲ್ಲ,ಇಂಗ್ಲಿಷಿನಲ್ಲು ಅಲ್ಲ, ಅದು ಕನ್ನಡದಲ್ಲಿ ಈ ನಿಮ್ಮ ಮುಂದಿರುವ ಸಣ್ಣ ಪ್ರಯತ್ನ.

ರಾಘವ ರೆಡ್ಡಿಯವರು ಪೋಲೀಸ್ ಅಧಿಕಾರಿಯಾಗಿ ಡಿ.ಐ.ಜಿ.ಸ್ಥಾನದಿಂದ ೧೯೮೮ರಲ್ಲಿ ನಿವೃತ್ತರಾದರು.ಪೋಲೀಸ್ ಅಧಿಕಾರಿಯಾಗಿ  ಅವರ ಉತ್ಕೃಷ್ಟ ಸೇವೆಗೋಸ್ಕರ (ಕಮ್ಯುನಿಸ್ಟ್ ನಾಗಿ ರೆಡ್ಡಿ ಸಂಚಿನ ಮೊಕದ್ದಮೆ)೧೯೭೩ ರಲ್ಲಿ ರಾಜ್ಯದ .ಪೋಲೀಸ್ ಮೆಡಲ್  ಮತ್ತು ವಿಶಿಷ್ಟವಾದ  ಅವರ  ಕಾರ್ಯವೈಖರಿಗಳನ್ನು ಗುರುತಿಸಿ  ೧೯೮೨ ರಲ್ಲಿ,  ಭಾರತ ಸರಕಾರದ ಪ್ರೆಸಿಡೆಂಟ್ ಪೋಲೀಸ್ ಮೆಡಲ್ ಅನ್ನು   ಪಡೆದರು. ಆಂಧ್ರಪ್ರದೇಶದಿಂದ ಈ ಗೌರವವನ್ನು ಪಡೆದ ಏಕಮಾತ್ರ ಪೋಲೀಸ್ ಅಧಿಕಾರಿ ಅವರು ಎಂಬುವುದು ಇನ್ನೊಂದು ವೈಶಿಷ್ಟ್ಯ. ಅವರ ಸಹೋದ್ಯೋಗಿಗಳು,ಮಿತ್ರರು,ಮೇಲಧಿಕಾರಿಗಳು  ಎಲ್ಲ ಹೇಳಿದಂತೆ ರೆಡ್ಡಿಯವರು,ಬುದ್ಧಿವಂತ,ತಿಳುವಳಿಕೆಯುಳ್ಳ,ವಿಶಾಲ ಹೃದಯದ ,ನ್ಯಾಯಕ್ಕಾಗಿ ಹೋರಾಡಿದ ಕಾರ್ಯನಿಷ್ಠ ವ್ಯಕ್ತಿ. ಅವರು ಜೀವನದಲ್ಲಿ  ಸಿಹಿಕಹಿಗಳೆರಡನ್ನೂ ಉಂಡವರು, ಎಲ್ಲಾ ಕಹಿಗಳನ್ನು ಅನುಭವಿಸಿದ ವೀರ ಸೈನಿಕನ ತೆರನಾದ ಜೀವನ ಅವರದು.

ರಾಘವ ರೆಡ್ಡಿಯವರ ಹುಟ್ಟೂರು ಈಗಿನ ವಾರಂಗಲ್ ಜಿಲ್ಲೆಯಲ್ಲಿರುವ ಪೆಂಬರ್ತಿ ಎಂಬ ಹಳ್ಳಿ. ದೇಶಮುಖ್  ಎಂಬ ದೊಡ್ಡ ಜಮೀನ್ದಾರ ಕುಟುಂಬದ ಗೊಂಗಿರೆಡ್ಡಿ ಅನಂತ ರೆಡ್ಡಿ ಮತ್ತು ರಾಮಚೂಡಮ್ಮನವರ ಮೊದಲನೆಯ ಮಗನಿವರು,  ಇವರಿಗಿಬ್ಬರು ಸಹೋದರರು.  ಇವರು ಹುಟ್ಟಿದುದು ೧೯೨೮ ಜುಲೈ ೫ರಂದು.ರಾಘವನೂ, ತಮ್ಮಂದಿರೂ ತೀರ ಸಣ್ಣವರಿದ್ದ ಮೂವತ್ತರ ದಶಕದ ಪ್ರಾರಂಭ, ಎಲ್ಲೆಡೆಯಲ್ಲೂ  ಕಾಲರಾ ಪಿಡುಗು, ಇವರಿದ್ದ ಊರಲ್ಲೂ ಸಾಂಕ್ರಾಮಿಕ ಹಬ್ಬಿದ ಸಮಯದಲ್ಲಿ, ಈ ಮಕ್ಕಳ ಹೆತ್ತವರೂ ಅದಕ್ಕೆ ಬಲಿಯಾದರು.ತಬ್ಬಲಿಗಳಾದ ಮಕ್ಕಳನ್ನು ನೋಡಲು ಹತ್ತಿರದ ಸಂಬಂಧಿಗಳು ಮುಂದಾದರು,ಈ ಮಕ್ಕಳಿಗೆ ಸೇರಿದ ಆಸ್ತಿಪಾಸ್ತಿಗಳನ್ನೂ ನೋಡಿಕೊಂಡರು.ಆಗ ಆ ಕುಟುಂಬಕ್ಕೆ ದೂರದ ಸಂಬಂಧಿಗಳಾದ ರಾವಿ ನಾರಾಯಣ ರೆಡ್ಡಿಯವರು, ಹಿರಿಮಗನಾದ ರಾಘವನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಮ್ಮ ಕೈಗೆ ತೆಗೆದುಕೊಂಡು, ಚುಕ್ಕಾಣಿಯಿಲ್ಲದ ದೋಣಿಯಂತಿದ್ದ ರಾಘವನ ಜೀವನಕ್ಕೆ ದಿಶೆಯನ್ನಿತ್ತರು.ಈ ರೀತಿಯಾಗಿ ರಾಘವನು ಅವರೊಂದಿಗೆ ಹೈದರಾಬಾದ್ ನಗರಕ್ಕೆ ಆರರ ಎಳೆ ವಯಸ್ಸಿನಲ್ಲಿ ಬರುತ್ತಾನೆ.ಇದರೊಂದಿಗೇ ಅವನ ಬದುಕೇ ಬದಲಾಗುತ್ತದೆ.

ರಾವಿ ನಾರಾಯಣ ರೆಡ್ಡಿಯವರು ಆಗಿನ ಕಾಲದ ಪ್ರಭಾವಶಾಲಿ,ಧೀರ ಜನನಾಯಕ,ಅವರು ಆಗ ಪ್ರಚಲಿತವಾಗಿದ್ದ ಕಮ್ಯುನಿಸ್ಟ್ ಚಳವಳಿ,ಸ್ವಾತಂತ್ರ ಸಂಗ್ರಾಮ,ಅಸ್ಪೃಶ್ಯತಾ ನಿವಾರಣೆಗಳಲ್ಲೆಲ್ಲ ಸಕ್ರಿಯವಾಗಿ ಪಾಲುಗೊಂಡಿದ್ದರು, ನಾಯಕತ್ವವನ್ನೂ ವಹಿಸಿದ್ದರು.೧೯೩೪ನೇ ಇಸವಿಯಲ್ಲಿ  ಮಹಾತ್ಮಾ ಗಾಂಧಿಯವರು ಹೈದರಾಬಾದಿಗೆ ಭೇಟಿಯಿತ್ತ ಸಂದರ್ಭ, ರಾವಿಯವರು ಗಾಂಧೀಜಿಯವರನ್ನು ತಾವು ನಡೆಸುತ್ತಿರುವ ಹರಿಜನ ವಸತಿ ಗೃಹಕ್ಕೆ ಆಹ್ವಾನಿಸಿದರು. ಅಲ್ಲಿನ ಮಕ್ಕಳನ್ನು ನೋಡಿಬಿಟ್ಟು ಗಾಂಧೀಜಿಯವರು ,ಮೇಲ್ವರ್ಗದ ಮಕ್ಕಳನ್ನು ಯಾಕೆ ಇಟ್ಟಿಲ್ಲ  ಎಂದು ಆಕ್ಷೇಪವೆತ್ತಿದರು.ಆಗ ರಾವಿಯವರು,ತಮ್ಮ ಆಶ್ರಯದಲ್ಲಿದ್ದ ರಾಘವನನ್ನೇ ಆ ಸ್ಥಾನಕ್ಕೆ ತುಂಬಲು ನಿಶ್ಚಯಿಸಿ,ಹುಡುಗನನ್ನು ಗಾಂಧಿಯವರ ಮಡಿಲಿನಲ್ಲಿ ಕೂಡಿಸಿದರು.ಗಾಂಧೀಜಿಯವರ ಆಶೀರ್ವಾದಗಳೊಂದಿಗೆ ರಾಘವನ ಹೊಸ ಜೀವನ ಪ್ರಾರಂಭವಾಗುತ್ತದೆ. ಆ ವಸತಿಗೃಹದಲ್ಲಿದ್ದುಕೊಂಡು ಅವನ ವಿದ್ಯಾಭ್ಯಾಸ,ಹೊರಪ್ರಪಂಚದ ಪರಿಚಯ,ವ್ಯಕ್ತಿತ್ವ ವಿಕಾಸ ಎಲ್ಲಾ ನಡೆಯುತ್ತದೆ.ಆಗ ರಾಘವನು ವಿವಿಧ ರಂಗಗಳ ಹಿರಿವ್ಯಕ್ತಿಗಳ ಪ್ರಭಾವಕ್ಕೆ,ಸಂಪರ್ಕಕ್ಕೆ ಬಂದು ಜೀವನದ ನಿಜಮೌಲ್ಯಗಳನ್ನು ಬೇಗ ಅರ್ಥ ಮಾಡಿಕೊಂಡನು.

ತೆಲುಗು ಭಾಷೆಯಲ್ಲಿ ತುಂಬಾ ಪ್ರಚಲಿತವಾಗಿರುವ, ೧೨-೧೩ನೇ ಶತಮಾನದ  “ವೇಮನ ಶತಕ”ದ  ಚರಣವೊಂದು ರಾಘವನ ಜೀವನಕ್ಕೆ ತುಂಬ ಅರ್ಥ ಕೊಟ್ಟಿದೆ. ಅದರಲ್ಲಿ ಹೇಳಿದಂತೆ, ಹಾಡುತ್ತಾ, ಹಾಡುತ್ತಾ ಶಾರೀರ ಇಂಪಾಗುತ್ತದೆ, ಬೇವಿನೆಲೆ(ಕಹಿ ರುಚಿ)  ತಿನ್ನುತ್ತಾ,ತಿನ್ನುತ್ತಾ ಸವಿಯೆನಿಸುತ್ತದೆ.ನಿರಂತರ ಸಾಧನೆ ಮಾಡಿದಾಗ ಈ ಧರೆಯಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಅಂತೆಯೇ  ರಾಘವನ ಜೀವನವೂ ನಿರಂತರ ಸಾಧನೆ. ಅವರು ಶಾಲಾ ವಿದ್ಯಾಭ್ಯಾಸವನ್ನು ಹರಿಜನವಸತಿಗೃಹದಲ್ಲಿದ್ದುಕೊಂಡು ಮಾಡಿದರು. ಆಗ ಅವರಿಗೆ ಆರ್ಯಸಮಾಜದ ಹಿರಿಯ ವ್ಯಕ್ತಿ ಸ್ವಾಮಿ ರಮಾನಂದ ತೀರ್ಥರ ನಿಕಟ ಪರಿಚಯವಾಯಿತು.ಸ್ವಾಮೀಜಿಯವರು ನಿಜಾಮನ ಆಳ್ವಿಕೆಯಲ್ಲಿದ್ದ ಹೈದರಾಬಾದನ್ನು ಸ್ವತಂತ್ರಗೊಳಿಸಲು ಹೋರಾಡಿದ ಹೋರಾಟಗಾರ.ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಧುರೀಣರು,ಕಮ್ಯುನಿಸ್ಟ್ ನಾಯಕರು ಮತ್ತು ಆರ್ಯಸಮಾಜದವರು ಒಂದಾದರು.

ನಲುವತ್ತರ ದಶಕದಲ್ಲಿ ನಿಜಾಮನ ಹೈದರಾಬಾದ್ ರಾಜ್ಯದಲ್ಲಿ ಅರಾಜಕತೆ ಹರಡಿತ್ತು,ಈಗ ನಾವು ತೆಲಂಗಾಣ ಎನ್ನುವ ಆಂಧ್ರಪ್ರದೇಶದ ಭಾಗ ,ಕರ್ನಾಟಕ ರಾಜ್ಯದ ಮತ್ತು ಮಹಾರಾಷ್ಟ್ರ ರಾಜ್ಯದ ಕೆಲವು ಜಿಲ್ಲೆಗಳು ಸೇರಿ ಒಟ್ಟಾಗಿ,ಹೈದರಾಬಾದ್ ರಾಜ್ಯವಾಗಿತ್ತು. ಈ ಇಡೀ ಪ್ರಾಂತ್ಯವನ್ನು ನಿಜಾಮನು ಆಳುತ್ತಿದ್ದನು. “ರಜಾಕರ್” ಎಂಬ ಗುಂಪಿನ ಮಂದಿ(ನಿಜಾಮನಿಗೆ  ಅರಿವಿದ್ದೇ) ಜನ ಸಾಮಾನ್ಯರಿಗೆ ಹಿಂಸೆ,ನೋವು ಕೊಟ್ಟು ದರೋಡೆ,ಕೊಲೆ, ಸುಲಿಗೆ, ಅತ್ಯಾಚಾರಗಳನ್ನು ನಡೆಸುತ್ತಿದ್ದರು. ಸ್ವಾತಂತ್ರ ಪೂರ್ವದಲ್ಲಿ  ನಡೆಯುತ್ತಿದ್ದ ಈ ಹಿಂಸೆ,ಗಲಭೆ,ಅತ್ಯಾಚಾರಗಳನ್ನು ನೋಡಿದ ,ಹದಿಹರೆಯದಲ್ಲಿದ್ದ ರಾಘವನ ಮನಸ್ಸಿನಲ್ಲಿ, ತಾನು ಇವುಗಳನ್ನು ಎದುರಿಸುವ ಸ್ಥಾನದಲ್ಲಿರಬೇಕು,ಅನ್ಯಾಯವನ್ನು ತಡೆಯಬೇಕು ಎಂಬ ಭಾವನೆ ಹುಟ್ಟಿತು. ೧೯೪೨ರಲ್ಲಿ ನಡೆದ “ಕ್ವಿಟ್ ಇಂಡಿಯ” ಚಳವಳಿಯಲ್ಲಿ ವಿದ್ಯಾರ್ಥಿಗಳು,ಜನಸಾಮಾನ್ಯರು ಮತ್ತು ಸ್ತ್ರೀಯರು ಭಾಗವಹಿಸಿದರು.ಇದರಲ್ಲೆಲ್ಲಾ ಪಾಲುಗೊಂಡಿದ್ದ ರಾಘವನಿಗೆ ಆಳವಾದ ರಾಷ್ಟ್ರಪ್ರೇಮ,ತನ್ನ ಭವಿಷ್ಯದ ಧ್ಯೇಯ ಇತ್ಯಾದಿ ಕಲ್ಪನೆ ಬಂದಿತು.

೧೯೪೩ ರಲ್ಲಿ ಮೆಟ್ರಿಕ್ಯುಲೇಶನ್ ಮುಗಿದಾಗ, ಹಿರಿಯರು ಹೇಳಿದಂತೆ,  ತನ್ನ ಆಸ್ತಿ, ಜಮೀನುಗಳನ್ನು  ನೋಡಿಕೊಳ್ಳಲು ರಾಘವ ರೆಡ್ಡಿಯವರು  ಸ್ವಂತ ಹಳ್ಳಿಗೆ ಹೋದರು.ಅಲ್ಲಿದ್ದಾಗಲೇ  ಶ್ರೀಮಂತ ಜಮೀನುದಾರ ವೆಂಕಟನಾರಾಯಣ ರೆಡ್ಡಿ ಮತ್ತು ಅಹಲ್ಯಾದೇವಿಯವರ ಮಗಳಾದ ಕಮಲಾದೇವಿಯೊಡನೆ  ಮದುವೆಯು ನಡೆದುಹೋಯಿತು.ತನ್ನ ಆಸ್ತಿ, ವ್ಯವಸಾಯ ನೋಡಿಕೊಂಡಿದ್ದ ಆ ಅಲ್ಪ ಸಮಯದಲ್ಲಿ  ತನಗೆ  ವಿದ್ಯಾಭ್ಯಾಸವೇ ಉಜ್ವಲ ಭವಿಷ್ಯವನ್ನು ಕೊಡುವುದು ಎಂದು,ನಿರ್ಧರಿಸಿದರು.ಅವರು   ಮನೆಯ  ಹಿರಿಯವರ ವಿರೋಧವನ್ನು ಪರಿಗಣಿಸದೆ, ೧೯೪೯ರಲ್ಲಿ ಹೈದರಾಬಾದ್ ನಗರಕ್ಕೆ ಬಂದು ಸರಕಾರಿ ಉದ್ಯೋಗಕ್ಕೆ ಸೇರಿಕೊಂಡರು. ಆ ಸಂದರ್ಭದಲ್ಲಿ  ಸ್ವಯಂ ಓದಿ ಇಂಟರ್ ಮೀಡಿಯೆಟ್  ಮುಗಿಸಿಕೊಂಡರು. ನಂತರ   ಜೊತೆಯಲ್ಲೇ ಬಿ.ಎ.ಪದವಿ  ಪಡೆಯಲು ರಾಘವ ರೆಡ್ಡಿಯವರು ಸಾಯಂಕಾಲದ  ಕಾಲೇಜಿಗೆ ಸೇರಿಕೊಂಡರು,ಮತ್ತು ಈ ರೀತಿಯಾಗಿ ಹಗಲು,ರಾತ್ರಿ ಕೆಲಸ ಮತ್ತು ಓದು ನಡೆಸುತ್ತಾ ಎರಡು ವರ್ಷಗಳಲ್ಲಿ ೧೯೫೪ರಲ್ಲಿ, ಉತ್ತಮ ದರ್ಜೆಯಲ್ಲಿ  ಬಿ.ಎ. ಪದವಿ  ಪಡೆದರು. ಅವರು ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿ, ಸಂಜೆ ಹೊತ್ತಿಗೆ  ಕಾನೂನು ಪದವಿಗಾಗಿ  ಅದರ ಕಾಲೇಜು ಸೇರಿಕೊಂಡರು. ಹೆಚ್.ಪಿ.ಎಸ್.(ಹೈದರಾಬಾದ್ ಪೋಲೀಸ್ ಸೇವೆ) ನವರು ೧೯೫೬ ರಲ್ಲಿ, ಕೊನೆಯ ಪೋಲೀಸ್  ದಳದ  ಆಯ್ಕೆಗೆ, ಪರೀಕ್ಷೆಗೆ  ಆಹ್ವಾನಿಸಿದಾಗ, ಆ ಪರೀಕ್ಷೆ ಬರೆದರು.   ಅವರ ಪೋಲೀಸ್  ಸೇವೆಯ  ಪರೀಕ್ಷೆ ಮತ್ತು ಕಾನೂನು ಪರೀಕ್ಷೆ ಒಟ್ಟಿಗೆ ಬಂದು ಅವರು ಕಾನೂನು  ಪದವಿಯನ್ನು ಕೈ ಬಿಡಬೇಕಾಯಿತು. ಯೋಗ್ಯತೆಯಿದ್ದೂ,  ಐ.ಪಿ.ಎಸ್. ಆಯ್ಕೆಯಲ್ಲಿ  ವಯೋಪರಿಮಿತಿಯಿಂದಾಗಿ  ( ಕೆಲವು ದಿನಗಳ ವ್ಯತ್ಯಾಸ)  ಅವಕಾಶದಿಂದ ವಂಚಿತರಾದರು. ಆದರೆ ಅವರ ಪೋಲೀಸ್ ಆಗುವ ಬಯಕೆಯಿಂದ ವಂಚಿತರಾಗಲಿಲ್ಲ. ಅವರು ೧೯೫೬ ರ ಕೊನೆಯಲ್ಲಿ ಬರೆದ ಪರೀಕ್ಷೆಯಲ್ಲಿ ಹೈದರಾಬಾದ್ ಪೋಲೀಸ್ ಸೇವೆಗೆ ಆಯ್ಕೆಗೊಂಡು,೧೯೫೭ರಲ್ಲಿ  ಅನಂತಪುರಕ್ಕೆ ತರಬೇತಿಗೆ ಹೋದರು.ಮುಂದೆ ಭಾರತ ದೇಶವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿದಾಗ ,ರೆಡ್ಡಿಯವರು ಐ.ಪಿ.ಎಸ್.ಆಂಧ್ರಪ್ರದೇಶದ ಸೇವೆಯಲ್ಲಿ ಮುಂದುವರಿದರು.

ರಾಘವ ರೆಡ್ಡಿಯವರ ಪೋಲೀಸ್ ಸೇವೆ ವಿಶಿಷ್ಟವಾದುದು.ಅವರು ವಿಶಾಲ,ಮೃದು ಹೃದಯದ ವ್ಯಕ್ತಿ, ಅವರೆಂದೂ ಅನಗತ್ಯವಾಗಿ ಬಲಪ್ರಯೋಗ ಮಾಡಿದವರಲ್ಲ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.ಪ್ರಾರಂಭದಲ್ಲೇ  ಅವರು  ಅಪರಾಧ ಶೋಧನೆಯಲ್ಲಿ,ಅಪರಾಧಿಯನ್ನು ಪತ್ತೆಹಚ್ಚುವಿಕೆಯಲ್ಲಿ ಚಾತುರ್ಯ ತೋರಿದರು.ಅವರು ಎಂದೂ ಕೈಗೆತ್ತಿಕೊಂಡ ಕೆಲಸವನ್ನು ಗುರಿ ಎತ್ತಿಸದೆ ಬಿಟ್ಟವರಲ್ಲ.ಇದರಿಂದಾಗಿ ಅವರ ವೃತ್ತಿ ಜೀವನದ ಬಹುವರ್ಷಗಳನ್ನು ಅವರು ಸಿ.ಐ.ಡಿ.ವಿಭಾಗದಲ್ಲಿ ಕಳೆದರು.ಅವರಿಗೆ  ವಿಶೇಷ ಕೀರ್ತಿ ತಂದುಕೊಟ್ಟ ಕೆಲಸವೆಂದರೆ ಕಮ್ಯುನಿಸ್ಟ್ ಮಂದಿಗಳ ಸಂಚು.

ನಾಗಿರೆಡ್ಡಿ ಸಂಚಿನ ಮೊಕದ್ದಮೆ:  ಸ್ವಾತಂತ್ರಾ  ನಂತರ ಭಾರತ ದೇಶದೊಳಗೆ  ತುಂಬಾ ಬಡತನ ಹಬ್ಬಿತ್ತು. ಬಲ ಹೀನವರ್ಗದವರ ಮೇಲೆ ದಬ್ಬಾಳಿಕೆ  ನಡೆಯುತ್ತಿತ್ತು.ಇದರಿಂದಾಗಿ ಕಮ್ಯುನಿಸ್ಟರ  ಪ್ರಭಾವ ಶುರುವಾಯಿತು. ಆಂಧ್ರಪ್ರದೇಶದ  ತರಿಮೆಲ್ಲ ನಾಗಿರೆಡ್ಡಿ ಎಂಬವರು  ತುಂಬಾ ಬುದ್ಧಿವಂತ,ಓದಿದ ವ್ಯಕ್ತಿ.ಅವರು  ಅನಂತಪುರದಿಂದ ಚುನಾವಣೆಯಲ್ಲಿ  ವಿಧಾನ ಸಭೆಗೆ ಆರಿಸಿ ಬಂದ  ಶಾಸಕರು(ಎಮ್.ಎಲ್.ಎ.),  ಅವರು ಕಮ್ಯುನಿಸ್ಟ್(ನಕ್ಸಲೈಟ್) ತತ್ತ್ವಗಳಿಂದ ಪ್ರಭಾವಿತರಾಗಿ, ಅಜೀವಪರ್ಯಂತ ಆ ತತ್ತ್ವಗಳಿಗೆ ತಮ್ಮನ್ನು ಮುಡಿಪಾಗಿಟ್ಟುಕೊಡರು.ಇಂತಹ ಹಿರಿಯ ವ್ಯಕ್ತಿ ಆಗಿನ ನಕ್ಸಲೈಟ್ ಚಳವಳಿಯನ್ನು ಹುಟ್ಟುಹಾಕಿದರು, ಇದು ನಡೆದುದು   ೧೯೬೯ ನೇ  ಇಸವಿಯ ಕಾಲದಲ್ಲಿ.  ಆಗ ಈ ಮಂದಿ ರಾಜ್ಯಾದ್ಯಂತ ಬಹಳಷ್ಟು ಕೊಲೆ,ದರೋಡೆ,ಸುಲಿಗೆ  ನಡೆಸಿದರು. ಇದನ್ನು  ಮಟ್ಟಹಾಕಲು ಸರಕಾರಕ್ಕೆ ತುಂಬಾ ಒತ್ತಡ  ಬಂತು.ಆಗ ರಾಘವ ರೆಡ್ಡಿಯವರಿಗೆ ಮತ್ತು ಇನ್ನು ಕೆಲವು ಮಂದಿಗಳ, ವಿಶೇಷವಾಗಿ ರಚಿಸಲ್ಪಟ್ಟ ತಂಡಕ್ಕೆ ಈ ಕೆಲಸವನ್ನು ವಹಿಸಲಾಯಿತು.ಮುಂದಿನ  ಹತ್ತು ವರ್ಷಗಳ  ಕಾಲ ಇವರು ಇದರ ಸಂಬಂಧಪಟ್ಟ ಕೆಲಸಗಳಲ್ಲೇ ಮುಳುಗಿಹೋದರು.ನಾಗಿರೆಡ್ಡಿಯವರ ಬಂಧನ,ಆ ನಂತರ ಮೊಕದ್ದಮೆ  ನಡೆಯಿತು.ಈ ಮೊಕದ್ದಮೆ ಚಾರಿತ್ರಿಕ ಪ್ರಾಮುಖ್ಯತೆ ಪಡೆದಿದೆ. ಈ ಮೊಕದ್ದಮೆಗೆ  ರಾಘವ ರೆಡ್ಡಿಯವರು ಮೂರು ತಿಂಗಳ  ಅವಧಿಯಲ್ಲಿ ೭೦,೦೦೦ ಪುಟಗಳ ಮುದ್ರಿತ ದಾಖಲೆ ಪತ್ರಗಳನ್ನು ತಯಾರಿಸಬೇಕಾಗಿ  ಬಂದಿತು.

ಈ ಮೊಕದ್ದಮೆ ಒಟ್ಟು ೧೪ ತಿಂಗಳುಗಳ  ಕಾಲ ನಡೆಯಿತು.

 • ಇದರಲ್ಲಿ ನ್ಯಾಯಾಲಯದಲ್ಲಿ ಭಾಗಿಗಳಾದ ಸಾಕ್ಷಿಗಳು – ೩೨೫ ಮಂದಿ,
 • ನ್ಯಾಯಾಲಯದಲ್ಲಿ ಮಂಡಿಸಿದ ಆಧಾರ,ಸಾಕ್ಷ್ಯ,ದಾಖಲೆ ಪತ್ರಗಳು – ೭೭೭
 • ಒಟ್ಟು  ಶಿಕ್ಷೆಗೊಳಪಟ್ಟ ಮಂದಿ – ಟಿ.ನಾಗಿ ರೆಡ್ಡಿ ,ಮತ್ತು ಇನ್ನಿತರ ೨೨ ಮಂದಿ,
 • ವಿಧಿಸಲ್ಪಟ್ಟ ಶಿಕ್ಷೆ – ೪ ವರ್ಷಗಳ ಕಾಲ ತೀವ್ರ ಜೈಲುವಾಸ

ಇವರ ಈ ಕೆಲಸವನ್ನು ಗುರುತಿಸಿ, ಸರಕಾರ  ೧೯೭೩ ರಲ್ಲಿ ಅವರ  ಅಭಿನಂದನೀಯ ಕೆಲಸಕ್ಕೆ ರಾಜ್ಯ ಸರಕಾರದ ಪೋಲೀಸ್ ಮೆಡಲ್ ಅನ್ನು ಕೊಟ್ಟು ಗೌರವಿಸಿತು. ಈ ಮೊಕದ್ದಮೆಯ ಇನ್ನೊಂದು ವಿಶೇಷತೆಯೆಂದರೆ,ಅಪರಾಧಿ ಎಂದು ಸಾಬೀತಾದ ನಾಗಿರೆಡ್ಡಿಯವರೇ ಸ್ವತಃ ರಾಘವ ರೆಡ್ಡಿಯವರ ಕೆಲಸವನ್ನು ನ್ಯಾಯಾಲಯದಲ್ಲಿ ಎಲ್ಲರ ಸಮಕ್ಷಮದಲ್ಲಿ, ನಿಷ್ಪಕ್ಷವಾಗಿ ಮತ್ತು ನ್ಯಾಯವಾಗಿ ನಡೆಸಿದ್ದಾರೆ ಎಂದು ಶ್ಲಾಘನೆ ಮಾಡಿದ್ದಾರೆ. ರಾಘವ ರೆಡ್ಡಿಯವರು, ನಾಗಿರೆಡ್ಡಿಯವರ ನಿಸ್ವಾರ್ಥಪರವಾದ ಧ್ಯೇಯಕ್ಕೆ ನ್ಯಾಯಾಧೀಶರ ಮುಂದೆ ತಲೆತಗ್ಗಿಸಿದ್ದಾರೆ,ಆದರೆ ಅವರ ಹಿಂಸಾಚಾರದ ಪಥವನ್ನು ಖಂಡಿಸಿ ,ಅಲ್ಲಗಳೆದು, ಆ ಗುಂಪಿನ ಸದಸ್ಯರೆಲ್ಲರನ್ನು ಬಂಧಿಸಿ, ಶಿಕ್ಷೆಗೊಳಪಡಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಎಂಭತ್ತರ  ದಶಕದಲ್ಲಿ ಇವರು ಉದ್ಯೋಗದಲ್ಲಿ ಭಡ್ತಿ ಹೊಂದಿ,ಹೈದರಾಬಾದ್ ನಗರದ ಡಿ.ಸಿ.ಪಿ.(ಟ್ರಾಫಿಕ್) ಆಗಿ ನಗರದ ವಾಹನ ಸಾರಿಗೆ ವ್ಯವಸ್ಥೆಯಲ್ಲಿ ಗಮನೀಯ ಸುಧಾರಣೆ ತಂದರು.ಅವರ ಕೆಲಸದ ಅವಧಿಯಲ್ಲಿ, ನಗರದ ಹೆಮ್ಮೆಯ, “ಪೋಲೀಸ್ ಕಂಟ್ರೊಲ್ ರೂಂ ” ಎಂದು ಹೇಳಿಸಿಕೊಳ್ಳುವ ನಾಲಕ್ಕು ಮಹಡಿಯ ಕಟ್ಟಡವನ್ನು   ಎಲ್ಲಾ  ಆಧುನಿಕ  ವ್ಯವಸ್ಥೆಗಳೊಂದಿಗೆ  ಕಟ್ಟಿಸಿದರು. ಆಗಲೇ ರಾಜ್ಯದ ಕೆಲೆವೆಡೆಗಳಲ್ಲಿ  ಹಿಂಸಾಚಾರ, ಕೊಲೆ ಇತ್ಯಾದಿ ನಡೆಯತೊಡಗಿತು.ಇದರಿಂದಾಗಿ ಅವರನ್ನು ಪುನಃ ೧೯೮೨ ರಲ್ಲಿ  ದೊಂಬಿ, ಅನಾಚಾರಗಳನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಿ ,ಅದರ ಮುಖ್ಯಸ್ಥನನ್ನಾಗಿ( Chief of Corps of Detective )ಮಾಡಿದರು. ರೆಡ್ಡಿಯವರ ನಾಯಕತ್ವದಲ್ಲಿ   ಅಪರಾಧಿಗಳನ್ನು ಬಂಧಿಸಿ,ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯಿತು, ಅಪರಾಧಿಗಳಿಗೆ ಬಂಧನ, ಮತ್ತು ಶಿಕ್ಷೆಯಾಯಿತು.  ಇವರ ಈ ವಿಶೇಷ  ಕೆಲಸವನ್ನು ಗುರುತಿಸಿ, ಅವರಿಗೆ  ೧೯೮೨ರಲ್ಲಿ “ಪ್ರೆಸಿಡೆಂಟ್ ಪೋಲೀಸ್ ಮೆಡಲ್”  ಅನ್ನು ಭಾರತ ಸರಕಾರ ಪ್ರಧಾನಿಸಿತು. ಆಗಿನ  ಮಹತ್ತರವಾದ ಕೆಲಸದ ಒತ್ತಡ, ರಾಘವ ರೆಡ್ಡಿಯವರ ಆರೋಗ್ಯದ ಮೇಲೆ ಪರಿಣಾಮ ಬೀರಿತು, ಅವರನ್ನು ೧೯೮೩ರಲ್ಲಿ ತುರ್ತಾಗಿ ಮದ್ರಾಸಿಗೆ ಕರೆದೊಯ್ದು,  ಹೃದಯದ ಶಸ್ತ್ರಚಿಕಿತ್ಸೆಗೊಳಪಡಿಸಲಾಯಿತು.  ಅವರೆಂದೂ  ತಮ್ಮ ಕೆಲಸದ ಭಡ್ತಿ ಇತ್ಯಾದಿಗಳಿಗೆ ಯಾರನ್ನೂ ಕೇಳಿದವರಲ್ಲ.೧೯೮೬ ರಲ್ಲಿ  ಅವರ ಆಪ್ತ ಮಿತ್ರರೊಬ್ಬರ ಪ್ರಯತ್ನದಿಂದಾಗಿ, ಯೋಗ್ಯತಾನುಸಾರವಾಗಿ ಬಹಳ ಮೊದಲೇ ಅಲಂಕರಿಸಬೇಕಾದ  ಡಿ.ಐ. ಜಿ.ಸ್ಥಾನವನ್ನು   ಅವರು ತಮ್ಮ ನಿವೃತ್ತಿಗೆ ಮೂರು ತಿಂಗಳ ಮೊದಲು ಪಡೆಯುವಂತಾಯಿತು.ಆಗಲಷ್ಟೆ ಅವರನ್ನು ವಿದ್ಯುತ್ ಶಕ್ತಿ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಾಧಿಕಾರಿಯಾಗಿ ನೇಮಕ ಮಾಡಲಾಯಿತು.ನಂತರ ಅವರ ಕಾರ‍್ಯವಿಧಾನದಿಂದ ಸಂತುಷ್ಟರಾದ  ಪ್ರಧಾನ ಅಧಿಕಾರಿ  ತಾತಾ  ರಾಯರು, ತಮ್ಮ ಪ್ರಭಾವವನ್ನು ಉಪಯೋಗಿಸಿ, ಅವರ ನಿವೃತ್ತಿಯನ್ನು ,ಇನ್ನೆರಡು ವರ್ಷಗಳಿಗೆ ಮುಂದೂಡುವಂತೆ ವ್ಯವಸ್ಥೆ ಮಾಡಿದರು.  ಕೊನೆಯಲ್ಲಿ ರಾಘವ ರೆಡ್ಡಿಯವರು ೧೯೮೮ ರಲ್ಲಿ ಪೋಲೀಸ್  ಸೇವೆಯಿಂದ  ನಿವೃತ್ತರಾದರು. ವೃತ್ತಿಯಿಂದ ನಿವೃತ್ತರಾದರೂ , ಅವರು ತೀರ ಇತ್ತೀಚಿನ ವರೆಗೂ ಬಹಳಷ್ಟು ಸಂಸ್ಠೆಗಳಿಗೆ,  ಪೋಲೀಸ್ ತರಬೇತಿ ಕೇಂದ್ರಗಳಿಗೆ   ಉಪನ್ಯಾಸ,ವ್ಯಾಖ್ಯಾನ ಕೊಡಲು ಹೋಗುತ್ತಿದ್ದರು.

ಕೃಷಿಕರಾಗಿ ರಾಘವ ರೆಡ್ಡಿಯವರು

ಪೋಲೀಸ್ ಸೇವೆಯಿಂದ ನಿವೃತ್ತರಾದ ಬಳಿಕ ,ರೆಡ್ಡಿಯವರು ತಮಗೆ ಪರಂಪರೆಯಿಂದ ಬಂದ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.ನಗರ ಹೊರಗೆ, ಈಗಿನ ವಿಮಾನ ನಿಲ್ದಾಣವಿರುವಲ್ಲಿ ಕೃಷಿಯೋಗ್ಯ ಭೂಮಿಯನ್ನು ಕೊಂಡರು.ಆರಂಭದಲ್ಲಿ ಅವರು ಹಳೆ ಪಧ್ಧತಿಯ ಕೃಷಿಯಲ್ಲಿ  ತೊಡಗಿದರು,ಆದರೆ ಬೇಗನೇ ಅದರ ತೊಡಕುಗಳ  ಅರಿವಾಯಿತು. ಅವರು ೧೯೮೭ ರಿಂದ ೧೯೯೭ರ ವರೆಗೆ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸಿ, ನಷ್ಟ ಅನುಭವಿಸಿದರು.  ಆಗ ಅವರು ನೀರಿಲ್ಲದ ಒಣಭೂಮಿಯಲ್ಲಿ ಹೊಸ ವಿಧಾನದ, ವೈಜ್ಞಾನಿಕ  ಪದ್ಧತಿಗಳನ್ನು ಉಪಯೋಗಿಸಿ, ಬೇರೆ  ಬೆಳೆಗಳನ್ನು   ಪ್ರಯೋಗ ಮಾಡಿ ಯಶಸ್ವಿಯಾದರು.ಅವರು ನಮ್ಮ ದೇಶದ ಗಿಡಮೂಲಿಕೆಗಳನ್ನು, ಸುಗಂಧದ್ರವ್ಯಗಳಲ್ಲಿ ಉಪಯೋಗಕ್ಕೆ ಬರುವ,ಮತ್ತು ಇನ್ನೂ ಕೆಲವೊಂದು ವಿಧಗಳ ಸಸ್ಯಗಳನ್ನು ಬೆಳೆಸಿ,  ಮಾರುಕಟ್ಟೆಯಲ್ಲಿ  ಅದಕ್ಕೆ ಬೇಕಾದ  ಬೇಡಿಕೆಯನ್ನು ಪಡೆದರು.ಇವರು ಬೆಳೆಸಿದ ಕೆಲವೊಂದು ಗಿಡಗಳು ಇಂತಿವೆ :ಅಶ್ವಗಂಧ, ಎಲೊ ವೆರಾ, ಸ್ಟೆವಿಯಾ( ಸಕ್ಕರೆಯ ಬದಲಿಗೆ ಸಿಹಿ ರುಚಿಯನ್ನು ಕೊಡುವುದು), ಸಫೆದ್ ಮಸ್ಲಿ, ಸಿಟ್ರೊನೆಲ್ಲಾ( ಇದರ ಎಣ್ಣೆ ಸಾಬೂನು,ಸುಗಂಧ  ದ್ರವ್ಯಗಳ ತಯಾರಿಯಲ್ಲಿ ಉಪಯೋಗ),ವಿವಿಧ ಜಾತಿಯ ಮೆಂತೆ ಸೊಪ್ಪು(ಇದರ ಎಣ್ಣೆ ಟೂತ್ ಪೇಸ್ಟ್,ತಿನಿಸುಗಳಲ್ಲಿ ರುಚಿ ಮತ್ತು ವಾಸನೆ ಕೊಡಲು ಉಪಯೋಗ) ಇಂತಹ ಇನ್ನೂ ಕೆಲವು ಸಸ್ಯಗಳು. ಇವರ ತೋಟವನ್ನು ನೋಡಿದ ಪದ್ಮಶ್ರೀ ಎಮ್.ವಿ.ರಾವ್ ಅವರು, “ನಮ್ಮಂತ  ವಿಜ್ಞಾನಿಗಳು ಮಾಡಿತೋರಿಸದಂತ  ರೀತಿಯಲ್ಲಿ,ಕೇವಲ ನಿಮ್ಮ ಅನುಭವ  ಮತ್ತು ಬುದ್ಧಿ ಉಪಯೋಗಿಸಿ ಮಾಡಿದ್ದೀರಿ” ಎಂದು ಹೊಗಳಿದ್ದಾರೆ.  ಇವರು ತಮ್ಮ ಕೆಲಸವನ್ನು ಪರಿಷ್ಕರಿಸುತ್ತಾ  ಮುಂದುವರಿಯುವ ವೇಳೆಗಾಗಲೇ,ಆ ಪ್ರದೇಶದಲ್ಲಿ  ಹೊಸ  ವಿಮಾನ ನಿಲ್ದಾಣ ಬರುವ ಮಾತು ಪ್ರಾರಂಭವಾಗಿತ್ತು.ಇವರ  ಕೆಲಸ ಸ್ಥಳೀಯ ಕೃಷಿವಿದ್ಯಾಲಯದವರಿಗೆ ,ಹೊರದೇಶದ ವೀಕ್ಷಕರಿಗೆ  ಮತ್ತು ಇನ್ನೂ ಹಲವಾರು  ಸಂಘ, ಸಂಸ್ಥೆಗಳಿಗೆ,  ಮಾತ್ರವಲ್ಲದೇ  ರಾಜ್ಯದ ಆಸುಪಾಸಿನ ರೈತಸಮುದಾಯದ ಗಮನಕ್ಕೆ ಬಂದಿತು.೨೦೦೧ ನೇ ಇಸವಿಯಲ್ಲಿ “ಸ್ವಾಮಿ ರಮಾನಂದ ತೀರ್ಥ ಇನ್ಸ್ಟಿಟ್ಯೂಟ್” ನವರು ಅಂತರಾಷ್ಟ್ರೀಯ ಸಮ್ಮೇಳನವೊಂದನ್ನು, ರಾಘವ ರೆಡ್ಡಿಯವರ ನಾಯಕತ್ವದಲ್ಲಿ ಏರ್ಪಡಿಸಿದರು.ಅದರ ಮುಖ್ಯ ಉದ್ದೇಶವೇ ಈ ಗಿಡಮೂಲಿಕೆಗಳು,ಸುಗಂಧದ್ರವ್ಯದ ತಯಾರಿಕೆಗೆ ಬಳಸುವ ಸಸ್ಯಗಳ  ಬಗ್ಗೆ  ವಿಚಾರ ವಿನಿಮಯ. ರಾಘವ ರೆಡ್ಡಿಯವರ ಕೆಲಸವನ್ನು  ಗುರುತಿಸಿ,  ಮಹಾರಾಷ್ಟ್ರ  ರಾಜ್ಯದ ರೈತರ ಪರವಾಗಿ  ಭಾರತ ಸರಕಾರದ ಮಂತ್ರಿ( ಐ.ಟಿ.) ಪ್ರಮೋದ್ ಮಹಾಜನ್ ಅವರು ೨೦೦೧ ಜೂನ್ ೧೦ ರಂದು  “ಉದ್ಯೋಗಶ್ರೀ” ಪ್ರಶಸ್ತಿ  ಪ್ರದಾನ ಮಾಡಿದರು. ಇದು ಮಾತ್ರವಲ್ಲದೇ ಕೃಷಿ ಮತ್ತು ವ್ಯವಸಾಯದ ರಂಗಕ್ಕೆ  ರಾಘವ ರೆಡ್ಡಿಯವರ ಗಮನಾರ್ಹ ಕೊಡುಗೆಯನ್ನು  ಗಮನಿಸಿ,ತೆಲಂಗಾಣದ  ಯುವ ರೈತರು “ಔಷಧೀ ಮಿತ್ರ” ಪ್ರಶಸ್ತಿ ಯನ್ನು ನೀಡಿದರು, ಮತ್ತು  ಸ್ವಾಮಿ ರಮಾನಂದ ತೀರ್ಥ ಇನ್ಸ್ಟಿಟ್ಯೂಟ್ ನವರು “ಸ್ವಾಮಿ ರಮಾನಂದ ತೀರ್ಥ”ಪ್ರಶಸ್ತಿ ಯನ್ನು ನೀಡಿ  ಗೌರವಿಸಿದರು.

ರಾಘವ ರೆಡ್ಡಿಯವರ ಜೀವನವೆಂದರೆ ಹೋರಾಟ, ಅವರು ತಮ್ಮ ಬದುಕಿನುದ್ದಕ್ಕೂ ಹೋರಾಡಿಕೊಂಡು ಬಂದವರು.ಅವರ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ, ನಗರದ  ಹೊರವಲಯದಲ್ಲಿ ಬಂದ ವಿಮಾನ ನಿಲ್ದಾಣಕ್ಕೆ ಬಿಟ್ಟುಕೊಡಬೇಕಾಗಿ ಬಂದಿತು, ವಿಷಾದವೆಂದರೆ ಇನ್ನೂ ಅವರಿಗೆ  ಸಿಗಬೇಕಾದ ಪರಿಹಾರ  ಕೈಗೆ ಬಂದಿಲ್ಲ,  ಇನ್ನೂ ನ್ಯಾಯಾಲಯದಲ್ಲಿರುವ ದಾವೆ  ಎಂದು ಕೊನೆಗೊಳ್ಳುವುದೊ ಗೊತ್ತಿಲ್ಲ .ಇವರು ೨೦೦೨ ನೇ ಇಸವಿಯ ನವೆಂಬರ್ ತಿಂಗಳಲ್ಲಿ ತಮ್ಮ ೫೭ ವರ್ಷಗಳ ಜೀವನಸಂಗಾತಿಯಾಗಿದ್ದ ಕಮಲಾದೇವಿಯವರನ್ನು ಕಳೆದುಕೊಂಡರು.ಭಯಾನಕ ರೋಗವಾದ ಕ್ಯಾನ್ಸರಿಗೆ ಬಲಿಯಾದ ಅವರು ಆಗಲೇ ಜೀರ್ಣಾಂಗವನ್ನು ಕಳೆದುಕೊಂಡಿದ್ದಾರೆ,ಈಗಲೂ ಅವರು ಕ್ಯಾನ್ಸರಿನಿಂದ  ನರಳುತ್ತಿದ್ದಾರೆ.ಜೀವನದುದ್ದಕ್ಕೂ ಬಹಳ ಶಿಸ್ತಿನಿಂದ,ಸರಳವಾಗಿ ಬದುಕಿದ ಅವರಿಗೆ ತನ್ನಿಂದ ಪರರಿಗೆ ಉಪಕಾರವಾಗಬೇಕು,ಇನ್ನೊಬ್ಬರಿಗೆ ಹೊರೆಯಾಗಬಾರದು ಎಂಬ ಭಾವನೆ. ಅವರ ಜೀವನೋತ್ಸಾಹ ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಬಹಳ ವಿರಳ. ಅವರು ತಮ್ಮ ಗತ ಜೀವನದ ನೆನಪುಗಳನ್ನು, ಎಂಭತ್ತರ ಇಳಿ ವಯಸ್ಸಿನಲ್ಲಿ ,ಯಾರೊಬ್ಬರದೂ ಸಹಾಯ ಪಡೆದುಕೊಳ್ಳದೇ ಬರೆದರು.ಅವರ ಒಂದು ಕಣ್ಣಲ್ಲಿ ದೃಷ್ಟಿಯಿಲ್ಲ, ಅವರ ದೇಹ ಅವರಿಗಾದ ಎರಡೆರಡು ಹೃದಯ ಶಸ್ತ್ರ ಚಿಕಿತ್ಸೆ,ಕ್ಯಾನ್ಸರಿನ ವಿವಿಧ ಚಿಕಿತ್ಸೆಗಳಿಂದ ಹಣ್ಣಾದರೂ,ಮನಸ್ಸು ಮಾತ್ರ ಹರೆಯದ ಹುಡುಗನ ಉತ್ಸಾಹದಿಂದ ತುಂಬಿದೆ. ವಿರಾಮ ಸಮಯಲ್ಲಿ ಅವರು ನೆರೆಕರೆಯ ಕಾಲೇಜು ಓದುವ ಮಕ್ಕಳಿಗೆ ಓದಲು ಸಹಾಯ ಮಾಡುತ್ತಾರೆ.ರೆಡ್ಡಿಯವರು ತಮ್ಮ ಅಸ್ತಿತ್ವವನ್ನು ನೀರಿನ ಅಲೆಯಿದ್ದಂತೆ ಎನ್ನುತ್ತಾರೆ. ನಾನು ಎಂದಿನ  ವರಗೆ ಚಟುವಟಿಕೆಯಿಂದಿರುತ್ತೇನೋ ಅಂದಿನ  ವರೆಗೆ  ಬದುಕಿರುತ್ತೇನೆ, ಕೆಲಸ ನಿಲ್ಲಿಸಿದಾಗಲೇ ನನ್ನ ಸಾವು  ಎಂದಿದ್ದಾರೆ.

ಈ ವ್ಯಕ್ತಿಯ ಮೇಲಿನ ಹೆಚ್ಚಿನ ಮಾಹಿತಿಗೆ ,ಕೆಳಗೆ ಕೊಟ್ಟಿರುವ ಲಿಂಕ್ ಗಳನ್ನು ಉಪಯೋಗಿಸಿ ನೋಡಿ.

Advertisements

10 thoughts on “ನಾ ಕಂಡ ರಾಘವ ರೆಡ್ಡಿ ಗೊಂಗಿಡಿಯವರು

 1. ದೂರದ ಹೈದರಾಬಾದಿನಲ್ಲಿದ್ದುಕೊಂಡೇ ಬ್ಲಾಗ್ ಬರೆಯುವ ಕ್ರಿಯಾಶೀಲತೆ ಆರಂಭಿಸಿರುವುದಕ್ಕೆ, ಈ ಪ್ರಯತ್ನಕ್ಕೆ ನಿಮ್ಮ ಲೇಖನ ಓದುವ ಮೊದಲೇ ಶುಭ ಹಾರೈಸುತ್ತಿದ್ದೇನೆ. ಗುಡ್ ಲಕ್!

  – ಶ್ರೀ ಪಡ್ರೆ

 2. 11/4/09

  Author : RAGHVA REDDY (IP: 59.93.69.192 , 59.93.69.192)

  Comment:
  I AM THE AUTHOR OF THE BOOK “AS I LOOK BACK”T HIS IS MY AUTOBIOGRAHICAL BOOK CONTAINGIN MY REMINISCENSES AND ATYPICAL EXPERIENCES OF POLICE SERVICE AS AN IPS OFFICER OF ANDHRA PRDESH. I AM THE ARCHTECTOF FAMOUS TARMALA NAGI REDDY COMMUNIST COSPIRACY CASE IN WHICH LEGAL EVIDENCE OF 9000 PAGES WAS PRESENTED.THE CASE ENDED IN CONVICTION BRINGING GLORIOUS PRIDE TO INDIAN POLICE AS A WHOLE.THACOURT PAID CMPLIMENTS TOME AND CONVICTED INTELLECTUAL FIERY LEADRES OPENLY ANNOUNCED THAT INVESTIGATION BY ME WAS FAIR AND WITHOUT PREJUDICE,

  I WHOLE HEATRTEDLY CONGRATULATE ACCLAIMED WRITER SHAILAJA BHAT FOR HER REVIEWING THE BOOK WITH PHOTOGRAPHS ECELLENTLY WELL.THE READERS WILL ENJOY HER REVIEW.I THANK HER FOR HER GRACIOUS REVIEW OF THISBOOK WHICH FINDS PLACE IN POLICE ACAADEMIES INIDIA AND IN BRITISH IBRAY HYDERABD AND NATIONA LIBRARY KOLKATA.

 3. ಪ್ರೀತಿಯಶೈಲಕ್ಕ,
  ನೀನು ಪುಟ್ಟವಳಿದ್ದಾಗ ನಿನ್ನ ನೋಡಿದ್ದು. ಆಮೇಲೆ ನೀನು ಸಿಕ್ಕಿರಲಿಲ್ಲ.
  ನಿನ್ನ ಆಸಕ್ತಿ ಬರವಣಿಗೆಯ ಅಭಿರುಚಿ ನೋಡಿ ತುಂಬ ಸಂತೋಷವಾಯಿತು.
  ನಿನ್ನ ತಾಣದ ಹೆಸರು ಕನ್ನಡದಲ್ಲಿದ್ದರೆ ಇನ್ನೂ ಚೆನ್ನಾಗಿರುತ್ತದೆ ಅಲ್ಲವೆ?
  ಈಗಲೂ ಹೈದರಾಬಾದಿನಲ್ಲಿರುವೆಯಾ?
  ಪಂಡಿತಜ್ಜ

  • ಪಂಡಿತಾರಾಧ್ಯರೆ,
   ನಾನು ನಿಮ್ಮನ್ನು ನೋಡಿದ್ದು ಕೊನೆಗೆ ಎಂದರೆ ನೀವು ಮಂಗಳೂರಿನಲ್ಲಿ ಕೊಣಾಜೆಯಲ್ಲಿ ಕೆಲಸ ಮಾಡುತ್ತಿದ್ದಾಗ(ಬಹುಶಃ ೭೯-೮೦ರಲ್ಲಿ).ನಾನೀಗ ಹೈದರಾಬಾದಿನ ವಾಸಿಯಾಗಿ ೨೬ ವರ್ಷಗಳೆ ಕಳೆದವು.ಕನ್ನಡ ಬರವಣಿಗೆ ಹೆಚ್ಚಿನ ಅಭ್ಯಾಸವಿಲ್ಲ, ಇಂಗ್ಲಿಷನಲ್ಲಿ ಹಿಡಿತವಿಲ್ಲ, ಏನೋ ನನ್ನ ಬರೆಯುವ ,ಬೇರೆಯವರಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸುವ ಹಂಬಲಕ್ಕಾಗಿ ಪ್ರಯತ್ನವಷ್ಟೆ ! ಇದರ ಹೆಸರು,ಮತ್ತು ವಿನ್ಯಾಸ ನನಗೆ ಅಭಯ ಮಾಡಿಕೊಟ್ಟುದು. ನನ್ನ ಮೊದಲ ಬರವಣಿಗೆ ನೀವು ಓದಿದುದು ,ಆ ವ್ಯಕ್ತಿ ತೆಲುಗಿನವರು, ಮತ್ತು ಕನ್ನಡ ಬರದವರು,ಹಾಗಾಗಿ ಆಗ ಆ ಉದ್ದೇಶದಿಂದ ಮಾಡಿದುದು.ನಾನು ಬರೆದ ೪-೫ ಲೇಖನಗಳು ಅನುವಾದ.ಅದೆಲ್ಲಾ ಸುಲೇಖ ಎಂಬ ಇಂಗ್ಲಿಶ್ ಸೈಟ್ನಿಂದ, ನಾನದರ ಸದಸ್ಯೆ.ನಿಮ್ಮನ್ನು ಕಂಡು ಸಂತೋಷವಾಯಿತು.
   ಶೈಲಕ್ಕ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s